ಶುಕ್ರವಾರ, ಜೂನ್ 5, 2020
27 °C

ಕಥೆ | ಕೊನೆ...

ಸದಾಶಿವ್ ಸೊರಟೂರು Updated:

ಅಕ್ಷರ ಗಾತ್ರ : | |

Prajavani

ಅಂಗಾತ ಮಲಗಿಕೊಂಡವಳ ಕಣ್ಣಲ್ಲಿ ನಕ್ಷತ್ರಗಳಿದ್ದವು. ಒಡೆದು ಹೆಂಚಿನಿಂದ ಕಾಣಿಸುತ್ತಿದ್ದದ್ದು ಕೇವಲ ಬೊಗಸೆಯಷ್ಟು ಮಾತ್ರ. ಹಾಗೆ ನಕ್ಷತ್ರಗಳನ್ನು ನೋಡುತ್ತಲೇ ನಿದ್ರೆಗೆ ಜಾರುವ ಪ್ರಯತ್ನದಲ್ಲಿದ್ದಳು. ಪ್ರತಿ ನಕ್ಷತ್ರಗಳು ಹಿತ್ತಲ ಹೂವಿನಷ್ಟೇ ಪರಿಚಿತ. ಎಷ್ಟೋ ಬಾರಿ ತನ್ನ ತಲ್ಲಣಗಳನ್ನು ಅವುಗಳ ಮುಂದಿಟ್ಟು ಹಗುರಾಗುತ್ತಿದ್ದಳು. ನಕ್ಷತ್ರಗಳ ಸಣ್ಣ ಏರುಪೇರುಗಳನ್ನು ಗುರುತಿಸಬಲ್ಲಷ್ಟು ಅವಳಿಗೆ ಅವುಗಳೊಂದಿಗೆ ಸಲುಗೆ. ಒಡೆದ ನಾಲ್ಕಾರು ಹೆಂಚುಗಳು ಅವಳಿಗೆ ಆ ಭಾಗ್ಯವನ್ನು ಕರುಣಿಸಿದ್ದವು. ಅವೇ ಹೆಂಚುಗಳು ಅವಳಿಗೆ ಇನ್ನಿತರ ಭಾಗ್ಯವನ್ನು ಕೂಡ ಕರುಣಿಸಿದ್ದವು. ಮಳೆ ಸುರಿದಾಗ ನಡುಮನೆ ತುಂಬುವಷ್ಟು ನೀರು, ಮಧ್ಯಾಹ್ನ ಬಿಸಿಲಕೋಲಿನ ಬದಲಿಗೆ ಬಿಸಿಲುಕಾಲುವೆ ಹರಿಯುತ್ತಿತ್ತು. ನಕ್ಷತ್ರಗಳನ್ನು ನೋಡುವ ಆಸೆಗೆ ಒಡೆದ ಹೆಂಚುಗಳನ್ನು ಹಾಗೇ ಇಟ್ಟುಕೊಂಡಿರಲಿಲ್ಲ. ಹಂಚು ಬದಲಾಯಿಸಲು ಬೇರೆ ಹೆಂಚಿಲ್ಲ; ಹೆಂಚು ತರಲು ಹಣವಿಲ್ಲ!

ಹೊರಗೆ ಜಗುಲಿಯ ಮೇಲೆ ಗಂಡ ಮಲಗಿಯೇ ಇದ್ದಾನೆ ಎಂಬ ಭಾಸ! ಆದರೆ ಅವನು ಅಲ್ಲಿಂದ ಎದ್ದು ಹೋಗಿ ನಾಳೆಯ ಯುಗಾದಿಗೆ ಆರು ವರ್ಷ. ಆದರೂ ಅವನು ಅಲ್ಲಿಯೇ ಮಲಗಿದ್ದಾನೆ ಅನ್ನುವ ಭಾವನೆ. ಸುಮಾರು ಎಂಟು ವರ್ಷಗಳಿಂದ ಅದೇ ಜಗುಲಿಯ ಮೇಲೆ ರಾತ್ರಿಗಳನ್ನು ಕಳೆದನು. ಹಗಲು ರಾತ್ರಿಗಳಲ್ಲಿ ಅಂಗಳದ ಅಂಚಿನಲ್ಲಿದ್ದ ಚರಂಡಿಯಲ್ಲಿ ಮಳೆಯ ನೀರು, ಕೊಳಕು ನೀರು, ಕಸದ ನೀರು ಏನೆಲ್ಲಾ ಹರಿದು ಹೋಗಿದೆಯೊ! ಮಗನ ನೆವಕ್ಕೆ ಶುರುವಾದ ಜಗಳ ಮಾರಾಮಾರಿಯೇ ಆಗಿ ಗಂಡ ಹೊರಗೆ ಕಟ್ಟೆ ಹಿಡಿದು ಮಲಗಲು ಶುರುವಿಟ್ಟುಕೊಂಡ. ಹಗಲೆಲ್ಲಾ ಕೂಲಿಗೆ ಹೆಮ್ಮೆ ಕಾಯುವುದು, ಸಂಜೆಗೆ ಹೆಂಡತಿ ಇಕ್ಕುತ್ತಿದ್ದ ಎರಡು ಮುದ್ದೆ ಅದಕ್ಕೂ ಮೊದಲು ತಪ್ಪದೇ ಶೇಷನ ಅಂಗಡಿಯ ಎರಡು ಪಾಕೆಟ್ ಸಾರಾಯಿ ಇವಿಷ್ಟು ನಾಗೇಂದ್ರಪ್ಪನ ದಿನದ ಬಾಬ್ತು. ‘ಬದುಕಲ್ಲಿ ಏನಿದೆ?’ ಅನ್ನುವಂತ ನೋಟವನ್ನು ಸದಾ ಮುಖದಲ್ಲಿ ಮೂಡಿಸಿಕೊಂಡು ತಿರುಗುತ್ತಿದ್ದ. ನಾಗೇಂದ್ರಪ್ಪನನ್ನು ಯಾರೂ ದಾದು ಮಾಡುತ್ತಿರಲಿಲ್ಲ. ನಾಗೇಂದ್ರಪ್ಪ, ಎಮ್ಮೆ ನಾಗೇಂದ್ರಪ್ಪನಾದ. ಹೆಂಡತಿ, ಮನೆ, ಮಗನ ವಿಷಯದಲ್ಲಿ ಸಂಪೂರ್ಣ ನಿರ್ಲಿಪ್ತನಾದ. ಹೀಗೆ ಕಟ್ಟೆಯ ಮೇಲೆಯೇ ಬದುಕಿನ ಕಪ್ಪನ್ನು ಧರಿಸಿಕೊಂಡವನಂತೆ ರಾತ್ರಿಗಳನ್ನು ಮುಗಿಸಿ ಒಂದಿನ ಬೆಳಕು ಕಾಣುವ ಮೊದಲೇ ಗಾಳಿಗೆ ಉಸಿರು ಒಪ್ಪಿಸಿ ಹೊರಟು ಹೋಗಿದ್ದ. ಅವನು ಹೋಗಿ ಇಷ್ಟು ವರ್ಷಗಳಾದರೂ ರತ್ನವ್ವನಿಗೆ ಗಂಡ ಅದೇ ಜಗುಲಿಯ ಮೇಲೆ ಅಲ್ಲಲ್ಲಿ ಹರಿದ ಕೌದಿ ಹೊದ್ದುಕೊಂಡು ಮಲಗಿದ್ದಾನೆ ಅನಿಸುತ್ತಿತ್ತು. ಗಂಡನನ್ನು ಎಷ್ಟೇ ಕೇಳಿಕೊಂಡರೂ ಒಳ ಹೋಗಿ ಮಲಗಿಕೊಂಡಿರಲಿಲ್ಲ. ಸಣ್ಣ ಜಗಳಕ್ಕೆ ಹೀಗಾಡಿದ ನಾಗೇಂದ್ರಪ್ಪ ಈ ನಡೆ ಊರಿನವರಿಗೆ ಆಶ್ಚರ್ಯಕರವಾಗಿಯೆ ಉಳಿದು ಹೋಯಿತು.

ಒಡೆದ ಹೆಂಚಿನಿಂದ ನಕ್ಷತ್ರಗಳನ್ನು ನೋಡುತ್ತಿದ್ದ ಅವಳಿಗೆ ಕಿವಿಗಳಲ್ಲಿ ಇನ್ನೂ ಢಂ ಢಂ ಸದ್ದಿತ್ತು. ಬೊಗಸೆಯಷ್ಟು ನಕ್ಷತ್ರಗಳು ಮತ್ತು ಈ ಸದ್ದು ಅವಳ ನಿದ್ದೆಗೆ ಎಂದೂ ಕೂಡ ಜೊತೆಯೇ! ಅವಳ ನಿದ್ದೆಯಾದರೂ ಎಷ್ಟೊತ್ತಿನದು? ನಾಲ್ಕು ಗಂಟೆ ಮಲಗಿದರೆ ಹೆಚ್ಚು! "ಈಗೀಗಂತೂ ನಿದ್ದೆ ಬರವಲ್ದು ನೋಡು" ಅಂತ ಹೇಳಿಕೊಳ್ಳುವುದೇ ಆಗ್ತಿತ್ತು. ಹೇಳಿಕೊಂಡರೇನು ನಿದ್ದೆ ಬಂದೀತೆ? ಮನೆಯ ಅಂಗಳಕ್ಕೆ ಬಂದು ನಿಂತು ಎಡಕ್ಕೆ ತಿರುಗಿದರೆ ಪೂರ್ವಕ್ಕೆ ಮುಖ ಮಾಡಿ ನಿಂತ ಬಳಗದ ಮನೆ ಕಾಣುತ್ತದೆ. ಬಳಗದ ಮನೆಯ ಮುಂದೆ ಎರಡೂ ಕೇರಿಗಳಿಗೆ ಹೋಗುವ ಹಾದಿ ಕವಲೊಡೆಯುತ್ತದೆ. ಬಳಗದ ಮನೆ ಊರಿನಷ್ಟೇ ಹಳೆಯದು ಅಂತ ಮಾತನಾಡಿಕೊಳ್ಳುತ್ತಾರೆ. ಅಲ್ಲಿ ಬಳಗದವರೆಲ್ಲಾ ಆಗಾಗ್ಗೆ ತಮ್ಮ ಬಳಗದ ಕಷ್ಟ ಸುಖದ ಬಗ್ಗೆ ಮೀಟಿಂಗ್ ಕೂರುತ್ತಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಬಳಗದ ಮನೆ ಬಳಕೆಯಾಗುತ್ತಿದ್ದದ್ದು ಡೊಳ್ಳು ಬಾರಿಸುವುದನ್ನು ಕಲಿಯಲು. ಊರಿನ ಹುಡುಗರೆಲ್ಲ ರಾತ್ರಿ ಊಟ ಮುಗಿಸಿಕೊಂಡು ಬಂದು ಡೊಳ್ಳು ಬಾರಿಸುತ್ತಿದ್ದರು. ಬಾಗಿಲುಗಳನ್ನು ಇಕ್ಕಿಕೊಂಡು ಢಂ ಢಂ ಅಂತ ಬಡಿಯುತ್ತಿದ್ದರು. ಸುತ್ತಮುತ್ತಲಿನ ಮನೆಗಳು ಆ ಶಬ್ದಕ್ಕೆ ಬಡಬಡ ಅನ್ನುತ್ತಿದ್ದವು. ಜನಗಳಿಗೆಲ್ಲಾ ಅಭ್ಯಾಸವಾಗಿ ಹೋಗಿತ್ತು. ಯಾವತ್ತಾದರೂ ಒಂದಿನ ಹುಡುಗರು ಬಂದಿಲ್ಲವೆಂದರೆ "ಇದೇನಿದು ಕೇರಿ ಬಿಕೋ ಅಂತೈತೆ ಕಳೆನೇ ಇಲ್ಲ, ಏನೇ ಆಗಲಿ ಡೊಳ್ಳು ಮನಸ್ಸಿಗೊಂದು ಸಮಾಧಾನ" ಅನ್ನುತ್ತಿದ್ದರು. ಡೊಳ್ಳಿನ ಹುಡುಗರು ಮನೆಗೆ ಹೋಗಿ ಮಲಗಿದರು ಎಷ್ಟೊ ದಿನಗಳು ರತ್ನವ್ವನ ಪಾಲಿಗೆ ನಿದ್ದೆ ಸುಳಿಯುತ್ತಿರಲಿಲ್ಲ.

ನಕ್ಷತ್ರಗಳಿಂದ ಕಣ್ಣು ಕದಲಿಸಿ ಮಗ್ಗುಲಾದಳು. ಡೊಳ್ಳಿನ ಸದ್ದಿನಿಂದ ಕಿವಿ ಕದಲಿಸಲಾಗುವುದಿಲ್ಲವಲ್ಲ; ಢಂ ಢಂ ಸದ್ದು ಬಂದು ಕಿವಿಗೆ ಬಡಿಯುತ್ತಲೇ ಇತ್ತು. ಬರೀ ಹೊರಳಿದರೆ ಸಾಕು ನಕ್ಷತ್ರಗಳು ಕಾಣಲಾರವು ಆದರೆ ಅದರಷ್ಟೇ ಸುಲಭಕ್ಕೆ ಡೊಳ್ಳಿನ ಸದ್ದನ್ನು ದೂರ ಮಾಡುವುದು ಹೇಗೆ? ಅವಳೊಳಗೆ ಯೋಚನೆಗಳ ಗುಣಿ ಬಡಿತ, ಹೊರಗೆ ಡೊಳ್ಳಿನ ಸದ್ದು.. ಎರಡಕ್ಕೂ ಬಡಿಯುವುದೊಂದೆ ಕೆಲಸ. ಡೊಳ್ಳಿನ ಸದ್ದು ಇನ್ನೊಂದು ಗಂಟೆಯಲ್ಲಿ ನಿಲ್ಲಬಹುದು. ಆದರೆ ಯೋಚನೆಗಳು? ಮತ್ತೊಮ್ಮೆ ಇನ್ನೊಂದು ದಿಕ್ಕಿಗೆ ಹೊರಳಿದಳು. ನಿದ್ದೆ ಬರುವುದಂತೂ ದೂರವಿತ್ತು! ಎರಡೆರಡು ಸದ್ದುಗಳು ಒಳಗೂ ಹೊರಗೂ ಬಾರಿಸುತ್ತಿರುವಾಗ ನಿದ್ದೆಯಾದರೂ ಹೇಗೆ ಬಂದೀತು? ಮುರಿದ ಹಂಚಿನ ಆಚೆಯಿಂದ ನಕ್ಷತ್ರಗಳು ಅಸಹಾಯಕರಾಗಿ ನೋಡುತ್ತಿದ್ದವು. ರಾತ್ರಿಯಂತೂ ನಿತ್ಯವೂ ಇದನ್ನು ನೋಡಿ ನೋಡಿ ಈ ನಡುವೆ ಪೂರ್ಣ ಮೌನವಾಗಿತ್ತು. ಗೋಡೆಗಳು, ನೆಲಗಳು ಕತ್ತಲಿನ ಕೃಪೆಯಿಂದ ಇದ್ಯಾವುದನ್ನು ಕಾಣದೆ ನೆಮ್ಮದಿಯಾಗಿದ್ದವು. ದಿನವಿಡೀ ಹೊಲದಲ್ಲಿ ಕಿತ್ತ ಕಳೆ ತೊಡೆ ಮತ್ತು ಬೆನ್ನಿನ ಭಾಗದಲ್ಲಿ ನೋವು ತರಿಸುತ್ತಿದ್ದರೂ ಆ ನೋವುಗಳು ಕೂಡ ರತ್ನವ್ವನನ್ನು ನಿದ್ದೆಗೆ ಎಳೆಯಲು ಸೋತಿದ್ದವು.

ಮಗ ನಾಗನದೇ ನೆನಪು. "ಬೆಂಗ್ಳೂರಾಗೂ ಈಗ ರಾತ್ರಿಯಾಗಿರ್ಬೇಕು, ಮಲ್ಗಿರಬೇಕು." ಅಂದುಕೊಂಡಳು. ಬೆಂಗಳೂರು ಅಂದರೆ ಅದ್ಯಾವುದೊ ದೇಶ ಎಂಬುದೇ ರತ್ನವ್ವನ ಭಾವನೆ. ಶಾಲೆಯನ್ನು ನೋಡದ ರತ್ನವ್ವನಿಗೆ ತಾಲೂಕು, ಜಿಲ್ಲೆ, ರಾಜ್ಯ ಅನ್ನುವುದು ಕಲ್ಪನೆಗೂ ನಿಲುಕದ್ದು. ನಿಲುಕಿಸಿಕೊಂಡು ಅವಳೇನಾದರೂ ಚುನಾವಣೆಗೆ ನಿಲ್ಲಬೇಕಿತ್ತೆ? "ನಾಗ ಬ್ಯೆಂಗ್ಳೂರು ದೇಸಕ್ಕೆ ಹೋಗ್ಯಾನೆ" ಅಂತ ಹೊಲದಾಗೆ ಕಳೆ ಕೀಳುತ್ತಾ ಹೇಳುತ್ತಲೇ ಇರುತ್ತಿದ್ದಳು. ಅಪರೂಪಕ್ಕೆ ಹೊನ್ನಾಳಿಗೆ ಹೋದ್ರೇನೆ "ಇದೆಂತ ಊರಪ್ಪ" ಅಂತ ಭಯ ಪಡುತ್ತಿದ್ದ ರತ್ನವ್ವಗೆ ನಾಗ "ಬೆಂಗಳೂರು ಅಂದ್ರೆ ಹೊನ್ನಾಳಿಗಿಂತ ನೂರರಷ್ಟು ದೊಡ್ಡದವ್ವೊ" ಅಂದಿದ್ದನ್ನು ಕೇಳಿಸಿಕೊಂಡು ಕಣ್ ಕಣ್ ಬಿಟ್ಟಿದ್ದಳು. ಈಗಲೂ 'ಬೆಂಗಳೂರು' ಅನ್ನುವ ಪದ ಕೇಳಿದರೆ ಸಾಕು ಅವಳ ಕಣ್ಣಿನಲ್ಲಿ ಭಯ ತುಂಬಿದ ಸಣ್ಣ ನಡುಕ ಕಾಣಿಸುತ್ತಿತ್ತು.

ಕೈಗೆ ಸಿಗದಷ್ಟು ಮಗ ಮುಂದೆ ಹೋಗಿಬಿಟ್ಟನೆ? ಅನ್ನಿಸುತ್ತಿತ್ತು ರತ್ನವ್ವನಿಗೆ. ಹೋಗಿ ಎರಡು ವರ್ಷ ಆಗಿದೆ. "ಅವ್ವೊ ಅವ್ವೊ.." ಅಂದ್ಕೊಂಡಿದ್ದವನು ಅವ್ವನ ನೆನಪು ಬರದಷ್ಟೂ ಉಳಿದು ಬಿಟ್ಟನೆ? "ಕೆಲ್ಸ ಏನ್ ಮಾಡ್ಕೊಂಡಿದ್ದೀಯ ಮಗಾ?" ಅಂದರೆ ಅಡುಗೆ ಬಡ್ಸೋಕೆ ಹೋಗ್ತೀನಿ ಅಂತಾನೆ. ಕೆಲ ಸಾರಿ ಫ್ಯಾಕ್ಟರಿಗೆ ಅಂತಾನೆ, ಅಂಗಡಿಲಿ ಸಾಮಾನು ಕೊಡ್ತೀನಿ ಅಂತಾನೆ. ಇಂತಹ ಕೆಲಸಗಳಾಗಿಯೂ ವರ್ಷಾನುಗಟ್ಟಲೆ ಊರಿಗೆ ಬರದೇ ಇರೋದು ಏನ್ ಇರುತ್ತೆ? ಅಂತ ಯೋಚಿಸಿ ಯೋಚಿಸಿಯೇ ಸೋಲುತ್ತಿದ್ದಳು.

ಬೆಳಿಗ್ಗೆಯಷ್ಟೇ ಬೆಂಗಳೂರಿನಿಂದ ಬಂದ ಮಹೇಶ ಮನೆಗೆ ಬಂದು ಒಂದು ದೊಡ್ಡ ಟಿವಿ ಇಳಿಸಿ ಹೋಗಿದ್ದ. ಟಿವಿಯಲ್ಲಿ ಅಂತಹ ದೊಡ್ಡದ್ದು ಇರುತ್ತದೆ ಅನ್ನೋದು ಅವಳಿಗೆ ಗೊತ್ತೇ ಇರಲಿಲ್ಲ. "ಅವ್ವೊ ಮಹೇಶ ಟಿವಿ ಕೊಟ್ನಾ?" ಅಂತ ಫೋನ್ ಮಾಡಿ "ಹೂಂ" ಅಂದಿದ್ದೆ "ಆಮೇಲೆ ಮಾಡ್ತೀನಿ" ಅಂತ ಕಟ್ ಮಾಡಿದ್ದ. ಒಡೆದ ಹಂಚು, ಮಳೆ ಬಂದರೆ ಕೆರೆಯಾಗುವ ಮನೆ, ನಡುಮನೆ ಅಡುಗೆ ಮಾಡುವ ಜಾಗಕ್ಕೂ ಸೇರಿ ಒಂದೇ ಲೈಟು, ಯಾವಾಗ ಬೇಕಾದರೂ ಮುರಿದು ಹೋಗುವಂತಹ ಹಿತ್ತಲಿನ ಬಾಗಿಲು. ಇವುಗಳ ಮಧ್ಯೆ ದೊಡ್ಡ ಟವಾಲಿನ ಗಾತ್ರದ ಟಿವಿ. ಯಾಕೋ ಈ ವಿಚಾರವೊಂದು ಯೋಚನೆಗೂ ಕೂಡ ಒಗ್ಗಿಸಿಕೊಳ್ಳದಷ್ಟು ತಿರಸ್ಕಾರವೆನಿಸಿತು. ಮಗನಿಗೆ 'ಅವ್ವ.. ಮನೆ..' ಅದರ ಸ್ಥಿತಿಯ ಕಲ್ಪನೆಯೂ ಕೂಡ ಇಲ್ಲವೇನೋ ಅಂದುಕೊಂಡು ದುಃಖವೆನಿಸಿತು. ಕೆಲಸಕ್ಕೆ ಹೋದ ಜಾಗದಲ್ಲೆಲ್ಲ ಕಾಣುವ ದೊಡ್ಡ ಟಿವಿಯನ್ನು ನೋಡಿ ನೋಡಿ ತಾನೂ ಕೂಡ ಅಷ್ಟು ದೊಡ್ಡ ಟಿವಿ ಕೊಂಡರೆ ಅವರಷ್ಟೇ ದೊಡ್ಡವನಾದೆ ಅನ್ನುವ ಎಣಿಕೆಯೆ ಮಗನದು? ಪ್ರಶ್ನಿಸಿಕೊಂಡಳು. ಯಾಕೋ ವಿಚಿತ್ರವೆನಿಸತೊಡಗಿತು. ಇಡೀ ಈ ಎರಡು ವರ್ಷದಲ್ಲಿ ಮಗನಿಂದ ಮನೆಗೆ ಅಂತ ಬಂದಿದ್ದು ಈ ಟಿವಿ ಒಂದೇ! ಹೀಗೆ ಎಂದೆಂದೊ ಬಂದಾಗ ರತ್ನವ್ವ ಬೇಡವೆಂದರೂ ಐವತ್ತು ನೂರು ಕೊಟ್ಟು ಕೊಟ್ಟು ಹೋಗಿದ್ದನಷ್ಟೇ! ಇದೆಲ್ಲವನ್ನು ಕಾಣುತ್ತಿದ್ದ ರತ್ನವ್ವನಿಗೆ ಇವನು ನನ್ನ ಮಗನೇ ಅಲ್ಲ, ಈ ಮನೆಯ ನಾಗ ಅಲ್ಲ ಅನ್ನಿಸಿಬಿಡುತ್ತಿತ್ತು. ಬೆಂಗಳೂರು ಹೀಗೆ ಎಷ್ಟು ಜನ ಮಕ್ಕಳನ್ನು ಊರಿನಿಂದ, ಮನೆಯಿಂದ, ತಾಯಂದಿರಿಂದ ಎಳೆದುಕೊಂಡು ಹೋಗಿ ತನ್ನೊಳಗೆ ಸುರಿದುಕೊಂಡು ಬದಲಾಯಿಸಿಬಿಟ್ಟಿದೆಯೊ? ಮನೆಗಳನ್ನು ಮಾನಗಳನ್ನು ಅನಾಥರನ್ನಾಗಿಸಿದೆಯೊ? ಅಂದುಕೊಂಡಳು. ಅವಳ ಕಣ್ಣಲ್ಲಿ ಈಗ ಬೆಂಗಳೂರಿನ ಕುರಿತಾಗಿ ಭಯದ ಜೊತೆ ಒಂದಷ್ಟು ಅಸಹ್ಯವೂ ಮೂಡತೊಡಗಿತು.

ಇಂತಹ ವಿಚಾರಗಳು ಮನಸ್ಸಿನೊಳಗೆ ಕುದಿಯುತ್ತಿರುವಾಗ ನಿದ್ದೆಯಾದರೂ ಹೇಗೆ ಬಂದೀತು? ಡೊಳ್ಳಿನ ಸದ್ದು ಈಗ ನಿಂತು ಹೋಗಿತ್ತು. ಮನೆಯ ಹಿತ್ತಲಿನಿಂದ ಬರುತ್ತಿದ್ದ ಜೀರುಂಡೆ ಸದ್ದು ಮುಂದುವರೆದಿತ್ತು. ಹೊತ್ತು ಮಧ್ಯರಾತ್ರಿಯನ್ನು ಮೀರಿತು. ಬಲವಂತ ಮಾಡಿ ಕಣ್ಮುಚ್ಚಿಕೊಂಡಳು. ಇಲ್ಲದಿದ್ದರೆ ನಾಳೆ ಹೊಲದಲ್ಲಿ ಕೆಲಸ ಮಾಡಲು ಸಾಧ್ಯವಿರಲಿಲ್ಲ. ಯಾವಾಗ ಅವಳ ಕಣ್ಣಿಗೆ ನಿದ್ದೆ ಮೆತ್ತಿಕೊಂಡಿತೊ ಗೊತ್ತಾಗಲಿಲ್ಲ!

****
ಮನೆ ಬಿಟ್ಟು ಹೋಗಿದ್ದ ಚಂದ್ರ ಒಂದು ವರ್ಷದ ನಂತರ ಊರಿಗೆ ಬಂದಿಳಿದಾಗ ಊರಿನ ಜನ ಕಣ್ಣು ಬಾಯಿ ಬಿಟ್ಟು ನೋಡಿದ್ದರು. ಅದೇನೊ ಕದ್ದು ಅಪ್ಪನ ಕೈಲಿ ಏಟು ತಿಂದು ಊರು ಬಿಟ್ಟಿದ್ದ. ಊರಿಗೆ ಬಂದಾಗ ಜೀನ್ಸ್ ಪ್ಯಾಂಟು, ಟೀ-ಶರ್ಟು, ಸ್ಕ್ರೀನ್ ಮೇಲೆ ತೀಡುವ ಮೊಬೈಲು, ಎಡಗಿವಿಗೆ ಒಂದು ಚಿಕ್ಕೋಲೆ, ಕೆಂಪಿಗೆ ತಿರುಗಿದ್ದ ಎಣ್ಣೆಗೆಂಪಿನ ಮೈ ಬಣ್ಣ, ಯವ್ವೊ, ಯಪ್ಪೊ, ಯಾಕ್ಲಾ ಅನ್ನುವ ಮಾತುಗಳು ಅಪ್ಪ, ಯಾಕೋ ಫ್ರೆಂಡ್, ಹೌದಾ, ಎಸ್, ಮಗಾ ಅಲ್ವಾ ರೀತಿಗೆ ತಿರುಗಿದ್ದು ಊರಿನವರ ತಲೆ ಕೆಡಿಸಿತ್ತು. ಚಂದ್ರ ಇಡೀ ಊರಿಗೆ ಒಂದು ಆಶ್ಚರ್ಯವೇ ಆಗಿ ಹೋಗಿದ್ದ. "ದೊಡ್ ಸಾಹುಕಾರ ಹಾಗ್ಯಾನಂತೆ ಚಂದ್ರ" ಅನ್ನುವ ಮಾತುಗಳು ಊರಿನಲ್ಲಿ ಸಾಮಾನ್ಯವಾಗಿ ಬಿಟ್ಟಿದ್ದವು. ಜನ ತಮ್ಮ ಮಕ್ಕಳಿಗೂ "ನೋಡು ಚಂದ್ರನ ನೀನೂ ಇದ್ದೀಯ!?" ಅನ್ನೊ ತೊಡಗಿದರು. ಬೆಂಗಳೂರಿನಲ್ಲಿ ತಾನೇನು ಮಾಡ್ತಿದೀನಿ ಅನ್ನುವ ಗುಟ್ಟನ್ನು ಕೊನೆಗೂ ಬಿಟ್ಟುಕೊಟ್ಟಿರಲಿಲ್ಲ. ಹೋಗುವಾಗ ನಾಲ್ಕು ಹುಡುಗರನ್ನು ಕರೆದುಕೊಂಡೆ ಹೋಗಿದ್ದ. ಹೀಗೆ ಹೋಗಿದ್ದ ಆ ನಾಲ್ಕು ಹುಡುಗರು ಮೂರಾಲ್ಕು ತಿಂಗಳಿಗೆ ಚಂದ್ರನ ರಾಯಭಾರಿಗಳಂತೆಯೆ ಬಂದಿದ್ದರು.. ಭಲೇ ಪಂಕಾಗಿದ್ದರು. "ಚಂದ್ರ ಬೆಂಗ್ಳೂರಲ್ಲಿ ದೊಡ್ಡ ವ್ಯವಹಾರ ನಡೆಸ್ಯಾನೆ" ಅನ್ನುವ ಮಾತುಗಳು ಮತ್ತೆ ಈಗ ಊರಲ್ಲಿ ಚಲಾವಣೆಗೆ ಬಂದವು.

ಅವರನ್ನು ನೋಡಿದ ನಾಗನಿಗೆ ಬೆಂಗಳೂರಿಗೆ ಹಾರುವ ಹುಕಿ ಹುಟ್ಟಿಕೊಂಡಿತ್ತು. ಅವ್ವನ ಜೊತೆ ಕೂಲಿಗೆ ಹೋಗಿ ರಾತ್ರಿ ಬಂದು ಮುದ್ದೆ ಉಂಡು ಮಲಗುತ್ತಿದ್ದ ನಾಗನಿಗೆ 'ನಾನೇಕೆ ಬೆಂಗ್ಳೂರಿಗೆ ಹೋಗಬಾರದು?' ಅನಿಸಿತ್ತು. ಅವ್ವ ಕಳ್ಸಲ್ಲ ಅನ್ನೋದು ಕೂಡ ನಾಗನಿಗೆ ಚೆನ್ನಾಗಿಯೆ ಗೊತ್ತಿತ್ತು. ಊರಲ್ಲಿ ಕೆಲವು ಹುಡುಗರು ಪೋಲಿ ತಿರುಗುತ್ತಿರುವಾಗ ತನ್ನ ಮಗ ಅವರ ಜೊತೆ ಸೇರದೆ ತನ್ನೊಂದಿಗೆ ಕೂಲಿಗೆ ಬಂದು ದುಡಿತ್ತಾನೆ ಅನ್ನುವ ವಿಷಯಕ್ಕೆ ಮಗನ ಮೇಲೆ ಹೆಚ್ಚು ಕಕ್ಕುಲಾತಿ.

"ಅವ್ವೊ ನಾನು ಬೆಂಗ್ಳೂರಿಗೆ ಹೋಗ್ಲಾ?’ ಅಂತ ನಾಗ ಅಂದಾಗ ರತ್ನವ್ವನಿಗೆ ದಿಗಿಲಾಗಿತ್ತು. "ನಮ್ಮಂಥೋರಿಗೆ ಬೆಂಗ್ಳೂರು ಯಾಕ್ಲಾ ಮಗಾ? ಅಲ್ದೆ, ಗೊತ್ತು ಗುರಚಾರ ಇಲ್ಲದ ಜಾಗ ನಮ್ಗೆ ಯಾಕೆ ಬೇಕು? ಬ್ಯಾಡಕಣಪ್ಪ ನಾಗ" ಅಂದಿದ್ದಳು. ನಾಗನ ಒಳ ಆಸೆ ತಾಯಿಯ ಈ ಮಾತಿನಿಂದ ಸುಮ್ಮನಾಗುವಂತದ್ದಲ್ಲ. ಎರಡು ಮೂರು ದಿನಕ್ಕಾಗಲೇ ಅವ್ವ ಒಪ್ಪದೇ ಇದ್ರೂ ಹೋಗಿ ಬಿಡಬೇಕು ಅನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದ. ತಾಯಿ ಬಳಿ ಅದೇ ವಿಚಾರ ಪೀಡಿಸುತ್ತಿದ್ದ. "ಎಷ್ಟ್ ದಿನಾಂತ ಕೂಲಿ ಮಾಡ್ತಾನೆ ಇರೋದವ್ವೊ. ಬೆಂಗ್ಳೂರಿಗೆ ಹೋಗಿ ದುಡ್ಕೊಂಡು ಬರ್ತೀನಿ ಇರು" ಅಂತ ಏನೇನೊ ಪೂಸಿ ಮಾಡಿ ಕೊನೆಗೂ ತಾಯಿಯನ್ನು ‘ಹೂಂ..’ ಅನಿಸಿದ್ದ. ರತ್ನವ್ವ ನಾಲ್ಕು ಹನಿ ಕಣ್ಣೀರು ಹಾಕಿಯೇ ಹೂಂ ಅಂದಿದ್ದಳು. ವಿಷಯ ಗಂಡ ನಾಗೇಂದ್ರಪ್ಪನಿಗೆ ತಿಳಿದು ಕೂಗಾಡಿದ್ದ. "ಯಾಕಂತೆ ಬೆಂಗ್ಳೂರಿಗೆ?" ಅಂತ ನಾಗನನ್ನು ಹೊಡೆಯೋಕೆ ಹೋಗಿದ್ದ. ತಾಯಿ ನಾಗನ ಪರವಹಿಸಿ ಮಾತಾಡಿದ್ದಳು. ಮಾತಿಗೆ ಮಾತು ಸೇರಿ ದೊಡ್ಡ ಜಗಳವೇ ಆಗಿತ್ತು. ನಾಗೇಂದ್ರಪ್ಪ ಬೇಸರಪಟ್ಟುಕೊಂಡು ದಿನಗಳನ್ನು ಮನೆಯ ಜಗಲಿ ಸೀಮಿತಗೊಳಿಸಿಕೊಂಡಿದ್ದ.

ಇದ್ದ ಎರಡು ಜೊತೆ ಅಂಗಿ ಮತ್ತು ಟವಲ್ಲನ್ನು ಒಂದು ಕಪ್ಪನೆಯ ಪ್ಲಾಸ್ಟಿಕ್ ಚೀಲದಲ್ಲಿಟ್ಟುಕೊಂಡು ಹೊರಟು ನಿಂತ ನಾಗ. ರತ್ನವ್ವ ಮಗನಿಗೆ ನೂರರ ನಾಲ್ಕು ನೋಟುಗಳನ್ನು ಕೈಗಿಟ್ಟದ್ದಳು. ದುಃಖ ನುಗ್ಗಿ ಬರುತ್ತಿದ್ದರೂ ಮಗ ಹೊರಟು ನಿಂತಾಗ ಅಳುತ್ತಾ ಕಳಿಸಬಾರದು ಅಂತ ತಡೆದುಕೊಂಡಿದ್ದಳು. ನಾಗ ಯಾವತ್ತೂ ತಾಯಿಯ ಕಾಲಿಗೆ ನಮಸ್ಕಾರ ಮಾಡದವನು ಇಂದೇನಾಯ್ತೊ ಅಡ್ಡಬಿದ್ದು ನಮಸ್ಕರಿಸಿದ. ರತ್ನವ್ವನಿಗೆ ದುಃಖವನ್ನಂತೂ ತಡೆಯಲಾಗದೆ ಕಣ್ಣೀರು ಹಾಕಿಯೇ ಬಿಟ್ಟಿದ್ದಳು. ಸೀಮೆಎಣ್ಣೆ ಬುಡ್ಡಿ ಬೆಳಕಿನಲ್ಲಿ ತಾಯಿಯ ಮುಖ ಅವನಿಗೆ ಸರಿಯಾಗಿ ಕಾಣಲಿಲ್ಲ. ತಾಯಿಯ ಮನಸ್ಸನಂತೂ ಅವನು ಬೆಳಕಿನಲ್ಲೂ ನೋಡಿಕೊಂಡಿರಲಿಲ್ಲ. ಬೆಂಗಳೂರಿನಿಂದ ಬಂದಿದ್ದ ಹುಡುಗರ ಜೊತೆಯಾಗಿ ಹೊರಟುಹೋದ. ಆಂಜನೇಯ ಗುಡಿಯವರೆಗೂ ನಡೆದು ಹೋಗುವವರೆಗೂ ಕಂಡ ನಾಗ ನಂತರ ತಿರುವಿನಲ್ಲಿ ನಡೆದು ಇಲ್ಲವಾದ. ಇತರ ಹುಡುಗರ ಜೊತೆ ಮರೆಯಾದ. ಮರಳಿ ನಡುಮನೆಗೆ ಕಾಲಿಟ್ಟ ರತ್ನವ್ವಳಿಗೆ ದುಃಖ ಉಕ್ಕಿ ಬಂದಿತ್ತು. ನಾಗನನ್ನು ಹೀಗೆ ಕಳುಹಿಸಿ ನಾನು ಅಳುತ್ತ ಕೂತರೆ ಒಳ್ಳೆಯದಾಗಿಲ್ಲ ಅಂತ ಸುಮ್ಮನೆ ಕೂತಿದ್ದಳು. ಬುಡ್ಡಿ ಪ್ರಯಾಸಪಟ್ಟು ಉರಿಯುತ್ತಿತ್ತು. ಬುಡ್ಡಿಯದು ಉರಿಯುವ ಕೆಲಸವಷ್ಟೇ, ಅದು ಚೆಲ್ಲುವ ಬೆಳಕಿನ ಮೇಲೆ ಅದಕ್ಕೆ ಅಧಿಕಾರವಿಲ್ಲ. ಯಾವ ನೆರಳನ್ನು ಹೇಗೆ ಬೇಕಾದರೂ ಮೂಡಿಸಿಕೊಳ್ಳುವ ಅಧಿಕಾರ ಪೂರ್ತಿ ಬೆಳಕಿನದು.

****

ದೊಡ್ಡ ಬಾಯಿ, ಮುಖದ ತುಂಬಾ ಕಣ್ಣುಗಳು. ಪ್ರತಿ ಕಣ್ಣುಗಳಲ್ಲೂ ಹಳದಿ ಬಣ್ಣದ ಬೆಳಕು ಟಾರ್ಚ್‍ನಿಂದ ಸುರಿದಂತೆ ಸುರಿಯುತ್ತಿತ್ತು. ಹಣೆಯ ಮೇಲೊಂದು ಎತ್ತರದ ಕಂಬು. ಕಂಬಿನೊಳಗೆ ಜಗಮಗ ಲೈಟು. ಬೆಳ್ಳಗಿನ ಪ್ರಾಣಿ. ದೊಡ್ಡ ಹೊಟ್ಟೆ, ಎತ್ತರದ ಕಾಲುಗಳು. ಉದ್ದನೆಯ ಬಾಲ, ಆನೆಯಂತಿತ್ತು. ರತ್ನವ್ವನನ್ನು ನೋಡಿದ್ದೆ ಅವಳ ಕಡೆ ಓಡಿ ಬರತೊಡಗಿತು. ನಾಗ ತುಂಬಾ ಸಣ್ಣವನಾಗಿ ಮಣ್ಣಲ್ಲಿ ಆಡುತ್ತಿದ್ದ. ಮನೆಯ ಕಡೆ ರಭಸವಾಗಿ ಓಡಿ ಬರತೊಡಗಿತು. ಎಂದೂ ಕೂಡ ನೋಡಿಯೇ ಇರದ ಪ್ರಾಣಿಯ ಕಂಡು ರತ್ನವ್ವನಿಗೆ ಭಯವಾಯಿತು. ನಾಗನನ್ನು ತುಳಿದೀತು ಅಂತ ಜೋರಾಗಿ "ಮಗನೇ.." ಅಂತ ಕೂಗಿಕೊಳ್ಳುತ್ತಾ ಹೋಗುವುದರೊಳಗೆ ಆ ಪ್ರಾಣಿ ನಾಗನನ್ನು ಒಂದೇ ಉಸಿರಿಗೆ ನುಂಗಿ, ಮನೆಯೊಳಗೆ ನುಗ್ಗಿ ಸೂರೆಲ್ಲವನ್ನು ಕೆಡವಿ ಹಾಕಿ ಹೋಯಿತು. "ಅಯ್ಯೋ.. ನಾಗ.. ನಾಗ.."ಅಂತ ಅರಚುತ್ತಿರುವಾಗ ದಡಕನೆ ರತ್ನವ್ವಗೆ ಎಚ್ಚರವಾಯಿತು. ಪೂರ್ತಿ ಬೆವೆತು ಹೋಗಿದ್ದಳು. ಮೈ ನಡುಗುತ್ತಿತ್ತು. ಹಿತ್ತಲಿನಿಂದ ಬರುತ್ತಿದ್ದ ಜೀರುಂಡೆಯ ಸದ್ದು ಈಗ ಇರಲಿಲ್ಲ. ರತ್ನವ್ವಗೆ ತುಂಬಾ ಭಯವಾಗತೊಡಗಿತು. ಇಂದೆಂತ ಕನಸು? ನಾಗ ತುಂಬಾ ನೆನಪಾಗತೊಡಗಿದ. ಮಗನಿಗೆ ಏನಾದರೂ ಆಗಿದೆಯೊ? ಬೆಳಿಗ್ಗೆ ಮಾತನಾಡುವಾಗ ಚೆನ್ನಾಗಿಯೆ ಮಾತಾಡಿದ್ದ. ಆಮೇಲೆ ಮಾಡ್ತೀನಿ ಇರು ಅಂದಿದ್ದ. ಇಲ್ಲ ಇಲ್ಲ ಏನು ಆಗಿರಲಿಕ್ಕಿಲ್ಲ ಅಂತ ಎಷ್ಟೇ ಸಮಾಧಾನ ಪಟ್ಟುಕೊಂಡರೂ ಏನೇನೋ ಕೆಟ್ಟ ಯೋಚನೆಗಳು. ಬೆಳಕು ಮೂಡುವುದು ಇನ್ನೂ ಎಷ್ಟೊತ್ತ? ಇವತ್ತೇಕೆ ರಾತ್ರಿ ಇಷ್ಟೊಂದು ದೀರ್ಘ ಎನಿಸುತ್ತಿದೆ? ಎದ್ದು ಚಾಪೆಯ ಮೇಲೆ ಕೂತಳು. ಕುಡಿಯುವ ನೀರಿನ ಚೊಂಬು ಹುಡುಕಲು ಕತ್ತಲಲ್ಲಿ ತಡವರಿಸಿದಳು. ಚಾಪೆಯ ಮೇಲಿನ ತೂತುಗಳು ಕೈಗೆ ಎಟುಕಿದವೊ ಹೊರತು ನೀರಿನ ಚೊಂಬು ಸಿಗಲಿಲ್ಲ. ಎದ್ದು ದೀಪ ಹಚ್ಚುವ ಬಗ್ಗೆ ಯೋಚಿಸಿದಳು. ದೀಪ ಹಚ್ಚಿಕೊಂಡು ತಾನೇನು ಆ ಬೆಳಕಿನಲ್ಲಿ ರೊಕ್ಕ ಎಣಿಸಬೇಕೆ? ಅಂದುಕೊಂಡು ಸುಮ್ಮನಾದಳು. ಕೂರಲು ಮನಸಾಗಲಿಲ್ಲ. ಮನಸು ಏನೇನೊ ಕೆಟ್ಟ ಯೋಚನೆಗಳಿಗೆ ಸಜ್ಜಾಗುತ್ತಿತ್ತು. ನಾಗನಿಗೆ ಏನಾದರೂ ಆಗಿದೆಯಾ? ಇದೇನಿದು ಕನಸು. ಪದೇ ಪದೇ ಯೋಚಿಸತೊಡಗಿದಳು. ಕೂರಲು ಮನಸ್ಸಾಗದೆ ಅಲ್ಲಿಂದ ಎದ್ದಳು. ಕತ್ತಲೆಯನ್ನು ತಡವಿಕೊಂಡೆ ಮುಂಬಾಗಿಲಿಗೆ ಬಂದಳು. ಕದವನು ತೆರೆದಳು. ಬೀದಿಯಲ್ಲಿ ದೀಪದ ಬೆಳಕು ನಗುತ್ತಿತ್ತು. ಇದಕ್ಕೆ ಎಲ್ಲಾ ದಿನಗಳಲ್ಲೂ ನಗುವುದೇ ಕೆಲಸ ಅನ್ನುವ ಮಾತು ಬಾಯಿಗೆ ಬಂದರೂ ಆಡಲಿಲ್ಲ. ಬೀದಿಯಲ್ಲಿನ ಹತ್ತಾರು ಮನೆಗಳಿಗೆ ದಿನಾಲು ಏನಾದರೊಂದು ತೊಡಕು ಇದ್ದೇ ಇರುತ್ತದೆ. ಹಾಗಂತ ಬೀದಿ ದೀಪ ಯಾವತ್ತೂ ಅಳುತ್ತಲೇ ಕೂರಲಾಗುತ್ತದೆಯೆ? ಅವರ ಎಲೆಯ ಊಟ ಅವರೇ ಉಣ್ಣಬೇಕು.. ಹೀಗೆ ಏನೇನೊ ಯೋಚನೆಗಳು ರತ್ನವ್ವಗೆ.

ಕದ ತೆಗೆದು ಆಚೆ ಬಂದಳು. ಎದುರು ಮನೆಯವರು ಆಗಲೇ ಎದ್ದಿದ್ದರು. ಎದುರು ಮನೆಯ ಕಿಟಕಿಯಿಂದ ತಪ್ಪಿಸಿಕೊಂಡು ಬಂದ ಬೆಳಕು ರಸ್ತೆಗೆ ಬಿದ್ದಿತ್ತು. ಸೀನಪ್ಪ ಸಗಣಿ ತುಂಬಿಕೊಂಡು ತಿಪ್ಪೆಯ ಕಡೆ ಹೊರಟಿದ್ದ. ಇನ್ನೇನು ಬೆಳಕಾಗಬಹುದು ಅಂದುಕೊಂಡು ಹೊರಗೆ ಕೂರಲು ಯೋಚಿಸಿದಳು. ನೋಡಿದವರು ಏನಂದುಕೊಂಡಾರು? ಅನ್ನುವ ಯೋಚನೆ ಬರುತ್ತಲೇ ಕದವನಿಕ್ಕಿಕೊಂಡಳು. ಬಾಯಾರಿಕೆ ಸೆಳೆಯುತ್ತಲೇ ಇತ್ತು. ಲೈಟು ಹಾಕಿದಳು. ಮೂಲೆಯ ಚೊಂಬಿನಲ್ಲಿದ್ದ ನೀರನ್ನು ಗಟಗಟ ಕುಡಿದಳು. ಹೊಟ್ಟೆಗೆ ನೀರು ಬಿದ್ದಿದ್ದೆ ಸಣ್ಣ ಸಂಕಟವೊಂದು ನುಸುಳಿತು. ಅದು ಹೊಟ್ಟೆಯಿಂದ ಎದೆಯ ಭಾಗಕ್ಕೆ ನುಗ್ಗತೊಡಗಿತು. ಅದು ಉರಿಯೋ, ನೋವೊ ಎಂಬುದನ್ನು ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಹಾಗೆಯೇ ಚಾಪೆಯ ಮೇಲೆ ಕೂತಳು. ನೋವು ಎದೆ ತುಂಬತೊಡಗಿತು. ಅಮೃತಾಂಜನ ಇದ್ದಿದ್ದರೆ? ಅಂದುಕೊಂಡಳು. ಸೀನಪ್ಪನನ್ನು ಕೇಳಿದರೆ ಹೇಗೆ? ಬೆಳಂಬೆಳಿಗ್ಗೆಯೆ ಕೇಳಿವುದ್ಹೇಗೆ ಅಂತ ಸುಮ್ಮನಾದಳು. ನಿದ್ದೆ ಮಾಡಿದರೆ ಸರಿ ಹೋಗಬಹುದು, ರಾತ್ರಿಯೆಲ್ಲಾ ನಿದ್ದೆ ಇಲ್ಲದಿದ್ದರಿಂದ ಹೀಗೆ ಆಗಿರಬಹುದು ಅಂದುಕೊಳ್ಳುತ್ತಾ ಬಲವಂತಕ್ಕೆ ಚಾಪೆಯ ಮೇಲೆ ಮೈ ಚೆಲ್ಲಿದಳು. ಚಾಪೆಯ ಮೇಲೆ ಮಲಗಿದ ಕಾರಣಕ್ಕೆಯೇ ಎದೆ ನೋವೇನು ಹಿಂದೆಗೆಯಲಿಲ್ಲ! ಎದೆ ಹಿಡಿದುಕೊಂಡೆ ಮಲಗಿದಳು.

ನೋವು ಮಲಗಲು ಬಿಡಲಿಲ್ಲ. ಕೆಮ್ಮು ಶುರುವಾಯಿತು. ಇತ್ತ ನಾಗ ಬೆಂಗಳೂರಿನಲ್ಲಿ ನಿದ್ದೆಯಿಂದ ಎದ್ದು ಆಚೆ ಬಂದು ಕಾಫಿ ಕುಡಿಯತೊಡಗಿದ. ಕಾಫಿ ನೆತ್ತಿಗೇರಿತು. ಜೋರಾಗಿ ಕೆಮ್ಮ ತೊಡಗಿದ. ಪಕ್ಕದಲ್ಲಿದ್ದವರು "ಬೆಳ್ಳಂಬೆಳಿಗ್ಗೆಯೇ ನಿನ್ನನ್ನು ಯಾರೊ ನೆನಪಿಸಿಕೊಳ್ಳುತ್ತಿದ್ದಾರೆ ಕಣೋ! ನಿನ್ನ ಹುಡುಗಿಯೇ ಇರಬೇಕು” ಅಂದಿದ್ದು ನಾಗನಿಗೆ ಕೇಳಿಸಲಿಲ್ಲ. ಅವನು ಕೆಮ್ಮುತ್ತಲೇ ಇದ್ದ. ಇತ್ತ ತಾಯಿಯ ಕೆಮ್ಮು ನಿಂತಿತ್ತು. ಆ ಮನೆಯ ಬಾಗಿಲು ಮತ್ತೆಂದೂ ತೆರೆಯಲೇ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.