ಬೆತ್ತಲೆ ಸಂತ

7

ಬೆತ್ತಲೆ ಸಂತ

Published:
Updated:
Deccan Herald

ಊರ ಹೊರಗಿನ ಕೆರೆಯ ದಂಡೆಯ ಮೇಲೆ ಶಂಕ್ರ ಇನ್ನೂ ಕುಳಿತೇ ಇದ್ದಾನೆ. ಅದಾಗಲೇ ಸೂರ್ಯ ತನ್ನ ಕಾಯಕ ಮುಗಿಸಿ ಪಶ್ಚಿಮದ ಕೆಂಪಿನಲ್ಲಿ ಮರೆಯಾಗುತ್ತಿದ್ದ. ಮಬ್ಬುಗತ್ತಲು ಮೆಲ್ಲಗೆ ಆವರಿಸುತ್ತಿದ್ದಂತೆ ಊರಿನ ಒಂದೊಂದೇ ಬೀದಿದೀಪಗಳು ಕಣ್ಣುಬಿಡುತ್ತಿದ್ದವು. ಅಲ್ಲೊಂದು ಇಲ್ಲೊಂದು ಪಿಳಿ ಪಿಳಿ ಹೊಳೆದ ನಕ್ಷತ್ರಗಳು ತಮ್ಮ ಹಾಜರಿ ಕೂಗುತ್ತಿದ್ದರೆ, ಬಟಾಬಯಲಿನಲ್ಲಿ ಸುಂಯ್‌ಗುಟ್ಟಿ ಬೀಸುತ್ತಿದ್ದ ಗಾಳಿ ಅವನ ತಲೆಕೂದಲುಗಳನ್ನು ಕೆದರುವಂತೆ ಮಾಡುತ್ತಿತ್ತು. ಆದರೆ ಶಂಕ್ರನ ತಲೆಯೊಳಗಿದ್ದ ಆ ದ್ವಂದ್ವಗಳು ತಳವೂರಿ ಸಾಂದ್ರವಾಗುತ್ತಲೇ ಇವೆ. ಊರು ತನ್ನ ನಿತ್ಯಕರ್ಮಗಳನ್ನು ಕೆರೆಯ ಗರ್ಭದಲ್ಲಿ ಕಲುಕಿ ಹೋದ ನಂತರ ಅದು ಈಗ ಸ್ವಲ್ಪ ಸ್ವಲ್ಪವೆ ತಿಳಿಯಾಗುತ್ತಿದೆ. ಆದರೆ ಇವನ ಮನಸ್ಸು ಇನ್ನೂ ಕದಡಿದ ರಾಡಿಯಾಗಿಯೇ ಇತ್ತು. ಅವನ ಎದೆಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ನೂರೆಂಟು ಪ್ರಶ್ನೆಗಳು ಕುದಿಯುತ್ತಲೇ ಇದ್ದವು. ಕೊಂಚ ಹೆಚ್ಚಾಗಿಯೇ ಆವರಿಸಿದ ಕತ್ತಲು ಊರನ್ನು ಮರೆಮಾಚುತ್ತಿದ್ದರೆ ಇವನಿಗೆ ಸ್ವಲ್ಪ ನಿರಾಳವಾದಂತಾಯಿತು. ಬೆಳಕಿನೊಂದಿಗಿನ ನಂಟನ್ನು ಎಂದೋ ಕಳೆದುಕೊಂಡುಬಿಟ್ಟಿದ್ದ ಶಂಕ್ರ. ಈ ಕತ್ತಲಲ್ಲಾದರೆ ಯಾವ ಮುಖವಾಡಗಳೂ ಕಾಣುವುದಿಲ್ಲ, ಯಾರದ್ದೋ ಬಲವಂತದ ನಗು, ಸುಟ್ಟುಬಿಡುವ ಸಿಟ್ಟು, ಇರಿಯುವ ಅಪಹಾಸ್ಯ ಯಾವುದೂ ಅವನ ಮುಂದೆ ಕುಣಿಯುವುದಿಲ್ಲ. ಒಂಟಿಯಾಗಿದ್ದುಕೊಂಡೇ ಇರುವುದು ಸುಖ ಎಂದುಕೊಂಡಿದ್ದಾನೆ. ಮೌನದ ಸುಳಿಯೊಳಗೆ ಸಿಕ್ಕು ಖುಷಿ ಪಡಬೇಕು ಎನಿಸುತ್ತದೆ. ಈಗೀಗ ಯಾರೊಂದಿಗೂ ಮಾತನಾಡುವುದಿಲ್ಲ, ಬೆರೆಯುವುದಂತೂ ದೂರದ ಮಾತು. ಗುಡ್ಡದ ತುದಿಗೋ, ಬಯಲಿನ ಮರೆಗೋ ಹೋಗಿ ಕುಳಿತು ಹಿತ ಕಾಣುತ್ತಾನೆ. ಪ್ರತಿ ದಿನವೂ ಕೆರೆಯ ದಂಡೆಗೆ ಬಂದು ಕುಳಿತುಕೊಳ್ಳುವುದಕ್ಕೆ ಒಂದೇ ಕಾರಣ, ಸೂರ್ಯ ಮುಳುಗುವ ಹೊತ್ತಿಗೆ ಅಲ್ಲ್ಯಾರೂ ಸುಳಿದಾಡುವುದಿಲ್ಲ. ಕೆರೆಯೊಂದಿಗೆ ಮಾತ್ರ ಅವನ ಸಂವಹನ. ಆ ಕೆರೆಯೂ ಜೊತೆಗಾರ ಸಿಕ್ಕನೆನ್ನುವ ಖುಷಿಯಲ್ಲಿ ಶಾಂತವಾಗುತ್ತದೆ, ಮೌನವಾಗುತ್ತದೆ ಥೇಟ್ ಶಂಕ್ರನಂತೆ.

ಆದರೆ ಇಂದು ಅವನು ಬೇರೆಯ ತೊಳಲಾಟದಲ್ಲಿದ್ದವನಂತೆ ಕಾಣುತ್ತಿದ್ದ. ಮನಃಸಾಗರದಲ್ಲಿ ಯಾವುದೋ ಹೊಸ ಸುನಾಮಿ ಎದ್ದಿದೆ ಎನ್ನುವಂತೆ ತೋರುತ್ತಿತ್ತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಂದು ಬೆಳಿಗ್ಗೆ ಪಕ್ಕದೂರಿನಲ್ಲಿ ಒಬ್ಬ ಆಗುಂತಕನನ್ನು ಕಂಡು ಬಂದಾಗಿನಿಂದ ಮನಸ್ಸು ಸ್ತಿಮಿತದಲ್ಲಿರಲಿಲ್ಲ. ಹೊರಗೆ ಶಾಂತಮೂರ್ತಿಯಂತೆ ಕಂಡರೂ ಒಳಗೇನೋ ಭೋರ್ಗರೆಯುತ್ತಿತ್ತು. ಈಗ್ಗೆ ಕೆಲವು ದಿನಗಳಿಂದ ಬೀಳುತ್ತಿರುವ ಆ ಕನಸೂ ಕೂಡ ಅವನನ್ನು ವಿಚಲಿತಗೊಳಿಸಿತ್ತು.

ಶಂಕ್ರನಿಗೆ ಮದುವೆಯಾಗಿ ಹದಿನೈದು ವರ್ಷಗಳಾಗಿರಬೇಕು. ಆಗಿದ್ದು ಒಂದೇ ಗಂಡು ಮಗು, ಅದೂ ಐದು ವರ್ಷಗಳ ನಂತರ. ಮದುವೆಯೇ ಬೇಡ ಎಂದಿದ್ದವನಿಗೆ ಅವನ ತಂದೆ ಗೋವಿಂದಪ್ಪ ಬಲವಂತವಾಗಿ ಮದುವೆ ಮಾಡಿಸಿದ್ದರು. ಈ ಗೋವಿಂದಪ್ಪ ಶಂಕ್ರನಿಗಿಂತ ವಿಚಿತ್ರ ವ್ಯಕ್ತಿ. ತನ್ನ ಮನೆಯ ಕೆಲಸ ಕಾರ್ಯಗಳನ್ನು ಬಿಟ್ಟು ಊರವರಿಗೆ ದೊಡ್ಡ ವೇದಾಂತಿಯಂತೆ ಉಪನ್ಯಾಸ ಕೊಡುತ್ತ ತಿರುಗುತ್ತಿದ್ದವ. ಹಬ್ಬ ಹರಿದಿನಗಳಲ್ಲಿ, ಜಾತ್ರೆಗಳಲ್ಲಿ ಕುಣಿಯುತ್ತಿದ್ದ, ಹಾಡುತ್ತಿದ್ದ. ಊರಲ್ಲಿ ಯಾವುದೇ ಹೆಣದ ಮೆರವಣಿಗೆ ಹೊರಟರೆ ಅದರ ಮುಂದೆ ಹಲಗೆ ಬಾರಿಸುತ್ತ, ಶಿಳ್ಳೆ ಹೊಡೆಯುತ್ತ ಹೋಗುತ್ತಿದ್ದವ. ಗೋವಿಂದನ ಇಂತಹ ಘನ ಕಾರ್ಯಗಳಿಂದಾಗಿ ಬೇಸತ್ತು ಅವನ ಹೆಂಡತಿ ಎದೆಯೊಡೆದು ಪ್ರಾಣಬಿಟ್ಟಿದ್ದಳು. ಇವನು ತಲೆಕೆಟ್ಟು ಹುಚ್ಚನಾಗಿರಬೇಕೆಂದು ಊರವರು ಆಡಿಕೊಳ್ಳತೊಡಗಿದ್ದರು. ಹೀಗೇಕೆ ಹುಚ್ಚನಂತೆ ಆಡುತ್ತೀಯಾ ಎಂದು ಕೇಳಿದರೆ ‘ನನ್ನ ಮನಸ್ಸಿಗೆ ನೆಮ್ಮದಿ ಯಾವ ಕೆಲಸ ಕೊಡುತ್ತೋ ಅದನ್ನು ಮಾಡುತ್ತಿದ್ದೇನೆ, ನಿಮ್ಮ ನೆಮ್ಮದಿಗೆ ನಾನೇನು ಕೇಡು ಮಾಡಿಲ್ಲವಲ್ಲ’ ಎನ್ನುತ್ತಿದ್ದ. ಆದರೆ ಊರವರು ಇವನನ್ನು ಗಂಭೀರವಾಗಿ ಪರಿಗಣಿಸುವುದನ್ನು ಬಿಟ್ಟು ಅವನ ಹುಚ್ಚಾಟಿಕೆಗಳನ್ನು ಕಂಡು ನಕ್ಕು ಸುಮ್ಮನಾಗತೊಡಗಿದರು. ತನ್ನ ಮಗ ಶಂಕ್ರನ ಮದುವೆ ಮಾಡಿಸಿದ ಮೂರ್ನಾಲ್ಕು ವರ್ಷಕ್ಕೆ ಭೂಲೋಕದ ಋಣ ತೀರಿಸಿ ಹೋಗಿದ್ದ. ಗೋವಿಂದಪ್ಪ ಸಾಯುವುದಕ್ಕೆ ನಾಲ್ಕೈದು ತಿಂಗಳು ಇರುವಾಗಿನಿಂದಲೂ ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ಎಲ್ಲೆಲ್ಲೋ ಅಲೆದು ಬರುತ್ತಿದ್ದ. ಕೊನೆ ಕೊನೆಗೆ ಊರಿಂದ ದೂರಾಗಿ ತನ್ನ ಹೊಲದಲ್ಲೇ ಇರುತ್ತಿದ್ದವ ಅದೇನಾಗಿ ಸತ್ತನೋ ಯಾರಿಗೂ ಗೊತ್ತಾಗಲಿಲ್ಲ. ಇವನ ಮಗ ಶಂಕ್ರನೋ ತನ್ನಪ್ಪನ ಪಡಿಯಚ್ಚು. ಈಗೀಗ ಅವನಪ್ಪನಂತೆಯೇ ಏಕಾಂಗಿಯಾಗಿರುತ್ತಿದ್ದನ್ನು ಕಂಡು ಅಪ್ಪನಂತೆ ಮಗನೂ ಅಷ್ಟೆ... ಎಂದು ಆಡಿಕೊಳ್ಳತೊಡಗಿದ್ದರು.

ಶಂಕ್ರನ ಹೆಂಡತಿ ಪದ್ಮಾಳಿಗೋ ಇನ್ನೊಂದು ಮಗು ಪಡೆಯಬೇಕೆನ್ನುವ ಬಯಕೆ, ಆದರೆ ಆ ದೇವರು ಕಣ್ಣುಬಿಡಲಿಲ್ಲ ಎಂದುಕೊಂಡು ಸುಮ್ಮನಿದ್ದಳು. ಶಂಕ್ರನ ಕುಟುಂಬದಲ್ಲಿ ಪದ್ಮಾಳೂ ವಿಚಿತ್ರ ಹೆಣ್ಣಾಗಿದ್ದಳು. ಆದರೆ ವಿರುದ್ಧ ಗುಣಗಳನ್ನು ಹೊಂದಿದವಳಾಗಿದ್ದಳು. ಯಾವಾಗಲೂ ಸಿಡುಕುತ್ತಿರುತ್ತಾಳೆ. ಸಣ್ಣ ಪುಟ್ಟ ತಪ್ಪಿಗೂ ರೇಗಾಡುತ್ತಾಳೆ, ಬಯ್ಯುತ್ತಾಳೆ, ಅರ್ಥವಾಗದಂತೆ ವಟಗುಟ್ಟುತ್ತಾಳೆ. ನೀರು ಚೆಲ್ಲಿದ್ದಕ್ಕೋ, ಕಸ ತಳ್ಳಿದ್ದಕ್ಕೋ ನೆರೆಯವರೊಂದಿಗೆ ಜಗಳಕ್ಕೆ ಇಳಿಯುತ್ತಾಳೆ. ಯಾವುದರಲ್ಲಿಯೂ ತೃಪ್ತಿಗೊಳ್ಳದ ಅತೃಪ್ತ ಮನಸ್ಸು ಅವಳದು. ರಾತ್ರಿ ಮಲಗಿದ್ದಾಗ ಮಾತ್ರ ಬಾಯಿಗೆ ಬೀಗ ಬಿದ್ದಂತಾಗಿರುತ್ತದೆ. ಉಳಿದ ಸಮಯವೆಲ್ಲ ಸಿಡಿಯುತ್ತಲೇ ಇರುತ್ತಾಳೆ.

ಶಾಂತ ಸ್ವಭಾವದ ಶಂಕ್ರನಿಗೆ ಇದೆಲ್ಲವೂ ಹಿಡಿಸುವುದಿಲ್ಲ. ಮದುವೆಯಾಗಿದ್ದಾನೆ ಎನ್ನುವ ಕಾರಣಕ್ಕೆ ಎಲ್ಲವನ್ನೂ ನುಂಗಿಕೊಂಡು ಸುಮ್ಮನಿದ್ದ. ಮದುವೆಯೇ ಬೇಡ ಎಂದುಕೊಂಡಿದ್ದವನಿಗೆ ಪದ್ಮಾ ಮಗ್ಗುಲ ಮುಳ್ಳಾಗಿದ್ದಳು. ಒಳಗೊಳಗೆ ನೊಂದುಕೊಂಡು ಮೌನದ ಕಡಲೊಳಗೆ ಮುಳುಗಿಬಿಟ್ಟಿದ್ದ. ಎರಡು ವಿರುದ್ಧ ಮನಸುಗಳ ನಡುವೆ ಮಗ ಕುಮ್ಮಿ ಅದು ಹೇಗೋ ಹುಟ್ಟಿಬಿಟ್ಟಿದ್ದ. ಇವನು ತಂದೆತಾಯಿಗಳಿಬ್ಬರ ಮಿಶ್ರಗುಣಗಳ ಯಥಾವತ್ ಪ್ರತಿರೂಪ. ತಾಯಿಯಂತೆ ಒಮ್ಮೊಮ್ಮೆ ಚೀರಾಡುತ್ತಾನೆ, ಕೂಗಾಡುತ್ತಾನೆ, ಮತ್ತೊಮ್ಮೆ ತಂದೆಯಂತೆ ಮಹಾ ಮೌನಿ. ಮೂಲೆಗೆ ಆತುಕೊಂಡು ಕುಳಿತುಬಿಡುತ್ತಾನೆ, ಋಷಿಯ ಹಾಗೆ.

ಅತ್ತ ಹೆಂಡತಿ ವಿಚಿತ್ರ ಪ್ರಾಣಿ; ಇತ್ತ ಮಗ ಪರಮ ವಿಚಿತ್ರ ಕೂಸು. ಇವುಗಳ ನಡುವೆ ಮತ್ತೊಂದು ವಿಷಯ ಅವನ ನೆಮ್ಮದಿಯ ಕೊಳದಲ್ಲಿ ಮಹಾ ಅಲೆಯನ್ನು ಎಬ್ಬಿಸಿತ್ತು. ಇತ್ತೀಚೆಗೆ ಪ್ರತಿ ರಾತ್ರಿ ಬೀಳುತ್ತಿದ್ದ ಕನಸೊಂದು ಅವನನ್ನು ಇನ್ನಿಲ್ಲದಂತೆ ಕ್ಷೋಭೆಗೆ ಒಳಪಡಿಸಿತ್ತು. ಕನಸೆಂದರೆ ಅದೊಂತರ ಭಯಂಕರ, ಅದರಲ್ಲಿ ವಯಸ್ಸಾದ, ಗಡ್ಡಬಿಟ್ಟುಕೊಂಡವನೊಬ್ಬ ಬೆತ್ತಲೆಯಾಗಿ ಬಂದು ತನ್ನನ್ನೂ ಬೆತ್ತಲೆಯಾಗಿಸಿ ಹೊತ್ತುಕೊಂಡು ಹೋಗುತ್ತಿದ್ದ. ಹಾಗೆ ಹೊತ್ತುಕೊಂಡು ಹೋಗುವಾಗ ವಿಚಿತ್ರವಾಗಿ ನಗುತ್ತಿದ್ದ. ಗಾಳಿ ಎಂದೂ ಇಲ್ಲದೇ ಆಗ ಮಾತ್ರ ತಂಪಾಗಿ ಬೀಸುತಿತ್ತು. ಮೈಭಾರವೆಲ್ಲ ಹಗುರವಾದಂತೆ ಅನಿಸಿ ಯಾವುದೊ ಬಂಧನದ ಕೊಂಡಿ ಕಳಚಿದಂತಹ ಅನುಭವವಾಗುತ್ತಿತ್ತು. ಎದೆ ನಿರುಮ್ಮಳವಾಗಿ ಅದೆಂತದೊ ಆನಂದದಲ್ಲಿ ತೇಲಿದಂತಹ ಅನುಭವ. ಕನಸು ಪೂರ್ಣವಾಗುತ್ತಿರಲಿಲ್ಲ, ತನ್ನನ್ನು ಎತ್ತಿಕೊಂಡು ಬಯಲಿನಲ್ಲಿ ಮರೆಯಾಗುತ್ತಿದ್ದನಷ್ಟೆ. ಮುಂದಕ್ಕೇನು ಎನ್ನುವಷ್ಟರಲ್ಲಿ ಎಚ್ಚರವಾಗಿ ಸುತ್ತಲೂ ನುಂಗುವಂತಹ ಕತ್ತಲು. ಮಧ್ಯರಾತ್ರಿ ಮೀರಿರುತ್ತಿತ್ತು. ಪಕ್ಕದಲ್ಲಿ ಮಲಗಿದ್ದ ಪದ್ಮಾ ನಿದ್ದೆಗಣ್ಣಿನಲ್ಲಿಯೇ ಅದೇನೋ ಗೊಣಗುತ್ತಿರುತ್ತಾಳೆ, ಕುಮ್ಮಿ ಮಂಪರಿನಲ್ಲಿಯೇ ದಿಢೀರನೇ ಎದ್ದು ಏನೇನೋ ಕಿರುಚಿ ಮಲಗುತ್ತಾನೆ. ನರಕದಂತೆ ಭಾಸವಾಗುತ್ತದೆ. ಗೋಡೆ ಮೇಲಿನ ಗಡಿಯಾರದ ಮುಳ್ಳುಗಳನ್ನು ಯಾರೋ ಹಗ್ಗ ಕಟ್ಟಿ ಎಳೆದಂತೆ, ಮೊಳೆಗೆ ನೇತು ಹಾಕಿದ್ದ ಕ್ಯಾಲೆಂಡರಿನ ದಿನಾಂಕಗಳು ಹಿಂದಕ್ಕೆ ಚಲಿಸಿದಂತೆ, ಹಳೇ ವಾಯರಿಗೆ ಸಿಕ್ಕಿಕೊಂಡ ದೂಳುಗಟ್ಟಿದ  ಬಲ್ಬು ಪಕ ಪಕನೆ ಹೊಳೆದು ಕಣ್ಣಾ ಮುಚ್ಚಾಲೆಯಾಡಿದಂತೆ ಅನುಭವವಾಗಿ ಸುತ್ತಮುತ್ತಲಿನ ಪರಿಸರ ತಾನು ಸಮಸ್ಯೆಗಳ ಸುಳಿಯೊಳಗೆ ಸಿಲುಕಿ ಒದ್ದಾಡುತ್ತಿದ್ದರ ಕುರುಹಾಗಿ ವರ್ತಿಸುತ್ತದೆ. ಮರಳಿ ಮಲಗಲು ಹವಣಿಸುತ್ತಾನೆ. ನಿದ್ದೆ ಬರುವದಿಲ್ಲ. ಸೂರ್ಯ ಶತ್ರುವಾಗಿದ್ದಾನೆ. ಬೇಗ ಮೂಡುವುದೇ ಇಲ್ಲ. ಯಾರೋ ಕೂಗಿದಂತಾಗಿ ಹೊರಗೆ ಬಂದು ನೋಡಿದರೆ ಅಲ್ಯಾರೂ ಇರುವುದಿಲ್ಲ. ಕಗ್ಗತ್ತಲು ರಾಚುತ್ತದೆ. ಅಂಗಳದಲ್ಲಿ ಮಲಗಿದ್ದ ನಾಯಿ ಇವನನ್ನು ನೋಡಿ ಕುಂಯ್‌ಗುಟ್ಟುತ್ತಾ ಓಡಿ ಹೋಗುತ್ತದೆ. ಯಾಕೋ ಆ ಕನಸೇ ಹಿತವೆಂದು ಅನಿಸಿ, ಮತ್ತೆ ಬಿದ್ದರೂ ಬೀಳಬಹುದೆಂದು ಅಲ್ಲಿಯೆ ಕಟ್ಟೆಯ ಮೇಲೆ ಹೊರಳುತ್ತಾನೆ.

ಬೆಳಿಗ್ಗೆ ಹೊರಗೆ ಗಂಡ ಮಲಗಿದ್ದನ್ನು ಕಂಡ ಪದ್ಮಾಳಿಗೆ ಇದೇನು ಹೊಸತಲ್ಲ, ಕೆಲವು ದಿನಗಳಿಂದ ಹೀಗೆ ಹೊರಗೆ ಬಂದು ಮಲಗುತ್ತಿದ್ದ. ಆದರೆ ಮಧ್ಯರಾತ್ರಿಯಾಗುತ್ತಲೇ ಹೀಗೆ ಹೊರಗೆ ಮಲಗುತ್ತಿದ್ದವನನ್ನು ಕಂಡು ಏನೂ ಅನ್ನದಿದ್ದರೂ ಅಂದು ಕುತೂಹಲ ತಡೆಯಲಾರದೆ ಜೋರು ಧ್ವನಿ ಮಾಡಿ ಕೇಳಲಾರಂಬಿಸಿದಳು. ಇನ್ನೂ ನಿದ್ದೆಗಣ್ಣಿನಲ್ಲೇ ಇದ್ದ ಶಂಕ್ರ ಅವಳ ಅರಚಾಟ ಕೇಳಿ ದಿಗ್ಗನೆ ಎದ್ದು ಕುಳಿತ. ಹೆಂಡತಿ ಹೀಗೆ ಬೆಳ್ ಬೆಳಿಗ್ಗೆ ಕೂಗಾಡಿದರೆ ಊರವರು ಏನಾದರೂ ತಿಳಿದುಕೊಂಡಾರು ಎಂದು ಅವಳನ್ನು ಒಳಗೆ ಕರೆದುಕೊಂಡು ಹೋಗಿ ಆ ಕನಸಿನ ಬಗ್ಗೆ ಬಾಯಿಬಿಟ್ಟ. ಅವಳು ಹೌಹಾರಿ ಹೆದರಿ ಗಂಡನಿಗೆ ಯಾವುದೋ ದೆವ್ವ ಗಂಟುಬಿದ್ದಿರಬೇಕೆಂದು ಸ್ವಾಮೀಜಿಯವರೊಬ್ಬರ ಹತ್ತಿರ ತಾಯತ ಮಂತ್ರಿಸಿಕೊಂಡು ಬಂದು ಬಲಗೈ ರಟ್ಟೆಗೆ ಕಟ್ಟಿದಳು. ಮಾಟ ಮಂತ್ರ ನಂಬದ ಶಂಕ್ರ ಅದನ್ನು ಕಿತ್ತೆಸೆಯಬೇಕೆಂದುಕೊಂಡರೂ ಹೆಂಡತಿಗೆ ಹೆದರಿ ಸುಮ್ಮನಾದ. ಆದರೆ ಆ ತಾಯತದ ಕರಾಮತ್ತು ಏನೂ ನಡೆಯಲಿಲ್ಲ. ಮಧ್ಯರಾತ್ರಿಯ ಆ ಕನಸು ಬೀಳುತ್ತಲೇ ಇತ್ತು.

ಈ ಕನಸಿನ ಪುರಾಣ ನಿಲ್ಲದಾದಾಗ ಮನೆದೇವ್ರಿಗಾದರೂ ಹೋಗಿ ಬರೋಣ, ಆವಾಗಲಾದರೂ ಈ ದರಿದ್ರದ ಕಾಟ ನಿಂತರೂ ನಿಲ್ಲಬಹುದೆಂದು ಗಂಡನ ಮುಂದೆ ಹೇಳಿದ್ದಳು. ಆದರೆ ಇವನು ದೇವರೆಂದರೆ ಸಾಕು ಕಿಲೋಮೀಟರ್‌ಗಟ್ಟಲೆ ಓಡಿಬಿಡುತ್ತಾನೆ. ಪಕ್ಕಾ ನಾಸ್ತಿಕ ಮನಸ್ಸು. ದೇವರಿಗೆಂದೂ ಕೈಮುಗಿದಿಲ್ಲ, ಪೂಜೆ ಮಾಡಿಲ್ಲ. ಹಬ್ಬ ಹರಿದಿನ ಜಾತ್ರೆಗಳಲ್ಲಂತೂ ಊರುಬಿಟ್ಟು ಹೋಗಿಬಿಡುತ್ತಿದ್ದ, ಎಲ್ಲೆಲ್ಲೊ ಸುತ್ತಾಡಿ ಮರಳಿ ಮನೆಗೆ ಬರುತ್ತಿದ್ದದ್ದು ಎರಡ್ಮೂರು ದಿನಗಳ ನಂತರವೆ. ಈ ಮನುಷ್ಯನೆ ಹೀಗೆ ಎಂದು ಸುಮ್ಮನಿರುವದು ಬಿಟ್ಟು ಬೇರೆ ದಾರಿಗಳಿದ್ದಿಲ್ಲ ಅವಳಿಗೆ.

ಈ ಕನಸಿಗೊಂದು ಪರಿಹಾರ ಕಂಡುಕೊಳ್ಳಬೇಕೆನ್ನುವ ಆಸೆ ಶಂಕ್ರನಿಗಿದ್ದರೂ ಅದನ್ನು ಕಂಡುಕೊಳ್ಳುವ ದಾರಿ ಕಾಣದೆ ಚಡಪಡಿಸುತ್ತಿದ್ದ. ತಾನಾಗಿಯೇ ಯಾರನ್ನೂ ಮಾತನಾಡಿಸಲು ಹೋಗದವನು ಪರಿಹಾರ ಯಾರ ಹತ್ತಿರ ಕೇಳುತ್ತಾನೆ?

ಒಂದು ದಿನ ಪದ್ಮಾ ಗಂಡನಿಗೆ ಹೇಳದೆ ಸ್ವಾಮೀಜಿಯೊಬ್ಬರನ್ನು ಕರೆಸಿ ಅವನಿಗಂಟಿದ ಈ ರೋಗವನ್ನು ನಿವಾರಿಸಬೇಕೆಂದು ನಿರ್ಧರಿಸಿದ್ದಾಗ, ಅದು ಹೇಗೋ ಶಂಕ್ರನಿಗೆ ಗೊತ್ತಾಗಿ ಮನೆಯಲ್ಲಿದ್ದರೆ ತೊಂದರೆ ಎಂದುಕೊಂಡು ಊರುಬಿಟ್ಟು ಹೋಗಿಬಿಟ್ಟ. ಹೋದವನು ಮನೆಗೆ ಮರಳಲೇ ಇಲ್ಲ, ಊರಿಂದೂರಿಗೆ ಅಲೆಯುತ್ತಾ ಹೊರಟ.

ಅದೇನು ನಿರ್ಧರಿಸಿದ್ದನೋ ಊರೂರು ಸುತ್ತುತ್ತ ನಡೆಯುತ್ತಲೇ ಹೋದ. ಮರಳಿ ಬರುವ ಯಾವ ಯೋಚನೆಯೂ ಅವನಲ್ಲಿರಲಿಲ್ಲ. ಊರೊಂದನ್ನು ದಾಟಿ ಮತ್ತೊಂದು ಊರಿಗೆ ಹೋಗುತ್ತಿದ್ದಾಗ ಊರಿಂದ ತುಸು ದೂರದಲ್ಲಿರುವ ಬೇವಿನ ಮರದ ಕಟ್ಟೆಯ ಮೇಲೆ ಯಾರೋ ಕುಳಿತಿರುವುದು ಕಾಣಿಸಿತು. ದಣಿವಾರಿಸಿಕೊಳ್ಳಲು ಯಾರಾದರೂ ಕುಳಿತಿರಬೇಕೆಂದು ನಿರ್ಲಕ್ಷಿಸಿ ಅದೇ ಮಾರ್ಗವಾಗಿ ಹೋಗುತ್ತಿದ್ದ. ಆದರೆ ಆ ಮರದ ಹತ್ತಿರಕ್ಕೆ ಹೋದಂತೆ ಅವನ ಕಣ್ಣುಗಳು ತೀಕ್ಷ್ಣಗೊಂಡವು. ಮುದುಕನಿರಬೇಕು, ಇವನೆಡೆಗೆ ಬೆನ್ನು ಮಾಡಿ ಕುಳಿತಂತೆ ಕಂಡಿತು. ಇನ್ನೂ ಹತ್ತಿರಕ್ಕೆ ಹೋದಂತೆ ಸಣ್ಣಗೆ ಅವನ ಮೈಕಂಪಿಸತೊಡಗಿತು. ಬೆತ್ತಲೆಯಾಗಿರುವ ಮುದುಕನವನು, ಮೈಮೇಲೆ ತುಂಡು ಬಟ್ಟೆಯೂ ಇದ್ದಂತೆ ಕಾಣುತ್ತಿಲ್ಲ. ಇದೇನಿದು ಇವನ್ಯಾಕೆ ಹೀಗೆ ಬೆತ್ತಲೆಯಾಗಿ ಕುಳಿತಿದ್ದಾನೆ; ಅದೂ ಈ ಕಾಡಿನಲ್ಲಿ. ಬೇರೆ ಏನೋ ಯೋಚನೆ ಬರುವ ಹೊತ್ತಿಗೆ ಆ ಮರವನ್ನು ತಲುಪಿದ. ಅದೇನೋ ಕೈಯಾಡಿಸುತ್ತಿದ್ದಾನೆ, ಸಂಜ್ಞೆ ಮಾಡುತ್ತಿದ್ದಾನೆ. ತನ್ನ ಲೋಕದಲ್ಲಿ ತಾನು ಮುಳುಗಿದ್ದಾನೆ. ಪ್ರಪಂಚದ ಪರಿವೆ ಇಲ್ಲದಂತೆ ಮಗ್ನನಾಗಿದ್ದಾನೆ. ಹಾಗೆ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದವನಿಗೆ ಯಾರೊ ಬಂದಂತಾಗಿ ಶಂಕ್ರನ ಕಡೆ ತಿರುಗಿ ನೋಡಿದ. ಹಾಗೆ ಅವನು ತಕ್ಷಣ ತಿರುಗಿ ನೋಡಿದ್ದಕ್ಕೆ ಶಂಕ್ರನಿಗೆ ತಲೆ ತಿರುಗಿದಂತಾಯಿತು. ಶಂಕ್ರ ಇನ್ನೇನು ಮೂರ್ಛೆ ಬೀಳಬೆನ್ನುವವನಿದ್ದ. ಇಷ್ಟುದ್ದ ದಾಡಿ ಬಿಟ್ಟುಕೊಂಡಿದ್ದ ಮುದುಕನವನು. ಶಂಕ್ರನಿಗೆ ಒಮ್ಮೆಲೆ ಮಧ್ಯರಾತ್ರಿಯ ಕನಸು ನೆನಪಾಯಿತು. ಹೌದಲ್ಲವೇ? ಅದೇ ಮುಖ. ತನ್ನ ಕನಸಲ್ಲಿ ಬರುತ್ತಿದ್ದವನು ಇವನೇ ಅಲ್ಲವೆ? ಇದೇನಿದು ಆಶ್ಚರ್ಯ, ಪ್ರತಿದಿನ ಕನಸಲ್ಲಿ ಬರುತ್ತಿದ್ದ ಆ ಆಗಂತುಕ ಈಗ ಕಣ್ಣೆದುರಲ್ಲೇ ಇದ್ದದ್ದು ನಂಬಲಾಗಲಿಲ್ಲ. ಇದು ಕನಸೇನಾದರೂ ಇದೆಯಾ ಎಂದು ಪರೀಕ್ಷಿಸಿಕೊಂಡ. ಅದು ಕನಸಲ್ಲ ಎಂದು ಖಾತ್ರಿಯಾದ ಮೇಲೆ ಎದೆಬಡಿತ ಹೆಚ್ಚಾದಂತಾಗಿ ಅವನನ್ನೇ ದಿಟ್ಟಿಸತೊಡಗಿದ. ಆ ಮುದುಕ ಶಂಕ್ರನನ್ನು ನೋಡಿ ಮುಗುಳು ನಕ್ಕ. ಅದೆಂತಹ ನಗು ಅದು, ಅಮಲೇರುವಂತಹದ್ದು.

‘ಯಾರೂ?’ ಗಂಭೀರ ಧ್ವನಿಯಾದರೂ ಆಪ್ತವಾಗಿಯೇ ಕೇಳಿದ ಆ ಮುದುಕ.
‘ನಾನು ಶಂಕ್ರ ಅಂತ...’ ತೊದಲುತ್ತಲೇ ಕಟ್ಟೆಯ ಮೇಲೆ ಇವನು ಕುಳಿತ.
‘ಏನು ವಿಷಯ? ನನ್ನನ್ನು ನೋಡಿ ಹೆದರಿ ಓಡಿ ಹೋಗಲಿಲ್ಲವಲ್ಲ?’
‘ಓಡಿ ಹೋಗಬೇಕೆಂದು ನನಗನಿಸಲಿಲ್ಲ, ನೀವು ನನ್ನ ಆತ್ಮೀಯರು ಎನಿಸಿತು’

‘ಹೌದಾ? ಇದು ಆಶ್ಚರ್ಯಪಡಬೇಕಾದ ವಿಷಯ. ನನ್ನನ್ನು ನೋಡಿ ಓಡಿ ಹೋಗುವವರೇ ಹೆಚ್ಚು, ನೀನು ಮಾತ್ರ ನನ್ನ ಮಾತಾಡಿಸುವ ಧೈರ್ಯ ತೋರಿದ್ದೀಯಾ ಎಂದರೆ ನಿನ್ನದು ವಿಶೇಷ ವ್ಯಕ್ತಿತ್ವ ಇರಬೇಕು. ಯಾವುದೋ ಸಮಸ್ಯೆ ಬಾಧಿಸುತ್ತಿರಬೇಕು, ಏನೆಂದು ಕೇಳಬಹುದಾ?’

‘ಅದು.. ಈಗ ಕೆಲವು ದಿನಗಳಿಂದ ಕನಸೊಂದು ಬೀಳುತ್ತಿದೆ. ಅದರಲ್ಲಿ ನೀವೋ ಅಥವಾ ನಿಮ್ಮನ್ನು ಹೋಲುವ ವ್ಯಕ್ತಿಯೋ ಬರುತ್ತಿದ್ದಾನೆ. ಇದು ಪವಾಡವೋ, ಆಕಸ್ಮಿಕವೋ, ಕಾಕತಾಳಿಯವೋ ಒಂದೂ ತಿಳಿಯದು. ನೀವೇ ಸಿಕ್ಕಿಬಿಟ್ಟಿರಿ’

‘ನನ್ನ ಕಾಣಲಿಕ್ಕೆ ಯಾರೋ ಬರುವವರಿದ್ದಾರೆ ಎಂದು ನನ್ನ ಒಳ ಮನಸ್ಸು ಹೇಳುತ್ತಿತ್ತು. ಅದು ನಿಜವಾಯಿತು. ಬಂದಿದ್ದು ಒಳ್ಳೇಯದಾಯಿತು ಬಿಡು. ನಿನ್ನ ಬರುವಿಕೆಗಾಗಿಯೇ ಕಾಯುತ್ತಿದ್ದೆ’.

‘ನನಗಾಗಿಯೇ?’ ಶಂಕ್ರನಿಗೆ ವಿಚಿತ್ರ ಆಶ್ಚರ್ಯವಾಯಿತು.

‘ಹೌದು, ನಿನಗೆ ಬೀಳುತ್ತಿದ್ದ ಹಾಗೆ ನನಗೂ ಕನಸು ಬೀಳುತ್ತಿತ್ತು, ಅದರಲ್ಲಿ ನಿನ್ನಂತವನೊಬ್ಬ ಯಾವುದೋ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಹಾಗೆ, ಅದು ನೀನೇ ಇರಬೇಕಲ್ಲವೆ?’

‘ನಿಮಗೂ ಕನಸಾ?’ ಶಂಕ್ರನಿಗೆ ಭಯಮಿಶ್ರಿತ ಕುತೂಹಲ. ತನಗಲ್ಲವೆ ಕನಸು ಬೀಳುತ್ತಿದ್ದದ್ದು? ಈ ಮುದುಕನಿಗೂ ಬೀಳುತ್ತಿದೆಯಾ? ಕೌತುಕದೊಂದಿಗೆ ಮುದುಕನ ಕಡೆಗೆ ನೋಡಿದ.

‘ಹೌದು ಸಾಮಾನ್ಯವಾಗಿ ನನಗೆ ಕನಸು ಬೀಳುವುದಿಲ್ಲ, ಆದರೆ ತುಂಬಾ ವರ್ಷಗಳ ನಂತರ ಕೆಲವು ರಾತ್ರಿ ನನಗೆ ಕನಸು ಬೀಳುತ್ತಿತ್ತು, ಯಾರೋ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನನ್ನೇ ಕರೆದಂತೆ... ನಾನು ಹೆಚ್ಚು ದಿನ ಒಂದೆ ಸ್ಥಳದಲ್ಲಿ ನಿಲ್ಲುವುದಿಲ್ಲ, ನೀರು ಹರಿಯುತ್ತದ್ದರೆ ಮಾತ್ರ ಶುದ್ಧವಲ್ಲವೇ? ಇಲ್ಲಿಂದ ಎಂದೋ ಹೊರಟುಬಿಡುತ್ತಿದ್ದೆ. ಆದರೆ ಇಲ್ಲಿ ನನ್ನ ಅವಶ್ಯಕತೆ ಯಾರಿಗೋ ಇದೆ ಅನಿಸಿತು. ಅದಕ್ಕೆ ಇನ್ನೂ ಇಲ್ಲೇ ಉಳಿದುಕೊಂಡಿದ್ದೆ, ನೀನು ಬಂದೆಯಲ್ಲ, ನನ್ನ ಊಹೆ ನಿಜವಾಯಿತು, ಬಾ, ನನಗೆ ನೀನೊಬ್ಬ ಬಂಧು ಸಿಕ್ಕಂತಾಯಿತು’.

ಆ ಮಾತು ಕೇಳಿದ ಶಂಕ್ರನಿಗೆ ದಂಗು ಬಡಿದಂತಾಯಿತು. ಸಣ್ಣಗೆ ಎದೆಯೊಳಗೆ ಸಿಡಿಲು ಬಡಿದಂತಾಗಿ ವಿದ್ಯುತ್ ಪ್ರವಹಿಸಿದಂತಾಯಿತು. ಅವನಿಗೂ ಕನಸು, ಯಾರೋ ಸಮಸ್ಯೆಯಲ್ಲಿ ಸಿಕ್ಕಿಕೊಂಡಿರುವಂತೆ, ಯಾರೋ ಯಾಕೆ ಅದು ನಾನೆ ಅಲ್ಲವೆ? ನನಗೂ ಕನಸು, ಅದರಲ್ಲಿ ಬೆತ್ತಲೆಯಾಗಿ ಬರುವ ಇದೇ ಮುದುಕ. ಇದೇನಾಗುತ್ತಿದೆ ತನ್ನ ಬದುಕಿನಲ್ಲಿ? ತನಗೆ ಏನಾಗಿದೆ? ಒಂದಕ್ಕೂ ಉತ್ತರವಿಲ್ಲ. ಇದಕ್ಕೆ ಪರಿಹಾರ ಈ ಬೆತ್ತಲೆಯವನೇ ನೀಡಬೇಕು, ಇವನಲ್ಲವೆ ಎಲ್ಲದಕ್ಕೂ ಮೂಲ?

‘ನನಗೆ ಬೀಳುತ್ತಿದ್ದ ಕನಸಿನಲ್ಲಿ ಬಹುಶಃ ನೀವೇ ಇರಬೇಕು, ಬೆತ್ತಲೆಯಾಗಿಯೇ ಬಂದು ನನ್ನನ್ನೂ ಬೆತ್ತಲೆಯಾಗಿಯೇ ಎತ್ತಿಕೊಂಡು ಹೋಗುತ್ತೀರಿ, ಏನೂ ಅರ್ಥವಾಗದ ಕನಸು ಅದು.’

‘ಅಲ್ಲಿಗೆ ಸರಿಹೋಯ್ತು ಬಿಡು, ಒಳ್ಳಯದೇ ಆಯ್ತಲ್ಲವೇ? ನಿನಗೂ ಈಗ ಬೆತ್ತಲೆಯಾಗುವ ಯೋಗ ಕೂಡಿಬಂದಿರಬೇಕು’

‘ಬೆತ್ತಲೆಯಾಗುವದರಲ್ಲಿ ಅದೇನು ಯೋಗವಿದೆ? ಬಟ್ಟೆ ಇರದ ದೇಹಕ್ಕೊಂದು ಯೋಗವೇ?’

‘ಅಯ್ಯೋ ಹುಚ್ಚಪ್ಪ, ಬೆತ್ತಲೆಯಾಗುವುದೆಂದರೆ ಬರೀ ಬಟ್ಟೆ ಬಿಚ್ಚುವುದಲ್ಲ, ಮನಸ್ಸಿಗಂಟಿದ ಪ್ರಾಪಂಚಿಕ ಬಟ್ಟೆಯನ್ನೂ ಕಳಚಿ ಬೆತ್ತಲಾಗಬೇಕು’

‘ನನಗೇನೂ ಅರ್ಥವಾಗಲಿಲ್ಲ’

‘ಜಗತ್ತಿನ ತೊಂದರೆಯೇ ಇದು, ಯಾರೂ ಯಾವುದನ್ನೂ ತಾವಾಗೇ ಅರ್ಥ ಮಾಡಿಕೊಳ್ಳುವ ತೊಂದರೆ ತೆಗೆದುಕೊಳ್ಳುವದಿಲ್ಲ. ಹಾಗೆ ಅರ್ಥ ಮಾಡಿಸಲು ನನ್ನಂತಹವರು ನಿನ್ನಂತಹವರು ಬೆತ್ತಲಾಗಬೇಕಾಗುತ್ತದೆ. ಈ ಆಕಾಶ, ಭೂಮಿ, ಪ್ರಕೃತಿ, ಬದುಕು ಎಲ್ಲವೂ ನಿಗೂಢ. ತಾನಾಗೇ ಅರ್ಥ ಮಾಡಿಕೊಂಡವನೇ ಸಂತ. ಆ ಹಾದಿಯಲ್ಲಿ ನಿನ್ನಯ ಮೊದಲ ಹೆಜ್ಜೆ. ಪೊರೆ ಕಳಚುವ ಸಂಕ್ರಮಣ ಕಾಲದಲ್ಲಿ ನೀನಿದ್ದೀಯಾ.  ಬೆತ್ತಲಾಗುವುದರಲ್ಲಿಯ ಸುಖ ನಿನಗೆಲ್ಲಿ ಸಿಕ್ಕೀತು? ಯೋಚಿಸು... ಮುಂದಕ್ಕಿರುವುದೆಲ್ಲ ಸಂಭ್ರಮವೆ?’

ಶಂಕ್ರ ಮೌನವಾದ. ಈ ಮುದುಕ ಅದೇನೋ ಬಡಬಡಿಸುತ್ತಿದ್ದಾನೆ. ಆದರೆ ಇವನಾಡುತ್ತಿರುವ ಮಾತೇ ಪ್ರಾಪಂಚಿಕ ಸತ್ಯವೇನೋ ಎನಿಸಿತು. ಮುದುಕ ಹೇಳುವುದೆಲ್ಲವೂ ನಿಜ ಇರಬಹುದು. ಬೇರೆ ಯಾರ ಮಾತೂ ಆಲಿಸದ ಶಂಕ್ರ ಬೆತ್ತಲೆಯವನ ಮಾತಿಗೆ ಮಂತ್ರಮುಗ್ಧನಾಗಿ ಕೇಳತೊಡಗಿದ್ದ.

‘ಅದೆಂತ ಸಂಭ್ರಮ?’ ಕೇಳಿದ ಶಂಕ್ರ.

‘ನೋಡು, ನಿನಗೆ ಈ ಲೋಕದ ಬಂಧನ ಬೇಡವಾಗಿದೆ. ಪತ್ನಿ ವ್ಯಾಮೋಹ, ಪುತ್ರ ವಾತ್ಸಲ್ಯದ ಆಚೆ ನಿನ್ನ ಮನಸು ತೇಲುತ್ತಿದೆ. ಈ ಸ್ಥಿತಿ ಎಲ್ಲರಿಗೂ ಬರುವುದಿಲ್ಲ. ನೀನು ಸಾಮಾನ್ಯನಂತಿದ್ದಿದ್ದರೆ ನಿನ್ನ ಪಾಡಿಗೆ ಬಿಟ್ಟುಬಿಡುತ್ತಿದ್ದೆ. ನಿನ್ನ ಆತ್ಮ ನಿನ್ನೊಂದಿಗೆ ಸಂವಹಿಸುತ್ತಿದೆ. ಅದು ನಿಷ್ಕ್ರಿಯ ವ್ಯಾಪ್ತಿಯಿಂದ ಆಚೆ ಬಂದು ಹೊಸ ಮನ್ವಂತರಕ್ಕೆ ತುಡಿಯುತ್ತಿದೆ. ಇದೇ ಯೋಗ, ಸಂಭ್ರಮ, ಸಂಕ್ರಮಣ ಎಲ್ಲವೂ. ನಾನು ಊಹಿಸಿದ್ದು ಸುಳ್ಳಾಗಲ್ಲ. ಮಧ್ಯರಾತ್ರಿ ಎದ್ದು ಬೆತ್ತಲೆ ನಡೆದವರು ಜಗತ್ತಿಗೊಂದಿಷ್ಟು ಬೆಳಕು ಉಣಿಸಿದ್ದಾರೆ. ಅವರೂ ನಿನ್ನಂತೆಯೇ ಗಾಣಕ್ಕೆ ಸಿಕ್ಕ ಮೀನಿನಂತೆ ಒದ್ದಾಡಿದವರು. ಎಲ್ಲವನ್ನೂ ಬಿಟ್ಟು ಹೊರಟರು. ಅವರನ್ನು ಅನುಸರಿಸಿದವರು ಸಾಮಾನ್ಯ ಅನುಯಾಯಿಗಳಾಗುತ್ತಾರೆ. ನೀನು ಹಾಗಲ್ಲ. ಅವರನ್ನು ಪ್ರತಿಪಾದಿಸಲು ಅಣಿಗೊಳ್ಳುತ್ತಿರುವವನು. ಅವರು ಕಟ್ಟಿಕೊಟ್ಟ ದಾರಿ ನಿನ್ನ ಮುಂದೆ ತೆರೆದುಕೊಂಡಿದೆ. ಬಿಟ್ಟು ಹೋದ ಬೆಳಕಿನಲ್ಲೊಂದಿಷ್ಟು ಚಿಗುರಿಕೊ ಎಂದಷ್ಟೇ ಹೇಳಬಲ್ಲೆ’.

ಅವನು ಅದೇನೋ ಹೇಳುತ್ತಲೇ ಇದ್ದ. ಶಂಕ್ರ ಎಲ್ಲವನ್ನೂ ಮನಸ್ಸಿನಲ್ಲಿಯೇ ವಿಮರ್ಶಿಸಿ ಮೌನವಾಗಿಯೇ ಕೇಳಿಸಿಕೊಳ್ಳುತ್ತಿದ್ದ.  ಬೆತ್ತಲೆ, ಬೆಳಕು ಮುದುಕ ಹೇಳಿದ ಯಾವುದೂ ತಕ್ಷಣಕ್ಕೆ ಅರ್ಥವಾಗಲಿಲ್ಲ. ತನ್ನನ್ನು ಬಂಧು ಎಂದನಲ್ಲ? ಅದ್ಯಾವ ಲೆಕ್ಕದಲ್ಲಿ ಬಂಧುವಾಗುತ್ತೇನೆ? ಯಾವುದಕ್ಕೂ ಸ್ಪಷ್ಟ ಉತ್ತರ ಸಿಗದೇ ಅವನ ಪಾದಗಳು ಮನೆಯ ಕಡೆ ಪಯಣ ಬೆಳೆಸಿದವು. ಹೆಂಡತಿಯ ಮೇಲೆ ಪ್ರೀತಿ ಉಕ್ಕುತ್ತಿಲ್ಲ, ಮಗನ ಕಂಡರೆ ಮಮತೆ ಬರುತ್ತಿಲ್ಲ. ಊರವರು ಏನೇನೋ ಮಾತನಾಡಿಕೊಂಡರೂ ಅದ್ಯಾವುದಕ್ಕೂ ಅವನ ಮನಸ್ಸು ವಿಚಲಿತಗೊಳ್ಳದೇ ಸಮಸ್ಥಿತಿಯಾಗಿಯೇ ಇರುವುದನ್ನು ಕಲಿಯುತ್ತಿದೆ. ಸಂಸಾರದಲ್ಲಿ ಆಸಕ್ತಿ ಎಂದೋ ಹೊರಟು ಹೋಗಿದೆ. ಜನರು ಅಪರಿಚಿತರಂತೆ, ಅನ್ಯಗ್ರಹದ ಜೀವಿಗಳಂತೆ ಅರ್ಥವಾಗದೇ ಉಳಿಯುತ್ತಿದ್ದಾರೆ. ಮೋಟಾರು ಸೈಕಲ್ಲುಗಳ ವೇಗದ ಭರಾಟೆಯಲ್ಲಿ ಏಕೆ ಈ ಊರು ನಗರಗಳು ದಿಕ್ಕೆಟ್ಟು ಓಡುತ್ತಿವೆ? ನೋವು ನಲಿವುಗಳಿಗೆ ಯಾರೂ ಯಾಕೆ ಜೊತೆಯಾಗುತ್ತಿಲ್ಲ? ಇಲ್ಲಿ ಯಾರೂ ನನ್ನವರಂತೆ ನನ್ನ ಬಳಗದಂತೆ ಅನಿಸುತ್ತಲೇ ಇಲ್ಲ. ಮುದುಕ ನನ್ನನ್ನು ಬಂಧು ಎಂದನಲ್ಲವೇ? ಹಾಗೆ ಕರೆದಾಗ ಎಷ್ಟು ಹಿತವಾಗಿತ್ತು. ಅವನ ಆ ಮುಗುಳುನಗೆಯೊಂದೇ ನನ್ನನ್ನು ಸೆಳೆದು ಚಿಲುಮೆಯೊಂದನ್ನು ಅರಳಿಸಿದಂತಾಗಿತ್ತು. ಹೀಗೆಲ್ಲ ದ್ವಂದ್ವಗಳು ಅವನನ್ನು ಕಲಕು ಮಲಕು ಮಾಡಿದ್ದವು.

ಅದು ಯಾವಾಗ ಬಂದು ಕೆರೆ ದಂಡೆಯ ಮೇಲೆ ಕುಳಿತಿದ್ದನೋ, ಬೆಳಿಗ್ಗೆಯಿಂದ ಅದೇ ಗುಂಗಿನಲ್ಲಿದ್ದ. ವಾಸ್ತವಕ್ಕೆ ಬಂದಾಗ ತುಂಬಾ ಸಮಯವಾಗಿತ್ತು. ಸಂಜೆಯ ಬೀದಿ ದೀಪಗಳು ಒಂದೊಂದೇ ಕಣ್ಣು ಮುಚ್ಚುತ್ತಿದ್ದವು. ಶಂಕ್ರನಿಗೆ ಮನೆ ನೆನಪಾಯಿತು.

ಇಷ್ಟು ದಿನ ಹೇಳದೇ ಕೇಳದೆ ಮನೆಬಿಟ್ಟು ಹೋಗಿದ್ದ ಗಂಡನನ್ನು ಪಿತ್ತ ನೆತ್ತಿಗೇರಿಸಿಕೊಂಡು ಕೆಕ್ಕರಿಸುತ್ತಿದ್ದಳು ಪದ್ಮಾ.  ಈ ಅಸಾಮಿಗೆ ಹೆಂಡತಿ ಮಕ್ಕಳಿದ್ದಾರೆ ಎನ್ನುವ ಪರಿಜ್ಞಾನವೇನಾದರೂ ಇದೆಯಾ? ಅದೆಲ್ಲಿ ಹೋಗಿಬಿಡುತ್ತಾನೆ ಈ ಮನುಷ್ಯ? ಎಂದು ಒಳಗೊಳಗೆ ಕುದಿಯುತ್ತಿದ್ದರೂ ಸಹಿಸಿಕೊಂಡಳು. ಪ್ರತಿಸಾರಿಯೂ ಈ ಪ್ರಾಣಿಯದ್ದು ಇದೇ ಕಥೆ, ಹೊಸದೇನಿದೆ? ನೆಟ್ಟಗಾಗದ ಜಾತಿ ಇವನದು ಎಂದು ಗೊಣಗಿಕೊಂಡಳು. ಶಂಕ್ರನಿಗೆ ತನ್ನದೇ ಮನೆ ಅಪರಿಚಿತವಾದಂತೆ ಕಂಡಿತು.

ಬೆಳಿಗ್ಗೆ ಎಚ್ಚರವಾದಾಗ ಅಡುಗೆ ಮನೆಯಲ್ಲಿದ್ದ ಪದ್ಮಾ, ಆಟವಾಡುತ್ತಿದ್ದ ಕುಮ್ಮಿ ಯಂತ್ರ ಮಾನವರಂತೆ ಕಂಡರು. ತಾನು ಮಲಗಿದ್ದ ಕೋಣೆ ಕುದಿಯುವ ಬಾಣಲೆಯಂತಾಗಿ ಹೊರ ಓಡಿ ಬಂದ. ಹೊರಗೆ ಓಣಿಯ ಬೀದಿಗಳಲ್ಲಿಯೂ ಯಂತ್ರ ಮಾನವರೇ ಕಾಣುತ್ತಿದ್ದಾರೆ. ನಗು ಅಳುವಿನ ಯಾವ ಲಕ್ಷಣಗಳೂ ಅವುಗಳ ಮೂತಿಯಲ್ಲಿ ಕಾಣಲಿಲ್ಲ. ನೆತ್ತಿಯ ಮೇಲೆ ಸೂರ್ಯ ಸಣ್ಣ ಚಕ್ರದಂತೆ ಗಿರ ಗಿರ ತಿರುಗುತ್ತಿದ್ದಾನೆ. ಸುತ್ತಲಿನ ಯಾವ ವಸ್ತುಗಳೂ ಸಹಜವಾಗಿ ಕಾಣಿಸಲಿಲ್ಲ. ಎಲ್ಲವೂ ಇವನನ್ನು ಇರಿಯುತ್ತಿರುವಂತೆ ಕಂಡವು. ಪ್ರತಿ ರಾತ್ರಿ ಬೀಳುತ್ತಿದ್ದ ಆ ಕನಸು ನಿನ್ನೆ ರಾತ್ರಿ ಬೀಳದೇ ಇದ್ದದ್ದು ನೆನಪಾಯ್ತು. ಏನೋ ದಿಗಿಲಾದಂತಾಗಿ ಅಲ್ಲಿ ನಿಲ್ಲದೇ ಹೆಂಡತಿಗೆ ಮಗನಿಗೆ, ಮನೆಗೆ, ಈ ಊರಿಗೆ ಬೆನ್ನು ಮಾಡಿ ಅವನ ಪಾದಗಳು ಚಲಿಸತೊಡಗಿದವು. ಪದ್ಮಾ ಹಾಗೂ ಕುಮ್ಮಿ ನೋಡುತ್ತಲೇ ಇದ್ದರು. ಕೂಗಿ ಕರೆಯುವ ಮನಸಾಗಲಿಲ್ಲ.

 ಓಡುತ್ತಲೇ ಇದ್ದ ಅವನ ಪಾದಗಳು ನಿಶ್ಚಲಗೊಂಡಿದ್ದು ಆ ಬೇವಿನ ಮರದ ಕಟ್ಟೆಯ ಹತ್ತಿರ. ಇವನಿಗಾಗಿಯೇ ಕಾದು ಕುಳಿತ್ತಿದ್ದವನಂತೆ ಆ ಬೆತ್ತಲೆ ಮುದುಕ ಇವನನ್ನು ನೋಡಿ ಎದ್ದು ನಿಂತ. ಕೆಲವು ಕ್ಷಣ ದಿಟ್ಟಿಸಿ ನೋಡಿ, ಮಗುಳುನಕ್ಕು ಕಾಡಿನತ್ತ ಚಾಚಿಕೊಂಡಿದ್ದ ಹಾದಿಯತ್ತ ನಡೆಯತೊಡಗಿದ. ಆ ನಗು ಕಂಡು ಅಮಲೇರಿದಂತಾಗಿ ಶಂಕ್ರನ ಪಾದಗಳು ಮುದುಕನ್ನು ಹಿಂಬಾಲಿಸಿದವು. ನಡೆದಂತೆಲ್ಲಾ ದಾರಿಯ ಮಧ್ಯ ಒಂದೊಂದೇ ಬಟ್ಟೆ ಕಳಚಿಕೊಂಡಿದ್ದು ಅರಿವಿಗೆ ಮಾತ್ರ ಬರಲಿಲ್ಲ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !