ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಚಂದ್ ಅವರ ಕಥೆ ‘ಮಂತ್ರ’

ಕನ್ನಡಕ್ಕೆ ಡಿ.ಎನ್ ಶ್ರೀನಾಥ್
Last Updated 25 ಸೆಪ್ಟೆಂಬರ್ 2022, 0:15 IST
ಅಕ್ಷರ ಗಾತ್ರ

ಮೂಲ: ಪ್ರೇಮಚಂದ್
ಕನ್ನಡಕ್ಕೆ: ಡಿ.ಎನ್. ಶ್ರೀನಾಥ್

ಸಂಜೆಯ ವೇಳೆಯಾಗಿತ್ತು. ಡಾಕ್ಟರ್ ಚಡ್ಢಾ ಗಾಲ್ಫ್ ಆಡಲು ಸಿದ್ಧರಾಗುತ್ತಿದ್ದರು. ಮೋಟರ್ ಬಾಗಿಲೆದುರು ನಿಂತಿತ್ತು. ಇಬ್ಬರು ಪಲ್ಲಕ್ಕಿಯೊಂದಿಗೆ ಬರುವುದು ಕಂಡಿತು. ಪಲ್ಲಕ್ಕಿಯ ಹಿಂದೆ ವೃದ್ಧನೊಬ್ಬ ಕೋಲನ್ನೂರುತ್ತಾ ಬರುತ್ತಿದ್ದ. ಪಲ್ಲಕ್ಕಿ ಆಸ್ಪತ್ರೆಯೆದುರು ಬಂದು ನಿಂತಿತು. ವೃದ್ಧ ಮೆಲ್ಲ-ಮೆಲ್ಲನೆ ಬಂದು ಬಾಗಿಲ ಬಳಿಯಿದ್ದ ಬಿದಿರಿನ ತಡಿಕೆಯಿಂದ ಇಣಿಕಿ ನೋಡಿದ. ಅವನಿಗೆ ಇಷ್ಟು ಸ್ವಚ್ಛ ನೆಲದ ಮೇಲೆ ಕಾಲಿಡುವಾಗ, ಯಾರಾದರು ಗದರಿದರೆ ಎಂದು ಭಯವಾಗುತ್ತಿತ್ತು. ವೈದ್ಯರು ಎದುರಿಗಿರುವುದನ್ನು ನೋಡಿಯೂ, ಮಾತನಾಡಲು ಧೈರ್ಯ ಬರಲಿಲ್ಲ.

ವೈದ್ಯರು ತಡಿಕೆಯ ಒಳಗಿನಿಂದ ನೋಡುತ್ತಾ ಗದರಿದರು –“ಯಾರಪ್ಪಾ, ಏನ್ ಬೇಕು?”

ವೃದ್ಧ ಕೈಮುಗಿದು ಹೇಳಿದ –“ಬುದ್ಧಿ, ನಾನು ತುಂಬಾ ಬಡವ. ನನ್ನ ಮಗ ಅನೇಕ ದಿನಗಳಿಂದ...”

ವೈದ್ಯರು ಚುಟ್ಟಾ ಹೊತ್ತಿಸಿ ಹೇಳಿದರು –“ನಾಳೆ ಬೆಳಿಗ್ಗೆ ಬಾ, ನಾವೀಗ ರೋಗಿಗಳನ್ನು ನೋಡಲ್ಲ.”

ವೃದ್ಧ ಮೊಣಕಾಲೂರಿ, ನೆಲದ ಮೇಲೆ ತಲೆಯನ್ನಿಟ್ಟು ಹೇಳಿದ –“ಬುದ್ಧಿಯವರಿಗೆ ಒಳ್ಳೆಯದಾಗಲಿ, ಮಗ ಸತ್ತು ಹೋಗ್ತಾನೆ! ಬುದ್ಧಿ, ನಾಲ್ಕು ದಿನಗಳಿಂದ ಕಣ್ಣುಗಳನ್ನು...”

ವೈದ್ಯರಾದ ಚಡ್ಢಾ ವಾಚ್ ನೋಡಿದರು. ಹತ್ತು ನಿಮಿಷಗಳಷ್ಟೇ ಉಳಿದಿತ್ತು. ಅವರು ಗೋಲ್ಫ್-ಸ್ಟಿಕ್‍ನ್ನು ಗೂಟದಿಂದ ತೆಗೆದುಕೊಳ್ಳುತ್ತಾ ಹೇಳಿದರು –“ನಾಳೆ ಬೆಳಿಗ್ಗೆ ಬಾ; ನಾಳೆ ಬೆಳಿಗ್ಗೆ; ಈಗ ಇದು ನಮ್ಮ ಆಟದ ಸಮಯ.”
ವೃದ್ಧ ಪೇಟಾ ಕಳಚಿ ಅದನ್ನು ಹೊಸ್ತಿಲ ಮೇಲಿಟ್ಟು ರೋದಿಸುತ್ತಾ ಹೇಳಿದ –“ಬುದ್ಧಿ, ಒಂದ್ಸಾರಿ ನೋಡಿ. ಒಂದೇ ಒಂದು ಸಾರಿ ನೋಡಿ. ಮಗ ಕೈ ತಪ್ಪಿ ಹೊಗ್ತಾನೆ ಬುದ್ಧಿ. ಏಳು ಮಕ್ಕಳುಗಳಲ್ಲಿ ಇವನೊಬ್ಬನೇ ಉಳಿದಿರೋನು. ನಾವಿಬ್ಬರೂ ಅತ್ತೂ-ಅತ್ತೂ ಸಾಯಬೇಕಾಗುತ್ತೆ, ಬುದ್ಧಿ! ನಿಮ್ಮ ಐಶ್ವರ್ಯ ಹೆಚ್ಚಲಿ, ದೀನಬಂಧುಗಳೇ!”
ಇಂಥ ಅಸಭ್ಯ ಹಳ್ಳಿಗರು ಇಲ್ಲಿ ಸಾಮಾನ್ಯವಾಗಿ ನಿತ್ಯ ಬರುತ್ತಿದ್ದರು. ವೈದ್ಯರು ಅವರ ಸ್ವಭಾವದ ಬಗ್ಗೆ ಪರಿಚಿತರಾಗಿದ್ದರು. ಯಾರು ಏನೇ ಹೇಳಿದರೂ, ಎಷ್ಟೇ ಹೇಳಿದರೂ ತಮ್ಮ ಮಾತನ್ನೇ ಪುನರುಚ್ಚಿಸುತ್ತಿದ್ದರು. ಯಾರ ಮಾತನ್ನು ಸಹ ಕೇಳುತ್ತಿರಲಿಲ್ಲ. ಅವರು ಮೆಲ್ಲನೆ ತಡಿಕೆಯನ್ನು ಸರಿಸಿ ಮೋಟರ್ ಸಮೀಪಕ್ಕೆ ಹೊರಟರು.
“ಬುದ್ಧಿ, ತುಂಬಾ ಉಪಕಾರವಾಗುತ್ತೆ, ದಯೆ ತೋರಿ, ತುಂಬಾ ಕಷ್ಟದಲ್ಲಿದ್ದೇನೆ; ನನಗೆ ಜಗತ್ತಿನಲ್ಲಿ ಬೇರಾರೂ ಇಲ್ಲ.”
ಆದರೆ ವೈದ್ಯರು ಅವನೆಡೆಗೆ ಹೊರಳಿಯೂ ನೋಡಲಿಲ್ಲ. ಮೋಟರ್‍ನಲ್ಲಿ ಕೂತು ಹೇಳಿದರು –“ನಾಳೆ ಬೆಳಿಗ್ಗೆ ಬಾ.”
ಮೋಟರ್ ಹೊರಟು ಹೋಯಿತು. ವೃದ್ಧರು ಅದೆಷ್ಟೋ ಹೊತ್ತು ಕಲ್ಲಿನಂತೆ ನಿಂತಿದ್ದರು. ತಮ್ಮ ಸುಖ-ಸಂತೋಷದೆದುರು ಬೇರೆಯವರ ಪ್ರಾಣವನ್ನೂ ಲೆಕ್ಕಿಸುವುದಿಲ್ಲ, ಇಂಥ ಮನುಷ್ಯರೂ ಜಗತ್ತಿನಲ್ಲಿದ್ದಾರೆ ಎಂಬುದು ಬಹುಶಃ ಈಗಲೂ ವೃದ್ಧರಿಗೆ ಅನ್ನಿಸುತ್ತಿರಲಿಲ್ಲ. ಸಭ್ಯ ಜಗತ್ತು ಇಷ್ಟು ಕಠೋರವಾಗಿದೆ ಎಂಬ ಅನುಭವ ಇದುವರೆಗೆ ಆಗಿರಲಿಲ್ಲ. ಅವರು ತಮ್ಮ ಹಳೆಯ ಕಾಲದಲ್ಲಿನ ಜೀವಿಗಳಲ್ಲಿ ಒಬ್ಬರಾಗಿದ್ದರು; ಹೊತ್ತಿದ ಬೆಂಕಿಯನ್ನಾರಿಸುವುದು, ಶವಗಳಿಗೆ ಹೆಗಲು ಕೊಡುವುದು, ಚಪ್ಪರ ಹಾಕಲು ಸಹಕರಿಸುವುದು ಮತ್ತು ಕಲಹವನ್ನು ಶಮನ ಮಾಡುವಲ್ಲಿ ಸದಾ ತತ್ಪರರಾಗಿರುತ್ತಿದ್ದರು. ಮೋಟರ್ ಕಾಣುವವರೆಗೆ ವೃದ್ಧರು ಅದನ್ನೇ ನೋಡುತ್ತಿದ್ದರು. ಬಹುಶಃ ಅವರಿಗೆ ಈಗಲೂ ವೈದ್ಯರು ಮರಳಿ ಬರುವ ಆಸೆಯಿತ್ತು. ನಂತರ ಅವರು ಡೋಲಿಯನ್ನು ಹೊರುವವರಿಗೆ, ಡೋಲಿಯನ್ನು ಎತ್ತಲು ಹೇಳಿದರು. ಡೋಲಿ ಬಂದ ದಿಕ್ಕಿನಲ್ಲಿಯೇ ಮರಳಿ ಹೋಯಿತು. ವೃದ್ಧ ಎಲ್ಲಡೆಯಿಂದ ನಿರಾಶರಾಗಿ ಡಾಕ್ಟರ್ ಚಡ್ಢಾರ ಬಳಿಗೆ ಬಂದಿದ್ದ. ಅವರ ಬಗ್ಗೆ ಪ್ರಶಂಸೆಯ ಮಾತುಗಳನ್ನು ಕೇಳಿದ್ದ. ಅಲ್ಲಿಂದ ನಿರಾಸೆ ಹೊತ್ತ ಅವನು ಬೇರೆ ವೈದ್ಯರ ಬಳಿಗೆ ಹೋಗಲಿಲ್ಲ. ತನ್ನ ಅದೃಷ್ಟವನ್ನೇ ಹಳಿದುಕೊಂಡ!

-2-

ಅಂದು ರಾತ್ರಿಯೇ ಅವರ ನಗುತ್ತಾ ಆಟವಾಡುತ್ತಿದ್ದ ಏಳು ವರ್ಷದ ಬಾಲಕ ತನ್ನ ಬಾಲ್ಯದ ಲೀಲೆಯನ್ನು ಮುಗಿಸಿ ಈ ಇಹಲೋಕವನ್ನು ತ್ಯಜಿಸಿದ. ವೃದ್ಧ ತಂದೆ-ತಾಯಿಗೆ ಈ ಬಾಲಕನೇ ಆಧಾರವಾಗಿದ್ದ. ಅವನ ಮುಖವನ್ನು ನೋಡಿ ಇಬ್ಬರೂ ಬದುಕಿದ್ದರು. ಈ ದೀಪ ಆರುತ್ತಲೇ ಜೀವನದಲ್ಲಿ ಅಂಧಕಾರ ಆವರಿಸಿತು. ವೃದ್ಧನ ಮಮತೆ, ನೊಂದ ಹೃದಯದಿಂದ ಹೊರ ಬಂದು ಅಂಧಕಾರದಲ್ಲಿ ರೋದಿಸಲಾರಂಭಿಸಿತು.

-2-

ಅನೇಕ ವರ್ಷಗಳು ಕಳೆದವು. ಡಾಕ್ಟರ್ ಚಡ್ಢಾ ಸಾಕಷ್ಟು ಕೀರ್ತಿ ಮತ್ತು ಹಣವನ್ನು ಸಂಪಾದಿಸಿದರು; ಅದರೊಂದಿಗೆ ತಮ್ಮ ಆರೋಗ್ಯವನ್ನೂ ಕಾಪಾಡಿಕೊಂಡರು, ಇದು ಅಸಾಧಾರಣ ಸಂಗತಿಯಾಗಿತ್ತು. ಇದು ಅವರ ನಿಯಮಬದ್ಧ ಜೀವನದ ಆಶೀರ್ವಾದವಾಗಿದ್ದು, ಅವರ ಐವತ್ತು ವರ್ಷದ ವಯಸ್ಸಿನಲ್ಲಿದ್ದ ಸ್ಫೂರ್ತಿ ಮತ್ತು ಉತ್ಸಾಹ ಯುವಕರನ್ನೂ ನಾಚಿಸುತ್ತಿತ್ತು. ಅವರ ಪ್ರತಿಯೊಂದು ಕೆಲಸ ನಿಯಮಿತವಾಗಿರುತ್ತಿದ್ದವು. ಈ ನಿಯಮದಿಂದ ಅವರು ಲೇಶಮಾತ್ರವೂ ಹಿಂದಕ್ಕೆ ಸರಿಯುತ್ತಿರಲಿಲ್ಲ. ಸಾಮಾನ್ಯವಾಗಿ ಜನರು, ತಾವು ರೋಗಿಯಾದಾಗ ಆರೋಗ್ಯದ ನಿಯಮಗಳನ್ನು ಪಾಲಿಸುತ್ತಾರೆ. ಡಾಕ್ಟರ್ ಚಡ್ಢಾ ಉಪಚಾರ ಮತ್ತು ಸಂಯಮದ ರಹಸ್ಯವನ್ನು ಚೆನ್ನಾಗಿ ಅರಿತಿದ್ದರು. ಅವರ ಮಕ್ಕಳ-ಸಂಖ್ಯೆ ಸಹ ಈ ನಿಯಮದ ಅಡಿಯಲ್ಲಿತ್ತು. ಅವರಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳಿದ್ದಳು. ಮೂರನೆಯ ಮಗುವಾಗಲಿಲ್ಲ. ಹೀಗಾಗಿ ಶ್ರೀಮತಿ ಚಡ್ಢಾ ಸಹ ಈಗಲೂ ಯುವತಿಯಂತಿದ್ದರು. ಮಗಳ ಮದುವೆಯಾಗಿತ್ತು. ಮಗ ಕಾಲೇಜಿನಲ್ಲಿ ಓದುತ್ತಿದ್ದ. ಮಗನೇ ತಂದೆ-ತಾಯಿಯ ಜೀವನಕ್ಕೆ ಆಧಾರವಾಗಿದ್ದ. ಅವನು ಗುಣವಂತನಾಗಿದ್ದ, ರಸಿಕನಾಗಿದ್ದ, ಧಾರಾಳಿಯಾಗಿದ್ದ, ಶಾಲಾ-ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿಯಾಗಿದ್ದ. ಯುವ-ಸಮಾಜದ ಕಣ್ಮಣಿಯಾಗಿದ್ದ. ಅವನ ಮುಖ-ಮಂಡಲ ತೇಜಸ್ಸಿನಿಂದ ಹೊಳೆಯುತ್ತಿತ್ತು. ಇಂದು ಅವನ ಇಪ್ಪತ್ತನೆಯ ಹುಟ್ಟು ಹಬ್ಬವಾಗಿತ್ತು.
ಸಂಜೆಯ ವೇಳೆಯಾಗಿತ್ತು. ಹಸುರು ಹುಲ್ಲಿನ ಮೇಲೆ ಕುರ್ಚಿಗಳನ್ನು ಹಾಕಲಾಗಿತ್ತು. ನಗರದ ಶ್ರೀಮಂತರು ಮತ್ತು ಅಧಿಕಾರಿಗಳು ಒಂದು ಭಾಗದಲ್ಲಿ, ಕಾಲೇಜಿನ ವಿದ್ಯಾರ್ಥಿಗಳು ಇನ್ನೊಂದು ಭಾಗದಲ್ಲಿ ಕೂತು ಊಟ ಮಾಡುತ್ತಿದ್ದರು. ವಿದ್ಯುತ್-ಬೆಳಕಿನಿಂದ ಇಡೀ ಮೈದಾನ ಜಗಮಗಿಸುತ್ತಿತ್ತು. ಸುಖ-ಸಂತೋಷದ ಎಲ್ಲಾ ವಸ್ತುಗಳು ಅಲ್ಲಿದ್ದವು. ಚಿಕ್ಕ ಹಾಸ್ಯ ನಾಟಕವನ್ನಾಡುವ ಸಿದ್ಧತೆ ಸಹ ನಡೆದಿತ್ತು. ನಾಟಕವನ್ನು ಸ್ವತಃ ಕೈಲಾಶನಾಥ ಬರೆದಿದ್ದು, ಅವನೇ ಮುಖ್ಯ ನಟನಾಗಿದ್ದ. ಈಗ ಅವನು ಒಂದು ರೇಷ್ಮೆ ಅಂಗಿ ಧರಿಸಿದ್ದ; ಬರಿಗಾಲಲ್ಲಿ ತನ್ನ ಮಿತ್ರರನ್ನು ಆಹ್ವಾನಿಸುತ್ತಿದ್ದ. ‘ಕೈಲಾಶ್, ಸ್ವಲ್ಪ ಇತ್ತ ಬಾ;’ ‘ಕೈಲಾಶ್, ಅಲ್ಲೇ ಇರ್ತೀಯ?’ ಎಂದು ಕೆಲವರು ಅವನನ್ನು ಕರೆಯುತ್ತಿದ್ದರು. ಎಲ್ಲರೂ ಅವನನ್ನು ಛೇಡಿಸುತ್ತಿದ್ದರು, ಹಾಸ್ಯದ ಮಾತುಗಳನ್ನಾಡುತ್ತಿದ್ದರು. ಆದರೆ ಅವನಿಗೆ ಉಸಿರಾಡಲೂ ಸಮಯ ಸಿಗುತ್ತಿರಲಿಲ್ಲ.
ಇದ್ದಕ್ಕಿದ್ದಂತೆ ಸುಂದರಿಯೊಬ್ಬಳು ಅವನ ಸಮೀಪಕ್ಕೆ ಬಂದು ಹೇಳಿದಳು –“ಕೈಲಾಶ್, ನಿನ್ನ ಹಾವು ಎಲ್ಲಿದೆ? ನನಗೂ ತೋರ್ಸು.”
ಕೈಲಾಶ ಅವಳ ಕೈಕುಲುಕಿ ಹೇಳಿದ –“ಮೃಣಾಲಿನಿ, ಈಗ ಕ್ಷಮಿಸು, ನಾಳೆ ತೋರಿಸ್ತೀನಿ.”
“ಬೇಡ, ನೀನು ತೋರಿಸಲೇ ಬೇಕಾಗುತ್ತೆ, ಇವತ್ತು ನಿನ್ನ ಮಾತು ಕೇಳಲ್ಲ. ನೀನು ನಿತ್ಯ ‘ನಾಳೆ-ನಾಳೆ’ ಅನ್ತೀಯ.” ಮೃಣಾಲಿನಿ ಆಗ್ರಹಿಸಿದಳು.
ಮೃಣಾಲಿನಿ ಮತ್ತು ಕೈಲಾಶ್ ಇಬ್ಬರೂ ಸಹಪಾಠಿಗಳಾಗಿದ್ದರು; ಪರಸ್ಪರ ಪ್ರೀತಿಯಲ್ಲಿ ಬೆಳೆದಿದ್ದರು. ಕೈಲಾಶ್‍ಗೆ ಹಾವುಗಳನ್ನು ಸಾಕುವುದು, ಅವುಗಳನ್ನು ಆಡಿಸುವುದರಲ್ಲಿ ಆಸಕ್ತಿಯಿತ್ತು. ಅವನು ನಾನಾ ವಿಧದ ಹಾವುಗಳನ್ನು ಸಾಕಿದ್ದ. ಅವುಗಳ ಸ್ವಭಾವ ಮತ್ತು ಗುಣಗಳನ್ನು ಪರೀಕ್ಷಿಸುತ್ತಿದ್ದ. ಕೆಲವು ದಿನಗಳ ಹಿಂದೆ, ಕಾಲೇಜಿನಲ್ಲಿ ಹಾವುಗಳ ಬಗ್ಗೆ ಒಂದು ಅದ್ಭುತವಾದ ಭಾಷಣವನ್ನು ಮಾಡಿದ್ದ. ಹಾವುಗಳನ್ನು ಕುಣಿಸಿ ಪ್ರದರ್ಶಿಸಿದ್ದ! ಪ್ರಾಣಿಶಾಸ್ತ್ರದ ವಿದ್ವಾಂಸರು ಸಹ ಅವನ ಭಾಷಣ ಕೇಳಿ ಆಶ್ಚರ್ಯಗೊಂಡಿದ್ದರು. ಈ ವಿದ್ಯೆಯನ್ನು ಅವನು ಒಬ್ಬ ಪ್ರಸಿದ್ಧ ಹಾವಾಡಿಗನಿಂದ ಕಲಿತಿದ್ದ. ಅವನಿಗೆ ಹಾವುಗಳಿಗೆ ಸಂಬಂಧಿಸಿದ ಬೇರು-ನಾರುಗಳನ್ನು ಕಲೆ ಹಾಕುವ ಆಸಕ್ತಿಯೂ ಇತ್ತು. ಒಬ್ಬರ ಬಳಿ ವಿಶೇಷ ಬೇರು-ನಾರು ಇದೆ ಎಂಬ ವಿಷಯ ಕೇಳಿದಾಗ ಅವನ ಮನಸ್ಸು ಚಡಪಡಿಸುತ್ತಿತ್ತು; ಅದನ್ನು ಪಡೆದೇ ತೀರುತ್ತಿದ್ದ. ಇದು ಅವನ ದೊಡ್ಡ ಗೀಳಾಗಿತ್ತು. ಇದಕ್ಕಾಗಿ ಸಾವಿರಾರು ರೂಪಾಯಿಗಳನ್ನು ವ್ಯಯಿಸಿದ್ದ. ಮೃಣಾಲಿನಿ ಅನೇಕ ಬಾರಿ ಬಂದಿದ್ದಳು, ಆದರೆ ಹಾವುಗಳನ್ನು ನೋಡಲು ಇಷ್ಟು ಉತ್ಸುಕಳಾಗಿರಲಿಲ್ಲ. ಈ ಉತ್ಸುಕತೆ ವಾಸ್ತವಾಗಿಯೂ ಅವಳಲ್ಲಿ ಜಾಗೃತಗೊಂಡಿತ್ತೋ ಅಥವಾ ಅವಳು ಕೈಲಾಶನ ಮೇಲೆ ತನ್ನ ಹಕ್ಕನ್ನು ಪ್ರದರ್ಶಿಸಲು


-3-

ಬಯಸುತ್ತಿದ್ದಳೋ, ಹೇಳಲಾಗದು. ಆದರೆ ಅವಳ ಒತ್ತಾಯ ಈಗ ಅಸಂಬದ್ಧವಾಗಿತ್ತು. ಅಲ್ಲಿ ತುಂಬಾ ಜನ ಕಲೆತಿದ್ದಾರೆ, ಗುಂಪನ್ನು ನೋಡಿ ಹಾವುಗಳು ಕಕ್ಕಾಬಿಕ್ಕಿಯಾಗುತ್ತವೆ; ಅಲ್ಲದೆ ರಾತ್ರಿ ವೇಳೆಯಲ್ಲಿ ಅವುಗಳನ್ನು ಛೇಡಿಸುವುದು ಎಷ್ಟು ಅಪಾಯಕರ ಎಂಬ ವಿಷಯಗಳ ಬಗ್ಗೆ ಅವಳಿಗೆ ಕಿಂಚಿತ್ ಸಹ ಗಮನವಿರಲಿಲ್ಲ.
ಕೈಲಾಶ್ ಹೇಳಿದ –“ನಾಳೆ ಖಂಡಿತಾ ತೋರಿಸ್ತೀನಿ. ಈಗ ಸರಿಯಾಗಿ ತೋರಿಸಲಾರೆ, ಕೊಠಡಿಯಲ್ಲಿ ಸ್ವಲ್ಪವೂ ಜಾಗ ಸಿಗಲ್ಲ.”
ಒಬ್ಬರು ಛೇಡಿಸುತ್ತಾ ಹೇಳಿದರು –“ಏಕೆ ತೋರ್ಸಲ್ಲ, ಸಣ್ಣ ವಿಷಯಕ್ಕೆ ಏಕೆ ಹಿಂಜರಿತೀಯ? ಮಿಸ್ ಗೋವಿಂದ್, ಎಂದಿಗೂ ಒಪ್ಪಬೇಡ; ನೋಡೋಣ, ಏಕೆ ತೋರ್ಸಲ್ಲ ಅಂತ!”
ಇನ್ನೊಬ್ಬರು ಹುರಿದುಂಬಿಸಿದರು –“ಮಿಸ್ ಗೋವಿಂದ್ ತುಂಬಾ ಮುಗ್ಧೆ, ಅದಕ್ಕೇ ನೀವು ಹೀಗೆ ಮಾಡ್ತೀರ; ಬೇರೆಯವರಾಗಿದ್ದರೆ, ಇದಕ್ಕೇ ರೇಗ್ತಿದ್ದರು.”
ಮೂರನೆಯವರು ಗೇಲಿ ಮಾಡಿದರು –“ಮಾತಾಡುವುದನ್ನೇ ನಿಲ್ಲಿಸಿಬಿಡ್ತಿದ್ದಳು. ನೀವು ಮೃಣಾಲಿನಿಗಾಗಿ ಪ್ರಾಣವನ್ನೇ ಕೊಡ್ತೀನಿ ಅಂತ ಹೇಳ್ತೀರ, ಆದ್ರೆ...”
ಈ ಪೋಕರಿಗಳು ಉದ್ರೇಕಿಸುತ್ತಿದ್ದಾರೆಂದು ಗಮನಿಸಿದ ಮೃಣಾಲಿನಿ ಹೇಳಿದಳು –“ನೀವು ನನ್ನ ಪರವಾಗಿ ವಕಾಲತ್ ಮಡ್ಬೇಡಿ, ನಾನೇ ವಕಾಲತ್ ಮಾಡ್ತೀನಿ. ನಾನೀಗ ಹಾವುಗಳ ತಮಾಷೆ ನೋಡಲು ಬಯಸಲ್ಲ. ನಡೀರಿ...”
ಆಗ ಮಿತ್ರರು ಗಟ್ಟಿಯಾಗಿ ನಕ್ಕರು. ಒಬ್ಬರು ಹೇಳಿದರು –“ನೀವು ಎಲ್ಲವನ್ನೂ ನೋಡಲು ಬಯಸ್ತೀರ, ಆದರೆ ನೀವು ಆಟ ತೋರ್ಸಲ್ಲ?”
ಮೃಣಾಲಿನಿಯ ಬಾಡಿದ ಮುಖವನ್ನು ನೋಡಿ ಕೈಲಾಶ್‍ಗೆ, ಈಗ ತಾನು ಅವಳ ಮಾತನ್ನು ಅಲ್ಲಗೆಳೆದಿದ್ದು ಅವಳಿಗೆ ಕೆಡುಕೆನಿಸಿತು ಎಂದು ಅನ್ನಿಸಿತು. ಊಟ ಮುಗಿದಾಗ, ಹಾಡು ಆರಂಭವಾಯಿತು. ಅವನು ಮೃಣಾಲಿನಿ ಮತ್ತು ಇನ್ನಿತರ ಮಿತ್ರರನ್ನು ಹಾವುಗಳಿದ್ದ ಪಂಜರದ ಎದುರು ಕರೆದೊಯ್ದು, ಪುಂಗಿಯನ್ನು ಊದಲಾರಂಭಿಸಿದ. ನಂತರ ಒಂದೊಂದೇ ಭಾಗವನ್ನು ತೆರೆದು ಒಂದೊಂದೇ ಹಾವುಗಳನ್ನು ಹೊರ ತೆಗೆಯಲಾರಂಭಿಸಿದ. ವಾಹ್! ಅದಂಥ ಕೈಚಳಕ! ಅವು ಕೈಲಾಶನ ಒಂದೊಂದು ಮಾತನ್ನು ಸಹ ಅರ್ಥ ಮಾಡಿಕೊಳ್ಳುತ್ತವೆ ಎಂದು ತೋರುತ್ತಿತ್ತು. ಒಂದು ಹಾವನ್ನು ಕೊರಳಿಗೆ ಹಾಕಿಕೊಂಡ, ಇನ್ನೊಂದು ಹಾವನ್ನು ಕೈಗೆ ಸುತ್ತಿಕೊಂಡ. ಕುತ್ತಿಗೆಗೆ ಹಾವನ್ನು ಹಾಕಿಕೊಳ್ಳಬೇಡ, ದೂರದಿಂದಲೇ ತೋರಿಸು, ಸ್ವಲ್ಪ ಆಡಿಸು ಎಂದು ಮೃಣಾಲಿನಿ ಪದೇ-ಪದೇ ಹೇಳುತ್ತಿದ್ದಳು. ಕೈಲಾಶ ತನ್ನ ಕೊರಳಿಗೆ ಹಾವುಗಳನ್ನು ಸುತ್ತಿಕೊಳ್ಳುತ್ತಲೇ ಇದ್ದ, ಇದನ್ನು ನೋಡಿ ಮೃಣಾಲಿನಿಗೆ ಜೀವ ಹೋದಂತಾಗುತ್ತಿತ್ತು. ನಾನು ವ್ಯರ್ಥವಾಗಿ ನಿನಗೆ ಹಾವುಗಳನ್ನು ತೋರಿಸಲು ಹೇಳಿದೆ ಎಂದು ಪದೇ-ಪದೇ ಹೇಳುತ್ತಿದ್ದಳು. ಆದರೆ ಕೈಲಾಶ ಅವಳ ಮಾತುಗಳನ್ನು ಕೇಳುತ್ತಿರಲಿಲ್ಲ. ಅವನು ಪ್ರೇಯಸಿಯ ಎದುರು ತನ್ನ ಕಲಾ-ಪ್ರದರ್ಶನವನ್ನು ತೋರಿಸುವ ಇಂಥ ಅವಕಾಶವನ್ನು ತಪ್ಪಿಸಿಕೊಳ್ಳಲು ಬಯಸುತ್ತಿರಲಿಲ್ಲ. ಆಗ ಒಬ್ಬ ಮಿತ್ರ ಟಿಪ್ಪಣಿ ಮಾಡಿದ –“ಹಲ್ಲುಗಳನ್ನು ಕಿತ್ತಿರಬೇಕು!”
ಕೈಲಾಶ್ ನಕ್ಕು ಹೇಳಿದ –“ಹಲ್ಲು ಕೀಳುವುದು ಹಾವಾಡಿಗರ ಕೆಲಸ. ನಾನು ಯಾವ ಹಾವಿನ ಹಲ್ಲನ್ನೂ ಕಿತ್ತಿಲ್ಲ. ತೋರಿಸ್ಲಾ?” ಹೀಗೆಂದು ಒಂದು ಕಪ್ಪು ಹಾವನ್ನು ಹಿಡಿದು ಹೇಳಿದ –“ನನ್ನ ಹತ್ರ ಇದಕ್ಕಿಂತ ಘೋರ ವಿಷದ ಹಾವು ಇನ್ನೊಂದಿಲ್ಲ. ಇದು ಒಂದು ವೇಳೆ ಯಾರಿಗಾದರು ಕಡಿದರೆ, ಆ ಮನುಷ್ಯ ಕೂಡ್ಲೇ ಸತ್ತು ಹೋಗ್ತಾನೆ. ಇದರ ಕಡಿತಕ್ಕೆ ಮಂತ್ರವಿಲ್ಲ. ಇದರ ಹಲ್ಲುಗಳನ್ನು ತೋರಿಸ್ಲಾ?”
ಮೃಣಾಲಿನಿ ಅವನ ಕೈಗಳನ್ನು ಹಿಡಿದು ಹೇಳಿದಳು –“ಬೇಡ-ಬೇಡ ಕೈಲಾಶ್, ಇದನ್ನು ಬಿಟ್ ಬಿಡು. ನಿನ್ನ ಕಾಲಿಗೆ ಬೀಳ್ತೀನಿ.”
ಆಗ ಇನ್ನೊಬ್ಬ ಮಿತ್ರ ಹೇಳಿದ –“ನನಗೆ ನಂಬಿಕೆಯಿಲ್ಲ, ಆದ್ರೆ ನೀನು ಹೇಳ್ತಿದ್ದೀಯ ಅಂತ ನಂಬ್ತೀನಿ.”
ಕೈಲಾಶ್ ಹಾವಿನ ಕತ್ತನ್ನು ಹಿಡಿದು ಹೇಳಿದ –“ಆಯ್ತು, ನೀವು ಕಣ್ಣಾರೆ ನೋಡಿ ನಂಬಿ. ಹಲ್ಲುಗಳನ್ನು ಕಿತ್ತು ವಶಪಡಿಸಿಕೊಂಡರೇನು ಬಂತು! ಹಾವು ತುಂಬಾ ತಿಳಿವಳಿಕಸ್ತ ಜೀವಿಗಳು. ಮನುಷ್ಯನಿಂದ ತನಗೆ ಹಾನಿಯಿಲ್ಲ ಎಂಬುದು ಹಾವಿಗೆ ತಿಳಿದರೆ, ಅದೆಂದೂ ಕಡಿಯದು.”
ಕೈಲಾಶನಿಗೆ ಈಗ ಹಾವಿನ ಭೂತ ಸವಾರಿ ಮಾಡಿದೆ ಎಂದು ಮೃಣಾಲಿನಿಗೆ ಕಂಡಿತು; ಅವಳು ಈ ತಮಾಷೆ-


-4-

ಯನ್ನು ನಿಲ್ಲಿಸುವ ಉದ್ದೇಶದಿಂದ ಹೇಳಿದಳು –“ಸರಿ, ನೀವಿಲ್ಲಿಂದ ಹೋಗಿ. ನೋಡಿ, ಹಾಡಿನ ಕಾರ್ಯಕ್ರಮ ಆರಂಭವಾಗಿದೆ. ಇವತ್ತು ನಾನೂ ಸಹ ಒಂದು ಹಾಡನ್ನು ಹಾಡ್ತೀನಿ.” ಹೀಗೆಂದು ಅವಳು ಕೈಲಾಶನ ಹೆಗಲು ಹಿಡಿದು, ಹೊರಡುವಂತೆ ಸಂಜ್ಞೆ ಮಾಡಿ, ಕೊಠಡಿಯಿಂದ ಹೊರ ಹೋದಳು; ಆದರೆ ಕೈಲಾಶ್ ವಿರೋಧಿಗಳ ಅನುಮಾನವನ್ನು ಪರಿಹರಿಸಿಯೇ ಹೋಗುವುದಾಗಿ ನಿಶ್ಚಯಿಸಿದ್ದ. ಅವನು ಹಾವಿನ ಕತ್ತನ್ನು ಹಿಡಿದು, ಬಲವಾಗಿ ಒತ್ತಿದ, ಅವನ ಮುಖ ಕೆಂಪಗಾಯಿತು, ದೇಹದ ನಾಡಿಗಳು ಸೆಟೆದುಕೊಂಡವು. ಹಾವು ಇದುವರೆಗೆ ಅವನ ಇಂಥ ವರ್ತನೆಯನ್ನು ನೋಡಿರಲಿಲ್ಲ. ಇವನು ನನ್ನಿಂದೇನು ಬಯಸುತ್ತಾನೆ ಎಂಬುದು ಅದಕ್ಕೆ ತಿಳಿಯುತ್ತಿರಲಿಲ್ಲ. ಇವನು ನನ್ನನ್ನು ಕೊಲ್ಲಲು ಬಯಸುತ್ತಾನೆ ಎಂದು ಯೋಚಿಸಿದ ಹಾವು ಆತ್ಮ-ರಕ್ಷಣೆಗಾಗಿ ಸಿದ್ಧವಾಯಿತು.
ಕೈಲಾಶ್ ಅದರ ಕತ್ತನ್ನು ಬಿಗಿಯಾಗಿ ಒತ್ತಿ ಹಿಡಿದು ಅದರ ಬಾಯಿಯನ್ನು ತೆರೆದ; ನಂತರ ಅದರ ವಿಷ-ದಂತಗಳನ್ನು ತೋರಿಸುತ್ತಾ ಹೇಳಿದ –“ಯಾರಿಗೆ ಅನುಮಾನವಿದೆಯೋ, ಅವರು ಬಂದು ನೋಡಲಿ. ಈಗ ನಂಬಿಕೆಯಾಯ್ತ ಅಥವಾ ಇನ್ನೂ ಏನಾದ್ರು ಅನುಮಾನವಿದೆಯೋ?” ಮಿತ್ರರು ಬಂದು ಅದರ ಹಲ್ಲುಗಳನ್ನು ನೋಡಿ ಆಶ್ಚರ್ಯಗೊಂಡರು. ಪ್ರತ್ಯಕ್ಷ ಪ್ರಮಾಣದೆದುರು ಸಂದೇಹಕ್ಕೆ ಜಾಗವೆಲ್ಲಿದೆ? ಮಿತ್ರರ ಅನುಮಾನವನ್ನು ಪರಿಹರಿಸಿ ಕೈಲಾಶ್ ಹಾವಿನ ಕತ್ತಿನ ಹಿಡಿತವನ್ನು ಸಡಿಲಗೊಳಿಸಿದ, ನಂತರ ಅದನ್ನು ನೆಲದ ಮೇಲೆ ಇಡಲು ನೋಡಿದ; ಆದರೆ ಕ್ರೋಧಾವೇಶದಲ್ಲಿದ್ದ ಆ ಕಪ್ಪು ಗೋಧಿನಾಗರದ ಕತ್ತು ಸಡಿಲಗೊಳ್ಳುತ್ತಲೇ ತಲೆಯೆತ್ತಿ ಕೈಲಾಶನ ಬೆರಳಿಗೆ ಕಚ್ಚಿ, ಅಲ್ಲಿಂದ ಓಡಿತು. ಕೈಲಾಶನ ಬೆರಳಿನಿಂದ ರಕ್ತ ಹನಿಯಲಾರಂಭಿಸಿತು. ಅವನು ಗಟ್ಟಿಯಾಗಿ ಬೆರಳನ್ನು ಒತ್ತಿ ಹಿಡಿದು ತನ್ನ ಕೋಣೆಗೆ ಓಡಿದ. ಅಲ್ಲಿದ್ದ ಮೇಜಿನ ಖಾನೆಯಲ್ಲಿ ಒಂದು ಬೇರಿತ್ತು, ಅದನ್ನು ಪುಡಿ ಮಾಡಿ ಹಚ್ಚಿದರೆ ಘಾತಕ ವಿಷ ಸಹ ಇಳಿಯುತ್ತಿತ್ತು. ಮಿತ್ರರಲ್ಲಿ ಕೋಲಾಹಲವುಂಟಾಯಿತು. ಹೊರಗಿನ ಹಾಡಿನ ಕಾರ್ಯಕ್ರಮಕ್ಕೂ ಸುದ್ದಿ ಮುಟ್ಟಿತು. ಡಾಕ್ಟರ್ ಸಾಹೇಬರು ಗಾಬರಿಯಿಂದ ಓಡಿ ಬಂದರು. ತಕ್ಕಣ ಬೆರಳನ್ನು ಬಲವಾಗಿ ಒತ್ತಿ ಹಿಡಿದು ಕಟ್ಟಲಾಯಿತು, ಬೇರನ್ನು ಪುಡಿ ಮಾಡಲು ಕೊಡಲಾಯಿತು. ಡಾಕ್ಟರ್ ಸಾಹೇಬರಿಗೆ ಬೇರಿನಲ್ಲಿ ವಿಶ್ವಾಸವಿರಲಿಲ್ಲ. ಅವರು ಹಾವು ಕಚ್ಚಿದ ಬೆರಳಿನ ತುದಿಯನ್ನು ಕತ್ತರಿಸಲು ಬಯಸುತ್ತಿದ್ದರು. ಆದರೆ ಕೈಲಾಶ್‍ಗೆ ಬೇರು-ಔಷಧದಲ್ಲಿ ನಂಬಿಕೆಯಿತ್ತು. ಮೃಣಾಲಿನಿ ಪಿಯಾನೋದ ಬಳಿ ಕೂತಿದ್ದಳು. ಈ ಸುದ್ದಿ ಕೇಳುತ್ತಲೇ ಓಡಿ ಬಂದು ಕೈಲಾಶನ ಬೆರಳಿನಿಂದ ಹನಿಯುತ್ತಿದ್ದ ರಕ್ತವನ್ನು ಕರ್ಚೀಪಿನಿಂದ ಒರೆಸಲಾರಂಭಿಸಿದಳು. ಬೇರನ್ನು ಪುಡಿಮಾಡಲಾಗುತ್ತಿತ್ತು; ಆದರೆ ಆ ಒಂದು ನಿಮಿಷದಲ್ಲಿಯೇ ಕೈಲಾಶನ ಕಣ್ಣುಗಳು ಮುಚ್ಚಿ ಹೋಗುತ್ತಿದ್ದವು, ತುಟಿಗಳು ಹಳದಿಯಾಗಲಾರಂಭಿಸಿದವು. ಅವನು ನಿಲ್ಲದಾದ. ನೆಲದ ಮೇಲೆ ಕೂತ. ಅತಿಥಿಗಳು ಕೋಣೆಯಲ್ಲಿ ಜಮಾಯಿಸಿದರು. ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿದ್ದರು. ಅಷ್ಟರಲ್ಲಿ ಬೇರಿನ ಪುಡಿ ಬಂತು. ಮೃಣಾಲಿನಿ ಅದನ್ನು ಬೆರಳಿಗೆ ಹಚ್ಚಿದಳು. ಮತ್ತೊಂದು ನಿಮಿಷ ಕಳೆಯಿತು. ಕೈಲಾಶನ ಕಣ್ಣುಗಳು ಮುಚ್ಚಿದವು. ಅವನು ಮಲಗಿ ಫ್ಯಾನ್ ಹಾಕುವಂತೆ ಕೈಯಿಂದ ಸಂಜ್ಞೆ ಮಾಡಿದ. ಅಮ್ಮ ಬಂದು ಅವನ ತಲೆಯನ್ನು ಮಡಿಲಿನಲ್ಲಿಟ್ಟುಕೊಂಡು ಟೇಬಲ್ ಫ್ಯಾನ್ ಆನ್ ಮಾಡಿದಳು.
ಡಾಕ್ಟರ್ ಸಾಹೇಬರು ಬಗ್ಗಿ ಕೇಳಿದರು –“ಕೈಲಾಶ್, ಆರೋಗ್ಯ ಹೇಗಿದೆ?” ಕೈಲಾಶ್ ಮೆಲ್ಲನೆ ಕೈಯಿತ್ತಿದ, ಆದರೆ ಮಾತನಾಡದಾದ. ಮೃಣಾಲಿನಿ ಕರುಣಾ-ಸ್ವರದಲ್ಲಿ ಕೇಳಿದಳು –“ಬೇರು ಪ್ರಭಾವ ಬೀರುವುದಿಲ್ಲವೇ?” ಡಾಕ್ಟರ್ ಸಾಹೇಬರು ತಲೆ ಹಿಡಿದುಕೊಂಡು ಹೇಳಿದರು –“ನಾನು ಇವನ ಮಾತಿಗೆ ಬಿದ್ದೆ. ಈಗ ಬೆರಳನ್ನು ಕತ್ತರಿಸಿದರೂ ಉಪಯೋಗವಾಗದು.”
ಅರ್ಧ ಗಂಟೆ ಇದೇ ಪರಿಸ್ಥಿತಿಯಿತ್ತು. ಕೈಲಾಶನ ಆರೋಗ್ಯ ಪ್ರತಿಕ್ಷಣ ಬಿಗಡಾಯಿಸುತ್ತಿತ್ತು. ಅವನ ಕಣ್ಣುಗಳು ಕಾಂತಿಹೀನವಾದವು. ಮುಖ ಮಲಿನವಾಯಿತು. ನಾಡಿ ಸಿಗಲಿಲ್ಲ. ಸಾವಿನ ಲಕ್ಷಣಗಳೆಲ್ಲವೂ ಕಂಡು ಬಂದವು. ಮನೆಯಲ್ಲಿ ಕೋಲಾಹಲವುಂಟಾಯಿತು. ಮೃಣಾಲಿನಿ ತಲೆ ಚಚ್ಚಿಕೊಂಡಳು; ತಾಯಿ ಎದೆ ಬಡಿದುಕೊಂಡಳು. ಡಾಕ್ಟರ್ ಚಡ್ಢಾರನ್ನು ಮಿತ್ರರು ಸಂಭಾಳಿಸುತ್ತಿದ್ದರು, ಇಲ್ಲದಿದ್ದಲ್ಲಿ ಬೆರಳು ಕತ್ತರಿಸುವ ಚಾಕುವಿನಿಂದ ತಮ್ಮೆದೆಗೆ ಇರಿದುಕೊಳ್ಳುತ್ತಿದ್ದರು.
ಒಬ್ಬರು ಹೇಳಿದರು –“ಮಂತ್ರ ಹಾಕುವವರು ಸಿಕ್ಕರೆ, ಈಗಲೂ ಪ್ರಾಣ ಉಳಿಯುವ ಸಂಭವವಿದೆ.”
ಮುಸಲ್ಮಾನ್ ಸಜ್ಜನರೊಬ್ಬರು ಅವರ ಮಾತನ್ನು ಸಮರ್ಥಿಸುತ್ತಾ ಹೇಳಿದರು –“ಸಾಹೇಬ್ರೆ, ಸಮಾಧಿಯಲ್ಲಿ ಬಿದ್ದ ಶವಗಳು ಬದುಕಿವೆ. ಇಂಥ ಅನೇಕ ಚಮತ್ಕಾರಗಳು ಬೇಕಾದಷ್ಟಿವೆ.”
ಡಾಕ್ಟರ್ ಚಡ್ಢಾ ಹೇಳಿದರು –“ನಾನು ಇವನ ಮಾತುಗಳನ್ನು ಕೇಳಿದೆ, ನನ್ನ ಬುದ್ಧಿಗೆ ಮಂಕು ಕವಿದಿತ್ತು.


-5-

ಚಾಕುವಿನಿಂದ ಬೆರಳನ್ನು ಕತ್ತರಿಸಿದ್ದರೆ, ಈ ಪರಿಸ್ಥಿತಿ ಬರ್ತಿರಲಿಲ್ಲ. ನಾನು ಪದೇ-ಪದೇ, ‘ಕೈಲಾಶ್, ಹಾವುಗಳನ್ನು ಸಾಕ್ಬೇಡ ಅಂತಿದ್ದೆ. ಆದ್ರೆ ನನ್ನ ಮಾತನ್ನು ಕೇಳೋರು ಯಾರು! ಕರೀರಿ, ಮಂತ್ರ ಹಾಕೋನನ್ನೇ ಕರೀರಿ. ನನ್ನದೆಲ್ಲವನ್ನೂ ತೆಗೆದುಕೊಳ್ಳಲಿ, ನನ್ನೆಲ್ಲಾ ಆಸ್ತಿಯನ್ನು ಅವನ ಕಾಲ ಬಳಿ ಇಡ್ತೀನಿ. ಲಂಗೋಟಿ ಧರಿಸಿ ಮನೆಯಿಂದ ಹೋಗ್ತೀನಿ; ಆದ್ರೆ ನನ್ನ ಕೈಲಾಶ್, ನನ್ನ ಮುದ್ದು ಮಗ ಕೈಲಾಶ್ ಬದುಕಲಿ. ಯಾರನ್ನಾದ್ರು ಕರೀರಿ.”
ಒಬ್ಬರಿಗೆ ಓರ್ವ ಮಂತ್ರ ಹಾಕುವವನ ಪರಿಚಯವಿತ್ತು. ಓಡಿ ಹೋಗಿ ಅವನನ್ನು ಕರೆತಂದರು; ಆದರೆ ಅವನಿಗೆ ಕೈಲಾಶನ ಮುಖ ನೋಡಿ ಮಂತ್ರ ಹಾಕುವ ಧೈರ್ಯ ಬರದೆ ಹೇಳಿದ –“ಈಗೇನು ಸಾಧ್ಯ, ಬುದ್ಧಿ? ಆಗುವುದೆಲ್ಲವೂ ಆಗಿ ಹೋಗಿದೆ!”
ಮೂರ್ಖ, ಏನಾಗಬಾರದಿತ್ತೋ, ಆಗಿದೆ ಎಂದೇಕೆ ಹೇಳಲ್ಲ? ಏನಾಗಬೇಕಿತ್ತೋ, ಅದೆಲ್ಲಾಯಿತು? ತಂದೆ-ತಾಯಿ ಮಗನ ಬಾಸಿಂಗವನ್ನೆಲ್ಲಿ ನೋಡಿದರು? ಮೃಣಾಲಿನಿಯ ಕಾಮನೆಯ ಗಿಡ ಅಂಕುರಿಸಿ ಹೂಬಿಟ್ಟಿತೇ? ಮನಸ್ಸಿನ ಸ್ವರ್ಣ-ಸ್ವಪ್ನಗಳು ಈಡೇರಿದವೇ? ಜೀವನದಲ್ಲಿ ಸಂತಸವನ್ನು ಅನುಭವಿಸುವ ಸಂದರ್ಭದಲ್ಲಿ ಅವರ ಜೀವನ-ನೌಕೆ ಮುಳುಗಲಿಲ್ಲವೇ? ಆಗಬಾರದ್ದು, ಆಗಿ ಹೋಯಿತು!!
ಅದೇ ಹಸುರು ಬಯಲು, ಅದೇ ಸುವರ್ಣ ಬೆಳದಿಂಗಳು, ನಿಶ್ಶಬ್ದ ಸಂಗೀತದಮತೆ ಪ್ರಕೃತಿಯನ್ನಾವರಿಸಿತ್ತು; ಅದೇ ಮಿತ್ರ-ಸಮಾಜ, ಅದೇ ಮನರಂಜೆಯ ವಸ್ತುಗಳು, ಆದರೆ ಹಾಸ್ಯಕ್ಕೆ ಬದಲು ಅಲ್ಲಿ, ಕರುಣ-ಕ್ರಂದನ ಮತ್ತು ಅಶ್ರು-ಪ್ರವಾಹ ಹರಿಯುತ್ತಿತ್ತು.

-3-

ನಗರದಿಂದ ಅನೇಕ ಮೈಲುಗಳ ದೂರದಲ್ಲಿ ಒಂದು ಚಿಕ್ಕ ಮನೆಯಲ್ಲಿ ವೃದ್ಧ ತನ್ನ ವೃದ್ಧೆ ಹೆಂಡತಿಯೊಂದಿಗೆ ಒಲೆಯ ಎದುರು ಕೂತು ಚಳಿಗಾಲದ ರಾತ್ರಿಯನ್ನು ಕಳೆಯುತ್ತಿದ್ದ. ವೃದ್ಧ ಎಳನೀರು ಕುಡಿಯುತ್ತಿದ್ದು, ಆಗಾಗ ಕೆಮ್ಮುತ್ತಿದ್ದ. ವೃದ್ಧೆ ಎರಡೂ ಮೊಣಕಾಲುಗಳ ಮಧ್ಯೆ ತಲೆಯಿಟ್ಟುಕೊಂಡು ಬೆಂಕಿಯನ್ನು ನೋಡುತ್ತಿದ್ದಳು. ಒಂದು ಮಣ್ಣಿನ ಹಣತೆ ಗೋಡೆಯ ಗೂಡಿನಲ್ಲಿ ಉರಿಯುತ್ತಿತ್ತು. ಮನೆಯಲ್ಲಿ ಮಂಚವೂ ಇರಲಿಲ್ಲ, ಹಾಸಿಗೆಯೂ ಇರಲಿಲ್ಲ. ಒಂದು ಬದಿಯಲ್ಲಿ ಭತ್ತದ ಒಣ ದಂಟು ಬಿದ್ದಿತ್ತು. ಅದೇ ಕೋಣೆಯಲ್ಲಿ ಒಂದು ಒಲೆಯಿತ್ತು. ವೃದ್ಧೆ ಹಗಲಿಡಿ ಬೆರಣಿ ಮತ್ತು ಒಣ ಸೌದೆಯನ್ನು ಸಂಗ್ರಹಿಸುತ್ತಿದ್ದಳು. ವೃದ್ಧ ಹಗ್ಗವನ್ನು ಹೆಣೆದು ಪೇಟೆಗೆ ಹೋಗಿ ಮಾರಿ ಬರುತ್ತಿದ್ದ. ಇದು ಅವರ ಜೀವನೋಪಾಯವಾಗಿತ್ತು. ಇಬ್ಬರಲ್ಲಿ ಯಾರೂ ರೋದಿಸುವುದಾಗಲಿ, ನಗುವುದಾಗಲಿ ನೋಡಲಿಲ್ಲ. ಅವರ ಸಂಪೂರ್ಣ ಸಮಯ ಜೀವಂತವಾಗಿರುವಲ್ಲಿ ಕಳೆಯುತ್ತಿತ್ತು. ಸಾವು ಬಾಗಿಲ ಬಳಿ ನಿಂತಿತ್ತು, ರೋದಿಸಲು ಅಥವಾ ನಗಲು ಬಿಡುವೆಲ್ಲಿ!
ವೃದ್ಧೆ ಕೇಳಿದಳು –“ನಾಳೆಗೆ ಸೆಣಬಿಲ್ಲ, ಕೆಲ್ಸ ಹೇಗೆ ಮಾಡ್ತೀರ?”
“ಝಗಡೂ ಸಾಹನಿಂದ ಹತ್ತು ಸೇರು ಸೆಣಬನ್ನು ಸಾಲ ತರ್ತೀನಿ.”
“ಹಿಂದಿನ ದುಡ್ಡನ್ನೇ ಕೊಟ್ಟಿಲ್ಲ, ಮತ್ತೆ ಸಾಲ ಏಕೆ ಕೊಡ್ತಾನೆ?”
“ಕೊಡದಿದ್ದರೆ ಇಲ್ಲ, ಹುಲ್ಲಂತೂ ಎಲ್ಲೂ ಹೋಗಿಲ್ಲ. ಮಧ್ಯಾಹ್ನದವರೆಗೆ ಎರಡಾಣೆ ಸಿಗುವಷ್ಟು ಕೊಯ್ಯಲ್ವ?”
ಅಷ್ಟರಲ್ಲಿ ವ್ಯಕ್ತಿಯೊಬ್ಬ ಬಾಗಿಲ ಬಳಿ ಬಂದು ಕರೆದ –“ಭಗತ್, ಮಲಗಿದೆಯಾ? ಸ್ವಲ್ಪ ಬಾಗಿಲು ತೆಗಿ.”
ಭಗತ ಎದ್ದು ಬಂದು ಬಾಗಿಲು ತೆರೆದ. ಆ ವ್ಯಕ್ತಿ ಒಳಗೆ ಬಂದು ಹೇಳಿದ –“ಡಾಕ್ಟರ್ ಚಡ್ಢಾ ಸಾಹೇಬ್ರ ಮಗನಿಗೆ ಹಾವು ಕಡಿದಿದೆಯಂತೆ, ಇದನ್ನು ಕೇಳಿದ್ಯಾ?”
ಭಗತ ಆಶ್ಚರ್ಯದಿಂದ ಹೇಳಿದ –“ಚಡ್ಢಾ ಸಾಹೇಬ್ರ ಮಗನಿಗೆ! ಬಂಗ್ಲೆಯಲ್ಲಿದ್ದಾರಲ್ಲ ಅದೇ ಚಡ್ಢಾ ಸಾಹೇಬ್ರು ತಾನೇ?”
ಹೌದೌದು, ಅವರೇ. ನಗರದಲ್ಲಿ ಕೋಲಾಹಲವುಂಟಾಗಿದೆ. ಹೋಗೋದಾದ್ರೆ ಹೋಗು, ನೀನೂ ಮನುಷ್ಯನಾಗ್ತೀಯ.”
ವೃದ್ಧ ಕಠೋರ ಭಾವನೆಯಿಂದ ತಲೆಯಾಡಿಸಿ ಹೇಳಿದ –“ನಾನು ಹೋಗಲ್ಲ! ಅದೇ ಚೆಡ್ಢಾ! ನನಗೆ ಚೆನ್ನಾಗಿ ಗೊತ್ತಿದೆ. ಮಗನನ್ನು ಕರ್ಕೊಂಡು ಅವರ ಬಳಿಗೇ ಹೋಗಿದ್ದೆ! ಅವರು ಆಡಲು ಹೋಗ್ತಿದ್ದರು. ಒಂದ್ಸಲ ನೋಡಿ


-6-

ಅಂತ ಅವರ ಕಾಲ್ಗೆ ಬಿದ್ದಿದ್ದೆ. ಆದರೆ ಅವರು ಸರಿಯಾಗಿ ಮಾತನಾಡಲೂ ಇಲ್ಲ. ದೇವರು ಕೂತು ಕೇಳ್ತಿದ್ದ. ಈಗ ಮಗನ ಅಗಲಿಕೆಯ ದುಃಖ ಎಂಥದ್ದು ಅನ್ನೋದು ತಿಳಿಯುತ್ತೆ. ಅವರಿಗೆ ತುಂಬಾ ಮಕ್ಕಳಿರಬೇಕು?”
“ಇಲ್ಲ, ಒಬ್ಬನೇ ಮಗನಿದ್ದ. ವಿಷ ಯಾವುದಕ್ಕೂ ಬಗ್ತಿಲ್ಲ ಅಂತ ಕೇಳಿದೆ.”
“ದೇವರು ದೊಡ್ಡವನು. ಅವನು ತುಂಬಾ ಚತುರ. ಆಗ ನನ್ನ ಕಣ್ಣುಗಳಲ್ಲಿ ಕಣ್ಣೀರು ಬಂದಿತ್ತು, ಆದ್ರೆ ಅವರಿಗೆ ಸ್ವಲ್ಪವೂ ಕನಿಕರ ಬಂದಿರಲಿಲ್ಲ. ನಾನು ಅವರ ಮನೆಯ ಬಾಗಿಲಿನಲ್ಲಿದ್ದರೂ, ಅವರ ಮಗನ ಆರೋಗ್ಯದ ಬಗ್ಗೆ ಕೇಳ್ತಿರಲಿಲ್ಲ.”
“ಹಾಗಾದ್ರೆ ನೀನು ಹೋಗಲ್ವ? ನಾನು ಕೇಳಿದ್ದನ್ನು ಹೇಳಿದೆ, ಅಷ್ಟೆ.”
“ಒಳ್ಳೇದು ಮಾಡಿದೆ. ಎದೆ ತಣ್ಣಗಾಯ್ತು. ಕಣ್ಣಿಗೆ ತಂಪಾಯ್ತು. ಮಗನೂ ತಣ್ಣಗಾಗಿರಬೇಕು! ನೀನು ಹೋಗು. ಇವತ್ತು ನೆಮ್ಮದಿಯಿಂದ ನಿದ್ರೆ ಮಾಡ್ತೀನಿ. [ವೃದ್ಧೆಗೆ] ಸ್ವಲ್ಪ ತಂಬಾಕು ತಗೋ! ಇನ್ನೊಂದು ಸಾರಿ ಚುಟ್ಟ-ದಮ್ ಎಳೀತೀನಿ. ಈಗ ಆ ಮಗನಿಗೆ ಗೊತ್ತಾಗುತ್ತೆ! ಅವನ ಅಧಿಕಾರವೆಲ್ಲಾ ಮಣ್ಣುಪಾಲಾಗುತ್ತೆ. ನಮಗೇನು ನಷ್ಟವಾಗಲಿಲ್ಲ, ಮಗ ಸತ್ತಿದ್ದರಿಂದ ನಮ್ಮದೇನೂ ನಾಶವಾಗಲಿಲ್ಲ? ಆರು ಮಕ್ಕಳು ಸತ್ತರು, ಅವರೊಂದಿಗೆ ಏಳನೆಯವನೂ ಸತ್ತ, ನಿನ್ನ ಮಡಿಲು ಬರಿದಾಯ್ತು. ಈಗೇನು ಮಾಡೋದು? ಒಂದ್ಸಲ ನೋಡಲು ಹೋಗ್ತೀನಿ, ಆದ್ರೆ ಕೆಲವು ದಿನಗಳಾದ ನಂತರ ಹೋಗ್ತೀನಿ. ಅವರ ಕ್ಷೇಮ-ಸಮಾಚಾರ ಕೇಳಲು ಹೋಗ್ತೀನಿ.”
ಆ ವ್ಯಕ್ತಿ ಹೊರಟು ಹೋದ. ಭಗತ್ ಬಾಗಿಲನ್ನು ಮುಚ್ಚಿದ, ನಂತರ ಚುಟ್ಟ ಸೇದಲಾರಂಭಿಸಿದ.
ವೃದ್ಧೆ ಹೇಳಿದಳು –“ಈ ಸರಿ ರಾತ್ರೀಲಿ, ಅದೂ ಚಳಿಯಲ್ಲಿ ಯಾರು ಹೋಗ್ತಾರೆ?”
“ನೋಡೆ, ಮಧ್ಯಾಹ್ನವಾಗಿದ್ರೂ ನಾನು ಹೋಗ್ತಿರಲಿಲ್ಲ. ಕರ್ಕೊಂಡ್ ಹೋಗೋದಕ್ಕೆ ವಾಹನವನ್ನು ಕಳ್ಸಿದ್ದರೂ ಹೋಗ್ತಿರಲಿಲ್ಲ. ನಾನು ಹಿಂದಿನದ್ದನ್ನು ಮರೆತಿಲ್ಲ. ಪನ್ನಾನ ಮುಖ ಇವತ್ತಿಗೂ ನನ್ನ ಕಣ್ಣೆದುರು ಸುಳಿಯುತ್ತಿದೆ. ಆ ನಿರ್ದಯಿ ಒಮ್ಮೆ ಸಹ ಮಗನ ಆರೋಗ್ಯವನ್ನು ಪರೀಕ್ಷಿಸಲಿಲ್ಲ. ಅವನು ಬದುಕಲ್ಲ ಅನ್ನೋದು ನನಗ್ಗೊತ್ತಿರಲಿಲ್ವ? ನನಗೆ ಚೆನ್ನಾಗಿ ಗೊತ್ತಿತ್ತು. ಚಡ್ಢಾ ದೇವರಾಗಿರಲಿಲ್ಲ, ಅವರು ಒಮ್ಮೆ ಮಗನ ಆರೋಗ್ಯವನ್ನು ಪರೀಕ್ಷಿಸಿದ್ದರೆ
ಅಮೃತ ಸುರೀತಿರಲಿಲ್ಲ. ಮನಸ್ಸಿನ ಸಮಾಧಾನಕ್ಕೆ ಹೋಗಿದ್ದೆ. ಸ್ವಲ್ಪ ನೆಮ್ಮದಿಯಾಗ್ತಿತ್ತು. ಅದಕ್ಕೇ ಅವರ ಹತ್ರ ಓಡಿ ಹೋಗಿದ್ದೆ. ಈಗ ಒಂದು ದಿನ ಹೋಗಿ ಹೇಳ್ತೀನಿ -“ಏನ್ ಸಾಹೇಬ್ರೆ, ಹೇಳಿ, ಹೇಗಿದ್ದೀರ? ಜಗತ್ತು ನಿಂದಿಸಲಿ, ಯೋಚ್ನೆಯಿಲ್ಲ. ಚಿಕ್ಕ ಮನುಷ್ಯರಲ್ಲಿ ಎಲ್ಲಾ ದೋಷಗಳಿರುತ್ತವೆ. ದೊಡ್ಡವರಲ್ಲಿ ದೋಷವಿರುವುದಿಲ್ಲ. ಅವರೆಲ್ಲಾ ದೇವರು.”
ಇಂಥ ಸುದ್ದಿ ಕೇಳಿ, ಸುಮ್ಮನೆ ಕೂತಿದ್ದು ಭಗತನ ಜೀವನದಲ್ಲಿ ಇದು ಮೊದಲ ಸಂಗತಿಯಾಗಿತ್ತು. ಅವನ ಎಂಬತ್ತು ವರ್ಷದ ಜೀವನದಲ್ಲಿ ಹಾವಿನ ಕಡಿತದ ಬಗ್ಗೆ ಕೇಳಿ, ಅವರ ಬಳಿಗೆ ಓಡಿ ಹೋಗದೆ ಕೂತದ್ದು ಸಹ ಮೊದಲ ಸಂಗತಿಯಾಗಿತ್ತು. ಮಾಘ-ಪುಷ್ಯದ ಅಂಧಕಾರದ ರಾತ್ರಿ, ಚೈತ್ರ-ವೈಶಾಖದ ಬಿಸಿಲು, ಶ್ರಾವಣ-ಭಾದ್ರಪದ ಮಾಸದಲ್ಲಿ ಉಕ್ಕಿ ಹರಿಯುವ ನದಿ-ನಾಲೆಗಳು ಯಾವುದನ್ನೂ ಅವನು ಲೆಕ್ಕಿಸಲಿಲ್ಲ. ನಿಸ್ವಾರ್ಥದಿಂದ, ನಿಷ್ಕಾಮದಿಂದ ಕೂಡಲೇ ಮನೆಯಿಂದ ಹೊರಟು ಬಿಡುತ್ತಿದ್ದ! ಲೇವಾದೇವಿಯ ವಿಷಯ ಮನಸ್ಸಿನಲ್ಲೆಂದೂ ಬರಲಿಲ್ಲ, ಇದು ಅಂಥ ಕೆಲಸವೂ ಆಗಿರಲಿಲ್ಲ. ಪ್ರಾಣಕ್ಕೆ ಬೆಲೆ ಕಟ್ಟುವವರು ಯಾರು? ಇದೊಂದು ಪುಣ್ಯದ ಕೆಲಸವಾಗಿತ್ತು. ನಿರಾಶೆಯ ನೂರಾರು ವ್ಯಕ್ತಿಗಳಿಗೆ ಅವನ ಮಂತ್ರಗಳು ಜೀವದಾನ ಮಾಡಿದ್ದವು; ಆದರೆ ಇಂದು ಅವನು ಮನೆಯಿಂದ ಹೊರಗೆ ಹೆಜ್ಜೆ ಹಾಕದಾದ. ಆ ಸುದ್ದಿ ಕೇಳಿಯೂ ನಿದ್ರಿಸಲು ಹೋಗುತ್ತಿದ್ದಾನೆ.
ವೃದ್ಧೆ ಹೇಳಿದಳು –“ತಂಬಾಕನ್ನು ಒಲೆಯ ಹತ್ರ ಇಟ್ಟಿದ್ದೇನೆ. ಇವತ್ತು ಅದಕ್ಕೆ ಎರಡೂವರೆ ಪೈಸೆಯಾಗಿದೆ. ಅವಳು ಕೊಡ್ತಲೇ ಇರ್ಲಿಲ್ಲ.”
ಹೀಗೆಂದು ವೃದ್ಧೆ ಮಲಗಿದಳು. ವೃದ್ಧ ಹಣತೆಯನ್ನು ಆರಿಸಿ, ಸ್ವಲ್ಪ ಹೊತ್ತು ನಿಂತ, ನಂತರ ಕೂತ. ಕಡೆಗೆ ಮಲಗಿದ; ಆದರೆ ಈ ಸುದ್ದಿ ಅವನ ಹೃದಯದ ಮೇಲೆ ಭಾರದಂತೆ ಇಡಲಾಗಿತ್ತು. ತನ್ನದೊಂದು ವಸ್ತು ಕಳೆದು ಹೋಗಿದೆ, ತನ್ನ ಬಟ್ಟೆಗಳು ಒದ್ದೆಯಾಗಿವೆ, ತನ್ನ ಕಾಲುಗಳಿಗೆ ಕೆಸರು ಮೆತ್ತಿದೆ ಎಂದು ಅವನಿಗೆ ಅನ್ನಿಸುತ್ತಿತ್ತು. ತನ್ನ ಮನಸ್ಸಿನಲ್ಲಿ ಯಾರೋ ಕೂತಿದ್ದು, ತನ್ನನ್ನು ಮನೆಯಿಂದ ಹೊರ ಹೋಗಲು ಸೂಚಿಸುತ್ತಿದ್ದಾನೆಂದು ಸಹ ಅನ್ನಿಸುತ್ತಿತ್ತು. ವೃದ್ಧೆ ಸ್ವಲ್ಪ ತಡವಾಗಿ ಗೊರಕೆ ಹೊಡೆಯಲಾರಂಭಿಸಿದಳು. ವೃದ್ಧರು ಮಾತನಾಡುತ್ತಾ ನಿದ್ರಿಸುತ್ತಾರೆ, ಸ್ವಲ್ಪ ಸದ್ದಾದರೂ ಎಚ್ಚರಗೊಳ್ಳುತ್ತಾರೆ. ಭಗತ ಎದ್ದು, ತನ್ನ ಕೋಲನ್ನೆತ್ತಿಕೊಂಡ; ನಂತರ ಮೆಲ್ಲನೆ ಬಾಗಿಲನ್ನು ತೆರೆದ.
ವೃದ್ಧೆ ಕೇಳಿದಳು –“ಎಲ್ಲಿಗೆ ಹೋಗ್ತಿದ್ದೀರ?”


-7-

“ಎಲ್ಲಿಗೂ ಇಲ್ಲ, ರಾತ್ರಿ ಎಷ್ಟಾಗಿದೆ ಅಂತ ನೋಡ್ತಿದ್ದೆ.”
“ಇನ್ನೂ ತುಂಬಾ ರಾತ್ರಿಯಿದೆ, ನಿದ್ರೆ ಮಾಡಿ.”
“ನಿದ್ರೆ ಬರಲ್ಲ.”
“ನಿದ್ರೆ ಏಕೆ ಬರುತ್ತೆ? ಮನಸ್ಸು ಚಡ್ಢಾರ ಮನೆಯ ಬಗ್ಗೆ ಯೋಚಿಸ್ತಿದೆಯಲ್ಲ!”
“ಅವರ ಮನೆಗೆ ಹೋಗಲು ಅವರು ಅಂಥ ಒಳ್ಳೆಯ ಕೆಲ್ಸ ಎಲ್ಲಿ ಮಾಡಿದರು? ಅವರು ಬಂದು ಕಾಲಿಗೆ ಬಿದ್ದರೂ ಹೋಗಲ್ಲ.”
“ಆದ್ರೆ ನೀವು ಎದ್ದದ್ದು ಅವರ ಮನೆಗೆ ಹೋಗುವುದಕ್ಕೇ!”
“ಇಲ್ಲ ಕಣೇ, ನನಗೆ ಅಪಕಾರ ಮಾಡಿದವರಿಗೆ ಉಪಕಾರ ಮಾಡ್ತಾ ಇರೋದಕ್ಕೆ ನಾನೇನು ಹುಚ್ಚನಲ್ಲ.”
ವೃದ್ಧೆ ಮತ್ತೆ ನಿದ್ರಿಸಿದಳು. ಭಗತ್ ಬಾಗಲು ಮುಚ್ಚಿ ಮತ್ತೆ ಬಂದು ಕೂತ. ಆದರೆ ಅವನ ಮನಃಸ್ಥಿತಿ, ವಾದ್ಯದ ಧ್ವನಿ ಕೇಳುತ್ತಲೇ ಉಪದೇಶ ಆಲಿಸುವ ವ್ಯಕ್ತಿಯಂತಿತ್ತು. ಕಣ್ಣುಗಳು ಉಪದೇಶ ಕೊಡುವವನ ಮೇಲೆ ನೆಟ್ಟಿದ್ದಾಗ್ಯೂ, ಆದರೆ ಕಿವಿ ವಾದ್ಯವನ್ನೇ ಆಲಿಸುತ್ತಿರುತ್ತದೆ. ಮನಸ್ಸಿನಲ್ಲೂ ವಾದ್ಯದ ಧ್ವನಿ ಪ್ರತಿಧ್ವನಿಸುತ್ತದೆ. ನಾಚಿಕೆಯಿಂದಾಗಿ ಆ ಜಾಗದಿಂದ ಏಳುವುದಿಲ್ಲ. ನಿರ್ದಯಿ ಪ್ರತಿಘಾತದ ಭಾವನೆ ಭಗತನಿಗೆ ಉಪದೇಶ ಮಾಡುತ್ತಿತ್ತು; ಆದರೆ ಮನಸ್ಸು ಈ ವೇಳೆಯಲ್ಲಿ ಸಾಯುತ್ತಿದ್ದ ಆ ದುರದೃಷ್ಟ ಯುವಕನನ್ನೇ ನೆನೆಯುತ್ತಿತ್ತು; ಒಂದೊಂದು ಕ್ಷಣ ವ್ಯರ್ಥ ಮಾಡುವುದು ಸಹ ಘಾತಕಕಾರಿಯಾಗಿತ್ತು.
ವೃದ್ಧ ಮತ್ತೆ ವೃದ್ಧೆಗೆ ಎಚ್ಚರವಾಗದಂತೆ ಮೆಲ್ಲನೆ ಬಾಗಿಲು ತೆರೆದು ಹೊರ ಬಂದ. ಅದೇ ವೇಳೆಗೆ ಹಳ್ಳಿಯ ಚೌಕೀದಾರ ಗಸ್ತು ತಿರುಗುತ್ತಿದ್ದು ಕೇಳಿದ –‘ಭಗತ್, ಏಕೆ ಎದ್ದಿರಿ? ಇವತ್ತು ತುಂಬಾ ಚಳಿಯಿದೆ! ಎಲ್ಲಿಗಾದ್ರು ಹೋಗ್ತಿದ್ದೀರ?”
ಭಗತ್ –“ಇಲ್ಲ, ಎಲ್ಲಿಗೆ ಹೋಗ್ಲಿ! ರಾತ್ರಿ ಎಷ್ಟಾಗಿದೆ ಅಂತ ನೋಡ್ತಿದ್ದೆ, ಈಗ ಎಷ್ಟು ಗಂಟೆಯಾಗಿರಬಹುದು?”
ಚೌಕೀದಾರ –“ಒಂದು ಗಂಟೆಯಾಗಿರಬಹುದು, ಈಗ ತಾನೇ ಸ್ಟೇಷನ್‍ನಿಂದ ಬರ್ತಿದ್ದೆ, ಡಾಕ್ಟರ್ ಚಡ್ಢಾ ಬಾಬೂರ ಬಂಗ್ಲೆಯ ಬಳಿ ದೊಡ್ಡ ಗುಂಪು ಸೇರಿತ್ತು. ಅವರ ಮಗನ ಪರಿಸ್ಥಿತಿ ನಿಮಗೆ ಗೊತ್ತಾಗಿರ್ಬೇಕು, ಹಾವು ಕಚ್ಚಿದೆಯಂತೆ. ಇಷ್ಟು ಹೊತ್ತಿಗೆ ಸತ್ತಿರಲೂ ಬಹುದು, ನೀವು ಹೋದ್ರೆ, ಉಪಯೋಗವಾಗಬಹುದು. ಹತ್ತು ಸಾವಿರ ರೂಪಾಯಿಗಳನ್ನು ಕೊಡಲು ಸಿದ್ಧರಿದ್ದಾರೆಂದು ಕೇಳಿದೆ.”
ಭಗತ್ –“ಅವರು ಹತ್ತು ಲಕ್ಷ ಕೊಟ್ರೂ ನಾನು ಹೋಗಲ್ಲ. ನಾನು ಹತ್ತು ಸಾವಿರ ಅಥವಾ ಒಂದು ಲಕ್ಷ ತಗೊಂಡು ಏನ್ ಮಾಡಬೇಕಿದೆ? ನಾಳೆ ನಾನು ಸತ್ರೆ, ಅದನ್ನು ಅನುಭವಿಸಲು ಯಾರಿದ್ದಾರೆ?”
ಚೌಕೀದಾರ ಹೊರಟು ಹೋದ. ಭಗತ್ ಮುಂದುವರೆದ. ಅಮಲಿಗೊಳಗಾದ ವ್ಯಕ್ತಿಯ ಶರೀರ ಹಿಡಿತದಲ್ಲಿರುವುದಿಲ್ಲ, ಕಾಲನ್ನು ಒಂದು ಜಾಗದಲ್ಲಿಟ್ಟರೆ, ಅದು ಬೇರೆ ಕಡೆಗೆ ಹೋಗುತ್ತದೆ, ಅವನು ಹೇಳುವುದೊಂದು, ಮಾಡುವುದೊಂದು; ಇದು ಭಗತನ ಪರಿಸ್ಥಿತಿ ಸಹ ಆಗಿತ್ತು. ಅವನ ಮನಸ್ಸಿನಲ್ಲಿ ಸೇಡಿನ ಭಾವನೆಯಿತ್ತು, ಜಂಭವಿತ್ತು, ಆದರೆ ಕರ್ಮ ಮನಸ್ಸಿನ ಅಧೀನದಲ್ಲಿರಲಿಲ್ಲ. ಕತ್ತಿಯನ್ನು ಪ್ರಯೋಗಿಸದವನು, ಬಯಸಿದರೂ ಕತ್ತಿಯನ್ನು ಪ್ರಯೋಗಿಸಲಾರ; ಅವನ ಕೈಗಳು ಕಂಪಿಸುತ್ತವೆ, ಮೇಲೇಳುವುದೇ ಇಲ್ಲ.
ಭಗತ ಕೋಲೂರುತ್ತಾ ಹೋಗುತ್ತಿದ್ದ. ಅವನ ಪ್ರಜ್ಞೆ ತಡೆಯುತ್ತಿತ್ತು, ಆದರೆ ಅರೆ-ಪ್ರಜ್ಞೆ ತಳ್ಳುತ್ತಿತ್ತು. ಸೇವಕ ಮಾಲೀಕನ ಮೇಲೆ ಸವಾರಿ ಮಾಡಿದ್ದ.
ಅರ್ಧ ಹಾದಿ ಸಾಗಿದ ನಂತರ ಭಗತ್ ಇದ್ದಕ್ಕಿದ್ದಂತೆ ನಿಂತ. ಹಿಂಸೆ ಕ್ರಿಯೆಯ ಮೇಲೆ ವಿಜಯ ಸಾಧಿಸಿತು –“ನಾನು ಸುಮ್ಮನೆ ಇಷ್ಟು ದೂರ ಬಂದೆ. ಈ ಚಳಿಯಲ್ಲಿ ಸಾಯಲು ನನಗೇನಾಗಿತ್ತು? ನೆಮ್ಮದಿಯಿಂದ ಏಕೆ ನಿದ್ರಿಸಲಿಲ್ಲ? ನಿದ್ರೆ ಬರದಿದ್ದರೂ, ಚಿಂತೆ ಇರಲಿಲ್ಲ. ಒಂದೆರಡು ಭಜನೆಯನ್ನು ಹಾಡುತ್ತಿದ್ದೆ. ವ್ಯರ್ಥವಾಗಿ ಇಷ್ಟು ದೂರ ಬಂದೆ. ಚಡ್ಢಾರ ಮಗ ಬದುಕಿದರೇನು, ಸತ್ತರೇನು! ಅವರಿಗಾಗಿ ಸಾಯುವಂಥದ್ದೇನು ಮಾಡಿದ್ದಾರೆ? ಜಗತ್ತಿನಲ್ಲಿ ಸಾವಿರಾರು ಜನ ಸಾಯ್ತಾರೆ, ಸಾವಿರಾರು ಜನ ಬದುಕ್ತಾರೆ. ಯಾರು ಸತ್ತರೇನು, ಯಾರು ಬದುಕಿದರೇನು, ಇದರಿಂದ ನನಗೇನಾಗಬೇಕಿದೆ!”
ಆದರೆ ಅರೆ-ಪ್ರಜ್ಞೆ ಈಗ ಇನ್ನೊಂದು ರೂಪವನ್ನು ಧರಿಸಿತು, ಈ ರೂಪ ಹಿಂಸೆಯೊಂದಿಗೆ ಕಲೆಯುತ್ತಿತ್ತು. ನಾನು ಮಂತ್ರ ಹೇಳಲು ಹೋಗುತ್ತಿಲ್ಲ; ಜನ ಏನು ಮಾಡುತ್ತಿದ್ದಾರೆಂದು ನೊಡಲು ಹೋಗುತ್ತಿದ್ದೇನೆ. ಡಾಕ್ಟರ್ ಸಾಹೇಬರು ಹೇಗೆ ಅಳುತ್ತಾರೆ, ಹೇಗೆ ಶೋಕಿಸುತ್ತಾರೆ ಎಂಬುದನ್ನು ನೋಡಲು ಹೋಗುತ್ತಿದ್ದೇನೆ. ದೊಡ್ಡವರು ಸಹ

-8-

ಚಿಕ್ಕವರಂತೆ ಅಂದರೆ ಶ್ರೀಮಂತರು ಸಹ ಬಡವರಂತೆ ರೋದಿಸುತ್ತಾರೋ ಅಥವಾ ಧೈರ್ಯದಿಂದಿರುತ್ತಾರೋ ಎಂಬುದನ್ನು ನೋಡಲು ಹೋಗುತ್ತಿದ್ದೇನೆ. ಅವರೆಲ್ಲರೂ ವಿದ್ವಾಂಸರಿರಬೇಕು, ಧೈರ್ಯ ತೋರುತ್ತಾರೆ. ಭಗತ ಹೀಗೆ ಹಿಂಸೆಯ ಭಾವನೆಗೆ ಧೈರ್ಯವನ್ನು ಕೊಡುತ್ತಾ ಮುಂದುವರೆದ.
ಅಷ್ಟರಲ್ಲಿ ಇಬ್ಬರು ವ್ಯಕ್ತಿಗಳು ಬರುವುದು ಕಂಡಿತು. ಇಬ್ಬರೂ ಮಾತನಾಡುತ್ತಾ ಬರುತ್ತಿದ್ದರು-
“ಚಡ್ಢಾ ಬಾಬೂರವರ ಮನೆ ನಾಶವಾಯಿತು. ಅವನೊಬ್ಬನೇ ಮಗನಾಗಿದ್ದ.”
ಭಗತನ ಕಿವಿಗೆ ಈ ಮಾತು ಬಿತ್ತು. ಅವನ ನಡಿಗೆ ಇನ್ನಷ್ಟು ತೀವ್ರವಾಯಿತು. ದಣಿವಿನಿಂದಾಗಿ ಮುಂದಕ್ಕೆ ಹೆಜ್ಜೆಯಿಡಲು ಸಾಧ್ಯವಾಗುತ್ತಿರಲಿಲ್ಲ. ತಾನು ಇನ್ನೇನು ಕವುಚಿ ಬೀಳುತ್ತೇನೆಂದು ಅನ್ನಿಸುತ್ತಿತ್ತು. ಹೀಗೆ ಅವನು ಸುಮಾರು ಹತ್ತು ನಿಮಿಷಗಳು ಹೋಗಿರಬಹುದು, ಆಗಲೇ ಡಾಕ್ಟರ್ ಸಾಹೇಬರ ಬಂಗ್ಲೆ ಕಂಡಿತು. ವಿದ್ಯುತ್-ಬಲ್ಬ್‍ಗಳು ಉರಿಯುತ್ತಿದ್ದವು, ಆದರೆ ನಿಶ್ಶಬ್ದತೆ ಕವಿದಿತ್ತು. ರೋದಿಸುವ ಧ್ವನಿಯೂ ಕೇಳಿಸುತ್ತಿರಲಿಲ್ಲ. ಭಗತನ ಎದೆ ಬಡಿದುಕೊಂಡಿತು. ನಾನು ತಡಮಾಡಿದೆನೇ? ಎಂದು ಯೋಚಿಸಿ ಓಡಿದ. ತನ್ನ ಈ ವಯಸ್ಸಿನಲ್ಲಿ ಅವನೆಂದೂ ಹೀಗೆ ಓಡಿರಲಿಲ್ಲ. ತನ್ನ ಹಿಂದೆ ಸಾವು ಹಿಂಬಾಲಿಸಿ ಬರುತ್ತಿದೆ ಎಂದು ಅವನಿಗೆ ಅನ್ನಿಸುತ್ತಿತ್ತು.

-4-

ಎರಡು ಗಂಟೆಯಾಗಿತ್ತು. ಅತಿಥಿಗಳು ಹೊರಟು ಹೋಗಿದ್ದರು. ರೋದಿಸುವವರಲ್ಲಿ ಆಕಾಶದ ನಕ್ಷತ್ರಗಳು ಮಾತ್ರ ಉಳಿದಿದ್ದವು. ಎಲ್ಲರೂ ಅತ್ತೂ-ಅತ್ತೂ ದಣಿದಿದ್ದರು. ಜನ ತುಂಬಾ ಉತ್ಸುಕತೆಯಿಂದ, ಶೀಘ್ರ ಬೆಳಗಾಗಲಿ, ಶವವನ್ನು ಗಂಗೆಯ ಮಡಿಲಿಗೆ ಒಯ್ಯಲೆಂದು ಆಕಾಶವನ್ನೇ ನೋಡುತ್ತಿದ್ದರು.
ಇದ್ದಕ್ಕಿದ್ದಂತೆ ಭಗತ್ ಬಾಗಿಲ ಬಳಿಗೆ ಹೋಗಿ ಕರೆದ. ರೋಗಿಯೊಬ್ಬ ಬಂದಿರಬೇಕೆಂದು ವೈದ್ಯರು ತಿಳಿದರು. ಅವರು ಬೇರೆ ದಿನವಾಗಿದ್ದರೆ, ಅವನನ್ನು ಗದರಿಸುತ್ತಿದ್ದರು, ಆದರೆ ಇಂದು ಅವರು ಹೊರಗೆ ಬಂದರು. ಎದುರಿಗೆ ಒಬ್ಬ ವೃದ್ಧ ನಿಂತಿರುವುದನ್ನು ನೋಡಿದರು; ವೃದ್ಧನ ಸೊಂಟ ಬಾಗಿತ್ತು, ಬೊಚ್ಚು ಬಾಯಿಯ ವೃದ್ಧನ ಹುಬ್ಬುಗಳು ಸಹ ಬೆಳ್ಳಗಾಗಿದ್ದವು. ಅವನು ಕೋಲು ಹಿಡಿದು ಕಂಪಿಸುತ್ತಿದ್ದ.
ವೈದ್ಯರು ತುಂಬಾ ವಿನಯದಿಂದ ಹೇಳಿದರು –“ಏನಪ್ಪಾ, ಇವತ್ತು ನಾನು ತುಂಬಾ ಕಷ್ಟದಲ್ಲಿದ್ದೇನೆ, ಅದನ್ನು ಹೇಳಲು ಸಾಧ್ಯವಿಲ್ಲ, ಮತ್ತೊಂದು ದಿನ ಬಾ. ನಾನು ಸುಮಾರು ಒಂದು ತಿಂಗಳವರೆಗೆ ಬಹುಶಃ ರೋಗಿಗಳನ್ನು ನೋಡಲಾರೆ.”
ಭಗತ್ ಹೇಳಿದ –“ಬಾಬೂಜಿ, ವಿಷಯ ಕೇಳಿದೆ, ಅದಕ್ಕೇ ಬಂದೆ. ಭೈಯ್ಯಾಜಿ ಎಲ್ಲಿದ್ದಾರೆ? ಸ್ವಲ್ಪ ನನಗೆ ತೋರ್ಸಿ. ದೇವರು ತುಂಬಾ ಚತುರ, ಹೆಣವನ್ನೂ ಬದುಕಿಸಬಲ್ಲ. ಯಾರಿಗ್ಗೊತ್ತು, ಈಗಲೂ ಅವನಿಗೆ ದಯೆ ಬರಬಹುದು.”
ಚಡ್ಢಾ ದುಃಖದಿಂದ ಹೇಳಿದರು –“ನಡಿಯಪ್ಪಾ, ನೋಡು; ಆದರೆ ಮೂರ್ನಾಲ್ಕು ಗಂಟೆಗಳಾದವು. ಆಗಬೇಕಾದದ್ದು ಆಗಿದೆ. ಅನೇಕ ಮಂತ್ರವಾದಿಗಳು ಸಹ ನೋಡಿಕೊಂಡು ಹೋದರು.”
ಡಾಕ್ಟರ್ ಸಾಹೇಬರು ಆಸೆಯನ್ನು ಬಿಟ್ಟಿದ್ದರು, ಆದರೆ ವೃದ್ಧನ ಬಗ್ಗೆ ಕನಿಕರ ಮೂಡಿತು. ಅವರು ವೃದ್ಧನನ್ನು ಒಳಗೆ ಕರೆದೊಯ್ದರು. ಭಗತ್ ಶವವನ್ನು ಒಂದು ನಿಮಿಷ ನೋಡಿದ. ನಂತರ ಮುಗುಳ್ನಕ್ಕು ಹೇಳಿದ –“ಬಾಬೂಜಿ, ಇನ್ನೂ ಸಮಯವಿದೆ! ಆ ದೇವರು ಬಯಸಿದರೆ, ಅರ್ಧ ಗಂಟೆಯಲ್ಲಿ ಭೈಯ್ಯಾರವರು ಎದ್ದು ಕೂರ್ತಾರೆ. ನೀವು ವ್ಯರ್ಥವಾಗಿ ದುಃಖಿಸುತ್ತಿದ್ದೀರ. ಪಲ್ಲಕ್ಕಿ ಹೊರುವವರಿಗೆ ಹೇಳಿ ನೀರು ತುಂಬ್ಸಿ.”
ಪಲ್ಲಕ್ಕಿ ಹೊರುವವರು ನೀರು ತುಂಬಿ-ತುಂಬಿ ಕೈಲಾಶನಿಗೆ ಸ್ನಾನು ಮಾಡಲಾರಂಭಸಿದರು. ಪೈಪ್ ಮುಚ್ಚಿ ಹೋಗಿತ್ತು. ನೀರು ಹೊರುವವರ ಸಂಖ್ಯೆ ಹೆಚ್ಚಿರಲಿಲ್ಲ, ಹೀಗಾಗಿ ಅತಿಥಿಗಳು ಕಾಂಪೌಂಡಿನ ಹೊರಗಿದ್ದ ಬಾವಿಯಿಂದ ನೀರು ಸೇದಿ-ಸೇದಿ ಕೊಟ್ಟರು. ಮೃಣಾಲಿನಿ ಕೊಡ ಹಿಡಿದು ನೀರು ತರುತ್ತಿದ್ದಳು. ವೃದ್ಧ ಭಗತ್ ನಿಂತು ಮುಗುಳ್ನಗುತ್ತಾ ಮಂತ್ರ ಪಠಿಸುತ್ತಿದ್ದ; ಗೆಲುವು ಅವನೆದುರು ನಿಂತಂತಿತ್ತು. ಒಂದು ಬಾರಿ ಮಂತ್ರ ಮುಗಿದಾಗ, ಒಂದು ಬೇರನ್ನು ಕೈಲಾಶನ ಮೂಗಿನ ಬಳಿ ಹಿಡಿದು ಮೂಸಿಸುತ್ತಿದ್ದ. ಹೀಗೆ ಅದೆಷ್ಟೋ ಕೊಡಗಳ ನೀರನ್ನು ಕೈಲಾಶನ ತಲೆಯ ಮೇಲೆ ಸುರಿಯಲಾಯಿತು; ಭಗತ್ ಸಹ ಅದೆಷ್ಟೋ ಬಾರಿ ಮಂತ್ರವನ್ನು ಪಠಿಸಿದ. ಕಡೆಗೆ ಉಷೆ ತನ್ನ ಕೆಂಪು ಕಣ್ಣುಗಳನ್ನು ತೆರೆದಾಗ, ಕೈಲಾಶನ ಕೆಂಪು ಕಣ್ಣುಗಳು ಸಹ ತೆರೆದವು. ಅವನು ಒಂದು ಕ್ಷಣ ಮೈಮುರಿದು, ಕುಡಿಯಲು ನೀರನ್ನು ಯಾಚಿಸಿದ. ಡಾಕ್ಟರ್ ಚಡ್ಢಾ ಓಡಿ ಬಂದು ನಾರಾಯಣಿಯನ್ನು


-9-

ಅಪ್ಪಿಕೊಂಡರು. ನಾರಾಯಣಿ ಓಡಿ ಬಂದು ಭಗತನ ಕಾಲುಗಳಿಗೆ ಬಿದ್ದಳು. ಮೃಣಾಲಿನಿ ಕೈಲಾಶನೆದುರು ರೋದಿಸುತ್ತಾ ಕೇಳಿದಳು –“ಈಗ ಆರೋಗ್ಯ ಹೇಗಿದೆ?”
ಒಂದೇ ಕ್ಷಣದಲ್ಲಿ ನಾಲ್ಕೂ ಕಡೆಗಳಿಗೆ ಸುದ್ದಿ ಹಬ್ಬಿತು. ಮಿತ್ರರು ಅಭಿನಂದಿಸಲು ಬರಲಾರಂಭಿಸಿದರು. ಡಾಕ್ಟರ್ ಚಡ್ಢಾ ತುಂಬು ಶ್ರದ್ಧೆಯಿಂದ ಪ್ರತಿಯೊಬ್ಬರೆದುರು ಭಗತನನ್ನು ಪ್ರಶಂಸಿಸುತ್ತಿದ್ದರು. ಎಲ್ಲರೂ ಭಗತನನ್ನು ನೋಡಲು ಉತ್ಸುಕರಾದರು, ಆದರೆ ಒಳಗೆ ಬಂದು ನೋಡಿದಾಗ, ಭಗತ್ ಕಾಣ ಬರಲಿಲ್ಲ. ನೌಕರರು ಹೇಳಿದರು –“ಇದೀಗ ತಾನೇ ಇಲ್ಲಿ ಕೂತು ಚುಟ್ಟ ಸೇದ್ತಿದ್ದರು. ನಾವು ತಂಬಾಕನ್ನು ಕೊಡಲು ಹೋದಾಗ, ತೆಗೆದುಕೊಳ್ಳಲಿಲ್ಲ; ತಮ್ಮಲ್ಲಿಂದ ತಂಬಾಕುವನ್ನೇ ತುಂಬಿ ಕೊಂಡರು.” ಈಗ ಭಗತನಿಗಾಗಿ ಹುಡುಕಾಟ ಆರಂಭವಾಯಿತು; ಭಗತ್ ಓಡೋಡಿ ಮನೆಗೆ ಹೋಗುತ್ತಿದ್ದ; ವೃದ್ಧೆ ಎಚ್ಚರಗೊಳ್ಳುವುದಕ್ಕೂ ಮೊದಲೇ ಅವನು ಮನೆ ಸೇರಬೇಕಿತ್ತು!
ಅತಿಥಿಗಳು ಹೋದ ನಂತರ ಡಾಕ್ಟರ್ ಸಾಹೇಬರು ನಾರಾಯಣಿಗೆ ಹೇಳಿದರು –“ಮುದುಕ ಎಲ್ಲಿಗೆ ಹೋದ್ನೋ? ಒಂದು ಚುಟ್ಟ ತಂಬಾಕಿಗೂ ಸಹ ಋಣಿಯಾಗಲಿಲ್ಲ.”
ನಾರಾಯಣಿ –“ನಾನು ಅವನಿಗೆ ದೊಡ್ಡ ಮೊತ್ತದ ಹಣವನ್ನು ಕೊಡಬೇಕೆಂದು ಯೋಚಿಸಿದ್ದೆ.”
ಚಡ್ಢಾ –“ರಾತ್ರಿ ವೇಳೆಯಲ್ಲಿ ಅವನನ್ನು ನಾನು ಗುರುತಿಸಲಿಲ್ಲ, ಆದ್ರೆ ಸ್ವಲ್ಪ ಬೆಳಕಾದ ನಂತರ ಗುರುತಿಸಿದೆ. ನನಗೀಗ ನೆನಪಾಗ್ತಿದೆ, ಈ ಹಿಂದೆ ಅವನು ಒಬ್ಬ ರೋಗಿಯನ್ನು ಕರೆತಂದಿದ್ದ. ನಾನಾಗ ಆಟವಾಡಲು ಹೋಗುತ್ತಿದ್ದೆ, ರೋಗಿಯನ್ನು ನೋಡಲು ತಿರಸ್ಕರಿಸಿದ್ದೆ. ಇವತ್ತು ಆ ಘಟನೆಯನ್ನು ನೆನಪಿಸಿಕೊಂಡು ನನಗೆ ತುಂಬಾ ದುಃಖವಾಗ್ತಿದೆ, ನನ್ನ ದುಃಖವನ್ನು ವ್ಯಕ್ತ ಪಡಿಸಲಾರೆ. ನಾನವನನ್ನು ಹುಡುಕ್ತೇನೆ, ಅವನ ಕಾಲುಗಳಿಗೆ ಬಿದ್ದು ನನ್ನ ಅಪರಾಧವನ್ನು ಕ್ಷಮಿಸಿಕೊಳ್ತೇನೆ. ಅವನೇನೂ ತೆಗೆದುಕೊಳ್ಳಲ್ಲ ಎಂಬುದು ನನಗೆ ಗೊತ್ತಿದೆ, ಅವನು ಯಶಸ್ಸಿನ ಮಳೆಗೆರೆಯಲೋಸುಗ ಜನಿಸಿದ್ದಾನೆ. ಅವನ ಸೌಜನ್ಯ, ಇನ್ನು ನನ್ನ ಜೀವನ-ಪರ್ಯಂತ, ನನಗೆ ಆದರ್ಶವಾಗಿರುತ್ತದೆ.”
ಮೂಲ: ಪ್ರೇಮಚಂದ್
ಕನ್ನಡಕ್ಕೆ: ಡಿ.ಎನ್. ಶ್ರೀನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT