ಭಾನುವಾರ, ಡಿಸೆಂಬರ್ 8, 2019
21 °C

ಸೇಫ್ ಬುಕ್....

Published:
Updated:
Deccan Herald

ಪರಮೇಶಿ ಹ್ಯಾಪ್‌ ಮೋರೆ ಹಾಕ್ಕೊಂಡು ಬಂದಾಗ್ಲೆ ಗೊತ್ತಾಯ್ತು. ಏನೋ ನಡೆಯಬಾರದ್ದು ನಡೆದಿದೆ ಅಂತ. ‘ಯಾಕೆ ಹ್ಯಾಪ್ ಮೋರೆ’ ಎಂದೆ. ‘ಹ್ಯಾಪ್‌ ಮೋರೆ ಅಲ್ಲ ಹ್ಯಾಪಿ ಮೋರೆ’ ಎಂದ.

‘ಬಿಡು, ಅದೆಲ್ಲಿಂದ ನಿನ್ನ ಮುಖದಲ್ಲಿ ಹ್ಯಾಪಿ ಮೋರೆ ಕಾಣೋಕ್ಕೆ ಸಾಧ್ಯ ಆಗುತ್ತೆ’ ಅಂತ ಛೇಡಿಸಿದೆ.

‘ನೀ ಹೇಳುವುದು ಓಂಥರಕ್ಕೆ ಸರಿ ಅಂತ್ಲೇ ಇಟ್ಕೊ. ಯಾಕಂದ್ರೆ, ಇತ್ತೀಚೆಗೆ ಏನು ಓದೋದು, ಯಾವುದನ್ನು ಬಿಡೋದು, ಅನ್ನೋದೇ ಗೊತ್ತಾಗ್ತಾಯಿಲ್ಲ. ತಿಂಗಳಿಗಲ್ಲ, ದಿನದ ಲೆಕ್ಕದಲ್ಲಿ ಹೊಸ ಹೊಸ ಕನ್ನಡ ಪುಸ್ತಕಗಳು ಪ್ರಿಂಟಾಗಿ ಮಾರ್ಕೆಟ್‌ಗೆ ಬಂದು ಬೀಳ್ತಾಯಿವೆ. ಯಾವುದು ಕೊಂಡ್ಕೋಳ್ಳೋದು ಅಂತ್ಲೇ ತಿಳಿಯದಾಗಿದೆ’ ಅಂತ ಅವಲತ್ತುಕೊಂಡ.

‘ಸರಿ, ಹಾಗಾದ್ರೆ ಕೇಳು. ನನಗೊತ್ತಿರುವ ಕೆಲವು ಪುಸ್ತಕಗಳನ್ನು ಸಜೆಸ್ಟ್ ಮಾಡ್ತೇನೆ. ಕೊಂಡ್ಕೊಂಡು ಓದೋದನ್ನ ರೂಢಿಸಿಕೋ’ ಎಂದು ಹೇಳತೊಡಗಿದೆ.

ಪ್ರೊ. ವೆಂಕಟಾಚಲ ಶಾಸ್ತ್ರಿಗಳು ಎಂ.ಎ. ಪದವಿ ಪಡೆದ ನಂತರ ಕನಕಪುರ ರೂರಲ್ ಕಾಲೇಜಿನಲ್ಲಿ ಅಧ್ಯಾಪನ ಪ್ರಾರಂಭಿಸುವುದರ ಜೊತೆಗೆ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿಯೂ ಆಯ್ಕೆಯಾದ ನಂತರ ಹಲವಾರು ವಿದ್ವಾಂಸರನ್ನು ಕರೆಸಿ ಸಾಹಿತ್ಯ ಸೌರಭವನ್ನು ಹರಿಸಿದರು. ಒಮ್ಮೆ ದೇವುಡು ನರಸಿಂಹ ಶಾಸ್ತ್ರಿಗಳು ಮತ್ತು ಎಂ.ಆರ್.ಶ್ರೀ.ಯವರ ಉಪನ್ಯಾಸ ಚೆನ್ನಾಗಿಯೇ ನಡೆಯಿತು. ಅನಂತರ ವೆಂಕಟಾಚಲ ಶಾಸ್ತ್ರಿಯವರ ಮನೆಯಲ್ಲಿ ರಸಗವಳದ ಏರ್ಪಾಡು. ಊಟಕ್ಕೆ ಕುಳಿತು ಸಾವಕಾಶವಾಗಿ ಊಟ ಮಾಡುತ್ತಿದ್ದಾರೆ. ಅಷ್ಟರಲ್ಲಿ ಶಾಸ್ತ್ರಿಗಳ ಕಿರಿಯ ಸಹೋದರ ಏನೋ ಚೇಷ್ಟೆ ಮಾಡಿದನೆಂದು ಅವರ ತಾಯಿ ‘ದೇವುಡು, ಕೊಟ್ತಾನ್ ಚೂಡು’ ಎಂದು ಗದರಿದರು. ಆಗ ಅತಿಥಿಯಾಗಿ ಊಟ ಮಾಡುತ್ತಿದ್ದ ದೇವುಡು ಅವರಿಗೆ ಆಶ್ಚರ್ಯವಾಗಿ ‘ನಾನೇನು ಮಾಡಿದೆ? ಗಂಭೀರವಾಗೇ ಊಟ ಮಾಡ್ತಾಯಿದ್ದೇನಲ್ಲ?’‍ ಎಂದಾಗ ಆಕೆಗೆ ನಗಬೇಕೋ, ಅಳಬೇಕೋ ತಿಳಿಯದೆ ಸೆರಗಿನಿಂದ ಮುಖ ಮುಚ್ಚಿಕೊಂಡರು.

ಪಾಪ, ಶಾಸ್ತ್ರಿಗಳ ಕಿರಿಯ ಸಹೋದರನ ಹೆಸರು ‘ದೇವುಡು’ ಎಂದೇ ಇರಬೇಕೇ?

ಇನ್ನೊಂದು ಘಟನೆ ಹೇಳ್ತೇನೆ ಕೇಳು ಪ‍ರಮೇಶಿ

ಸಂಗೀತಗಾರ ಎಂ.ಡಿ. ರಾಮನಾಥನ್‌ ಅವರನ್ನು ಸ್ನೇಹಿತರೊಬ್ಬರು ಮನೆಗೆ ಆಹ್ವಾನಿಸಿದ್ದರು. ಇವರು ಮನೆಯ ಬಳಿ ಹೋದಾಗ ಕಟ್ಟಿದ್ದ ನಾಯಿ ಬೊಗಳತೊಡಗಿತು. ಆಗ ರಾಮನಾಥನ್‌ ಅವರು, ‘ಅಯ್ಯಾ ನಾರಾಯಾಣ, WAIT, WAIT! WE BOTH BELONG TO SAME FAMILY. YOU BARK FROM HERE, I BARK FROM THE STAGE’ ಎಂದಾಗ ಕೇಳಿದವರೆಲ್ಲ ಗೊಳ್ಳೆಂದು ನಕ್ಕರಂತೆ.

ಮತ್ತೊಂದು ಘಟನೆ ಹೇಳ್ಲಾ–

ಒಂದು ಬಫೆ ಪಾರ್ಟಿ. ಎಲ್ಲರೂ ತಟ್ಟೆ ಹಿಡಿದು ಅವರಿಗೆ ಬೇಕಾದ ಪದಾರ್ಥಗಳನ್ನು ಹಾಕಿಸಿಕೊಂಡು ಬರುತ್ತಿದ್ದರು. ಗಂಡ ತನ್ನ ತಟ್ಟೆ ತೆಗೆದುಕೊಂಡು ನಾಲ್ಕನೆಯ ಸಲ ಸಕ್ಕರೆ ಪೊಂಗಲ್ ಹಾಕಿಸಿಕೊಂಡು ಬಂದ. ಹೆಂಡತಿಗೆ ಕಸಿವಿಸಿಯಾಯಿತು. ಗಂಡನನ್ನು ಕೇಳೇ ಬಿಟ್ಟಳು: ‘ನಿಮಗೆ ಕೊಂಚವೂ ಸಂಕೋಚ ಆಗೋದಿಲ್ವೇನ್ರೀ..? ನಾಲ್ಕನೆಯ ಸಲ ಸಕ್ಕರೆ ಪೊಂಗಲ್ ಹಾಕಿಕೊಂಡು ಬರ್ತಾ ಇದ್ದೀರಲ್ಲ?’

ಅದಕ್ಕೆ ಗಂಡ– ‘ಅಯ್ಯೋ ಸಂಕೋಚ ಯಾಕೆ? ಪ್ರತಿ ಸಾರಿ ಹೋದಾಗಲೂ ಇದು ನನ್ನ ಹೆಂಡತಿಗೆ ಅಂತ್ಲೇ ಹೇಳಿ ಹಾಕಿಸ್ಕೊಂಡು ಬಂದಿರೋದು!’

ಎಂ.ಎಸ್.ಎನ್. ಅವರ ಪುಸ್ತಕದ ಒಂದು ಘಟನೆ ಹೇಳ್ತೇನೆ ಕೇಳು.

ಮಗುವಿಗೆ ಮಹಾತ್ಮ ಗಾಂಧೀಜಿಯವರ ‘ಮೂರು ಕೋತಿಗಳ ಬೊಂಬೆ’ಯನ್ನು ಉಡುಗೊರೆಯಾಗಿ ಕೊಟ್ಟಿದ್ರು. ‘ಕೆಟ್ಟದ್ದನ್ನು ಆಡಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ’ ಅನ್ನುವ ಉತ್ತಮ ಸಂದೇಶ ಸಾರುವ ಮೂರು ಕೋತಿಗಳ ಬೊಂಬೆಯನ್ನು. ಚಿಕ್ಕ ವಯಸ್ಸಿನಿಂದಲೇ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲಿ ಎಂಬ ಉದ್ದೇಶದಿಂದ.

ಕೆಲವು ದಿನಗಳ ನಂತರ ಅವರ ಮನೆಗೆ ಎಂ.ಎಸ್.ಎನ್. ಹೋದರು. ಆಗ ಇವರನ್ನು ಗುರುತಿಸಿದ ಆ ಮಗು, ‘ಕೋತಿ ಅಂಕಲ್ ಬಂದ್ರು, ಕೋತಿ ಅಂಕಲ್ ಬಂದ್ರು’ ಅನ್ನಬೇಕೆ? ಕೇಳಿದವರೆಲ್ಲ ಬಿದ್ದು ಬಿದ್ದು ನಕ್ಕರು.

ಇನ್ನೊಂದು ಘಟನೆ ಹೇಳಿ ಇಲ್ಲಿಗೆ ನಿಲ್ಲಿಸ್ತೇನೆ ಪರಮೇಶಿ – ಕೇಳಿಸ್ಕೊ.

ಪಾಪ, ಹೆಂಡತಿಗೆ ಗಂಡನು ಜೂಜಾಡುವುದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಅಂತ. ‘ಎಷ್ಟು ಸಾರಿ ಹೇಳೋದು ನಿಮ್ಗೆ ಜೂಜಾಡಬೇಡಿ ಅಂತ’ ಎಂದು ಬೈದಳು. ‘ಲೇಲೇಲೇ... ಎಷ್ಟು ಸಾರಿ ಹೇಳಿದರೂ ನಿಲ್ಲಿಸೋಲ್ಲ.... ಯಾಕೆ ನಿಲ್ಲಿಸಬೇಕು? ಮಹಾಭಾರತದಲ್ಲಿ ಪಾಂಡವರ ಅಗ್ರಜ ಧರ್ಮರಾಜನೇ ಜೂಜಾಡಲಿಲ್ಲವೇ?’ ಎಂದು ದಬಾಯಿಸಿದ.

ಆಗ ಹೆಂಡತಿ– ‘ಹೌದು, ಸರಿ ಹಾಗಾದ್ರೆ. ಮಹಾಭಾರತದಂತೆ ನಡೆಯೋಣ. ಸಾಕ್ಷಾತ್ ದ್ರೌಪ‍ದಿ ದೇವಿಯಂತೆ ಇನ್ನು ನಾಲ್ವರು ಗಂಡಂದಿರನ್ನು ನಿಮ್ಮ ಮುಂದೆ ನಿಲ್ಲಿಸ್ತೇನೆ..!’

ಕೇಳಿದೆಯೇನಯ್ಯಾ ಪ‍ರಮೇಶಿ. ಕನ್ನಡದಲ್ಲಿ ಎಂಥೆಂಥಾ ಪುಸ್ತಕಗಳಿವೆ, ಮನೋಲ್ಲಾಸಕ್ಕೆ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರ ‘ತಿಂಗಳ ಬೆಳಕು’, ಎಸ್. ಕೃಷ್ಣಮೂರ್ತಿಯವರ ‘ಸಂಗೀತ ಸಮಯ’, ಪ್ರಭುಶಂಕರರ ‘ಪ್ರಭು ಜೋಕ್ಸ್’ ಮತ್ತು ಎಂ.ಎಸ್. ನರಸಿಂಹಮೂರ್ತಿ ಅವರ ‘ಮದಗಜಗಮನೆ’. ಹೀಗೆ ಒಂದೇ ಎರಡೇ... ಸಾವಿರಾರು. ಇಂಥ ಪುಸ್ತಕಗಳು ನಿನ್ನ ಜ್ಞಾನವನ್ನು ವೃದ್ಧಿಸುತ್ತವೆ. ಬದುಕನ್ನು ಸಹನೀಯವಾಗಿಸುತ್ತವೆ. ಸುಸಂಸ್ಕೃತರನ್ನಾಗಿಸುತ್ತವೆ. ಬರೇ ಫೇಸ್ಬುಕ್ಕು, ಇನ್‌ಸ್ಟಾಗ್ರಾಂ, ಯೂಟ್ಯೂಬ್, ಸೈಕಲ್ ಟ್ಯೂಬ್ ಅಂತ ಏನೇನೋ ಹುಡುಕದೆ ಇಂಥವರ ‘ಸೇಫ್ ಬುಕ್’ ಓದು. ಮತ್ಯಾವಾಗಲಾದ್ರೂ ಬಂದ್ರೆ ಇನ್ನಷ್ಟು ‘ಸೇಫ್ ಬುಕ್’ ಹೆಸ್ರು ಹೇಳ್ತೇನೆ ಎಂದೆ.

ಪರಮೇಶಿ ಹ್ಯಾಪಿ ಮೋರೆಯಿಂದ ಸೇಫ್ ಬುಕ್ ಹುಡುಕಿಕೊಂಡು ಹೊರಟ.

ಪ್ರತಿಕ್ರಿಯಿಸಿ (+)