ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ‘ಮಧ್ಯಬಿಂದು’ | ಸಾವಿನ ಮನೆ ಹತ್ತಿರವಾಗುತ್ತಿರುವಾಗ ಇನ್ನೆಂಥ ದ್ವೇಷ?

Last Updated 21 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಪಶ್ಚಿಮ ಕರಾವಳಿಯಲ್ಲಿ ನೆಲೆಗೊಂಡಿರುವ ಈ ಊರಲ್ಲಿ ಈತ ಕಳೆದ ಐದು ದಶಕಗಳಿಂದ ವಾಸವಾಗಿದ್ದಾನೆ. ಪೂರ್ವ ದಿಕ್ಕಿನಲ್ಲಿ ಸಹ್ಯಾದ್ರಿ ಶೃಂಗಗಳ ಸಾಲು. ಪಶ್ಚಿಮಕ್ಕೆ ಅರಬ್ಬಿ ಸಮುದ್ರ. ಜಿಲ್ಲಾ ಸ್ಥಳದೊಂದಿಗೆ ಅನ್ಯ ಸ್ಥಳಗಳನ್ನು ಜೋಡಿಸುವ ಮಹತ್ವದ ಜಂಕ್ಷನ್ ಆಗಿರುವ ಈ ಊರು ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತನ್ನದೇ ಆದ ಹೆಗ್ಗಳಿಕೆಯನ್ನು ಹೊಂದಿದೆ. ಬದುಕಿನ ಬಹುಭಾಗವನ್ನು ಇದೇ ಊರಿನಲ್ಲಿ ಕಳೆದುದರಿಂದ ಈ ಊರಿನ ಬಗ್ಗೆ ಈತನಿಗೆ ವಿಶೇಷ ಪ್ರೀತಿ. ಇಲ್ಲಿನ ಸಂಸ್ಕೃತಿ, ವಿವಿಧ ಜನಸಮದಾಯಗಳು ಮತ್ತು ವಿವಿಧ ಸಂಸ್ಕೃತಿಗಳು ಈತನನ್ನು ಪ್ರಭಾವಿಸಿವೆ.

ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಈತನ ಕಾರ್ಯಕ್ರಮಗಳಲ್ಲಿ ಬೆಳಗಿನ ವಾಯುವಿಹಾರ ಕೂಡ ಸೇರಿಕೊಂಡಿದೆ. ಅನೇಕ ಕವಿಗಳು, ಸಾಹಿತಿಗಳು ಸೂರ್ಯೋದಯ ಕಾಲದ ಬೆಡಗನ್ನು, ಬೆಳಕನ್ನು ಅನೇಕ ಬಗೆಯಲ್ಲಿ ಬಣ್ಣಿಸಿದ್ದನ್ನು ಅರಿತಿರುವ ಈತ, ಈ ಬಣ್ಣನೆಗಳ ಗೊಡವೆ ಇಲ್ಲದೆಯೂ ಬೆಳಗು ಸಕಲ ಚರಾಚರಗಳನ್ನು ಕೂಡ ಅವರಿಸುತ್ತದೆ ಎಂಬ ಸತ್ಯವನ್ನು ಮನಗಂಡಿದ್ದು ಈ ವಾಯುವಿಹಾರದ ಸಮಯದಲ್ಲಿ.

ಮನೆಯ ಎದುರಿನ ರಸ್ತೆಗೆ ಸಮಾಂತರವಾಗಿ ಚತುಷ್ಪಥವಿದೆ. ಈ ಪಥಕ್ಕೆ ಲಂಬವಾಗಿ ಸಾಗುವ ರಸ್ತೆ ನಗರದಿಂದ ಮೂರು ಕಿಲೊಮೀಟರ್ ದೂರವಿರುವ ಒಂದು ಹಳ್ಳಿಯನ್ನು ತಲುಪುತ್ತದೆ. ವಿಶೇಷ ಜನಸಂಚಾರವಿರದ ಈ ರಸ್ತೆಯಲ್ಲಿ ಹೆಜ್ಜೆ ಇಡುತ್ತಿದ್ದಂತೆ ಒಂದರ ಹಿಂದೊಂದು ಕಾಣುವ ಸಹ್ಯ ಶಿಖರಗಳು ಎತ್ತರದಲ್ಲಿ ಸ್ಪರ್ಧೆ ನಡೆಸಿರುವುದು ಗೋಚರಿಸುತ್ತದೆ. ನೋಟವನ್ನು ಹಿಂದಕ್ಕೆ ಹರಿಸಿದಂತೆ ಶಿಖರಗಳು ಹಚ್ಚ ಹಸಿರಿನಿಂದ ನೀಲ ವರ್ಣದ ವಿವಿಧ ಛಾಯೆಗಳನ್ನು ಹೊದ್ದುಕೊಂಡಂತೆ ಭಾಸವಾಗುತ್ತದೆ. ಮಳೆಗಾಲದಲ್ಲಿ ಈ ಶಿಖರಗಳು ತಳೆವ ವರ್ಣವೈಭವ ಅನುಪಮ. ಆ ಐಸಿರಿಯನ್ನು ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಈ ಶಿಖರಗಳ ನಡುವಣ ಕಂದರಗಳಲ್ಲಿ ತೇಲಾಡುವ ಮೋಡಗಳು ಅಪೂರ್ವ ನೋಟಗಳನ್ನು ಸೃಷ್ಟಿಸುತ್ತವೆ. ಒಮ್ಮೊಮ್ಮೆ ರಸ್ತೆಯಾಚೆಯ ಬಯಲು ಸ್ಮಶಾನವಾಗಿ ಮಾರ್ಪಡುತ್ತದೆ. ಕೇರಿಯ ಯಾರದೋ ಶವ ಸುಡುಸುಡು ಬೆಂಕಿಯಲ್ಲುರಿದು ಕರಕಲಾಗುತ್ತಿರುತ್ತದೆ. ಬದುಕಿನ ಪಕ್ಕದಲ್ಲೇ ಸಾವು ಓಡಾಡುತ್ತಿರುವ ಅನುಭವ ಈತನಿಗೆ.

ಈ ಊರ ಸಮಷ್ಟಿಯೊಂದಿಗೆ ಈತ ಬೆರೆತುಹೋಗಿದ್ದಾನೆ. ಜನಸ್ನೇಹಿ ಮನೋಧರ್ಮದಿಂದ ಈತ ಹಲವರಿಗೆ ಪರಿಚಿತ. ನಗರದ ಕೆಲವರು ವಾಯುವಿಹಾರಕ್ಕೆ ಬರುತ್ತಾರೆ. ಈತನನ್ನು ಕಂಡು ಕೈಯನ್ನೆತ್ತಿಯೋ, ಬಲಗೈ ಹಸ್ತವನ್ನು ಎದೆಗೆ ಮುಟ್ಟಿಕೊಂಡೋ ಅಥವಾ ಆಧುನಿಕ ರೀತಿಯಲ್ಲಿ ಕೈಯೆತ್ತಿ ‘ಹಲೊ’ ಎಂದು ಕೂಗಿಯೋ ಅಭಿವಂದಿಸುತ್ತಾರೆ. ಇವೆಲ್ಲವೂ ಅಲ್ಲಿನ ಜನ ತನಗೆ ನೀಡುವ ಗೌರವದ ಸಂಕೇತ ಎಂದು ಈತ ಅಂದುಕೊಂಡಿದ್ದಾನೆ. ಹಾಗೆ ಅಂದುಕೊಂಡಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಈತ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಮೂರು ದಶಕಗಳ ಕಾಲ ಕೆಲಸ ಮಾಡಿ ಹೆಸರು ಗಳಿಸಿದ್ದ. ಊರ ಜನ ಕೂಡ ಈತನ ಗುಣವನ್ನು ಗುರುತಿಸಿದ್ದರು ಎಂಬುದರಲ್ಲಿ ಅನುಮಾನವೇನೂ ಇರಲಿಲ್ಲ. ಜನ ನೀಡುವ ಗೌರವಕ್ಕೆ ಸಂವಾದಿಯಾಗಿ ಈತ ಕೂಡ ಆ ಊರ ಜನರ ನಡುವೆ ಉತ್ತಮ ಸಂಪರ್ಕವನ್ನು ಕಟ್ಟಿಕೊಂಡಿದ್ದಾನೆ.

ಈತ ವಾಯುವಿಹಾರಕ್ಕೆಂದು ಹೋದ ಸಮಯದಲ್ಲಿ ದೂರದಿಂದ ಬರುತ್ತಿದ್ದಾಗಲೇ ‘ಆತ’ನ ಎತ್ತರದ ಪ್ರೊಫೈಲ್ ಗೋಚರವಾಗುತ್ತದೆ. ನೇರ ನಿಲುವಿನ ಮತ್ತು ಕ್ರಮಬದ್ಧ ನಡಿಗೆಯ ಬಗೆಯಿಂದಲೇ ಆತನ ಬರುವಿಕೆಯನ್ನು ಗುರುತಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಆತ ಏಕಾಂಗಿಯಾಗಿ ಕಾಣಸಿಗುತ್ತಾನೆ. ಕೆಲವೊಮ್ಮೆ ಆತನೊಂದಿಗೆ ಒಬ್ಬಿಬ್ಬರು ಮಾತನಾಡುತ್ತ ಹೋಗುವ ಸಂದರ್ಭಗಳೂ ಇವೆ. ಆತನ ಮಾತಿನ ಗತ್ತನ್ನು ಗಮನಿಸುವವರು ತನ್ನ ಸಮೀಪವರ್ತಿಗಳಿಗೆ ಆತ ಸಲಹೆ ನೀಡುತ್ತಿರುವನೇನೋ ಎಂದು ಭಾವಿಸಬಹುದಾಗಿದೆ. ಆ ಸಮೀಪವರ್ತಿಗಳ ಆಂಗಿಕವನ್ನು ಗಮನಿಸಿದರೆ ಆತನ ಸಲಹೆ ಕೇಳಲೆಂದೇ ಬಂದಿದ್ದಾರೇನೋ ಎಂದೆನಿಸುವಂತಿದೆ.

ಈತನಿಗೆ ಆತ ಅಪರಿಚಿತನಲ್ಲ. ಹಾಗೆಂದು ತೀರ ಪರಿಚಿತನೂ ಅಲ್ಲ. ಈರ್ವರೂ ಬಹುಕಾಲ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದವರು. ಸೇವಾವಧಿಯ ನೆಲೆಯಲ್ಲಿ ಆತನಿಗಿಂತ ಈತ ಎರಡು ವರ್ಷಗಳಷ್ಟು ಹಿರಿಯ. ಈತ ನಿವೃತ್ತಿಯಾಗುವ ಮುನ್ನವೇ ಆತ ತನ್ನ ಸೇವೆ ಮುಗಿಸಿ ಊರನ್ನು ಸೇರಿದ್ದ. ನಿವೃತ್ತಿಯ ನಂತರ ಆ ಊರಿನಲ್ಲಿ ಈತ ನೆಲೆಗೊಂಡಾಗ ನಡೆದ ಈರ್ವರ ಮೊದಲ ಮುಖಾಮುಖಿ ವಿಚಿತ್ರವಾಗಿತ್ತು. ಮೊದಲನೆಯ ಸಲ ಈರ್ವರೂ ಎದುರುಬದುರಾಗಿ ನಡೆದು ಹೋಗುತ್ತಿದ್ದರು. ಈತನೇ ಕೈಯೆತ್ತಿ ಆತನ ಗಮನ ಸೆಳೆಯಬಹುದಿತ್ತು. ಮುಗುಳುನಗೆ ಬೀರಬಹುದಿತ್ತು. ‘ಹಲೊ’ ಎನ್ನಬಹುದಿತ್ತು. ಪ್ರಾಯಶಃ ಮೊದಲಿಗೆ ಆತ ಮಾತನಾಡಿಸಲಿ ಎಂದು ಈತ ಅಂದುಕೊಂಡನೋ ಅಥವಾ ಈತನನ್ನು ಆತ ಮನ್ನಿಸಲಿಲ್ಲವೊ. ಈತನಿಗೆ ಗೊಂದಲ; ಸುಮ್ಮನೆ ಮುಖ ತಿರುವಿ ಆತನನ್ನು ದಾಟಿ ಹೋಗಿಬಿಟ್ಟ. ಯಾಕೆ ಹಾಗೆ ವರ್ತಿಸಿದೆ ಎಂಬ ಪ್ರಶ್ನೆಗೆ ಈತನಲ್ಲಿ ಉತ್ತರವಿಲ್ಲ. ಆತನನ್ನು ಕಂಡಾಗಲೆಲ್ಲ ಈತ ಕಸಿವಿಸಿಗಳ್ಳುತ್ತಿದ್ದ. ಆತ ಸಮೀಪಿಸುತ್ತಿದ್ದಂತೆ ಈತ ನೋಟವನ್ನು ಬದಲಿಸಿ ಬೇರೆಲ್ಲೋ ನೋಡುತ್ತ ಆತನನ್ನು ದಾಟಿ ಹೊರಟು ಬಿಡುತ್ತಿದ್ದ. ಸಂಕೋಚವೇ? ಭಯವೇ? ಅರ್ಥವಾಗದ ಭಾವ. ಯಾಕಾಗಿ ಸಂಕೋಚ? ಯಾವ ಭಯ? ಆತ ತನ್ನ ಬಗ್ಗೆ ಏನನ್ನು ಯೋಚಿಸುತ್ತಿರಬಹುದು? ತಾನಾದರೂ ಆತನ ಬಗ್ಗೆ ಯಾಕೆ ಯೋಚಿಸಬೇಕು? ಅದೆಷ್ಟು ದಿನ ಈ ನಾಟಕ ನಡೆಯಲು ಸಾಧ್ಯ? ಇಬ್ಬರೂ ಇದೇ ಊರಲ್ಲಿ ಅದೆಷ್ಟು ದಿನ ಕಳೆಯಬೇಕಿದೆಯೊ. ಒಂದು ದಿನ ಈ ಸ್ಥಿತಿ ಕೊನೆಗೊಳ್ಳಬೇಕಲ್ಲವೇ? ಕೊನೆಗೊಳ್ಳಲೇ ಬೇಕೇ? ಹಲವು ದಿನ ಈ ಸ್ಥಿತಿಯನ್ನು ಅನುಭವಿಸಿದ ಈತ ದಿನ ಕಳೆದಂತೆ ಮಾಮೂಲಿ ಮನುಷ್ಯನಾದ. ದಿನದಿಂದ ದಿನಕ್ಕೆ ಈತನ ನೋಟಗಳು ಸಹಜಗೊಂಡವು. ಈರ್ವರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡವರ ಹಾಗೆ ತಮ್ಮ ಪಾಡಿಗೆ ತಾವು ಹೊರಟುಬಿಡುತ್ತಿದ್ದರು.

ಕೆಲವು ಸಲ ಆತನ ಜೊತೆಗಿದ್ದವರು ಈತನಿಗೂ ಪರಿಚಿತರಾಗಿರುತ್ತಿದ್ದರು. ಅವರು ಈತನಿಗೆ ವಂದಿಸಿದಾಗ ಈತನೂ ಪ್ರತಿವಂದಿಸುತ್ತಿದ್ದ. ಆತ ಪ್ರತಿಕ್ರಿಯಿಸದೆ ಅವರೊಡನೆ ಮಾತನಾಡುವುದನ್ನು ಮುಂದುವರಿಸಿದಂತೆ ನಟಿಸಿ ಹೊರಟುಬಿಡುತ್ತಿದ್ದ. ಕೆಲವೊಮ್ಮೆ ಈತನೊಡನೆ ಇದ್ದವರು ಆತನನ್ನು ವಂದಿಸುತ್ತಿದ್ದರು. ಈತ ಪ್ರತಿಕ್ರಿಯಿಸದೆ ಸಂಗಾತಿಗಳೊಡನೆ ಮುಂದೆ ಸಾಗುತ್ತಿದ್ದ.
ಸೇವೆಯ ಅವಧಿಯಲ್ಲಿ ಆತ ಒಂದು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ, ಈತನ ಕಾರ್ಯಕ್ಷೇತ್ರ ಬೇರೊಂದು ವಿಭಾಗದಲ್ಲಿತ್ತು. ಅಪರೂಪಕ್ಕೊಮ್ಮೆ ಭೇಟಿಯಾದಾಗ ವಂದನೆ-ಪ್ರತಿವಂದನೆಗಳು ಜಾರಿಯಲ್ಲಿದ್ದವು. ಸಹೋದ್ಯೋಗಿಗಳು ಕೂಡ ಆತನೊಡನೆ ಸ್ಪಂದಿಸುವಾಗ ಒಂದಷ್ಟು ಅಂತರ ಕಾದುಕೊಳ್ಳುತ್ತಿದ್ದರು ಎಂಬುದು ಈತನ ಅನಿಸಿಕೆ. ಪ್ರಾಯಶಃ ಆತನ ಕುರಿತು ತನಗರಿವಿರದ ವಿಷಯಗಳನ್ನು ಅವರು ಅರಿತಿರಬಹುದು ಎಂದೀತ ಅಂದುಕೊಂಡಿದ್ದ.

ಆತನದು ಸದಾ ಗಂಭೀರ ವದನ. ಮುಖದಲ್ಲಿ ಸಹಜ ನಗು ಮೂಡದು. ಎಂದಾದರೂ ಆತ ನಕ್ಕಿದ್ದನ್ನು ನೋಡಿರುವೆನೇ? ನೆನಪಾಗದು. ಹೆಚ್ಚೆಂದರೆ ತುಟಿ ಒಂದೆಡೆ ಸರಿದು ವ್ಯಂಗ್ಯ ನಗೆ ಎನಿಸಿಕೊಂಡಿರಬಹುದು. ಎರಡೂ ತುಟಿಗಳ ಅಂಚು ಸರಿದು ಮಗುಳುನಗೆಯ ಸಮೀಪ ಹೋಗಿರಬಹುದು. ಒಮ್ಮೆ ಗೆಳೆಯರ ಗುಂಪು ಸೇರಿದಾಗ, ಆತನ ಉಪಸ್ಥಿತಿಯಲ್ಲಿ ಈತ ಒಂದು ಸಣ್ಣ ಜೋಕ್ ಹಂಚಿಕೊಂಡಿದ್ದ; ‘ಬಸವಣ್ಣ ಕಾಯಕವೇ ಕೈಲಾಸ ಎಂದಿದ್ದ; ಈತನಿಗೆ ಕೈಸಾಲವೇ ಕಾಯಕ’. ವ್ಯವಹಾರಕ್ಕೆ ಸಂಬಂಧಿಸಿದ ಈ ಜೋಕಿಗೆ ಆತ ಮುಗುಳುನಗೆ ನಕ್ಕಿದ್ದ. ಅಂದಹಾಗೆ ಆತ ತೀರ ವ್ಯವಹಾರಸ್ಥನಾಗಿದ್ದ. ಹಣದ ಭಾಷೆಯನ್ನು ಆತ ಚೆನ್ನಾಗಿ ಅರಿತಿದ್ದ. ತನಗೆ ಲಾಭ ನೀಡದ ಕೆಲಸದಲ್ಲಿ ಕೈ ಹಾಕಲಾರೆ ಎಂಬುದು ಆತನ ನಿಲುವು. ಪ್ರತಿ ಶನಿವಾರ ಆತ ಊರಿಗೆ ಹೋಗುತ್ತಿದ್ದ. ಊರಲ್ಲಿ ಆತನದು ಹಣಕಾಸಿನ ವ್ಯವಹಾರವಿದೆಯೆಂದು ಈತ ಅರಿತಿದ್ದ. ಅವುಗಳಲ್ಲಿ ರಿಯಲ್ ಎಸ್ಟೇಟ್ ದಂಧೆ ಕೂಡ ಇದ್ದಿರಬಹುದೆಂಬುದು ಈತನ ಊಹೆಯಾಗಿತ್ತು.

ಒಮ್ಮೆ ಆತನ ಆರೋಗ್ಯ ಕೆಟ್ಟಿತ್ತು. ಆಸ್ಪತ್ರೆಯಲ್ಲಿದ್ದ ಆತನನ್ನು ನೋಡಲು ಈತ ಗೆಳೆಯರೊಂದಿಗೆ ಹೋಗಿದ್ದ. ಡಿಹೈಡ್ರೇಷನ್ ಆತನನ್ನು ನಿಸ್ತೇಜಗೊಳಿಸಿತ್ತು. ಔಷಧಿಯ ಪ್ರಭಾವ ಇರಬೇಕು; ಆತ ನಿದ್ರೆಯಲ್ಲಿದ್ದ. ಸುತ್ತಲೂ ಅತನ ಬಂಧುಗಳು. ಈತ ತಲ್ಲೀನನಾಗಿ ಆತನ ನಿಸ್ತೇಜ ಮುಖವನ್ನೇ ನೋಡಿದ. ಸುಮ್ಮನೆ ತುಸುಹೊತ್ತು ಆತನ ಬಂಧುಗಳೊಡನೆ ಮಾತಾಡಿ, ಸಾಂತ್ವನ ಹೇಳಿ ಈತ ಹೊರಬಂದ.
ಸೇವಾಹಿರಿತನದ ಕಾರಣದಿಂದ ಈತ ಪದೋನ್ನತಿ ಹೊಂದಿದ್ದ. ಇದೀಗ ಈತ ಸಂಸ್ಥೆಯ ಮೂರು ವಿಭಾಗಗಳ ಮ್ಯಾನೇಜರ್. ಆತನ ವಿಭಾಗವೂ ಸೇರಿ ಈತನದು ಮೂರೂ ವಿಭಾಗಗಳ ಉಸ್ತುವಾರಿ. ಉತ್ಪಾದನೆಯ ಮಹತ್ವದ ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ವಿಭಾಗಗಳು ಸಂಸ್ಥೆಯ ಹೆಸರನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ನಿಯಂತ್ರಕ ಸಾಮರ್ಥ್ಯವನ್ನು ಹೊಂದಿದ್ದವು. ಈತನ ಅನುಭವ ಮತ್ತು ಕಾರ್ಯಕ್ಷಮತೆ ಸಂಸ್ಥೆಯ ಉದ್ದೇಶಗಳಿಗೆ ಪೂರಕವಾಗಿದ್ದವು. ಆದರೆ ಇವಿಷ್ಟೇ ಉತ್ಪಾದನೆಯನ್ನು ಹೆಚ್ಚಿಸಲಾರವಷ್ಟೆ. ಜೊತೆಯಲ್ಲಿ ಆಡಳಿತದ ಚಾಕಚಕ್ಯತೆ ಬೇಕು, ನಿರ್ಧಾರವನ್ನು ಜಾರಿಗೊಳಿಸುವ ಧೈರ್ಯ ಬೇಕು. ಪ್ರಾಯಶಃ ಒಂದಷ್ಟು ಮಾನವೀಯತೆಯನ್ನು ಕಳೆದುಕೊಳ್ಳಬೇಕು. ಆದರೆ ಈತ ಕೇವಲ ಮನುಷ್ಯನಾಗಿದ್ದ.

ಆ ದಿನ ವಿಭಾಗೀಯ ಮುಖ್ಯಸ್ಥರ ಸಭೆ. ಈತನ ಅಧ್ಯಕ್ಷತೆಯಲ್ಲಿ ನಡೆದ ಆ ಸಭೆಯಲ್ಲಿ ಆತನೂ ಇದ್ದ. ಪ್ರತಿಯೊಂದು ವಿಭಾಗದ ಸಾಧನೆಯನ್ನು ಸಮೀಕ್ಷಿಸಿ ಈತ ತನ್ನ ಸಲಹೆಗಳನ್ನು ಸೂಚಿಸಿದ. ಆತ ವ್ಯಗ್ರನಾದ. ‘ಕಳೆದ ಇಪ್ಪತ್ತು ವರ್ಷಗಳಿಂದ ನಾವು ಕೆಲಸ ಮಾಡ್ತಿದೀವಿ. ಈವರೆಗೆ ನಮಗೆ ಯಾರೂ ನಮ್ಮ ಕೆಲಸದ ಬಗ್ಗೆ ಮಾತನಾಡಿದವರಿಲ್ಲ. ನೀವೇನು ಹೇಳೋದು?’ ಎಂದ. ಈತನೆಂದ: ‘ಸಲಹೆ ಕೊಡೋದು ನನ್ನ ಕೆಲಸ. ಸೂಕ್ತ ಅನಿಸಿದರೆ ನೀವು ತಗೋಬಹುದು. ನನಗೆ ಆಸಕ್ತಿ ಇರೋದು ಕೆಲಸದಲ್ಲಿ ಮತ್ತು ಪರಿಣಾಮದಲ್ಲಿ. ಒಟ್ಟಿನಲ್ಲಿ ನಮ್ಮ ಪ್ರಾಡಕ್ಟ್ ಗುಣಮಟ್ಟ ಚೆನ್ನಾಗಿರಬೇಕು. ಜನ ಇಷ್ಟ ಪಡಬೇಕು. ಗುಣಮಟ್ಟ ಮೆಂಟೇನ್ ಮಾಡೋದು, ಸುಧಾರಣೆ ತರೋದು ನಮ್ಮ ಜವಾಬ್ದಾರಿ. ಇಲ್ಲಿ ನನ್ನ ಕೆಲಸ, ನಿಮ್ಮ ಕೆಲಸ ಅಂತ ಬೇರೆಬೇರೆ ಇಲ್ಲ; ಎರಡೂ ಒಂದೇ. ಉದ್ದೇಶ ಒಂದೇ... ಹೇಳಬೇಕು ಅಂತ ಅನಿಸಿದ್ದನ್ನ ಹೇಳಿದ್ದೇನೆ. ನನ್ನಿಂದ ಮ್ಯಾನೇಜ್‍ಮೆಂಟ್ ಏನನ್ನ ನಿರೀಕ್ಷೆ ಮಾಡ್ತದೋ ಅದನ್ನ ನಾನು ಮಾಡ್ತಿದ್ದೇನೆ, ಅಷ್ಟೆ’. ಇಷ್ಟನ್ನು ಹೇಳಿ ಆತ ಸುಮ್ಮನಾದ. ಒಮ್ಮೆಲೆ ಪ್ರಕಟವಾದ ಆತನ ವಿಚಿತ್ರ ವರ್ತನೆ ಈತನಲ್ಲಿ ಅಚ್ಚರಿ ಹುಟ್ಟಿಸಿತು.

ಪ್ರತಿಯೊಂದು ವಿಭಾಗದ ನಿರ್ವಹಣೆಯ ಹೊಣೆ ಆಯಾ ಯೂನಿಟ್ಟಿನ ಮುಖ್ಯಸ್ಥರದೇ ಆಗಿತ್ತು. ಸಾಮಾನ್ಯವಾಗಿ ಮ್ಯಾನೇಜರ್ ಆಗಿದ್ದವರು ವಿಭಾಗದ ವಿದ್ಯಮಾನಗಳಲ್ಲಿ ನೇರವಾಗಿ ತಲೆ ಹಾಕುತ್ತಿರಲಿಲ್ಲ. ಹೊಸ ಜವಾಬ್ದಾರಿಯ ಹುಮ್ಮಸಿನಲ್ಲಿ ಈತ ತನ್ನ ಸಲಹೆಗಳನ್ನೇನೋ ನೀಡಿದ್ದ. ಈ ಸಲಹೆಗಳು ಕಾರ್ಯಕ್ಷಮತೆಯ ದೃಷ್ಟಿಯಿಂದ ನೆರವಾಗಬಲ್ಲವೆಂದು ಈತನಿಗೆ ಅನಿಸಿತ್ತು. ಅವುಗಳನ್ನು ಕಾರ್ಯಗತಗೊಳಿಸುವುದು ಸುಲಭದ ಕೆಲಸವಲ್ಲ ಎಂದು ಈತನಿಗೆ ಮನದಟ್ಟಾಯಿತು. ‘ಆತ’ನ ವಿಭಾಗದ ಕೆಲಸಗಾರರು ಆತನಿಗೆ ಹೆಚ್ಚು ವಿಧೇಯರಾಗಿದ್ದಾರೆ ಎಂಬುದೂ ಈತನಿಗೆ ಸ್ಪಷ್ಟವಾಯಿತು. ಆತ ಹಾವು-ಏಣಿಯಾಟ ಪ್ರಾರಂಭಿಸಿದ್ದ. ಈತ ಏಣಿಯೇರಲು ಉದ್ಯುಕ್ತನಾದಾಗಲೆಲ್ಲ ಹಾವುಗಳು ಎದುರಾಗತೊಡಗಿದವು. ಈ ಹಾವುಗಳನ್ನಾತ ಆಡಿಸುತ್ತಿದ್ದ ಎಂಬುದು ಖಚಿತವಾಗಿತ್ತು ಈತನಿಗೆ. ಆದರೆ, ಏನನ್ನೂ ಹೇಳುವಂತಿರಲಿಲ್ಲ. ಯಾಕೆಂದರೆ, ಆತ ಎಂದಿಗೂ ಎದುರಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಎರಡು ಬಾರಿ ಈತನ ಅರಿವಿಗೆ ಬಾರದೆ ತಪ್ಪುಗಳು ಸಂಭವಿಸಿದವು. ಆ ತಪ್ಪುಗಳು ಮೇಲಿನ ಹಂತವನ್ನು ತಲುಪಿದವು. ಮ್ಯಾನೇಜ್‍ಮೆಂಟ್‍ನಿಂದ ಈತ ಚೆನ್ನಾಗಿ ಬೈಸಿಕೊಂಡ. ತನ್ನ ತಪ್ಪಿಲ್ಲದೆ ಸುಮ್ಮನೆ ಹೇಳಿಸಿಕೊಳ್ಳಬೇಕು! ಈತ ಕೋಪದಿಂದ ಕುದಿಯುತ್ತಿದ್ದ. ಆದರೆ, ಏನೂ ಮಾಡುವಂತಿರಲಿಲ್ಲ. ಇದೊಂದು ಬಗೆಯ ಹಿಂಸೆ. ಪ್ರತಿಯೋರ್ವ ಕೆಲಸಗಾರರನ್ನು ಒಬ್ಬೊಬ್ಬರಂತೆ ಕರೆದು ಮಾತಾಡಿಸಿದರೆ ಹೇಗೆ ಎಂದು ಯೋಚಿಸಿದ. ಈ ಪ್ರಕ್ರಿಯೆ ನಡೆಯುತ್ತಿರುವಾಗ ಒಂದು ದಿನ ಆತ, ಈತನ ಚೇಂಬರ್‌ನ ಶಟರ್‌ ಅನ್ನು ದಢಾರನೆ ದೂಡಿ ಒಳಗೆ ಬಂದು ಎದುರಿನ ಆಸನದ ಮೇಲೆ ಕೂತ. ಈತನನ್ನೇ ದಿಟ್ಟಿಸಿ ‘ನನ್ನ ಪರ್ಮಿಶನ್ ಇಲ್ಲದೆ ನನ್ನ ವಿಭಾಗದ ಕೆಲಸಗಾರರನ್ನು ಹೇಗೆ ಕರೆಸಿಕೊಂಡಿರಿ? ಅವ್ರನ್ನ ಹೆರಾಸ್ ಮಾಡ್ತಿದೀರಿ ನೀವು. ನಿಮ್ಮ ಅಧಿಕಾರವನ್ನ ಮೀರ್ತಿದೀರಿ ನೀವು. ಹೀಗೇ ಮುಂದುವರಿದರೆ ಮ್ಯಾನೇಜ್‍ಮೆಂಟ್‍ಗೆ ಕಂಪ್ಲೇಂಟ್ ಕೊಡಬೇಕಾಗ್ತದೆ’ ಎಂದ.

‘ಒಂದ್ನಿಮಿಷ. ನೋಡಿ, ಇವ್ರೆ!...’; ಈತ ವಿವರಿಸಲು ಮುಂದಾದ. ‘ನೀವೂ ನನ್ನ ಜೊತೆಗಿರಿ’ ಎಂದು ಹೇಳಬೇಕೆಂದುಕೊಂಡ. ಆತ ಆಸನದಿಂದೆದ್ದು ಕೈಯನ್ನೆತ್ತಿ ‘ಸಾಕು’ ಎಂದು ಸೂಚಿಸಿ ಈತನನ್ನು ದುರುಗುಟ್ಟಿ ನೋಡಿ ಥಟ್ಟೆಂದು ಹಿಂದಿರುಗಿ ಹೊರಟುಬಿಟ್ಟ. ಆತನ ಅನಿರೀಕ್ಷಿತ ಆಕ್ರಮಣದಿಂದ ಈತ ಸ್ತಂಭೀಭೂತನಾಗಿದ್ದ. ನಾನು ಮಾಡಿದ್ದಾದರೂ ಏನು? ತಪ್ಪುಗಳು ಏಕೆ ಆಗುತ್ತವೆ, ಎಲ್ಲಿ ಆಗುತ್ತವೆ ಎಂಬುದನ್ನು ಕಂಡು ಹಿಡಿಯುವುದು ನನ್ನ ಕರ್ತವ್ಯ ತಾನೆ? ಸಂಸ್ಥೆಯ ಉಪ್ಪು ತಿಂದು ಅಷ್ಟೂ ಮಾಡದಿದ್ದರೆ ಹೇಗೆ? ನಾನೇನು ನನ್ನ ಸ್ವಂತದ ಕೆಲಸ ಮಾಡ್ತಿದೀನಾ? ಆತ ನನ್ನ ಕೆಲಸದಲ್ಲಿ ಸಹಕರಿಸಿದರೆ ಇಂಥ ಸಂದರ್ಭವೇ ಉದ್ಭವಿಸುತ್ತಿರಲಿಲ್ಲ. ಇದುವರೆಗೆ ಆತನೊಡನೆ ತಾನು ಮಾತನಾಡಿದ್ದು ಕಡಿಮೆ, ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದ. ಇದು ಇತ್ತೀಚಿನ ಬೆಳವಣಿಗೆ ಎಂದು ಈತನಿಗೆ ಅನಿಸಿತು. ಈ ಅವಧಿಯಲ್ಲಿ ನಡೆದು ಹೋದ ಸಂಗತಿಗಳನ್ನು ನೆನಪಿಸಿಕೊಂಡ. ಥಟ್ಟನೆ ಹೊಳೆಯಿತು. ಹೌದು; ಈತನ ಪದೋನ್ನತಿಯ ದಿನದಿಂದ ಆತ ಬದಲಾಗಿದ್ದಾನೆ!

ಆತ ಸಂಸ್ಥೆಯಲ್ಲಿದ್ದಷ್ಟು ಕಾಲ ಈತನಿಗೆ ನಿದ್ದೆಯಿಲ್ಲ. ಮನಸ್ಸು ಕೆಟ್ಟಿತು. ಸಂಸ್ಥೆಯ ಕೆಲವು ನಿರ್ದೇಶಕರನ್ನು ಭೇಟಿ ಮಾಡಿ ತನ್ನ ಅಳಲನ್ನು ತೋಡಿಕೊಂಡ. ಒಬ್ಬ ನಿರ್ದೇಶಕರು ಆತನನ್ನು ಕರೆದು ಮಾತನಾಡುವುದಾಗಿ ಹೇಳಿದರು. ಇನ್ನೊಬ್ಬರು ‘ನಿಮ್ಮ ದೂರನ್ನು ಬರವಣಿಗೆಯಲ್ಲಿಟ್ಟು ನಿರ್ದೇಶಕರ ಮಂಡಳಿಗೆ ಕೊಡಿ’ ಎಂದು ಸಲಹೆ ನೀಡಿದರು. ವಾರಾಂತ್ಯದ ದಿನ ಎಂದಿನ ಗತ್ತಿನಲ್ಲಿ ಆತ ಮತ್ತೆ ಇವನೆದುರು ಬಂದು ಕೂತ. ‘ಏನು, ನನ್ನ ಬಗ್ಗೆ ಡೈರೆಕ್ಟರ್‌ಗೆ ಕಂಪ್ಲೇಂಟ್ ಮಾಡಿದೀರಂತೆ’. ಅದೇ ನಿರ್ಭಾವುಕ ಮುಖ. ಈತ ಮಾತಾಡಲಿಲ್ಲ. ಧ್ವನಿಯ ಮಟ್ಟದಲ್ಲಿ ಯಾವುದೇ ಬದಲಾವಣೆಯಿಲ್ಲ. ಹೇಳಿದ: ‘ಊರಿಗೆ ಬರ್ತೀರಲ್ಲ; ನೋಡ್ತೀನಿ’.
ಈತ ಊರಿಗೆ ಬಂದು ಹತ್ತು ವಷಗಳು ಕಳೆದಿವೆ. ಈರ್ವರ ಮೌನಾನುಸಂಧಾನ ಜಾರಿಯಲ್ಲಿದೆ. ಎಷ್ಟು ದಿನ ಹೀಗೆ? ‘ಪ್ರೀತಿಯನ್ನು ಬಿಟ್ಟು ನಾನು ಏನನ್ನೂ ಮಾಡಲಾರೆ; ದ್ವೇಷವನ್ನೂ ಕೂಡ’. ಯಾವ ಕವಿಯ ಹೇಳಿಕೆ ಇದು? ಇನ್ನೆಷ್ಟು ವರ್ಷ ನಾವು ಬದುಕಬಹುದು? ಸಾವಿನ ಮನೆ ಹತ್ತಿರವಾಗುತ್ತಿರುವಾಗ ಇನ್ನೆಂಥ ದ್ವೇಷ?

ಒಂದು ದಿನ ಈತ ನಿರ್ಧಾರಕೆ ಬಂದ. ಬೆಳಗಿನ ವಾಯುವಿಹಾರ ಮುಗಿಸಿ ಈತ ಹಿಂದಿರುಗುತ್ತಿದ್ದಾಗ ಆತ ಮನೆಯ ಗೇಟು ಸರಿಸಿ ಇನ್ನೇನು ಅಂಗಳದಲ್ಲಿ ಹೆಜ್ಜೆ ಇಡುತ್ತಿದ್ದ. ಈತ ದೂರದಿಂದಲೇ ಕೈಯೆತ್ತಿ ‘ಹಲೋ! ಸ್ವಲ್ಪ ನಿಲ್ಲಿ...!’ ಎಂದು ಕೂಗಿದ. ಆತ ಹಿಂದಕ್ಕೆ ನೋಟ ಬೀರಿ ಈತನನ್ನು ನೋಡುತ್ತ ನಿಂತ. ಈತ ತನ್ನ ಮತ್ತು ಆತನ ನಡುವೆ ನಡೆಯಬಹುದಾದ ಸಂಭಾಷಣೆಯ ಸ್ವರೂಪದ ಸಾಧ್ಯತೆಗಳನ್ನು ಧೇನಿಸುತ್ತ ಅವನ ಬಳಿ ಸಾರಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT