ಸೋಮವಾರ, ಮೇ 17, 2021
23 °C

ಚಿಂತೆಯನ್ನು ಗೆಲ್ಲುವುದು ಹೇಗೆ?

ರಮ್ಯಾ ಶ್ರೀಹರಿ Updated:

ಅಕ್ಷರ ಗಾತ್ರ : | |

ಮನುಷ್ಯನಿಗಿರುವ ವಿಶೇಷ ಸಾಮರ್ಥ್ಯಗಳಲ್ಲಿ ಕಲ್ಪನೆ, ಮುಂದಾಲೋಚನೆ, ಅಪಾರ ನೆನಪಿನಶಕ್ತಿ, ಭಾಷಾ ಕೌಶಲಗಳು ಪ್ರಮುಖವಾದವು. ಮುಂದಾಗುವುದನ್ನು ಊಹಿಸುವ, ಪ್ರತ್ಯಕ್ಷವಲ್ಲದ್ದನ್ನೂ ಕಾಣುವ ಸಾಮರ್ಥ್ಯವಂತೂ ಅಸಾಧಾರಣವಾದದ್ದು. ಆಳವಾದ ಚಿಂತನೆ, ವಿಚಾರವಂತಿಕೆ ಎಲ್ಲವನ್ನೂ ಮನುಷ್ಯಜೀವಿಗಿರುವ ವರವೆಂದೇ ಬಗೆದಿರುವ ನಾವು ‘ಚಿಂತನೆ’ ಎಂಬ ಹೂವಿನ ಜೊತೆಗೇ ಬರುವ ‘ಚಿಂತೆ’ ಎಂಬ ಮುಳ್ಳನ್ನು ಬೇಡವೆನ್ನುವುದಾದರೂ ಯಾಕೆ? ವರ್ತಮಾನದ ಬದುಕನ್ನು ಮೀರಿ ಹೋಗುವ, ಭೂತ-ಭವಿಷ್ಯಗಳಲ್ಲಿ, ನೆನಪು-ಕಲ್ಪನೆಗಳಲ್ಲಿ ಏಕಕಾಲದಲ್ಲಿ ಬದುಕಬಲ್ಲಂತಹ ಅದ್ಭುತ ಸಾಧ್ಯತೆಯ ಜೊತೆ ಜೊತೆಗೇ ಬರುವಂಥದ್ದು ಚಿಂತೆಯ ಕರಾಳಛಾಯೆ.

ಬದುಕನ್ನು, ಬದುಕಿನ ಕಥೆ, ಪಾತ್ರಗಳನ್ನು, ಸಂಬಂಧಗಳನ್ನು ಹಿಡಿದಿಟ್ಟುಕೊಳ್ಳುವ ಮನಸ್ಸು ಭಾವನಾತ್ಮಕ ಹಾಗೂ ಭೌತಿಕ ಜಗತ್ತಿನ ಅನೇಕ ರಸಮಯ ಪ್ರಸಂಗಗಳು ನಡೆದುಹೋಗುವ ರಂಗಭೂಮಿಯೂ ಹೌದು. ಈ ವಿಸ್ಮಯಕಾರೀ ನಾಟಕದ ಕೇಂದ್ರಬಿಂದುವೆ ‘ನಾನು’ ಎಂಬ ಪ್ರಜ್ಞೆ. ಈ ಪ್ರಜ್ಞೆ ಕೇವಲ ಸಾಕ್ಷಿಪ್ರಜ್ಞೆಯಾಗಿದ್ದರೆ ಬಾಧಕವಿಲ್ಲ. ಆದರೆ ಅನೇಕ ಬಾರಿ ರಂಗದ ಮೇಲೆ ನಡೆಯುವ ಎಲ್ಲವೂ ತೀವ್ರತರವಾದ ಸುಖ, ಸಂಕಟಗಳನ್ನು ತರುವುದರ ಮೂಲಕ ಈ ಸಾಕ್ಷಿಪ್ರಜ್ಞೆಯನ್ನೂ ರಂಗದ ಮೇಲೆ ಎಳೆದುತರುತ್ತದೆ. ಅಷ್ಟೇ ಅಲ್ಲದೆ ತೀವ್ರವಾದ ಭಾವೋದ್ವೇಗಗಳು ಈ ಸಾಕ್ಷಿಪ್ರಜ್ಞೆಯ ವೈಚಾರಿಕತೆಯನ್ನು, ಅರಿವಿನ ಮೂಲವನ್ನು ಮಸುಕುಗೊಳಿಸುತ್ತದೆ. ಈ ಪ್ರಕ್ರಿಯೆಯ ಪ್ರತಿಫಲವೆ ‘ಚಿಂತೆ’. Worry often gives a small thing a big shadow ಎಂಬ ಮಾತು ಚಿಂತೆಯ ಕುರಿತಾಗಿ ಸಾಕಷ್ಟು ಹೇಳುತ್ತದೆ.

ಚಿಂತೆ ಎಂಬುದು ಬರೀ ನಮ್ಮ ತಲೆಯಲ್ಲಿ ನಡೆಯುವಂಥದ್ದಲ್ಲ ಅದು ನಮ್ಮ ಇಡೀ ದೇಹವನ್ನು ಆಕ್ರಮಿಸುವಂಥದ್ದು, ಚಿಂತೆಯ ಮೂಲ ಮನಸ್ಸೇ ಆದರೂ ಅದರ ಮುಖ್ಯ ಕಾರ್ಯಾಚರಣೆ ನಮ್ಮ ದೇಹದ ಮೇಲೆ ಎಂಬುದು ಅನೇಕ ಸಂಶೋಧಕರ ಅಭಿಪ್ರಾಯ. ನಮ್ಮ ಮನಸ್ಸನ್ನು, ಪ್ರಜ್ಞೆಯನ್ನು, ಆಂತರ್ಯವನ್ನು ತೀವ್ರವಾಗಿ ಘಾಸಿಗೊಳಿಸಿದ್ದೆಲ್ಲದರ ಕುರುಹನ್ನು ನಮ್ಮ ದೇಹ ಸದಾ ಹೊತ್ತು ತಿರುಗುತ್ತದೆ ಎಂಬುದು ಆಶ್ಚರ್ಯವಾದರೂ ಸತ್ಯ.

ಹೀಗಿದ್ದ ಮೇಲೆ ಚಿಂತೆಯನ್ನು ನಿರ್ವಹಿಸುವುದು ಹೇಗೆ?

ಚಿಂತೆಯ ಎರಡು ಮುಖ್ಯ ತಂತುಗಳು ಆತಂಕ ಮತ್ತು ಖಿನ್ನತೆ. ಇವೆರಡೂ ಒಂದಕ್ಕೊಂದು ಪೂರಕವಾಗಿದ್ದು ಕೊಂಡು ಅತಿಯಾದ ಬೇಡದ ಯೋಚನೆಗಳು ಉಂಟಾಗುವಂತೆ ಮಾಡುತ್ತದೆ. ಚಿಂತೆಯನ್ನು ನಿರ್ವಹಿಸುವ ಮೊದಲ ಹಂತವೆಂದರೆ ಪದೇ ಪದೇ ಬರುವ ಭಯ–ದುಃಖಮಿಶ್ರಿತ ಆಲೋಚನೆಗಳನ್ನು ‘ಆಲೋಚನೆಗಳು’ ಎಂದು ಗುರುತಿಸುವುದು ಮತ್ತು ಅವುಗಳು ಒಂದಾದ ಮೇಲೊಂದರಂತೆ ಉಂಟಾದಾಗ ಅವುಗಳಿಗೆ ಪ್ರತಿಕ್ರಿಯಿಸು ವಂಥ ಏನನ್ನೂ ಮಾಡದಿರುವುದು. ಉದಾ: ಸಮುದ್ರದಲ್ಲಿ ಅಲೆಗಳು ಏಳು ಬೀಳುವುದನ್ನು ಒಂದು ಸೋಜಿಗವೆಂಬಂತೆ ನೋಡುವ ಹಾಗೆ ಆಲೋಚನೆಗಳು ಏಳು ಬೀಳುವುದನ್ನು ಸುಮ್ಮನೆ ವೀಕ್ಷಿಸುತ್ತಾ ಅವುಗಳಿಂದುಂಟಾದ ಪ್ರಚೋದನೆ ಗಳನ್ನು ಕೈಬಿಡುವುದು.

ಚಿಂತೆ ಎಂದರೆ ಒಂದರ ಹಿಂದೊಂದು ಬರುವ ಋಣಾತ್ಮಕ ವಿಚಾರಸರಣಿ, ಅದು ಯಾವುದೇ ವಸ್ತು ನಿಷ್ಠ ವಿಶ್ಲೇಷಣೆಯಲ್ಲ, ಕಾರ್ಯಪ್ರವೃತ್ತಗೊಳಿಸುವ ಮುಂದಾಲೋ ಚನೆಯಲ್ಲ. ಚಿಂತೆಯ ವಿಷವರ್ತುಲದಿಂದ ಹೊರ ಬರುವ ಏಕೈಕ ಮಾರ್ಗವೆಂದರೆ ಚಿಂತೆಯಾಚೆಗಿನ ಬದುಕನ್ನು ಕಂಡುಕೊಳ್ಳುವುದು. ಸುತ್ತಲಿನ ಪ್ರಪಂಚದೊಡನೆ ಸಂಬಂಧ ಬೆಸೆಯುವ ಯಾವುದೇ ಕೆಲಸವಾದರೂ ಸರಿ ನಮ್ಮನ್ನು ಚಿಂತೆಯಿಂದ ಪಾರುಮಾಡಬಲ್ಲುದು. ಒಟ್ಟಿನಲ್ಲಿ ಚಿಂತೆ ಮಾಡುವ ಬದಲು ಏನಾದರೂ ‘ಕೆಲಸ’ ಮಾಡುವುದೇ ಚಿಂತೆಯ ಆಚೆ ಬರುವ ಅತ್ಯುತ್ತಮ ಉಪಾಯ.

ಚಿಂತೆ ಎಂಬುದು ಒಂದು ದಿನ ಇದ್ದಕ್ಕಿದ್ದಂತೆ ಬಂದು ಹಿಡಿದುಕೊಂಡು ಬಿಡುವ ಭೂತವಲ್ಲ. ಚಿಂತೆಯ ಎಳೆಗಳು, ರೂಪು ರೇಷೆಗಳು ವ್ಯಕ್ತಿತ್ವದಲ್ಲಿ ಹಾಸುಹೊಕ್ಕಾಗಿರುವಂಥದ್ದು. ಹೀಗಾಗಿ ಚಿಂತೆಯನ್ನು ನಿರ್ವಹಿಸುವುದರ ರಾಜಮಾರ್ಗವೆಂದರೆ ನಮ್ಮದೇ ವ್ಯಕ್ತಿತ್ವದ ಆಳವಾದ ಅಧ್ಯಯನವೇ ಆಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.