ಚಿದಂಬರನ ರಹಸ್ಯ

7
ಕಥೆ

ಚಿದಂಬರನ ರಹಸ್ಯ

Published:
Updated:
Deccan Herald

ಜೂನ್ 21, 2012

ಚಿರು ತನ್ನ ಕೋಣೆಯಿಡಿ ಇದ್ದೆಲ್ಲ ವಸ್ತುಗಳನ್ನು ಹರಡಿಹಾಕಿ ಹುಡುಕಾಡಿದ. ಹೊಸ ಕೆಲಸಕ್ಕೆ ಸೇರಲೆಂದು ತಯಾರಿಸಿಟ್ಟಿದ್ದ ರೆಸ್ಯೂಮ್ ಎಷ್ಟೇ ಹುಡುಕಿದರೂ ಕಾಣಿಸುತ್ತಿಲ್ಲ. ಎಲ್ಲಿ ಇಟ್ಟಿದ್ದೇನೆಂಬುದೂ ನೆನಪಾಗುತ್ತಿಲ್ಲ. ಹುಡುಕಿ ಹುಡುಕಿ ಸುಸ್ತಾಗಿ ಕುಳಿತವನು ಅಲ್ಲೆ ಬಿದ್ದಿದ್ದ ತನ್ನ ಬ್ಯಾಗನ್ನು ತೆಗೆದು ನೋಡಿದ. ಅದರಲ್ಲೆ ಆ ರೆಸ್ಯೂಮ್ ಅಡಗಿ ಕುಳಿತಿತ್ತು.

‘ನನಗೆ ಈ ಮರೆವು ಎಂಬುದು ಒಂದು ಶಾಪವೇ ಸರಿ. ನಿನ್ನೆಯಷ್ಟೇ ಈ ಬ್ಯಾಗಿನಲ್ಲಿರಿಸಿದ್ದನ್ನು ಮರೆತು ಹುಡುಕಿದೆ. ಛೆ! ಮತ್ತೆ ಇವನ್ನೆಲ್ಲ ಸರಿಯಾಗಿ ಜೋಡಿಸಿ ಇಡಬೇಕು’ ಎಂದುಕೊಂಡ. ಯಾವುದಕ್ಕೂ ಒಮ್ಮೆ ಡಾಕ್ಟರ್ ಬಳಿ ಈ ಮರೆವಿಗೆ ಮದ್ದಿದೆಯೇ ವಿಚಾರಿಸುವ ಎಂದುಕೊಳ್ಳುತ್ತ ಅಲ್ಲೆ ಹತ್ತಿರ ಇದ್ದ ರಿಲಾಕ್ಸ್ ಕ್ಲಿನಿಕ್ಕಿನೊಳಗೆ ಕಾಲಿಟ್ಟ.

ಡಾಕ್ಟರ್ ಸೂರ್ಯಪ್ರಕಾಶ ಅವರು ಇವನ ಸಮಸ್ಯೆಯನ್ನೆಲ್ಲ ಕೇಳಿಸಿಕೊಳ್ಳುತ್ತ ಅಲ್ಲೆ ಇದ್ದ ಬೈಕ್ ಕೀಯನ್ನು ಕಿವಿಯೊಳಗೆ ಹಾಕಿ ತಿರುಗಿಸುತ್ತ ಒಂದೆರಡು ಪ್ರಶ್ನೆ ಕೇಳಿದರು.

‘ನಿಮ್ಮ ಹೆಸರು...?’

‘ಚಿರು...’

‘ಚಿರು... ಅಷ್ಟೆಯೋ ಮುಂದೆನಾದರೂ ಇದೆಯೋ... ಚಿರಂಜೀವಿ ಅಥವಾ ಚಿರಾಯು... ಮತ್ತೇನಾದರು...’

ಅವರ ಮಾತನ್ನು ಅರ್ಧಕ್ಕೆ ತುಂಡರಿಸಿ ಚಿದಂಬರ ‘ಚಿರು ಅಷ್ಟೆ... ಅದರ ಹಿಂದೆಮುಂದೆ ಮತ್ತೇನೂ ಇಲ್ಲ, ಚಿದಂಬರನೂ ಅಲ್ಲ’ ಎಂದು ಗಂಭೀರವಾಗಿ ನುಡಿದ.

‘ಸರಿ, ನೀವು ಹುಟ್ಟಿದ ಇಸವಿ ನೆನಪಿದೆಯಾ?’

ನೆನಪಿಸಿಕೊಳ್ಳಲು ಪ್ರಯತ್ನಪಟ್ಟ. ‘ಇಲ್ಲ ನೆನಪಿಗೆ ಬರುತ್ತಿಲ್ಲ. ನಾನು ಹುಟ್ಟುವಾಗ ತುಂಬಾ ಸಣ್ಣವನಿದ್ದೆ. ಹಾಗಾಗಿ, ನೆನಪಾಗುತ್ತಿಲ್ಲ. ಆದರೆ, ವಯಸ್ಸು ಮಾತ್ರ ಇವತ್ತಿಗೆ ಮೂವತ್ತು ವರ್ಷ ಕಳೆದು ಎರಡು ತಿಂಗಳಾಯಿತು’

‘ಅಂದರೆ 1982ನೇ ಇಸವಿ ಅಂತಾಯಿತಲ್ಲ. ಇರಲಿ ಬಿಡಿ. ಹುಟ್ಟಿದ ಊರು ಯಾವುದು?’

ತುಂಬಾ ನೆನಪಿಸಿಕೊಳ್ಳಲು ಪ್ರಯತ್ನಿಸಿದ ನಂತರ ‘ಹೇಳಲೇ ಬೇಕಾ ಡಾಕ್ಟರ್. ಆಗ ನಾನು ಸಣ್ಣಮಗು ಅಂತ ಆಗಲೇ ಹೇಳಿದೆನಲ್ಲ. ಇವೆಲ್ಲ ಹೇಗೆ ನೆನಪಿದ್ದೀತು? ಇಷ್ಟಕ್ಕೂ ಯಾವ ಊರಾದರೇನು?’ ಎಂದು ಬರುತ್ತಿರುವ ಕೋಪವನ್ನು ತಡೆದುಕೊಂಡು ಹಲ್ಕಿರಿದ.

‘ಅದೆಲ್ಲ ಬೇಡ ಓದಿದ ಸ್ಕೂಲು...’

‘ಸರ್ಕಾರಿ ಶಾಲೆ ನಿರ್ವತ್ತೂರು’

‘ಇದು ನಿಜನಾ... ಸರಿಯಾಗಿ ನೆನಪಿದೆಯಾ?’

‘ನಿಜ, ನೂರಕ್ಕೆ ನೂರರಷ್ಟು ನಿಜ’

‘ಅಪ್ಪ- ಅಮ್ಮನ ಹೆಸರು..?’

‘ಅಪ್ಪ ವಾಸುದೇವರಾಯರು. ಅಮ್ಮನ ಹೆಸರು ನೆನಪಿಲ್ಲ’ 

ಚಿದಂಬರನದು ವಿಚಿತ್ರವಾದ ಸಮಸ್ಯೆ. ಅವನಿಗೆ ಒಮ್ಮೊಮ್ಮೆ ಎಷ್ಟೋ ಹಳೆಯ ಸಂಗತಿಗಳಿಂದ ಹಿಡಿದು ಆ ಕ್ಷಣದ ಘಟನೆಯೂ ಮರೆತು ಹೋಗುತ್ತಿತ್ತು. ತಾನು ಏನು ಮಾಡಬೇಕೆಂಬುದನ್ನೂ ಮರೆತು ಬಿಡುತ್ತಿದ್ದ. ಇವತ್ತಿನವರೆಗೂ ಅವನ ಅಮ್ಮನ ಹೆಸರೇ ನೆನಪಿಲ್ಲ. ತುಂಬಾ ಹಳೆಯ ಸಂಗತಿಗಳೂ ಥಟ್ಟನೆ ನೆನಪಾಗುತ್ತದೆ. ಹಲವು ಸಲ ತಾನಿದ್ದ ಸ್ಥಳ, ಮನೆಯ ಹೆಸರು, ಮನೆಯ ದಾರಿಯೂ ಆತನಿಗೆ ಮರೆತು ಹೋಗುತ್ತಿತ್ತು. ಚಿದಂಬರ ಮಾತ್ರ ಇದು ಕಾಯಿಲೆಯಲ್ಲ ತಲೆಯಲ್ಲಿ ಜ್ಞಾನ ಹೆಚ್ಚಿದ್ದವರಿಗೆ ಹಾಗೂ ತನ್ನಂತೆ ಹೆಚ್ಚು ಜ್ಞಾನಾರ್ಜನೆ ಮಾಡಿದವರಿಗೆ ಹೀಗಾಗುವುದು ಸಹಜ ಎಂದೇ ನಂಬಿದ್ದ.

ಡಾಕ್ಟರ್ ಕೈಯಲ್ಲಿದ್ದ ಕೀಯನ್ನು ತೋರಿಸುತ್ತ ಇದು ಏನೆಂದು ಕೇಳಿದರು.

‘ಅದು ಬೈಕಿನ್ ಕೀ. ನೀವು ಆಗಿಂದ ಕಿವಿಯೊಳಗಿಟ್ಟು ಡ್ರಿಲ್ ಮಾಡುತ್ತ ಆನಂದ ಅನುಭವಿಸುತ್ತ ಇದ್ದೀರಲ್ಲ... ಅದೇ’

ಡಾಕ್ಟರ್ ಒಮ್ಮೆ ಹುಬ್ಬು ಮೇಲೇರಿಸಿ ಇವನನ್ನು ನೋಡಿ ಮುಂದುವರಿಸಿದರು.

‘ನಿಮಗೆ ಈ ಕಾಯಿಲೆ ಎಷ್ಟು ಸಮಯದಿಂದ ಇದೆ?’

ಚಿದಂಬರನಿಗೆ ಈಗ ಕೋಪ ತಡೆಯಲಾಗಲಿಲ್ಲ. ಸಿಟ್ಟಿನಿಂದಲೇ ‘ನನಗೆ ಇದು ಕಾಯಿಲೆಯಲ್ಲ. ನನ್ನ ಜ್ಞಾನಾರ್ಜನೆ ಹೆಚ್ಚಿದ್ದರಿಂದ ಹೀಗಾಗುತ್ತಿದೆ. ನನ್ನ ಮೆದುಳು ತುಂಬಾ ಯೋಚನಾಶಕ್ತಿ ಹೊಂದಿದ್ದು ಹಲವು ಸಂಗತಿಗಳನ್ನು ಏಕಕಾಲದಲ್ಲಿ ಯೋಚಿಸುತ್ತಿರುತ್ತದೆ... ತಿಳಿಯಿತಾ...’ ಎಂದು ದಬಾಯಿಸಿ ಅಲ್ಲಿಂದ ಎದ್ದು ಬಂದ.

ಆ ದಿನದಿಂದಲೇ ಒಂದು ಸಣ್ಣ ಡೈರಿಯೊಂದನ್ನು ಕೈಯಲ್ಲಿಟ್ಟುಕೊಂಡೇ ತಿರುಗುತ್ತಿದ್ದ. ಅದರಲ್ಲಿ ಮರೆತು ಹೋಗುವ ಸಂಗತಿಗಳನ್ನು ಕೂಡಲೇ ಬರೆದಿಟ್ಟುಕೊಳ್ಳುತ್ತಿದ್ದ. ಮರುದಿನವೇ ಇಂಟರವ್ಯೂ ಕೊಡಲೆಂದು ಕಂಪನಿಯೊಂದರೊಳಗೆ ಕಾಲಿಟ್ಟ. ಇಂಟರವ್ಯೂ ಆರಂಭವಾಯಿತು. ಅಲ್ಲಿನ ಮ್ಯಾನೇಜರ್ಈ ತನನ್ನು ಪ್ರಶ್ನಿಸಿದ.

‘ನಿಮ್ಮ ಹೆಸರು?’

‘ರೆಸ್ಯೂಮ್ ನೋಡಿ ಅದರಲ್ಲೇ ಇದೆ’

‘ಇದ್ದರೇನಾಯಿತು... ನೀವು ಹೇಳಬಾರದಾ?’

ಚಿದಂಬರ ಆ ಮ್ಯಾನೇಜರ್‌ಗೆ ಗೊತ್ತಾಗದಂತೆ ಕೈಯಲ್ಲಿದ್ದ ಸಣ್ಣ ಡೈರಿ ತೆಗೆದು ‘ಚಿರು’ ಅಂದ.

‘ರೆಸ್ಯೂಮಿನಲ್ಲಿ ಚಿದಂಬರ ಅಂತಿದೆ!’

‘ಅದು ಅಪ್ಪ ಇಟ್ಟ ಹೆಸರು. ನನ್ನ ಹೆಸರು ಚಿರು ಅಷ್ಟೆ’ ಎಂದು ಸ್ವಲ್ಪ ಸಿಡುಕಿನಿಂದಲೇ ನುಡಿದ.

‘ಮುಂಚೆ ಕೆಲಸ ಮಾಡಿದ ಅನುಭವವಿದೆ ಅಂತ ಬರೆದಿದ್ದೀರಿ, ಏನ್ ಅನುಭವ ಇದೆ, ಎಲ್ಲಿ ಕೆಲಸ ಮಾಡಿದ್ದೀರಿ?’

‘ಅದೆಲ್ಲ ನೆನಪಾಗ್ತಿಲ್ಲ. ಅನುಭವ ಇದೆ ಅಷ್ಟೆ. ಅಲ್ಲಿ ಬರೆದಿರುವುದೆಲ್ಲ ಅಕ್ಷರಶಃ ಸತ್ಯ’

‘ಅನ್‌ ಮೆರಿಡ್ ಅಂತಾ ಇದೆ. ವಯಸ್ಸು ಮೂವತ್ತು ದಾಟಿದ್ರೂ ಇನ್ನೂ ಮದುವೆನೇ ಆಗಿಲ್ಲ, ಯಾಕೆ?’ ಎಂದು ವಿಚಿತ್ರವಾಗಿ ಚಿದಂಬರನನ್ನು ನೋಡಿದ.

‘ಅದೆಲ್ಲ ನಿಮಗೆ ಬೇಡದ ಸಂಗತಿ. ಕೆಲಸ ಇದ್ದರೆ ಕೊಡಿ ಅಷ್ಟೆ’ ಚಿದಂಬರ ಸ್ವಲ್ಪ ಖಾರವಾಗಿಯೇ ನುಡಿದ.

‘ಹಾಗಲ್ಲ ಚಿದಂಬರ್ ಅವರೇ, ನಾವು ನಿವೃತ್ತಿ ಹೊಂದುವುದರೊಳಗೆ ನಮ್ಮ ಮಕ್ಕಳು ಕೆಲಸಕ್ಕೆ ಸೇರಿರಬೇಕು. ಮದುವೆಯೇ ತಡ ಆದರೆ ಮಕ್ಕಳ ವಿದ್ಯಾಭ್ಯಾಸ ಮುಗಿಯುವುದರೊಳಗೆ ನಾವು ನಿವೃತ್ತರಾಗಿ ಬಿಡುತ್ತೇವೆ. ಬದುಕು ಒಂದು ಸಮತೋಲನದಲ್ಲಿ ಸಾಗಬೇಕು ನೋಡಿ’ ಎಂದು ತಾರ್ಕಿಕವಾಗಿ ಮಾತಾಡಿದ.

‘ಚಿದಂಬರ್ ಅಲ್ಲ ಚಿರು...’ ಎಂದು ಈ ಬಾರಿ ಸ್ವಲ್ಪ ಗಟ್ಟಿಯಾಗಿ ಹೇಳಿದ.

ಚಿದಂಬರ ನೋಡಲು ಆಕರ್ಷಕವಾಗಿದ್ದ. ಬುದ್ಧಿವಂತನಂತೆ ಕಾಣುತ್ತಿದ್ದ. ಹಾಗಾಗಿ, ಯಾರೂ ಇವನೆಡೆಗೆ ಸೆಳೆಯಲ್ಪಡುತ್ತಿದ್ದರು. ಈ ಮ್ಯಾನೇಜರ್ಕೂ ಡ ಇದಕ್ಕೆ ಹೊರತಲ್ಲ.

ಮ್ಯಾನೇಜರ್ ‘ಇಲ್ಲಿಯೇ ಇರಿ, ಈಗ ಬಂದೆ’ ಎಂದು ತನ್ನ ಬಾಸ್ ಬಳಿ ಹೋದ.

‘ಸರ್ ಹುಡುಗ ಸ್ವಲ್ಪ ಪೆದ್ದುಪೆದ್ದಾಗಿ ಆಡ್ತಾನೆ. ವಿದ್ಯಾಭ್ಯಾಸ ಚೆನ್ನಾಗಿದೆ. ಅನುಭವ ಇದೆ ಅಂತಾನೆ ಆದರೆ ಎಲ್ಲಿ, ಯಾವಾಗ, ಯಾವ ಕೆಲಸದಲ್ಲಿ ಅಂತ ಗೊತ್ತಿಲ್ಲ... ಸ್ವಲ್ಪ ವಿಚಿತ್ರ ಅನ್ನಿಸುತ್ತೆ, ಮತ್ತೆ ನಿಮ್ಮಿಷ್ಟ’

‘ಜ್ಞಾನ ಜಾಸ್ತಿ ಇರುವವರು ಸ್ವಲ್ಪ ಹಾಗೆಯೇ ಇರುತ್ತಾರೆ. ಮತ್ತೆ ಇಂಥವರಿಂದ ಕೆಲಸ ಮಾಡಿಸಿಕೊಳ್ಳುವುದು ಸುಲಭ. ನಾಳೆಯಿಂದಲೇ ಬರಲು ಹೇಳು. ಒಂದು ತಿಂಗಳು ನೋಡಿ ಬೇಡವೆನಿಸಿದರೆ ಕಳಿಸಿಬಿಟ್ಟರಾಯಿತು’ ಎಂದಾಗ ಮ್ಯಾನೇಜರ್ ಮನಸ್ಸಿನೊಳಗೆ ಎಲ್ಲ ಟೈಂ ವೇಸ್ಟ್ ಎಂದುಕೊಳ್ಳುತ್ತ ಚಿರುವಿಗೆ ನಾಳೆಯಿಂದ ಬರಲು ಹೇಳಿದ.

* * *

ಚಿದಂಬರ ಕೆಲಸದಲ್ಲಿ ನಿಪುಣ. ಕಂಪನಿಯ ಬಗ್ಗೆ ಸದಾ ಒಳ್ಳೆಯ ಭಾವನೆ ಇಟ್ಟುಕೊಂಡು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದ. ಹಾಗಾಗಿ, ಅವನನ್ನು ಅಲ್ಲಿಂದ ಕೆಲಸಬಿಟ್ಟು ಹೋಗುವ ಪ್ರಸಂಗ ಬರಲಿಲ್ಲ. ಅಲ್ಲದೆ, ಪ್ರತಿವರ್ಷ ಬಡ್ತಿ ದೊರೆತು ಮೇಲಿನ ಹುದ್ದೆಗೆ ಏರುತ್ತಾ ಹೋದ. ಅದೇ ಆಫೀಸಿನಲ್ಲಿದ್ದ ನಿತ್ಯಾ ಇವನಿಗೆ ಇಷ್ಟವಾಗತೊಡಗಿದ್ದಳು. ಅವಳಲ್ಲಿ ಹೇಳಲೋ ಬೇಡವೋ ಎಂದುಕೊಂಡು ಒಂದು ದಿನ ಹೇಳಿಯೇ ಬಿಟ್ಟ. ಅವಳು ಮಾತ್ರ ನಯವಾಗಿ ತಿರಸ್ಕರಿಸಿದಳು. ಚಿದಂಬರ ಅವಳ ಹೆಸರನ್ನು ತನ್ನ ಡೈರಿಯಲ್ಲಿ ಬರೆದಿಟ್ಟುಕೊಂಡ.

ವರ್ಷ ಐದು ಕಳೆಯುವುದರೊಳಗಾಗಿ ಈತ ಆ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿಬಿಟ್ಟಿದ್ದ. ಹೊಸ ಮನೆಯೊಂದನ್ನು ಕೊಂಡುಕೊಂಡ. ಈಗ ನಿತ್ಯಾ ಈತನಲ್ಲಿ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದಳು. ಒಮ್ಮೆ ತಿರಸ್ಕರಿಸಬೇಕೆಂದುಕೊಂಡನಾದರೂ ‘ಜೀವನದಲ್ಲಿ ತಾನು ಮೊತ್ತಮೊದಲು ಇಷ್ಟಪಟ್ಟ ಹುಡುಗಿ ಇವಳೇ. ಅಲ್ಲದೆ ಮೂವತ್ತಾರು ದಾಟಿದ ನನಗೆ ಬೇರೆ ಹುಡುಗಿ ಸಿಗುವುದೂ ಕಷ್ಟವೇ’ ಎಂದುಕೊಂಡು ಒಪ್ಪಿದ. ಸರಳ ರಿಜಿಸ್ಟರ್ ಮದುವೆಯಾದ. ನಿತ್ಯಾ ಕೆಲಸಕ್ಕೆ ರಾಜೀನಾಮೆ ಕೊಟ್ಟಳು. ಅವರ ದಾಂಪತ್ಯ ಜೀವನ ಸುಖಕರವಾಗಿ ನಡೆಯತೊಡಗಿತು.

* * *

ಚಿದಂಬರನ ಡೈರಿ ಮತ್ತು ಮರೆಗುಳಿತನದ ಬಗ್ಗೆ ಮಾತ್ರ ನಿತ್ಯಾಳಿಗೆ ಇನ್ನೂ ತಿಳಿದಿರಲಿಲ್ಲ. ಆ ದಿನ ಬೆಳಿಗ್ಗೆ ಕಾರಲ್ಲಿ ಹೊರಟವನು ಎರಡೇ ನಿಮಿಷಕ್ಕೆ ಮನೆಗೆ ಬಂದು ತನ್ನ ಕೋಣೆಯಲ್ಲಿ ಏನನ್ನೋ ಹುಡುಕುತ್ತಿದ್ದ. ನಿತ್ಯಾ ಇದನ್ನು ಕಂಡು ಕೇಳಿದಳು ‘ಏನು ಹುಡುಕುತ್ತಿರುವುದು?’ ನನ್ನ ಸಹಾಯ ಬೇಕಾ? ಎಂದುದಕ್ಕೆ ‘ಕಾರಿನ ಕೀ’ ಎಂದು ಉತ್ತರಿಸಿದಾಗ ‘ನಿಮಗೇನಾಗಿದೆ ಈಗಷ್ಟೆ ಕಾರಿನ ಕೀಯಿಲ್ಲದೆ ಅಷ್ಟು ದೂರ ಹೋಗಿ ತಿರುಗಿ ಬಂದದ್ದು ಹೇಗೆ?’ ಎಂದು ಕೇಳಿದ್ದಕ್ಕೆ ಉತ್ತರಿಸದೆ ಹೊರಟು ಹೋದ. ನಿತ್ಯಾಳಿಗೆ ಚಿರುವಿಗೆ ಏನಾಗಿದೆ ಇವತ್ತು? ಆಫೀಸಿನ ಯಾವುದೋ ತಲೆಬಿಸಿಯಲ್ಲಿ ಇನ್ನು ಏನೇನು ಮರೆಯುತ್ತಾರೋ ಅಂದುಕೊಂಡು ತಲೆ ಚಚ್ಚಿಕೊಂಡಳು.

ಅದೇ ದಿನ ಆ ಕಂಪನಿಯ ಮುಖ್ಯಸ್ಥರು ಈತನ ಕಾರ್ಯ ಚತುರತೆಗೆ ಮೆಚ್ಚಿ ಉತ್ತಮ ಕಾರ್ಯಾಧಿಕಾರಿ ಎಂಬ ಪ್ರಶಸ್ತಿ ನೀಡಲೆಂದು ಈತನನ್ನು ಕರೆಸಿದ್ದರು. ಅಲ್ಲಿನ ಎಲ್ಲ ಉದ್ಯೋಗಿಗಳೂ ಬೇರೆಬೇರೆ ಕಂಪನಿಯ ಮುಖ್ಯಸ್ಥರೂ ಸೇರಿದ್ದ ಆ ಸಭೆಯಲ್ಲಿ ಈತನನ್ನು ಹೊಗಳಿ ಸನ್ಮಾನಿಸಿದಾಗ ಚಿರು ಧನ್ಯತಾಭಾವದೊಂದಿಗೆ ಕರ ಮುಗಿದ.

ಆನಂದಬಾಷ್ಪವೂ ಬಂತು. ಕಣ್ಣು ಹನಿಗೂಡಿದ್ದರಿಂದ ಮುಖವನ್ನು ತೊಳೆಯಲೆಂದು ವಾಷ್‌ ರೂಮಿಗೆ ಹೋದ. ಕನ್ನಡಿಯನ್ನು ನೋಡಿದರೆ ಮುಖವೇ ಕಾಣಿಸುತ್ತಿಲ್ಲ. ಎದೆಯಲ್ಲಿ ಸಣ್ಣ ನಡುಕ ಹುಟ್ಟಿತು. ಮುಖ ಬೆವರಲು ಶುರುವಾಯಿತು. ಅಲ್ಲಿಂದ ಕೂಡಲೆ ಹೊರಕ್ಕೆ ಬಂದ. ಆ ಸಭೆಯಲ್ಲಿದ್ದವರೆಲ್ಲ ಚಿದಂಬರ ಗಾಬರಿಯಾಗಿರುವುದನ್ನು ಗಮನಿಸಿದರು. ಆ ಕಂಪನಿಯ ಮುಖ್ಯಸ್ಥ ಏನಾಯಿತೆಂದು ಕೇಳಿದಾಗ ‘ಏನಿಲ್ಲ ಸರ್, ನಾನು ಅರ್ಜೆಂಟಾಗಿ ಮನೆಗೆ ಹೊರಡಬೇಕು’ ಎಂದು ಹೇಳಿ ಅಲ್ಲಿಂದ ಹೊರಟೇ ಬಿಟ್ಟ.

‘ನಿಲ್ಲಿ ಚಿರು ನಿಮ್ಮ ಪ್ರಶಸ್ತಿಯನ್ನು ತೆಗೆದುಕೊಂಡು ಹೋಗಿ’ ಎಂದು ಕರೆಯುತ್ತಿದ್ದರೂ ಕಿವಿಗೆ ಹಾಕಿಕೊಳ್ಳದೆ ಮನೆಯತ್ತ ಹೊರಟ. ಎಲ್ಲರೂ  ಆಶ್ಚರ್ಯಪಟ್ಟುಕೊಂಡು ಅಟೆಂಡರ್ ಪರಮೇಶಿಯನ್ನು ‘ನಿನಗೇನಾದರೂ ಚಿರುಗೆ ವಾಷ್ ರೂಮಿನಲ್ಲಿ ಏನಾಯಿತೆಂಬುದು ಗೊತ್ತಾ?’ ಎಂದು ಕೇಳಿದ್ದಕ್ಕೆ ಆತ, ‘ಅವರು ಕನ್ನಡಿಯಲ್ಲಿ ನನ್ನ ಮುಖ ಕಾಣುತ್ತಿಲ್ಲ ಎಂದು ಹೆದರುತ್ತ ಓಡಿದರು. ಆದರೆ, ನಾನು ಕನ್ನಡಿಯನ್ನು ಸ್ವಚ್ಛ ಮಾಡಬೇಕೆಂದು ಮೊಳೆಯಿಂದ ತೆಗೆದು ಅಲ್ಲಿಯೇ ಕೆಳಗಿಟ್ಟಿದ್ದೆ. ಅದರೆದುರು ನಿಂತರೆ ಮುಖದವರೆಗೆ ಮಾತ್ರ ಕಾಣುತ್ತಿತ್ತು. ಅದಕ್ಕೇ ಹೆದರಿಕೊಂಡಿದ್ದಾರೆ. ನಾನು ಇದನ್ನು ಅವರಿಗೆ ಹೇಳುವುದರೊಳಗೇ ನಿಲ್ಲಿರೆಂದರೂ ನಿಲ್ಲದೆ ಕಾರಿನಲ್ಲಿ ಹೋಗಿಬಿಟ್ಟರು’ ಎಂದ. ‘ಹೋಗು ಕೂಡಲೆ ಅವರ ಮನೆಗೆ ಹೋಗಿ, ಇದನ್ನು ಹೇಳು’ ಎಂದು ಮುಖ್ಯಸ್ಥರು ತಾಕೀತು ಮಾಡಿದರು.

ಚಿದಂಬರನಿಗೆ ಎದೆನಡುಕ ಹೆಚ್ಚುತ್ತ ಹೋಯಿತು. ‘ಕನ್ನಡಿಯಲ್ಲಿ ಮುಖ ಕಾಣದಿದ್ದರೆ ಸಾವು ಹತ್ತಿರದಲ್ಲೇ ಇದೆ ಎಂದರ್ಥವಂತೆ. ಅಂದರೆ ನನ್ನ ಆಯಸ್ಸು ಮುಗಿಯಿತಾ?’ ಎಂದು ಇನ್ನೂ ಗಾಬರಿಯಾದ. ಅವನಿಗೆ ಮನೆ ಕಡೆ ಹೋಗುವ ರಸ್ತೆಯೇ ಮರೆತು ಹೋಯಿತು. ಕಣ್ಣೆದುರಿದ್ದ ಎರಡು ರಸ್ತೆಗಳಲ್ಲಿ ಎಡಕ್ಕೋ, ಬಲಕ್ಕೋ ಎಂಬುದೇ ನೆನಪಾಗಲಿಲ್ಲ.

ಡೈರಿಯಲ್ಲಿ ನೋಡೋಣವೆಂದು ಡೈರಿಯತ್ತ ಕಣ್ಣು ಹಾಯಿಸಿದರೆ ಡೈರಿಯೇ ಇಲ್ಲ. ಈ ಗಡಿಬಿಡಿಯಲ್ಲಿ ಡೈರಿಯನ್ನು ಆಫೀಸಿನಲ್ಲಿಯೇ ಬಿಟ್ಟು ಬಂದಿದ್ದ. ಇನ್ನೂ ಭಯ ಹೆಚ್ಚಿ ಬೇಗ ಮನೆ ಸೇರಬೇಕೆಂದು ಕಾರನ್ನು ಬಲಕ್ಕೆ ತಿರುಗಿಸಿಬಿಟ್ಟ. ಒಮ್ಮೆಲೆ ತಿರುಗಿಸಿದ್ದರಿಂದ ಲಾರಿಯೊಂದು ಇವನ ಕಾರಿಗಪ್ಪಳಿಸಿತು. ಈತನಿಗೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದ. ಆದರೆ, ಆತನಿಗೆ ಹೆದರಿಕೆಯಿಂದಾಗಿ ಎಚ್ಚರ ತಪ್ಪಿತ್ತೇ ಹೊರತು ಯಾವುದೇ ಆಘಾತವಾಗಿರಲಿಲ್ಲ.

* * *

ಚಿದಂಬರಿನಿಗೆ ಎಚ್ಚರಾದ ಬಳಿಕ ಮೊದಲಿನದೆಲ್ಲ ನೆನಪಾಗಿ, ನಾನಿಲ್ಲಿ ಯಾಕಿದ್ದೇನೆಂಬುದು ಮರೆತು ಹೋಗಿ ಆಸ್ಪತ್ರೆಯಿಂದ ಯಾರಿಗೂ ತಿಳಿಯದ ಹಾಗೆ ತಪ್ಪಿಸಿಕೊಂಡು ತನ್ನ ಊರಾದ ನಿರ್ವತ್ತೂರಿಗೆ ಹೊರಟುಬಿಟ್ಟ. ಬಸ್ಸಿನಿಂದಿಳಿದು ಮನೆಯತ್ತ ದಡದಡನೆ ಧಾವಿಸಿದ. ಮನೆಯ ಬಳಿ ನಿಂತು ನೋಡಿದರೆ ಚಿದಂಬರನಿಗೆ ಪರಮಾಶ್ಚರ್ಯ. ಅವನ ಹೆಂಡತಿ ಸುಮತಿಯನ್ನು ತಮ್ಮ ಚಿದಾನಂದ ಮದುವೆಯಾಗಿದ್ದಾನೆ. ಮೂರು ವರ್ಷದ ಮಗು ಚಿದಾನಂದನನ್ನು ಅಪ್ಪ... ಅಪ್ಪ... ಎಂದು ಕರೆಯುತ್ತ ಆಟವಾಡುತ್ತಿದೆ. ಯಾರಿಗೂ ಇವನ ನೆನಪಿಲ್ಲ.

ಈಗ ಮನೆಗೆ ಹೋಗಲೋ ಬೇಡವೋ ಎಂಬ ಪ್ರಶ್ನೆ ಬಹುವಾಗಿ ಕಾಡಿತಾದರೂ ಅವರು ಮರೆತರೇನು ಒಮ್ಮೆ ಎಲ್ಲರನ್ನೂ ನೋಡಿಯಾದರೂ ಇಲ್ಲಿಂದ ಹೊರಟು ಬಿಡುತ್ತೇನೆ ಎಂದುಕೊಳ್ಳುವಾಗ ಆತನ ಕಣ್ತುಂಬಿ ಬಂತು. ನಿಧಾನಕ್ಕೆ ಮುಂದೆ ಹೋದ. ಇವನ ತಮ್ಮ, ಹೆಂಡತಿ, ಆ ಮಗು ಈತನನ್ನು ನೋಡಲೇ ಇಲ್ಲವೋ ಅಥವಾ ನೋಡಿಯೂ ನೋಡದಂತೆ ಇದ್ದರೋ ಗೊತ್ತಿಲ್ಲ. ಆದರೆ, ಚಿದಂಬರನಿಗೆ ತನ್ನನ್ನು ನೋಡಿಯೇ ನಾನು ಬರಬಾರದೆಂಬ ಕಾರಣಕ್ಕೇ ಮನೆಯೊಳಕ್ಕೆ ಸೇರಿಕೊಂಡಂತೆ ಅನಿಸಿತು.

ಚಿದಂಬರ ಅದಾವುದಕ್ಕೂ ತಲೆಕೆಡಿಸಿಕೊಳ್ಳದೆ ಮನೆಯೊಳಗೆ ಕಾಲಿಟ್ಟ. ಆದರೆ, ಆ ಮೂವರು ತಮ್ಮ ಕೋಣೆಯನ್ನು ಸೇರಿಯಾಗಿತ್ತು. ಮನೆಯ ಸುತ್ತ ನೋಡಿದ. ಅಪ್ಪ, ಅಮ್ಮ ಎಲ್ಲಿಯೂ ಕಾಣಿಸಲಿಲ್ಲ. ಅಮ್ಮನ ಫೋಟೊ ಕಣ್ಣಿಗೆ ಬಿತ್ತು. ಅದರ ಕೆಳಗೆ ‘ದಿವಂಗತ ಅನುಸೂಯಾ ಮರಣ: 2016’ ಎಂದು ಬರೆದಿದ್ದನ್ನು ನೋಡಿ ಕಂಗಾಲಾದ. ಮತ್ತೆ ಕಣ್ಣಲ್ಲಿ ನೀರು ತುಂಬಿ ಗದ್ಗದಿತನಾದ.

‘ಅಪ್ಪ ಎಲ್ಲೂ ಕಾಣುತ್ತಿಲ್ಲವಲ್ಲ’ ಎಂದುಕೊಳ್ಳುತ್ತ ಹುಡುಕುತ್ತಿರುವಾಗ ಮನೆಯ ಹೊರಜಗಲಿಯಲ್ಲಿ ಇಬ್ಬರು ಮಾತನಾಡುವುದು ಕೇಳಿಸಿತು. ನಿಧಾನ ಹೋಗಿ ಬಾಗಿಲ ಸಂದಿಯಲ್ಲಿ ನಿಂತು ಇಣುಕಿದ. ಮತ್ತೆ ಆಶ್ಚರ್ಯ ಕಾದಿತ್ತು. ಅಪ್ಪನ ಆ ಜನ್ಮವೈರಿಯಂತಿದ್ದ ನರಸಿಂಹರಾಯರು ಬಂದಿದ್ದಾರೆ. ಅಲ್ಲದೆ ತುಂಬಾ ಸಲುಗೆಯಿಂದಲೇ ಮಾತನಾಡುತ್ತಿದ್ದಾರೆ. ನಮ್ಮೆಲ್ಲರ ಬಗ್ಗೆ ಮಾತಾಡುತ್ತ ‘ಈಗ ಚಿದಂಬರ ಎಲ್ಲಿದ್ದಾನೆ?’ ಎಂದು ಕೇಳಿದ್ದಕ್ಕೆ ಅಪ್ಪ, ‘ಎಲ್ಲಾ ಗ್ರಹಚಾರ ನೋಡಿ, ಆತನಿಗೆ ಮರೆವಿನ ಕಾಯಿಲೆಯಿತ್ತು. ಐದು ವರ್ಷದ ಹಿಂದೆ ಒಂದು ದಿನ ಕಾರಲ್ಲಿ ಬರುವಾಗ ಎದುರಿಗೆ ಅಡ್ಡಬಂದ ಲಾರಿಯನ್ನು ತಪ್ಪಿಸಲು ಯಾವುದು ಕ್ಲಚ್, ಯಾವುದು ಬ್ರೇಕ್, ಯಾವುದು ಎಕ್ಸಿಲೇಟರ್ ಎಂಬುದೇ ಮರೆತು ಹೋಗಿ ಬ್ರೇಕ್ ಒತ್ತುವ ಬದಲು ಎಕ್ಸಿಲೇಟರ್ ಒತ್ತಿ ಬಿಟ್ಟು ರಭಸವಾಗಿ ಕಾರು ಲಾರಿಗೆ ಹೊಡೆದು ತೀರಿಕೊಂಡ’ ಎಂದು ಕಣ್ಣೀರಿಟ್ಟದ್ದು ನೋಡಿ ಚಿದಂಬರನಿಗೆ ತಲೆಕೆಟ್ಟು ಹೋಯಿತು.

‘ಇವರಿಗೆಲ್ಲ ಏನಾಗಿದೆ?’ ಎಂದುಕೊಳ್ಳುತ್ತಿರುವಾಗ ಏನೋ ನೆನಪಾದಂತೆ ಅಮ್ಮನ ಫೋಟೊದ ಹತ್ತಿರ ಓಡಿ ಬಂದ. ಅದರ ಪಕ್ಕವೇ ಇವನ ಫೋಟೊವೂ ಇತ್ತು. ಅದರಲ್ಲಿ ದಿವಂಗತ ಚಿದಂಬರ, ಜನನ: ಮಾರ್ಚ್ 15, 1982 ಮರಣ: ಜೂನ್ 21, 2012 ಎಂದು ಬರೆದಿತ್ತು.

ಚಿದಂಬರ ಅದನ್ನೇ ದಿಟ್ಟಿಸಿ ನೋಡಿದ. ನೋಡು ನೋಡುತ್ತಿದ್ದಂತೆಯೇ ಆ ಫೋಟೊ ಮೊಳೆ ಸಮೇತ ಆತ ತಲೆಯ ಮೇಲೆ ಬಿತ್ತು. ಚಿದಂಬರ ಮುಕ್ತಿ ಹೊಂದಿದ.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !