ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುವಾದ ಕ್ಷೇತ್ರದತ್ತ ಏಕೀ ಅನಾದರ?: ತೇಜಸ್ವಿನಿ ನಿರಂಜನ ಅವರೊಂದಿಗೆ ಸಂದರ್ಶನ

ತೇಜಸ್ವಿನಿ ನಿರಂಜನ ಪ್ರಶ್ನೆ
Last Updated 23 ಅಕ್ಟೋಬರ್ 2021, 22:00 IST
ಅಕ್ಷರ ಗಾತ್ರ

ತೇಜಸ್ವಿನಿ ನಿರಂಜನ ಅವರು ಅನುವಾದಿಸಿರುವ ಜಯಂತ ಕಾಯ್ಕಿಣಿ ಅವರ ಸಣ್ಣಕಥೆಗಳ ಸಂಕಲನ ‘ನೋ ಪ್ರೆಸೆಂಟ್ಸ್‌ ಪ್ಲೀಸ್‌–ಮುಂಬೈ ಸ್ಟೋರೀಸ್‌’ಗೆ ಅಮೆರಿಕ ಸಾಹಿತ್ಯ ಭಾಷಾಂತರಕಾರರ ಸಂಸ್ಥೆಯು (ಎ.ಎಲ್.ಟಿ.ಎ) ನೀಡುವ ‘ಅಮೆರಿಕ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾಗಿದೆ. 2019ರಲ್ಲಿ ದಕ್ಷಿಣ ಏಷ್ಯಾದ ಪ್ರತಿಷ್ಠಿತ ಡಿಎಸ್‌ಸಿ ಅಂತರರಾಷ್ಟ್ರೀಯ ಪ್ರಶಸ್ತಿಯನ್ನೂ ಈ ಅನುವಾದಿತ ಕೃತಿ ಮುಡಿಗೇರಿಸಿಕೊಂಡಿತ್ತು. ಧಾರವಾಡದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದು ಪಿಎಚ್‌.ಡಿಯನ್ನು ಅಮೆರಿಕದಲ್ಲಿ ಮುಗಿಸಿ ಮುಂಬೈನಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ತೇಜಸ್ವಿನಿ ಅವರು ಪ್ರಸ್ತುತ ಅಹಮದಾಬಾದ್‌ ವಿಶ್ವವಿದ್ಯಾಲಯದ ಸೆಂಟರ್‌ ಫಾರ್‌ ಇಂಟರ್‌ ಏಷ್ಯನ್‌ ರಿಸರ್ಚ್‌ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ಅವರು ‘ಭಾನುವಾರದ ಪುರವಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ...

––––

‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ಕೃತಿಯನ್ನು ಅನುವಾದಕ್ಕೆ ಆಯ್ಕೆ ಮಾಡಿಕೊಂಡ ಹಿಂದಿದ್ದ ಕಾರಣ, ಪ್ರೇರಣೆ ಏನು?

ಜಯಂತ ಕಾಯ್ಕಿಣಿ ಅವರಿಗೂ ನನಗೂ ಬಹಳ ವರ್ಷಗಳ ಪರಿಚಯ. ಸುಮಾರು 70ರ ದಶಕದಲ್ಲಿ ಕಾಯ್ಕಿಣಿ ಅವರ ಕವಿತೆಗಳನ್ನು ನಾನು ಇಂಗ್ಲಿಷ್‌ಗೆ ಅನುವಾದಿಸಿದ್ದೆ. ಆ ಸಂದರ್ಭದಲ್ಲಿ ನಾನೂ ಕನ್ನಡ, ಇಂಗ್ಲಿಷ್‌ನಲ್ಲಿ ಕವಿತೆ ಬರೆಯುತ್ತಿದ್ದೆ. ಅವರು ಬರೆದ ಕವಿತೆಗಳು ನನಗೆ ಇಷ್ಟವಾಗಿದ್ದವು. ಇದಾದ ನಂತರ ಬಹಳ ವರ್ಷ ನಾನು ಅವರೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಸುಮಾರು 1998ರಲ್ಲಿ ನಾನು ಬೆಂಗಳೂರಿಗೆ ವಾಪಾಸಾಗಿದ್ದೆ. ಇದೇ ಸಮಯಕ್ಕೆ ಕಾಯ್ಕಿಣಿ ಅವರೂ ಮುಂಬೈ ತೊರೆದು ಬೆಂಗಳೂರಿಗೆ ಬಂದಿದ್ದರು. ಮತ್ತೆ ನಮ್ಮ ಭೇಟಿಯಾಯಿತು. ನಾನು ಕಥೆಗಳನ್ನು ಓದಲು ಪ್ರಾರಂಭಿಸಿದ್ದೆ. ಅವರು ಬರೆದ ಕಥೆಗಳೂ ಹಿಡಿಸಿದವು. ಅದಾಗಲೇ ನಾನು ವೈದೇಹಿ ಅವರು ಬರೆದಿದ್ದ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದೆ. ಜೊತೆಗೆ ಮತ್ತೊಂದಿಷ್ಟು ಅನುವಾದಗಳನ್ನೂ ಮಾಡಿದ್ದೆ. ಆಗ ಹಾರ್ಪರ್‌ ಕಾಲಿನ್ಸ್‌ ಸಂಪಾದಕಿಯಾಗಿದ್ದ ವಿ.ಕೆ.ಕಾರ್ತಿಕ ಅವರು ‘ಜಯಂತ ಕಾಯ್ಕಿಣಿ ಅವರ ಕಥೆಗಳನ್ನು ನೀವೇಕೆ ಅನುವಾದಿಸಬಾರದು’ ಎಂದು ಕೇಳಿದ್ದರು. ಕಾರ್ತಿಕ ಅವರು ಪೆಂಗ್ವಿನ್‌ ಸಂಪಾದಕಿಯಾಗಿದ್ದ ಸಂದರ್ಭದಲ್ಲಿ ವೈದೇಹಿ ಅವರ ಕಥೆಗಳನ್ನು ನಾನು ಇಂಗ್ಲಿಷ್‌ಗೆ ಅನುವಾದಿಸಿದ್ದೆ.

ಕಾಯ್ಕಿಣಿ ಅವರ ಜೊತೆ ಮಾತನಾಡಿ ಒಂದಿಷ್ಟು ಕಥೆಗಳನ್ನು ಆಯ್ಕೆ ಮಾಡಿಕೊಂಡೆವು. ನಂತರದಲ್ಲಿ ಅನುವಾದ ಪ್ರಕ್ರಿಯೆ. ಹೀಗಾಗಿ ಇಲ್ಲಿ ಪ್ರೇರಣೆ ಏನೂ ಇಲ್ಲ. (ನಗುತ್ತಾ) ಅಂಥ ವಿಚಿತ್ರವಾದ ಕಥೆಯೇನಿಲ್ಲ. ಪ್ರಕಾಶಕರು ಕೇಳಿದರು, ನಾನು ಅನುವಾದ ಮಾಡಿದೆ ಅಷ್ಟೇ... ಕಥೆಗಳನ್ನಂತೂ ನಾನು ಮುಂಚೆಯೇ ಮೆಚ್ಚಿಕೊಂಡಿದ್ದೆ.

ಕಾಯ್ಕಿಣಿ ಅವರ ಕಥೆಗಳನ್ನು ಓದಿದ್ದು ರಸಾನುಭವಕ್ಕಾಗಿಯೋ ಅಥವಾ ಅನುವಾದಕ್ಕಾಗಿಯೋ?

ಮುಂಚೆ ಇತರೆ ಕಥೆಗಳನ್ನು ಓದುವ ಹಾಗೆಯೇ ಕಾಯ್ಕಿಣಿ ಅವರ ಕಥೆಗಳನ್ನೂ ಓದಿದ್ದೆ. ಕಥೆಗಳನ್ನು ಮೆಚ್ಚಿಕೊಂಡು ಬಹಳ ಚೆನ್ನಾಗಿವೆ ಎಂದು ಹೇಳಿದ್ದೆ. ಆಗ ಅನುವಾದದ ವಿಚಾರ ಯೋಚನೆಯಲ್ಲಿ ಇರಲಿಲ್ಲ. ಅನುವಾದಕ್ಕಾಗಿ ಕೇಳಿದಾಗ ಮತ್ತೊಮ್ಮೆ ಬೇರೆ ರೀತಿಯೇ ಓದಬೇಕಲ್ಲವೇ? ಮೆಚ್ಚಿಕೊಂಡಿದ್ದ ಕಥೆಗಳನ್ನು ಬೇರೆ ಕಣ್ಣಿನಿಂದ ಓದಬೇಕಾಯಿತು. ಈ ಕಥೆಗಳನ್ನು ಅನುವಾದ ಮಾಡಬಹುದೇ? ಮಾಡಿದರೆ ಯಾವ ರೀತಿ? ಸ್ಯಾಂಪಲ್‌ಗೆ ಒಂದೆರಡು ಕಥೆಗಳನ್ನು ಅನುವಾದ ಮಾಡಿದೆ. ಇದು ಜಯಂತ ಅವರಿಗೆ ಇಷ್ಟವಾಯಿತು. ಹೀಗಾಗಿ ಮುಂದುವರಿದೆ.

ಅನುವಾದ ಸಂದರ್ಭದಲ್ಲಿ ನೀವು ಎದುರಿಸಿದ ಸವಾಲುಗಳೇನು?

ಜಯಂತ ಕಾಯ್ಕಿಣಿ ಅವರ ಕಥೆ, ಕವನಗಳನ್ನು ಅನುವಾದ ಮಾಡುವ ಸಂದರ್ಭದಲ್ಲಿ ನನಗೆ ಎದುರಾಗುವ ಕಷ್ಟ ಎಂದರೆ ಭಾಷೆಯ ಲಯ. ಸುಮ್ಮನೆ ಓದಿದರೆ ಸಾಧಾರಣವಾಗಿದೆಯಲ್ಲವೇ? ಕಷ್ಟದ ಕನ್ನಡವೇನಲ್ಲ ಎಂದೆನಿಸುತ್ತದೆ. ವೈದೇಹಿ ಅವರ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸುವುದು ಜಟಿಲವೆನಿಸಿತ್ತು. ಅವರ ಕಥೆಗಳಲ್ಲಿ ಕುಂದಾಪುರ ಕನ್ನಡದ ಶೈಲಿಯಿದೆ. ಇದಕ್ಕೆ ಹೋಲಿಸಿದರೆ ಜಯಂತ ಅವರ ಕಥೆಗಳಲ್ಲಿ ಸಾಧಾರಣ ಕನ್ನಡ ಇರುವಂತೆ ಕಾಣುತ್ತದೆ. ಅನುವಾದ ಕಷ್ಟವಲ್ಲ ಎಂದೆನಿಸಿತ್ತು. ಆದರೆ ‘ಭಾಷೆಯ ಲಯ’ ಕಷ್ಟವಾಯಿತು. ಈ ಸವಾಲನ್ನು ಸಮರ್ಪಕವಾಗಿ ಎದುರಿಸಿದ್ದೇನೆ ಎನಿಸುತ್ತಿದೆ.

ಜಯಂತ ಅವರ ಕಥೆಗಳಲ್ಲಿ ಪಾತ್ರಗಳು, ಜಾಗ, ಪರಿಸ್ಥಿತಿ ಎಲ್ಲವೂ ಸಾಧಾರಣ, ಸ್ಥಳೀಯವಾಗಿರುತ್ತದೆ. ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ನಲ್ಲಿನ ಪಾತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ತಿಳಿಯುತ್ತದೆ. ಇದನ್ನು ಓದುತ್ತ ಹೋದರೆ ತೀರಾ ಸಾಧಾರಣವಾಗಿರುವ ಪಾತ್ರಗಳು ಏಕಾಏಕಿ ತುಂಬಾ ಅಸಾಧಾರಣವಾಗಿಬಿಡುತ್ತವೆ. ಇದನ್ನು ಇಂಗ್ಲಿಷ್‌ಗೆ ಹೇಗೆ ಅನುವಾದಿಸುವುದು ಎನ್ನುವುದು ಮತ್ತೊಂದು ಸವಾಲಾಗಿತ್ತು. ಒಂದೊಂದು ಪದ, ಒಂದೊಂದು ವಾಕ್ಯವನ್ನು ಅನುವಾದ ಮಾಡಿದರೆ ಖಂಡಿತವಾಗಿಯೂ ಇದನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ಅನುವಾದ ಓದಿದವರು ಇದನ್ನು ಮೆಚ್ಚಿಕೊಂಡಿದ್ದಾರೆ. ಅವರಿಗೆ ಇದು ಅರ್ಥವಾಗಿದೆ. ಕಾಯ್ಕಿಣಿ ಅವರ ಬರವಣಿಗೆಯಲ್ಲಿ ಸಾಧಾರಣವಾಗಿರುವುದು ಹೇಗೆ ಅಸಾಧಾರಣವಾಗುತ್ತದೆ ಎನ್ನುವುದನ್ನು ನಾನು ಅನುವಾದದಲ್ಲಿ ಕಟ್ಟಿಕೊಟ್ಟಿದ್ದೇನೆ. ‘ಇದು ಇಂಗ್ಲಿಷ್‌ನಲ್ಲೇ ಬರೆದ ಹಾಗಿದೆ’ ಎಂದವರೂ ಇದ್ದಾರೆ. ‘ಇಲ್ಲ ಇದು ಬೇರೆ ದೇಶದ್ದೇ ಅನಿಸುತ್ತದೆ. ಆದರೆ ಓದುವುದಕ್ಕೆ ಯಾವುದೇ ತೊಡಕಿಲ್ಲ’ ಎಂದವರೂ ಇದ್ದಾರೆ.

ಕಥೆಗಳ ಶೀರ್ಷಿಕೆ ವಿಚಾರದಲ್ಲೂ ಜಯಂತ ಅವರ ಬಳಿ ಚರ್ಚಿಸಿದ್ದೆ. ಬಹುತೇಕ ಎಲ್ಲ ಕಥೆಗಳ ಶೀರ್ಷಿಕೆಯನ್ನು ಹಾಗೆಯೇ ಅನುವಾದ ಮಾಡಿದ್ದೇನೆ. ‘ಅಮೃತ ಬಳ್ಳಿ ಕಷಾಯ’ ಒಂದನ್ನು ಹೊರತುಪಡಿಸಿ. ಇದನ್ನು ಅನುವಾದ ಮಾಡುವ ಸಂದರ್ಭದಲ್ಲಿ ‘ಅನ್‌ಫ್ರೇಮಡ್‌’ ಎಂದು ಬದಲಾಯಿಸಿದೆ. ಸುಮಾರು 20 ವರ್ಷ ಹಿಂದೆ ನಾನು ‘ಸೈಟಿಂಗ್‌ ಟ್ರಾನ್ಸ್‌ಲೇಷನ್‌’ ಎಂಬ ಪುಸ್ತಕ ಬರೆದಿದ್ದೇನೆ. ಇದರಲ್ಲಿ ‘ಟ್ರಾನ್ಸ್‌ಲೇಷನ್‌ ಥಿಯರಿ’ ಬಗ್ಗೆ ಬರೆದಿದ್ದೇನೆ. ನಾನು ಅನುವಾದ ಮಾಡುವುದು ಎಲ್ಲರೂ ಮಾಡಿದಂತಂಲ್ಲ. ಅದರ ಬಗ್ಗೆ ಫಿಲೋಸಫಿ ಥಿಯರಿ ಬರೆದು ಅನುವಾದ ಮಾಡುತ್ತೇನೆ.

ಮುಂಬೈ ವಾತಾವರಣವನ್ನು ಹತ್ತಿರದಿಂದ ಕಂಡಿದ್ದು, ಅನುಭವಿಸಿದ್ದು ಅನುವಾದಕ್ಕೆ ಸಹಾಯವಾಗಿದೆಯೇ?

ಸ್ನಾತಕೋತ್ತರ ಪದವಿ ಸಂದರ್ಭದಲ್ಲಿ ಮಾತ್ರವಲ್ಲದೆ ಬಹಳ ವರ್ಷ ನಾನು ಮುಂಬೈನಲ್ಲೇ ಕೆಲಸ ಮಾಡಿದ್ದೇನೆ. 15–20 ವರ್ಷದಿಂದ ಹೋಗಿ ಬರುವ ನಗರವದು. ಹೀಗಾಗಿ ಮುಂಬೈ ಚೆನ್ನಾಗಿ ಪರಿಚಯವಿದೆ. ಆದರೆ ನಗರದ ಪರಿಚಯವಷ್ಟೇ ಅನುವಾದಕ್ಕೆ ಸಹಾಯವಾಗುವುದಿಲ್ಲ. ಜಯಂತ ಹಾಗೂ ನನ್ನ ಆಲೋಚನಾ ರೀತಿಗೆ ಬಹಳ ಹೋಲಿಕೆ ಇದೆ. ಜಯಂತ ಅವರಿಗೆ ಮುಂಬೈ ಬಗ್ಗೆ ಹೆಚ್ಚಿನ ಪ್ರೀತಿ ಹಾಗೂ ಕುತೂಹಲವೂ ಇದೆ. ಅದೇ ರೀತಿ ನನಗೂ. ಮುಂಬೈ ಏನೋ ಒಂಥರಾ ವಿಚಿತ್ರವಾಗಿ ಕಂಡರೂ ಬಹಳ ಇಷ್ಟವಾಗುತ್ತದೆ. ಬೇರೆ ಬೇರೆ ಅವಧಿಯಲ್ಲಿ ನಾನೂ, ಅವರೂ ಮುಂಬೈನಲ್ಲಿದ್ದೆವು. ನಾವು ಒಳಗಿನವರು ಅನ್ನಿಸಿದರೂ ಹೊರಗಿನವರಲ್ಲವೇ? ಈ ಸಂಯೋಜನೆ ಒಂದು ರೀತಿ ಕುತೂಹಲಕಾರಿಯಾಗಿ ಕಾಣಿಸುತ್ತದೆ. ಹೀಗಾಗಿ ಇಬ್ಬರೂ ಮುಂಬೈಯನ್ನು ಬೇರೆ ರೀತಿಯೇ ನೋಡಿದ್ದೇವೆ.

ಕನ್ನಡದಿಂದ ಇತರೆ ಭಾಷೆಗಳಿಗೆ ಅನುವಾದದ ಹೊರಹರಿವಿನ ಬಗ್ಗೆ ನಿಮ್ಮ ಅಭಿಪ್ರಾಯ?

ನಾನಿಲ್ಲಿ ಹೇಳುತ್ತಿರುವುದು ಅಭಿಪ್ರಾಯವಲ್ಲ. ಏಕೆಂದರೆ ನಾನು ಬಹಳ ವೃತ್ತಿಪರವಾಗಿ ಅನುವಾದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿಲ್ಲ. ಸಾಮಾನ್ಯವಾಗಿ ಹೇಳುವುದಿದ್ದರೆ ಇದು ಸತ್ಯವೇ. ಕನ್ನಡ ಭಾಷೆಯಲ್ಲಷ್ಟೇ ಅಲ್ಲ, ಭಾರತದ ಇತರೆ ಭಾಷೆಗಳಲ್ಲೂ ಇದೇ ಕೊರಗಿದೆ. ಪ್ರಸ್ತುತ ಮಲಯಾಳಂನಿಂದ ಬಹಳಷ್ಟು ಕಥೆಗಳು, ಕೃತಿಗಳು ಅನುವಾದವಾಗಿ ಬರುತ್ತಿವೆ. ಮಲಯಾಳಂನಲ್ಲಿ ಹೊಸ ಬಗೆಯ ಕಾದಂಬರಿಗಳು ಪ್ರಕಟವಾಗುತ್ತಿದ್ದು, ಅನುವಾದಕರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮಲ್ಲಿ ಅನುವಾದಕರ ಕೊರತೆ ಇದೆ. ಬೆರಳೆಣಿಕೆಯಷ್ಟೇ ಜನರಿದ್ದಾರೆ. ಕೆಲವೊಂದು ಕಥೆಗಳನ್ನು ಅನುವಾದ ಮಾಡಬಹುದು, ಕೆಲವೊಂದನ್ನು ಆಗುವುದಿಲ್ಲ. ಹೀಗಾಗಿ ಎಲ್ಲ ಭಾಷೆಗಳಲ್ಲೂ ಈ ಸಮಸ್ಯೆ ಇದೆ. ಕೆಲವು ಕೃತಿಗಳು ಅನುವಾದಕ್ಕೆ ಒಗ್ಗುತ್ತವೆ, ಕೆಲವು ಒಗ್ಗುವುದಿಲ್ಲ. ಅನುವಾದಕರ ಕೌಶಲ ಎಷ್ಟೇ ಇರಬಹುದು, ಕೆಲವೊಂದು ಕೃತಿಗಳು ಅನುವಾದಕ್ಕೆ ಸರಿಹೋಗುವುದಿಲ್ಲ. ಇಂಥವುಗಳಿಗೆ ಕೈಹಾಕಲು ಹೋಗಬಾರದು.

ಕಾಯ್ಕಿಣಿ ಅವರು ‘ಭಾಷೆಯನ್ನು ಮೀರಿ ನಿಂತ ಬರಹಗಾರ’ರಾಗಿ ಕಂಡಿದ್ದು ಹೇಗೆ?

ಕಾಯ್ಕಿಣಿ ಹೀಗೆ ಕಾಣಿಸಿದ್ದು ಅವರ ಕಥೆಗಳನ್ನು ಓದಿದಾಗ. ಹಾಗೆಂದು ಎಲ್ಲ ಕಥೆಗಳನ್ನು ಓದುವ ಸಂದರ್ಭದಲ್ಲಿ ಅಲ್ಲ. ಹಲವು ಕಥೆಗಳಲ್ಲಿ ಅವರು ಗೋಕರ್ಣ, ಕಾರವಾರದ ಬಗ್ಗೆ ಬರೆದಿದ್ದಾರೆ. ಇವೆಲ್ಲವೂ ಕರ್ನಾಟಕದ ಬೇರಿನವು. ಮುಂಬೈ ಕಥೆಗಳಲ್ಲಿ ಕನ್ನಡಿಗರೇ ಇಲ್ಲ. ಒಂದೆರಡು ಪಾತ್ರಗಳು ಅಲ್ಲಲ್ಲಿ ಇರಬಹುದು. ಕಥೆಗಳಲ್ಲಿ ತುಂಬಿರುವ ಕನ್ನಡೇತರ ಪಾತ್ರಗಳು, ನಿರ್ದಿಷ್ಟ ಭಾಷೆಯೊಂದಿಗೆ ವ್ಯಕ್ತಿಯನ್ನು ಗುರುತಿಸುವ ಮಿತಿಯನ್ನು ಮೀರಿ ನಿಲ್ಲುತ್ತವೆ.ಕಥೆಗಳನ್ನು ಕನ್ನಡದಲ್ಲಿ ಬರೆದರೂ, ಸಂಭಾಷಣೆ ಕನ್ನಡದಲ್ಲಿ ಇದ್ದರೂ ಕೆಲ ಪಾತ್ರಗಳು ಹಿಂದಿ, ಗುಜರಾತಿ, ಒರಿಯಾ ಭಾಷೆ ಮಾತನಾಡುತ್ತವೆ. ಹೀಗಾಗಿ ಅನುವಾದದ ವೇಳೆ ನಾನು ಹಿಂದಿ, ಉರ್ದು ಬಳಸಿದ್ದೆ. ಬಳಕೆ ಜಾಸ್ತಿಯಾಯಿತೇನೋ ಎಂದೆನಿಸಿದಾಗ ಜಯಂತ ಅವರು ‘ಇರಲಿ. ಹೀಗಿದ್ದರಷ್ಟೇ ಆ ಪಾತ್ರಗಳು ಆ ಪ್ರದೇಶದವು ಎಂದು ಓದುಗರಿಗೆ ತಿಳಿಯುತ್ತದೆ’ ಎಂದರು. ಈ ಪಾತ್ರಗಳಾವುವೂ ಕನ್ನಡದವರು ಎಂದೆನಿಸದಿದ್ದರೂ, ಕನ್ನಡದಲ್ಲಿ ಅವುಗಳನ್ನು ಓದುತ್ತೇವೆ.
ಈ ಕಥೆಗಳನ್ನು ಕೇವಲ ಅಮೆರಿಕದ ಓದುಗರಿಗೆ ನಾನು ಅನುವಾದ ಮಾಡಿಲ್ಲ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇಂಗ್ಲಿಷ್‌ ಕೃತಿಗಳನ್ನು ಓದುತ್ತಾರೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅನುವಾದ ಮಾಡಿದ್ದೇನೆ. ಸ್ಥಳೀಯ ಓದುಗರಿಗಾಗಿ ಮಾಡಿದ್ದ ಈ ಕೃತಿಯನ್ನು ಪ್ರಸ್ತುತ ಜಗತ್ತಿನಾದ್ಯಂತ ಜನ ಓದುತ್ತಿದ್ದಾರೆ.

ಅನುವಾದ ವಿಮರ್ಶೆಯ ಕುರಿತು ನಿಮ್ಮ ಅಭಿಪ್ರಾಯ?

ಈ ಪ್ರಶಸ್ತಿ ಬಂದ ಮೇಲೆ ಎಲ್ಲರೂ ಕಾಯ್ಕಿಣಿ ಅವರಿಗೆ ಕರೆ ಮಾಡಿ ಶುಭಾಶಯ ಕೋರುತ್ತಿದ್ದಾರಂತೆ. ಇದರಿಂದ ಅವರಿಗೆ ಕೋಪ ಬಂದಿದೆ. ಅವರು ನನಗೆ ಕರೆ ಮಾಡಿ ‘ನನಗೆ ಏಕೆ ಶುಭಾಶಯ ಕೋರುತ್ತಿದ್ದಾರೋ ತಿಳಿಯುತ್ತಿಲ್ಲ. ಅನುವಾದಿತ ಕೃತಿಗಲ್ಲವೇ ಪ್ರಶಸ್ತಿ ಬಂದಿದ್ದು’ ಎಂದರು. ಅನುವಾದ ಕೃತಿಗೆ ಮೊದಲು ಡಿಎಸ್‌ಸಿ ಅಂತರರಾಷ್ಟ್ರೀಯ ಪುರಸ್ಕಾರ ಬಂದಾಗ ನನಗೆ ಬಹಳ ಖುಷಿಯಾಗಿತ್ತು. ಈ ಕುರಿತು ಬಂದ ವಿಮರ್ಶೆ, ಪ್ರತಿಕ್ರಿಯೆಗಳಲ್ಲಿ ಕೊನೆಯಲ್ಲಿ ಒಂದು ಸಾಲಿನಲ್ಲಿ ‘ಅನುವಾದ ಬಹಳ ಚೆನ್ನಾಗಿ ಬಂದಿದೆ’ ಎಂದು ಬರೆಯುತ್ತಿದ್ದರು. ವಿಚಿತ್ರ ಎನಿಸುತ್ತದೆ. ಲೋಕವಿರುವುದೇ ಹಾಗೆ ಬಿಡಿ. ಅನುವಾದಕರು ಇಲ್ಲದೇ ಇಂಥ ಕೃತಿಗಳೇ ಇರುವುದಿಲ್ಲವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT