ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಳೆತ (ಕಥೆ)

Last Updated 14 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಡಿಸೆಂಬರ್ ಮೂವತ್ತೊಂದರ ರಾತ್ರಿ ಹನ್ನೆರಡಕ್ಕೆ ನಗರದ ಬಹುತೇಕ ಜನರು ಹಾಡು-ಕುಣಿತದ ನಡುವೆಯೇ ‘ಹ್ಯಾಪ್ಪಿ ನ್ಯೂ ಇಯರ್...’ ಎನ್ನುತ್ತ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ಕಂಡು ಅಲಕಾ ತಾನೂ ಸಂಭ್ರಮಿಸಲಿಲ್ಲ; ಕಾರಣ, ಆಕೆ ದಮ್ಮು ರೋಗಿ. ಆಕೆಗೆ ವರ್ಷದ ಮೊದಲನೆಯ ಹಾಗೂ ಕೊನೆಯ ಎರಡು ತಿಂಗಳುಗಳು ಪ್ರತಿ ದಿನವೂ ನರಕದರ್ಶನವನ್ನು ಮಾಡಿಸುತ್ತವೆ. ಇನ್ನೆಲ್ಲಿಯ ‘ಹ್ಯಾಪ್ಪಿ...’ ಎಂದುಕೊಂಡು, ಸಂಭ್ರಮಾಚರಣೆಯಲ್ಲಿ ತೊಡಗಿದ್ದವರನ್ನು ಅಸೂಯೆಯ ಭಾವದಿಂದ ನೋಡುತ್ತ ತನ್ನ ಕೋಣೆ ಸೇರಿಕೊಂಡಿದ್ದಳು.

ಹಿಮಾಲಯದಿಂದ ದೂರದಲ್ಲಿದ್ದರೂ, ಆ ಮಾರ್ಗವಾಗಿ ಬೀಸಿ ಬರುವ ಗಾಳಿಯ ತೆಕ್ಕೆಗೆ ಆಗಾಗ ಸಿಲುಕುತ್ತಲೇ ಇರುವ ರಾಂಚಿ ನಗರ ಮೈನಸ್ ಡಿಗ್ರಿಯನ್ನು ತಲುಪುತ್ತಿದ್ದಂತೆಯೇ, ಅಲಕಾಳಿಗೆ ಬಹುದೂರದ ತನ್ನ ತವರುಮನೆ, ತವರೂರು ಚಿಕ್ಕಮಗಳೂರು ನೆನಪಾಗುತ್ತದೆ. ಎಲ್ಲರೂ ಎದ್ದೇಳುವುದಕ್ಕೆ ಮುಂಚೆಯೇ ಬಚ್ಚಲಿನ ಒಲೆಗೆ ಬೆಂಕಿ ಹಾಕಿ ‘ಅಹಹಾ’ ಎಂದು ಮುಲುಗುತ್ತ, ಚಳಿ ಕಾಯಿಸಿಕೊಳ್ಳುತ್ತಿದ್ದ ಅಜ್ಜಿ; ಇದನ್ನೇ ಕಾಯುತ್ತಿದ್ದು ಕೆಮ್ಮುತ್ತಲೇ ಆಕೆಯ ಪಕ್ಕಕ್ಕೆ ಹೋಗಿ ಕುಳಿತುಕೊಳ್ಳುತ್ತಿದ್ದ ಅಜ್ಜ; ಮೌನವಾಗಿಯೇ ಮೈಬಿಸಿಯೇರಿಸಿಕೊಂಡು ನೆಮ್ಮದಿಯ ಉಸಿರು ಹೊರಹಾಕುತ್ತಿದ್ದ ಈ ಜೋಡಿಗೆ ಸೂರ್ಯ ಉದಯಿಸಿದಾಗ ಉಂಟಾಗುತ್ತಿದ್ದ ಆನಂದ; ಪುಟ್ಟ ಹುಡುಗಿಯಾಗಿದ್ದಾಗ ಅಲಕಾಳಿಗೆ ಅರ್ಥವಾಗುತ್ತಿರಲಿಲ್ಲ; ಆದರೆ ಈಗ, ಮಗುವಿನ ತಾಯಿಯಾಗಿ, ನಡುವಯಸ್ಸನ್ನು ದಾಟಿದ ನಂತರದ ದಿನಗಳಲ್ಲಿ, ಅಜ್ಜ-ಅಜ್ಜಿ ಹಾಗೂ ಬೆಳಗಿನ ಬೆಂಕಿಯ ಸಂಬಂಧ ಅರ್ಥವಾಗುತ್ತಿದೆ.

ತಾನು ಬಾಲ್ಯ ಕಳೆದು ಹರೆಯಕ್ಕೆ ಬರುತ್ತಿದ್ದಂತೆಯೇ ಓದಿಗೆ ತಿಲಾಂಜಲಿ ಇರಿಸಿ, ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರಿ ಅಧಿಕಾರಿಯಾಗಿದ್ದ ವರುಣ್‍ನೊಂದಿಗೆ ವಿವಾಹ ಮಾಡಿಸಿ, ಜವಾಬ್ದಾರಿ ಕಳೆದುಕೊಂಡ ಸಂತಸದಲ್ಲಿ ನಿಟ್ಟುಸಿರು ಬಿಟ್ಟಿದ್ದ ಅಪ್ಪನ ಬಗ್ಗೆ ಸಿಟ್ಟಾಗಿದ್ದಳು ಅಲಕಾ. ಕಾರಣ, ಇದರಿಂದಾಗಿ ಓದುವ, ಉನ್ನತ ಹುದ್ದೆಯನ್ನು ಅಲಂಕರಿಸುವ ಆಕೆಯ ಕನಸು ನುಚ್ಚುನೂರಾಗಿತ್ತು. ಆದರೆ, ಕ್ರಮೇಣ ವರುಣ್‍ನ ಸಾಂಗತ್ಯ, ವಿಕ್ರಾಂತ್‍ನ ಆಗಮನ, ಆತನ ಚೇಷ್ಟೆಗಳು ಎಲ್ಲವೂ ಸೇರಿ ತಂದೆಯ ಮೇಲಿದ್ದ ಆಕೆಯ ಕೋಪ ಶಾಂತವಾಗಿತ್ತು. ಆದರೆ, ವರ್ಗಾವಣೆಯ ಕಾರಣದಿಂದಾಗಿ ದೂರದ ರಾಂಚಿಗೆ ಬಂದಿದ್ದು, ಆಕೆಯಲ್ಲಿ ಏಕತಾನತೆ ಮೂಡುವುದಕ್ಕೆ ಕಾರಣವಾಗಿತ್ತು. ಜೊತೆಗೆ, ಭಾಷೆಯ ತೊಂದರೆ, ವಿಪರೀತ ಚಳಿ-ಸೆಖೆ ಆಕೆಯನ್ನು ಕಂಗಾಲಾಗಿಸಿತ್ತು. ಹದಿನಾರು ಡಿಗ್ರಿ ತಾಪಮಾನವನ್ನೇ ಅತ್ಯಂತ ಚಳಿಯೆಂದು ಭಾವಿಸಿದ್ದ, ಅನುಭವಿಸಿದ್ದ ಆಕೆಗೆ ಮೈನಸ್ ಡಿಗ್ರಿಯ ಆಸುಪಾಸಿನ ತಾಪಮಾನದಲ್ಲಿ ವರ್ಷದ ಮೂರ್ನಾಲ್ಕು ತಿಂಗಳು ಕಳೆಯಬೇಕಾದ ಪರಿಸ್ಥಿತಿ ಎದುರಾದಾಗ, ಕನಸಿನಲ್ಲಿಯೂ ನಡುಗಿದ್ದಳು. ಮುಖ್ಯ ಕಾರಣ, ಆಕೆಯನ್ನು ಕೆಲವು ವರ್ಷಗಳ ಹಿಂದೆ ಆಕ್ರಮಿಸಿಕೊಂಡಿದ್ದ ದಮ್ಮು.

‘ನನ್ನಿಂದ ಆಗಲ್ಲ; ವರ್ಗಾವಣೆಗೆ ಪ್ರಯತ್ನಿಸಿ...’ ಗಂಡನನ್ನು ಒತ್ತಾಯಿಸಿದ್ದಳು.

‘ಮೂರು ವರ್ಷವಾದರೂ ಇರಲೇಬೇಕು ಅಲಕಾ; ತುಂಬಾ ತೊಂದರೆಯಾಗುವುದಾದರೆ, ಚಳಿಯ ದಿನಗಳಲ್ಲಿ ಊರಿಗೆ ಹೋಗಿಬಿಡು... ನನ್ನದು ಹೇಗೋ ಆಗತ್ತೆ...’

ಆತ ಹಾಗೆ ಹೇಳಿದರೂ, ಆತನಿಂದ ದೂರವುಳಿಯುವ ಶಕ್ತಿಯನ್ನು ಆಕೆ ಕಳೆದುಕೊಂಡಿದ್ದಳು. ಜೊತೆಗೆ ಮಗನ ಶಿಕ್ಷಣ! ವಿಕ್ರಾಂತ್ ಈಗ ದೊಡ್ಡವನಾಗಿದ್ದಾನೆ; ಕಾಲೇಜಿಗೆ ಹೋಗುವಷ್ಟು. ಆದರೂ ಪತಿ ಹಾಗೂ ಮಗನನ್ನು ಬಿಟ್ಟು ಅಷ್ಟೊಂದು ದಿನ ದೂರವುಳಿಯುವುದಕ್ಕೆ ತನ್ನಿಂದ ಸಾಧ್ಯವೇ? ಉತ್ತರ ಸಿದ್ಧವಾಗಿತ್ತು, ‘ಇಲ್ಲ; ಖಂಡಿತ ಸಾಧ್ಯವಿಲ್ಲ.’

‘ಮೂರು ವರ್ಷಗಳು ತಾನೇ?’ ಎಂದುಕೊಂಡಿದ್ದಳು; ಆದರೆ, ಹತ್ತು ವರ್ಷಗಳೇ ಸರಿದುಹೋಗಿದ್ದವು.

***

ಹೊಸ ವರ್ಷದ ಎರಡು ತಿಂಗಳುಗಳು ಉರುಳಿದ್ದವು. ಆದರೂ ಚಳಿ ಕಡಿಮೆಯಾಗಿರಲಿಲ್ಲ. ಆ ದಿನ ಬೆಳಿಗ್ಗೆ ಆಕೆಗೆ ಎಚ್ಚರವಾದಾಗ ಆರು ಗಂಟೆ ದಾಟಿತ್ತು. ‘ತಡವಾಗಿ ಹೋಯಿತು’ ಎನ್ನಿಸಿದರೂ, ‘ರಾತ್ರಿ ನಿದ್ರೆ ಬಂದಿದ್ದು ಎಷ್ಟು ಗಂಟೆಗೋ!’ ಎಂದುಕೊಳ್ಳುತ್ತ ಹಾಸಿಗೆಯ ಮೇಲೆ ಎದ್ದು ಕುಳಿತಳು. ಪಕ್ಕದಲ್ಲಿ ವರುಣ್ ಗಾಢ ನಿದ್ರೆಯಲ್ಲಿದ್ದ. ತಾನು ಹೊದ್ದಿದ್ದ ರಝಾಯಿಯನ್ನು ಆತನಿಗೆ ಹೊದೆಸಿ, ಹಾಸಿಗೆ ಬಿಟ್ಟು ಹೊರಬಂದಳು. ಮೋಡ ಕವಿದ ವಾತಾವರಣ; ಆಕೆಯ ಆರೋಗ್ಯಕ್ಕೆ ಪೂರಕವಾಗಿರಲಿಲ್ಲ. ‘ಉಬ್ಬಸ ಉಂಟಾದರೆ!’ ಎನ್ನುವ ಭಯದ ನಡುವೆಯೂ ಆಕೆ, ಅದರ ಬಗ್ಗೆ ಹೆಚ್ಚಿನ ಗಮನ ನೀಡದೆಯೇ, ಮನೆಯ ಮುಖ್ಯ ಬಾಗಿಲಿನ ಅಗುಳಿಯನ್ನು ಹೊರಗಿನಿಂದ ಹಾಕಿ, ರಸ್ತೆಗಿಳಿದಳು; ಸಮೀಪಿದಲ್ಲಿರುವ ಪಾರ್ಕ್‍ನತ್ತ ಮುಖ ಮಾಡಿದಳು.

ಆಕೆ ಉದ್ಯಾನವನದತ್ತ ಮುಖ ಮಾಡಿದ್ದು ಬೊಜ್ಜು ಕರಗಿಸುವುದಕ್ಕಾಗಿ ಅಲ್ಲ; ಸಕ್ಕರೆ ಕಾಯಿಲೆಯೂ ಆಕೆಗೆ ಅಂಟಿಕೊಂಡಿರಲಿಲ್ಲ; ಶುದ್ಧ ಗಾಳಿಯ ಸೇವನೆಗಾಗಿಯೂ ಆಗಿರಲಿಲ್ಲ; ಬದಲಿಗೆ, ‘ಆತ’ನಿಗಾಗಿ, ಆತನ ಆ ಕಣ್ಣುಗಳ ಆಕರ್ಷಕ ನೋಟಕ್ಕಾಗಿ; ಆತನ ಕಣ್ಣುಗಳೊಂದಿಗೆ ತನ್ನ ಕಣ್ಣುಗಳನ್ನು ಬೆರೆಸುವುದಕ್ಕಾಗಿ. ‘ಆತ’ ನಾಲ್ಕಾರು ದಿನಗಳಿಂದ ಪ್ರತಿ ನಿತ್ಯವೂ ಆ ಉದ್ಯಾನವನಕ್ಕೆ ಆಗಮಿಸುತ್ತಿದ್ದ, ಬೆಳಗಿನ ಸಮಯದಲ್ಲಿ. 28-29ರ ವಯಸ್ಸಿನ ಯುವಕ; ಸ್ಫುರದ್ರೂಪಿ; ಮುಖ್ಯವಾಗಿ ಆಕರ್ಷಕ ಕಣ್ಣುಗಳ ಯಜಮಾನ. ‘ಈ ಅಪರಿಚಿತ ಹುಡುಗ ನನಗದೇನು ಮೋಡಿ ಮಾಡಿಬಿಟ್ಟ!’ ಕೆಲವೊಮ್ಮೆ ತನ್ನನ್ನು ತಾನು ಪ್ರಶ್ನಿಸಿಕೊಂಡಿದ್ದಳು. ನಾಲ್ಕಾರು ದಿನಗಳ ಮೊದಲು ಆಕಸ್ಮಿಕವಾಗಿ ಆ ಉದ್ಯಾನವನದಲ್ಲಿ ಆತನನ್ನು ಮೊದಲ ಬಾರಿ ನೋಡಿದಾಗ ಆಕೆಯೇನೂ ಆತನ ಬಗ್ಗೆ ಯೋಚಿಸಿರಲಿಲ್ಲ, ಆಕರ್ಷಿತಳಾಗಿರಲಿಲ್ಲ. ಆದರೆ, ಆ ಯುವಕ ಪದೇ ಪದೇ ಆಕರ್ಷಣೆಯ, ಮೊನಚಾದ ನೋಟವನ್ನು ಬೀರಿದಾಗ ಗರ್ವಿತಳಾಗಿದ್ದಳು; ನಲ್ವತ್ತು ವರ್ಷ ದಾಟಿದ್ದರೂ ತನಗಿಂತ ಕಿರಿಯ ಯುವಕನ ಮನಸ್ಸನ್ನು ತನ್ನ ಸೌಂದರ್ಯ ಸೆಳೆದಿದೆ ಅಂದುಕೊಂಡು ಸಹಜವಾಗಿಯೇ ಆಕೆ ತನ್ನ ಬಗ್ಗೆ ಹೆಮ್ಮೆಪಟ್ಟಿದ್ದಳು. ಆತನ ನೋಟ ಆಕೆಯ ಪಾಲಿಗೆ ‘ಕಾಂಪ್ಲಿಮೆಂಟ್ಸ್’ ಎನ್ನಿಸಿತ್ತು. ಆ ದಿನದಿಂದ ಆಕೆ ಆತನಿಗಾಗಿ ನಿತ್ಯ ಬೆಳಿಗ್ಗೆ ಅದೇ ಸಮಯಕ್ಕೆ ಆ ಉದ್ಯಾನವನಕ್ಕೆ ಆಗಮಿಸುತ್ತಿದ್ದಳು.

‘ಆತ ಏಕೆ ನನ್ನನ್ನು ಆ ರೀತಿ ತಿಂದುಬಿಡುವವನಂತೆ ನೋಡುತ್ತಿದ್ದಾನೆ! ಆತನಲ್ಲಿ ನನ್ನ ಬಗ್ಗೆ ವಯೋಸಹಜ ಆಕರ್ಷಣೆ ಏನಾದರೂ ಉಂಟಾಗಿದೆಯೇ?’ ಮೊದಲನೇ ದಿನ ಆತನನ್ನು ಭೇಟಿಯಾದಾಗ ಉದ್ಭವಿಸಿದ್ದ ಪ್ರಶ್ನೆಗೆ ನಾಲ್ಕಾರು ದಿನಗಳು ಕಳೆದರೂ ಉತ್ತರ ಸಿಕ್ಕಿರಲಿಲ್ಲ.

ಉದ್ಯಾನವನದಲ್ಲಿ ಜನಸಂಚಾರ ಆರಂಭವಾಗಿತ್ತು. ಪಾರ್ಕ್‌ನ ಮೂಲೆಯೊಂದರಲ್ಲಿ ಹಾಕಲಾಗಿದ್ದ ಮರದ ಬೆಂಚಿನ ಮೇಲೆ, ಅದರ ಕೈಗೆ ತನ್ನ ಕೈಯನ್ನು ಆನಿಸಿಕೊಂಡು ಕುಳಿತಳು ಅಲಕಾ. ಆಕೆಯ ನೋಟಕ್ಕೆ ವಿವಿಧ ಸ್ತ್ರೀ, ಪುರುಷರು ಬಿದ್ದಾಗ, ಅವರ ವಯಸ್ಸನ್ನು ಅಂದಾಜು ಮಾಡುವ ಪ್ರಯತ್ನಕ್ಕೆ ಕೈಹಾಕಿದಳು. ಬಹುತೇಕರು ಅಧಿಕ ವಯಸ್ಸಿನವರೇ. ನಾಲ್ಕೈದರ ಸಂಖ್ಯೆಯಲ್ಲಿ ಒಟ್ಟುಗೂಡಿಕೊಂಡು, ನಿಧಾನವಾಗಿ ನಡೆಯುತ್ತಿದ್ದರು; ಸ್ವಲ್ಪ ಹೊತ್ತಿನ ನಂತರ ಹುಲ್ಲುಹಾಸಿನ ಮೇಲೆ ವೃತ್ತಾಕಾರದಲ್ಲಿ ಕುಳಿತುಕೊಂಡು ಹರಟೆಹೊಡೆಯುತ್ತಿದ್ದರು; ಇನ್ನು ಕೆಲವರು ನಗೆ ಕೂಟದ ಸದಸ್ಯರಂತೆ ಒಬ್ಬೊಬ್ಬರೇ ಜೋರಾಗಿ ನಗುತ್ತಿದ್ದರು. ಕೆಲವರು ತಮ್ಮ ಧಡೂತಿತನವನ್ನು ಕಡಿಮೆಗೊಳಿಸಿಕೊಳ್ಳುವುದಕ್ಕಾಗಿ ಅಥವಾ ಸೊಂಟದ ಬೊಜ್ಜನ್ನು ಕರಗಿಸಿಕೊಳ್ಳುವುದಕ್ಕಾಗಿ ದೇಹದಂಡನೆಯಲ್ಲಿ ತೊಡಗಿಕೊಂಡಿದ್ದರು. ಅಲಕಾಳಿಗೆ ದಮ್ಮನ್ನು ಹೊರತುಪಡಿಸಿ ಬೇರೆ ಯಾವುದೇ ರೋಗವಿರಲಿಲ್ಲ; ಆಕೆ ತನ್ನನ್ನು ತಾನೇ ಒಮ್ಮೊಮ್ಮೆ ಕೇಳಿಕೊಳ್ಳುತ್ತಿದ್ದಳು, ‘ಅದೊಂದು ಸಾಲದೇ ಜೀವನವನ್ನು ನರಕವಾಗಿಸುವುದಕ್ಕೆ!’

‘ಆತನೇಕೆ ಇನ್ನೂ ಬಂದೇ ಇಲ್ಲ!’ ಆಕೆಯೊಳಗೆ ಮೂಡಿತ್ತು ಪ್ರಶ್ನೆ.

‘ಅಯ್ಯೋ, ಆತ ಬಂದರೆಷ್ಟು ಬಿಟ್ಟರೆಷ್ಟು!’

‘ಸುಳ್ಳು ಹೇಳಬೇಡ. ನೀನು ಬಂದಿರುವುದೇ ಆತನಿಗಾಗಿ ಅಲ್ಲವೇ?’

ದೂರದಲ್ಲಿ ಆ ಯುವಕ ಕಾಣಿಸುತ್ತಲೇ ಅಲಕಾ ಯೋಚನೆಯ ಸಮುದ್ರದಿಂದ ಹೊರಬಂದಿದ್ದಳು. ಆಕೆ ಆತನತ್ತ ಓರೆಗಣ್ಣಿನಿಂದ ನೋಡಿದಾಗ, ಆತನೂ ಆಕೆಯನ್ನೇ ಹುಡುಕುತ್ತಿರುವುದರ ಅರಿವಾಯಿತು. ಆತನ ನೋಟ ಅಲಕಾಳ ಮೇಲೆ ಬೀಳುತ್ತಿದ್ದಂತೆಯೇ, ಉದ್ಯಾನವನದ ದೊಡ್ಡ ಗೇಟಿನ ಒಳಭಾಗದಲ್ಲಿ, ಅಶೋಕ ಗಿಡಗಳ ಕೆಳಗೆ ನಿಂತಿದ್ದ ಆತನ ಮುಖದಲ್ಲಿ ಮೂಡಿತ್ತು ಗೆಲುವಿನ ನಗು.

‘ಇಲ್ಲಿ ಬಾ... ನಾನು ಇಲ್ಲಿದ್ದೇನೆ...’ ಆತನಿಗೆ ಹೇಳಬೇಕೆಂದುಕೊಂಡಳು; ಹೇಳಲಿಲ್ಲ. ಆದರೆ, ಆಕೆಯ ಮನದಾಳದ ಮಾತು ಆತನಿಗೆ ಕೇಳಿಸಿಬಿಟ್ಟಿತೋ ಎನ್ನುವಂತೆ ನೇರವಾಗಿ ಆಕೆಯನ್ನು ಸಮೀಪಿಸಿ ಪ್ರಶ್ನಿಸಿದ್ದ, ‘ನಿಮ್ಮ ಅನುಮತಿಯಿದ್ದರೆ... ನಾನೂ ಈ ಬೆಂಚ್ ಮೇಲೆ ಕುಳಿತುಕೊಳ್ಳಬಹುದಲ್ಲವೇ?’

ಆತನಿಗೆ ಉತ್ತರಿಸದ ಆಕೆ, ತನ್ನೆದುರು ನಿಂತಿದ್ದ ಆತನತ್ತ ಒಮ್ಮೆ ನೋಡಿ, ತಲೆ ತಗ್ಗಿಸಿದಳು. ‘ಎಂತಹ ಮಧುರ ಧ್ವನಿ! ಜೊತೆಯಲ್ಲಿ ಪ್ರಾರ್ಥನೆ, ಕೋರಿಕೆಯ ಭಾವ!’ ಆಕೆಯನ್ನು ಮತ್ತಷ್ಟು ಸೆಳೆದಿದ್ದ ಆತ.

‘ಕುಳಿತುಕೊಳ್ಳಬಹುದು. ಇದು ಈ ಏರಿಯಾದ ಪಾರ್ಕ್; ನನ್ನ ಸ್ವಂತದ್ದಲ್ಲ... ಇದರ ಮೇಲೆ ಈ ಏರಿಯಾದ ಎಲ್ಲರ ಅಧಿಕಾರವಿದೆ...’ ಆಕೆ ಹೇಳಿಯೇಬಿಟ್ಟಿದ್ದಳು; ಆದರೆ, ಆ ಮಾತುಗಳಲ್ಲಿ ಶಕ್ತಿಯಿರಲಿಲ್ಲ; ಪಿಸುಗುಟ್ಟಿದಂತಿದ್ದವು ಶಬ್ದಗಳು.

‘ಥ್ಯಾಂಕ್ಯೂ...’ ಹೇಳುತ್ತಲೇ ಆತ ಆ ಬೆಂಚ್‍ನ ಇನ್ನೊಂದು ಮೂಲೆಯಲ್ಲಿ ಮುದುಡಿಕೊಂಡೇ ಕುಳಿತ!

ಅಲಕಾ ಏನನ್ನೂ ಮಾತನಾಡದೇ ತನ್ನ ಪಾಡಿಗೆ ಕುಳಿತಿದ್ದನ್ನು ಕಂಡು, ಆ ಯುವಕನೂ ಶಾಂತನಾಗಿಯೇ ಉಳಿದ; ತಾನಾಗಿಯೇ ಮಾತು ಮುಂದುವರಿಸಲು ಹೋಗಲಿಲ್ಲ; ಆದರೆ, ಆತನ ದೃಷ್ಟಿ ಮಾತ್ರ ಆಕೆಯತ್ತಲೇ ನೆಟ್ಟಿತ್ತು. ಅಲಕಾ ಒಮ್ಮೆ ಆತನತ್ತ ನೋಡಿದಳು; ಆತನ ಕಣ್ಣುಗಳಲ್ಲಿ ಅದೇನೋ ಆಕರ್ಷಣೆ! ‘ನಾನು ಆತನಿಗೆ ಸೋತುಹೋಗುವುದು ಖಂಡಿತ! ಆತನ ನೋಟವನ್ನು ಎದುರಿಸುವ ಶಕ್ತಿ ನನಗೇಕಿಲ್ಲ? ನಾನೇನು ಹದಿಹರೆಯದ ಹುಡುಗಿಯೇ ಆತನಿಗೆ ಸೋತುಹೋಗುವುದಕ್ಕೆ! ಆದರೂ...’ ಆಕೆಯಿಂದ ಆತನ ಕಣ್ಣುಗಳನ್ನು, ನೋಟವನ್ನು ಎದುರಿಸುವುದು ಸಾಧ್ಯವಾಗಲೇ ಇಲ್ಲ. ಸುತ್ತಲೂ ನೋಡಿದಳು. ಎಲ್ಲರೂ ತಮ್ಮದೇ ಆದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.

‘ಒಮ್ಮೆ ಆತನನ್ನು ದಿಟ್ಟಿಸಿ ನೋಡು. ಹೇಗಿದ್ದಾನೆ ಎನ್ನುವುದನ್ನಾದರೂ ಗಮನಿಸು. ಆತನ ಬಯಕೆಯನ್ನು ವಿಚಾರಿಸು...’ ನುಡಿದಿತ್ತು ಒಳಮನಸ್ಸು. ಆಕಾಶದಲ್ಲಿ ಮೋಡ ಕವಿಯತೊಡಗಿತ್ತು; ಆಕೆಯ ಮನಸ್ಸಿನಲ್ಲಿ ಗೊಂದಲಗಳ ಮೋಡ ಮುತ್ತಿಕೊಳ್ಳತೊಡಗಿದಂತೆ.

‘ಯಾರೊಬ್ಬರೂ ನನ್ನತ್ತ ನೋಡುತ್ತಿಲ್ಲ; ಎಲ್ಲರೂ ಅವರವರ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಆದರೂ... ಯಾರಾದರೂ ನೋಡಿದರೆ...’

ಈ ಒಂದೇ ಒಂದು ಯೋಚನೆ ಆಕೆಯನ್ನು ಗಲಿಬಿಲಿಗೊಳಿಸಿತ್ತು. ‘ಸ್ವಚ್ಛವಾಗಿರುವ ನನ್ನ ಬದುಕಿನ ಹಾಳೆಯ ಮೇಲೆ ಕಪ್ಪು ಚುಕ್ಕಿಯೊಂದು ಮೂಡಿದಂತಲ್ಲವೇ?’ ಕೂಡಲೇ ಆಕೆ ಅಲ್ಲಿಂದ ಎದ್ದಳು; ಗೇಟಿನತ್ತ ಓಡುವ ವೇಗದಲ್ಲಿ ನಡೆದಳು; ನಾಲ್ಕಾರು ನಿಮಿಷಗಳಲ್ಲಿ ಮನೆಯನ್ನು ಸಮೀಪಿಸಿದ್ದಳು; ಅಗುಳಿಯನ್ನು ತೆರೆದು ಮನೆಯೊಳಗೆ ಅಡಿಯಿಟ್ಟಳು. ಎಲ್ಲ ವಸ್ತುಗಳೂ ಸಾಮಾನ್ಯ ರೀತಿಯಲ್ಲಿದ್ದವು, ಸ್ವತಃ ಆಕೆಯನ್ನು ಹೊರತುಪಡಿಸಿ.

‘ನಾನು ಪಾರ್ಕ್‍ನಲ್ಲಿ ಆತನೊಂದಿಗೆ ಒಂದೇ ಬೆಂಚ್ ಮೇಲೆ ಕುಳಿತಿದ್ದನ್ನು, ಆತನೊಂದಿಗೆ ಒಂದೆರಡು ಮಾತುಗಳನ್ನಾಡಿದ್ದನ್ನು ಯಾರಾದರೂ ನೋಡಿದ್ದರೆ!’

‘ಅಲ್ವೇ ಅಲಕಾ, ನಿನ್ನ ವಯಸ್ಸಿನ ಬಗ್ಗೆಯಾದರೂ ಯೋಚಿಸಬೇಡವೇ? ನಲ್ವತ್ತು ದಾಟಿದ ನೀನೆಲ್ಲಿ, ಮೂವತ್ತನ್ನೂ ದಾಟಿರದ ಆತನೆಲ್ಲಿ? ಆ ಯುವಕನೊಂದಿಗೆ ಪಾರ್ಕ್‌ನಲ್ಲಿ ಕುಳಿತುಕೊಂಡು ಮಾತನಾಡುವುದು ನಿನಗೆ ಶೋಭೆ ತರುತ್ತದೆಯೇ? ನೀನು ಆತನೊಂದಿಗೆ ಕುಳಿತಿರುವುದನ್ನು ನಿನ್ನನ್ನು ತುಂಬಾ ಪ್ರೀತಿಸುತ್ತಿರುವ ಪತಿ ವರುಣ್ ನೋಡಿದರೆ, ತಪ್ಪಾಗಿ ಅರ್ಥೈಸಿಕೊಂಡರೆ!’

ಸ್ವಲ್ಪ ಹೊತ್ತು ಯೋಚಿಸಿದಳು. ‘ಸದ್ಯ, ಏನೂ ಆಗಲಿಲ್ಲ.’ ವರುಣ್‍ಗೆ ಎಂದಿನಂತೆ ಚಹಾ ಮಾಡಿಕೊಟ್ಟಳು; ಆತ ಅದನ್ನು ಕುಡಿದ; ಪೇಪರ್ ಓದಿದ. ಒಂದಿಷ್ಟು ಅವಶ್ಯಕ, ಇನ್ನೊಂದಿಷ್ಟು ಅನವಶ್ಯಕ ಮಾತುಗಳನ್ನು ಆಡುತ್ತಲೇ ಸಿದ್ಧನಾಗಿ ಕಚೇರಿಗೆ ಹೊರಟುಹೋದ. ‘ಇನ್ನು ಪತಿದೇವರ ದರ್ಶನ ಸಂಜೆ ಏಳು ಗಂಟೆಗೇ!’ ಯಾಕೋ ತಾನು ಒಂಟಿಯೆನ್ನಿಸಿತು ಅಲಕಾಳಿಗೆ.

ಗಂಡ ಕಚೇರಿಗೆ ಹೋಗುತ್ತಿದ್ದಂತೆಯೇ ಅಲಕಾ ತನ್ನ ಎಂದಿನ ಮನೆಗೆಲಸಗಳಲ್ಲಿ ಬ್ಯುಸಿಯಾಗಿಬಿಡುತ್ತಿದ್ದಳು. ಆದರೆ, ಈ ದಿನ ಆಕೆ ಎಂದಿನಂತಿರಲಿಲ್ಲ. ಆಕೆಯ ಮನಸ್ಸಿನ ತಿಳಿಗೊಳಕ್ಕೆ ಆ ಅಪರಿಚಿತ ಯುವಕ ಕಲ್ಲು ಎಸೆದಿದ್ದ; ಪ್ರಶಾಂತವಾಗಿದ್ದ ಆಕೆಯ ಮನಸ್ಸಿನಲ್ಲಿ ಅಸಂಖ್ಯಾತ ಅಲೆಗಳು!

‘ಯಾಕೆ ಆ ಯುವಕ ನನ್ನನ್ನು ಈ ಪರಿಯಾಗಿ ಕಾಡತೊಡಗಿದ್ದಾನೆ! ಈ ಪಯಣದ ಕೊನೆ! ಪರಿಣಾಮ! ಇದಕ್ಕೆ ಇಲ್ಲಿಗೇ ವಿರಾಮ ನೀಡುವುದು ಒಳಿತು...’

ಆಕೆ ಒಂದು ನಿರ್ಧಾರಕ್ಕೆ ಬಂದಿದ್ದಳು.

***

ಮಾರನೆಯ ದಿನ ಬೆಳಿಗ್ಗೆ, ಉದ್ಯಾನವನದತ್ತ ಮುಖ ಮಾಡಿದಳು. ಆಕಾಶ ನಿರ್ಮಲವಾಗಿತ್ತು; ಮೋಡಗಳ ದಟ್ಟಣೆಯಿರಲಿಲ್ಲ. ಉಬ್ಬಸ ಉಂಟಾಗಬಹುದಾದ ಆತಂಕವೂ ಆಕೆಯಲ್ಲಿ ಕಡಿಮೆಯಾಗಿತ್ತು. ಆಶ್ಚರ್ಯ... ಆ ಯುವಕ ಆಕೆಗಿಂತಲೂ ಮೊದಲೇ, ಆಕೆ ಹಿಂದಿನ ದಿನ ಕುಳಿತುಕೊಂಡಿದ್ದ ಮರದ ಬೆಂಚ್ ಮೇಲೆ ಕುಳಿತುಕೊಂಡಿದ್ದ! ‘ನಿನ್ನೆಯಿಂದಲೂ ಇಲ್ಲಿಯೇ ಕುಳಿತುಬಿಟ್ಟಿದ್ದಾನೆಯೇ?’

‘ಹಾಗಿರಲಾರದು... ಬೆಳಿಗ್ಗೆ ನನಗಿಂತಲೂ ಬೇಗ ಬಂದಿರಬಹುದು...’

ಆಕೆ ಆತನೊಂದಿಗೆ ಮಾತನಾಡಲಿಲ್ಲ; ಬದಲಿಗೆ, ತಾನು ಹಿಂದಿನ ಕುಳಿತುಕೊಂಡ ಜಾಗದಲ್ಲಿಯೇ ಕುಳಿತುಕೊಂಡಳು. ಆತನೇನೂ ಮಾತನಾಡಲಿಲ್ಲ; ಮುಗುಳ್ನಕ್ಕ ಅಷ್ಟೇ. ಆದರೆ, ಆತನಿಗೆ ಏನು ಹೇಳಬೇಕು, ಈ ಪ್ರಕ್ರಿಯೆಗೆ ಹೇಗೆ ತಿಲಾಂಜಲಿ ಇಡಬೇಕು ಎನ್ನುವುದರ ಬಗ್ಗೆ ಆಕೆ ಮೊದಲೇ ತೀರ್ಮಾನಿಸಿಕೊಂಡಿದ್ದಳು.

‘ನೋಡಿ, ನೀವು...?’

‘ನಾನು ಉಬೇದುಲ್ಲಾ... ಉಬೇದುಲ್ಲಾ ಶರೀಫ್...’

‘ಹೆಸರು ಚೆನ್ನಾಗಿದೆ... ಮುಸಲ್ಮಾನ್... ಆದ್ರೆ ನೀವು ಮಾಡ್ತಿರೋದು...’

ಆಕೆಯ ಪ್ರಶ್ನೆಗೆ ಆತ ಆಶ್ಚರ್ಯದಿಂದ ಪ್ರಶ್ನಿಸಿದ,

‘ಏನಾಗಿದೆ? ನನ್ನಿಂದ ಏನಾದರೂ ತಪ್ಪಾಗಿದೆಯೇ?’

ಅದಕ್ಕೆ ತಕ್ಷಣ ಉತ್ತರಿಸುವುದು ಅಲಕಾಳಿಂದ ಸಾಧ್ಯವಾಗಲಿಲ್ಲ. ಆತ ಸಿಟ್ಟು ಮಾಡಿಕೊಂಡು ಅಲ್ಲಿಂದ ಎದ್ದುಹೋಗುವುದು ಆಕೆಗೂ ಬೇಕಿರಲಿಲ್ಲ. ಆತ ಯಾಕೆ ತನ್ನನ್ನು ಹಿಂಬಾಲಿಸುತ್ತಿದ್ದಾನೆ, ಆತನ ನಿರೀಕ್ಷೆ ಏನು ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವುದು ಅಲಕಾಳ ಬಯಕೆ. ಕೆಲವು ಕ್ಷಣಗಳು ಉರುಳಿದವು. ಆಗಲೇ ಆತ ಮತ್ತೊಮ್ಮೆ ಆಕೆಯ ಕಣ್ಣುಗಳನ್ನೇ ದಿಟ್ಟಿಸಿ ನೋಡಿದ. ಆತನ ಕಣ್ಣುಗಳಲ್ಲಿನ ಆಕರ್ಷಣೆ ಏನು? ಅವುಗಳನ್ನೇ ತಾನು ಮತ್ತೆ ಮತ್ತೆ ನೋಡಬೇಕು ಎನ್ನಿಸುತ್ತಿದೆ ಏಕೆ? ಅದೇ ಸಂದರ್ಭದಲ್ಲಿ ಆಕೆಗೆ ನೆನಪಾಗಿದ್ದು, ಆಕೆಯನ್ನು ಕಾಡಿದ್ದು, ಮೂರು ತಿಂಗಳುಗಳ ಹಿಂದಷ್ಟೇ ನಡೆದಿದ್ದ ಆ ಭಯಾನಕ ಘಟನೆ.

***

ತಂದೆ-ತಾಯಿಯರೊಂದಿಗೆ ರಾಂಚಿಗೆ ಬಂದಿದ್ದ ಬಾಲಕ ವಿಕ್ರಾಂತ್, ವಯೋಸಹಜವಾಗಿ ಬೆಳೆಯತೊಡಗಿದ್ದ. ಸ್ಥಳೀಯ ಹಿಂದಿ ಹಾಗೂ ಜಾರ್ಖಂಡಿ ಭಾಷೆಯನ್ನು ಕಲಿತಿದ್ದ; ಅನೇಕ ಸ್ನೇಹಿತರನ್ನೂ ಗಳಿಸಿಕೊಂಡಿದ್ದ. ಸದಾ ಲವಲವಿಕೆಯಿಂದ ಇರುತ್ತಿದ್ದ ಆತ ಹೈಸ್ಕೂಲು ಮುಗಿಸುತ್ತಿದ್ದಂತೆಯೇ ಒತ್ತಡ ಹೇರಿ ಬೈಕ್ ಕೊಡಿಸಿಕೊಂಡಿದ್ದ. ಒಬ್ಬನೇ ಮಗನೆಂಬ ಮುದ್ದಿನ ಪ್ರಭಾವವೋ ಅಥವಾ ಓದಿನಲ್ಲಿ ಬುದ್ಧಿವಂತ ಎನ್ನುವ ಹಮ್ಮಿನ ಕಾರಣದಿಂದಲೋ ಕೆಲವು ಚಟಗಳಿಗೂ ಅಂಟಿಕೊಂಡಿದ್ದ. ಡಿಗ್ರಿಯ ಕೊನೆಯ ವರ್ಷದಲ್ಲಿ ಓದುತ್ತಿದ್ದ ಆತ ಅದೊಂದು ದಿನ, ರಾತ್ರಿಯ ಸಮಯದಲ್ಲಿ ಮದ್ಯ ಸೇವನೆ ಮಾಡಿ ವೇಗವಾಗಿ ಬೈಕ್ ಓಡಿಸಿಕೊಂಡು ಬರುತ್ತಿದ್ದಾಗ, ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಕಾರಣದಿಂದಾಗಿ ತೀವ್ರ ಗಾಯಗೊಂಡಿದ್ದ. ಆತನನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಲಾಯಿತು; ಸೇರಿಸಿದ ಕ್ಷಣದಲ್ಲಿಯೇ ಆತನನ್ನು ವೆಂಟಿಲೇಟರ್ ಮೇಲೆ ಇರಿಸಲಾಗಿತ್ತು. ಎರಡು ಮೂರು ದಿನಗಳ ನಂತರ ಡಾಕ್ಟರ್ ಹೇಳಿದ್ದು, ‘ಬ್ರೇನ್ ಡೆಡ್!’ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಅಲಕಾ-ವರುಣ್ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದಿದ್ದರು; ಅದು, ತಮ್ಮ ಮಗನ ಅಂಗಗಳ ದಾನ!

‘ಹಾಗಿದ್ದರೆ...?’

***

‘ಮಿಸ್ಟರ್ ಉಬೇದುಲ್ಲಾ ಶರೀಫ್, ನೀವು ಶರೀಫ್ ವ್ಯಕ್ತಿಯಂತೆಯೇ ಕಾಣಿಸುತ್ತಿದ್ದೀರಿ. ಹಾಗಿದ್ದರೂ...’

ಆತ ಉಗುಳು ನುಂಗಿಕೊಳ್ಳುತ್ತಲೇ ಹೇಳತೊಡಗಿದ, ‘ನಾನು ಒಂದೂವರೆ ತಿಂಗಳಿನ ಹಿಂದೆ ಅಪಘಾತವೊಂದರಲ್ಲಿ ನನ್ನೆರಡೂ ಕಣ್ಣುಗಳನ್ನು ಕಳೆದುಕೊಂಡೆ. ಬಡತನದ ಕಾರಣದಿಂದಾಗಿ ನನ್ನ ಬದುಕೇ ಅಂಧಕಾರಮಯವಾಗುತ್ತಿತ್ತೋ ಏನೋ! ಅದೇ ಸಂದರ್ಭದಲ್ಲಿ ಆಸ್ಪತ್ರೆಯಿಂದ ಕರೆ ಬಂದಿತು. ಉಚಿತವಾಗಿ ನೇತ್ರಗಳ ವ್ಯವಸ್ಥೆಯಾಗಿದೆ ಎಂದರು ವೈದ್ಯರು. ದಾನಿಯೊಬ್ಬರು ನೀಡಿದ ಕಣ್ಣುಗಳನ್ನು ನನಗೆ ಹೊಂದಿಸಲಾಯಿತು. ನಾನು ಸರಿಹೋದ ಮೇಲೆ, ನನ್ನ ಕಣ್ಣುಗಳ ನಿಜವಾದ ಯಜಮಾನರನ್ನು ಹುಡುಕುವ ಪ್ರಯತ್ನ ಮಾಡಿದೆ. ಆಸ್ಪತ್ರೆಯಿಂದಲೇ ನಿಮ್ಮ ವಿಳಾಸವನ್ನು ಪಡೆದುಕೊಂಡೆ. ಆದರೆ, ನಾನು ಹೇಳುವುದನ್ನು ಕಟ್ಟುಕಥೆಯೆಂದು ನೀವು ತಿರಸ್ಕರಿಸಿದರೆ ಏನ್ಮಾಡೋದು ಎನ್ನುವ ಅನುಮಾನದಿಂದಲೇ ನಿಮ್ಮ ಮನೆಯವರೆಗೆ ಬರಲಿಲ್ಲ. ಜೊತೆಯಲ್ಲಿ ನನ್ನ ಧರ್ಮ ಕೂಡ. ನೀವು ನನ್ನನ್ನು ಮೋಸಗಾರ ಎಂದು ಭಾವಿಸಿ ಧಿಕ್ಕರಿಸಿದರೆ, ಅದನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ಹಾಗಾಗಿ ಈ ಪಾರ್ಕ್‍ನಲ್ಲಿ ನಿಮ್ಮನ್ನು ಸಂಧಿಸಿ ವಿಷಯ ತಿಳಿಸಬೇಕು ಎಂದುಕೊಂಡು, ನಿಮ್ಮನ್ನು ಅನುಸರಿಸಿದೆ’.

‘ಹಾಗಿದ್ದರೆ ನಿಮ್ಮ ಕಣ್ಣುಗಳು...’

‘ನಿಮ್ಮ ಮಗ ವಿಕ್ರಾಂತ್‍ನದ್ದು... ನಾನು ನಿಮ್ಮನ್ನು ‘ಅಮ್ಮಾ’ ಎನ್ನಬಹುದೇ?’ ಕೇಳುತ್ತಲೇ ಆಕೆಯ ಕಾಲುಗಳಿಗೆರಗಿದ.

ಆತನತ್ತ ತನ್ನ ಸೆಳೆತಕ್ಕೆ ಕಾರಣ ತಿಳಿದ ಅಲಕಾ, ಆತನನ್ನು ಮೇಲಕ್ಕೆತ್ತಿ, ಎದೆಗವುಚಿಕೊಂಡಳು. ಆಕೆಯ ಪಾಲಿಗೆ ವಿಕ್ರಾಂತ್ ಮತ್ತೆ ಹುಟ್ಟಿಬಂದಿದ್ದ.

ಈಗ, ಉದ್ಯಾನವನದಲ್ಲಿದ್ದ ಎಲ್ಲರ ನೋಟವೂ ಇವರತ್ತಲೇ ನೆಟ್ಟಿತ್ತು. ಆದರೆ, ಅಲಕಾಳಿಗೆ ಇದರ ಪರಿವೆಯೇ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT