ದಯೆಯಿರಲಿ ಪ್ರಾಣಿಗಳಲಿ

4

ದಯೆಯಿರಲಿ ಪ್ರಾಣಿಗಳಲಿ

Published:
Updated:
ಚಿತ್ರ: ಶಿಲ್ಪಾ ಕಬ್ಬಿಣಕಂತಿ

‘ಈ ಹುಡುಗನ ದೆಸೆಯಿಂದ ಸುಖ ಇಲ್ಲ’ ಎಂದಳು ಅಮ್ಮ.

‘ಏನಾಯ್ತು?’ ಕೇಳಿದರು ಅಪ್ಪ.

‘ಸ್ಕೂಲಿಂದ ಬರ್ಬೇಕಾದ್ರೆ ಒಂದು ನಾಯಿಮರಿ ಹಿಡ್ಕೊಂಡು ಬಂದಿದಾನೆ ನೋಡಿ. ಗೇಟಿನ ಹತ್ರ ಕುಂಯ್ಯೋ.. ಕುಂಯ್ಯೋ.. ಅಂತ ಕುಂಯ್ಗುಟ್ತಿರೋದು ಕೇಳ್ತಿಲ್ವಾ?’

‘ಓ, ಇದೆಲ್ಲಾ ಇವನ ಕಿತಾಪತೀನಾ? ನಾನೆಲ್ಲೋ ಬೀದಿನಾಯಿ ಅಂದ್ಕಂಡಿದ್ದೆ..’

‘ಆಗ್ಲೇ ಅರ್ಧ ಲೋಟ ಹಾಲು ಕುಡಿಸಿಯಾಯ್ತು. ಹೋಗುತ್ತೆ ಅದರ ಪಾಡಿಗೆ ಅಂದ್ಕೊಂಡಿದ್ರೆ ಅದು ಇಲ್ಲೇ ಸುಳೀತಿದೆ’

‘ಅಭೀ..’ ಅಪ್ಪ ಗಂಭೀರವಾಗಿ ಕರೆದರು.

ಸುತ್ತ ಪುಸ್ತಕ ಹರಡಿಟ್ಟುಕೊಂಡು, ಒಂದು ಪುಸ್ತಕದ ಎದುರು ಬಗ್ಗಿ ಕೂತು ಹೋಮ್‍ವರ್ಕ್ ಮಾಡುತ್ತಿದ್ದರೂ ಅಭಿಯ ಕಿವಿಗಳು ಅಪ್ಪ, ಅಮ್ಮನ ಮಾತುಕತೆಯತ್ತಲೇ ವಾಲಿದ್ದವು. ಅಪ್ಪ ಕರೆದ ಕೂಡಲೆ ಅಭಿ ತಲೆ ಮೇಲೆತ್ತಿ ಮಿಣ್ಣಗೆ ಅಪ್ಪನ ಮುಖ ನೋಡಿದ. ‘ಓದೋದೊಂದು ಬಿಟ್ಟು ಬೇರೆ ಎಲ್ಲಾ ನಿಂಗೆ ಬೇಕು ಅಲ್ವಾ? ನಾಯಿ ಸಾಕೋದು ಅಂದ್ರೆ ತಮಾಷೆ ಅಂದ್ಕಂಡಿದೀಯಾ? ಇಂತಾದ್ದೆಲ್ಲಾ ಚೇಷ್ಟೆ ನಂಗೆ ಇಷ್ಟವಾಗಲ್ಲ..’

ಎಲ್ಲಾ ಗೊತ್ತಿದೆ ಅಭಿಗೆ. ಅವನೇನು ಬೆರಳು ಚೀಪೋ ಮಗು ಅಲ್ಲವಲ್ಲ? ಹೊತ್ತು ಹೊತ್ತಿಗೆ ಒಂದು, ಎರಡು ಮಾಡಿಸೋಕೆ ಹೊರಗೆ ಕರ್ಕೊಂಡು ಹೋಗಬೇಕು. ‘ಬೇರೆಯೋರ ಮನೆ ಎದುರೇ ಇವಕ್ಕೆ ಇಸ್ಸಿ ಬರೋದು..’ ಎಂದು ಬೈದುಕೊಳ್ತಾ ಅಮ್ಮ ಅದೆಷ್ಟೋ ಸಲ ಬಕೆಟಿನಲ್ಲಿ ನೀರು ತುಂಬಿ ತಂದು ಮನೆಯೆದುರಿನ ಗಲೀಜಿನ ಮೇಲೆ ಸುರಿದು ಒಂದೇ ಕಡೆ ಇದ್ದಿದ್ದು ಸುತ್ತ ಚೆದುರಿ ಹೋಗುವಂತೆ ಮಾಡುವುದನ್ನು ಕಂಡು ಅಭಿಗೆ ನಗು. ಆಚೆ ಮನೆಯ ಅಂಕಲ್ ನಾಯಿಯ ಸರಪಳಿ ಹಿಡಿದುಕೊಂಡು ಅದನ್ನು ಕಾಲಾಡಿಸಲು ಕರೆದುಕೊಂಡು ಹೋಗುವುದನ್ನು ನೋಡಿದರೆ ನಾಯಿಯನ್ನು ಅಂಕಲ್ ಕರೆದುಕೊಂಡು ಹೋಗುತ್ತಿದ್ದಾರೋ, ನಾಯಿ ಅಂಕಲ್‍ನ ಕರೆದುಕೊಂಡು ಹೋಗುತ್ತಿದೆಯೋ ಗೊತ್ತಾಗುತ್ತಿರಲಿಲ್ಲ.

ಒಂದು ಸಲ ಮಳೆಗಾಲದಲ್ಲಿ ನಾಯಿ ತನ್ನ ಕುತ್ತಿಗೆಗೆ ಹಾಕಿದ್ದ ಸರಪಳಿ ಜಗ್ಗಿ ಜಗ್ಗಿ, ಅಂಕಲ್‍ನ ಮುಂದುಮುಂದಕ್ಕೆ ಎಳೆದುಕೊಂಡು ಹೋಗಿ ಅಂಕಲ್ ಜಾರಿ ಬಿದ್ದಿದ್ದರು. ‘ಬಿದ್ದಿದ್ದನ್ನ ಯಾರಾದರೂ ನೋಡಿಬಿಟ್ಟರಾ?’ ಎಂದು ಮೇಲೆದ್ದು ಹಿಂಭಾಗ ಸವರಿಕೊಂಡು ಅತ್ತ ಇತ್ತ ನೋಡಿದ್ದರು. ಗೇಟಿನ ಹತ್ತಿರ ನಿಂತಿದ್ದ ಅಭಿ ಈ ತಮಾಷೆ ನೋಡಿ ನಕ್ಕಿದ್ದ. ಅದನ್ನು ನೆನೆದು ಅಭಿಗೆ ಮತ್ತೆ ನಗು ಬಂತು. ಅಷ್ಟು ಗುಡುಮ ಆಗಿದ್ದಾರೆ ಅಂಕಲ್. ಅಂಥವರನ್ನೂ ನಾಯಿ ಎಳೆದುಕೊಂಡು ಹೋಗುತ್ತೆ ಅಂದರೆ ತನ್ನಂತಾ ಪುಟ್ಟ ಹುಡುಗನನ್ನು ಏನು ಮಾಡಬಹುದು? ಅಭಿ ತನ್ನಷ್ಟಕ್ಕೆ ನಗುತ್ತಿರುವುದನ್ನು ನೋಡಿ ಅಪ್ಪನ ಸಿಟ್ಟು ಮತ್ತಷ್ಟು ಏರಿತು.

‘ನನ್ನ ಮಾತು ಕೇಳಿದ್ರೆ ನಗು ಬರುತ್ತಾ ನಿಂಗೆ? ನಾಯಿ, ಬೆಕ್ಕು ಅಂತ ಅದರ ಹಿಂದೆ ಓಡಾಡ್ಕೊಂಡಿರು, ಪರೀಕ್ಷೇಲಿ ಬರುತ್ತೆ ಕುಂಬಳಕಾಯಿ. ಎಲ್ಲಿಂದ ಅದನ್ನ ತಂದ್ಯೋ ಅಲ್ಲೇ ಬಿಟ್ಟು ಬಾ..’

‘ನಾನು ಎಲ್ಲಿಂದ್ಲೂ ತಂದಿದ್ದಲ್ಲ ಅಪ್ಪಾ. ಅದೇ ನನ್ನ ಹಿಂದೆ ಹಿಂದೆ ಬಂತು..’ ಸತ್ಯ ಹೇಳಿದ.

‘ಆಯ್ತು, ಅದರ ಸಾವಾಸ ಬಿಟ್ಬಿಡು. ಹೊಟ್ಟೆಗೆ ಹಾಕ್ದಿದ್ರೆ ಬೇರೆ ಜಾಗ ಹುಡುಕ್ಕೊಂಡು ತನ್ನಷ್ಟಕ್ಕೆ ಹೋಗುತ್ತೆ..’

ಅಭಿ ವಿನೀತನಂತೆ ತಲೆ ಆಡಿಸಿ ಹೋಮ್‍ವರ್ಕಿನಲ್ಲಿ ಮುಳುಗಿದ. ರಾತ್ರಿ ಊಟ ಮಾಡಬೇಕಾದರೂ ಹೊರಗಡೆಯಿಂದ ಕುಂಯ್ ಕುಂಯ್ ಕೇಳುತ್ತಲೇ ಇತ್ತು. ಪಾಪ, ಅದು ಹೊಟ್ಟೆ ಹಸಿದು ಅಳುತ್ತಿದ್ದರೆ ತಾನು ಇಲ್ಲಿ ಮೂಗಿನವರೆಗೆ ತಿನ್ನುವುದಾ? ಅಭಿಯ ಗಂಟಲಲ್ಲಿ ಅನ್ನ ಇಳಿಯಲಿಲ್ಲ. ಮೊಸರನ್ನ ಕಲೆಸಿಯೇ ಕಲೆಸಿದ. ಅವನ ಫ್ರೆಂಡ್ ಒಬ್ಬ ಹೇಳಿದ್ದ ಕತೆ ನೆನಪಾಯ್ತು. ಅವನ ಮನೆಯ ಹತ್ತಿರ ಅದ್ಯಾರೋ ಪಾಪಿಗಳು ಮೀನಿನ ತುಂಡಲ್ಲಿ ಗಾಜಿನ ಪುಡಿ ಹಾಕಿ, ಅದನ್ನ ಒಂದು ನಾಯಿಮರಿ ತಿಂದು, ಸತ್ತೇ ಹೋಯಿತಂತೆ, ಪಾಪ. ಏನು ತಿನ್ನಬೇಕು, ಏನು ತಿನ್ನಬಾರದು ಅನ್ನೋದು ಪುಟ್ಟ ಮರಿಗೆ ಹೇಗೆ ಗೊತ್ತಿರುತ್ತದೆ? ‘ರಾತ್ರಿ ನಿದ್ದೆ ಮಾಡೋಕೆ ಬಿಡಲ್ಲ, ಕೂಗ್ತಿರುತ್ತೆ’ ಅಂತ ಅದನ್ನ ಫಿನಿಷ್ ಮಾಡಿದ್ದಂತೆ. ತನ್ನ ಅಪ್ಪ ಕೂಡಾ.. ಅಭಿ ವಾರೆಗಣ್ಣಿನಲ್ಲಿ ಅಪ್ಪನನ್ನು ಗಮನಿಸಿದ. ಊಟ ಮುಗಿಸಿದ್ದ ಅಪ್ಪ ಕೈ ತೊಳೆಯಲು ಮೇಲೇಳುತ್ತಾ ಹೇಳಿದರು, ‘ಗಂಟೆಗಟ್ಲೆ ತಟ್ಟೆ ಎದುರು ಕೂತಿರ್ಬೇಡ. ಸೇರ್ಲಿಲ್ಲ ಅಂದ್ರೆ ತಗೊಂಡ್ಹೋಗಿ ನಿನ್ನ ಮರಿಗೆ ಹಾಕು. ಬಡ್ಕೋತಿದೆ..’

ಅಭಿ ಅಚ್ಚರಿಯಿಂದ ಅಪ್ಪನ ಮುಖ ನೋಡಿದ. ‘ಥ್ಯಾಂಕ್ಸ್ ಅಪ್ಪಾ..’ ಅನ್ನುವಾಗ ದನಿಯಲ್ಲಿ ಕೃತಜ್ಞತೆ. ‘ತಡಿ, ಇನ್ನೊಂಚೂರು ಹಾಲು ಹಾಕ್ತೀನಿ ಅನ್ನಕ್ಕೆ..’ ಅಮ್ಮ ಲೋಟದಲ್ಲಿ ಹಾಲು ತಂದು ತಟ್ಟೆಯಲ್ಲಿದ್ದ ಅನ್ನಕ್ಕೆ ಹಾಕಿದಳು.

‘ಮನೆ ಒಳಗೆ ಸೇರ್ಸೋದು, ಹಿಂದೆಮುಂದೆ ಸುತ್ತೋದು ಮಾಡ್ತಿದ್ರೆ ನಾನು ಸುಮ್ನಿರಲ್ಲ. ಅದರಷ್ಟಕ್ಕೆ ಹೊರಗೆ ಇರೋದಾದ್ರೆ ಇದ್ಕೊಳ್ಲಿ..’ ಅಪ್ಪನ ಆಜ್ಞೆ. ಅಭಿಗೆ ಅದೆಷ್ಟು ಖುಷಿಯಾಗಿಬಿಟ್ಟಿತು ಅಂದರೆ ‘ಯಾ.. ಹೂ..’ ಎಂದು ಮನೆ ಪ್ರತಿಧ್ವನಿಸುವ ಹಾಗೆ ಜೋರಾಗಿ ಕೂಗಿಕೊಳ್ಳಬೇಕು ಅನಿಸಿಬಿಟ್ಟಿತು. ಕಷ್ಟಪಟ್ಟು ತನ್ನ ಉದ್ವೇಗ ನಿಯಂತ್ರಿಸಿಕೊಂಡ ಅಭಿ. ‘ನಮ್ಮನೇಲಿ ಒಂದು ನಾಯಿಮರಿ ಸಾಕ್ತಿದೀವಿ’ ಎಂದು ಯಾವಾಗ ಫ್ರೆಂಡ್ಸಿಗೆ ಹೇಳ್ತೀನೋ ಅನ್ನಿಸಿ ಅವನ ನಾಲಿಗೆ ತಕಪಕಗುಟ್ಟಿತು. ಅಪ್ಪ ಇಲ್ಲದಿದ್ದಾಗ ಎಲ್ಲಾ ಸೇರಿಕೊಂಡು ಅದನ್ನು ಮುದ್ದು ಮಾಡಿ ರಾಜನ ಹಾಗೆ ಸಾಕಬೇಕು ಅನ್ನಿಸಿ ಮೈಯಿಡೀ ಜುಮುಜುಮು. ರಾಜನ ಹಾಗಾ? ರಾಣಿಯ ಹಾಗಾ? ಅನುಮಾನ ಪರಿಹಾರ ಆಗಬೇಕಾದರೆ ಬೆಳಿಗ್ಗೆ ಕೇಳಬೇಕು ಅಮ್ಮನನ್ನ.

***

ಪ್ರತಿ ಮನೆಯಲ್ಲೂ ಹಸಿ ಕಸ, ಒಣ ಕಸ ವಿಂಗಡಿಸಿ ಕಸದ ಗಾಡಿಗೆ ಹಾಕಲು ಕಸದ ಬುಟ್ಟಿಗಳನ್ನು ಇಟ್ಟುಕೊಂಡಂತೆ ಅಭಿ ಮತ್ತು ಸುತ್ತಮುತ್ತ ಇರುವ ಅವನ ಸ್ನೇಹಿತರ ಮನೆಗಳಲ್ಲಿ ಒಂದು ಪ್ಲಾಸ್ಟಿಕ್ ಬಟ್ಟಲು ಮೀಸಲಿಡಲಾಗಿದೆ. ತಾವು ತಿನ್ನುವ ಊಟ, ತಿಂಡಿಯಲ್ಲಿ ಸ್ವಲ್ಪ ಉಳಿಸಿ ಅದಕ್ಕೆ ಹಾಕಿಟ್ಟು ನಾಯಿಮರಿಗೆ ತಿನ್ನಿಸುವುದೆಂದರೆ ಎಲ್ಲರಿಗೂ ಹಬ್ಬ. ‘ಜಾಸ್ತಿ ತಿನ್ನಿಸಿ ಹೊಟ್ಟೆ ಕೆಡಿಸಿಡ್ಬೇಡಿ..’ ಅನ್ನುತ್ತಿರುತ್ತಾಳೆ ಅಮ್ಮ.

‘ಪರ್ವಾಗಿಲ್ಲ ಕಣೇ. ಹೊಟ್ಟೆ ಕೆಟ್ರೆ ಹಸಿ ಹುಲ್ಲು ತಿಂದು ವಾಂತಿ ಮಾಡ್ಕೊಂಡು ಹೊಟ್ಟೆ ಸರಿ ಮಾಡ್ಕೋತಾವೆ’ ಹೇಳುತ್ತಾರೆ ಅಪ್ಪ.

ಹೌದಾ? ಪುಟಾಣಿ ಮರಿಗೆ ಅಷ್ಟೆಲ್ಲಾ ಬುದ್ಧಿ ಇರುತ್ತಾ? ಸಣ್ಣ ಮರಿ ಬೆಳೆದು ದೊಡ್ಡದಾಗಿ ತಮ್ಮ ಮನೆ ಮಾತ್ರಾ ಅಲ್ಲ, ಇಡೀ ಬೀದಿ ಕಾಯುವ ವಿಷಯ ಸ್ನೇಹಿತರ ಗುಂಪಿನಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಅಮ್ಮ ಉಪದೇಶ ಮಾಡುತ್ತಿರುತ್ತಾಳೆ, ‘ಮುಟ್ಟೋಕೆ ಹೋಗ್ಬೇಡಿ. ಕಚ್ಚಿದ್ರೆ ತಗೋಬೇಕಾಗುತ್ತೆ ಇಂಜಕ್ಷನ್. ಎಷ್ಟಾದ್ರೂ ಬೀದಿ ನಾಯಿ..’ ಊಟ, ತಿಂಡಿ ಮಾಡಬೇಕಾದರೆ ಸೋಪು ಹಾಕಿ ಕೈಕಾಲು ತೊಳೆದುಕೊಂಡು ಬರುವುದೂ ಕಡ್ಡಾಯ. ಜಾಣನಂತೆ ಅಮ್ಮ ಹೇಳಿದ್ದನ್ನೆಲ್ಲಾ ಪಾಲಿಸುತ್ತಾನೆ ಅಭಿ. ಸ್ನೇಹಿತರಿಗೂ ಎಲ್ಲಾ ಹೇಳಿಟ್ಟಿದ್ದಾನೆ. ತನ್ನ ಮುಖ ನೋಡುತ್ತಿದ್ದಂತೆ ಬಾಲ ಉದುರಿ ಹೋಗುವಂತೆ ಅಲ್ಲಾಡಿಸುವ ನಾಯಿಮರಿಯ ಪ್ರೀತಿಯ ಎದುರು ಇಂಥಾ ನಿಯಮಗಳೆಲ್ಲಾ ಅದ್ಯಾವ ಮಹಾ? ದೊಡ್ಡೋರು ಹೇಳೋದೆಲ್ಲಾ ಒಳ್ಳೇದಕ್ಕೇ...

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !