ಕವಿತೆ: ಮುಟ್ಟಬೇಕು ನೀನು

ಮುಟ್ಟಬೇಕು ನೀನು ನನ್ನ ಒರಟಾಗಿ
ಪರಚುವ ಅದೇ ಒಲವಿನ ಕೈಗಳಿಂದ
ಜೋತುಬೀಳಬೇಕು ನಾನು ಕೊರಳಿಗೆ
ಆವರಿಸುವ ಉಡ ತೋಳಬಂಧಿಗಳಿಂದ
ಮುಟ್ಟಬೇಕು, ನೋಡು ಹಂಬಲಿಸುತ್ತಿದೆ
ಮರುಳು ಸವಿದ ಮೂಕ ಮನ,
ಕಾತರಿಸುತ್ತಿದೆ ಸಂಕೀರ್ಣ ಪ್ರಾಣದುನ್ಮಾನ
ಬಗೆಹರಿಯದ ಸಮೃದ್ಧ ನೋವು
ಹತ್ತಿರವಿದೆ ಸರ್ವಸಜ್ಜಿತ ಸಂಪನ್ನ ಸಾವು
ಬಿಸಿಉಸಿರ ಬಲೂನು ಹಿಗ್ಗಿ ಪುಗ್ಗೆಯಾಗಲು
ಸುಣ್ಣಬಣ್ಣದಹಾಲತೊರೆ ಚಿಮ್ಮಿಹೊಮ್ಮಲು
ಮುಟ್ಟಬೇಕು ಬಯಲಎದೆಹೂ ನಲುಗುವಂತೆ
ಮಲೆಗುಡ್ಡ ಸಿಲುಕಿ ಅಪ್ಪಚ್ಚಿಯಾಗುವಂತೆ
ಗರ್ಭದಾಳದ ಕವಚ ಬಿರಿದು ಒಳಹೊಕ್ಕುವಂತೆ
ಅಂಗಾಂಗ ಗುಪ್ತತೆ ಮಾತ್ರವಲ್ಲ,
ಬಿರು ಅಂತಃಕರಣವೂ ಸ್ರವಿಸುವಂತೆ
ಹೊರಳಾಡಿದರೂ ಸರಿಯೆ ಭುವಿ ಮರಳುಗಾಡಿನಲ್ಲಿ
ಬಣವೆ ಸುಖದ ಒಣಅಲೆಗಳ ಸೋಂಪುಜೊಂಪಿನಲ್ಲಿ
ಮುಟ್ಟಿ ತಟ್ಟಿ ಸಂಪಾಗಿ ಹದಗೊಳಿಸು
ಸ್ಪರ್ಷಮಣಿತಾಕಿ ಆಕಾರ ಸಾಕಾರಗೊಳಿಸು
ಮಿಡಿವ ಸಂವೇದನೆಗಳನ್ನು ಉದ್ದೀಪಗೊಳಿಸು
ಜೀವ ನರಳಿ ಮಗ್ಗುಲಾಗಲಿ ತೃಪ್ತಿಯಿಂದ
ಕಾಯದ ಮೂಳೆ ಮುರಿಯಲಿ ಅಪ್ಪುಗೆಯಿಂದ
ಚಿಟ್ಟೆಯೊಂದು ಸೃಷ್ಟಿಯಾಗಬಹುದು ಕೋಶ ಕಳಚಿ
ಹಸುಗೂಸೊಂದು ಮುಲುಗಲಿ ಮಗ್ಗುಲು ಕವುಚಿ
ಹೂಕೇಸರದ ಬಣ್ಣಗಳು ಮೃದುವಾಗಿ ಕೈಗಂಟಲಿ
ಎರೆಹುಳದ ಮುಗ್ಧ ಮೌನದ ಸದ್ದು ಕೇಳಿಸಲಿ
ಜಗತ್ತಿನ ಬೆತ್ತಲೆಯ, ನೆಚ್ಚಗಿನ ಕತ್ತಲೆಯ
ನಡುವ ನಲಿವೊಂದು ಎಳೆಕಾಳುಗಟ್ಟಿ ತೊನೆಯಲಿ
ಕಾಯಿ ಕಿತ್ತು ನೋಯಲಿ, ಮಾಗಿದ ಹಣ್ಣಾಗಿ ಅರಳಲಿ
ಮುಟ್ಟಿನೊಡು ಒಮ್ಮೆ ನೀನು ಜಡತೆಯಿಂದ
ಮುನಿವ ಮುನಿಸುಗಳೆಲ್ಲ ತೊಲಗಲಿ
ಮುಟ್ಟಿ ನೋಡು ಒಮ್ಮೆ
ಕಿಲುಬುಗಟ್ಟಿದ ಕನಸಿಗೆ
ಬಿಳಿಚುಪುಡಿ ಸಿಂಪಡಿಸಿದಂತೆ
ಜಾರುಪಾಚಿಗಳಲ್ಲಿ ಸಿಲುಕಿದ ಮನಸು
ಮಾತ್ರೆಮದ್ದನ್ನು ಹುಡುಕಿದಂತೆ
ಕತ್ತರಿಸಿದ ಹೃದಯ ಜಾಲ
ಮರುನೇಯ್ಗೆಗಾಗಿ ಕಾತರಿಸುವಂತೆ
ಮುಟ್ಟಿಗೇ ಮುಟ್ಟುನಿಂತು
ಕನಸೊಂದು ಕನವರಿಸುವಂತೆ
ನಿಧಾನವಾಗಿ ಸವರು ವೇದಮಾಯಕದ
ಹುನ್ನಾರವೆಲ್ಲ ಹುಡಿಪುಡಿಯಾಗುವಂತೆ
ಸ್ಪರ್ಶ ಅಸ್ಪೃಶ್ಯದ ವ್ಯರ್ಥ ಜಾಲಾಟ
ಆಲೋಚನೆಯ ಮೀರಿ ಮೆರೆವಂತೆ
ಮುಟ್ಟಿನ ಕಳಂಕವೆಲ್ಲ ಕೊಚ್ಚಿಹೋಗಿ
ಕನ್ನೆನೆಲ ಶುಚಿರುಚಿಯಾಗುವಂತೆ
ನವಿರಾಗಿ ನಗುವಾಗಿ ಮುಟ್ಟು
ಯೌವನ ಹೊಳೆವಂತೆ ಮುಟ್ಟು
ಮದಮೈ ಶರಣಾಗಲಿ ಮುಟ್ಟು
ಒಳಹುರುಪು ಜಿಗಿವಂತೆ ಮುಟ್ಟು
ಚುಕ್ಕಿಚೆಲ್ಲಾಡಲಿ ಬಿಗಿಯಾಗಿ ಮುಟ್ಟು
ವಿಷವೆಲ್ಲ ಅಮೃತವಾಗಲಿ ಮುಟ್ಟು
ಗರ್ಭದಾಳದ ರಹಸ್ಯಗಳನೆಲ್ಲ ಬೆನ್ನಟ್ಟಿ ಮುಟ್ಟು
ಬಹಿರಂಗವಾಗಲಿ ನೊಂದ ಅಚ್ಚರಿಗಳೆಲ್ಲ ಕರಗಿ
ಸಾಕಾರವಾಗಲಿ ಚಿಗುರು ಒಲವಲ್ಲಿ ಪಳಗಿ
ಬಯಕೆ ಬಿರಿದು ಅಪ್ಪಲಿ ತಾನಾಗಿಮಿನುಗಿ
ಮುಟ್ಟಿಬಿಡು ಮುಟ್ಟೆಲ್ಲ ಹುದುಗಿ ನಾಟಿಯಾಗಲಿ
ಘಾಟಿಬೆವರು ಭೂದೇಗುಲ ನಶೆಯಲ್ಲಿ ಸವರಲಿ
ಗಟ್ಟಿಇಳೆಯ ಸುಟ್ಟಪೈರು ಘನವಾಗಿ ಸ್ಫೋಟಿಸಲಿ
ಮುಟ್ಟಲಾಗದ್ದನ್ನೂ ಮುಟ್ಟಿಬಿಡಬೇಕು ಹೀಗೆ
ಸೀತೆ ಸವಾಲಿನ ಭೂಮಿ ಉತ್ತರದ ಹಾಗೆ!
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.