ಶನಿವಾರ, ಜೂನ್ 19, 2021
27 °C

ಬಾಡಿಗೆ

ಸೋಮಶೇಖರ ಎಸ್. ಹಿರೇಮಠ Updated:

ಅಕ್ಷರ ಗಾತ್ರ : | |

Prajavani

(ನಿನಗೆ ಬೇರೆ ಹೆಸರು ಬೇಕೇ? ಸ್ತ್ರೀ ಅಂದರೆ ಅಷ್ಟೇ ಸಾಕೆ? - ಜಿ. ಎಸ್. ಶಿವರುದ್ರಪ್ಪ)

‘ರೇಣುಕಾ ಹೇಂಗಿದ್ದಾಳೇ? ಈಗ ಐದು ಮುಗಿದು ಆರನೇ ತಿಂಗಳು ಶುರು ಆಯ್ತಲ್ವೆ? ಇಷ್ಟೊತ್ತೀಗಾಗ್ಲೆ ಗರ್ಭದಲ್ಲಿ ಶಿಶು ಮಿಸುಕಾಡೋಕೆ ಆರಂಭವಾಗಿರಬೇಕು, ಸಮಯಕ್ಕೆ ಸರಿಯಾಗಿ ಊಟ-ತಿಂಡಿ ತಿಂತಾಳಾ? ಟಾನಿಕ್ಕು-ಔಷಧಿ ಎಲ್ಲ ಸರಿಯಾಗಿ ತಗೋ ಅಂತ ಹೇಳು ಅವ್ಳಿಗೆ.’ ಫೋನಿನಲ್ಲಿ ಮಗಳು ಹೀಗೆ ಒಂದೇ ಸಮನೇ ವಟಗುಟ್ಟುತ್ತಾ ಇರೋದು ಶಾರದಮ್ಮನಿಗೆ ತೆಲೆಬಿಸಿ ಉಂಟು ಮಾಡಿತು.

‘ಅಯ್ಯೋ ಮಹರಾಯ್ತಿ! ಕೊಂಚ ನನಗೂ ಮಾತಾಡೋಕೆ ಅವಕಾಶ ಕೊಡು. ಹಾಂ! ರೇಣುಕಾ ಆರಾಮಾಗಿದ್ದಾಳೆ. ಮಗು ಈಗಾಗಲೇ ಗರ್ಭದಲ್ಲಿ ಮಿಸುಕಾಡಲು ಶುರುವಾಗಿದೆ. ನಾನೂ ಡಾಕ್ಟ್ರೇ ಅಲ್ವಾ? ಅವಳಿಗೆ ಕಾಲ-ಕಾಲಕ್ಕೆ ಊಟ- ಔಷಧಿ ಅಂತೆಲ್ಲ ನಾನೇ ಎಲ್ಲಾನೂ ನೋಡ್ಕೋತೀನಿ. ನೀನೇನೂ ಚಿಂತೆ ಮಾಡ್ಬೇಡ’ ಎಂದು ಉತ್ತರಿಸಿದರು.

ಅದಕ್ಕೆ ಶಾರದಮ್ಮನ ಮಗಳು ಸುಧಾ ‘ನಂಗೊತ್ತಮ್ಮಾ ನೀನೋ ಡಾಕ್ಟ್ರು ಅನ್ನೋದು. ನಾನೂ ನಿನ್ನ ಮಗಳು ಮಾತ್ರ ಅಲ್ಲ, ಹೆಸರಾಂತ ಪ್ರಸೂತಿ ತಜ್ಞೆ ಅನ್ನೋದು ನಿನಗೂ ನೆನಪಿರಲಿ. ಅದೂ ಅಲ್ದೇ ಇಲ್ಲಿ ನನ್ನ ಗೆಳತಿ ಆರತಿ ‘ನನ್ನ ಮಗು ಹೇಗಿದೆ’ ನನ್ನ ಜೀವ ತಿಂತಿರೋ ಹೊತ್ಗೆ ನಾನು ನಿನಗೆ ಹೀಗೆ ಫೋನ್ ಮಾಡಿ ಪದೇ-ಪದೇ ಕೇಳಬೇಕಾಗಿದೆ. ಆಯ್ತು! ರೇಣುಕಾಳನ್ನ ಹುಷಾರಾಗಿ ನೋಡ್ಕೋ. ಬೈ’ ಎಂದು ಕರೆ ತುಂಡರಿಸಿದಳು.

 ಶಾರದಮ್ಮ ಮಗಳ ಧಾವಂತಕ್ಕೆ ಬೇಸರಪಡುತ್ತಾ ‘ಹುಚ್ಚು ಹುಡುಗಿ! ಯಾವಾಗ್ಲೂ ಹೀಗೆ ತಾನಂದುಕೊಂಡದ್ದೇ ನಡೀಬೇಕು ಅನ್ನೋ ಜಿದ್ದು ಇವ್ಳಿಗೆ’ ಎಂದುಕೊಳ್ಳುತ್ತಾ ಮರುಕ್ಷಣ ರೇಣುಕಾ ಇತ್ತೀಚೆಗೆ ಒಂದು ಥರ ಮಂಕಾಗಿರುವುದನ್ನು ಮಗಳಿಗೆ ಹೇಳಬೇಕಿತ್ತೇನೋ ಎಂದು ಯೋಚಿಸತೊಡಗಿದರು.

ಸುಧಾಳಿಗೆ ಈ ವಿಷಯ ಈಗಲೇ ಹೇಳೋದು ಬೇಡ ನಾನೇ ರೇಣುಕಾ ಹತ್ರ ಮಾತಾಡಿ ತಿಳಿಯೋ ಪ್ರಯತ್ನ ಮಾಡಿ ನೋಡ್ಬೇಕು ಎಂದು ನಿರ್ಧರಿಸಿ ಶಾರದಮ್ಮ ಸ್ವಲ್ಪ ನಿರಾಳವಾದರು. ಹಾಗೇ ಯೋಚಿಸುತ್ತಲೇ ಶಾರದಮ್ಮ ನೆನಪಿನ ಅಂಗಳಕ್ಕೆ ಜಾರಿದರು.
***

ಈಗೊಂದು ಏಳೆಂಟು ತಿಂಗಳುಗಳ ಹಿಂದೆ ಮಗಳು ಸುಧಾ ಇಂಥದೊಂದು ಪ್ರಸ್ತಾಪ ತಂದಾಗ ಶಾರದಮ್ಮ ನಿಜಕ್ಕೂ ಹೆದರಿದ್ದರು. ತನ್ನ ಗೆಳತಿ ಆರತಿ ಅಕಸ್ಮಾತ್ತಾಗಿ ಸಿಕ್ಕಾಗ ಗೊತ್ತಾಗಿದ್ದು ಮದುವೆಯಾಗಿ ಹದಿನೈದು ವರ್ಷವಾದರೂ ಇನ್ನೂ ಮಕ್ಕಳಾಗದೇ ಇರುವುದು, ಆರತಿ ಮತ್ತು ಅವಳ ಗಂಡನನ್ನು ಪರೀಕ್ಷೆಗೊಳಪಡಿಸಿದಾಗ ಇಬ್ಬರೂ ಆರೋಗ್ಯವಾಗಿದ್ದು, ಆರತಿ ಶಿಶು ಹೊರುವಷ್ಟು ಅವಳ ಗರ್ಭ ಶಕ್ತವಾಗಿಲ್ಲದಿರುವುದು ಗೊತ್ತಾಗಿ, ಆಕೆಗೊಬ್ಬ ಬಾಡಿಗೆ-ತಾಯಿ ಸಿಕ್ಕರೆ ‘ಆರತಿಯ ಅಂಡಾಣು ಮತ್ತು ಆಕೆಯ ಗಂಡ ಮುಕೇಶ ವೀರ್ಯ’ ಇವೆರಡನ್ನೂ ಲ್ಯಾಬ್‌ನಲ್ಲಿ ಗರ್ಭ ಕಟ್ಟುವಂತೆ ಮಾಡಿ, ನಂತರ ಆ ಭ್ರೂಣವನ್ನು ಬಾಡಿಗೆ ತಾಯಿಯೊಬ್ಬಳ ಗರ್ಭದಲ್ಲಿ ಸೇರಿಸಿ, ಅವಳಿಗೆ ಹೆರಿಗೆಯಾದ ನಂತರ ಆರತಿ-ಮುಕೇಶ ದಂಪತಿಗೆ ಆ ನವಜಾತ ಶಿಶುವನ್ನು ಹಸ್ತಾಂತರಿಸುವ ಯೋಜನೆ ಅದಾಗಿತ್ತು.

ಇದನ್ನೆಲ್ಲ ಕೇಳುತ್ತಿದ್ದಂತೆ ಶಾರದಮ್ಮನಿಗೆ ತಾವು ಸ್ವತಃ ಡಾಕ್ಟ್ರರಾಗಿದ್ದರೂ ಇದು ಯಾವುದೋ ಕೇಡಿನ ಮುನ್ಸೂಚನೆ ಅನ್ನಿಸಿತು ಮತ್ತು ಹಾಗಂತ ಮಗಳಿಗೆ ಹೇಳಿಯೂ ಬಿಟ್ಟರು. ಆದರೆ ಮಗಳು ಸುಧಾ ‘ನೀನೇನಮ್ಮಾ! ಅಡಗೊಲಜ್ಜಿ ಥರ ಮಾತಾಡ್ತೀಯಾ? ನೀನು ಕೇಳಿಲ್ವಾ- ಈಗ ಬಹಳಷ್ಟು ಮದುವೆಯಾಗದೇ ಇರೋ ಸೆಲೆಬ್ರೆಟಿಗಳೂ ಕೂಡ ಈ ಬಾಡಿಗೆ ತಾಯಿ ಸವಲತ್ತು ಉಪಯೋಗಿಸಿಕೊಂಡೇ ಮಕ್ಕಳನ್ನ ಪಡೀತಾ ಇದ್ದಾರೆ. ಮದುವೆಯಾಗಿ ಎಷ್ಟೋ ವರ್ಷಗಳಾದ್ರೂ ಮಕ್ಕಳಾಗದೇ ಇರೋ ಎಷ್ಟೋ ದಂಪತಿಗಳಿಗೆ ಈ ವಿಧಾನ ಒಂದು ಒಳ್ಳೆ ವರ. ಈಗ ಇಂಥಾದ್ದೆಲ್ಲಾ ಬಹಳ ಕಾಮನ್’ ಎಂದಳು. ಅದಕ್ಕೆ ಶಾರದಮ್ಮ ‘ಏನೋಮ್ಮಾ! ನನಗಂತೂ ಇದೆಲ್ಲ ಅನೈತಿಕ-ಅನೈಸರ್ಗಿಕ ಅನಿಸುತ್ತೆ’.

‘ಏನಮ್ಮಾ ನೀನು ಹೇಳೋದು? ಆರತಿ-ಮುಖೇಶ ಮಗುವಿನ ಬಾಡಿಗೆ ತಾಯಿಯಾಗಿ ರೇಣುಕಾ ಆ ಕೂಸಿಗೆ ಜನ್ಮ ನೀಡೊದ್ರಲ್ಲಿ ಅನೈಸರ್ಗಿಕವಾದದ್ದು ಏನಿದೆ? ಕೋಗಿಲೆ ಕಾಗೆ ಗೂಡಿನಲ್ಲಿ ಮೊಟ್ಟೆ ಇಡೋಲ್ವ? ಹಾಗೆ ಇದೂ ಕೂಡ. ಈಗಿನ ‘ಬಾಡಿಗೆ ತಾಯ್ತನ’ ಅನೈತಿಕ ಅನ್ನೊದಾದ್ರೆ ಮಹಾಭಾರತದಲ್ಲಿ ಪಾಂಡು ಮಹಾರಾಜ ಹಾಗೂ ಧೃತರಾಷ್ಟ್ರನ ಹುಟ್ಟಿಗೆ ಕಾರಣವಾದ ‘ನಿಯೋಗ’ ಪದ್ಧತಿ ಎಷ್ಟೊಂದು ಮಟ್ಟಿಗೆ ನೈತಿಕ? ಎಂಬುದಾಗಿ ಮಗಳು ವಿತಂಡವಾದ ಮಂಡಿಸಿದಳು.

ಅದಕ್ಕೆ ಶಾರದಮ್ಮ ಮಗಳ ವಾದಕ್ಕೆ ಎದುರು ಹೇಳಲು ಅರಿಯದೇ ‘ಏನೋ ಅಮ್ಮ! ಇದೆಲ್ಲ ಅಮೆರಿಕ ಅಂಥಾ ಕಡೆ ನಡಿಯುತ್ತೆ ಅಂತ ಗೊತ್ತಿತ್ತು. ಈಗ ನೋಡಿದ್ರೆ ಇಂಥದ್ದಕೆಲ್ಲಾ ನೀನೇ ಕೈ-ಹಾಕೋಕೆ ಹೊರಟಿರೋ ಹಾಗಿದೆ. ನಾವು ಎಷ್ಟೇ ಆದ್ರೂ ಮುದಿಗೊಡ್ದುಗಳು. ಹೀಗೆಲ್ಲ ನೆಡೆಯೋದು ಒಳ್ಳೆದಕ್ಕಲ್ಲ ಅಂತ ಅನ್ನಿಸುತ್ತೆ’ ಅನ್ನುತ್ತಿದ್ದಂತೆ ಸುಧಾ ‘ನಮ್ಮ ನೀನು ಡಾಕ್ಟ್ರಾಗಿ ನೀನೇ ಈ ಥರ ಮಾತಾಡಿದ್ರೆ ಹೇಂಗೆ? ಮಕ್ಕಳಿಲ್ಲದವರ ದುಖ ಕಡಿಮೆ ಮಾಡೋದು ಡಾಕ್ಟರ್ ಆದ ನಮ್ಮ ಕರ್ತವ್ಯ ಅಲ್ವಾ?’ ಎಂದು ಮರು ಪ್ರಶ್ನಿಸಿದಳು. ‘ಆಯ್ತಮ್ಮ! ನಿನಗೆ ಸರಿ ಕಂಡ ಹಾಗೆ ಮಾಡ್ಕೋ. ಆದ್ರೆ ಹುಷಾರು’ ಎಂದು ಶಾರದಮ್ಮ ಮಗಳಿಗೆ ಎಚ್ಚರಿಕೆ ಹೇಳಿದರು.

ಆದರೆ ಸುಧಾ ಬಾಡಿಗೆ ತಾಯಿ ಆಗಲು ಮನೆಗೆಲಸದ ರೇಣುಕಾಳನ್ನು ಕೇಳಿ ಒಪ್ಪಿಸುವಂತೆ ಸೂಚಿಸಿದಾಗ ಶಾರದಮ್ಮ ಹೌಹಾರಿದರು. ‘ಏನೇ ನೀನು ಹೇಳೋದು. ನೀನೀಗ ಮಾಡ್ತಾ ಇರೋದೇ ನನಗೆ ಇಷ್ಟ ಇಲ್ಲ. ಅಂತಹುದರಲ್ಲಿ ನನ್ನನ್ನೂ ಈ ಫಜೀತಿಯಲ್ಲಿ ಸಿಕ್ಕಿಸಬೇಕು ಅಂತ ನೋಡ್ತಿದ್ದೀಯ? ಸಾಧ್ಯನೇ ಇಲ್ಲ!’ ಎಂದು ಉರಿದು ಬಿದ್ದರು. ಸುಧಾ ‘ನೋಡಮ್ಮ ನೀನೇ ಎಷ್ಟೋ ಸರ್ತಿ ರೇಣುಕಾ ಬಹಳ ಕಷ್ಟದಲ್ಲಿದ್ದಾಳೆ ಅಂತ ಅವಳ ಬಡತನಕ್ಕೆ ಮರುಗ್ತಾ ಇರ್ತೀಯಾ. ಈಗ ಅವಳಿಗೆ ಸಹಾಯ ಮಾಡೋ ಅಂತ ಒಳ್ಳೆ ಅವಕಾಶ ಒದಗಿ ಬಂದಿದೆ. ಆರತಿ-ಮುಕೇಶ ಮಕ್ಕಳನ್ನು ಪಡಿಯೋದಕ್ಕೆ ಎಷ್ಟು ದೊಡ್ಡ ಮೊತ್ತ ಆದ್ರೂ ಕೊಡ್ತಾರೆ. ಇವರ ಹತ್ರ ಎಷ್ಟೊಂದು ದುಡ್ಡು ಹಾಗೇ ಕೊಳೀತಾ ಬಿದ್ದಿರುತ್ತೆ. ಈ ನೆಪದಿಂದಾದ್ರೂ ರೇಣುಕಾ ಬಡತನ ದೂರ ಮಾಡೋ ಅವಕಾಶ ಯಾಕೆ ಕಳ್ಕೊಬೇಕು ಅಂತೀನಿ’ ಎಂದು ಸುಧೀರ್ಘವಾಗಿ ವಾದಿಸಿ ಶಾರದಮ್ಮನನ್ನೂ ಒಪ್ಪಿಸಿಯೇ ಬಿಟ್ಟಳು. ಮಗಳ ಹಟಕ್ಕೆ ಶಾರದಮ್ಮ ಸೋತು ‘ಏನೋಮ್ಮ! ಅವಳನ್ನ ಕೇಳಿ ನೋಡ್ತೀನಿ. ಒಪ್ಪಿದ್ರೆ ಸರಿ. ಅವಳೇನಾದ್ರೂ ಒಪ್ಪಲಿಲ್ಲ ಅಂತ ಅಂದ್ರೆ ನೀನು ಪುನಾ ಒತ್ತಾಯ ಮಾಡಬಾರ್ದು’ ಎನುತ್ತ ಮಾತು ಮುಗಿಸಿದರು.
***

ನಾಲ್ಕು ವರ್ಷಗಳ ಹಿಂದೆ ಮನೆಗೆಲಸಕ್ಕೆಂದು ಬಂದು ಸೇರಿದ್ದ ರೇಣುಕಾ ನೋಡಲು ಕುಳ್ಳಗೆ- ಕಪ್ಪಗಿದ್ದರೂ ಆರೋಗ್ಯವಂತಳಾಗಿದ್ದು, 30ರ ಆಸು-ಪಾಸಿನ ಹೆಣ್ಣುಮಗಳು. ಮದುವೆಯಾಗಿ ಮೂರು ವರುಷಕ್ಕೆ ಎರಡು ಗಂಡು ಮಕ್ಕಳನ್ನು ಹೆತ್ತು, ಕುಡುಕ ಗಂಡ ರಾಮಣ್ಣನನ್ನು ನೆಚ್ಚಿಕೊಳ್ಳದೇ ಜೀವನೋಪಾಯಕ್ಕೆಂದು ಅವರಿವರ ಮನೆಗಳಲ್ಲಿ ಕಸ-ಮುಸುರೆ ಮಾಡುತ್ತಿದ್ದಳು. ಮಗಳು ಸುಧಾ ಮದುವೆಯಾಗಿ ಗಂಡನ ಜೊತೆಗೆ ಬೆಂಗಳೂರಿಗೆ ಹೋದ ನಂತರ ಶಾರದಮ್ಮನವರಿಗೆ ಒಂಟಿಯಾಗಿರಲು ಬೇಸರವೆನಿಸಿ, ತಮ್ಮ ಪರಿಚಯದವರ ಶಿಫಾರಸ್ಸಿನ ಮೇಲೆ ರೇಣುಕಾಳನ್ನು ತಮ್ಮ ಮನೆಯ ಔಟ್-ಹೌಸ್ ನಲ್ಲಿಯೇ ಗಂಡ-ಮಕ್ಕಳೊಡನೆ ಇದ್ದು ಮನೆಯ ಅಡಿಗೆ-ಕಸ-ಮುಸುರೆ-ಬಟ್ಟೆ ಎಲ್ಲವನ್ನೂ ಮಾಡಲು ನೇಮಿಸಿಕೊಂಡಿದ್ದರು. ಗಂಡ ರಾಮಣ್ಣ ಮೈನಿಂಗ್ ಲಾರಿ ಡ್ರೈವರ್ ಆಗಿದ್ದು , 2-3 ತಿಂಗಳಿಗೊಮ್ಮೆ ಮಾತ್ರ ಬಂದು ಒಂದೆರಡು ದಿನವಿದ್ದು ಮತ್ತೆ ಹೊರಟುಬಿಡುತ್ತಿದ್ದ. ತನ್ನ ಮಕ್ಕಳಿಬ್ಬರೂ ಓದಿನಲ್ಲಿ ಚುರುಕಾಗಿದ್ದುದರಿಂದ ತಮ್ಮ ಬಡತನದ ದುಃಸ್ಥಿತಿಯಲ್ಲಿ ಹೇಗೆ ಅವರಿಬ್ಬರನ್ನೂ ಓದಿಸುವುದು ಎಂಬ ಚಿಂತೆಯಿಂದ ರೇಣುಕಾ ಹೈರಾಣಾಗಿದ್ದಳು. ಎಷ್ಟೇ ಜತನದಿಂದ ಖರ್ಚು-ವೆಚ್ಚ ನಿಭಾಯಿಸಿದರೂ ಆಗಾಗ ಕಾಡುವ ಕಾಯಿಲೆ-ಕಸಾಲೆಗೆ ಚಿಕಿತ್ಸೆ ಪಡೆಯಲು ಎದುರಾಗುತ್ತಿದ್ದ ದುಡ್ಡಿನ ಕೊರತೆಯಿಂದ ಪಾರಾಗಲು ಶಾರದಮ್ಮನವರ ಹತ್ತಿರ ಮುಂಗಡ ಕೇಳಿ ಇಸಿದುಕೊಳ್ಳುತ್ತಿದ್ದಳು.

ರೇಣುಕಾ ಹತ್ತಿರ ಈ ವಿಷಯ ಹೇಗೆ ಕೇಳುವುದು ಅಂತ ಯೋಚಿಸಿ ಹಣ್ಣಾದ ಶಾರದಮ್ಮ, ಮಗಳು ಸುಧಾ ದಿನಕ್ಕೆರಡು ಸಾರಿ ಫೋನ್ ಮಾಡಿ ‘ಅವಳನ್ನ ಕೇಳಿದ್ಯಾ?’ ಎಂದು ಪೀಡಿಸುತ್ತಿದ್ದುದರಿಂದ ಕೊನೆಗೂ ಹಿಂಜರಿಯುತ್ತಲೆ ರೇಣುಕಾಳನ್ನು ಕೇಳಿಯೇ ಬಿಟ್ಟರು.

ಮೊದಮೊದಲು ರೇಣುಕಾಳಿಗೆ ಇದು ಏನು ಹೇಳುತ್ತಿದ್ದಾರೆ ಅಂತಲೇ ಅರ್ಥವಾಗಲಿಲ್ಲ. ಶಾರದಮ್ಮ ಸಹನೆ ಕಳೆದುಕೊಳ್ಳದೇ ನಿಧಾನವಾಗಿ ಆದಷ್ಟೂ ಸೂಕ್ಷ್ಮವಾಗಿ ಹೇಳಿದರು -‘ಬೆಂಗಳೂರಿನಲ್ಲಿರುವ ತಮ್ಮ ಮಗಳು ಸುಧಾಳ ಗೆಳತಿ ಆರತಿಗೆ ಮದುವೆಯಾಗಿ ಹದಿನೈದು ವರ್ಷವಾದರೂ ಮಕ್ಕಳಾಗದೇ ಇರುವುದರಿಂದ ಆಕೆಯ ಅಂಡಾಣು ಹಾಗೂ ಆಕೆಯ ಗಂಡನ ವೀರ್ಯಾಣು ಇವೆರಡನ್ನೂ ಲ್ಯಾಬ್‌ನಲ್ಲಿ ಸೇರಿಸಿ ಗರ್ಭ ಕಟ್ಟಿದ ಫೀಟಸ್ ಅಂದರೆ ಭ್ರೂಣವನ್ನು ತನ್ನ ಗರ್ಭದಲ್ಲಿಟ್ಟುಕೊಂಡು ಮಗುವನ್ನು ಹೆತ್ತು ಕೊಡುವ ಬಾಡಿಗೆ ತಾಯಿ ಬೇಕಾಗಿತ್ತು. ರೇಣುಕಾ ಇಂಥ ಬಾಡಿಗೆ ತಾಯಿಯಾಗಲು ಸಾಧ್ಯವೇ? ಈ ಕಾರ್ಯಕ್ಕೆ ರೇಣುಕಾಳಿಗೆ ಲಕ್ಷ-ಲಕ್ಷ ಕೊಡಲು ತಯಾರಿದ್ದಾರೆ, ಅದೂ ಅಲ್ಲದೆ ಆರೈಕೆಗೆಂದು ಮಗು ಹೆರುವವರೆಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಕೊಡುತ್ತಾರೆ’. ವಿಷಯ ಅಲ್ಪ-ಸ್ವಲ್ಪ ಅರ್ಥವಾದರೂ ರೇಣುಕಾ ತಕ್ಷಣಕ್ಕೆ ಏನನ್ನೂ ಹೇಳದೆ ಸುಮ್ಮನೆ ಕುಳಿತಳು. ಆಗ ಶಾರದಮ್ಮ ‘ನೋಡು ರೇಣುಕಾ. ನೀನೂ ನಿಧಾನವಾಗಿ ಯೋಚಿಸಿ ನೋಡು. ನೀನು ಒಪ್ಪಿದರೆ ನಿನ್ನ ಮಕ್ಕಳನ್ನು ಒಳ್ಳೆ ಸ್ಕೂಲ್-ಕಾಲೇಜುಗಳಲ್ಲಿ ಓದಿಸಬಹುದು. ಅಲ್ಲದೇ ಮಕ್ಕಳಿಲ್ಲದ ಆ ನತದೃಷ್ಟ ದಂಪತಿಗೆ ಸಹಾಯ ಮಾಡಿದ ಹಾಗೂ ಆಗುತ್ತೆ. ನಿನಗೆ ಒಪ್ಪಿಗೆ ಇದ್ರೆ ಮಾತ್ರ ನಾವು ಈ ವಿಷಯದಲ್ಲಿ ಮುಂದುವರೆಯುತ್ತೇವೆ’ ಎಂದು ಮಾತು ಮುಗಿಸಿದ್ದರು.

ಎರಡು ದಿನ ಬಿಟ್ಟು ರೇಣುಕಾ ತಾನು ಬಾಡಿಗೆ ತಾಯಿಯಾಗಲು ಸಿದ್ಧ ಎಂದು ತಿಳಿಸಿದಳು. ಶಾರದಮ್ಮ ‘ಚೆನ್ನಾಗಿ ಯೋಚನೆ ಮಾಡಿ ನಿರ್ಧಾರ ತಗೊಂಡಿದ್ದೀಯಾ?’ ಎಂದು ಕೇಳಿದ್ದಕ್ಕೆ ‘ಹೂಂ’ ಎಂದು ತಲೆ ಆಡಿಸಿದಳು. ‘ಮತ್ತೆ ರಾಮಣ್ಣನಿಗೂ ಈ ವಿಷ್ಯ ತಿಳಿಸಿದ್ಯಾ?’ ಎಂದು ಕೇಳಿದ್ದಕ್ಕೆ ರೇಣುಕಾ ನಿರುತ್ತರಳಾದಳು. ಶಾರದಮ್ಮ ‘ಯಾಕೆ? ಏನಾಯ್ತು?’ ಎಂದುದಕ್ಕೆ ‘ಅಂವಾ ಮುಂದಿನ ಸರ್ತಿ ಮನಿಗೆ ಬಂದಾಗ ಹೇಳ್ತಿನ್ರಿ’ ಎಂದಳು. ಶಾರದಮ್ಮ ‘ಹಾಗಾದ್ರೆ ಸರಿ ನಾನು ಈಗ್ಲೇ ನನ್ನ ಮಗಳಿಗೆ ವಿಷಯ ತಿಳಿಸಿಬಿಡ್ತೀನಿ’ ಎಂದು ಫೋನ್ ಮಾಡಲು ಉತ್ಸುಕರಾದರು. ಆದರೆ ರೇಣುಕಾ ‘ಅವ್ವಾರಾ! ಮತ್ತ ಅವರು ಎಷ್ಟು ರೊಕ್ಕ ಕೊಡ್ತಾರಾ ಅಂತ ಮೊದ್ಲಾ ಕೇಳಿಬಿಡ್ರಿ. ಆಮೇಲೆ ಅವರು ಏನೋ ಕೊಡಲಾರದ ಕೈಕೊಟ್ಟರಂದ್ರ ಹೆಂಗರಿ?’ ಎಂದು ಪ್ರಶ್ನಿಸಿದಳು. ಅದಕ್ಕೆ ಶಾರದಮ್ಮ ‘ಅದೆಲ್ಲ ನೀ ತಲಿ ಕೆಡಿಸ್ಕೋಬೇಡ. ಸುಧಾ ಅದನ್ನೆಲ್ಲ ನೋಡ್ಕೋತಾಳೆ’ ಎಂಬ ಆಶ್ವಾಸನೆ ಕೊಟ್ಟರು. ಇದಕ್ಕೆ ರೇಣುಕಾ ಅವರ ಮಾತಿನಲ್ಲಿ ನಂಬಿಕೆ ಇರುವಂತೆ ಗೋಣು ಹಾಕಿದಳು.

ರೇಣುಕಾ ಒಪ್ಪಿದ ವಿಷಯ ಕೇಳಿ ಸುಧಾ ಸಂತೋಷದಿಂದ ಕುಣಿದು ಕುಪ್ಪಳಿಸಿದಳು. ಮುಂದೆ ಹದಿನೈದು ದಿನಗಳಲ್ಲಿ ಕಾನೂನು ಪ್ರಕಾರ ಒಂದು ಒಪ್ಪಂದ ತಯಾರಿಸಿಕೊಂಡು ಬಂದು ರೇಣುಕಾಳಿಗೆ ಎಲ್ಲವನ್ನೂ ವಿವರಿಸಿ ಹೇಳಿ ಅವಳ ಸಹಿ ಪಡೆದುಕೊಂಡು ಬೆಂಗಳೂರಿಗೆ ಮರಳಿದಳು. ಒಪ್ಪಂದದ ಅನುಸಾರ ಆರತಿ -ಮುಕೇಶ ದಂಪತಿಗೆ ಅವರದೇ ಭ್ರೂಣವನ್ನು ರೇಣುಕಾ ತನ್ನ ಗರ್ಭದಲ್ಲಿಟ್ಟುಕೊಂಡು ಜನ್ಮ ನೀಡಿ, ಹುಟ್ಟಿದ ನಂತರ ಮಗುವನ್ನು ಅವರ ಮಡಿಲಿಗೆ ಹಾಕಿಬಿಡುವುದು. ಇದಕ್ಕಾಗಿ ರೇಣುಕಾಳಿಗೆ 5 ಲಕ್ಷ ರೂಪಾಯಿ ಮತ್ತು ಅವಳ ಆರೈಕೆಗೆ ಪ್ರತಿ ತಿಂಗಳೂ 5 ಸಾವಿರ ರೂಪಾಯಿಗಳನ್ನು ಕೊಡತಕ್ಕದ್ದು ಎಂಬುದಾಗಿ ನಿರ್ಧರಿಸಲಾಗಿತ್ತು.
***

‘ಅವ್ವಾರೆ, ರ್ರೀ ಅವ್ವಾರೆ! ಲಗೂನ ಬಾಗಲಾ ತೆಗೀರಿ ಇಲ್ಲಂದ್ರ ಇಂವಾ ನನ್ನ ಬಡದು ಸಾಯಿಸೇ ಬಿಡತಾನ್ರೀ’ ಎನ್ನುತ್ತಾ ಜೋರಾಗಿ ಕೊಗುತ್ತಾ ಬಾಗಿಲು ಬಡಿಯುವ ಸದ್ದು ಕೇಳಿದಾಗಲೇ ಶಾರದಮ್ಮನವರ ನಿದ್ದೆಯ ಮಬ್ಬು ಹರಿದಿದ್ದು. ‘ಎಷ್ಟೊತ್ತು ಮಲಗಿಬಿಟ್ಟೆ’ ಅಂದುಕೊಳ್ಳುತ್ತಾ ‘ಈ ರೇಣುಕಾ ಯಾಕೆ ಈ ರೀತಿ ಕಿರುಚ್ತಾ ಇದ್ದಾಳ’ ಎಂದು ಗೊಣಗುತ್ತಲೇ ಶಾರದಮ್ಮ ಬಾಗಿಲು ತೆರೆದೊಡನೇ ಸಂಜೆ ಸೂರ್ಯನ ಕಿರಣಗಳೊಡನೆ ರೇಣುಕಾ ಒಳಗೆ ನುಗ್ಗಿದಳು. ಅವಳ ಹಿಂದೆಯೇ ರೇಣುಕಾಳ ಗಂಡ ರಾಮಣ್ಣ ಕೂಡ ಒಳಗೆ ಬಂದ.

ಅವರಿಬ್ಬರೂ ಈ ರೀತಿ ತಮ್ಮ ಮನೆಯೊಳಕ್ಕೆ ಬಂದಿದ್ದಕ್ಕೆ ಕಿಡಿಕಿಡಿಯಾದ ಶಾರದಮ್ಮ ‘ಏ! ಏನಿದೆಲ್ಲ ಯಾಕೆ ಹೀಗೆ ನುಗ್ತಾ ಇದ್ದೀರಾ? ನಿಮಗೆ ಹೇಳೋರು-ಕೇಳೋರು ಯಾರೂ ಇಲ್ವೇನು?’ ಎಂದು ಸಿಟ್ಟುಮಾಡಿದರು. ರಾಮಣ್ಣನೇ ಮೊದಲು ಮಾತನಾಡಿದ ‘ಅವ್ವಾರೆ! ಇದು ನಮ್ಮ ಮನಿ ವಿಷಯ ನೀವು ನಡುವೆ ಬರ್ಬ್ಯಾಡ್ರಿ’ ಎನ್ನುತ್ತ ಕೈ ಎತ್ತಿ ಹೊಡೆಯಲೆಂದು ರೇಣುಕಾ ಮೇಲೇರಿ ಹೋದ. ರೇಣುಕಾ ‘ಅಯ್ಯೋ! ಅವ್ವಾರೆ!’ ಎಂದು ಚೀರುತ್ತಾ ಶಾರದಮ್ಮನವರ ಹಿಂದೆ ಅಡಗಿಕೊಳ್ಳುವ ಯತ್ನ ಮಾಡಿದಳು. ಶಾರದಮ್ಮ ಜೋರಾಗಿ ದನಿಯೆರಿಸಿ ‘ಏ! ನೀವಿಬ್ರೂ ಮೊದ್ಲು ಸುಮ್ನಿರ್ತೀರೋ ಇಲ್ವೋ?’ ಎಂದು ಬಾಯಿ ಮಾಡುತ್ತಾ ರೇಣುಕಾಳನ್ನು ಉದ್ದೇಶಿಸಿ ‘ಏನೇ ಇದು?’ ಎಂದು ಕೇಳಿದರು. ರೇಣುಕಾ ಏನೊಂದೂ ಉತ್ತರಿಸದೇ ‘ಮುಳು-ಮುಳು’ ಅಳಲು ಪ್ರಾರಂಭಿದಳು. ಶಾರದಮ್ಮನವ್ರಿಗೆ ರೋಸಿಹೋಯಿತು. ರಾಮಣ್ಣನಿಗೆ ‘ಏ ರಾಮಣ್ಣಾ! ನೀನಾದ್ರೂ ಬೊಗಳೋ! ಏನು ಅಂತ’ ಎಂದು ಹೇಳಿದರು.

ರಾಮಣ್ಣ ‘ನೋಡ್ರಿ ಅವ್ವಾರ! ಈಕೀ ಯಾರಿಗೋ ಬಸುರಾಗಿ ನನಗ ದ್ರೋಹ ಮಾಡ್ಯಾಳ. ಆಕಿನ್ನ ನಾ ಸುಮ್ಮನಾ ಬಿಡಂಗಿಲ್ಲಾ! ಕೊಂದು ಹಾಕಿಬಿಡ್ತೀನಿ ಇವತ್ತ ಆಕಿನ್ನ’ ಎಂದು ರೋಷ ತಪ್ತನಾಗಿ ನುಡಿದ. ಶಾರದಮ್ಮ ರಾಮಣ್ಣನಿಗೆ ‘ಅಲ್ಲೋ ರಾಮಣ್ಣ! ರೇಣುಕಾ -ನಿನ್ನ ಮದುವೆಯಾಗಿ ಎಂಟು ವರ್ಷ ಆಯ್ತು. ಇನ್ನೂ ನಿನಗ ಅವಳ ಮೇಲೆ ನಂಬಿಕೆ ಇಲ್ವೇನೋ. ರೇಣುಕಾ ಎಂಥಾ ಒಳ್ಳೆಯ ಹುಡುಗಿ. ಇಷ್ಟು ದಿನ ನಿನ್ನ ಜೊತೆ ಹೊಂದಿಕೊಂಡು ಸಂಸಾರ ನೆಡೆಸಿಕೊಂಡು ಹೋಗ್ತಾ ಇದ್ದಾಳೆ. ನಿನಗೆ ಈಗ ಯಾಕೆ ಅವಳ ಮೇಲೆ ಅನುಮಾನ. ನೀನು ಅಲ್ಲಿ -ಇಲ್ಲಿ ಅಂತ ಮೈನಿಂಗ್ ಲಾರಿ ಓಡಿಸೋಕೆ ತಿಂಗಳುಗಟ್ಟಲೇ ಊರೂರು ಅಲೀತಾ ಇದ್ದರೆ, ಇಲ್ಲಿ ಇವಳು ಕಸ-ಮುಸುರೆ ಮಾಡಿ ನಿನ್ನೆರಡು ಮಕ್ಕಳನ್ನ ಸಾಕುತ್ತಾ ಸಂಸಾರದ ಭಾರ ಹೊತ್ಕೊಂಡಿದ್ದಾಳೆ. ಇಂಥಾದ್ರಲ್ಲಿ ಅವಳನ್ನೇ ಅನುಮಾನಿಸ್ತಿಯಾ ನೀನು ಥೂ ನಿನ್ನಾ!’. ರಾಮಣ್ಣ ‘ಅದೆಲ್ಲ ನಾ ಇಲ್ಲ ಅನ್ನೋದಿಲ್ರಿ ಅವ್ವಾರೆ! ನಾ ಮಕ್ಕಳಾಗದ ಹಂಗ ಆಪರೇಷನ್ ಮಾಡಿಸ್ಕೊಂಡ ಮ್ಯಾಲ ಈಕೀ ಈಗ ಹೊಟ್ಟೀಲೆ ಅದೇನಿ ಅಂದ್ರ ಅದಕ್ಕ ಅರ್ಥ ಏನ್ರೀ?. ಈಕಿ ನನಗ ಗೊತ್ತಿಲ್ಲದ ಹಂಗ ಬೇರೆಯವರಿಗೆ ಬಸುರಾದ್ರೂ ಸುಮ್ಮನಿರೂ ಅಂತಿರೇನ್ರಿ?’ 

ಈಗ ಶಾರದಮ್ಮನವ್ರಿಗೆ ನಿಧಾನವಾಗಿ ವಿಷಯದ ಗಂಭೀರತೆ ಅರ್ಥವಾದಂತಾಯ್ತು. ರೇಣುಕಾ ತಾನು ಬಾಡಿಗೆ-ತಾಯಿ ಆಗಿರುವ ವಿಷಯನಾ ರಾಮಣ್ಣನಿಂದ ಮುಚ್ಚಿ ಇಟ್ಟಿದ್ದೇ ಈ ಅವಾಂತರಕ್ಕೆ ಕಾರಣ ಅಂತ ಸ್ಪಷ್ಟವಾಯಿತು. ‘ಏ ರೇಣುಕಾ! ನೀನ್ಯಾಕೆ ರಾಮಣ್ಣನಿಗೆ ಆ ವಿಷಯ ತಿಳಿಸ್ಲಿಲ್ಲ. ನಾನು ನಿನಗೆ ಮೊದಲೇ ಬಡ್ಕೊಂಡೆ- ಇರೋ ವಿಷ್ಯ ತಿಳ್ಸು ಅಂತ. ಈಗ ನೋಡು. ಏನಾಗ್ತಾ ಇದೆ. ಮಾಡಿದ ತಪ್ಪಿಗೆ ಅನುಭವಿಸು.’ ಎಂದು ರೋಫು ಹಾಕಿದರು. ಅದಕ್ಕೆ ರೇಣುಕಾ ಅಳುತ್ತಲೇ ‘ಇಲ್ರಿ ಅವ್ವಾರ! ಇಂವಾ ಯಾವಾಗ ಬಂದ್ರು ಕಂಠಮಟ ಸೆರೆ ಕುಡಿದ ನಶೆ ಏರಿಸಿಕೊಂಡ ಬರತಿದ್ದನ್ರಿ. ನನಗೂ ಇದು ಹೆಂಗ-ಏನು ಅಂತ ಸರಿಯಾಗಿ ಅರ್ಥ ಆಗಿದ್ದಿಲ್ರಿ. ಇನ್ನ ಅವಂಗ ಅರ್ಥ ಅಗೋಹಂಗ ಹೆಂಗ ಹೇಳೋದು ಅಂತ ತಿಳಿಲಾರದ್ದಕ್ಕ ನಾ ಏನೂ ಹೇಳಾಕ ಹೋಗಿದ್ದಿಲ್ರಿ’. 

ಸಾವರಿಸಿಕೊಂಡ ಶಾರದಮ್ಮ ‘ನೋಡು ರಾಮಣ್ಣ ಇದರಲ್ಲಿ ರೇಣುಕಾಳದೆನೂ ತಪ್ಪಿಲ್ಲ. ವಿಷಯ ಏನು ಅಂದ್ರೆ .....’ ಎಂದು ರೇಣುಕಾ ಬಾಡಿಗೆ-ತಾಯಿ ಆಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ತಿಳಿಸಿದರು.

ಎಲ್ಲವನ್ನೂ ಕೇಳಿಸಿಕೊಂಡ ರಾಮಣ್ಣ ಕೊನೆಗೆ ‘ಇದ್ರಾಗ ಏನೂ ಮೋಸ ಇಲ್ಲ ಹೌದಲ್ರಿ?’ ಎಂದು ದೃಢಪಡಿಸಿಕೊಂಡ.
ಅದಕ್ಕುತ್ತರವಾಗಿ ಶಾರದಮ್ಮ ‘ಅಂತಾದ್ದೇನೂ ಇಲ್ಲ ರಾಮಣ್ಣ! ನಿಮ್ಮ ಕಷ್ಟ ಕಳೀಲಿ ಅಂತ ಈ ಸಾಹಸಕ್ಕೆ ಕೈ ಹಾಕಿದ್ದು, ಮುಂದೆ ನಿನ್ನ ಮಕ್ಕಳ ಭವಿಷ್ಯಕ್ಕೆ ಅನುಕೂಲ ಆಗಲಿ ಅನ್ನೋ ಉದ್ದೇಶದಿಂದ ಮಾತ್ರ’ ಎಂದು ಆಶ್ವಾಸನೆ ನೀಡಿದರು.

ಇದರಿಂದ ಕೊಂಚ ಸಮಾಧಾನ ಹೊಂದಿದವನಂತೆ ಕಂಡುಬಂದ ರಾಮಣ್ಣ ರೇಣುಕಾಳಿಗೆ ‘ಇದನ್ನೆಲ್ಲ ಮೊದ್ಲ ಹೇಳಾಕ ಏನಾಗಿತ್ತು ನಿನಗ?’ ಎಂದು ತರಾಟೆ ತೆಗೆದುಕೊಂಡ.

ಉತ್ತರವಾಗಿ ರೇಣುಕಾ ‘ಈಗ ಎಲ್ಲಾ ತಿಳೀತಲ್ಲಾ?" ಎಂದು ಮೂಗು ಮುರಿದಳು. ರಾಮಣ್ಣ ಅವಳ ಮಾತಿಗೆ ಲಕ್ಷ್ಯ ನೀಡದೆ ಶಾರದಮ್ಮನವರತ್ತ ತಿರುಗಿ’ ಮತ್ತ ರೊಕ್ಕ ಯಾವಾಗ ಕೊಡ್ತಾರಂತ್ರಿ?’ ಎಂದು ಕೇಳಿದ. ಶಾರದಮ್ಮ ಏನಾದ್ರೂ ಹೇಳುವ ಮುನ್ನವೇ ರೇಣುಕಾ ‘ಹೂಂ! ಕೊಡ್ತಾರೆ ರೊಕ್ಕ ನಿನ್ನ ಕೈಗೆ. ಅವ್ವಾರೆ ಇವನ ಕೈಯಾಗ ಏನಾದ್ರೂ ರೊಕ್ಕ ಸಿಕ್ತು ಅಂದ್ರ ..... ’ ಅನ್ನುತ್ತಾ ಕೈ ಸನ್ನೆ ಮೂಲಕ ಸೆರೆ ಕುಡಿಯುತ್ತಾನೆ ಎಂಬುದಾಗಿ ಅಣಕಿಸಿದಳು.

ಶಾರದಮ್ಮ ನಗುತ್ತಾ ‘ಇಲ್ಲಾ ರಾಮಣ್ಣ! ಹಾಗೆಲ್ಲ ದುಡ್ಡು ನಿನ್ನ ಕೈಗೆ ಕೊಡೋದಿಲ್ಲ.’ ಎಂದೆನ್ನುತ್ತಾ ಒಪ್ಪಂದದ ಅನುಸಾರ ಎಲ್ಲಾ ದುಡ್ಡನ್ನು ರೇಣುಕಾ ಹೆಸರಿನಲ್ಲಿ ಎಫ್.ಡಿ. ಮಾಡಿ ಇಟ್ಟಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದಾಗ ಮಾತ್ರ ಉಪಯೋಗಿಸಬೇಕೆಂದು ತಿಳಿಸಿದರು. ರಾಮಣ್ಣ ನಿರಾಶೆ ತೋರಗೊಡದೆ ‘ಒಳ್ಳೆದೇ ಆಯ್ತು. ನನ್ನ ಮಕ್ಕಳ ಓದೋ ಸಲುವಾಗಿ ರೊಕ್ಕದ ವ್ಯವಸ್ಥಾ ಮಾಡಿರಿ ಅಂದ್ರ ನನಗ ಆದ್ರೂ ಇನ್ನೇನು ಬೇಕು’ ಎಂದು ನುಡಿದು ‘ಅವ್ವಾರೆ ಬರ್ತೀನ್ರಿ’ ಅನ್ನುತ್ತಾ ರೇಣುಕಾಳನ್ನು ಕರೆದುಕೊಂಡು ಮನೆಗೆ ಹೋದನು.
***

‌ಆ ಘಟನೆಯ ನಂತರ ಶಾರದಮ್ಮ ಅದೆಷ್ಟೋ ಸಾರಿ ರೇಣುಕಾಳನ್ನು ಕೊರೆಯುತ್ತೀರೋ ಸಂಗತಿ ಯಾವುದು ಎಂದು ಅದೆಷ್ಟೋ ಬಾರಿ ಅರಿಯುವ ಪ್ರಯತ್ನ ಮಾಡಿದರೂ, ಪ್ರತಿ ಬಾರಿಯೂ ರೇಣುಕಾ ತನ್ನ ಸುತ್ತ ಕಟ್ಟಿಕೊಂಡ ಮೌನ ಬೇಲಿ ಭೇಧಿಸಲು ಸಾಧ್ಯವಾಗಿರಲಿಲ್ಲ. ರೇಣುಕಾ ಏನೊಂದೂ ಬಾಯ್ತೆರೆದು ಹೇಳದೇ ಇದ್ದರೂ ಶಾರದಮ್ಮನವರಿಗೆ ಅವಳು ಮನಸ್ಸಲ್ಲೇನೋ ಯೋಚಿಸುತ್ತಾ ಕೊರಗುತ್ತಿರುವುದು ಅನುಭವ ವೇದ್ಯವಾಗಿತ್ತು. ಶಾರದಮ್ಮ ಅವಳ ಈ ಸಂಕಟಕ್ಕೆ ಪರೋಕ್ಷವಾಗಿ ತಾವೂ ಹೊಣೆ ಎಂದರಿತು ಅಪರಾಧಿ ಭಾವದಿಂದ ನರಳಾರಂಭಿಸಿದರು. ರೇಣುಕಾ ತುಂಬು ಬಸುರಿ ಆಗಿರುವ ಈ ದಿನಗಳಲ್ಲಿ ಈ ರೀತಿ ಮನೋವೇದನೆ ಅನುಭವಿಸುತ್ತಾ ಇರುವುದು ಶಾರದಮ್ಮನವರಿಗೆ ಬಿಡಿಸಲಾಗದ ಒಗಟಾಯಿತು. ಮಗಳು ಸುಧಾ ಹತ್ತಿರ ಈ ವಿಷಯ ಹೇಳೋಣ ಎಂದರೆ ಅವಳು ಮೊದಲೇ ಮುಂಗೋಪಿ, ಯಾವ ರೀತಿ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾಳೆಂಬುದನ್ನು ಊಹಿಸಲಾರದೇ ನಡುಗಿದರು.

ಕೆಲ ದಿನಗಳ ನಂತರ, ರಾತ್ರಿ ಅಡುಗೆ ಕೆಲಸ ಮುಗಿಸಿ ತನ್ನ ಮನೆಗೆ ಹೊರಟ್ಟಿದ್ದ ರೇಣುಕಾ ತಡೆದು ನಿಂತು ‘ಅವ್ವಾರೆ! ನಿಮ್ಮ ಹತ್ರ ಏನೋ ಕೇಳಬೇಕಿತ್ರಿ!’ ಎಂದು ರಾಗ ಎಳೆದಳು. ಹಾಲ್‌ನಲ್ಲಿದ್ದ ಸೋಫಾದ ಮೇಲೆ ಕುಳಿತು ಶಾರದಮ್ಮ ‘ಯಾಕೆ ರೇಣುಕಾ ಒಂಥರಾ ಇರ್ತೀಯಾ? ಮೈಯಲ್ಲಿ ಹುಷಾರಿಲ್ವ? ಏನಾದ್ರೂ ತೊಂದರೆ ಆಗಿದ್ಯಾ?’ ಎಂದು ಪ್ರಶ್ನಿಸಿದರು. ಎಂದಿನಂತೆ ರೇಣುಕಾ ಮೌನವಾಗಿಯೇ ನಿಂತದ್ದು ಕಂಡು ಶಾರದಮ್ಮನವರೇ ಮತ್ತೆ ‘ಏನಾಯ್ತೆ?’ ಎನ್ನುತ್ತಾ ತಮ್ಮ ಕಾಲ ಬಳಿ ಕುಳಿತ್ತಿದ್ದ ರೇಣುಕಾ ತಲೆ ನೇವರಿಸಿದರು. ರೇಣುಕಾ ‘ಮತ್ತs ಅದು, ನನ್ನ ಹೊಟ್ಟ್ಯಾಗ ಪಾಪು ಐತಲ್ರಿ, ಅದು ಯಾರ ಹಂಗ ಹುಟ್ಟತೈತ್ರಿ?’ ಎಂದು ಪ್ರಶ್ನಿಸಿದಳು. ಶಾರದಮ್ಮ ‘ಅಯ್ಯೋ ನಿನ್ನಾ ! ಇದಾ ನಿನ್ನ ತಲೆ ಕೊರೀತಾ ಇರೋ ವಿಷ್ಯ! ಆಯ್ತು ಹೇಳ್ತೀನಿ ಕೇಳು’ ಎಂದು ಆದಷ್ಟು ಸರಳವಾಗಿ ಅವಳಿಗೆ ಅರ್ಥವಾಗುವಂತೆ ವಿವರಿಸಿದರು. ಮಗುವಿನ ಭ್ರೂಣವು ಆರತಿ-ಮುಕೇಶ್ ಅವರ ಅಂಡಾಣು-ವೀರ್ಯ ಸೇರಿ ಗರ್ಭ ಕಟ್ಟಿರುವುದರಿಂದ ಅವರ ರೂಪ-ಗುಣಗಳನ್ನೇ ಹೋಲುತ್ತದೆ. ರೇಣುಕಾ ಹೆರಿಗೆ ಆಗುವವರೆಗೆ ಮಾತ್ರವೇ ತನ್ನ ಶಿಶುವನ್ನು ಹೊಟ್ಟೆಯಲ್ಲಿಟ್ಟುಕೊಂಡು ಹಡೆದು ಕೊಡುತ್ತಳಾದ್ದರಿಂದ ಹುಟ್ಟುವ ಮಗು ಅವಳನ್ನು ರೂಪದಲ್ಲಾಗಲೀ, ಗುಣದಲ್ಲಾಗಲೀ ಹೋಲುವುದಿಲ್ಲ. ಈ ಮಾತುಗಳನ್ನು ಕೇಳುತ್ತಿದ್ದ ರೇಣುಕಾ ಮೌನ ತಾಳಿದ್ದರೂ ಇನ್ನೊ ಏನೋ ಅವಳ ಮನವನ್ನು ಕಾಡುತ್ತಿದೆ ಎಂಬುದು ಸ್ಪಷ್ಟವಾಯಿತು. ಶಾರದಮ್ಮ ‘ಏನೇ ನಿನಗೆ ಈಗ ಎಲ್ಲಾ ಅರ್ಥ ಆಯ್ತಾ?’ ಎಂದರು. ಸ್ವಲ್ಪ ತಡೆದು ರೇಣುಕಾ ‘ಅಲ್ರೀ ಅವ್ವಾರಾ! ನನಗ ಹುಟ್ಟೋ ಮಗು ನನ್ನ ರೂಪ-ಗುಣ ಹೊತ್ತಿರಂಗಿಲ್ಲ ಅಂದ್ರೂ ನನ್ನ ರಕ್ತ -ಮಾಂಸ ಹಂಚ್ಕೊಂಡು ಹುಟ್ಟತೈತಿ ಅನ್ನೋದು ಸುಳ್ಳಂತಿರೇನ್ರಿ?’ ಎಂದು ಮರು ಪ್ರಶ್ನೆ ಮಾಡಿದಳು. ಶಾರದಮ್ಮ ಅವಳ ಈ ಪ್ರಶ್ನೆಯಿಂದ ಒಂದು ಕ್ಷಣ ಅಪ್ರತಿಭರಾದರೂ ಸಾವರಿಸಿಕೊಂಡು ತಕ್ಷಣವೇ ‘ಅಯ್ಯೋ ಯಾರು ಅಲ್ಲ ಅಂತಾರೆ ಮಹಾರಾಯಿತಿ. ನೀನು ಹೇಳೋದು ಸರಿ. ಆದರೆ ನಾನು ಹೇಳಿದ್ದು ಹಂಗಲ್ಲ.’ ಎನ್ನುತ್ತಾ ಮುಂದೆ ಏನು ಹೇಳುವುದಕ್ಕೂ ತೋಚದೇ ಸುಮ್ಮನಾದರು. ಕೊಂಚ ಹೊತ್ತು ಮೌನವಾಗಿ ಕುಳಿತ್ತಿದ್ದ ರೇಣುಕಾ ಎಂದಿನಂತೆ ‘ಬರ್ತೀನ್ರಿ’ ಎಂದು ಕೂಡ ಹೇಳದೇ ಹಾಗೆಯೇ ಹೊರಟುಹೋದಳು. ಅವಳು ಹೋದ ನಂತರ ಶಾರದಮ್ಮನವರ ಆಲೋಚನೆ ಎತ್ತೆತ್ತಲೋ ಹರಿಯಿತು.
ಇದೆಂಥಾ ಸಂದಿಗ್ಧ ತಂದುಬಿಟ್ಟಳು ಎಂಬುದಾಗಿ ಮಗಳನ್ನು ಶಪಿಸಿದರು. ಅವಳಿಗೆ ಮೊದಲಿನಿಂದಲೂ ಎಲ್ಲವನ್ನೂ ತನ್ನ ದೃಷ್ಟಿಕೋನದಿಂದಲೇ ನೋಡಿ ಅಭ್ಯಾಸ. ಎಲ್ಲಾನೂ ಅತಿಯಾಗಿ ಮಾಡ್ತಾಳೆ. ಪ್ರತಿ ಬಾರಿಯೂ ತನ್ನ ಮನಸ್ಸಿನಂತೆಯೇ ನಡೀಬೇಕು ಅನ್ನೋ ಹಟ ಇವಳಿಗೆ. ತಾವು ಎಷ್ಟೊಂದು ಪರಿಯಾಗಿ ಹೇಳಿದರೂ ಅದಕ್ಕೆ ಏನೇನೋ ವಿತಂಡ ವಾದ ಮಾಡಿ ಇವತ್ತು ಇಂಥ ಸಂಕಟದ ಪರಿಸ್ಥಿತಿ ತಂದಿಟ್ಟಳು.

ಡಾಕ್ಟ್ರಾಗಿದ್ದೋರು ಮಾನವೀಯತೆ ಮರೆತು ವ್ಯವಹಾರಕ್ಕಿಳಿದರೆ ಇನ್ನೇನಾಗುತ್ತೆ? ಧರ್ಮ-ಕರ್ಮ, ನೀತಿ-ನಿಯತ್ತು ಅಂತ ನಮ್ಮ ಹಿರಿಯರು ಮಾಡಿಟ್ಟಿರೋದ್ಯಾತಕ್ಕೆ? ಮನುಷ್ಯನ ಎಲ್ಲ ವಿಕೃತಿಗಳಿಗೂ ಸಮರ್ಥನೆ ನೀಡೋದಕ್ಕೆ ಹೊರಟ್ರೆ, ಈ ಲೋಕದಲ್ಲಿ ಜನರಿಗೆ ನೀತಿಯುತವಾಗಿ ಬಾಳೋದೇ ಕಷ್ಟ ಅನ್ನಿಸಿಬಿಡುತ್ತೆ. ಪ್ರಾಣಿಗಳಲ್ಲಿ ಕಾಣಿಸದ ಲೈಂಗಿಕ ಅತ್ಯಾಚಾರ, ಸಲಿಂಗ ಕಾಮ, ವಿಲೋಮ ಕೂಡುವಿಕೆ ಮೊದಲಾದ ವಿಕೃತಿಗಳು ಮನುಷ್ಯನಲ್ಲಿ ಮಾತ್ರ ಕಾಣಿಸಿಕೊಳ್ಳುವುದಕ್ಕೆ ಕಾರಣ ಅವನ ವಿಚಾರಶಕ್ತಿಯೋ ಅಥವಾ ಸ್ವಚ್ಛಂದ ಪ್ರವೃತ್ತಿಯೋ? ಹೀಗೆ ಏನೇನೋ ಯೋಚನೆಗಳಲ್ಲಿ ಶಾರದಮ್ಮನವರಿಗೆ ನಿದ್ದೆ ಆವರಿಸಿದ್ದೇ ತಿಳಿಯಲಿಲ್ಲ.
***

ಒಂಬತ್ತು ತಿಂಗಳು ತುಂಬಿದ ನಂತರ ಸುಸೂತ್ರವಾಗಿ ಹೆರಿಗೆ ಆಗಿ, ರೇಣುಕಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಹೆರಿಗೆ ಸಮಯದಲ್ಲಿ ಯಾವುದೇ ತೊಂದರೆ ಆಗದೆ ರೇಣುಕಾ -ಮಗು ಇಬ್ಬರೂ ಆರೋಗ್ಯದಿಂದ ಇದ್ದುದು ಕಂಡು ಶಾರದಮ್ಮ ‘ಸದ್ಯ ದೇವರ ದಯೆ! ಏನೂ ಅಪಾಯ ಸಂಭವಿಸಲಿಲ್ಲ!’ ನಿಟ್ಟುಸಿರು ಬಿಟ್ಟರು. ಸುಧಾ ‘ಅಂತೂ ನನ್ನ ಆರತಿಯ ಮಡಿಲು ತುಂಬಿತು’ ಅಂತ ಬಹಳ ಸಂತೋಷಪಟ್ಟಳು.

ಮುಂದಿನ ದಿನಗಳಲ್ಲಿ ಆರತಿ-ಮುಕೇಶ ಬೆಂಗಳೂರಿನಿಂದ ಬಂದು ಮಗು ನೋಡಿ ಸಂತಸದಿಂದ ಆನಂದಭಾಷ್ಪ ಸುರಿಸಿದರು. ಆರತಿ ‘ಅಕ್ಕ’ ಎನ್ನುತ್ತಾ ರೇಣುಕಾ ಕಾಲಿಗೆರಗಿದಳು. ರೇಣುಕಾ ಅನಿರ್ವಚನೀಯ ಆನಂದ-ನೋವುಗಳ ಮಧ್ಯೆ ಗೊಂದಲಕ್ಕೆ ಬಿದ್ದು ಮತ್ತೆ ಮೌನಕ್ಕೆ ಶರಣಾದಳು. ಆರತಿ-ಮುಕೇಶರಂತೂ ಪ್ರೀತಿ-ಅಭಿಮಾನದಿಂದ ಮಗುವನ್ನು ಎತ್ತಿಕೊಂಡು ಮುದ್ದಾಡಿದರು. ಆಗೆಲ್ಲ ರೇಣುಕಾ ಅನುಭವಿಸುತ್ತಿದ್ದ ವೇದನೆ ಶಾರದಮ್ಮನವರಿಗೆ ಅಸ್ಪಷ್ಟವಾಗಿ ಗೋಚರವಾಗುತ್ತಿತ್ತು.

ಸುಧಾ ಎಲ್ಲರನ್ನೂ ಉದ್ದೇಶಿಸಿ- ಒಪ್ಪಂದದ ಪ್ರಕಾರ ರೇಣುಕಾಳಿಗೆ ಆರೈಕೆಗೆಂದು ತಿಂಗಳು-ತಿಂಗಳು ಕೊಟ್ಟ ಹಣವೂ ಸೇರಿ ಎಲ್ಲ ಬಾಧ್ಯತೆಗಳನ್ನೂ ಆರತಿ-ಮುಕೇಶ ದಂಪತಿ ನೆರವೇರಿಸಿವುದರಿಂದ ರೇಣುಕಾ ಹಡೆದ ಮಗುವನ್ನು ಕಾನೂನು ಮೇರೆಗೆ ಆರತಿಗೆ ಕೊಡಬೇಕೆಂದು ತಿಳಿಸಿ, ಈ ಸಂಬಂಧದ ಇನ್ನುಳಿದ ಕಾನೂನು ಪ್ರಕ್ರಿಯೆಗೆ ರೇಣುಕಾ ಕೆಲವು ಕಾಗದ-ಪತ್ರಗಳಿಗೆ ಸಹಿ ಮಾಡಬೇಕಾಗುತ್ತದೆ ಎಂದು ವಿವರಿಸಿ ಅದರಂತೆ ಅವಳ ಸಹಿ ಪಡೆದಳು. ಕೊನೆಗೂ ಅಂದು ರಾತ್ರಿಯೇ ಮಗುವಿನೊಂದಿಗೆ ಆರತಿ-ಮುಕೇಶ ದಂಪತಿ ಜೊತೆಗೆ ಸುಧಾ ಕೂಡ ಬೆಂಗಳೂರಿಗೆ ಹೊರಟು ನಿಂತಾಗ ವಿಭಿನ್ನ ಕಾರಣಗಳಿಗೆ ಅವರೆಲ್ಲರ ಕಣ್ಣಾಲಿಗಳು ತುಂಬಿ ಬಂದಿದ್ದವು.

***

‌ಇದೆಲ್ಲ ನೆಡೆದು ಆಗಲೇ ಮೂರು ವರ್ಷವಾಯಿತು ಎಂಬುದನ್ನು ನೆನೆಸಿಕೊಳ್ಳುತ್ತಾ ಶಾರದಮ್ಮ ‘ಅಬ್ಬಾ! ಎಂಥಾ ವಿಚಿತ್ರ ಅನುಭವ’ ಎಂದುಕೂಂಡರು. ಅಂತೂ ಕೊನೆಯಲ್ಲಿ ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ನೆಡೆಯಿತು ಅನ್ನಿಸಿದರೂ ಇದೆಲ್ಲದರಿಂದ ರೇಣುಕಾ ಅನುಭವಿಸಿದ ವೇದನೆ ಶಾರದಮ್ಮನವರಿಗೆ ಈಗಲೂ ಮರೆಯಲಾಗಿಲ್ಲ. ಅವರ ಕಿವಿಯಲ್ಲಿ ಮತ್ತೆ ಮತ್ತೆ ರೇಣುಕಾ ಕೇಳಿದ ಪ್ರಶ್ನೆ ಗುಂಯ್‌ಗುಡುತ್ತದೆ - ‘ಅಲ್ರೀ ಅವ್ವಾರಾ! ನನಗ ಹುಟ್ಟೋ ಮಗು ನನ್ನ ರೂಪ-ಗುಣ ಹೊತ್ತಿರಂಗಿಲ್ಲ ಅಂದ್ರೂ ನನ್ನ ರಕ್ತ -ಮಾಂಸ ಹಂಚ್ಕೊಂಡು ಹುಟ್ಟತೈತಿ ಅನ್ನೋದು ಸುಳ್ಳಂತಿರೇನ್ರಿ?’.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು