ಬುಧವಾರ, ಡಿಸೆಂಬರ್ 2, 2020
25 °C

ಕಥೆ: ಮುಸ್ಸಂಜೆ ಮಾತು

ಕೊಟ್ರೇಶ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

‘ಮದುವೆ ತುಂಬಾ ಚೆನ್ನಾಗಿ ಆಯ್ತಪ್ಪ... ಜನ ಕಡಿಮೆ ಇದ್ದರೂ ಯಾವುದಕ್ಕೂ ಕೊರತೆ ಇರಲಿಲ್ಲ. ಅಂತೂ ಮಗನ ಮದುವೆ ಅದ್ಧೂರಿಯಾಗಿ ಮಾಡಿ ಮುಗಿಸಿದೆ’

ಮೋರಗೇರಿ ಮಂಜಣ್ಣನವರು ರಾಜಣ್ಣಗೆ ಮೆಚ್ಚುಗೆ ಸೂಚಿಸುತ್ತಾ ಕೆರೆ ದಡದಲ್ಲಿದ್ದ ಒಂದು ಸಮತಟ್ಟಾದ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಾ ಅಂದರು.

‘ಏನೋ ಆಯ್ತು ಬಿಡೋ.. ಆದರೂ ಮಾಡಲೇಬೇಕಿತ್ತಲ್ಲ. ಇಲ್ಲವೆಂದರೆ ಅವನೇ ಮಾಡಿಕೊಂಡಿರುತ್ತಿದ್ದ. ಹೇಗಿದ್ದರೂ ಆಗೋ ಮದುವೆಗೆ ಹಿರೇತನ ತೋರಿಸಿದ್ದಷ್ಟೆ. ಇದ್ದ ಒಬ್ಬನೇ ಮಗ ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾದನಲ್ಲ ಅನ್ನುವ ಬೇಸರ ರಾಜಣ್ಣನ ಮಾತಿನಲ್ಲಿ ಎದ್ದು ಕಾಣುತ್ತಿತ್ತು. 

‘ಈಗಿನ ಕಾಲದಲ್ಲೂ ಅದೆಲ್ಲ ಎಲ್ಲಿ ನಡೆಯುತ್ತೋ ರಾಜು.. ಅದೆಲ್ಲ ಮುಗಿದು ಹೋಯಿತು. ಜಾತಿ ಅನ್ನುವುದು ಈಗ ಬರೀ ಎಲೆಕ್ಷನ್‌ಗೆ, ಸರ್ಕಾರಿ ಸೌಲಭ್ಯಗಳನ್ನು ಪಡೆಯೋದಕ್ಕೆ ಮಾತ್ರ ಸೀಮಿತ. ನಿನ್ನ ಮಗನಾದರೂ ಜಾತಿನೋ ಪಾತಿನೋ ಮದುವೆಯಾದರೂ ಆದ. ನನ್ನ ಮಗ ಮದುವೇನೇ ಬೇಡ ಅಂತಾನಲ್ಲೋ.. ಈಗಿನ ಕಾಲದ ಹುಡುಗರ ಮನಸೇ ಅರ್ಥ ಆಗಲ್ಲ ಮಾರಾಯ. ಆ ಕೊಟ್ಟೂರು ಕೊಟ್ರಯ್ಯ ಅವನಿಗೆ ಯಾವಾಗ ಬುದ್ಧಿ ಕೊಡುತ್ತಾನೋ ಏನೋ...’ ಎಂದರು ಮಂಜಣ್ಣ

‘ಆಗ್ತಾನೆ ಬಿಡೋ ಮಂಜೂ.. ಆಗದೇ ಇರೋಕೇನು. ಅವನಿಗೇನು ಕಡಿಮೆಯಾಗಿದೆ. ಅಮೇರಿಕಾದಲ್ಲಿ ತಾನೇ ಅವನಿರೋದು. ಅಲ್ಲೇ ಯಾವುದಾದರೂ ಒಂದು ಬಿಳಿ ಜಿರಲೆಯನ್ನು ಮದುವೆ ಆಗಿ ಬರ್ತಾನೆ.. ನೀನು ಮನೆ ತುಂಬಿಸಿಕೊಳ್ಳೊದಕ್ಕೆ ರೆಡಿಯಾಗಿರು..’ ರಾಜಣ್ಣ ತಮ್ಮ ಬೇಸರದಲ್ಲಿಯೂ ಗೆಳೆಯನಿಗೆ ಹಾಸ್ಯ ಮಾಡಿದರು.

ನೋಡೋಣ ಏನಾಗುತ್ತೆ ಅಂತ ಎಂದು ಹಣೆಯ ಮೇಲಿನ ಚಿಂತೆಯ ಗೆರೆಗಳ ನಡುವೆಯೇ ಅನ್ನುತ್ತ ಬೇರೆ ವಿಷಯದ ಕಡೆಗೆ ಮಾತು ತಿರುಗಿಸಿ ಹರಟೆ ಹೊಡೆಯುತ್ತಾ ಕುಳಿತರು.

ಸುಮಾರು 50 ವರ್ಷಗಳ ಸ್ನೇಹ ಅವರದು. ಇಬ್ಬರೂ ಗೋವೇರಹಳ್ಳಿಯಲ್ಲಿಯೇ ಹುಟ್ಟಿ ಬೆಳೆದವರು. ಶಾಲೆಗೂ ಜೊತೆ ಜೊತೆಯಾಗಿಯೇ ಹೋದವರು. ಮೋರಗೇರಿ ಮಂಜಣ್ಣನ ತಂದೆ ಒಳ್ಳೆ ಜಮೀನುದಾರರು. ಮನೆ ಕಡೆಗೆ ಉಡುವುದಕ್ಕೆ ತೊಡುವುದಕ್ಕೆ ಕೊರತೆ ಇರಲಿಲ್ಲ. ಇದ್ದ ಇಬ್ಬರು ಮಕ್ಕಳನ್ನು ತುಂಬಾ ಶಿಸ್ತಿನಿಂದ ಬೆಳೆಸಿದ್ದರು.

ಮಂಜಣ್ಣನೇ ಮನೆಗೆ ಹಿರಿಮಗ. ಅನಿರೀಕ್ಷಿತವಾಗಿ ತಂದೆ ತೀರಿಕೊಂಡಾಗ ವಿದ್ಯಾಭ್ಯಾಸವನ್ನು ನಿಲ್ಲಿಸಿ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡು ನೋಡುವವರು ಸೈ ಅನ್ನುವಂತೆ ಬದುಕಿದ್ದರು.

ರಾಜಣ್ಣನವರೂ ಮನೆ ಕಡೆಗೆ ತಕ್ಕ ಮಟ್ಟಿಗಿದ್ದರು. ಅವರ ತಂದೆ ಯಾವುದೋ ಅರೆ ಸರ್ಕಾರಿ ನೌಕರಿ ಮಾಡುತ್ತಿದ್ದರೂ ಇದ್ದ ಇಬ್ಬರು ಮಕ್ಕಳಿಗೆ ಏನೂ ಕಡಿಮೆ ಮಾಡದೇ ಬೆಳೆಸಿದ್ದರು. ಹಾಗೂ ಅವರೂ ಸಹ ಕರ್ತವ್ಯ ಮುಗಿಸಿದವರಂತೆ ಜೀವನದಿಂದ ಬಹು ಬೇಗ ಎದ್ದು ಹೋಗಿದ್ದರು. ರಾಜಣ್ಣ ಮತ್ತು ಮಂಜಣ್ಣನವರಲ್ಲಿ ಇಂತಹ ಅನೇಕ ಸಾಮ್ಯತೆಳಿದ್ದುದರಿಂದಲೋ ಅವರಿಬ್ಬರ ಸ್ನೇಹ ಕಾಲ ಮಾಗಿದಂತೆ ಗಟ್ಟಿಯಾಗುತ್ತಲೇ ಹೋಗಿತ್ತು. ಇದೀಗ ತಮ್ಮ ಜೀವನದ ಸಂಜೆಯನ್ನು ಕಳೆಯುತ್ತಿದ್ದ ಗೆಳೆಯರಿಬ್ಬರೂ ಪ್ರತಿದಿನ ಸಾಯಂಕಾಲ ಊರಾಚೆಗಿನ ಕೆರೆ ದಂಡೆಗೆ ಬಂದು ಕುಳಿತುಕೊಂಡು ಲೋಕಾಭಿರಾಮವಾಗಿ ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು. ಪ್ರತಿದಿನ ಸಂಜೆ ಅವರಿಬ್ಬರೂ ಅಲ್ಲಿ ಕುಳಿತುಕೊಂಡಿರುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಮಗನ ಮದುವೆ ಎಂದು ಮೂರು ದಿನ ಬಿಟ್ಟದ್ದೇ ರಾಜಣ್ಣಗೆ ಏನೋ ಕಳೆದುಕೊಂಡಂತಾಗಿತ್ತು.

ಎಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಯಾವುದೋ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗ ಅನ್ಯಜಾತಿಯ  ತನ್ನದೇ ಸಹೋದ್ಯೋಗಿಯನ್ನು ಪ್ರೀತಿಸಿ ಮನೆಯಲ್ಲಿ ಪ್ರಸ್ತಾಪಿಸಿದಾಗ  ಸುತಾರಾಂ ಬೇಡವೆಂದರು. ನೀವಾಗಿ ಒಪ್ಪಿ ಮಾಡಿದರೆ ಸರಿ. ಇಲ್ಲವಾದಲ್ಲಿ ನಾನು ರಿಜಿಸ್ಟರ್ ಮದುವೆ ಆಗುವೆ ಸರಿಯಾಗಿ ಯೋಚಿಸಿ ನಿಮ್ಮ ನಿರ್ಧಾರ ತಿಳಿಸಿ ಎಂದು ಹೇಳಿ ಮಗ ಬೆಂಗಳೂರಿಗೆ ತೆರಳಿದಾಗ ಅವರಿಗಿಂತಲೂ ಅವರ ಪತ್ನಿ ಮಂಗಳಮ್ಮನವರಿಗೆ ಅಘಾತವಾಗಿತ್ತು. ಮೂರು ದಿನ ಮಂಕುಬಡಿದವರಂತೆ ಇದ್ದರು. ಆಗ ಇದೇ ಮಂಜಣ್ಣನವರು ಅವರ ಮಾನಸಿಕ ಬಲವರ್ಧನೆಗೆ ಸಹಾಯ ಮಾಡಿದ್ದರು. ಇರುವ ಒಬ್ಬನೇ ಮಗ. ನಿನ್ನದು ಆಳಿ ಬಾಳಿಯಾಯಿತು. ಇನ್ನೇನಿದ್ದರೂ ಮಕ್ಕಳ ಕಾಲ. ಅವರ ಬದುಕನ್ನು ಬೇಕಾದಂತೆ ಮುನ್ನಡೆಸಿಕೊಂಡು ಹೋಗುವ ಅಧಿಕಾರ ಅವರದು. ಹೀಗೆ ಚಿಂತೆ ಮಾಡುತ್ತಾ ಕುಳಿತರೆ ಎಲ್ಲಾ ಸರಿ ಹೋದೀತೆ ಎಂದು ಪ್ರೀತಿಯಿಂದ ಗದರಿಸಿ ಮನೆಗೆ ಬಂದು ಏನವಾ ತಂಗಿ ಹಿಂಗ ಊಟ ನಿದ್ದೆ ಬಿಟ್ಟು ಕುಂತ್ರ ಎಲ್ಲ ಸರಿ ಹೋದೀತೇನು? ನಿನ ಮಗಾ ಅಷ್ಟು ಕಂಡೀಷನ್ ಮಾಡಿ ಹೇಳ್ತಾನಂದ್ರ ಅವಂದು ಬದಲಾಗೋ ಮನಸಲ್ಲ. ಸರಿ ಸರಿ ಎದ್ದೇಳ್ರಿ. ಮದುವೆ ಆದ ಮ್ಯಾಲ ಅವ್ರು ಬಂದು ಇಲ್ಲೇ ಇರೂ ಮಂದಿ ಅಲ್ಲ. ಅವರಿಷ್ಟದಂಗ ಮದುವಿ ಮಾಡಿ ಕೊಡ್ರಿ. ಅವರ ಹಣೆಬರಹದಾಗ ಹೆಂಗ ಇರ್ತದೋ ಹಂಗಾಗ್ಲಿ ಅಂದು  ಇಷ್ಟವಿಲ್ಲದ ಮದುವೆಗೆ ಅವರನ್ನು ಅಣಿ ಮಾಡಿದ್ದರು.

ದಂಪತಿಗಳು ಸೊಸೆಯ ಅಂದ ಹಾಗೂ ಅವರನ್ನು ಗೌರವದಿಂದ ಮಾತನಾಡಿಸಿದ ಸಂಸ್ಕಾರ ನೋಡಿ ಇದ್ದ ಬೇಸರ ಮರೆತು ಯಾವುದಕ್ಕೂ ಕಡಿಮೆ ಮಾಡದಂತೆ ಬೀಗರಿಗೂ ಬೇಸರವಾಗದಂತೆ ತಮ್ಮ ಕರ್ತವ್ಯ ಎಂಬಂತೆ ಮಗನ ಮದುವೆ ಮಾಡಿ ಮುಗಿಸಿದ್ದರು.

ಹೀಗೇ ದಿನಗರುಳುರುತ್ತಾ ಹೋದಂತೆ ಒಂದು ದಿನ ಎಂದಿನಂತೆ ರಾಜಣ್ಣ ಕೆರೆ ದಂಡೆಗೆ ಬಂದು ಕೂತಾಗ ಅವತ್ತು ಮಂಜಣ್ಣ ಆ ಕಡೆಗೆ ಸುಳಿಯಲಿಲ್ಲ. ಗೆಳೆಯನಿಗೆ ಆರೋಗ್ಯವೇನಾದರೂ ಕೆಟ್ಟಿರಬಹುದೇನೋ ಎಂದು ಸೀದ ಅವನ ಮನೆಯ ಕಡೆಗೇ ತಮ್ಮ ಹಾದಿ ತಿರುಗಿಸಿದರು. ಅವರ ಮನೆಗೆ ಹೋದಾಗ ಮಂಜಣ್ಣನ ಮಗ ಅಮೆರಿಕದಿಂದ ಬಂದಿರುವುದನ್ನು ಕಂಡರು. ಜೊತೆಗೆ ಅವನ ಗೆಳೆಯನೂ ಇದ್ದಂತಿತ್ತು. ಇವರು ಹೋದಾಗ ಮನೆಯ ವಾತಾವರಣ ಏಕೋ ಗಂಭೀರವಾಗಿ ಇದ್ದುದನ್ನು ಗಮನಿಸಿದ ರಾಜಣ್ಣ ಇದು ಸರಿಯಾದ ಸಮಯವಲ್ಲವೆಂದರಿತು ಗೆಳೆಯನಿಗೆ ತಿಳಿಸಿ ಅಲ್ಲಿಂದ ತಮ್ಮ ಮನೆಯೆಡೆಗೆ ನಡೆದರು.

ಮರು ದಿನವೂ ಗೆಳೆಯ ಕೆರೆಯ ಕಡೆಗೆ ಬರಲಿಲ್ಲದಾದಾಗ ಏನಾದರೂ ಪ್ರಮಾದವಾಗಿರಬಹುದಾ ಎಂದು ಯೋಚನೆಗಿಟ್ಟುಕೊಂಡಿತು. ಮಗ ಏನಾದರೂ ನಾನು ಹೇಳಿದ ಹಾಗೆ ಅಮೇರಿಕಾದಲ್ಲಿ ಮದುವೆ ಆಗಿರಬಹುದಾ ಅನಿಸಿದರೂ ಅಂಥ ವಿಷಯಗಳನ್ನೆಲ್ಲಾ ಮಂಜಣ್ಣ ಗಟ್ಟಿಗ. ತಮ್ಮ ಮಗನ ವಿಷಯದಲ್ಲೇ ತಮಗಿದ್ದ ಬೇಸರವನ್ನು ಹೋಗಲಾಡಿಸಿದವನು. ವಿಷಯ ಬೇರೆ ಏನೋ ಇರಬೇಕು. ಹೇಗಿದ್ದರೂ ಇವತ್ತಲ್ಲ ನಾಳೆ ನಮ್ಮ ಮಾಮೂಲಿ ಜಾಗಕ್ಕೆ ಬಂದಾಗ ಗೊತ್ತಾಗೇ ಆಗುತ್ತದೆ ಎಂದುಕೊಂಡು ಮನೆಯೆಡೆಗೆ ಕಾಲು ಹಾಕಿದರು.

ಹಾಗೂ ಮತ್ತೆ ಮೂರು ದಿನಗಳ ನಂತರ ಮಂಜಣ್ಣ ಜೋಲು ಮುಖ ಹಾಕಿಕೊಂಡು ಇನ್ನು ಇರಲಾರೆನೆಂಬಂತೆ ಕೆರೆಯ ಕಡೆಗೆ ದಾಪುಗಾಲಿಡುತ್ತಾ ಬಂದರು. ಅವರ ಮೇಲೆ ಆಕಾಶವೇ ಕಳಚಿ ಬಿದ್ದಿದೆಯೇನೋ ಎಂಬಂತಿದ್ದರು. ಅವರ ಮುಖ ನೋಡಿ ‘ಏನೋ ಮಂಜು ಮೂರೇ ದಿನಕ್ಕೆ ತಿಂಗಳು ಕಾಯಿಲೆ ಬಂದು ಬಿದ್ದವರ ಹಾಗೆ ಆಗಿರುವೆ. ಏನಾಯಿತೋ.. ಅಂತಾದ್ದು ಅನ್ನುತ್ತಿದ್ದಂತೆ ಅಷ್ಟು ದಿನ ಕಾಯ್ದಿಟ್ಟುಕೊಂಡಿದ್ದೋ ಅನ್ನುವಂತೆ ಮಂಜಣ್ಣ ರಾಜಣ್ಣನ ತೊಡೆಯ ಮೇಲೆ ತಲೆಯೂರಿ ಜೋರಾಗಿ ಅಳತೊಡಗಿದರು. ಅದನ್ನು ನೋಡಿ ರಾಜಣ್ಣನಿಗೆ ಗಾಬರಿಯಾದರೂ ತೋರಿಸಿಕೊಳ್ಳದೆ ದು:ಖವೆಲ್ಲ ಕಣ್ಣೀರಲ್ಲಿ ಕರಗಿ ಹೋಗಲಿ ಅನ್ನುವಂತೆ ಅವರ ಬೆನ್ನನ್ನು ನೇವರಿಸುತ್ತಾ ಸುಮ್ಮನೆ ಕೂತರು. ಎಷ್ಟೋ ಹೊತ್ತಾದ ಮೇಲೆ ಸುಧಾರಿಸಿಕೊಂಡು ಹೆಗಲ ಮೇಲಿನ ಟವಲಿನಿಂದ ಮುಖ ಒರೆಸಿಕೊಳ್ಳುತ್ತಾ ಎದ್ದು ಕೂತ ಮಂಜಣ್ಣ ‘ಅನರ್ಥವಾಗಿ ಹೋಯಿತು ರಾಜೂ.. ಪ್ರಪಂಚದಲ್ಲಿ ಹೀಗೆಲ್ಲ ನಡೆಯಬಹುದು ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ನಾನು. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗ ಅಮೇರಿಕಾದಲ್ಲಿ ಕೆಲಸ ಮಾಡುತ್ತಾನೆ ಎಂದು ಬೀಗುತ್ತದ್ದೆ. ಆದರೆ ಅವನೇ ನಮ್ಮೆಲ್ಲಾ ಆಶೋತ್ತರಗಳಿಗೆ ಕೊಳ್ಳಿ ಇಡುತ್ತಾನೆ ಎಂದೆಣಿಸಿರಲಿಲ್ಲ.’

 ‘ಅಂಥಾ ಆಗಬಾರದ ಅನರ್ಥ ಆಗಿರುವುದಾದರೂ ಏನೋ’

 ‘ಮಗ ಮದುವೆ ಆಗಿ ಬಂದಿದಾನಪ್ಪಾ’

 ‘ಅಷ್ಟೇ ತಾನೇ.. ನಿನಗೆ ಹೇಳದೇ ಮದುವೆಯಾಗಿ ಬಂದಿದಾನೆ ಅನ್ನುವುದಕ್ಕೆ ಇಷ್ಟೊಂದು ಬೇಸರಾನಾ. ಬಿಡೋ ಮಾರಾಯಾ. ನನಗೇ ಬುದ್ದಿ ಹೇಳುವ ನೀನು ಇದಕ್ಕೆಲ್ಲ ಇಷ್ಟೊಂದು ಬೇಸರ ಮಾಡಿಕೊಂಡು ಕೂಡ್ತಾರಾ. ನೀನೇ ಹೀಗಾದರೆ ಮನೆಯಲ್ಲಿ ತಂಗಿಯ ಗತಿಯೇನು. ಇಷ್ಟಕ್ಕೂ ಮಗ ಮದುವೆಯಾದರೆ ಅದರಲ್ಲಿ ಆಗಬಾರದ ಅನರ್ಥವೇನಿದೆ. ಈಗಿನ ಕಾಲದ ಹುಡುಗರೇ ಅಷ್ಟು ಬಿಡು. ನಮ್ಮ ಆಪ್ಯಾಯತೆ ಅವರಿಗೆ ಅರ್ಥವಾಗುವುದಿಲ್ಲ.’

‘ ಅಯ್ಯೋ ರಾಜು, ನಿನಗೆ ಹೇಗೆ ಹೇಳಲಿ ನಾನು. ಅವತ್ತು ನೀನು ಬಂದಾಗ ಅಲ್ಲಿ ಒಬ್ಬ ಹುಡುಗ ಇದ್ದ ನೋಡಿದೆಯಾ. ಕರ್ಮ ನನ್ನ ಮಗ ಮದುವೆ ಆಗಿರುವುದು ಅವನನ್ನೇ ಕಣೋ. ಸಲಿಂಗ ಮದುವೆಯಂತೆ. ಅಮೆರಿಕದಲ್ಲಿ ಅದಕ್ಕೆ ಮಾನ್ಯತೆ ಇದೆಯಂತೆ. ಎರಡು ಗಂಡುಗಳು ಮದುವೆ ಆಗಿರುವರು. ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸ್ತಾರಂತೆ. ಹೇಳು ಯಾವ ಬಂಡೆಗೆ ಹೋಗಿ ತಲೆ ಚಚ್ಚಿಕೊಳ್ಳಲಿ. ಹೇಗೆ ಸಮಾಧಾನ ಪಟ್ಟುಕೊಳ್ಳಲಿ. ಅದನ್ನು ತಿಳಿಸಿ ನಮಗೆ ಬೆಂಕಿ ಹಚ್ಚಲಾದರೂ ಏಕೆ ಬಂದನೋ ಇಲ್ಲಿಗೆ? ಅಲ್ಲೇ ಇದ್ದರೆ ಮಗ ಮದುವೆ ಆಗುತ್ತಿಲ್ಲ ಅನ್ನುವ ಕೊರಗಿದ್ದರೂ ಈ ಅನಿಷ್ಟ ನಮಗೆ ಗೊತ್ತಾಗುವುದಾದರೂ ತಪ್ಪುತ್ತಿತ್ತು. ಇದೇನು ಕರ್ಮ ರಾಜು. ಏನು ಮಾಡಲಿ ನಾನು ಎಂದು ಮತ್ತೆ  ಮಂಜಣ್ಣ ದೊಡ್ಡ ದನಿಯಲ್ಲಿ ಅಳತೊಡಗಿದಾಗ ಈ ವಿಷಯ ಕೇಳಿ ಶಾಕ್ ಆದ ರಾಜಣ್ಣ ಸಮಾಧಾನ ಮಾಡುವುದು ಹೇಗೆ ಎಂದು ಗೊತ್ತಾಗದೇ ಸುಮ್ಮನೆ ಕುಳಿತುಬಿಟ್ಟರು. ಅವರ ಕಣ್ಣಲ್ಲಿಯೂ ನೀರು ಸುರಿಯತೊಡಗಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.