ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಗುರು ಶಂಕರಾಚಾರ್ಯ

Last Updated 3 ಮೇ 2019, 20:00 IST
ಅಕ್ಷರ ಗಾತ್ರ

ಭಾರತೀಯ ಆಧ್ಯಾತ್ಮಿಕ ಜಗತ್ತಿನಲ್ಲಿ ಶಿಖರದಂತಿರುವವರು ಶಂಕರಾಚಾರ್ಯರು. ಕಳೆಯನ್ನು ಕಳೆದುಕೊಂಡಿದ್ದ ಭಾರತೀಯ ತತ್ತ್ವಶಾಸ್ತ್ರದ ಕ್ಷೇತ್ರಕ್ಕೆ ಹೊಸದಾದ ಜೀವಕಳೆಯನ್ನು ಒದಗಿಸಿದವರು ಅವರು.

ಶಂಕರಾಚಾರ್ಯರ ಜೀವನದ ಬಗ್ಗೆ ತಿಳಿದಿರುವ ಸಂಗತಿಗಳು ಕಡಿಮೆ. ಅವುಗಳಲ್ಲಿಯೂ ಒಂದೇ ಅಭಿಪ್ರಾಯವಿಲ್ಲ. ಇಷ್ಟನ್ನು ಹೇಳಬಹುದು: ಕೇರಳದ ಕಾಲಟಿ ಎಂಬ ಗ್ರಾಮ ಶಂಕರಾಚಾರ್ಯರ ಜನ್ಮಸ್ಥಳ. ಅದು ಪೂರ್ನಾನದೀ ತೀರದಲ್ಲಿದೆ. ಶಿವಗುರು ಅವರ ತಂದೆ; ತಾಯಿ ಆರ್ಯಾಂಬಾ. ಈ ದಂಪತಿಗೆ ಬಹಳ ವರ್ಷಗಳು ಮಕ್ಕಳಿರಲಿಲ್ಲ. ಶಿವನ ಆರಾಧನೆಯಿಂದ ಜನಿಸಿದ ಮಗನೇ ಶಂಕರ. ಮುಂದೆ ಶಂಕರಾಚಾರ್ಯ ಎನಿಸಿ ಲೋಕಪ್ರಸಿದ್ಧಿಯನ್ನು ಪಡೆದವ.

ಬಾಲಕ ಶಂಕರನಿಗೆ ಎಳವೆಯಿಂದಲೇ ವೈರಾಗ್ಯಪ್ರವೃತ್ತಿ. ಸನ್ಯಾಸಿಯಾಗಬೇಕೆಂಬ ಬಯಕೆ. ಆದರೆ ತಾಯಿಗೆ ಇಷ್ಟವಿಲ್ಲ. ಒಂದು ದಿನ ಶಂಕರನು ಪೂರ್ಣಾನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಅಲ್ಲಿಯೇ ಇದ್ದ ಮೊಸಳೆಯೊಂದು ಅವನ ಕಾಲನ್ನು ಹಿಡಿಯಿತು. ಮಗನ ಕೂಗನ್ನು ಕೇಳಿ ಆರ್ಯಾಂಬೆ ಅಲ್ಲಿಗೆ ಓಡಿದಳು. ‘ಅಮ್ಮ! ನಾನು ಮೊಸಳೆಯ ಬಾಯಿಗೆ ಸಿಕ್ಕಿರುವೆ; ಇನ್ನು ನನ್ನ ಜೀವನ ಮುಗಿದಂತೆ. ಈಗಲಾದರೂ ನನ್ನ ಆಸೆಯನ್ನು ಪೂರೈಸಿಕೊಳ್ಳಲು ಒಪ್ಪಿಕೋ. ನಾನು ಸನ್ಯಾಸಿಯಾಗಲು ಅನುಮತಿಯನ್ನು ನೀಡು’ ಎಂದು ಅಂಗಲಾಚಿದ. ತಾಯಿ ಒಪ್ಪಿದಳು. ಆದರೆ ಆ ಕೂಡಲೇ ಮೊಸಳೆ ಶಂಕರನ ಕಾಲನ್ನು ಬಿಟ್ಟು ಅಲ್ಲಿಂದ ಹೊರಟುಹೋಯಿತು. ಮುಂದೆ ಶಂಕರ ನರ್ಮದಾನದೀತೀರದಲ್ಲಿದ್ದ ಗೋವಿಂದಭಗವತ್ಪಾದರಲ್ಲಿ ಶಿಷ್ಯತ್ವವನ್ನು ಸ್ವೀಕರಿಸಿ, ಜ್ಞಾನವನ್ನು ಪಡೆದು, ಅದನ್ನು ಹಂಚಲು ದೇಶದ ಉದ್ದಗಲಕ್ಕೂ ಸಂಚರಿಸುತ್ತ ‘ಶಂಕರಾಚಾರ್ಯ’ ಎಂದು ಪ್ರಸಿದ್ಧಿಯನ್ನೂ ಪಡೆದ. ಗುರುಗಳ ಆದೇಶದಂತೆ ಶಂಕರಾಚಾರ್ಯರು ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆದು ಅದ್ವೈತ ಸಿದ್ಧಾಂತವನ್ನು ಗಟ್ಟಿಯಾಗಿ ನೆಲೆಗೊಳಿಸಿದರು. ಭಾರತದೇಶದ ನಾಲ್ಕು ದಿಕ್ಕು ಗಳಲ್ಲಿ ಮಠಗಳನ್ನು ಸ್ಥಾಪಿಸಿ, ಅಲ್ಲಿ ತಮ್ಮ ಶಿಷ್ಯರನ್ನು ಪ್ರತಿಷ್ಠಾಪಿಸಿ, ವೇದಾಂತ ದರ್ಶನದ ಪ್ರಸಾರಕ್ಕೆ ಕಾರಣರಾದರು. ಕಾಶ್ಮೀರಕ್ಕೆ ಹೋಗಿ ಅಲ್ಲಿ ಸರ್ವಜ್ಞ ಪೀಠವನ್ನು ಅಲಂಕರಿಸಿದರು. ಕೊನೆಗೆ ಅವರ ಮೂವತ್ತೆರಡನೆಯ ವಯಸ್ಸಿನಲ್ಲಿ ಭೌತಿಕ ಶರೀರವನ್ನು ತ್ಯಜಿಸಿದರು. ಅವರ ಜೀವಿತಾವಧಿಯನ್ನು ಕ್ರಿ.ಶ. 688ರಿಂದ 720 ಎಂದು ಹೇಳಬಹುದು.

ಶಂಕರಾಚಾರ್ಯರ ಬುದ್ಧಿಶಕ್ತಿಯನ್ನೂ ಕಾರ್ಯಶಕ್ತಿಯನ್ನೂ ಪ್ರಶಂಸಿಸಿರುವ ಪ್ರಾಚೀನ ಶ್ಲೋಕವೊಂದು ಹೀಗಿದೆ:

ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರವಿತ್‌/

ಷೋಡಶೇ ಕೃತವಾನ್‌ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್‌//

(ಶಂಕರಾಚಾರ್ಯರು ಎಂಟು ವರ್ಷದವರಿರುವಾಗ ನಾಲ್ಕು ವೇದಗಳನ್ನು ಕಲಿತಿದ್ದರು; ಹನ್ನೆರಡನೆಯ ವಯಸ್ಸಿನಲ್ಲಿ ಎಲ್ಲ ಶಾಸ್ತ್ರಗಳನ್ನೂ ಬಲ್ಲವರಾಗಿದ್ದರು; ಹದಿನಾರನೆಯ ವಯಸ್ಸಿನಲ್ಲಿ ಭಾಷ್ಯಗಳನ್ನು ಬರೆದರು; ಮೂವತ್ತೆರಡನೆಯ ವಯಸ್ಸಿನಲ್ಲಿ ಶರೀರವನ್ನು ಬಿಟ್ಟರು.)

ಶಂಕರಾಚಾರ್ಯರ ಈ ಅಪ್ರತಿಮ ಸಾಧನೆಯ ಕಾರಣ ದಿಂದ ಅವರನ್ನು ಜನರು ಶಿವನ ಅವತಾರ ಎಂದೇ ಆದರಿಸುವಂತಾಯಿತು.

‘ಸೃಷ್ಟಿಯಲ್ಲಿ ಇರುವುದು ಒಂದೇ ವಸ್ತು; ಅದೇ ಬ್ರಹ್ಮ. ಈ ಬ್ರಹ್ಮದ ಅನುಭವವೇ ಆನಂದದ ಅನುಭವ. ಎಲ್ಲರಲ್ಲೂ ಎಲ್ಲೆಲ್ಲೂ ಬ್ರಹ್ಮವೇ ಆಗಿರುವಾಗ, ಎಲ್ಲವೂ ಬ್ರಹ್ಮವೇ ಆಗಿರುವಾಗ – ಇಲ್ಲಿ ಭೇದಭಾವಕ್ಕೆ ಅವಕಾಶವೇ ಇರದು. ನಮ್ಮ ದಿಟವಾದ ಸ್ವರೂಪವಾದ ಬ್ರಹ್ಮ, ಎಂದರೆ ಆನಂದವನ್ನು ಅನುಭವಕ್ಕೆ ತಂದುಕೊಳ್ಳುವುದೇ ಮೋಕ್ಷ. ಇದಕ್ಕಾಗಿ ನಾವೇನೂ ಶ್ರಮ ಪಡಬೇಕಿಲ್ಲ; ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿಕೊಂಡರೆ ಸಾಕು.’ ಇದು ಶಂಕರಾಚಾರ್ಯರ ಉಪದೇಶದ ಸಾರ ಎನ್ನಬಹುದು.

ಅದ್ವೈತತ್ತ್ವ

ಶಂಕರಾಚಾರ್ಯರು ಎತ್ತಿಹಿಡಿದ ತತ್ತ್ವವನ್ನು ‘ಅದ್ವೈತದರ್ಶನ’ ಎಂದು ಕರೆಯುವುದು ವಾಡಿಕೆ. ಅದ್ವೈತ ಎಂದರೇನು? ಇದರ ವ್ಯಾಪ್ತಿ ತುಂಬ ವಿಸ್ವಾರವಾದದ್ದು. ಡಿವಿಜಿಯವರ ಈ ಮಾತುಗಳನ್ನು ನೋಡಬಹುದು:

‘ಅದ್ವೈತ ಅಥವಾ ಎರಡಿಲ್ಲದಿರುವಿಕೆ ಎಂಬುದು ಒಂದು ಸಂವೇದನೆಯ (feeling) ಹೆಸರು ಅಥವಾ ವಿಶ್ವದೊಡನೆ ತಾದಾತ್ಮ್ಯ ಸಂಬಂಧ...

’ಅದ್ವೈತ ಎಂದರೆ ಒಂದು ಸಂವೇದನೆ ಎಂದು ನಾನು ಹೇಳಿದಾಗ ಅದು ಒಂದು ದೃಷ್ಟಿಕೋನ, ಅದು ಕೇವಲ ತರ್ಕಕ್ಕೆ ವಿಷಯವಲ್ಲ, ಎಂಬುದೇ ನನ್ನ ಉದ್ದೇಶದಲ್ಲಿರುವ ಅರ್ಥ. ಅದು ಭಾವನಾಗಮ್ಯವಾದದ್ದು.

’ಈ ಆತ್ಮಜ್ಞಾನವು ತರ್ಕದಿಂದ ಪಡೆಯಯಕ್ಕದ್ದಲ್ಲ (ಕಠೋಪನಿಷತ್ತು).

’ಅದ್ವೈತ ಎಂಬ ಪದವೇ ಗಮನಾರ್ಹವಾದದ್ದು. ಅದು ಏಕತೆ ಎಂಬುದಕ್ಕಿಂತ ಹೆಚ್ಚಾಗಿ, ಅ–ದ್ವೈತ – ಎರಡನೆಯದಿಲ್ಲದಿರುವಿಕೆ, ಕೇವಲ ಏಕತೆಯಲ್ಲ. ಮನುಷ್ಯ ಮತ್ತು ಜಗತ್ತು, ನೋಡುವವನು ಮತ್ತು ನೋಡಲ್ಪಟ್ಟದ್ದು, ತೋರಿಕೆಯಿಂದ ತಿಳಿದುಬರುವುದು ಮತ್ತು ಕಾಣಬಾರದ ಸತ್ತ್ವ – ಈ ಪ್ರತ್ಯೇಕತೆ ಅಥವಾ ಇರ್ತನ ಮೇಲುನೋಟಕ್ಕೆ ಮಾತ್ರ ಕಾಣಬರತಕ್ಕದ್ದು... ನಮ್ಮ ಕಣ್ಣಿಗೆ ಕಾಣಬರುವುದು ಮತ್ತು ಕಾಣದೇ ಇರುವುದು, ಅವು ಎಲ್ಲವೂ ಒಂದೇ, ಎರಡಲ್ಲ. ಯಾವುದು ಇದೆಯೋ ಅದೇ ನಿಜವಾದದ್ದು. ಎಂದರೆ ಜೀವವೆಲ್ಲ ಒಂದೇ, ಎರಡಲ್ಲ, ಹಲವೂ ಅಲ್ಲ....

‘ಜೀವನದ ಚಟುವಟಿಕೆಗಳನ್ನು ಕುರಿತು ಅದ್ವೈತಿಯ ದೃಷ್ಟಿಯನ್ನು ಹೀಗೆ ಸಂಗ್ರಹಿಸಬಹುದು:

ಯೋಗರತವೋ ವಾ ಭೋಗರತೋವಾ ಸಂಗರತೋ ವಾ ಸಂಗವಿಹೀನಃ ।

ಯಸ್ಯ ಬ್ರಹ್ಮಣಿ ರಮತೇ ಚಿತ್ತಂ ನಂದತಿ ನಂದತಿ ನಂದತ್ಯೇವ ।।

(ಯೋಗದಲ್ಲಿ ತೊಡಗಿರಲಿ, ಭೋಗಿಯಾಗಿರಲಿ, ಎಲ್ಲರ ಜೊತೆಯಲ್ಲಿರಲಿ, ಏಕಾಂತ ವಾಸಮಾಡಲಿ, ಯಾರ ಮನಸ್ಸು ಬ್ರಹ್ಮದಲ್ಲಿ ನೆಲೆಯಾಗಿ ನಿಂತಿರುತ್ತದೆಯೋ ಅವನ ಮನಸ್ಸು ಆನಂದಿಸುತ್ತದೆ, ಆನಂದಲ್ಲೇ ಇರುತ್ತದೆ.)

ಈ ಜಗತ್ತಿನ ವಿಷಯದಲ್ಲಿ ಬೇಸರಹೊಳ್ಳುವುದಾಗಲೀ ಅನಾದರಣೆ ತೋರುವುದಾಗಲೀ ಅದ್ವೈತವಲ್ಲ. ಸೋತ ಭಾವವೋ ಗೋಳಾಟದ ಮನೋಭಾವವೋ ಅದ್ವೈತವಲ್ಲ. ವಾಸ್ತತವವಗಿ ಅದು ಅಭಯ, ವಿಜಯ. ಏಕೆಂದರೆ ಭಗವಂತನ ಕೃಪೆಯೂ ಶಕ್ತಿಯೂ ಅನಂತ ಮತ್ತು ನೀವು ಆ ಅನಂತದೊಂದಿಗೆ ಒಂದಾಗಬಹುದು.’

ಕೃತಿಗಳು

ಶಂಕರಾಚಾರ್ಯರ ಹೆಸರಿನಲ್ಲಿ ಇನ್ನೂರಕ್ಕೂ ಹೆಚ್ಚಿನ ಕೃತಿಗಳಿವೆ. ಆದರೆ ಇವೆಲ್ಲವೂ ಅವರವೇ ಎನ್ನುವುದರಲ್ಲಿ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಅವರದ್ದು ಎಂದು ಎಲ್ಲರೂ ಒಪ್ಪಿರುವ ಕೃತಿಗಳು ಎಂದರೆ:

ಉಪನಿಷತ್‌ಭಾಷ್ಯಗಳು (ಈಶಾವಾಸ್ಯೋಪನಿಷತ್ತು, ಕೇನೋಪನಿಷತ್ತು, ಕಠೋಪನಿಷತ್ತು, ಪ್ರಶ್ನೋಪನಿಷತ್ತು, ಮುಂಡಕೋಪನಿಷತ್ತು, ಮಾಂಡೂಕ್ಯೋಪನಿಷತ್ತು, ತೈತ್ತಿರೀಯೋಪನಿಷತ್ತು, ಐತರೇಯೋಪನಿಷತ್ತು, ಛಾಂದೋಗ್ಯೋಪನಿಷತ್ತು ಮತ್ತು ಬೃಹದಾರಣ್ಯಕೋಪನಿಷತ್ತು – ಈ ಉಪನಿಷತ್ತುಗಳಿಗೆ ಅವರು ಬರೆದಿರುವ ಭಾಷ್ಯಗಳು.)

ಭಗವದ್ಗೀತಾಭಾಷ್ಯ, ಬ್ರಹ್ಮಸೂತ್ರಭಾಷ್ಯ

ಶಂಕರಾಚಾರ್ಯರ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಇನ್ನು ಕೆಲವು ಪ್ರಧಾನ ಕೃತಿಗಳು:

ಸೌಂದರ್ಯಲಹರೀ, ವಿವೇಕಚೂಡಾಮಣಿ, ಉಪದೇಶಸಾಹಸ್ರೀ, ಆನಂದಲಹರೀ, ದಕ್ಷಿಣಾಮೂರ್ತಿಸ್ತೋತ್ರ, ಚರ್ಪಟಮಂಜರಿಕಾ (ಭಜಗೋವಿಂದಮ್‌), ಗೋಪಾಲಾಷ್ಟಕ, ದಶಶ್ಲೋಕೀ, ಮನೀಷಾಪಂಚಕ, ನಿರ್ವಾಣಮಂಜರೀ, ಯತಿಪಂಚಕ ಮುಂತಾದವು.

(ಅನುವಾದ: ಡಿ. ಆರ್‌. ವೆಂಕಟರಮಣನ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT