ದೇವರ ದೆವ್ವ

7

ದೇವರ ದೆವ್ವ

Published:
Updated:
Deccan Herald

ಸುದ್ದಿ ತಿಳಿದಾಗಿನಿಂದ ನೀಲಮ್ಮನ ಹೊಟ್ಟ್ಯಾಗ ಒಂದು ನಮೂನೆ ಸಂಕಟ. ಮಾನಂದ ಮತ್ತ ಎಳೀ ಸೌತಿಕಾಯಿಯಂಥ ಮೂರು ಮಕ್ಕಳು ಕಣ್ಣು ಮುಂದು ಬರ್ತಿದ್ದವು. ಮನಸ್ಸು ಆಘಾತ, ಆಶ್ಚರ್ಯದಿಂದ ಕೂಡಿತ್ತು. ಹಾಳು ಮೊಬೈಲ್ನಿಂದ ಏನೇನೊ ಸುದ್ದಿ ತಿಳೀತದ. ಯಾವಕಿನೋ ಓಡಿ ಹೋಗಿದ್ದು, ಯಾರದೊ ಎಮ್ಮಿ ಕೊಂಡೊಡಗ್ಯಾಗ ಬಿದ್ದಿದ್ದು, ಗುಡಿಯೊಳಗಿನ ಹುಂಡಿರೊಕ್ಕ ಪೂಜಾರಿನೇ ಲಪಟಾಯಿಸಿದ್ದು, ಅವತ್ತಿಂದ ಅವತ್ತೇ ಊರೂರು ಪುಕಾರಾಗತ್ತ. ಇವನ ಸುದ್ದಿ ನನಗ ಯಾಕ ತಿಳಿಯಲಿಲ್ಲ. ಮಗಳು ಖೋಡಿನ ತಂದು... ಆಕಿಯರ ‘ಅವ್ವಾs ಹಿಂಗಿಂಗ... ಅಂತ’ ಒಂದು ಫೋನ್ ಮಾಡಿ ಹೇಳಿದ್ರ... ಅಲವತ್ತುಕೊಂಡಳು. ರಾತ್ರೋರಾತ್ರಿ ಮಗಳ ಊರಿಗೆ ಹೋಗಬೇಕಂತ ಕೊಟ್ರೇಶಿಗಿ ಕೇಳ್ಳಿಕ್ಕೆ ಕಳಿಸಿದಳು. ಆತ ‘ಅತ್ತಿ ಮೂರು ವರ್ಷ ಬರಲಾರದ ಮಳೆ ಮೂರು ದಿನ ಸತತ ಸುರದು ರೋಡ್ ಎಂಬ ರೋಡು ಕುಂಬಾರ್ ಮನೆ ಕೆಸರು ತಂದು ಸುರದಂಗ ರಾಡಿ ರಾಡಿಯಾಗ್ಯದ. ಇಂಥ ಮಳಿಗೆ, ಇಂಥ ದಾರಿಗಿ ರಾತ್ರಿ ಹೊತ್ನಾಗ ಯಾವ್ ಗಾಡಿ, ಜೀಪೂ ನಡ್ಯಗಿಂಲ್ಲ. ಮುಂಜಾನೆ ಪೈಲಾದ ಬಸ್ಸಿಗೆ ಹೋಗುವಂತಿ’ ಅಂತ ಹೇಳಿದ್ದಕ್ಕೆ ಮುದುಕಿ ಸುಮ್ಮನಾಗಿತ್ತು.

ಇಡೀ ರಾತ್ರಿ ಮಗಳ ಸಂಸಾರದೊಳಗೆ ಮನಸ್ಸಿಟ್ಟು ನಿದ್ದೆಗೆಟ್ಟಿದ್ದಳು. ತನ್ನ ಮಾತಿಗೆ ಕವಡಿ ಕಿಮ್ಮತ್ತು ಕೊಡಲಾರದ ಗಂಡನ ನೆನಪಾಯಿತು. ಬ್ಯಾಡ ಬ್ಯಾಡ ಅಂದ್ರೂ ಕೇಳ್ಲಿಲ್ಲ. ಹೊಲ ಇಲ್ಲ, ನೆಲ ಇಲ್ಲ, ಓದಿಲ್ಲ, ಬರೆದಿಲ್ಲ. ಪಾನ್ ಪಟ್ಟಿಯಂಥ ಕಿರಾಣಿ ದುಖಾನದಾಗ ಗಳಿಸ್ಯಾನೆಷ್ಟು...ಉಳಿಸ್ಯಾನೆಷ್ಟು... ಅಂತ ಪರಿ ಪರಿಲಿಂದ ತಿಳಿಸಿ ಹೇಳಿದ್ದೆ. ಮಾರಾಯ ನನ್ನ ಮಾತು ಎಂದ ಕೇಳ್ಯಾನು. ‘ಏ ....ನಿಂಗೇನ್ ತಿಳಿಯತ್ತ...ಒಂದೇ ಪಾರ, ಗರೀಬದ. ನಮಗೂ ಗಣಮಕ್ಕಳಿಲ್ಲ, ಮುಪ್ಪೀಗಿ ನಮ್ ಕಡಿನೂ ನಿಗಾ ಇಡತಾನ. ದುಕಾನ ಸಣ್ಣದಿದ್ದರ ಏನಾತು? ಮುಂದ ದೊಡ್ಡದ ಆಗ್ತದ’ ಅಂತ ಜಬರಿಸಿದ್ದ. ಏನಂದರೂ ಪೋರಿ ಬದುಕು ಚೆಂದ ಆಗಲಿಲ್ಲ ಅಂತ ಮನಸ್ಸಿನ್ಯಾಗ ಮರಗುತ್ತ ರಾತ್ರಿಯೆಲ್ಲಾ ಮಗ್ಗುಲು ಬದಲಾಸಿಗೋತ ಕಣ್ಣು ರೆಪ್ಪಿ ಅಂಟಿಸೋ ಪ್ರಯತ್ನ ಮಾಡತಿದ್ದಳು ನೀಲಮ್ಮ.

ತಾನು ಹೇಳಿದಂಗ ಕೇಳೋ ಅಳಿಯ ಇರಬೇಕು ಅಂತ ಶಿವರಾಯ ಸಂಭಾವಿತ ಸಂಗಪ್ಪನ್ನ ಹುಡುಕಿದ್ದು. ಯಾರು ಏನೇ ಹೇಳಿದ್ರೂ ಹೌದೌದು ಅಂತ ತಲಿ ಹಾಕುತ್ತಿದ್ದನ ಹೊರತು ಯಾರ ಮಾತೂ ಅಲ್ಲ ಅಂತಿರಲಿಲ್ಲ. ಚೆಲುವಿ ಮಾನಂದಾಗ ಲಗ್ನ ಮಾಡ್ಕೊಲಿಕ್ಕಿ ಊರಾಗ ಚಾಲಾಕಿ ಹುಡುಗರು ಒಂಟಗಾಲ ಮ್ಯಾಲ ನಿಂತಿದ್ರೂ ಶಿವರಾಯ ಸಂಗಪ್ಪನ ಜೋಡಿನೇ ಅಕಿನ ಮದುವಿ ಮಾಡಿದ. ಆದರೇನಾಯಿತು ಮದುವಿಯಾಗಿ ಎರಡು ವರ್ಷ ತುಂಬಿಲ್ಲ ಶಿವರಾಯಾ ಒಂದು ದಿನ ಎದಿ ಬ್ಯಾನಿ ಅಂತ ನರಳಿದವ ಏಳಲೇ ಇಲ್ಲ, ಶಿವನ ಪಾದ ಸೇರಿಬಿಟ್ಟ. ಸಂಗಪ್ಪನ ಜೊತಿ ಸಂಸಾರ ಮಾಡಿಕೊಂಡು ಮೂರು ಹೆಣ್ಣುಮಕ್ಕಳ ತಾಯಿಯಾದ ಮಾನಂದಾ ಗಂಡು ಹುಟ್ಟುತ್ತದೇನೋ ಅಂತ ಮತ್ತೊಂದಕ್ಕ ಆಸಿಪಟ್ಟಿದ್ದಳು. ಇಲ್ಲಿತನಕ ಎಲ್ಲಾ ಚೆಂದಾಗೇ ಇತ್ತು. ಆದರೆ ಈಗ ಒಮ್ಮಿಂದೊಮ್ಮೆ ಪೀಕಲಾಟಕ್ಕೆ ಇಟ್ಟುಕೊಂಡದಲ್ಲ...ಅಂತ ನೀಲಮ್ಮಗ ದುಃಖ. ಉಬ್ಬುಬ್ಬಿ ಬರೂಹಂಗ ದುಃಖ ಉಕ್ಕುತ್ತಿತ್ತು. ಆಕಿ ಹೆಂಗರ ರಾತ್ರಿ ಕಳಿತದೋ ಅಂತ ಚಡಪಡಿಸಿದಳು.

ಸಂಗಪ್ಪ ಕಿರಾಣಿ ಅಂಗಡಿ ಇಟ್ಟುಕೊಂಡು ಸಂಸಾರನೇನೋ ಶುರು ಮಾಡಿದ್ದ. ಆದರೆ ಕುಟುಂಬ ಬೆಳೆದಂತೆ ದುಕಾನು ಬೆಳೀಲಿಲ್ಲ. ಹಂಗಾಗಿ ಬಾಜುದಾಗ ಡಾಕ್ಟರ್ ಕ್ಲಿನಿಕ್ಕಿನ್ಯಾಗ ಕಂಪೌಂಡರ್‌ಗಿರಿನೂ ಮಾಡತೊಡಗಿದ್ದ. ಯಾದಗಿರಿಯಿಂದ ವಾಡಿಗೆ ಅಪ್ಪೆಂಡೌನ್ ಮಾಡೋ ಈ ಡಾಕ್ಟರಿಗೆ ಅಲ್ಲಿಯವನೇ ಆದ ಸಂಗಪ್ಪನ ಅಗತ್ಯ ಇತ್ತು. ಇವನು ತನ್ನ ಕಿರಾಣಿ ದುಕಾನಿನ ದೇಖರೇಖಿಯನ್ನು ಜಾವಿದ್‌ಗ ಒಪ್ಪಿಸಿ ತಾನು ದವಾಖಾನೆಯ ಜುಮ್ಮೇದಾರಿ ನಿಭಾಯಿಸತೊಡಗಿದ್ದ. ಹಂಗಂತ ಸಂಗಪ್ಪನ ಆಮದಾನಿ ಏನೂ ಭಾರೀ ಆಗಲಿಲ್ಲ. ಡಾಕ್ಟರ್ ಬಳಿ ಬರೋ ಪೇಷಂಟುಗಳ ಪರಿಚಯ ಸ್ವಲ್ಪ ಜಾಸ್ತಿಯಾಗಿ ಕಿರಾಣಿ ದುಕಾನಿನ ವ್ಯಾಪಾರ ಚೂರುಪಾರು ಸುಧಾರಿಸಿತು. ಆದರೆ ಜಾವಿದನಿಗೆ ಕೆಲಸ ಹೆಚ್ಚಾಗಿ ಆತ ‘ಪಗಾರ ಬಡಾಸು ಸಂಗಪ್ಪಣ್ಣ. ಇಲ್ಲಂದ್ರ ನಮ್ಮ ಸಾಜಿದ್ ಮಾಮೂ ಮಟನ್ ದುಕಾನದಾಗ ಬಾ ಅಂದಾನ. ನಾ ಹೋಗ್ತೀನಿ’ ಅಂದಾಗ ಸಂಗಪ್ಪ ಪಗಾರ ಹೆಚ್ಚು ಮಾಡಬೇಕಾಯಿತು. ಹಂಗಾಗಿ ಆಮದಾನಿ ಖರ್ಚು ಬರೋಬ್ಬರಿ ಆಯ್ತ.

ಸಂಗಪ್ಪ ಲಾಡ್ಲಾಪುರಕ್ಕ ಹರಕಿ ಮುಟ್ಟಸದಕ್ಕ ಅಂತ ಸೂಟಿ ತಗೊಂಡಿದ್ದ. ಡಾಕ್ಟರಿಗೆ ಬಹಳ ಅಡಚಣೆಯಾಗಿತ್ತು. ಕೈ ಕೈಯಾಗ ಸಂಗಪ್ಪ ಇದ್ದು ಈಗೀಗ ಆತ ಸಿರಿಂಜ್ ಲೋಡ್ ಮಾಡತಿದ್ದ, ಗಾಯಕ್ಕ ಡ್ರೆಸ್ಸಿಂಗ್ ಮಾಡತಿದ್ದ, ಬಿ.ಪಿ ನೋಡ್ಲಿಕ್ಕೆ ಪೇಷೆಂಟ್ ಮಲಗಿಸಿ ತೋಳಿಗೆ ಪಟ್ಟಿ ಕಟ್ಟತಿದ್ದ. ಹಿಂಗಾಗಿ ಡಾಕ್ಟರಗ ಕೈ ಮುರಿದ್ಹಾಂಗ ಆಗಿತ್ತು. ಆಗಾಗ ಮಾತಿಗೆ ಬಂದು ಕೂಡುತ್ತಿದ್ದ ಫೈನಾನ್ಸ್ ದುಕಾನದ ಮುನೀರನನ್ನ ಕರೆದ್ರು ಡಾಕ್ಟರು. ಸಮಯ ಸಿಕ್ಕಾಗೆಲ್ಲ ಮುನೀರ್ ಮಾತಿಗೆ ಇಳಿಯುತ್ತಿದ್ದ. ಆತ ಸಂಗಪ್ಪನ ಖಾಸಾ ಗೆಳೆಯ ಆಗಿದ್ದು ಅವತ್ತಿನ ಟಾಪಿಕ್ ಸಂಗಪ್ಪನೇ ಆಗಿದ್ದ.

‘ಸರ್ ಈಗೀಗ ಅಂವ ಒಂದು ನಮೂನಿ ಆಗ್ಯಾನ್ರಿ...ದವಾಖಾನಿ ಮುಗಿಯಾದ ನೋಡ್ತಾನ... ನೀವು ಟೇಷನ ಕಡೆ ಮುಖ ಮಾಡಿದ್ರಲ್ಲೊ... ಇತ್ತಾಗ ಅವ ತನ್ನ ಗಾಡಿ ಬಿಡತಾನ್ರಿ. ನೀವು ಹೋದಮ್ಯಾಗ ಕಿರಾಣಿ ದುಕಾನದಾಗ ಇದ್ದರ ವ್ಯಾಪಾರ ಆಗ್ತದ ಅಲ್ರಿ? ಜಾವೀದನ ಮ್ಯಾಲ ಬಿಟ್ಟು ಹೋಗ್ತಾನ್ರಿ. ಅದು ಹೇಳಿ ಕೇಳಿ ಪಾರಾಪಟ್ಟಿ... ವ್ಯಾಪಾರ ಆದರೆ ಆಯಿತು...ಹೋದ್ರ ಹೋಯ್ತು. ಜರ... ಆತಗ ನೀವು ಕುಂದ್ರಸಿ ಹೇಳ್ರಿ. ಸಂಸಾರಸ್ಥ, ಉಣ ತಿನ್ನ ಮಕ್ಕಳು, ಆ ತಂಗಿ ಅರ ಏನ್ ಮಾಡ್ಬೇಕು ಹೊಟ್ಟಿಗೆ ತಂದು ಹಾಕಿಲ್ಲ ಅಂದ್ರ..? ದಿನಾ ಎಲ್ಲಿ ಹೋಗ್ತಾನೋ ಏನೋ... ಕೇಳಿದ್ರೆ ಮಾತ ಹಾರಿಸಿ ಬಿಡತಾನ್ರಿ’ ಅಂದ. ಡಾಕ್ಟರಗೆ ಏನೂ ತಿಳಿಯಲಿಲ್ಲ. ಸಂಗಪ್ಪನ ರೀತಿ ರಿವಾಜಿನಾಗ ಬದಲಾವಣೆ ಕಾಣಿಸಿರಲಿಲ್ಲ. ಕೆಲಸದಾಗೂ ಯಾವುದೇ ರೀತಿ ಅಸ್ತವ್ಯಸ್ತ ಇರಲಿಲ್ಲ. ಅಲ್ಲದೇ ಮುನೀರ್ ಹೇಳಿದಂಗೇನೂ ಅನಿಸಿಲ್ಲ. ‘ಹೋದ್ರೂ ಎಲ್ಲಿ ಹೋಗ್ತಾನ? ಹಂಗೇನು ಹಾದಿ ತಪ್ಪೋ ಮನಷ್ಯಾ ಅಲ್ಲ... ಏನರ ಕೆಲಸ ಇದ್ದಿರಬೇಕು. ನೀ ಯಾಕ ಚಿಂತೆ ಮಾಡ್ತಿ’ ಅಂದ್ರು. ಮುನೀರ ಮತ್ತು ಸಂಗಪ್ಪ ಒಂದೇ ವಯಸ್ಸಿನವರು, ಕೂಡಿಯಾಡಿ ಬೆಳೆದವರು. ಅವ ಹೇಳಿದ್ದು ಚಾಡಿ ಅಲ್,. ಕಾಳಜಿಯಿಂದ. ಅದು ಡಾಕ್ಟರಿಗೂ ಗೊತ್ತು. ಆದ್ರೂ ಮುನೀರನ ಮೌನ ಅನುಮಾನಕ್ಕೆ ಎಡೆ ಮಾಡಿತ್ತು. ಮುನೀರ ಅಂದದ್ದು ಕಾಡಿತ್ತು. ‘ಸಂಸಾರಸ್ಥ ಹಿಂಗ ಮಾಡೋದು ಚೆಂದ ಏನ್ರಿ’ ಸಂಸಾರಕ್ಕೆ ಧಕ್ಕೆ... ಅಂದ್ರ... ಹೆಂಗಸರ ಸಹವಾಸಕ್ಕ ಬಿದ್ದಾನೇನು? ಇವತ್ತು ಹರಕಿ ಮುಟ್ಟಿಸಾಕ ಹೋಗ್ಯಾನೋ ಇಲ್ಲ... ಈಗೀಗ ಸಂಗಪ್ಪ ಊರೂರು ತಿರುಗೋದು ಹೆಚ್ಚಾಗ್ಯದ. ಗಾಣಗಾಪುರಕ್ಕೂ ಹೋಗಿದ್ದ. ಮೈಲಾಪುರ ಶಿರಡಿ, ಪಂಡರಾಪುರ, ತುಳಜಾಪುರ ಅಂತ ಒಂದು ವಾರ ಹೋಗಿದ್ದ. ತಿರುಪತಿಗೆ ಹೋಗಬೇಕೆಂತನೂ ಹೇಳಿದ್ದ. ಯೋಚನೆಗಳ ಗಂಟು ತಲೆದಿಂಬಾಗಿಸಿಕೊಂಡು ಮಲಗಿದರು ಡಾಕ್ಟರ್.

ಸಂಗಪ್ಪನನ್ನು ಡಾಕ್ಟರು ಮುನೀರನ ಮಾತಿನ ಚಾಳೀಸಿನಿಂದ ಗಮನಿಸತೊಡಗಿದರು. ಹರಕೆ ಮುಟ್ಟಿಸಲು ಹೋಗಿದ್ದನ್ನು ಅನೇಕ ಪ್ರಶ್ನೆಗಳಿಂದ ಪರೀಕ್ಷಿಸಿದರು. ‘ಸಾಬರ್ರೇ ನಿಮ್ಮ ಹೆಸರನಾಗ ಕಾಯಿ ಕರ್ಪೂರ ಮಾಡಿಸಿನ್ರಿ’ ಎಂದು ಕುಂಕುಮ ಹತ್ತಿದ ಅದರೊಳಗೆ ಬಾಡಿದ ಹೂವಿದ್ದ ತೆಂಗಿನ ಕಾಯಿ, ದೇವರ ಫೋಟೋ ಕೊಟ್ಟ. ಆದ್ರೆ ಮುನೀರ ಹೇಳಿದ್ದು ತಪ್ಪು ಅಂತ ಯೋಚಿಸಲು ಆಗದಂಗ ಪೇಷಂಟು ಒಳಗ ಬಂದಿತ್ತು.

ಸಂಗಪ್ಪ ಯಾವಾಗಲೂ ಮುಂಚೆ ಬಂದು ತನ್ನ ದುಕಾನು, ದವಾಖಾನೆ ಸ್ವಚ್ಛಗೊಳಿಸಿ ದೇವರ ಪೂಜೆ ಮಾಡಿ ಅಗರಬತ್ತಿಯ ವಾಸನೆಯಿಂದ ತುಂಬಿಸಿಡುತ್ತಿದ್ದ. ಆದ್ರ ಆ ದಿನ ತಡವಾಗಿ ಬಂದ. ಬಿಳಿ ಶರ್ಟು, ಪಂಚೆ, ಹೆಗಲ ಮೇಲೆ ಕಾವಿಯ ಶಲ್ಯ, ಹಣೆಯಲ್ಲಿ ಢಾಳಾಗಿ ಹಚ್ಚಿದ ಕುಂಕುಮ, ಬರಿಗಾಲಿನಲ್ಲಿದ್ದವನನ್ನು ನೋಡಿ ಡಾಕ್ಟರ್‌ಗೆ ಆಶ್ಚರ್ಯ. ‘ಯಾಕೋ ಲುಂಗಿ ಉಟ್ಟಿದಿ’ ಅಂದಾಗ ಆತ ತಲೆಯಲ್ಲಿ ಕೈಯಾಡಿಸುತ್ತಾ ‘ಶ್ರಾವಣ ಬಂತ್ರಿ. ಅದಕ್ಕೇ...’ ಅಂದ. ‘ಒಂದು ತಿಂಗಳು ಇದೇ ಡ್ರೆಸ್ ಏನು? ಚಪ್ಪಲಿ..?’

‘ಇಲ್ರಿ, ಹಾಕಂಗಿಲ್ಲ’ ಎಂದ. ಸಂಗಪ್ಪ ದಿನದಿನಕ್ಕೆ ಗೂಢವಾಗುತ್ತಿದ್ದಾನೆ ಅನ್ನಿಸಿತು. ಶ್ರಾವಣ ಈ ವರ್ಷವೇ ಬಂತೇನೋ ಅಂತ ಅನ್ನಿಸಿ ‘ಊಟ ತಿಂಡಿ ಮಾಡ್ತಿಯೋ ಇಲ್ಲಾ..?’ ‘ಇಲ್ಲರಿ, ಎಷ್ಟೋ ದಿನದಿಂದ ಒಂದೊತ್ತೇ ಉಣ್ತೀನಿ. ಶ್ರಾವಣ ಪೂರ್ತಿ ಉಪವಾಸನೇ. ಹಗಲು ಹೊತ್ತು ಎರಡು ಸಲ ಚಾ. ರಾತ್ರಿ ಒಂದು ಟೈಮ್ ಸುಸಲಾ, ಅವಲಕ್ಕಿ ಏನರ ನಾಷ್ಟಾ. ಮನ್ಯಾಗ ನಾನೇ ಮಾಡಿಕೋತಿನ್ರಿ’’ ಎಂದು ತನ್ನ ವ್ರತವನ್ನು ಡಿಟೇಲಾಗಿ ಹೇಳಿದ. ಡಾಕ್ಟರಗೆ ಆಶ್ಚರ್ಯ. ‘‘ಅಲ್ಲೋ... ಮೊದಲೇ ಒಂಟ್ ಎಲುಬಿನವ. ತಿಂಗಳೆಲ್ಲಾ ಊಟ ಇಲ್ಲಾಂದ್ರ ಹೆಂಗ?’’ ಅಂದ್ರು. ಸಣ್ಣಗೆ ನಗುತ್ತಾ ‘‘ಏನಾಗಲ್ಲರಿ. ದೇವರ ಸಲುವಾಗಿ ಉಪಾಸಿದ್ದರ ತ್ರಾಸಾಗಂಗಿಲ್ಲ’’ ಎಂದ. ಮುಖದಲ್ಲಿ ಭಕ್ತಿ ಭಯ ತುಂಬಿತ್ತು.

ಈಗೀಗ ಊರಾಗೆಲ್ಲಾ ಸಂಗಪ್ಪನ ಪ್ರಭಾವ ಜೋರಾಗಿತ್ತು. ಇವನ ಆಚಾರಗಳು ಬದಲಾಗಿದ್ದವು. ಮುಂಜಾನೆ ಜಳಕಾ, ಪೂಜಾ ಇಲ್ಲದೆ ಹೊಸಲು ದಾಟುತ್ತಿರಲಿಲ್ಲ. ಉಣ್ಣುವ ದಿನಗಳಿಗಿಂತ ಉಪವಾಸವಿದ್ದ ದಿನಗಳೇ ಹೆಚ್ಚಾದವು. ಹುಣ್ಣಿಮೆ, ಅಮಾವಾಸ್ಯೆ ದಿನಗಳಲ್ಲಂತೂ ವಿಚಿತ್ರ ಗೆಟಪ್ನಲ್ಲಿದ್ದ. ಕಾವಿ ಬಟ್ಟೆ, ರುದ್ರಾಕ್ಷಿ ಸರ, ಹಣೆಯಲ್ಲಿ ಅಗಲವಾದ ಭಂಡಾರ. ಸೋಮವಾರ ಶನಿವಾರ ಮೌನ ವ್ರತ. ಹಿಂಗೆ ಅವನ ಅಲಂಕಾರ, ರೀತಿ ಬದಲಾದಂತೆ ಊರ ಜನರೆಲ್ಲ ಭಯ ಭಕ್ತಿಯಿಂದ ಕಾಣತೊಡಗಿದರು. ಅಲ್ಲಲ್ಲಿ ಸಂಗಪ್ಪನ ಮಹಿಮೆಯ ಬಗ್ಗೆ, ವಿಶೇಷತೆ ಬಗ್ಗೆ ಮಾತಾಡುವುದು ಡಾಕ್ಟರಗೂ ಕೇಳಿಸತೊಡಗಿತ್ತು. ಊರಾಗಿನ ಕೆಲವು ಹಿರಿಯರು ಸಂಗಪ್ಪನ ಬಾಲ್ಯದ ಬಗ್ಗೆ ಹೇಳುತ್ತ ‘‘ಅವನನ್ನು ಸಣ್ಣಾಗಿರಾಗೇ ನೋಡೀನಿ, ಎಕ್ಕಡೋ ನೋಡುತ್ತಿದ್ದ, ಏನೇನೋ ಮಾತಾಡುತ್ತಿದ್ದ, ಗುಡ್ಯಾಗ ಕುಂತಂವ ಮನೆಗೆ ಬರತ್ತಿರಲಿಲ್ಲ. ಮಾತಾಡಿದ್ರೆ ಅರ್ಥನೇ ಆಗ್ತಿರಲಿಲ್ಲ. ಈ ಲೋಕದ ಮಾತಲ್ಲ ಅನ್ನಿಸ್ತಿತ್ತು’’ ಅಂತೆಲ್ಲಾ ಹೇಳುತ್ತಿದ್ದರು.
ಹೊಸಮನಿ ಶಂಕ್ರಪ್ಪ ಬಸವರಾಜನ ಮುಂದ ‘‘ಮಾಂವಾ ಸಂಗಪ್ಪನ ಮುಖದಾಗ ಬಲೇ ಖಳೆ ಬಂದದಪ್ಪ. ಅದೇನು ಶಕ್ತಿನೋ... ನುಡಿದದ್ದೆಲ್ಲ ಖರೆ ಆಗ್ಲಿಕ್ಕತ್ತದ ನೋಡ. ನಮ್ಮ ತೆಂಗಿ ಮಗಳಿಗೆ ಗಂಡೇ ಹುಟ್ಟುತ್ತದಂತ ನುಡಿದಿದ್ದ. ಖರೇನ ಗಂಡು ಹುಟ್ಟಬೇಕಾ..? ಸಂಗಪಣ್ಣಗ ಏನೋ ವಶಾ ಆಗ್ಯದ’’ ಎಂದು ಚಮತ್ಕಾರವಾದಂತೆ ಹೇಳಿದ.

ನೀಲಕಂಠ ‘‘ನಾ ಸುಳ್ಳು ಪಳ್ಳು ಹೇಳಾಂವಲ್ಲ. ನಿಂಗಂತು ಗೊತ್ತದಲ ಬಸಣ್ಣ. ರಾವೂರಾಗ ಎರಡೆಕರೆ ಜಮೀನಿತ್ತು. ಅದರ ಮ್ಯಾಲ ನನ್ನ ಕಣ್ಣಿತ್ತು. ಆ ಗೌಡತಿದು ಹೊಲ ಸಿಕ್ಕಂಗ ರೇಟಿತ್ತು. ಇದು ನನ್ನ ತುತ್ತಲ್ಲಾಂತ ಆಸಿ ಬಿಟ್ಟಿದ್ದೆ. ಆದರೂ ಒಂದು ಮಾತು ಸಂಗಪ್ಪ ಮುತ್ಯಾಗ ಮುಟ್ಟಿಸಬೇಕಂತ ಅಡ್ಡ ಬಿದ್ದು ಹೇಳಿಕೊಂಡೆ. ಒಂದ್ ಕಾಯಿ ಮಂತ್ರಿಸಿಕೊಟ್ಟ. ದಿನ್ನಾ ಪೂಜಿ ಮಾಡು... ನನ್ನ ಮಾತು ಹುಸಿಯಾಗಂಗಿಲ್ಲಂದ. ಗುರಿ ತಪ್ಪಲಿಲ್ಲ. ಗೌಡ್ತಿ ನನ್ನ ರೇಟಿಗೇ ಹೊಲ ಬಿಟ್ಟಳು. ಮುತ್ಯಾಗ ಖರೆ ಶಕ್ತಿಯಾದಪ್ಪ’’ ಎಂದು ಹೇಳಿದ.

ಹಿಂಗ ಜನರೆಲ್ಲಾ ಅವನನ್ನು ದೈವೀ ಪುರುಷನನ್ನಾಗಿಸಿದರೋ ಅಥವಾ ಸಂಗಪ್ಪನೇ ತನ್ನಲ್ಲಿ ಏನೋ ಶಕ್ತಿ ಇದೆ ಅಂತ ಭಾವಿಸಿದ್ದನೋ ಡಾಕ್ಟರಿಗೆ ಅರ್ಥವಾಗಲಿಲ್ಲ.

ಇತ್ತ ಮಾನಂದಾಗೂ ಗಂಡನ ಮೇಲೆ ಒಂದು ನಮೂನೆ ಭಕ್ತಿ, ಭಯ ಎಲ್ಲಾ ಮೊದಲಿನಂಗ ಸಹಜವಾಗಿರಲಿಲ್ಲ. ಆತನ ಅಡುಗೆ, ಜಳಕ, ಬಟ್ಟೆ ಬರೆಗಳು ವಿಶೇಷ ಆರೈಕೆಯನ್ನು, ಉಪಚಾರವನ್ನು ಕಾಣತೊಡಗಿದವು. ಅವನ ವಸ್ತುಗಳನ್ನು ಪವಿತ್ರತೆಯಿಂದ ನೋಡುವಂತಾಯಿತು. ಸಣ್ಣ ವಯಸ್ಸಿನ ಮಾನಂದಾಗೆ ಕಾಮನೆಗಳು ಹೆಡೆಯಾಡುತ್ತಿರುವಾಗ ಅವಳಿಗೆ ದ್ವಂದ್ವ. ಸಂಗಪ್ಪ ಈಗೀಗ ಪಡಸಾಲಿಯೊಳಗ ಚಾಪೆ ಹಾಸಿಕೊಂಡು ನೆಲದ ಮೇಲೆ ಮಲಗುತ್ತಿದ್ದ. ನಡುರಾತ್ರಿ ತನಕ ಜಪ ಮಾಡುತ್ತಿದ್ದ. ಮಾನಂದ ಆತ ಒಳಕೋಣೆಗೆ ಬರುವ ಆಸೆ ಮಾಡುವಂತೆಯೇ ಇರಲಿಲ್ಲ.

‘ಯಾಕಾದ್ರೂ ದೇವರ ಶಕ್ತಿ ಸೇರಿಕೊಂಡದೋ. ಸುಮ್ಮ.. ಎಲ್ಲರಂಗ ಸಂಸಾರ ಮಾಡಿಕೊಂಡಿದ್ರ ಚಂದಿತ್ತು’ ಅಂತ ಎಷ್ಟೋ ಬಾರಿ ಅನ್ನಿಸ್ತಿತ್ತು. ಇದೆಲ್ಲ ಯಾರಿಗೂ ಹೇಳುವಂತಿಲ್ಲ. ಅವ್ವಗ ಈ ಸುದ್ದಿ ತಿಳದರ ಏನಾಗ್ತದೊ. ಮೊದಲೇ ಆಕಿಗಿ ಅಳಿಯನನ್ನು ಕಂಡ್ರೆ ಅಷ್ಟಕ್ಕಷ್ಟೆ. ಯಾವತ್ತೂ ಅಳಿಯ ಅಂದ್ರೆ ಪ್ರೀತಿ ಇರಲಿಲ್ಲ, ಮರ್ಯಾದೆ ಅಂತೂ ಮೊದಲೇ ಇರಲಿಲ್ಲ. ‘ದುಡಿಯಲಾರದಕ್ಕ ನಿನ್ ಗಂಡ ಹೊಸ ನಾಟಕ ಮಾಡ್ಯಾನ‌...’ ಅಂತಾ ಬೈತಾಳೊ ಏನೊ ಎಂದು ಕಸಿವಿಸಿಗೊಡಳು.

ಆದ್ರ ಊರ ಮಂದಿ ತೋರಿಸೋ ಭಕ್ತಿ ಭಾವಕ್ಕೆ ದಂಗಾಗಿದ್ದಳು. ಯಾರು ಯಾರೋ ಬಂದು ಕಾರಿನೊಳಗೆ ತಮ್ಮೂರಿಗೆ ಕರೆದುಕೊಂಡು ಹೋಗ್ತಿದ್ರು. ಪಾದಪೂಜೆ ಮಾಡ್ತಿದ್ರು. ತಮ್ಮ ಹೈಸಿಯತ್ ಮೀರಿ ದಕ್ಷಿಣ ಕೊಡುತ್ತಿದ್ದರು. ಸಂಗಪ್ಪ ‘ಬ್ಯಾಡ... ನಾ ದೇವರ ಸೇವಕ. ಮುಟ್ಟಂಗಿಲ್ಲ’ ಅಂದ್ರೂ ಮಾನಂದಾಗ ಮುಟ್ಟಿಸುತಿದ್ದರು. ಹೊಲದಾಗಿನ ಮೊದಲ ಫಸಲಂತ ಅಂಗಳದಾಗ ತುಂಬಿದ ಚೀಲ ತಂದು ಹಚ್ಚುತ್ತಿದ್ದರು. ಅವನು ಹೇಳಿದಂಗೆ ತಮ್ಮ ಕೆಲಸ ಆಯ್ತಂದ್ರೆ ಇನ್ನಷ್ಟು ದಕ್ಷಿಣೆ, ಹಣ್ಣು, ಅರ್ಪಿಸುತ್ತಿದ್ದರು. ಆತಗ ಬಟ್ಟಿ, ಮಾನಂದಾಗ ಸೀರಿ ಕುಬಸಾ ಉಡಿ ತುಂಬುತಿದ್ರು. ಇತ್ತಿತ್ತಲಾಗಂತೂ ಹುಣ್ಣಿಮೆ ಅಮಾವಾಸ್ಯೆಗೆ ಬರುವ ಭಕ್ತರನ್ನು ನಿಭಾಯಿಸೋದು ಮುಷ್ಕಿಲಾಗಿತ್ತು. ಆಗೆಲ್ಲ ಮುನೀರ್ ಇದ್ದು ಭಕ್ತರನ್ನು ಸರದಿ ಮ್ಯಾಲೆ ದರ್ಶನಕ್ಕೆ ಅನುವು ಮಾಡುತ್ತಿದ್ದ.

ಸಂಗಪ್ಪ ಹೇಳಿದ್ದು ಯಾವಾಗ್ಲೂ ಖರೆ ಆಗ್ತಿರಲಿಲ್ಲ. ಆಗ ಜನ ನಂಬಿಕೆಯಿಂದ ಮತ್ತೆ ಬಂದು ಕಾಯಿ, ನಿಂಬೆಹಣ್ಣು ಮಂತ್ರಿಸಿಕೊಂಡು ಹೋಗುತ್ತಿದ್ದರು. ಕೊನೆಗೂ ಕಾರ್ಯ ಯಶಸ್ವಿ ಆಗದಿದ್ದರೆ ‘ಹೋದ ಜನ್ಮದ ಕರ್ಮ ಇರಬೇಕು, ಕಾಡಾಟ ಗಟ್ಟಿಯದ, ಕೆಲಸ ಆಗಲಾರದಂಗ ದುಷ್ಟ ಶಕ್ತಿಗಳು ಅಡಚಣಿ ಮಾಡಲಿಕತ್ತಾವ’ ಅಂತ ತಾವೇ ಕಲ್ಪಿಸಿಕೊಂಡು ಸಂಗಪ್ಪನೂ ಅದೇ ಅರ್ಥದೊಳಗ ಹೇಳಿರುವನು ಅಂತ ತಿಳಿದುಕೊಳ್ಳುತ್ತಿದ್ದರೆ ವಿನಃ ಆತನ ದೈವಿಶಕ್ತಿ ಮ್ಯಾಲ ಅನುಮಾನ ಬರುತ್ತಿರಲಿಲ್ಲ.

ಅದೊಂದು ರಾತ್ರಿ. ಒಳಕೋಣೆಗೆ ಹೋಗಿ ಮಹಾನಂದಳನ್ನು ಸಂಗಪ್ಪ ಎಬ್ಬಿಸಿದ. ಗಾಬರಿಯಾಯ್ತು ಅವಳಿಗೆ. ಸಣ್ಣಗೆ ನಡುಗಿದಳು. ಮಾತನಾಡಲೆತ್ನಿಸಿದವಳಿಗೆ ಅವಕಾಶ ಕೊಡಲಿಲ್ಲ. ಸುಮಾರು ಕಾಲಗಳೇ ಆಗಿದ್ದವೇನೋ. ಮಕ್ಕಳೊಂದಿಗೆ ಮಲಗುತ್ತಿದ್ದ ಆಕೆಗೆ ಗಂಡ ತನ್ನನ್ನು ಮುಟ್ಟಿದ್ದು ರೋಮಾಂಚನವೆನಿಸದೆ ಭಯವೆನಿಸಿ ಆತನಿಗೆ ಸಹಕರಿಸಲಾಗಲಿಲ್ಲ. ಆದರೆ ಕೊನೆಗೂ ಅವನ ಬಯಕೆಗೆ ಮಣಿಯಲೇಬೇಕಾಯಿತು. ನಿಯಂತ್ರಿಸಿ ದಣಿದಿದ್ದ ದೇಹ ತಣಿದಿತ್ತು. ಕೋಣೆಯಿಂದ ಹೊರಬಂದ ಸಂಗಪ್ಪ ವಿಚಲಿತನಾದ. ಗಾಬರಿಗೊಂಡ. ವಿಶ್ವಾಮಿತ್ರನಿಗೆ ಮೇನಕೆಯ ಸಮಾಗಮದಿಂದ ತಪೋಭಂಗವಾದಂತೆ ನನಗೂ ಇಷ್ಟು ದಿನದ ಶಕ್ತಿ ನಾಶವಾಯಿತೇನೋ ಎಂಬ ಹಳಹಳಿಕೆ, ಭಯ. ತಪ್ಪಾಗಿ ಹೋಯಿತು ಅಂತ ತಡಕಾಡತೊಡಗಿದ. ಮೈಯೆಲ್ಲ ಬೆವರುತ್ತಿತ್ತು. ಜನ ನನ್ನ ಬಗ್ಗೆ ಏನನ್ನುತ್ತಾರೋ. ನನಗೆ ಮತ್ತೆ ಮೊದಲಿನ ದೈವೀಶಕ್ತಿ ಬರದಿದ್ದರ... ಜನ ಗೌರವ ಕೊಡದಿದ್ದರ... ನನ್ನ ಹಿಂದ ನಗಚಾಟಗಿ ಮಾಡಿದ್ರ... ಯಾಕ ಹಿಂಗೆಲ್ಲ ಆಗ್ತದ ಅಂತ ಚಡಪಡಿಸಿದ. ಪಾಪಪ್ರಜ್ಞೆ ಕಾಡತೊಡಗಿತು. ಪರಿಹಾರ ಹೊಳೆಯದೆ ಬಚ್ಚಲು ಮನೆಗೆ ಹೋದವನೇ ಚಳಿಯಲ್ಲೂ ತಲೆ ಮೇಲೆ ನೀರು ಸುರಿದುಕೊಂಡು ದೇವರ ಮನೆ ಹೊಕ್ಕ. ಬೆಳಗಾಗುವವರೆಗೂ ಹೊರಬರಲಿಲ್ಲ.

ಮಹಾನಂದಗೆ ತನ್ನಿಂದಲೇ ತಪ್ಪಾಯಿತು ಅನ್ನುವಂಗೆ ಕಳವಳ. ನಿದ್ದೆಯಂತೂ ದೂರವೇ ಹೋಗಿತ್ತು. ಅಳು ಬರುವಂತಾಯಿತು. ಬೆಳಗಾಗುವ ತನಕ ದೇವರ ಮನೆ ಮುಂದೆ ಓಡಾಡುತ್ತಿದ್ದಳು. ಅವರಿಗೆ ಮತ್ತೆ ಮೊದಲಿನ ದೈವೀಶಕ್ತಿ ಬರದಿದ್ದರ...? ಬರಲಿಕ್ಕರ ಇಲ್ಲ. ಯಾರಿಗೆ ಬೇಕು? ದೇವರು.. ಭಕ್ತಿ... ಶಕ್ತಿ... ಮೊದಲಿನಂಗss ಇದ್ರಾಯ್ತು.. ಆದ್ರ.. ಊರಮಂದಿ ಏನರ ಅಂದರ...? ಸಹಿಸೋದು ಹೆಂಗ..? ಮ್ಯಾಲೇರಿದ ಮನುಷ್ಯ ಕೆಳಕ್ಕಿಳಿದಾಗ ನರಳಬೇಕಾಗ್ತದ. ಆಗ ನಂಗೂ ಬಹಳ ಮರ್ಯಾದೆ ಸಿಕ್ಕದ. ನನ್ನ ಸ್ಥಾನಮಾನಾನೂ ಬದಲಿ ಆಗ್ಯದ. ನನ್ನ ಮದುವೆ ಆದಾಗಿಂದ ಅವಮಾನದೊಳಗ ಬೆಂದಿದ್ದೆ. ಗತ್ತಿನ ಗಂಡಂದಿರು ಇದ್ರ ತವರುಮನಿಯೊಳಗ ಒಂದು ರೀತಿ ವಜನ್ ಇರತ್ತದ. ನನ್ನ ಗಂಡ ಏನು ವತನದಾರ್ ಮನುಷ್ಯ ಅಲ್ಲ. ಅಂತ ಗಳಿಕಿನೂ ಇಲ್ಲ. ಹಿಂಗಾಗಿ ತೌರಿನ ಬಳಗದಾಗ ಯಾವ ಲಗ್ಣ, ಕಾರಣಕ್ಕ ನಾ ಹೋಗತಿರಲಿಲ್ಲ. ಪಾಪ ಇವರಿಗೇನು ಗೊತ್ತು. ಲಗ್ಣಕ್ಕ, ಮನಿಶಾಂತಿಗಿ ಹೋಗಿ ಬಾ ಅಂತ ಜುಲುಮಿ ಮಾಡೋರು. ನಾ ಏನರ ನೆವ ಮಾಡಿ ತಪ್ಪಸ್ತಿದ್ದೆ. ನಮ್ಮವ್ವನೂ ನಾ ಬರದಿದ್ದರ ಛೊಲೊ ಆಯ್ತು ಅಂತ ಸುಮ್ಮಕಿರುತಿದ್ದಳು. ಅಕಿಗಿ ಶ್ರೀಮಂತ ಅಳಿಯ ಇರಬೇಕಿತ್ತು. ನಿಮಪ್ಪ ಇಂತವನಿಗಿ ನಿಂಗ ಗಂಟು ಹಾಕಿದಾ ಅಂತ ಮಾತು ಮಾತಿಗೂ ಅಂತಿದ್ದಳು.

‘ಮಾಲಗತ್ತಿ ಗೌಡ ತನ್ನ ಮಗನ ಸಲುವಾಗಿ ನಮ್‌ ನಂದಾಗ ಕೇಳಿದ್ದ. ಈಗ ಆತ ಬ್ಯಾಂಕಿನಾಗ ಮ್ಯನಿಂಜರ್ ಹಾನ’ ಅಂತ ಇವರ ಮುಂದೆ ಅಂದು ತೋರಿಸಿದಳು. ಆ ದಿನ ಇವರು ಮಾರಿ ಸಣ್ಣ ಮಾಡಿಕೊಂಡು ಊಟಾ ಮಾಡಲಾರದೆ ಮಾತಾಡಲಾರದೆ ಮಲಗಿಕೊಂಡ್ರು. ಹೀಂಗೇ ಅವ್ವ ಅದೆಷ್ಟೋ ಬಾರಿ ಮನಸ್ಸು ನೋಯಿಸ್ಯಾಳ. ಪಾಪ... ಈಗ ಇದೊಂದು ಅನರ್ಥ... ನಾನರ ಎಚ್ಚರದಿಂದ ಇದ್ದಿದ್ದರ... ಯಾವ ವ್ಯತ್ಯಾಸನೂ ಆಗಲಿಕ್ಕಿಲ್ಲ. ನಾವೂ ಮನುಷ್ಯರೇ. ಆದ್ರ ಇವರೂ... ಮನುಷ್ಯಾನೇ ಆಗಿದ್ರು. ಹಿಂಗೆಲ್ಲ ಬದಲಾವಣೆ ಯಾವಾಗ..? ಹೂಂ... ನನ್ನ ನಾಕನೇ ಬಾಣಂತನದಾಗಿನ ದಿನಗೋಳು, ನನ್ನ ಮೈಯಾಗೂ ಶಕ್ತಿ ಇರಲಿಲ್ಲ. ಬಾಣಂತಿ, ಮಕ್ಕಳು ಸಣ್ಣವರು... ಆರೈಕಿಗಂತ ಅವ್ವ ಬಂದಿದ್ದಳು. ಬಸರಿದ್ದಾಗೂ ಇವರಲ್ಲಿ ವ್ಯತ್ಯಾಸ ಇರಲಿಲ್ಲ. ಬಾಣಂತನದ ಎರಡು ತಿಂಗಳದಾಗ ಬಹಳ ಬದಲಾದರು. ಗಂಡು ಹುಟ್ಟಲಿಲ್ಲ ಅಂತೇನೂ ಅಲ್ಲ. ಅವರಿಗಿ ಹೆಣ್ಣುಮಕ್ಕಳಂದ್ರ ಬಲೆ ಪ್ರೀತಿ. ಅದ್ಯಾಕೋ.. ಒಮ್ಮೊಮ್ಮೆ ಗರ ಬಡದಂಗ ಕುಂತಬಿಡೋರು. ಏನ ಕೇಳಿದರೂ ಹೂಂ.. ಇಲ್ಲಾ ಹಾಂ.. ಇಲ್ಲಾ. ನಮ್ಮವ್ವ ಏನರss ಮನಸ್ಸಿಗಿ ನಾಟುವಂಗ ಮಾತಾಡತಿದ್ದಳು. ಆಕಿನೂ ಸುಮ್ಮಕಿರೊ ಮನುಷ್ಯಳಲ್ಲ. ಆಗೆಲ್ಲ ಮಿಳ್ಳಿಮಾರಿ ಮಾಡಿ ಎದ್ದು ಕೋರಿಮಟದಾಗ ಕುಂತವರು ನಡುರಾತ್ರಿಗೂ ಬರತಿರಲಿಲ್ಲ. ರಾತ್ರಿ ಊಟಿಲ್ಲದೆ ಮಲಗೋರು. ಮನ್ಯಾಗ ಇರೋದಿರಲಿ, ಊರಾಗೇ ಇರತಿರಲಿಲ್ಲ. ಮುನೀರಣ್ಣ ಮನಿಕಡೆ ಹುಡುಕಿಕೊಂಡು ಬರತಿದ್ದ. ಊರಾಗಿಲ್ಲದ್ದು ಕೇಳಿ ಆತಗೂ ಆಶ್ಚರ್ಯ. ‘ನಂಗೂ ಹೇಳಿಲ್ಲ ನೋಡ ತಂಗಿ’ ಅಂತ. ಗೆಳೆಯನ ನಡವಳಿಕಿ ಬದಲಾಗಿದ್ದು, ಸಂಸಾರದ ಗತಿ ಹೆಂಗ ಅಂತ ಹೇಳಿಕೊಂಡು ಅತ್ತಿದ್ದೆ. ನಾನಿದ್ದೀನಿ ಅಂಜಬ್ಯಾಡಂತ ಧೈರ್ಯ ಹೇಳಿದ್ದ. ಆದ್ರ ಮುಂದ ಸ್ವಲುಪ ದಿನದಾಗ ಇದೆಲ್ಲ ಸುರುವಾಯಿತು. ನೋಡುನೋಡುತ್ತಲೆ ದೇವರಾಗಿಬಿಟ್ಟ....

ಸಂಗಪ್ಪ ಮಂತ್ರಗಳು ಬಾಯಿಗೆ ಬರದೇ ತಡವರಿಸುತ್ತಿದ್ದ. ಯಾಕೆ ಹಿಂಗಾಯ್ತು? ವ್ರತ ಭಂಗವಾಯಿತಲ್ಲ... ನನಗ್ಯಾಕೆ ದೇವರತ್ತ ಮನಸ್ಸು ಹೊರಳುತ್ತದೆ? ಜನರು ನನಗೆ ಹಿಂಗ ಮಾಡಿ ಕೂಡಿಸಿದರೋ..? ನಂಗ್ಯಾಕ ಸುಮ್ಮನೆ ಕಣ್ಣುಮುಚ್ಚಿ ಕೂಡಬೇಕು ಅನ್ನಸ್ತದ? ಹಿಂಗ.. ಕೂಡೋದು ಅಂದ್ರೆನೇ ತಪಸ್ಸು ಅಂತಾರೇನೋ.. ನನಗೆ ತಪಸ್ಸು ಮಾಡಿ ಒಂದು ನಮೂನಿ ಶಕ್ತಿ ಬಂದಿತ್ತೋ... ಇಲ್ಲಂದರ ನಾ ಯಾಕ ಇದೆಲ್ಲ ಮಾಡಲಿಕ್ಕೆ ಶುರು ಮಾಡಿದೆ? ಆತಗೆ ಹಿಂಗ ಪ್ರಶ್ನೆಗಳು ಉದ್ಭವಿಸಿದವು. ಮಾನಂದಳೊಂದಿಗೆ ಯಾಕ ಮಲಗಿದೆ..? ನಾ ಯಾಕ ಮತ್ತ ಈ ಲೋಕಕ್ಕ ಬಂದೆ...? ನಾ ಮತ್ತ ಸಾಮಾನ್ಯ ಮನುಷ್ಯ ಆಗಿಬಿಟ್ಯೆನಾ..? ಎಂಬ ಚಿಂತೆಯೇ ಅವನ ಆ ದಿನದ ಪೂಜೆಯಾಗಿತ್ತು.

ಹೀಗೇ ಗಂಡ ಹೆಂಡತಿ ಚಿಂತೆಯೊಳಗ ಮುಳುಗಿದ್ದರು. ಮುಂಜಾನೆ ನಾಲ್ಕು ಗಂಟೆಗೆ ಮುನೀರ ಅವಸರಿಸುತ್ತಾ ಸಂಗಪ್ಪನ ಮನೆಗೆ ಓಡುತ್ತ ಬಂದ. ‘ನಮ್ಮ ಅವ್ವ ಏಕಾಏಕಿ ಬಾಯಿ ಸೊಟ್ಟ ಮಾಡ್ಯಾಳ, ಮಾತು ಬರಲ್ಲಾಗ್ಯವ, ಕೈಗೂ ಲಕ್ವ ಹೊಡೆದಂಗ ಆಗ್ಯದ’ ಎಂದು ಸಂಗಪ್ಪನನ್ನು ಎಬ್ಬಿಸಲು ಮನೆಗೆ ಬಂದ. ಆದರೆ ದೇವರ ಮನೆಯೊಳಗೆ ಆತ ಕೂತಿದ್ದು ಕಂಡು ಕೈ ಮುಗಿದು ಅಡ್ಡಬಿದ್ದ. ಗೆಳೆಯ ಅನ್ನೊದು ಮರೆತು ‘ತಂದಿ ಪಾದಕ್ಕೆ ಅಡ್ಡ ಬಿದ್ದೀನಿ. ಕಷ್ಟ ಬಗೆಹರಿಸು’ ಬೇಡಿಕೊಂಡ. ಅವನಿಂದ ಆದಾರ, ನಿಂಬೆ ಹಣ್ಣು, ಕಾಯಿ ಮಂತ್ರಿಸಿಕೊಂಡು ಹೋದ. ರಾತ್ರಿಯೆಲ್ಲಾ ನಿದ್ದೆ ಮಾಡದೆ ಸಂಗಪ್ಪ ದೇವರ ಧ್ಯಾನದೊಳಗೆ ಇರುತ್ತಾನೆ ಅಂತ ಊರಿಗೆಲ್ಲ ತಿಳಿಸಿ ಜನರ ಭಕ್ತಿ ಇನ್ನೂ ಹೆಚ್ಚುವಂತೆ ಮಾಡಿದ.

ಇಷ್ಟೆಲ್ಲಾ ಸುದ್ದಿ ತಿಳಿದ ನೀಲಮ್ಮ ಮರುದಿನವೇ ವಾಡಿಗೆ ಬಂದು ಮಗಳನ್ನು ತೆಕ್ಕೆಗೆ ಹಾಕಿಕೊಂಡು ಅಳುತ್ತಾ , ‘ಚೆಂದಾಗಿ ಸಂಸಾರ ಮಾಡ್ತಾನಂತ ಮದುವೆ ಮಾಡಿದ್ದೀವಲ್ಲೇ...‌ ಇಂವ ಸ್ವಾಮಿಯಾಗಿ ನಿಂಗ, ಮಕ್ಕಳಿಗಿ ಹೀಂಗ ಸುಡುಗಾಡಕ್ಕ ದಬ್ಬಿಬಿಡತಾನಂತ ಗೊತ್ತಾಗಲಿಲ್ಲವ್ವಾ...’ ಎಂದು ಜೋರಾಗಿ ಅಳುವಾಗ ಮಾನಂದ ತಾಯಿಗೆ ಜಬರಿಸಿ ಗಂಡ ಪೂಜೆಗೆ ಕೂತಿರುವುದನ್ನು ತಿಳಿಸಿ ಸುಮ್ಮನಾಗಿಸಿದಳು.

ಅಂದು ಅಮಾವಾಸ್ಯೆ. ಜನಜಾತ್ರೆಯಾಗಿತ್ತು. ಪಡಸಾಲೆಯೊಳಗೆ ಕಾಲಿಡಲು ಜಾಗವಿಲ್ಲ. ಭಕ್ತರು ತಟ್ಟಿ ತುಂಬಿ ಹಣ್ಣು ಕಾಯಿ, ಕಾಳು ಕಡ್ಡಿ, ರೊಕ್ಕಾ ರೂಪಾಯಿ, ಬಟ್ಟಿ ಬರಿ, ಕೊಡೋದು ನೋಡಿ ಮುದುಕಿ ದಂಗಾದಳು. ಮಾನಂದಳನ್ನು ಗುರು ಮಾತಾ ಎಂದು ನಮಸ್ಕರಿಸುವುದನ್ನು ಕಂಡಳು. ಹಿಂಗs ದಿನನಿತ್ಯ ಕೆಲಸಕ್ಕೆ ಬಾರದ ಅಳಿಯ ಎಂದುಕೊಂಡಿದ್ದ ಸಂಗಪ್ಪನ ಪ್ರಖ್ಯಾತಿ ನೋಡಿ ಅಚ್ಚರಿಗೊಂಡಳು ನೀಲಮ್ಮ. ಊರಿಗೆ ಬಂದು ಅಳಿಯನನ್ನು ಬೈದು ಮೈಯಾಗ ಹೊಕ್ಕಿರುವ ದೇವರ ದೆವ್ವ ಬಿಡಿಸಬೇಕು ಎಂದುಕೊಂಡಿದ್ದ ಘಟವಾಣಿ ಮುದುಕಿ ಇಲ್ಲಿ ನೆರೆದಿರುವ ಜನ ಜಾತ್ರೆ, ಘನ ಭಕ್ತಿ ನೋಡಿ ಕಿಮಕ್ ಅನ್ನದಂತಾದಳು. ದಿನಗಳೆದಂತೆ ಒಂದೊಂದು ರಾತ್ರಿ ಅಳಿಯ ಮಗಳ ಕೋಣೆಗೆ ಹೋಗಿ ಬರುವುದನ್ನು ಕಂಡುಕೊಂಡ ಮುದುಕಿ ಮಗಳಿಗೇನೂ ದಾಂಪತ್ಯಸುಖದಾಗ ಅನ್ಯಾಯ ಆಗಿಲ್ಲ ಅಂತ ಖಾತರಿ ಪಡಿಸಿಕೊಂಡು ಸಮಾಧಾನಗೊಂಡು ಸನ್ಯಾಸಿಯಾಗದ ಸ್ವಾಮಿಯಾಗಿರುವ ಅಳಿಯನ ಕಾಲಿಗೆ ತಾನೂ ಬಿದ್ದು ಜನ್ಮ ಪಾವನವಾಗಿಸಿಕೊಂಡಳು.

ಡಾಕ್ಟರಗೆ ಮಾತ್ರ ನೋಡ ನೋಡುತ್ತಲೇ ಸಂಗಪ್ಪ ಹೋಗಿ ಸಂಗಪ್ಪಮುತ್ಯಾ ಆಗಿದ್ದು, ಈ ರೀತಿ ಪ್ರಸಿದ್ಧನಾಗಿದ್ದು, ಪೇಷಂಟುಗಳು ತಮ್ಮಲ್ಲಿ ಬರುವುದಕ್ಕೂ ಮುಂಚೆ ಅವನಲ್ಲಿ ಹೋಗಿ ನಿಂಬೆಹಣ್ಣುಮಂತ್ರಿಸಿ, ತಾಯಿತ ಕಟ್ಟಿಸಿಕೊಂಡು ಆನಂತರ ಇದೊಂದು ಕಲ್ಲು ಬೀಸೋಣ ಅಂತ ತಮ್ಮಲ್ಲಿ ಬರತೊಡಗಿದ್ದು ವಿಸ್ಮಯವೆನಿಸಿತು. ತಮ್ಮ ವೈದ್ಯಕೀಯ ವೃತ್ತಿಗೆ ಇತರ ಯಾವ ಡಾಕ್ಟರೂ ಕಾಂಪಿಟೇಟರ್ ಆಗದೆ ಸಂಗಪ್ಪನೇ ತಮಗೆ ದೊಡ್ಡ ಕಾಂಪಿಟೇಟರ್ ಆಗಿದ್ದು ಅವರಿಗೆ ಆಶ್ಚರ್ಯದೊಂದಿಗೆ ಜನರ ಮೂಢತನಕ್ಕೆ ಏನನ್ನಬೇಕೋ ತಿಳಿಯಲಿಲ್ಲ. ಬಹುಶಃ ನನ್ನ ದವಾಖಾನೆ ಹೆಚ್ಚು ಪೇಷಂಟುಗಳು ಬರುವಂತೆ ನಾನೂ ಒಂದು ದಿನ ಸಂಗಪ್ಪನ ಹತ್ತಿರ ಹೋಗಿ ತಾಯಿತ ಕಟ್ಟಿಸಿಕೊಂಡು ಬರಬೇಕಾಗುವುದೋ ಎಂದೆನಿಸಿ ನಕ್ಕರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !