ಹತಭಾಗ್ಯರು

7

ಹತಭಾಗ್ಯರು

Published:
Updated:
Prajavani

ಸುಬ್ಬಲಕ್ಷ್ಮಿ ಚಿಕ್ಕಮ್ಮ ಕಷ್ಟಜೀವಿ. ಮೇಲಾಗಿ ಪರರ ಕಷ್ಟಗಳಿಗೆ ಆತುಕೊಳ್ಳುವಂತಹ ಗುಣದವಳು. ಆಗಿನ ಕಾಲಕ್ಕೆ ಮಠದ ಬೀದಿಯ ಎಲ್ಲ ಮನೆಯವರಿಗೂ ಈಕೆಯ ಸಹಾಯದ ಅಗತ್ಯ ಇದ್ದೇ ಇತ್ತು. ಒಬ್ಬರ ಮನೆಯಲ್ಲಿ ದೋಸೆ ಹಿಟ್ಟು ರುಬ್ಬಿ ಕೊಡುವುದು, ಮತ್ತೊಬ್ಬರ ಮನೆಯಲ್ಲಿ ಶ್ರಾದ್ಧಕ್ಕೆ ತಣ್ಣೀರು ಮಡಿಯುಟ್ಟು ಅಡುಗೆ ಮಾಡಿಕೊಡುವುದು, ಇನ್ನೊಂದೆಡೆ ಬಾಣಂತಿ- ಕೂಸಿಗೆ ಎರೆದು ಲೋಬಾನ ಹಾಕುವುದು, ಮತ್ತೊಂದೆಡೆ ಬಾವಿಯಿಂದ ನೀರು ಸೇದಿಕೊಡುವುದು ಹೀಗೆ ಈಕೆಯ ಸೇವೆಗಳಿಗೆ ಕೊನೆಯೆಂಬುದೇ ಇರಲಿಲ್ಲ.

ತಾನು ಸೇವೆಗೈದ ಮನೆಗಳಲ್ಲಿ ಕೊಡುತ್ತಿದ್ದ ಪುಡಿಗಾಸು, ಹಿಟ್ಟು, ಅವಲಕ್ಕಿಗಳಿಂದ ಸಂಸಾರವನ್ನು ಒಬ್ಬಳೇ ತೂಗಿಸುತ್ತಿದ್ದಳೀಕೆ. ಇವಳ ಗಂಡ ಶ್ರೀಧರ ಚಿಕ್ಕಪ್ಪ ಅಲಿಯಾಸ್ ಶ್ರೀಧರಮೂರ್ತಿ, ನಿರ್ದಿಷ್ಟ ಕೆಲಸವೇನೂ ಇರದಿದ್ದ ಕಾಲಯಾಪಕ. ಏನನ್ನೂ ಮಾಡದಿರುವಂತಹ ಸೋಂಬೇರಿತನದ ಜಾಢ್ಯದವನು. ಎರಡು ಹೆಣ್ಣುಮಕ್ಕಳನ್ನು ಬೆಳೆಸುವ ಜವಾಬ್ದಾರಿಯಿದ್ದರೂ ಈತ ಮಾತ್ರ ನಿರಾಮಯಿ. ಮದುವೆಯಾದಾರಭ್ಯ, ನೊಗವೆಳೆಯುವ ಏಕೈಕ ಎತ್ತು ಸುಬ್ಬಲಕ್ಷ್ಮಿ ಚಿಕ್ಕಮ್ಮಳೇ.

ಸಂಬಂಧದ ಕೊಂಡಿಯಿದ್ದರೂ ಶ್ರೀಧರ ಚಿಕ್ಕಪ್ಪನೊಂದಿಗೆ ನಮ್ಮ ಒಡನಾಟ ಅಷ್ಟೇನೂ ಇರಲಿಲ್ಲ. ನನ್ನ ತಂದೆಯವರಿಗಂತೂ ಆತನನ್ನು ಕಂಡರೆ ಅಷ್ಟಕ್ಕಷ್ಟೇ. ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ನನ್ನ ಅಪ್ಪನ ಅಪ್ಪ ಶಾಮರಾಯರೂ ಮತ್ತು ಶ್ರೀಧರ ಚಿಕ್ಕಪ್ಪನ ಅಪ್ಪ ಅಂತರಾಯರೂ ಖಾಸಾ ಅಣ್ಣ– ತಮ್ಮ.

ನಮ್ಮಜ್ಜ ಶಾಮರಾಯರು ಸಭ್ಯ ಮನುಷ್ಯ. ಆದರೆ, ಅಂತರಾಯ ಹಾಗಲ್ಲ. ಚುಟ್ಟ ಸೇದುವುದು ಮತ್ತು ಇಸ್ಪೀಟ್‌ ಆಡುವುದು ಅವನ ಆಜನ್ಮಸಿದ್ಧ ಹಕ್ಕು. ಮೇಲಾಗಿ ಸ್ತ್ರೀಲಂಪಟ ಬೇರೆ. ಅವನ ನಿಜವಾದ ಹೆಸರು ಹನುಮಂತರಾಯ. ಆದರೆ, ಜನಗಳ ಬಾಯಲ್ಲಿ ಅಂತರಾಯ ಆಗಿಬಿಟ್ಟಿದ್ದ. ಇಂತಿಪ್ಪ ಅಂತರಾಯನಿಗೆ ಅನ್ಯಜಾತಿಯ ವಿವಾಹಿತ ಸ್ತ್ರೀಯೊಬ್ಬಳೊಂದಿಗೆ ಸಖ್ಯ ಬೆಳೆಯಿತು. ಕಟ್ಟಿಕೊಂಡವಳಲ್ಲಿ ಹುಟ್ಟಿದ್ದ ಶ್ರೀಧರನ ಮೇಲೆ ಎನಿತೂ ಅಕ್ಕರೆಯಿರದಿದ್ದ ಅವನಿಗೆ ಇಟ್ಟುಕೊಂಡವಳಿಂದ ಹುಟ್ಟಿದ ಮಗನ ಮೇಲೆ ಇನ್ನಿಲ್ಲದ ಮೋಹವಿತ್ತು.

ಈತನ ದುರ್ನಡತೆ ಮತ್ತು ದರ್ಪಗಳಿಂದ ಬೇಸತ್ತಿದ್ದ ಧರ್ಮಪತ್ನಿ ಗುಂಡಮ್ಮ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೆಲ್ಲದರಿಂದ ಬಡವಾಗಿದ್ದು ಚಿಕ್ಕ ಹುಡುಗನಾಗಿದ್ದ ಶ್ರೀಧರಚಿಕ್ಕಪ್ಪ. ಎಲ್ಲಿ ಉಂಡನೋ, ಎಲ್ಲಿ ತಿಂದನೋ, ಒಟ್ಟಿನಲ್ಲಿ ಹೇಗೆ ಹೇಗೋ ಬೆಳೆದ ಹತಭಾಗ್ಯನಾತ. ತನ್ನ ಅನೈತಿಕ ಆಟಗಳಿಂದಾಗಿ ಅಂತರಾಯ ಸಮಾಜದಿಂದ ಬಹಿಷ್ಕೃತನೂ ಆಗಿದ್ದ. ಹಾಗಿದ್ದರೂ ಯಾರ ಅಂಕೆಗೂ ಬಗ್ಗದ ಆನೆಯಂತಹ ಅವನು, ನಡೆದದ್ದೇ ದಾರಿ ಮಾಡಿದ್ದೇ ಆಚಾರ! ಇಂತಹ ಅಂತರಾಯ ಮೂತ್ರದ ಸೋಂಕುಂಟಾಗಿ ಅಕಾಲ ಮರಣಕ್ಕೀಡಾದುದು ದುರ್ದೈವ. ಕಡೆಗಾಲದಲ್ಲಿ ಅವನು ಮೋಹಿಸಿದ್ದ ಆ ಪರಸ್ತ್ರೀ ಕೂಡ ಅವನೊಟ್ಟಿಗಿರದೇ ಒಂದು ರೀತಿ ಬೀದಿಯ ಹೆಣವಾಗಿ ಹೋದನಾತ.

ಅವನ ಸಮಸ್ತ ಆಸ್ತಿಯನ್ನೂ ಅವನ ಇಟ್ಟುಕೊಂಡವಳೇ ಲಪಟಾಯಿಸಿದಳೆಂದು ಬೇರೇ ಹೇಳಬೇಕಾಗಿಲ್ಲ. ಇಂಥ ನಿರ್ಭಾಗ್ಯವಂತನ ಮಗನಾಗಿ ಹುಟ್ಟಿದ್ದ ಶ್ರೀಧರ ಚಿಕ್ಕಪ್ಪ ಈ ಪ್ರಪಂಚದ ಅತಿದೊಡ್ಡ ಹತಭಾಗ್ಯನೆಂದರೆ ಬಹುಶಃ ತಪ್ಪಾಗಲಾರದೇನೋ. ಆದಾಗ್ಯೂ ಯಾವ ಜನ್ಮದ ಸುಕೃತವೋ, ಸುಬ್ಬಲಕ್ಷ್ಮಿ ಚಿಕ್ಕಮ್ಮ ಅವನ ಮಡದಿಯಾಗಿ ಸಿಕ್ಕಿದ್ದಳು.

ಈ ಹಿನ್ನೆಲೆಯೆಲ್ಲಾ ಅಂತಿರಲಿ. ನನಗೆ ವೈಯಕ್ತಿಕವಾಗಿ ಶ್ರೀಧರ ಚಿಕ್ಕಪ್ಪ, ಅದರಲ್ಲೂ ಸುಬ್ಬಲಕ್ಷ್ಮಿ ಚಿಕ್ಕಮ್ಮ ಎಂದರೆ ಅಂತಃಕರಣ ಜಾಸ್ತಿ. ಆದರೆ, ನನ್ನಪ್ಪ ಹಾಗಲ್ಲ. ಅಂತರಾಯನ ಹೆಸರು ಕೇಳಿದರೇ ಉರಿದುಬೀಳುತ್ತಿದ್ದ ಅವರು, ಅವನ ಮಗ ಶ್ರೀಧರಮೂರ್ತಿಯನ್ನೂ ತಿರಸ್ಕಾರದಿಂದ ನೋಡುತ್ತಿದ್ದರು. ಅಂತರಾಯನ ಅನೈತಿಕ ಸಾಹಸಗಳ ಪರಿಣಾಮವಾಗಿ ನಮ್ಮ ತಾತ ಶಾಮರಾಯರು ಊರ ಜನರಿಂದ ಸಾಕಷ್ಟು ಹೀಯಾಳಿಕೆಯನ್ನೆದುರಿಸಿದ್ದರು. ಅದೆಲ್ಲದರ ಕಹಿ ಅನುಭವ ಚಿಕ್ಕ ವಯಸ್ಸಿನಲ್ಲೇ ನಮ್ಮಪ್ಪನ ಮೇಲೂ ಅಳಿಸದಂತೆ ಆಗಿತ್ತು. ಜಾತಿಗೆಟ್ಟ ಕಚ್ಚೆಹರುಕರ ಮನೆತನದವರು! ಎಂದು ಊರ ಜನ ಎಲ್ಲೆಂದರಲ್ಲಿ ಆಡಿಕೊಳ್ಳುತ್ತಿದ್ದುದನ್ನು ನಮ್ಮ ತಂದೆ ಈಗಲೂ ನೆನೆಸಿಕೊಂಡು ವ್ಯಾಕುಲರಾಗುತ್ತಾರೆ.

ಹೀಗಿರುವಾಗ ನಿನ್ನೆ ಇದ್ದಕ್ಕಿದ್ದಂತೆ ಶ್ರೀಧರ ಚಿಕ್ಕಪ್ಪ ನಮ್ಮ ಮನೆಯಲ್ಲಿ ಪ್ರತ್ಯಕ್ಷನಾಗಿದ್ದ. ಅವನ ಹಣೆಯ ಮೇಲಿನ ಚಿಂತೆಯ ಗೆರೆಗಳಲ್ಲಿ ಭಯದ ಬೆವರ ಹನಿಗಳು ಮೂಡಿದ್ದವು. ಅವನ ಮುಖ ನೋಡಲೂ ಇಚ್ಛಿಸದ ಅಪ್ಪ, ಗೋಡೆಕಡೆ ನೋಡುತ್ತಿರುವಾಗ ಇದ್ದಕ್ಕಿದ್ದಂತೆ ಬಿಕ್ಕಿ ಅಳಹತ್ತಿದ ಅವನು ಆಘಾತಕಾರಿ ಸುದ್ದಿಯೊಂದನ್ನು ಅರುಹಿದ. ಅದೇನೆಂದರೆ, ಸುಬ್ಬುಲಕ್ಷ್ಮಿ ಚಿಕ್ಕಮ್ಮನಿಗೆ ಕ್ಯಾನ್ಸರ್! ಅದಕ್ಕಾಗಿ ಹಲವು ಲಕ್ಷಗಳಲ್ಲಿ ದುಡ್ಡು ಬೇಕಾಗಿದ್ದುದರಿಂದ, ನಮ್ಮಪ್ಪನ ಬಳಿ ಧನಸಹಾಯಕ್ಕಾಗಿ ಅಂಗಲಾಚಿದ.

ಆ ಒಂದು ಕ್ಷಣಕ್ಕೆ ಅಧೀರರಾದ ಅಪ್ಪ, ತಕ್ಷಣ ಸಾವರಿಸಿಕೊಂಡು, ಏನೇನೋ ಸಾಂತ್ವನ ಹೇಳಿ ಅವನನ್ನು ಸಾಗಹಾಕಿಬಿಟ್ಟರು. ತುಂಬಾ ಕಸಿವಿಸಿಗೊಂಡ ನಾನು ಆ ಕ್ಷಣವೇ ಅಪ್ಪ, ನೀವೂ ನಿವೃತ್ತ ಸರ್ಕಾರಿ ಉದ್ಯೋಗಿ. ನಾನೂ ಕೂಡ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದೇನೆ. ನಮಗೆ ಹಣಕ್ಕೇನು ಕೊರತೆಯಿದೆ? ಅಂತರಾಯ ಮಾಡಿದ್ದ ತಪ್ಪುಗಳ ದ್ವೇಷವನ್ನು ಮುಗ್ಧನಾದ ಅವನ ಮಗನ ಮೇಲೂ ಸಾಧಿಸಿದರೆ ಯಾವ ನ್ಯಾಯ? ಅಲ್ಲದೇ ಸಮಾಜ ಋಣ, ಭೂತದಯೆ, ಅನುಕಂಪ ಇವುಗಳಿಗೆಲ್ಲ ಬೆಲೆಯಿಲ್ಲವೇ? ನೀವು ಅವನನ್ನು ಬರಿಗೈಲಿ ಕಳಿಸಬಾರದಿತ್ತು. ಇದು ಒಂದು ಹೆಣ್ಣುಮಗಳ ಸಾವುಬದುಕಿನ ಪ್ರಶ್ನೆಎಂದೆ.

ಎನಿತೂ ವಿಚಲಿತರಾಗದ ಅಪ್ಪ, ನೋಡು, ಭಾವಾವೇಶಕ್ಕೊಳಗಾಗಬೇಡ. ನಮ್ಮ ಶಾಸ್ತ್ರಗಳಲ್ಲಿ ಹೇಳಿರುವಂತೆ, ಒಬ್ಬ ವ್ಯಕ್ತಿ ಯ ಪಾಪಫಲ ಅವನ ಪುತ್ರಪೌತ್ರಾದಿಗಳವರೆಗೂ ಹರಿದು ಬರುತ್ತದೆಂಬುದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಮತ್ತೊಂದಿಲ್ಲ. ಅಂತರಾಯನ ಪಾಪಶೇಷ ಅವನ ಸೊಸೆಯನ್ನು ಈ ರೀತಿ ಬಾಧಿಸುವುದು ವಿಧಿ ನಿಯಮವಾಗಿದ್ದರೆ ನಾವದಕ್ಕೆ ತಲೆಬಾಗಲೇಬೇಕು. ನಮ್ಮ ಹಣವನ್ನು ಇಂತಹ ಹತಭಾಗ್ಯರಿಗೆ ಹಂಚಿದರೆ, ಅವರ ಪಾಪ ಬಾಧೆ ನಮಗೆ ತಟ್ಟದಿರುವುದಿಲ್ಲ. ಅಪ್ಪ ಈ ರೀತಿಯ ನಿಲುವು ವ್ಯಕ್ತಪಡಿಸಿದ ಮೇಲೆ ವಿರೋಧಿಸುವ ಧೈರ್ಯ ನನಗೂ ಬರಲಿಲ್ಲ. ಆದರೂ ಮನಸ್ಸಿನ ಕಸಿವಿಸಿ ಹಾಗೇ ಉಳಿದುಕೊಂಡಿತು.

ಮರುದಿನ ಖುದ್ದಾಗಿ ನನ್ನನ್ನು ಹುಡುಕಿಕೊಂಡು ಕಾಲೇಜಿಗೇ ಬಂದ ಶ್ರೀಧರ ಚಿಕ್ಕಪ್ಪ ತುಂಬ ದೈನ್ಯವಾಗಿ ನನ್ನಲ್ಲಿ ಸಹಾಯಕ್ಕಾಗಿ ಬೇಡಿಕೊಂಡ. ಜೊತೆಯಲ್ಲಿ ಎದೆಯುದ್ದ ಬೆಳೆದಿದ್ದ ಇಬ್ಬರು ಹೆಣ್ಣುಮಕ್ಕಳೂ ಇದ್ದರು. ಚಿಕ್ಕಂದಿನಿಂದ ಯಾವ ವಿಷಯದಲ್ಲೂ ಅಪ್ಪನ ಮಾತು ಮೀರದಿದ್ದ ನನಗೆ ಈ ವಿಷಯದಲ್ಲಿ ಹಾಗಿರಲು ಸಾಧ್ಯವಾಗಲಿಲ್ಲ. ತಕ್ಷಣವೇ ನಮ್ಮ ಪ್ರಾಂಶುಪಾಲರಾದಿಯಾಗಿ ಸಿಬ್ಬಂದಿಗೆ ಶ್ರೀಧರ ಚಿಕ್ಕಪ್ಪನನ್ನು ಪರಿಚಯಿಸಿ ವಿಷಯವನ್ನು ಮನದಟ್ಟು ಮಾಡಿಸಿದೆ.

ವಿಷಯವರಿತು ಮನಮಿಡಿದ ಎಲ್ಲರೂ ಅಷ್ಟಿಷ್ಟು ಹಣವನ್ನು ಆ ಕ್ಷಣಕ್ಕೇ ಕೊಟ್ಟರು. ಅನಂತರ ಶ್ರೀಧರ ಚಿಕ್ಕಪ್ಪನನ್ನು ಕರೆದುಕೊಂಡು ಸ್ಥಳೀಯ ಶಾಸಕರ ಮನೆಗೆ ಹೋದೆ. ನಾವು ಹೋದ ಸಮಯಕ್ಕೆ ಶಾಸಕರು ಲಭ್ಯವಿದ್ದು, ಶ್ರೀಧರ ಚಿಕ್ಕಪ್ಪನ ಬವಣೆಯನ್ನೆಲ್ಲ ಆಸ್ಥೆಯಿಂದ ಆಲಿಸಿದರು. ನನ್ನ ಮೇಲೆ ಒಳ್ಳೆಯ ಅಭಿಪ್ರಾಯವಿದ್ದ ಶಾಸಕರು ಕೂಡಲೇ ತಿಜೋರಿಯಿಂದ ಮೂರು ಲಕ್ಷ ಹಣ ತರಿಸಿ ಆತನ ಕೈಗಿತ್ತರು. ನನಗೂ ಹೋದ ತಿಂಗಳಷ್ಟೇ ಅರಿಯರ್ಸ್‌ ಬಂದಿತ್ತು. ಅದರಿಂದ ಎರಡು ಲಕ್ಷ ಹಣ ನೀಡಿದೆ. ನನ್ನ ಸಂಪರ್ಕ ವಲಯದ ಹಲವು ಜನರ ಬಳಿ ಹೋಗಿ ಧನ ಸಂಗ್ರಹ ಮಾಡಿದ್ದಾಯಿತು. ಸುಬ್ಬಲಕ್ಷ್ಮಿ ಚಿಕ್ಕಮ್ಮನ ಪುಣ್ಯ ಗಟ್ಟಿಯಿತ್ತೇನೋ. ನೋಡ ನೋಡುತ್ತಲೇ ಚಿಕಿತ್ಸೆಗೆ ಬೇಕಾಗುವಷ್ಟು ಹಣ ಪವಾಡಸದೃಶವಾಗಿ ಸಂಗ್ರಹವಾಯಿತು. ಅದೃಷ್ಟವಶಾತ್ ಆಕೆಯ ಕ್ಯಾನ್ಸರ್ ಇನ್ನೂ ಪ್ರಾಥಮಿಕ ಹಂತದಲ್ಲಿತ್ತು. ಶಸ್ತ್ರಚಿಕಿತ್ಸೆ ನಿಗದಿಯಾದ ಸಮಯಕ್ಕೆ ಅಗತ್ಯವಾದ ಹಣವನ್ನು ಒದಗಿಸಿದ್ದಕ್ಕೆ ವೈದ್ಯರೂ ಶ್ರೀಧರ ಚಿಕ್ಕಪ್ಪನನ್ನು ಪ್ರಶಂಸಿಸಿದರಂತೆ!

ಒಂದು ವಾರದ ಕೆಳಗೆ ಸುಬ್ಬಲಕ್ಷ್ಮಿ ಚಿಕ್ಕಮ್ಮ ಡಿಸ್‌ಚಾರ್ಜ್ ಆಗಿ ಮನೆಗೆ ಬಂದಿದ್ದಾಳಂತೆ. ಜೀವನಪೂರ್ತಿ ಸೋಂಬೇರಿಯಾಗಿ ಕಾಲಕಳೆದ ಶ್ರೀಧರ ಚಿಕ್ಕಪ್ಪ ಈಗ ಮನೆಯ ನೊಗ ಹೊತ್ತುಕೊಂಡಿದ್ದಾನೆ. ಅಡುಗೆ ಕೆಲಸಕ್ಕೆ ಹೋಗುವುದು, ಬಸ್‌ಸ್ಟಾಂಡ್‌ಗಳಲ್ಲಿ ನ್ಯೂಸ್‌ಪೇಪರ್ ಮಾರುವುದು ಮುಂತಾದ ಕಾಯಕಗಳಲ್ಲಿ ಈಗವನು ಬ್ಯುಸಿ.
ಶ್ರೀಧರ ಚಿಕ್ಕಪ್ಪನಿಗೆ ನಾನು ಇಷ್ಟೆಲ್ಲ ಸಹಾಯ ಮಾಡಿದ್ದು ನಮ್ಮ ತಂದೆಯವರಿಗೂ ತಿಳಿಯಿತು. ಕ್ರುದ್ಧರಾದ ಅವರು ನನ್ನ ಬಳಿ ಆರು ತಿಂಗಳು ಮಾತುಬಿಟ್ಟರು. ಪಾಪಶೇಷದ ಫಲವಿರುವ ಹತಭಾಗ್ಯರಿಗೂ ಒಮ್ಮೊಮ್ಮೆ ವಿಧಿ ಕೈಹಿಡಿದು ರಕ್ಷಿಸುತ್ತದಲ್ಲಾ! ಆ ವಿಧಿಗೆ ನಾವು ತಲೆಬಾಗಲೇಬೇಕು ಎಂದು ಅಪ್ಪನಿಗೆ ಹೇಳಿಬಿಡಬೇಕೆಂದು ಬಹಳ ಸಾರಿ ನನಗನ್ನಿಸಿತು. ಆದರೆ, ಹೇಳಲಿಲ್ಲ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !