ಬುಧವಾರ, ಏಪ್ರಿಲ್ 8, 2020
19 °C

ಕವನ: ವ್ಯೂಹ

ನಂದಿನಿ ವಿಶ್ವನಾಥ ಹೆದ್ದುರ್ಗ Updated:

ಅಕ್ಷರ ಗಾತ್ರ : | |

Prajavani

ಎಷ್ಟೊಂದು ಹೆಜ್ಜೆಗಳ ಪ್ರದಕ್ಷಿಣೆಯಿದೆ
ತಿಳಿಗೆಂಪು ಗುಲಾಬಿಯೇ ಮೈಯಾದ
ಒಲವೆಂಬ ಆ ವ್ಯೂಹದ ಹೊರಗೆ!
ಸುತ್ತುತ್ತಲೇ ಇದೆ ತನ್ನೊಳಗೆ ತಾನೇ
ಜಗದ ಕಣ್ಣಿಗೆ ನಿಶ್ಚಲವಾಗಿರುವ ಬಗೆ
ಬೇರೆಯಾಗುವ ದಾರಿ ತೋರದೆ
ತನ್ನದೇ ಬಂಧದೊಳಗೆ ತನ್ನಂತೆ ತಾನೇ..

ಪ್ರಶ್ನೆಯೊಂದನು ಹೊದ್ದು
ಆಗಾಗ ಕೇಳುವವು
ಅಲ್ಲಿ ಹೊಸ ಹೆಜ್ಜೆ ಸದ್ದು

ಕಾಲದ ಗೋಜಿಲ್ಲದ ಹೆಜ್ಜೆಗಳು
ತಮ್ಮದೇ ಗಡಿಬಿಡಿಯಲ್ಲಿ ಬಿಡುವಾದಾಗ
ಇದೇ ಈ ವ್ಯೂಹದ ಸುತ್ತ ಒಂದಷ್ಟು ಹೊತ್ತು
ನಡೆಯುತ್ತವೆ ವಿರಾಮದ ನಡಿಗೆ.

ಸುತ್ತುವಾಗೊಮ್ಮೆ
ಬೆಚ್ಚಿ ಬೆರಗಾಗಿ,ಮೋಹಕ್ಕೆ ಬಲಿಯಾಗಿ
ಹೊಕ್ಕುವ ಬಯಕೆ ಅತಿಯಾಗಿ ಕಳ್ಳಕಿಂಡಿ
ಕಂಡೇ ಬಿಟ್ಟಿತೆನುವಾಗ ಹೆಜ್ಜೆಗಳ ಬಿಡುವು
ಮುಗಿದು, ತನ್ನ ಕೇಂದ್ರವ ನೆನೆದು
ತಮ್ಮ ಅಕ್ಷದತ್ತ ಸರಿಯುತ್ತವೆ ಸಣ್ಣ
ತಪ್ಪಿತಸ್ಥ ಭಾವದೊಂದಿಗೆ.

ತೋರಿಕೆಯ ಠೀವಿಯಲಿ ಸುತ್ತುತ್ತಲೇ
ಇದೆ ಇತ್ತ ಈ ವ್ಯೂಹ
ಸದ್ದಿಲ್ಲದ ಒಂದು ನಿಟ್ಟುಸಿರಿನೊಂದಿಗೆ
ಆಗಾಗ ಹೊಸ ಬಂಧ ರಚಿಸಿ,
ತುಸು ನಿಧಾನಿಸಿ,ಒಮ್ಮೆ ವೇಗ ಹೆಚ್ಚಿಸಿ
ಕಂಡೇಬಿಡಲಿ ಕಾಣದವರಿಗೂ ಎಂಬಂತೆ
ಒಂದು ರಹಸ್ಯ ರಾಜಮಾರ್ಗ ನಿರ್ಮಿಸಿ...

ಎಂದೋ ಒಳಬಂದ
ಎರಡು ಹೆಜ್ಜೆಗಳೂ
ಹಾದಿ ಕಂಡದ್ದಕ್ಕೆ ಓಡಿಹೋದವು ಆಚೆ.

ಬಿಡುವಿರದ ಅದೇ ನಡಿಗೆಗಳು
ಮೋಹದಲಿ ಮತ್ತೆಮತ್ತೆ ಇತ್ತ ಬಂದು
ರಾಜಮಾರ್ಗವ ಕಂಡು
ಎಂದಿನಂತೆ ನವುರು ನಡುಗಿ ಒಳನಡೆದು
ಒಂದು ಹೆಜ್ಜೆ‌..ಒಂದೇ ಹೆಜ್ಜೆ..
ಹಿಂದೆ ಸರಿಯುತ್ತವೆ ಬೆಚ್ಚಿ!!

ಸಂಯಮ ಶಿಸ್ತು ಕವಾಯತು
ಆಹಾ...ಸುಂದರ ಬಲು ಭದ್ರ
ನಡುರಾತ್ರಿಯಲಿ, ಕತ್ತಲಿನ ಕೊನೆ ಜಾವದಲಿ
ಕೇಳುತ್ತದೆ ವ್ಯೂಹದ ಹೊಕ್ಕುಳಿಂದೊಂದು
ಬಿಕ್ಕುವ ಸದ್ದು.

ಯಾರದದು?

ಅಗೋ..
ಅಕ್ಕರೆಯಿಂದೊಬ್ಬ ವೃದ್ಧ ಗೋಪಾಲ
ಹರಸಿದ ಆಂತರ್ಯದಿಂದ.!
ಅತ್ತು ಮುಗಿದ ಮೇಲಾದರೂ
ನಡೆದು ಹೋಗಲಿ ಒಂದು ಅಂತರ್ಯುದ್ಧ
ಛಿದ್ರವಾಗಲಿ ಈ ಅಭೇದ್ಯ ವ್ಯೂಹ
ತೋರದಿರುವುದೇ ಹೊಸದೊಂದು ಹಾದಿ
ಕರುಣೆಯ ಈ ಅಗಾಧ ಜಗಪ್ರವಾಹ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)