ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಬರುವವನು...

Last Updated 15 ಜೂನ್ 2019, 19:30 IST
ಅಕ್ಷರ ಗಾತ್ರ

‘ಅ ಯ್ಯಯ್ಯೋ! ನಿನ್ ಮನೆ ಹಾಳಾಗ್ಲಿ. ದಬ್ಣ ತಗಂದು ಹಾಂಗ ಹೆಟ್ತೀಯೆ. ನಂದೂ ಜೀಂವಾನೇಯೆ ಮಾರಾಯ್ತಿ. ನಾನೇ ತಕ್ಕಂತೇನಿ, ನೀ ನಡಿ ಅತ್ಲಾಗೆ ಮಕ ತಗಂಡು...’ ಎಂದು ಒದರಾಡುತ್ತ ಹೆಂಡತಿಯ ತಲೆಯ ಮೇಲೆ ಗನಾದೊಂದು ಪೆಟ್ಟು ಹಾಕಿದ ಚಲುವಾದಿ ಯಂಕು.

ಗಂಡ ಹೊಡೆದದ್ದರಿಂದ ಅವಮಾನಿತಳಾದ ಗೋದಿ, ‘ಯಂತದಾರೂ ಹರಿಬಡ್ಸಗಳಿ. ಸುಮ್ಮಂಗೆ ಹೆಗಡೇರ ಮನೆ ಕೆಲ್ಸಕ್ ಹೋಗಿದ್ರೆ ಈ ರಾಮಾಣ್ಯ ಇದ್ದಿತ್ತ? ಬೆತ್ತ ತರಾದಂತೆ, ಬುಟ್ಟಿ, ಚೂಳೀ ಮಾಡಾದಂತೆ. ಏನ್ ಮಾರಾಶಿ ದುಡ್ ಬಡ್ದು ರಾಶಿ ಹಾಕ್ದವರಂಗೆ ಆಡಾದ, ನೋಡ್ರೆ ದಿಕ್ಕಿಲ್ಲ... ನಿಮ್ ಬಿಡ್ಸಕಂಡ ಬರಾಕೆ ಯೋಳ ಕೆರೆ ನೀರ್ ಕುಡ್ದವಳು ನಾನು...ನಿಮಗೆಂತ ಗೊತ್ತದೆ...’ ಎಂದು ಲೊಟಗುಡುತ್ತಲೇ ಒಳಗೆ ಹೋದಳು.

ಹೆಂಡತಿಯ ಲೊಟಲೊಟ, ಸೊರಸೊರ ರಗಳೆ ಯಂಕೂಗೇನೂ ಹೊಸದಲ್ಲ. ಅವಳನ್ನು ಮದುವೆ ಮಾಡಿಕೊಂಡು ಬಂದಾಗಿನಿಂದಲೂ ಪ್ರತಿನಿತ್ಯದ ರೂಢಿಯೇ ಅದು. ಹೆಚ್ಚಿನ ಸಂದರ್ಭಗಳಲ್ಲಿ ಸದಾ ಎಡಬಿಡಂಗಿಯಾದ ತಾನು ಮಾಡುವ ಎಡವಟ್ಟುಗಳೇ ಅವಳ ಸಿಟ್ಟುಸೆಡವುಗಳಿಗೆ ಕಾರಣವಾಗಿರುವುದರಿಂದ ಜಾಣ ಮೌನವೇ ತನ್ನ ಉತ್ತರವೆಂಬಂತೆ ಅವನ ನಡವಳಿಕೆ ಇರುತ್ತದೆ.

ಈ ಸಂವಾದಕ್ಕೂ ಯಂಕೂನ ಎಡವಟ್ಟೇ ಕಾರಣವೆಂಬುದು ಗೋದಿಯ ತರ್ಕ. ಅವತ್ತು ಹೆಗಡೇರ ಮನೆಗೆ ಕೆಲಸಕ್ಕೆ ಹೋಗದೆ ಬೆತ್ತ ತರಲು ಹೋಗಿ ಕಾಲಿಗೆ ಮುಳ್ಳು ಹೆಟ್ಟಿಸಿಕೊಂಡು ಬಂದಿದ್ದು ಮಾತ್ರವಲ್ಲ, ಫಾರೆಸ್ಟ್‌ ಗಾರ್ಡ್‌ಬಸಪ್ಪನ ಕೈಗೆ ಸಿಕ್ಕುಬಿದ್ದಿದ್ದ. ಹಿಂದೊಂದು ಸಲ ಗನಾ ಮಿಕವೊಂದು ಯಂಕೂನ ಉಳ್ಳಿಗೆ ಬಲಿಯಾಗಿತ್ತು. ಅದರಲ್ಲಿ ತನಗೆ ಪಾಲು ಕೊಡದೇ ಇಡೀ ಕೇರಿಯವರೆಲ್ಲ ಸೇರಿ ಸ್ವಾಹಾ ಮಾಡಿದ್ದಾರೆಂಬ ಸಿಟ್ಟು ಬಸಪ್ಪನಿಗಿತ್ತು. ಯಂಕೂನನ್ನು ಬಲಿಹಾಕಲು ಚಿಕ್ಕದೊಂದು ಅವಕಾಶ ಸಿಕ್ಕರೂ ಸಾಕೆಂದು ಕಾಯುತ್ತಿದ್ದ ಬಸಪ್ಪನಿಗೆ ಭರ್ಜರಿ ಬೆತ್ತದ ಸುಗುಳಿನ ಹೊರೆಯನ್ನು ಹೊತ್ತುಕೊಂಡು ಬರುತ್ತಿದ್ದ ಯಂಕೂನನ್ನು ಕಂಡೊಡನೆ ನಖಶಿಖಾಂತ ಕೋಪ ಬಂದಿತ್ತು. ಹಳೆಯದೆಲ್ಲ ನೆನಪಾಗಿ ಬೆತ್ತದ ಸಮೇತ ರೇಂಜ್ ಆಫೀಸಿಗೆ ಕರೆದೊಯ್ದು ಲಾಕಪ್ಪಿನಲ್ಲಿ ಕೂಡಿಹಾಕಿದ್ದ. ಸುದ್ದಿ ತಿಳಿದ ಗೋದಿ, ಗಣೇಶ ಹೆಗಡೇರ ಮನೆಗೆ ಓಡಿದ್ದಳು. ಅವರು ವಿಷಯ ತಿಳಿದು, ಮಗ ಸುಬ್ರಾಯ ಹೆಗಡೇರು ಶಿರಸಿಗೆ ಹೋಗಿದ್ದಾರೆ, ಬಂದ ಮೇಲೆ ಕಳಿಸಿಕೊಡುತ್ತೇನೆ ಎಂದು ಭರವಸೆ ನೀಡಿ ಕಳಿಸಿದರು. ಸಾಯಂಕಾಲವಾದರೂ ಯಾವ ವರ್ತಮಾನವೂ ಬಾರದಿದ್ದಾಗ ಗೋದಿ ಪುನಃ ಮೂರೂಸಂಜೆಯ ಹೊತ್ತಿಗೆ ಹೆಗಡೇರ ಮನೆಯ ಮೆಟ್ಟಿಲು ತುಳಿದಿದ್ದಳು.

ಹೆಗಡೇರು ಇವಳ ಮುಖ ಕಂಡೊಡನೆ, ‘ನಂಗೆ ನೆನಪದ್ಯೆ ಮಾರಾಯ್ತಿ. ಸುಬ್ ಹೆಗಡೇರು ಇನ್ನೂ ಬರ್ಲಿಲ್ಲ. ಬಂದ ಮ್ಯಾಲೆ ಕಳ್ಸಕೊಡ್ತೆ. ನೀನೀಗ ಬಿಡಾರಕ್ಹೋಗು’ ಎಂದು ಹೇಳಿದಾಗ ಮೂಗಿಯಂತೆ ತಲೆಯಾಡಿಸುವುದನ್ನು ಬಿಟ್ಟು ಅವಳಿಗೆ ಬೇರೆ ದಾರಿಯಿರಲಿಲ್ಲ.
ಬಿಡಾರಕ್ಕೆ ಬಂದವಳು ಊಟವನ್ನೂ ಮಾಡದೆ ತೆಣೆಯ ಮೇಲೆಯೇ ಕುಳಿತಿದ್ದಳು. ಅಲ್ಲಿಯೇ ಅವಳಿಗೆ ಜೋಂಪು ಹತ್ತಿತ್ತು. ಅದೆಷ್ಟು ರಾತ್ರಿಯಾಗಿತ್ತೋ, ಬೆಚ್ಚಿಬಿದ್ದವಳಂತೆ ಎಚ್ಚರಗೊಂಡವಳು ಕತ್ತಲಿನಲ್ಲಿಯೇ ತಡಕಾಡುತ್ತ ದಣಪೆಯನ್ನು ದಾಟಿ ಹೊರಬಿದ್ದಳು.

ಬೆಳಗಿನ ಜಾವದ ವೇಳೆಗೆ ಮೂತ್ರ ವಿಸರ್ಜನೆಗೆಂದು ಬಾಗಿಲು ತೆರೆದು ಹೊರಬಂದ ಗಣೇಶ ಹೆಗಡೇರು ಹಾವು ತುಳಿದವರಂತೆ ಬೆಚ್ಚಿ ಒಂದು ಹೆಜ್ಜೆ ಹಿಂದೆ ಸರಿದರು. ಮಬ್ಬಗತ್ತಲಿನಲ್ಲಿ ಕುಳಿತಿದ್ದ ಆಕಾರವು ಏನೆಂದು ತಿಳಿಯದೇ ಒಳಗೆ ಹೋಗಿ ಬ್ಯಾಟರಿ ಹಿಡಿದು ಬಂದು ನೋಡುತ್ತಾರೆ, ಗೋದಿ!

‘ನಾನ್ರೋ ಗೋದಿ, ಸುಬ್ ಹೆಗಡೇರು ಬಂದ್ರರೇನ್ರೋ’ ಎಂದು ಹಲ್ಲುಕಿರಿದವಳನ್ನು ದುರುಗುಟ್ಟಿಕೊಂಡು ನೋಡಿದರು.
‘ನಿಂಗೇನ್ ಮಳ್‍ಗಿಳ್ ಹಿಡ್ದದ್ಯೇನೆ ಗೋದಿ? ಹೀಂಗೆ ಹೊತ್ತುಗೊತ್ತು ಇಲ್ದೆ ಮನೆ ಬಾಗ್ಲಲ್ಲಿ ಕುಂತ್ಗಂಡ್ರೆ ಕಂಡವರು ಏನ್ ಹೇಳೂರೆ? ನಿನ್ ಗಂಡನ್ನ ಬಿಡ್ಸಕಂಡ ಬರೂದೊಂದೇ ಕೆಲ್ಸವನೆ ನಮಗೆ? ಆ ಶಿಟ್ಲಮಿಂಚ ಬಿದ್ದಿರ್ಲಿ ಬಿಡು ಒಂದ್ ದಿವ್ಸ. ಏನ್ ಆಗೂದಿಲ್ಲ’ ಎಂದು ಬಯ್ಯತೊಡಗಿದರು.

‘ಅಲ್ರೋ ಆ ಪಾರೆಸ್ಟ್‌ ಆಪೀಸ್ನವ್ರು ಎಟ್ ತರಾಸು ಕೊಡ್ತಾರೇನ್ರೋ ಹೇಳಿ.’

‘ಅಲ್ವೆ, ಅಂವ ನಮ್ಮನೆ ಕೆಲ್ಸಕ್ ಬರದೆ ಬುಟ್ಟಿ, ಚೂಳಿ ಮಾಡ್ತಾ ಊರ್ ತಿರಗ್ತಾ, ಅವ್ನ ಕಾಲ್ ಮುರ್ದು ಮನೆಯಾಗ್ ಕುಂಡ್ರಸಬೇಕು ಅಂತ ಹೇಳವ್ಳೂ ನೀನೇಯಾ. ಈಗ ನೋಡ್ರೆ ಅವ್ನ ಬಿಡ್ಸಕಂಡು ಬನ್ನಿ ಹೇಳಿ ಹೊತ್ತುಗೊತ್ತು ಇಲ್ದೆ ಮನೆ ಬಾಗ್ಲೀಗೆ ಬಂದು ಕುತ್ಗಂಬವಳೂ ನೀನೇಯಾ. ಯಂತದೆ ಮಾರಾಯ್ತಿ ನಿನ್ ಸುಟ್ ರೂಪ?’

‘ಹೌದ್ರಾ ಅವ್ರು ನಿಮ್ಮನೆ ಕೆಲ್ಸಕ್ಕೆ ಬಂದ್ರೆ ನಾಕ್ ಕಾಸಾದ್ರೂ ನನ್ ಕೈಗೆ ಹತ್ತತದೆ. ಆದ್ರೆ ಈಗ ಗಾರ್ಡ್‌ ಎಳ್ಕಂಡು ಹೋಗೀದಾನಲ್ರೊ. ಎಟ್ಟಂದ್ರು ಅವರು ನನ್ ಗಂಡ ಅಲ್ವೇನ್ರೋ? ಸುಬ್ ಹೆಗಡೇರ‍್ನ ಕಳ್ಸಿ ಬಿಡ್ಸಗಂಬರಾಕ ಹೇಳ್ರೋ...ಕೈಮುಗೀತೇನಿ... ನಿಮ್ ಕಾಲೀಗ್ ಬೀಳ್ತೇನಿ...’ ಎನ್ನುತ್ತ ಸಾಷ್ಟಾಂಗ ನಮಸ್ಕಾರವನ್ನೇ ಹಾಕಿದಳು.

‘ಈ ಹೊತ್ನಲ್ಲಿ ನಿನ್ ಅಜ್ಜ ಇರ್ತನನೆ ಅಲ್ಲಿ? ಯಾವ್ದಕ್ಕೂ ಬೆಳಗಾಗ್ಲಿ. ನೀನೀಗ ಬಿಡಾರಕ್ಹೋಗು.’ ‘ನಾ ಇಲ್ಲೆ ಮನಕ್ಕಂತೇನ್ರೋ. ಬೆಳಗ್ಗೆ ಸುಬ್ ಹೆಗಡೇರನ್ ಕರ್ಕಂಡು ನಾನೇ ಹೋಗ್ತೇನಿ’ ಎಂದು ಹೇಳಿದ ಗೋದಿ ಅಲ್ಲಿಯೇ ತೆಣೆಯ ಮೇಲೆ ಮುರುಟಿಕೊಂಡಿದ್ದಳು. ಬೆಳಿಗ್ಗೆ ಹೆಗಡೇರ ಮನೆಯಲ್ಲಿಯೇ ದೋಸೆ ತಿಂದು ಚಹ ಕುಡಿದು ಸುಬ್ ಹೆಗಡೇರನ್ನು ಕರೆದುಕೊಂಡು ಹೋಗಿ ಯಂಕೂನನ್ನು ಬಿಡಿಸಿಕೊಂಡು ಬಂದಿದ್ದಳು.

ರೇಂಜ್ ಆಫೀಸರು ಯಂಕೂನನ್ನು ಬಿಟ್ಟು ಕಳಿಸಿದ್ದರೇ ಹೊರತು ಬೆತ್ತದ ಹೊರೆಯನ್ನು ಕೊಟ್ಟಿರಲಿಲ್ಲ; ಅದನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಅದನ್ನೇ ಮನಸ್ಸಿನಲಿಟ್ಟುಕೊಂಡಿದ್ದ ಯಂಕೂ, ಗೋದಿಯೊಂದಿಗೆ ಕುಂಟುತ್ತಲೇ ಬರುತ್ತಿದ್ದರೂ, ‘ಅವ್ನ ಬಿಡಾದಿಲ್ಲ. ಆ ಬಸಪ್ಪನ್ನ ಒಂದ್ ಕೈ ನೋಡ್ಕಂಡೇ ಬಿಡ್ತೇನಿ...’ ಎಂದು ಸ್ವಗತಕ್ಕೆಂಬಂತೆ ಹೇಳಿಕೊಂಡಿದ್ದರೂ ಅದು ಮಾತಾಗಿ ಉಗಡವಾಗಿತ್ತು. ಅದನ್ನು ಕೇಳಿಸಿಕೊಂಡ ಗೋದಿ, ‘ಮದ್ಲು ಕಾಲ್ ಸಮಾ ಆಗಾದು ನೋಡ್ಕಳಿ.... ಮುಕ್ಳಿ ಬಗ್ಗಸ್ಕಂಡು ಹೆಗಡೇರ ಮನೆ ಕೆಲಸ ಮಾಡಾದು ಕಲ್ತಗಳಿ... ಕಡೀಗೆ ಬಸಪ್ಪನ್ನ ನೋಡ್ಕಳಲಕ್ಕು...’ ಎಂದು ಬತ್ರ್ಸನೆಯ ನುಡಿಗಳನ್ನಾಡಿದ್ದಳು.

ಹೆಂಡತಿಯ ಮಾತುಗಳಿಗೂ ದೇಹಕ್ಕಾದ ನೋವಿಗೂ ‘ಕ್ಯಾರೇ’ ಎನ್ನುವ ಸ್ವಭಾವ ಯಂಕೂನದಾಗಿರಲಿಲ್ಲ. ತನ್ನ ಮನಸಿಗೆ ಬಂದ ಕಾರ್ಯವನ್ನು ಮಾಡಿ ಮುಗಿಸದೆ ವಿರಮಿಸುವವನೂ ಅವನಾಗಿರಲಿಲ್ಲ. ಮನೆಗೆ ಬಂದೊಡನೆ ಶಣ್ ಮೆಣ್ಸನ್ನು ಅರೆದು ಹಚ್ಚಿದ್ದರಿಂದ ಮರುದಿನ ನಸುಕಿನ ವೇಳೆಗೆ ತುಸು ನೋವಿದ್ದರೂ ಅದನ್ನು ಲೆಕ್ಕಿಸದೆ ಕುಂಟುತ್ತಲೇ ಫಾರೆಸ್ಟ್ ಆಫೀಸಿನ ಬೇಲಿ ಸಂದಿಯಿಂದ ಒಳಗೆ ನುಸಿದು ತನ್ನ ಬೆತ್ತದ ಹೊರೆಯನ್ನು ಮನೆಗೆ ಹೊತ್ತು ತಂದು ವಿಜಯದ ನಗೆ ಬೀರಿದ್ದ ಯಂಕೂ ಎಂಬ ಹುಂಬ!

ಅವನಿಗೆ ತನ್ನ ಜೀವಕ್ಕಿಂತಲೂ ಬೆತ್ತವೇ ಮಹತ್ವದ್ದಾಗಿತ್ತು; ಸುಬ್ರಾಯ ಹೆಗಡೇರು ಬರುವವರೆಗೂ ಫಾರೆಸ್ಟ್ ಆಫೀಸಿನಲ್ಲಿ ಬಸಪ್ಪ ಕೊಟ್ಟಿದ್ದ ಹಿಂಸೆಗೆ ಪ್ರತೀಕಾರ ಮಾಡುವುದೇ ಅವನ ಏಕಮೇವ ಗುರಿಯಾಗಿತ್ತು! ಕಾಲಿಗೆ ಮುಳ್ಳು ಹೆಟ್ಟಿಸಿಕೊಂಡು ಕುಂಟುತ್ತಿದ್ದರೂ ಕುನ್ನಿಮರಿಯನ್ನು ಎಳೆದು ತಂದಂತೆ ದರಗುಟ್ಟಿ ಎಳೆದು ತಂದಿದ್ದ ಬಸಪ್ಪ. ಬೆತ್ತದ ಹೊರೆಯನ್ನು ಹೊರಕಿಬ್ಳಿಯಲ್ಲಿಯೇ ಇಡುವಂತೆ ಹೇಳಿ ಲಾಕಪ್ಪಿಗೆ ತಳ್ಳಿದ್ದ. ಆಮೇಲೆ ತನ್ನ ಶರಟು ಕಳಚಿಟ್ಟು ಲಾಕಪ್ಪಿನ ಒಳಗೆ ಬಂದು ಮಕಮುಸುಡಿ ನೋಡದೆ ಕನಾತಿ ಪೆಟ್ಟು ಹಾಕುತ್ತಲೇ,‘ಉಳ್ ಹಾಕಿ ಮಿಕನ್ ಹಿಡೀತಿ? ನನಗ, ಈ ಗಾರ್ಡ್ ಬಸಪ್ಪಗ ಪಾಲು ಕೊಡದ ಇಡೀ ಚಲುವಾದಿ ಕೇರಿಯವರು ಮಟನ್ ಮಾಡಿ ತಿಂದು, ಶೆರಿ ಕುಡ್ದು ಮಜಾ ಮಾಡ್ತೀರಿ? ಸೂಳಿ ಮಗನ, ಬಸಪ್ಪಗ ಟೋಪಿ ಹಾಕಿ ಬಂದೇನಂತ ಕೇರಿ ಜನರ ಮುಂದ ನನ್ನ ನಕಲಿ ಮಾಡ್ತಿ? ನಿಂದೆಲ್ಲಾ ಗುರತೈತಲೇ ಮಗನ. ಬೆತ್ತ ಕಳವು ಮಾಡೂದು, ಸುರಗಿ ಮೊಗ್ಗು ಕೀಳೂದು ಇವೇ ಆತಲ್ಲಲೇ ನಿಂದೂ. ಮೈ ಬಗ್ಗಿಸಿ ದುಡಿಯಾಕ ಏನಾಗೈತಲೇ ನಿನಗ? ನಿನ್ ಹೇಂತಿ ಮಕ ನೋಡಿ ನಿನ್ ಜೀವಸಹಿತ ಬಿಟ್ಟೇನಿ.’ ಎಂದು ರುಬಾಬು ತೋರಿಸಿ ಹೋಗಿದ್ದ. ಬಸಪ್ಪನ ಹೊಡೆತಗಳಿಗಿಂತಲೂ ಅವನ ಮರ್ಮಭೇದಕವಾದ ಮಾತುಗಳೇ ಯಂಕೂನನ್ನು ಕೆರಳಿಸಿದ್ದವು.

ತುಸು ಹೊತ್ತಿನಲ್ಲಿಯೇ ರೇಂಜರ್ ಸಾಹೇಬರ ಆಗಮನವಾಗಿತ್ತು. ಇವನನ್ನು ಲಾಕಪ್ಪಿಗೆ ಹಾಕಿದ ಕುರಿತು ಬಸಪ್ಪನಿಂದ ಕೇಳಿ ತಿಳಿದ ಸಾಹೇಬರು, ‘ಮತ್ತೆ ನಾಲ್ಕು ಇಕ್ಕು ಬೋಳಿಮಗನಿಗೆ. ಅಂವ ಕಡಿದ ಬೆತ್ತದಿಂದಲೇ ಇನ್ನು ಕೊಡ್ಲು ಇಳೀಬಾರ್ದು ಹಾಂಗ ಬಾರ್ಸು.’ ಎಂದರು. ಅವರೊಂದಿಗೆ ಮೂಲೆಮನೆ ರಾಮ ನಾಯ್ಕನೂ ಬಂದಿದ್ದ. ಕಣ್ಣಿಗೆ ಕುರುಡರ ಕನ್ನಡಕ ಹಾಕಿಕೊಂಡು, ಪ್ಯಾಂಟಿನ ಕಿಸೆಯಲ್ಲಿ ಕೈ ತುರುಕಿಕೊಂಡು, ಇನ್ನೊಂದು ಕೈಯಲ್ಲಿ ಜೀಪಿನ ಕೀಲಿ ತಿರುಗಿಸುತ್ತಿದ್ದ ಅವನ ಪರಿಯನ್ನು ಕಂಡು, ‘ರಾಮ ನಾಯ್ಕರು ಬೀಟೆ, ಸಾಗವಾನಿ ಕದ್ದು ಮಾರಿದ್ರೆ ಅಡ್ಡಿಲ್ಲ. ನನ್ನಂತಂವ ಒಂದ್ ಬೆತ್ತದ ಹೊರೆ ತರಾದೇ ತಪ್ಪಾಗ್ಹೋಗ್ತದೆ. ಅವರು ಸಾಹೇಬರಿಗೆ ಸಮಾ ತಿನ್ನಸ್ತಾರೆ. ನನ್ ಕೈಲಿ ಅದೆಲ್ಲ ಆಗ್ತದ್ಯ?’ ಎಂದು ಗೊಣಗಿಕೊಂಡಿದ್ದ. ಅದು ಸಾಹೇಬರ ಕಿವಿಗೆ ಬಿದ್ದು, ಲಾಕಪ್ಪಿನ ಒಳಗೆ ಬಂದು, ‘ಬೋಳಿಮಗನೆ, ನಮಗೇ ಹೇಳುವಷ್ಟು ಸೊಕ್ಕೇನೋ ನಿನಗೆ’ ಎನ್ನುತ್ತ ಬೂಟುಗಾಲಿನಿಂದಲೇ ಅಂಡಿನ ಮೇಲೆ ಒದ್ದಿದ್ದರು. ಅದಕ್ಕಾಗಿಯೇ ಬೆತ್ತದ ಹೊರೆಯನ್ನು ಹಾರಿಸಿಕೊಂಡು ಬಂದು ಸೇಡು ತೀರಿಸಿಕೊಂಡಿದ್ದ!

ವಾರದ ಹಿಂದೆ ಗಣೇಶ ಹೆಗಡೇರ ಮನೆಯ ತೆಂಗಿನಕಾಯಿ ಕೊಯ್ಯಲು ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದೇನೋ ಹೌದು. ಆದರೆ ಬಂಡಿದಾರಿಯಲ್ಲಿ ಬಲಕ್ಕೆ ಅಗಚುವ ಬದಲು ಎಡಕ್ಕೆ ಅಗಚಿದ್ದ ಯಂಕು, ಸೀದಾ ಅರಬೈಲು ಕೊಡ್ಲನ್ನು ತಲುಪಿದ್ದ. ಅರಬೈಲು ಕೊಡ್ಲು ಎಂದರೆ ಬೆತ್ತ! ಮೊದಲಿನಿಂದಲೂ ಅದು ದಟ್ಟವಾಗಿ ಬೆಳೆಯುವ ನೀಳ ಬೆತ್ತಗಳಿಗೆ ಪ್ರಸಿದ್ಧ. ಯಂಕೂನ ಪರಿಭಾಷೆಯಲ್ಲಿಯೇ ಹೇಳುವುದಾದರೆ, ‘ಮುಕ್ಳಿ ತೊಳಯಾಕ ಬಾರದವ್ರೆಲ್ಲ ಬುಟ್ಟಿ ಮಾಡಾಕ ಹತ್ತಿ ತಡ್ರಬಡ್ರ ಕಡ್ದು ಬೆತ್ತ ಪೂರಾ ಮಾದೋಗದೆ.’ ಆದರೂ ಉಳಿದೆಡೆಗೆ ಹೋಲಿಸಿದರೆ ಅರಬೈಲಿನಲ್ಲಿ ಬಹಳ ಒಳ್ಳೆಯ ಬೆತ್ತ ಸಿಗುತ್ತಿತ್ತು. ಆ ಕೊಡ್ಲನ್ನು ಇಳಿದು ಬೆತ್ತ ಕಡಿದು ಮೇಲೆ ಹೊತ್ತು ತರಬೇಕೆಂದರೆ ಅದಕ್ಕೆ ಯಂಕೂನಂಥ ಎಂಟೆದೆಯವರೇ ಆಗಬೇಕು. ಒಂದಕ್ಕೊಂದು ಜಣತುಕೊಂಡಿರುವ ಕುಮಸಲು ಜೀಡು, ಅದರೊಳಗೆ ಅವಿತುಕೊಂಡಿದ್ದು ಮನುಷ್ಯರ ಸುಳಿವು ಕಂಡಕೂಡಲೇ ದಾಳಿ ಮಾಡುವ ಅಥವಾ ಜಿಗಿದೋಡುವ ಮೊಲ, ಮಿಕ, ಬರ್ಕ, ಹಾವಿನಂತಹ ವನ್ಯಜಂತುಗಳು. ಸಾಮಾನ್ಯರು ಕೊಡ್ಲಿನೊಳಗೆ ಇಳಿಯುವ ಮುನ್ನ ಯೋಚಿಸುವಂತೆ ಮಾಡುತ್ತಿದ್ದವು. ಯಂಕೂ ಚಿಕ್ಕ ಬಾಲಕನಾಗಿದ್ದಾಗಿನಿಂದಲೂ ತನ್ನಪ್ಪ ಮುಪನ್ಯಾನ ಜೊತೆ ಈ ಕೊಡ್ಲಿಗೆ ಬಂದು ಚೆನ್ನಾಗಿ ವಹಿವಾಟು ಇದ್ದುದರಿಂದ ಕೊಡ್ಲು ಅವನನ್ನು ಹೆದರಿಸುತ್ತಿರಲಿಲ್ಲ.

ಆವತ್ತು ಎಚ್ಚರಿಕೆಯಿಂದಲೇ ಇಳಿಯುತ್ತಿದ್ದರೂ ಒಂದೆರಡು ಬಾರಿ ಕಾಲುಜಾರಿ ಅಂಡು ಜಜ್ಜಿಕೊಂಡಿದ್ದ. ಕುಮಸಲು ಜೀಡನ್ನು ಬದಿಗೆ ಸರಿಸಿಕೊಂಡು ನಿಧಾನವಾಗಿ ದರೋಬಸ್ತಾದ ಬೆತ್ತದ ಹಿಂಡನ್ನು ಅರಸುತ್ತಾ ಸಾಗುತ್ತಿದ್ದಾಗಲೇ ದರಕು ಮುಚ್ಚಿಕೊಂಡಿದ್ದ ಚಿಕ್ಕಹೊಂಡವೊಂದರಲ್ಲಿ ಕಾಲುಹಾಕಿದ್ದ. ಇವನಂಥವರೇ ಯಾರೋ ಕಡಿದುಹಾಕಿದ್ದ ಬಿದಿರು ಮುಳ್ಳೊಂದು ಅಂಗಾಲಿಗೆ ಚುಚ್ಚಿಕೊಂಡಿತ್ತು. ಕಣಬು ಸಹಿತ ಚುಚ್ಚಿಕೊಂಡಿದ್ದ ಮುಳ್ಳನ್ನು ತೆಗೆಯಲು ಮಾಡಿದ್ದ ಪ್ರಯತ್ನದಿಂದ ಒಣಮುಳ್ಳು ಮುರಿದು ಕಾಲೊಳಗೇ ಕುಳಿತುಕೊಂಡು ಕಣಬು ಮಾತ್ರ ಕೈಗೆ ಬಂದಿತ್ತು. ಚುಚ್ಚಿದ ತಕ್ಷಣ ಹೆಚ್ಚು ನೋವಿನ ಅನುಭವವಾಗಿರಲಿಲ್ಲ. ಅಲ್ಲಿಯೇ ಕುಳಿತು ಒಂದು ಕವಳ ಹಾಕಿ ಸುಧಾರಿಸಿಕೊಂಡು ದರೋಬಸ್ತಾದ ಹಿಂಡನ್ನೇ ಹುಡುಕಿ ಸಾಮಾನ್ಯದವರು ಎರಡಾಳು ಹೊರುವಂತಹ ಬೆತ್ತದ ಸುಗುಳಿನ ಹೊರೆ ಹೊತ್ತುಕೊಂಡು ಕೊಡ್ಲನ್ನೇರಲು ಹೊರಟರೆ ಅಂಗಾಲು ಊರೂವುದಕ್ಕೆ ತ್ರಾಸು ಕೊಡತೊಡಗಿತ್ತು. ಅದರಪ್ಪನಂತಹ ಮುಳ್ಳು, ಶೀಬು ಹೆಟ್ಟಿಸಿಕೊಂಡು ಅನುಭವವಿದ್ದ ಯಂಕು ಕುಂಟುಗಾಲು ಹಾರಿಸುತ್ತಲೇ ಮನೆಯ ದಾರಿ ಹಿಡಿದಿದ್ದ. ಅರಬೈಲು ದಾರಿಯಿಂದ ಬಂಡಿದಾರಿಗೆ ಕೂಡುವ ಹೊತ್ತಿಗೆ ದೂರದಿಂದಲೇ ಬರುತ್ತಿದ್ದ ಬಸಪ್ಪನ ಸೈಕಲ್ಲನ್ನು ಕಂಡು ಮರವೊಂದರ ಮರೆಗೆ ಸರಿದಿದ್ದರೂ ಕಾಡುಗಳ್ಳರನ್ನು ಹಿಡಿಯುವುದರಲ್ಲಿ ನಿಸ್ಸೀಮನಾಗಿದ್ದ ಅವನಿಂದ ತಪ್ಪಿಸಿಕೊಳ್ಳಲಾಗಿರಲಿಲ್ಲ. ಕಾಲಿಗೆ ಮುಳ್ಳು ಹೆಟ್ಟಿದೆ ಎಂದರೂ ಕೇಳದೇ ಹಳೆಯ ಸಿಟ್ಟೆಲ್ಲ ರಟ್ಟೆಗೆ ಬಂದವನಂತೆ ದರದರನೆ ಎಳೆದೊಯ್ದು ಲಾಕಪ್ಪಿಗೆ ಹಾಕಿದ್ದ ಬಸಪ್ಪ.

ಬೆತ್ತದ ಹೊರೆಯನ್ನು ಹಾರಿಸಿಕೊಂಡು ಬಂದು ಬಸಪ್ಪನಿಗೆ ಬುದ್ಧಿ ಕಲಿಸಿದ್ದೇನೆಂದುಕೊಂಡ ಯಂಕೂ ಕಾಲೊಳಗಿನ ಮುಳ್ಳನ್ನು ಗಣನೆಗೆ ತೆಗೆದುಕೊಳ್ಳದೆ ಕುಂಟುಹಾಕುತ್ತಲೇ ತಿರುಗುತ್ತಿದ್ದ. ಗಣೇಶ ಹೆಗಡೇರು ಹೇಳಿ ಕಳಿಸಿದಾಗ ಮಾತ್ರ ಕಾಲು ನೋವಿನ ನೆಪ ಹೇಳಿ ತಪ್ಪಿಸಿಕೊಂಡಿದ್ದ. ಗಣೇಶ ಹೇಗಡೇರು ಎಂದಲ್ಲ ಯಾರೇ ಕೆಲಸಕ್ಕೆ ಕರೆದರೂ, ‘ಈಗ್ ಬತ್ತೇನ್ರೋ...’ ಎನ್ನುವುದೇ ಅವನ ರೂಢಿಯಾಗಿತ್ತು! ಗೋದಿಗೆ ಅವನು ಹೆಗಡೇರ ಮನೆಯ ಕೆಲಸಕ್ಕೆ ಹೋಗಲೆಂಬ ಬಯಕೆ. ಅವನದು ಸಾಧ್ಯವಾದಷ್ಟೂ ಅದನ್ನು ತಪ್ಪಿಸಿಕೊಳ್ಳಬೇಕೆಂಬ ಹುನ್ನಾರ. ಯಂಕೂನ ಎಡಬಿಡಂಗಿತನ, ಕುಡಿತದ ಹವ್ಯಾಸಗಳನ್ನು ಅರಿತಿದ್ದ ಹೆಗಡೇರು ಅವನ ಕೈಗೆ ದಮ್ಮಡಿ ದುಡ್ಡನ್ನೂ ಕೊಡುತ್ತಿರಲಿಲ್ಲ. ಎಷ್ಟೇ ಇದ್ದರೂ ಗೋದಿಯ ಕೈಗೇ ಕೊಡುತ್ತಿದ್ದರು. ತುಂಡು ಭೂಮಿಯಿಲ್ಲದೆ ಗೆಯ್ದೇ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿಯಿದ್ದುದರಿಂದ ಅವಳು ತುಂಬಾ ಜಾಣ್ಮೆಯಿಂದಲೇ ಸಂಸಾರ ತೂಗಿಸುತ್ತಿದ್ದಳು.

ಜವಾಬ್ದಾರಿಯೆಂದರೇನೆಂಬುದನ್ನೇ ಅರಿಯದ ಗಂಡನನ್ನು ಕಟ್ಟಿಕೊಂಡು ಇಬ್ಬರು ಮಕ್ಕಳನ್ನು ಓದಿಸುತ್ತ ತಕ್ಕಮಟ್ಟಿಗೆ ಚೆನ್ನಾಗಿಯೇ ಜೀವನ ಸಾಗಿಸುತ್ತಿದ್ದ ಗೋದಿಯ ಮೇಲೆ ಹೆಗಡೇರ ಮನೆಯವರಿಗೂ ವಿಶ್ವಾಸ. ಆದರೆ ಯಂಕೂನ ಸಮಸ್ಯೆಯೇ ಬೇರೆ ಇತ್ತು. ಅವನು ಒಬ್ಬನಾದರೂ ಅವನ ಹವ್ಯಾಸಗಳು ನೂರಿದ್ದವು! ಮೈಕೈ ನೋವು ತೆಗೆಯಲು ದಿನಾ ಕೊಟ್ಟೆ ಹಾಕಲೇಬೇಕಿತ್ತು. ಸುತ್ತಮುತ್ತ ನಡೆಯುವ ಆಟ, ತೇರು, ಜಾತ್ರೆಗಳಿಗೆ ಹಾಜರಿ ಹಾಕಲೇಬೇಕು, ಕುಟಕುಟಿ ಆಡಲೇಬೇಕು. ಚಲುವಾದಿ ಕೇರಿಯಲ್ಲಿ ಯಾರದೇ ಮನೆಯಲ್ಲಿ ಇಸ್ಪೀಟಿನ ಮಂಡ ನಡೆದರೂ ಇವನದೊಂದು ಕೈ ಇರಲೇಬೇಕು. ಹೆಗಡೇರ ಮನೆಗೆ ಗೆಯ್ಯಲು ಹೋದರೆ ದಮ್ಮಡಿ ಕೈಗೆ ಹತ್ತುವುದಿಲ್ಲ; ದಮ್ಮಡಿ ಕೈಗೆ ಹತ್ತದಿದ್ದರೆ ತನ್ನ ಹವ್ಯಾಸಗಳನ್ನು ನಿಭಾಯಿಸುವುದಾದರೂ ಹೇಗೆ? ಬೆತ್ತದ ಬುಟ್ಟಿ, ಹೆಡಿಗೆ, ಚೂಳಿ ಮಾಡಿದರೆ ಕನಿಷ್ಠಪಕ್ಷ ದಿನಕ್ಕೆ ಇನ್ನೂರು-ಮುನ್ನೂರು ಪಕ್ಕಾ! ಇಂಥವನು ಕಿಲುಬು ಕಾಸೂ ಕೈಗೆ ಹತ್ತದ ಹೆಗಡೇರ ಮನೆಗೆ ಗೆಯ್ಯಲು ಹೋಗಿ ಮೈಕೈ ನೋಯಿಸಿಕೊಳ್ಳಲು ಬಯಸುತ್ತಾನೆಯೆ?

ತನ್ನ ಹುಂಬತನದಿಂದಾಗಿ ಕಾಲಿನಲ್ಲಿದ್ದ ಮುಳ್ಳನ್ನೂ ತೆಗೆಯದೆ ತಿರುಗಿದ್ದರಿಂದಾಗಿ ಅದು ಬಾತುಕೊಂಡು ಕೀವು ತುಂಬಿಕೊಂಡಿತ್ತು. ಗೋದಿ ದಬ್ಬಣವನ್ನು ಚುಚ್ಚಿದಾಗ ನೋವಿನಿಂದ ಕಿರುಚಿಕೊಂಡು ಹೆಂಡತಿಯ ತಲೆಯ ಮೇಲೆ ಹೊಡೆದಿದ್ದ ಯಂಕು. ಅವಳು ಒಳಗೆ ಹೋದೊಡನೆ ಕಣ್ಣುಮುಚ್ಚಿ ಅವಡುಗಚ್ಚಿಕೊಂಡು ಅಡಿಕೆ ಕತ್ತರಿಸುವ ಚಾಕುವಿನಿಂದಲೇ ಬಾತುಕೊಂಡಿದ್ದ ಅಂಗಾಲನ್ನು ಬಗೆದು ಹಾಕಿದ ಯಂಕು. ಬಳಕ್ಕೆಂದು ಹೊರಬಿದ್ದ ಕೀವಿನೊಂದಿಗೆ ಬಿದಿರ ಮುಳ್ಳೂ ಹೊರಬಂದು ತುಸು ಸಮಾಧಾನದಿಂದ ನಿಟ್ಟುಸಿರು ಬಿಟ್ಟ.

ಸೋರಿದ್ದ ಕೀವನ್ನು ಒರೆಸಿಕೊಂಡು ಅಂಗಾಲಿಗೆ ಪಂಜಿ ಚೂರನ್ನು ಕಟ್ಟಿಕೊಳ್ಳುವುದಕ್ಕೂ ಗಾರ್ಡ್ ಬಸಪ್ಪನ ಸೈಕಲ್ಲು ಯಂಕೂನ ಮನೆಯ ದಣಪೆಯನ್ನು ದಾಟುವುದಕ್ಕೂ ಸರಿ ಹೋಯಿತು. ಸೈಕಲ್ಲನ್ನು ದಣಪೆಗೇ ಚಾಚಿಟ್ಟು ಒಂದೇ ನೆಗೆತಕ್ಕೆ ತೆಣೆಯ ಮೇಲೆ ಹಾರಿದ ಬಸಪ್ಪ, ಯಂಕೂನನ್ನು ಗಟ್ಟಿಯಾಗಿ ತಬ್ಬಿ ಹಿಡಿದ. ತನ್ನ ಅರಿವಿಗೂ ಬರುವ ಮೊದಲೇ ನಡೆದ ಘಟನೆಯಿಂದ ಅರೆಕ್ಷಣ ಅಪ್ರತಿಭನಾದರೂ ಮರುಗಳಿಗೆಯಲ್ಲಿಯೇ ಸಾವರಿಸಿಕೊಂಡ ಯಂಕೂ ಇದ್ದ ಬಲವನ್ನೆಲ್ಲ ಪ್ರಯೋಗಿಸಿ ಬಸಪ್ಪನಿಂದ ಬಿಡಿಸಿಕೊಂಡು ನೆಗೆದು ಹಾರಿ ಓಡಿಹೋದ. ಚಲುವಾದಿ ಯಂಕೂ ಎಂಬ ಎಡಬಿಡಂಗಿಯನ್ನು ಚಲುವಾದಿ ಕೇರಿಯವರು ಮತ್ತೆಂದೂ ಆ ಫಾಸಲೆಯಲ್ಲಿ ನೋಡಲಿಲ್ಲ.

**

ಪಿ. ಎಂ. ಹೈಸ್ಕೂಲ್ ಸ್ಟಾಫ್ ಕ್ವಾರ್ಟರ್ಸ,ಬೊಬ್ರವಾಡ ರಸ್ತೆ, ಅಂಕೋಲಾ-581314
ಉತ್ತರ ಕನ್ನಡ ಜಿಲ್ಲೆ
ಮೊಬೈಲ್: 9480502663

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT