ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲದಂಕಮಲ್ಲ ಡೆರೆಕ್‌

Last Updated 12 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಅಂಗವೈಕಲ್ಯ ಅಥವಾ ತೀವ್ರ ನೋವು ಕೊಡುವ ಗಾಯಗಳು ತಮ್ಮ ಸಾಧನೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಾರೆ ಕೆಲವು ಹೀರೊಗಳು. ಸ್ಪರ್ಧೆಯ ವೇಳೆ ಅಸಾಮಾನ್ಯ ಧೈರ್ಯ ತೋರಿಸಿದ ಒಬ್ಬ ಕ್ರೀಡಾಪಟುವಿನ ಕಥೆ ಇಲ್ಲಿದೆ. 1988ರಲ್ಲಿ ಸೋಲ್‌ನಲ್ಲಿ ನಡೆದ ಒಲಿಂಪಿಕ್ಸ್‌ ಸಂದರ್ಭದಲ್ಲಿ ಬ್ರಿಟಿಷ್ ಕ್ರೀಡಾಪಟು ಡೆರೆಕ್ ರೆಡ್ಮಂಡ್‌ಗೆ ಗಾಯವಾಯಿತು. ಹಾಗಾಗಿ ಆತ ಕ್ರೀಡಾಕೂಟದ 400 ಮೀಟರ್‌ ಓಟದ ಸ್ಪರ್ಧೆಯಿಂದ ಹಿಂದೆ ಸರಿದ. ಹೀಗೆ ಹಿಂದೆ ಸರಿದಿದ್ದು ಮೊದಲ ಸುತ್ತಿನ ಹೀಟ್‌ಗೆ (ಹೀಟ್‌ ಅಂದರೆ, ಯಾರು ಅಂತಿಮ ಸುತ್ತಿನ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದನ್ನು ನಿರ್ಧರಿಸುವ ಸ್ಪರ್ಧೆ) ಕೆಲವೇ ಕ್ಷಣಗಳು ಇದ್ದಾಗ.

ಅದಾದ ನಂತರ, 1992ರವರೆಗೆ ರೆಡ್ಮಂಡ್‌ ಒಂದಲ್ಲ ಒಂದು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ. 1988ರಿಂದ 1992ರ ನಡುವಿನ ಅವಧಿಯಲ್ಲಿ ಅವನು ಐದು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. 1992ರಲ್ಲಿ ಬಾರ್ಸಿಲೋನಾದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆ ಆಯಿತು. ಅಂತೂ, ರೆಡ್ಮಂಡ್‌ ಪಾಲಿಗೆ ಎಲ್ಲವೂ ಒಳ್ಳೆಯದಾಗುತ್ತಿದೆ ಎನ್ನುವ ಸ್ಥಿತಿ ಇತ್ತು. ಆಗ ಆತ ಚೆನ್ನಾಗಿ ಓಡುತ್ತಿದ್ದ ಕೂಡ. ಮೊದಲ ಸುತ್ತಿನಲ್ಲಿ ಅತ್ಯಂತ ವೇಗವಾಗಿ ಓಡಿದ. ಕ್ವಾರ್ಟರ್‌ ಫೈನಲ್‌ ಹೀಟ್‌ನಲ್ಲಿ ಗೆಲುವು ಸಾಧಿಸಿದ. ಸೆಮಿಫೈನಲ್‌ ಸ್ಪರ್ಧೆಯಲ್ಲಿ ರೆಡ್ಮಂಡ್‌ ಓಟ ಆರಂಭಿಸಿದ, ಚೆನ್ನಾಗಿ ಓಡುತ್ತಿದ್ದ ಕೂಡ.

ಓಟದ ಟ್ರ್ಯಾಕ್‌ನಲ್ಲಿ 150 ಮೀಟರ್‌ ಓಟ ಮುಗಿಸಿ ಆಗಿತ್ತು. ಆಗ ಇದ್ದಕ್ಕಿದ್ದಂತೆ ಆತನ ಬಲತೊಡೆಯ ಸ್ನಾಯುಗಳಿಗೆ ತೀವ್ರ ಗಾಯವಾಯಿತು. ಆತ ನೆಲದ ಮೇಲೆ ಬಿದ್ದ. ಸ್ಟ್ರೆಚರ್‌ ಹಿಡಿದವರು ತನ್ನತ್ತ ಧಾವಿಸಿ ಬರುತ್ತಿರುವುದನ್ನು ಕಂಡ ರೆಡ್ಮಂಡ್, ತಾನು ಓಟವನ್ನು ಪೂರ್ಣಗೊಳಿಸಬೇಕು ಎಂದು ತೀರ್ಮಾನ ಮಾಡಿಕೊಂಡ. ಮೇಲೆ ಜಿಗಿದು ನಿಂತ, ತೀವ್ರ ನೋವಿನಲ್ಲೂ ಓಡಲು ಆರಂಭಿಸಿದ.

ತನ್ನ ಮಗನಿಗೆ ಹೀಗಾಗಿದ್ದನ್ನು ಕಂಡ ಅವನ ಅಪ್ಪ, ತಾನು ನಿಂತು ಓಟವನ್ನು ನೋಡುತ್ತಿದ್ದ ಜಾಗದಿಂದ ಟ್ರ್ಯಾಕ್‌ ಕಡೆ ಧಾವಿಸಿದರು. ಅಪ್ಪ ಮತ್ತು ಮಗ ಪರಸ್ಪರ ಕೈ ಹಿಡಿದುಕೊಂಡರು. ಮಗ ನೋವಿನಿಂದ ಕಿರುಚುತ್ತಿದ್ದರೂ, ಇಬ್ಬರೂ ಓಟ ಮುಂದುವರಿಸಿದರು.

ಓಟ ಅಂತ್ಯಗೊಳ್ಳುವ ಜಾಗ ಬರುತ್ತಿದ್ದಂತೆ, ಅಪ್ಪ ತನ್ನ ಮಗನ ಕೈ ಬಿಟ್ಟ. ಮಗ ಓಟವನ್ನು ತಾನಾಗಿಯೇ ಪೂರ್ಣಗೊಳಿಸಲು ಅವಕಾಶ ಮಾಡಿಕೊಟ್ಟ. ರೆಡ್ಮಂಡ್ ತಾನಾಗಿಯೇ ಗುರಿ ಮುಟ್ಟಿದ. ಆ ಹೊತ್ತಿನಲ್ಲಿ ಆ ಕ್ರೀಡಾಂಗಣದಲ್ಲಿ ಸೇರಿದ್ದ ಅಂದಾಜು 65 ಸಾವಿರ ಜನ ಎದ್ದು ನಿಂತು ರೆಡ್ಮಂಡ್‌ಗೆ ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT