ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪ್ರಜ್ಞೆ ಮತ್ತು ಧರ್ಮಪ್ರಜ್ಞೆ

Last Updated 26 ಜನವರಿ 2019, 19:45 IST
ಅಕ್ಷರ ಗಾತ್ರ

‘ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ!’ -ಡಾ.ಜಿ.ಎಸ್.ಎಸ್

ಪ್ರಪಂಚದಲ್ಲಿ ಸಾಕಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಮುನ್ನಡೆಗಳು ಸಾಗಿದ್ದು, ಜಾಗತೀಕರಣದ ಪರಿಣಾಮದಿಂದ ‘ಪ್ರಪಂಚ ಎಂಬುದು ಈಗ ಒಂದು ಸಣ್ಣ ಜಾಗ’ ಎಂಬ ಉದ್ಗಾರ ಆಗಾಗ್ಗೆ ಕೇಳಿ ಬರುತ್ತದೆ. ಅಂತರ್ಜಾಲದಿಂದ ಲಭ್ಯವಾಗಿರುವ ಸಂಪರ್ಕದಿಂದಾಗಿ ಮನುಷ್ಯ ಮನುಷ್ಯರ ಸಂಬಂಧ ವೃದ್ಧಿಸಿ ನಾವೆಲ್ಲ ಹಿಂದಿಗಿಂತ ಈಗ ನಿಕಟವಾಗಿ ಬೆಸೆದುಕೊಂಡು ಇದ್ದೇವೆ ಎಂಬ ಭಾವನೆ ಸಾಮಾನ್ಯವಾಗಿದೆ.

ಪ್ರಪಂಚದಲ್ಲಿ ಭೌಗೋಳಿಕವಾಗಿ ಸಾವಿರಾರು ಮೈಲಿಗಳಾಚೆ ಇದ್ದರೂ ಒಂದು ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಟನ್ ಕ್ಲಿಕ್ ಮಾಡಿ ಒಬ್ಬರನ್ನೊಬ್ಬರು ಸಂಪರ್ಕಿಸಿ ಮುಖಾಮುಖಿ ಮಾತಾಡುವ ಅವಕಾಶ ಈಗ ನಮಗಿದೆ. ಈ ಹಿನ್ನೆಲೆಯಲ್ಲಿ ಪ್ರಪಂಚದ ಇತ್ತೀಚಿನ ಆಗು-ಹೋಗುಗಳನ್ನು ಗಮನಿಸಿದಾಗ ಎಲ್ಲೆಡೆ ಧರ್ಮದ ಹೆಸರಲ್ಲಿ ದ್ವೇಷ, ಜಿಹಾದ್ ಹಾಗೂ ಕ್ರುಸೇಡ್‌ಗಳು ಮತ್ತೆ ಪ್ರಾರಂಭವಾಗಿ ವಿಶ್ವಶಾಂತಿಗೆ ಧಕ್ಕೆ ಒದಗಿಬಂದಿದೆ. ಜಾಗತೀಕರಣದಿಂದ ಎಲ್ಲರೂ ಹತ್ತಿರವಿದ್ದರೂ ದೂರ ನಿಲ್ಲುವ ಪರಿಸ್ಥಿತಿ ಬಂದಿದೆ.

ಈ ವೈಜ್ಞಾನಿಕ ಯುಗದ ಸರ್ವತೋಮುಖ ಪ್ರಗತಿ ಮತ್ತು ವೈಚಾರಿಕ ಚಿಂತನೆಗಳ ನಡುವೆ ಧರ್ಮಗಳು ವ್ಯಕ್ತಿಗಳ ಮಧ್ಯೆ ಮತ್ತು ರಾಷ್ಟ್ರ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಗೋಡೆಗಳಂತೆ ಎದ್ದಿವೆ. ಧರ್ಮವನ್ನು ನೆಪವಾಗಿಟ್ಟುಕೊಂಡು ಹಲವಾರು ಉಗ್ರಗಾಮಿ ಶಕ್ತಿಗಳು ತಲೆಯೆತ್ತಿ ಹೊಡೆದಾಡಿದ ಪರಿಣಾಮವಾಗಿ ಹಲವು ಮಧ್ಯಪೂರ್ವ ರಾಷ್ಟ್ರಗಳು ತಮ್ಮ ಅಸ್ತಿತ್ವ ಕಳೆದುಕೊಂಡು ಅಲ್ಲಿನ ಜನಸ್ತೋಮ ಭಾರಿ ಪ್ರಮಾಣದಲ್ಲಿ ಸ್ಥಳಾಂತರಗೊಂಡು ನಿರಾಶ್ರಿತರಾಗಿ ಸ್ಥಿರ ಮತ್ತು ಸುರಕ್ಷಿತವಾಗಿರುವ ಅಕ್ಕಪಕ್ಕದ ಮತ್ತು ದೂರ ದೇಶಗಳಿಗೆ ವಲಸೆ ಹೋಗುತ್ತಿದೆ.

ಈ ಒಂದು ಮಹಾವಲಸೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಅಭಿವೃದ್ಧಿಗೊಳ್ಳದೆ ಸ್ಥಗಿತವಾಗಿರುವ ದೇಶಗಳಿಂದ ಕೆಲವರು ‘ನಿರಾಶ್ರಿತರು’ ಎಂಬ ಸುಳ್ಳು ಹಣೆಪಟ್ಟಿ ಹಿಡಿದು ಅವರೂ ಸೇರಿಕೊಂಡಿದ್ದಾರೆ. ಹೀಗೆ ಭಾರಿ ಪ್ರಮಾಣದಲ್ಲಿ ವಲಸೆ ಬಂದ ನಿರಾಶ್ರಿತರಿಗೆ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳು ಸಹಾನುಭೂತಿಯಿಂದ ಬಾಗಿಲು ತೆರೆದು ಆಶ್ರಯ ಕೊಟ್ಟಿವೆ. ಈ ರಾಷ್ಟ್ರಗಳಲ್ಲಿ ಆರ್ಥಿಕ ಏಳಿಗೆಗಾಗಿ ಪರವಾನಗಿ ಪಡೆದುಬಂದ ಜನರೂ ಸೇರಿದ್ದಾರೆ. ಹೀಗೆ ವಲಸೆ ಬಂದ ಜನ ಒಂದು ರಾಷ್ಟ್ರವನ್ನು ತಮ್ಮದಾಗಿಸಿಕೊಂಡು ಅಲ್ಲಿ ತಮ್ಮ ಧಾರ್ಮಿಕ ಅಸ್ತಿತ್ವ ಉಳಿಸಿಕೊಂಡು ರಾಷ್ಟ್ರದ ಸಿಟಿಜನ್‌ಶಿಪ್ ಮತ್ತು ಪಾಸ್‌ಪೋರ್ಟ್ ಪಡೆದು ಅಲ್ಲಿನ ಭಾಷೆ ಮತ್ತು ಸಾಂಸ್ಕೃತಿಕ ವಿಷಯಗಳನ್ನು ತಮ್ಮದಾಗಿಸಿಕೊಂಡು ಒಂದು ನೂತನ ರಾಷ್ಟ್ರಪ್ರಜ್ಞೆ ಅಥವಾ ಅಸ್ತಿತ್ವವನ್ನು ಪಡೆದುಕೊಳ್ಳುತ್ತಾರೆ.

ಈ ಅನಿವಾಸಿ ಪ್ರಜೆಗಳಿಗೆ ತಮ್ಮ ಮೂಲ ದೇಶದ ರಾಷ್ಟ್ರಪ್ರಜ್ಞೆ ಮತ್ತು ತಾವು ನೆಲೆಸಿರುವ ನಾಡಿನ ರಾಷ್ಟ್ರಪ್ರಜ್ಞೆ ಎರಡೂ ಪ್ರಸ್ತುತವಾಗುತ್ತದೆ. ಇಂಗ್ಲೆಂಡಿನಲ್ಲಿ ವಾಸ ಮಾಡುವ ನನಗೆ ನನ್ನ ಬ್ರಿಟಿಷ್ ರಾಷ್ಟ್ರಪ್ರಜ್ಞೆಯನ್ನು ಮತ್ತು ನಿಷ್ಠಾವಂತಿಕೆಯನ್ನು ಬಹಿರಂಗವಾಗಿ ಸಾಬೀತುಗೊಳಿಸುವ ನಿರೀಕ್ಷೆಯಾಗಲಿ ಅಥವಾ ಅಗತ್ಯವಾಗಲೀ ಇಲ್ಲ. ಇದನ್ನು ಪ್ರಸ್ತಾಪಿಸುವ ಉದ್ದೇಶವೆಂದರೆ ನನ್ನ ಹಳೆ ಕಾಲೇಜಿನ ವಾಟ್ಸ್ಆ್ಯಪ್ ಗುಂಪಿನಲ್ಲಿರುವ ಕ್ರಿಶ್ಚಿಯನ್ ಸ್ನೇಹಿತರೊಬ್ಬರು ಇತ್ತೀಚಿನ ದಿನಗಳಲ್ಲಿ ತಮ್ಮ ಮೆಸೇಜ್‌ನ ಕೊನೆಯಲ್ಲಿ ‘ಜೈಹಿಂದ್’ ಎಂಬ ಸಂದೇಶ ಮತ್ತು ತ್ರಿವರ್ಣಧ್ವಜವನ್ನು ಸೇರಿಸುತ್ತಿದ್ದಾರೆ. ನನಗೆ ಈ ವಿಚಾರ ವಿಷಾದ ಭಾವ ಮೂಡಿಸಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸ್ಥಳೀಯರು ತಮ್ಮ ರಾಷ್ಟ್ರಪ್ರಜ್ಞೆಯನ್ನು ವಿಶ್ವಕಪ್ ಫುಟ್‌ಬಾಲ್ ಅಥವಾ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳ ಸಂದರ್ಭದಲ್ಲಿ ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ.

ಹಾಗೇ ತಮ್ಮ ಧಾರ್ಮಿಕ ಪ್ರಜ್ಞೆಯ ಆಚರಣೆಯನ್ನು ತಮ್ಮ ಮನೆಗಳಲ್ಲಿ ಅಥವಾ ವೈಯಕ್ತಿಕ ಪರಿಸರದಲ್ಲಿ ಮಾಡಿಕೊಳ್ಳುತ್ತಾರೆ. ನನ್ನ ಹಲವಾರು ಇಂಗ್ಲಿಷ್ ಸಹೋದ್ಯೋಗಿಗಳು ಮತ್ತು ಸುಶಿಕ್ಷಿತ ಸಾಮಾನ್ಯರು ತಮಗೆ ಧರ್ಮ ಪ್ರಸ್ತುತವಲ್ಲವೆಂದು ಹೇಳುವುದನ್ನು ಕೇಳಿದ್ದೇನೆ. ಹಾಗೆಯೇ ಕ್ರಿಸ್‌ಮಸ್‌ ಮತ್ತು ಈಸ್ಟರ್ ಹಬ್ಬದ ಸಂದರ್ಭದಲ್ಲಿಯೂ ಈ ವಿಚಾರವನ್ನು ಗಮನಿಸಿದ್ದೇನೆ.

ಹಲವಾರು ಧರ್ಮಗಳನ್ನು ಒಳಗೊಂಡ ಜಾತ್ಯತೀತ ಸಮಾಜದಲ್ಲಿ ರಾಷ್ಟ್ರಪ್ರಜ್ಞೆ ಮತ್ತು ಧರ್ಮಪ್ರಜ್ಞೆ ಒಂದು ಸಮತೋಲನದ ಪರಿಸ್ಥಿತಿಯಲ್ಲಿ ಇರುವಾಗ ಅದನ್ನು ಕದಡಿದರೆ ಘರ್ಷಣೆ ಮತ್ತು ಅಶಾಂತಿ ಉಂಟಾಗುವುದು ಸಹಜ. ಸೋಷಿಯಲ್ ಮೀಡಿಯಾ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಚರ್ಚೆ ಮೂಲಕ ನಮ್ಮ ಸನಾತನ ಧರ್ಮದ ಬಗ್ಗೆ ಹೆಚ್ಚಿನ ಅರಿವನ್ನು ಜಾಗೃತಗೊಳಿಸಿ ಧರ್ಮದ ವಿಚಾರಗಳನ್ನು ಕೈಗೆತ್ತಿಕೊಂಡು ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಭಾರತದಲ್ಲಿ ಇದ್ದಕ್ಕಿದ್ದಂತೆ ಕಳೆದ ಹಲವು ವರ್ಷಗಳಿಂದ ಧರ್ಮ ನಮಗೆ ಬಹಳ ಪ್ರಸ್ತುತವಾದಂತೆ ಕಾಣುತ್ತಿದೆ. ಮೇಲೆ ಪ್ರಸ್ತಾಪಿಸಿದ ಜಾಗತೀಕರಣ ಮತ್ತು ಪ್ರಗತಿಯ ಹಿನ್ನೆಲೆಯಲ್ಲಿ ಜನಸಾಮಾನ್ಯನಿಗೆ ನಿಲುಕದ ವಿಚಾರವೆಂದರೆ ಈ ಇಪ್ಪತ್ತೊಂದನೇ ಶತಮಾನದಲ್ಲಿ ಧರ್ಮ ಏಕೆ ಎಷ್ಟು ಪ್ರಸ್ತುತವಾಗಿದೆ?

ಧರ್ಮ ಎಂಬ ಪದವನ್ನು ಅರ್ಥೈಸುವುದು ಸುಲಭವಲ್ಲ. ಪಾಶ್ಚಿಮಾತ್ಯ ಧರ್ಮ ಶಾಸ್ತ್ರಜ್ಞರ ಪ್ರಕಾರ ಧರ್ಮವೆಂಬುದು ಮನುಷ್ಯನನ್ನು ಮೀರಿದ ದೇವರು ಅಥವಾ ದೇವತಾ ಮನುಷ್ಯ ಒಂದು ಜನಸಮುದಾಯಕ್ಕೆ ಕೊಡಬಹುದಾದ ಜೀವನ ನೀತಿ ರೀತಿ ಮತ್ತು ಅಧ್ಯಾತ್ಮ ಪರಿಕಲ್ಪನೆ. ಈ ಸಂದೇಶ ಒಂದು ಲಿಖಿತ ದಾಖಲೆಯಲ್ಲಿ ರೂಪುಗೊಂಡಿರುತ್ತದೆ. ಕ್ರೈಸ್ತಮತದಲ್ಲಿನ ಬೈಬಲ್ ಇದಕ್ಕೆ ಉದಾಹರಣೆ. ಹಲವು ದೇವ– ದೇವತೆಯರನ್ನು ಹಲವಾರು ಪುರಾಣ, ಶಾಸ್ತ್ರ, ವೇದ ಮತ್ತು ಗೀತೆಗಳನ್ನು ಒಳಗೊಂಡ ಹಿಂದೂ ಧರ್ಮವನ್ನು ಈ ವ್ಯಾಖ್ಯಾನಕ್ಕೆ ಒಳಪಡಿಸುವುದು ಕಷ್ಟವಾದರೂ ಸಾರ್ವತ್ರಿಕ ಅಥವಾ ವಿಶ್ವವ್ಯಾಪಿ ವ್ಯಾಖ್ಯಾನದಲ್ಲಿ ಹಿಂದೂ ಧರ್ಮ ಪ್ರಪಂಚದ ಇತರ ಮುಖ್ಯ ಧರ್ಮಗಳ ಪಟ್ಟಿಯಲ್ಲಿ ಒಂದು ಎಂಬ ವಿಚಾರ ಒಪ್ಪಿಗೆ ಪಡೆದಿದೆ. ಧರ್ಮವನ್ನು ಒಪ್ಪಿಕೊಂಡ ಮತ್ತು ಅಪ್ಪಿಕೊಂಡ ವ್ಯಕ್ತಿ ಧರ್ಮ ಪ್ರಜ್ಞಾವಂತನಾಗುತ್ತಾನೆ.

ಸಾವಿರಾರು ವರ್ಷಗಳಿಂದ ಧರ್ಮ ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಬದುಕನ್ನು ನಿಯಂತ್ರಿಸುತ್ತಾ ಬಂದಿದೆ. ಧರ್ಮ ಸಾಮಾಜಿಕ ನೆಲೆಯಲ್ಲಿ ಜೀವನಕ್ಕೆ ಬೇಕಾದ ರೀತಿ ನೀತಿ ಮತ್ತು ಉತ್ತಮ ಮೌಲ್ಯಗಳನ್ನು ಒದಗಿಸುವುದರ ಜೊತೆಗೆ ವೈಯಕ್ತಿಕ ನೆಲೆಯಲ್ಲಿ ಅಧ್ಯಾತ್ಮ ಚಿಂತನೆ ಮತ್ತು ಆಚರಣೆ ಇವುಗಳ ಬಗ್ಗೆ ಮಾರ್ಗದರ್ಶನ ನೀಡಿದೆ. ಕೆಲವು ಧರ್ಮಗಳು ಕಾಲಕಾಲಕ್ಕೆ ಸಮಾಜ ಸುಧಾರಕರಿಂದ ವಿಮರ್ಶೆಗೆ ಒಳಗಾಗಿ ಪ್ರವೃತ್ತಿಯ ದೆಸೆಯಿಂದ ಕೆಲವು ಬದಲಾವಣೆಗಳನ್ನು ಒಪ್ಪಿಕೊಂಡು ಸಾಗಿವೆ. ವೈಯಕ್ತಿಕ ನೆಲೆಯಲ್ಲಿ ಧರ್ಮಾಚರಣೆಯು ಪ್ರಸ್ತುತವೆ ಎಂಬ ವಿಚಾರ ಪ್ರಶ್ನಾತೀತವಾದದ್ದು. ಒಬ್ಬ ವ್ಯಕ್ತಿಯ ನಂಬಿಕೆ ಮತ್ತು ಶ್ರದ್ಧೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ‘ಅವರವರ ಭಾವಕ್ಕೆ ಅವರವರ ದರುಶನಕೆ’ ಎಂಬ ವಚನದ ಸಾಲುಗಳನ್ನು ಇಲ್ಲಿ ಪ್ರಸ್ತಾಪ ಮಾಡುವುದು ಸೂಕ್ತ.

ಸಮಾಜದಲ್ಲಿ ಹಿಂದೆ ಧರ್ಮ ಒದಗಿಸಿದ್ದ ಸಾಮಾಜಿಕ ಜವಾಬ್ದಾರಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂವಿಧಾನ ನ್ಯಾಯ ಮತ್ತು ಆಡಳಿತ ವ್ಯವಸ್ಥೆಗೆ ಹಸ್ತಾಂತರಗೊಂಡಿದೆ. ಹಲವು ಧರ್ಮಗಳನ್ನು ಒಳಗೊಂಡ ಭಾರತ ಗಣರಾಜ್ಯವಾಗಿ ಹಿಂದೂಸ್ತಾನವೆಂಬ ಪರಿಕಲ್ಪನೆ ಪಕ್ಕಕ್ಕೆ ಸರಿದು ಸರ್ವಧರ್ಮ ಸಮನ್ವಯದ ಭಾರತವಾಗಿ ರೂಪುಗೊಂಡಿದೆ. ಬ್ರಿಟಿಷ್ ಆಳ್ವಿಕೆಯಲ್ಲಿ ಉದ್ಭವಿಸಿದ ರಾಷ್ಟ್ರಪ್ರಜ್ಞೆ ಸ್ವಾತಂತ್ರ್ಯ ದೊರಕಿದ ನಂತರ ಸ್ವಲ್ಪ ತಣ್ಣಗಾದರೂ ಪಾಕಿಸ್ತಾನ ಮತ್ತು ಚೀನಾ ಜೊತೆ ನಡೆದ ಯುದ್ಧಗಳ ಸಮಯದಲ್ಲಿ ಮತ್ತೆ ಮತ್ತೆ ಜಾಗೃತಗೊಳ್ಳುತ್ತಿತ್ತು. ಸಾಮೂಹಿಕ ನೆಲೆಯಲ್ಲಿ ನಮಗೆಲ್ಲ ನಮ್ಮ ಧರ್ಮ ಪ್ರಜ್ಞೆಗಿಂತ ನಮ್ಮ ರಾಷ್ಟ್ರಪ್ರಜ್ಞೆ ಪ್ರಸ್ತುತವಾಗಿತ್ತು.

ಈಗ್ಗೆ ಎರಡು ದಶಕಗಳಲ್ಲಿ ಭಾರತ ಆರ್ಥಿಕವಾಗಿ ಮತ್ತು ವೈಜ್ಞಾನಿಕ, ತಾಂತ್ರಿಕ, ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳ ಮನ್ನಣೆ ಪಡೆದು ಮುಂದುವರಿದಿದೆ. ಎಲ್ಲರಲ್ಲೂ ಆತ್ಮವಿಶ್ವಾಸ ಹೆಚ್ಚಾಗಿದ್ದು ನಮ್ಮ ಹೆಮ್ಮೆ ಸಂತಸಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಇಂತಹ ಯಶಸ್ಸಿನಲ್ಲಿ ನಾವು ನಮ್ಮ ರಾಷ್ಟ್ರಪ್ರಜ್ಞೆಯನ್ನು ಎತ್ತಿಹಿಡಿಯಬೇಕೆ ಹೊರತು ಧರ್ಮಪ್ರಜ್ಞೆಯನ್ನಲ್ಲ. ಈ ಯಶಸ್ಸಿನಲ್ಲಿ ಸಮಾಜದ ಎಲ್ಲ ಮತಧರ್ಮದವರು ಮತ್ತು ವರ್ಗದವರು ಭಾಗಿಯಾಗಿದ್ದಾರೆ ಎಂಬ ವಿಚಾರ ಅರಿಯಬೇಕಾಗಿದೆ. ಹೆಮ್ಮೆ ಹೆಮ್ಮೆಯಾಗಿ ಉಳಿಯಬೇಕು. ಏಕೆಂದರೆ ಹೆಮ್ಮೆಗೂ, ಗರ್ವಕ್ಕೂ ನಡುವೆ ಇರುವ ಅಂತರ ಒಂದು ಸಣ್ಣ ರೇಖೆ ಅಷ್ಟೆ.

ಸ್ವಾಮಿ ವಿವೇಕಾನಂದರು ಷಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿ ನೂರಾ ಇಪ್ಪತ್ತೈದು ವರ್ಷಗಳು ಕಳೆದಿವೆ. ಅದನ್ನು ನಾವು ನೆನೆಸಿಕೊಂಡು ವಿಜೃಂಭಿಸುತ್ತಿರುವುದು ಸರಿಯೇ. ಭಾಷಣದ ಶುರುವಿನಲ್ಲಿ ಸ್ವಾಮೀಜಿಯವರು ‘ಅಮೆರಿಕದ ನನ್ನ ಸೋದರ, ಸೋದರಿಯರೇ’ ಎಂದು ಹೇಳುವ ಮಾತಿನಲ್ಲಿ ಅದೆಷ್ಟು ಸಮನ್ವಯತೆ ಇದೆ ಎಂಬುದನ್ನು ಗಮನಿಸಬಹುದು. ‘ಅನ್ಯಧರ್ಮಗಳ ಅಸ್ತಿತ್ವದ ಅಂಗೀಕರಣ ಮತ್ತು ಸಮನ್ವಯತೆಯನ್ನು ಪ್ರಪಂಚಕ್ಕೆ ಯಾವ ಧರ್ಮ ತೋರಿದೆಯೋ ಆ ಧರ್ಮಕ್ಕೆ ಸೇರಿರುವ ಹೆಮ್ಮೆ ನನಗಿದೆ’ ಎಂಬ ಸ್ವಾಮೀಜಿಯ ಹೇಳಿಕೆ ಅವರ ನಿಲುವನ್ನು ಸ್ಪಷ್ಟಪಡಿಸುತ್ತದೆ. ಆಗಿನ ಕಾಲಕ್ಕೆ ಅಂದರೆ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ರಾಷ್ಟ್ರಪ್ರಜ್ಞೆ ಮತ್ತು ಧರ್ಮಪ್ರಜ್ಞೆಗಳು ಒಂದೇ ಅಂಗಗಳಾಗಿದ್ದವು.

ಇತ್ತೀಚೆಗೆ ಜನಸಾಮಾನ್ಯರಲ್ಲಿ ತಮಗೆ ರಾಷ್ಟ್ರಪ್ರಜ್ಞೆ ಮುಖ್ಯವೋ ಅಥವಾ ಧರ್ಮಪ್ರಜ್ಞೆ ಮುಖ್ಯವೋ ಎಂಬ ವಿಚಾರದಲ್ಲಿ ಗೊಂದಲ ಮೂಡಿದಂತಿದೆ. ನಮಗೆಲ್ಲಾ ಅಗತ್ಯವಾಗಿ ಬೇಕಾಗಿರುವುದು ರಾಷ್ಟ್ರಪ್ರಜ್ಞೆ. ಧರ್ಮದಲ್ಲಿ ನಂಬಿಕೆ ಮತ್ತು ಶ್ರದ್ಧೆ ಇರುವವರು ತಮ್ಮ ಧರ್ಮಪ್ರಜ್ಞೆಯನ್ನು ವೈಯಕ್ತಿಕ ನೆಲೆಯಲ್ಲಿ ಉಳಿಸಿಕೊಂಡು ಬೆಳೆಸಿಕೊಳ್ಳುವುದು ಅವರವರ ಆಯ್ಕೆ. ಒಂದು ಬಹುಮುಖಿ ಸಂಸ್ಕೃತಿಯ ರಾಷ್ಟ್ರದಲ್ಲಿ ಒಬ್ಬ ವ್ಯಕ್ತಿಗೆ ಹಲವಾರು ಅಸ್ತಿತ್ವಗಳಿವೆ. ಇವು ರಾಷ್ಟ್ರಪ್ರಜ್ಞೆ, ಧರ್ಮಪ್ರಜ್ಞೆ, ಭಾಷಾಪ್ರಜ್ಞೆ, ಸಾಂಸ್ಕೃತಿಕಪ್ರಜ್ಞೆ ಮತ್ತು ಜಾತಿಪ್ರಜ್ಞೆ. ಇಷ್ಟು ವಿಭಿನ್ನತೆಗಳಿದ್ದರೂ ನಮ್ಮನ್ನು ಒಂದುಗೂಡಿಸಿರುವ ಏಕೈಕ ಶಕ್ತಿ ನಮ್ಮ ರಾಷ್ಟ್ರಪ್ರಜ್ಞೆ ಎನ್ನಬಹುದು. ರಾಷ್ಟ್ರೀಯತೆ ಎಂಬ ಲಾಂಛನ ಹಿಡಿದು ನಮ್ಮ ನಿಜವಾದ ಸಮಸ್ಯೆಗಳಾದ ಸ್ವಾರ್ಥ, ಭ್ರಷ್ಟಾಚಾರ ಮತ್ತು ಪರಿಸರ ಮಾಲಿನ್ಯ ಇವುಗಳನ್ನು ಭಾರತೀಯರಾದ ನಾವೆಲ್ಲರೂ ಅದರಲ್ಲೂ ಮುಂದಿನ ಪೀಳಿಗೆಯಾದ ಯುವಕರು ಎದುರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT