ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾತಿಮಾ ರಲಿಯಾ ಬರೆದ ಕಥೆ: ಬೇಲಿಯಾಚೆಗೂ ಬೆಳೆದ ನೆರಳು

Last Updated 16 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಯಾವತ್ತೋ ತಂದಿರಿಸಿದ್ದ calpole ಪೊಟ್ಟಣವನ್ನು ಎರಡೆರಡು ಬಾರಿ ತಿರುಗಿಸಿ ನೋಡಿ ಎಕ್ಸ್ಪೈರ್ ಆಗಿಲ್ಲ ಎನ್ನುವುದನ್ನು ಖಾತರಿ ಪಡಿಸಿ ಮಾತ್ರೆಯನ್ನು ಅರ್ಧಕ್ಕೆ ತುಂಡರಿಸಿ ಒಂದು ಚಿಕ್ಕ ಚಮಚದಲ್ಲಿ ಚೂರೇಚೂರು ಜೇನು ಬೆರೆಸಿ ಮಗುವಿಗೆ ಕುಡಿಸಿದ ಯಮುನಾ, ಚಮಚ ಬದಿಗಿರಿಸಬೇಕೆಂದು ಈಚೆ ತಿರುಗುವಷ್ಟರಲ್ಲಿ ಅರೆಮಂಪರಿನಲ್ಲಿದ್ದ ಮಗು ಕ್ಷೀಣವಾಗಿ ಏನನ್ನೋ ಮಣಗುಟ್ಟುತ್ತಾ ಬಾಯಲ್ಲಿದ್ದ ಅರ್ಧ ಮಾತ್ರೆಯಲ್ಲಿ ಮತ್ತರ್ಧವನ್ನು ಹೊರಚೆಲ್ಲಿ, ಕೆಮ್ಮುತ್ತಾ ಮಗ್ಗುಲು ಬದಲಿಸಿತು.

‘ಕೊರೊನಾ ಇರಬಹುದೇ?’ ಅವ್ಯಕ್ತ ಸಂಶಯವೊಂದು ಮೂಡಿ ಒಮ್ಮೆ ಮೈಮನವನ್ನು ನಡುಗಿಸಿಬಿಟ್ಟಿತು. ಮರುಕ್ಷಣ ‘ಇರಲಿಕ್ಕಿಲ್ಲ, ಇದೊಂದು ಸಾಮಾನ್ಯ ಶೀತ ಜ್ವರ’ ಅನಿಸಿತು. ಬೆಳಗ್ಗಿನಿಂದ ಹೀಗೆ ಅನ್ನಿಸೋದು, ತನ್ನನ್ನು ತಾನು ಸಮಾಧಾನಿಸಿಕೊಳ್ಳುವುದು ಇದು ಎಷ್ಟನೇ ಬಾರಿಯೋ. ಗಂಡ ಶ್ರೀಧರ, ಬೆಳಗ್ಗೆ ಪಟ್ಟಣಕ್ಕೆ ಹೋಗಿ ಬರುತ್ತೇನೆಂದು ಮನೆಬಿಟ್ಟವನು ಗಂಟೆ ಎಂಟಾದರೂ ಮರಳಿರಲಿಲ್ಲ. ಅವನೆಲ್ಲಿ ಎಂದು ವಿಚಾರಿಸೋಣ ಎಂದರೆ ಆಗಿನಿಂದಲೂ ಫೋನ್ ಸ್ವಿಚ್ಡ್‌ಆಫ್. ಬಿಡದೆ ಸುರಿಯುವ ಮಳೆ, ಮಗಳ ಜ್ವರ, ಗಂಡನ‌ ಗೈರು, ಖಾಲಿ ಬೀದಿ... ಬದುಕು ಅಯೋಮಯ ಅನ್ನಿಸುತ್ತಿತ್ತು ಯಮುನಾಗೆ.

ದೇವರೇ ಒಮ್ಮೆ ಜ್ವರ ಕಡಿಮೆಯಾದರೆ ಸಾಕೆಂದು ಪದೇ ಪದೇ ಬೇಡಿಕೊಳ್ಳುತ್ತಾ ಮದ್ದು ಕೊಟ್ಟು ಎಷ್ಟು ಹೊತ್ತಾಯಿತು ಎಂದು ಒಮ್ಮೆ ಮೊಬೈಲನ್ನೂ ಮತ್ತೊಮ್ಮೆ ಮಗುವಿನ ಹಣೆಯನ್ನೂ ಮುಟ್ಟಿ ನೋಡುತ್ತಿದ್ದಳು. ಸ್ವಲ್ಪ ಹೊತ್ತಲ್ಲಿ ಚೂರು ಚೇತರಿಸಿಕೊಂಡಂತಿದ್ದ ಮಗು ಗಾಢ ನಿದ್ರೆಗೆ ಜಾರಿತ್ತು. ಹಣೆಗೆ ತಣ್ಣೀರ ಬಟ್ಟೆ ಕಟ್ಟಿದರೆ ಮಗು ಹುಶಾರಾದೀತೇನೋ ಅನ್ನಿಸಿ ಅಡುಗೆ ಮನೆ ಕಡೆ ನಡೆದಳು. ಅಷ್ಟರಲ್ಲಿ ಫಳಾರನೆ ಮಿಂಚೊಂದು ಬಡಿದು ಇಡೀ ಬಡಾವಣೆಯ ವಿದ್ಯುತ್ ಆರಿ ಹೋಯಿತು, ಮಲಗಿದ್ದಲ್ಲಿಂದಲೇ ಮಗಳು ಅಮ್ಮಾ ಎಂದು ಚೀರಿದಳು. ಯಮುನಾ ತಡವರಿಸುತ್ತಾ ಕೋಣೆಗೆ ಹೋಗಿ ಮಗಳ ಹಣೆಗೆ ಬಟ್ಟೆ ಕಟ್ಟಿ ಅವಳನ್ನು ಮಡಿಲಿಗೆಳೆದುಕೊಂಡು ಮಂಚದ ತುದಿಯಲ್ಲಿ ಕೂತು ಕಿಟಕಿಯ ಗಾಜಿನಲ್ಲಿ ಸುರಿಯುತ್ತಿರುವ ಮಳೆಯನ್ನು ನೋಡತೊಡಗಿದಳು. ಎಷ್ಟು‌ ಸುರಿದರೂ ಆಕಾಶ ಖಾಲಿಯಾಗುತ್ತಲೇ‌ ಇಲ್ಲವೇನೋ ಅನಿಸಿತು.

ಮತ್ತೆ ಗಂಡನ‌ ನೆನಪಾಯಿತು. ಬೆಂಗಳೂರಲ್ಲಿ ಅಷ್ಟು ಚಂದಗೆ ಕಟ್ಟಿಕೊಂಡಿದ್ದ ಬದುಕನ್ನು ಬಿಟ್ಟು ವರ್ಷದ ಹಿಂದೆಯಷ್ಟೇ ಊರಿಗೆ ಮರಳಿದ್ದರು. ಪದೇ ಪದೇ ಗಲಭೆಗಳಾಗುವ ಈ ಹಾಳೂರಿಗೆ ಬರುವುದು ಬೇಡವೆಂದು ಎಷ್ಟು ಹಠ ಹಿಡಿದರೂ ಶ್ರೀಧರ ಒಪ್ಪದೆ, ತನ್ನ ಬೇರುಗಳಿರುವುದೇ ಇಲ್ಲಿ ಎಂದು ಒತ್ತಾಯದಿಂದ ಕರೆದುಕೊಂಡು ಬಂದಿದ್ದ.

ಇಡೀ ಬಡಾವಣೆಯಲ್ಲಿ ಇರುವುದು ಎರಡೇ ಮನೆಗಳು; ಒಂದು ಶ್ರೀಧರನದು, ಮತ್ತೊಂದು ಪಾತುಞಿಯದು.

ಶ್ರೀಧರನ ಅಮ್ಮ ಸಾವಿತ್ರಮ್ಮ ಮತ್ತು ಪಾತುಞಿಯದು ಗಳಸ್ಯ ಕಂಠಸ್ಯ ಸ್ನೇಹ. ಸಾವಿತ್ರಮ್ಮ ಈ ಮನೆಗೆ ಮದುವೆಯಾಗಿ ಬರುವಾಗಲೇ ಪಾತುಞಿ ಆ ಮನೆಯಲ್ಲಿದ್ದರು. ಅತ್ತೆಯ ಜೋರು, ಗಂಡನ ದರ್ಪ, ತೋಟ, ಆಳುಕಾಳು, ಸದಾ ನೆಂಟರಿಂದ ಗಿಜುಗುಡುವ ಮನೆ ಎಲ್ಲದರಿಂದ ದೂರ ಹೋಗಿಬಿಡಬೇಕು ಅಂತ ಸಾವಿತ್ರಮ್ಮನಿಗೆ ಅನ್ನಿಸುವಾಗೆಲ್ಲಾ ನೆನಪಾಗುತ್ತಿದ್ದುದೇ ತನ್ನ ಮನೆಯಿಂದ ನಾಲ್ಕು ಗಾವುದ ದೂರದಲ್ಲಿರುವ ಪಾತುಞಿ. ವಿಧವೆ ಪಾತುಞಿಗೂ ಮಗಳು ಜೈನಬಾಳನ್ನು ಬಿಟ್ಟರೆ ಸಾವಿತ್ರಮ್ಮನೇ ಆಪ್ತಸಖಿ. ಅತ್ತೆಯ ಕಣ್ಣುತಪ್ಪಿಸಿ ಇಬ್ಬರೂ ಮುಸ್ಸಂಜೆ ಹೊತ್ತು ಕಷ್ಟ ಸುಖ ಮಾತಾಡಿಕೊಳ್ಳುತ್ತಿದ್ದರೆ ಸೂರ್ಯನೂ ನಿಧಾನವಾಗಿ ಕಂತುತ್ತಿದ್ದಾನೇನೋ ಅನ್ನಿಸುತ್ತಿತ್ತು. ಪಾತುಞಿಗೆ ರಂಗೋಲಿ ಹಾಕಲು ಕಲಿಸಿದ್ದು ಸಾವಿತ್ರಮ್ಮನೇ. ಶ್ರೀಧರ ಮತ್ತು ಜೈನಬಾಳೂ ಒಟ್ಟಿಗೆ ಆಡಿ ಬೆಳೆದವರು.

ಜೈನಬಾಳನ್ನು ಶಾಲೆಗೆ ಸೇರಿಸಬೇಕು ಎನ್ನುವಾಗೆಲ್ಲಾ ಪಾತುಞಿ ಅವಳಿಗೆ ವಯಸ್ಸಾಗಿಲ್ಲ ಎಂದು ಮಾತು ತೇಲಿಸಿಬಿಡುತ್ತಿದ್ದಳು. ಆಗ ಸಾವಿತ್ರಮ್ಮನೇ ಒತ್ತಾಯ ಮಾಡಿ, ಮಗನೊಂದಿಗೆ ಅವಳನ್ನೂ ಶಾಲೆಗೆ ಸೇರಿಸಿದ್ದು. ಅತಿಮೌನಿ ಶ್ರೀಧರ ಮತ್ತು ವಾಚಾಳಿ ಜೈನಬಾ ಒಟ್ಟಿಗೆ ಶಾಲೆಗೆ ಹೋಗಿ ಬರುತ್ತಿದ್ದರೆ ಇಬ್ಬರೂ ಅಮ್ಮಂದಿರಿಗೂ ನೆಮ್ಮದಿ. ಹೊಡೆದರೆ ಹೊಡೆಸಿಕೊಳ್ಳುವ, ಬೈದರೆ ಸುಮ್ಮನೆ ಬೈಸಿಕೊಳ್ಳುವ ಶ್ರೀಧರನನ್ನು ಶಾಲೆಯ ಪುಂಡು ಪೋಕರಿಗಳಿಂದ ರಕ್ಷಿಸುತ್ತಿದ್ದುದೂ ಜೈನಬಾಳೆ. ಚಿಟಿ ಚಿಟಿ ಮಾತಾಡುತ್ತಾ ಶಾಲೆಯಿಡೀ ಓಡಾಡುತ್ತಿದ್ದ ಅವಳೆಂದರೆ ಮೇಷ್ಟ್ರುಗಳಿಗೂ ಸ್ವಲ್ಪ ಜಾಸ್ತೀನೇ ಅಕ್ಕರೆ.

ಆದರೆ ಪಾತುಞಿಗೆ ಮಾತ್ರ ಹೆಣ್ಣು ಹುಡುಗಿಗೆ ಶಾಲೆ ಓದು ಎಲ್ಲಾ ಯಾಕೆ ಬೇಕು, ಎಷ್ಟಾದರೂ ಪಾತ್ರೆ ಉಜ್ಜೋದು ತಪ್ಪುತ್ತದಾ ಎಂದು ಆಗಾಗ್ಗೆ ಅನ್ನಿಸುತ್ತಿತ್ತು. ಅವಳು ಐದನೇ ತರಗತಿಯಲ್ಲಿರುವಾಗ ಯಾರ ಮಾತಿಗೂ ಒಪ್ಪದೆ ಶಾಲೆ ಬಿಡಿಸಿ ಬೀಡಿ ಸೂಪು ಮಡಿಲಿಗೆ ಹಾಕಿದ್ದಳು. ಯಾರೇನೇ ಹೇಳಿದರೂ ‘ಶಾಲೆಯಿಂದ ಏನಾಗುತ್ತದೆ ಮಣ್ಣು? ಬೀಡಿ ಕಲಿತರೆ ಖರ್ಚಿಗೂ ಆಗುತ್ತದೆ, ದುಡ್ಡು ಉಳಿದರೆ ಕಿವಿಗೆರಡು ಹಲೀಕಾತು ಮಾಡಿಸಿಟ್ಟರೆ ಮದುವೆ ಹೊತ್ತಿಗೆ ಅರ್ಜಿ ಬರೆದು ಮಸೀದಿ ಅಲಿಯಬೇಕು ಅಂತಿಲ್ಲ’ ಅನ್ನುತ್ತಿದ್ದಳು. ಸಾವಿತ್ರಮ್ಮ ಪರಿಪರಿಯಾಗಿ ಹೇಳಿ ನೋಡಿದಳು, ಮಾತು ಬಿಟ್ಟು ನೋಡಿದಳು. ಎಲ್ಲದಕ್ಕೂ ಪಾತುಞಿಯದು ಒಂದೇ ಉತ್ತರ- ಕಂಡೂ ಕಾಣದಂತಹ ನಗು.

·

ಶ್ರೀಧರ ಹತ್ತನೇ ತರಗತಿಯ ಪರೀಕ್ಷೆ ಬರೆಯುವಾಗಲೇ ಜೈನಬಾಳ ಮದುವೆ ಘಟ್ಟದ ಮೇಲಿನ ಹುಡುಗನೊಂದಿಗೆ ನಡೆದು ಹೋಯಿತು. ಅವಳ ಕಿವಿಯಲ್ಲಿ ಫಳ ಫಳ ಹೊಳೆಯುತ್ತಿದ್ದ ಹಲೀಕಾತು ಅವಳ ಬೀಡಿಯ ಸೂಪು ಕೊಟ್ಟ ಭಕ್ಷೀಸಾ ಅಥವಾ ಅವಳಮ್ಮ ಯಾರಲ್ಲೋ ಕಾಡಿ ಬೇಡಿ ಮಾಡಿಸಿದ್ದೋ ಗೊತ್ತಿಲ್ಲ, ಜೈನಬಾ ಮಾತು ಮಾತಿಗೂ ತಲೆ ಆಡಿಸುವಾಗ ಚಂದಗೆ ಹೊಳೆಯುತ್ತಿತ್ತು. ಸಾವಿತ್ರಮ್ಮನೂ ‘ಏನೇ ಹೇಳು ಪಾತುಞಿ, ಕಿವಿಯಲ್ಲಿ ಹಲೀಕಾತು ಇದ್ದರೆ ಅದರ ಚಂದವೇ ಬೇರೆ’ ಎಂದು ಹೇಳಿ ಜೈನಬಾಳ ದೃಷ್ಟಿ ತೆಗೆಯುತ್ತಿದ್ದಳು. ಮದುವೆಗೆ ಒಂದೆರಡು ದಿನ ಇರುವಾಗ ತನಗೆ ತವರಿಂದ ಬಳುವಳಿಯಾಗಿ ಬಂದ ಓಲೆಯನ್ನು ಉದಾರವಾಗಿ ಜೈನಬಾಳಿಗೆ ಉಡುಗೊರೆಯಾಗಿ ಕೊಟ್ಟಳು. ಅರೆಘಳಿಗೆ ಕಣ್ಣು ತುಂಬಿ ಕೊಂಡ ಪಾತುಞಿ ಸಾವಿತ್ರಮ್ಮನ‌ ಕೈಹಿಡಿದು ಕಣ್ಣಲ್ಲೇ ಕೃತಜ್ಞತೆ ಸಲ್ಲಿಸಿದರೆ, ಅಲ್ಲೇ ಇದ್ದ ಶ್ರೀಧರ ಮತ್ತು ಜೈನಬಾ ಮೆಲ್ಲ ಒಳ ಸರಿದಿದ್ದರು.

ಕಿವಿಗೊಂದು ಓಲೆ, ಎರಡೆರಡು ಹಲೀಕಾತು, ಅವಳ ಗಂಡನಿಗೆ ಎರಡನೇ ಮದುವೆಯಾದರೇನು ಮಗಳು ಅಲ್ಲಿ ಸುಖವಾಗಿಯೇ ಇರುತ್ತಾಳೆ ಎಂದೇ ನಂಬಿಕೊಂಡಿದ್ದಳು ಪಾತುಞಿ. ಜೈನಬಾಳಿಗೊಂದು ಮದುವೆಯಾಗಿ, ಮಗು ಆಗಿ ನಾನು ಬಾಣಂತನ ಮಾಡಿಬಿಟ್ಟ ಮರುಕ್ಷಣ ಅಝ್ರಾಯೀಲರು ಬಂದು ರೂಹ್ ಹಿಡಿದರೂ ನಾನು ಚಿಂತೆಯಿಲ್ಲದೆ ಉಸಿರು ಬಿಡುತ್ತೇನೆ ಎಂದು ಆಗಾಗ್ಗೆ ಸಾವಿತ್ರಮ್ಮ ಬಳಿ ಹೇಳಿಕೊಳ್ಳುತ್ತಿದ್ದಳು. ಆಗೆಲ್ಲಾ ಸಾವಿತ್ರಮ್ಮ ಮೆತ್ತಗೆ ಗದರಿ ಹಾಗೆಲ್ಲ ಹೇಳಬಾರದು ಎಂದು ತುಟಿಗೆ ಕೈಯಿಟ್ಟು ‘ನೀನು ಹೋದರೆ ನನಗಾದರೂ ಯಾರಿದ್ದಾರೆ ಪಾತೂ’ ಎಂದು ಆರ್ದ್ರವಾಗುತ್ತಿದ್ದಳು.

ಮದುವೆಯ ನಂತರ ಜೈನಬಾ ತವರಲ್ಲಿದ್ದುದೇ ಕಡಿಮೆ, ಹಾಗೆ ತವರಿಗೆ ಬಂದರೂ ಶ್ರೀಧರನಿಗೆ ಮಾತಿಗೆ, ಹರಟೆಗೆ, ಜಗಳಕ್ಕೆ ಸಿಗುತ್ತಲೇ ಇರಲಿಲ್ಲ. ಇತ್ತ ಶ್ರೀಧರನೂ ಓದು, ಉದ್ಯೋಗ ಅಂತ ಬೆಂಗಳೂರು ಸೇರಿ, ಊರ ನಂಟು, ಬಾಲ್ಯದ ಬಾಂಧವ್ಯ ಮರೆತೇ ಹೋಗಿತ್ತು. ಅದೊಂದು ದಿನ ಅಮ್ಮ‌ ಕರೆ ಮಾಡಿ ‘ಜೈನಬಾ ಗಂಡನನ್ನು ತೊರೆದು ಬಂದಿದ್ದಾಳೆ’ ಅನ್ನುವವರೆಗೂ. ಕೆಲವೇ ಕೆಲವು ದಿನಗಳ ಹಿಂದೆ ಅವಳಿಗೆ ಮಗುವಾಗಿರುವುದನ್ನೂ, ಪಾತುಞಿ ಮಗಳ ಬಾಣಂತನ‌ ಮಾಡಿರುವುದನ್ನೂ, ಇನ್ನೂ ಅಝ್ರಾಯೀಲರನ್ನು ಕಾಯುತ್ತಿದ್ದೇನೆ ಅಂತ ಹೇಳುತ್ತಿರುವುದನ್ನೂ ಹೇಳಿದ್ದ ಅಮ್ಮ ಇವತ್ತು ಜೈನಬಾಳ ವಿಚ್ಛೇದನದ ಬಗ್ಗೆ ಮಾತಾಡುತ್ತಿದ್ದಾಳೆ. ಬದುಕು ಎಷ್ಟು ವಿಚಿತ್ರ ಅನಿಸಿತು. ಮರುಕ್ಷಣ ಒಮ್ಮೆ ಊರ ಕಡೆ ಹೋಗಿ ಬರಬೇಕು ಅನ್ನಿಸಿ ತಾನು ದುಡಿಯುತ್ತಿರುವ ಕಂಪನಿಯಲ್ಲಿ ರಜೆಗಾಗಿ ಅರ್ಜಿ ಹಾಕಿದ. ಆದರೆ ಹಾಗೆ ಬೇಕೆಂದಾಗೆಲ್ಲಾ ರಜೆ ಮಂಜೂರಾಗಲಿ ಅದೇನು‌ ಊರ ಸರಕಾರಿ ಶಾಲೆಯಾ? ಎಲ್ಲಾ ತಕರಾರುಗಳು ಮುಗಿದು ರಜೆ ಮಂಜೂರಾಗಿ ಊರು ತಲುಪುವಷ್ಟರಲ್ಲಿ ಊರಲ್ಲಿ ಜೈನಬಾಳ ವಿಚ್ಛೇದನದ ಕಥೆ ಹಳತಾಗಿತ್ತು.

ರಾತ್ರಿ ಊಟ ಮುಗಿಸಿ ತಾಂಬೂಲ ಮೆಲ್ಲತ್ತಾ ಅಮ್ಮನನ್ನು ಕೇಳಿದ ‘ಜೈನಬಾಳಿಗೆ ಏನಾಗಿತ್ತು?’. ‘ಏನೋ ಗೊತ್ತಿಲ್ಲ, ಪಾತುಞಿ ಸರಿಯಾಗಿ ಏನನ್ನೂ ಹೇಳುವುದಿಲ್ಲ, ಜೈನಬಾಳೂ ಮಾತು ಕಳೆದುಕೊಂಡವಳಂತೆ ಆಡುತ್ತಾಳೆ. ಅವಳ ಗಂಡ ಹಲೀಕಾತು ಮಾರಿ ಈಗ ಓಲೆ ಕೇಳಿದನೆಂದೂ, ಇವಳು ಜಗಳ ಕಾದು ಮನೆ ಬಿಟ್ಟು ಬಂದಳೆಂದೂ ಊರು ಮಾತಾಡಿಕೊಳ್ಳುತ್ತದೆ. ತಪ್ಪು ಪಾತುಞಿಯದು, ಅವಳವತ್ತು ಮಗಳನ್ನು ಓದಿಸಿದ್ದರೆ...’ ಎಂದು ಮಗುಮ್ಮದಾಳು.

ಇದ್ದ ಮೂರು ದಿನಗಳ ರಜೆಯಲ್ಲಿ ಊರು, ಕೆರೆ ಅಂತ ಸುತ್ತಾಡಿ ಆಗೊಮ್ಮೆ ಈಗೊಮ್ಮೆ ಪಾತುಞಿಯ ಮನೆಯ ಬಳಿ ಠಳಾಯಿಸುತ್ತಿದ್ದ ಶ್ರೀಧರ. ಜೈನಬಾ ಮಾತಿಗೆ ಸಿಕ್ಕಾಳು ಎನ್ನುವ ದೂರದ ಆಸೆ ಅವನಿಗೆ. ಆದರೆ ಆಕೆ ಅವನಿಗೆ ಸಿಗಲೇ ಇಲ್ಲ. ಬೆಂಗಳೂರಿಗೆ‌ ಮರಳುವ ಹೊತ್ತಾದಂತೆ ಅಮ್ಮ ಒಮ್ಮೆ ಪಾತುಞಿಯನ್ನು ಕಂಡು ಬಾ ಎಂದು ಕಳುಹಿಸಿದ್ದಳು. ಜಗಲಿಯ ಮೇಲೆ ಕೂತು ಬೀಡಿ ಕಟ್ಟುತ್ತಿದ್ದ ಜೈನಬಾ ಇವನನ್ನು ಕಂಡೊಡನೆ ಒಳಗೆ ಹೋಗಲು ಅನುವಾದಳು. ಅವಳನ್ನು ಅಲ್ಲೇ ತಡೆದು ನಿಲ್ಲಿಸಿದ ಅವನು ‘ಇದೆಲ್ಲಾ ಹೇಗಾಯಿತು? ಯಾಕೆ ಗಂಡ ನಿನಗೆ ತಲಾಕ್ ಮಾಡಿದ?’ ಕೇಳಿದ. ಹೊಸ್ತಿಲಾಚೆ ದಿಟ್ಟಿಸಿ ಅಲ್ಯಾರೂ ಇಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡ ಅವಳು ಮೆಲ್ಲನೆ ‘ಅವನು ತಲಾಕ್ ಮಾಡಿದ್ದಲ್ಲ, ನಾನೇ ಫಸ್ಕ್ ಮಾಡಿದ್ದು’ ಎಂದು ತಲೆಗೆ ಹೊದ್ದುಕೊಂಡಿದ್ದ ದುಪ್ಪಟ್ಟಾವನ್ನು ಎದೆಯವರೆಗೆ ಎಳೆದು ಒಳಸರಿದಳು. ‘ಫಸ್ಕಾ? ಹಾಗೆಂದರೇನು?’ ಕೇಳಲು ತಲೆಯೆತ್ತಿದವನು ಅಲ್ಲಿ ಅವಳಿಲ್ಲದಿರುವುದನ್ನು ಕಂಡು ಸುಮ್ಮನಾದ. ಇದೆಲ್ಲಾ ಆಗಿ ವರ್ಷದೊಳಗೆ ಅವನ‌ ಮದುವೆ ದೂರದ ಸಂಬಂಧಿ ಯಮುನಾಳೊಂದಿಗೆ ನಡೆದು ಹೋಗಿತ್ತು.

ಇಡೀ ಮದುವೆ ಮನೆಯಲ್ಲಿ ಓಡಾಡುತ್ತಿದ್ದ ಪಾತುಞಿಯನ್ನು ನೋಡಿ ಮೊದಮೊದಲು ಯಮುನಾಗೂ ಇರುಸು‌ಮುರುಸಾಗಿತ್ತು. ಆದರೆ ಎರಡೂ ಮನೆಯ ನಡುವಿನ ಬಂಧ, ತನ್ನತ್ತೆಗೂ ಅವಳಿಗೂ ಇರುವ ಸ್ನೇಹ ಅರಿತ ಮೇಲೆ ಅವಳ ಅನುಮಾನಗಳೆಲ್ಲಾ ತಿಳಿಯಾಯ್ತು. ಜೈನಬಾಳ ಮಗ ಸಲೀಮನನ್ನು ಶಾಲೆಗೆ ಸೇರಿಸುವಾಗ ತನ್ನತ್ತೆಗಾದ ಸಂತಸವನ್ನು ನೋಡಿ ಅವಳು ವಿಸ್ಮಿತಳಾಗಿದ್ದಳು. ಗಂಡ ಶ್ರೀಧರನನ್ನು ಪಾತುಞಿ ‘ಸಿರಿದರ’ ಎಂದು‌ ಕರೆಯುವಾಗೆಲ್ಲಾ ಅವಳಿಗೆ ತೀರದ ಕಸಿವಿಸಿ. ಆಗೆಲ್ಲಾ ಸಾವಿತ್ರಮ್ಮ ಪಾತುಞಿಯ ಪರವಹಿಸಿ ಮಾತಾಡುತ್ತಿದ್ದಳು. ಅವರಿಬ್ಬರು ಬೆಂಗಳೂರಿಗೆ ಹಿಂದುರಿಗಿದ ಮೇಲೆ ಸಾವಿತ್ರಮ್ಮನ ದೇಖಿರೇಖೆ ನೋಡಿಕೊಳ್ಳುತ್ತಿದ್ದುದು ಪಾತುಞಿಯೇ. ಅಥವಾ ಪಾತುಞಿಯಂತೆ ಸೊಂಟನೋವು, ಬೆನ್ನು ನೋವು, ಮಂಡಿನೋವುಗಳ ಭಾದೆ ಇಲ್ಲದ ಸಾವಿತ್ರಮ್ಮನೇ ಪಾತುಞಿಯನ್ನು ಪಾಲಿಸುತ್ತಿದ್ದುದು, ಅವಳ ಸಾವಿನವರೆಗೂ.

ಆ ಸಂಜೆಯೂ ಅಷ್ಟೇ, ಸಾವಿತ್ರಮ್ಮ ಪಾತುಞಿಯ ಮನೆಗೆ ಹೋಗಿ ರಾತ್ರಿಗೆ ಅಂತ ಗಂಜಿ ಕೊಟ್ಟು, ಯಾವತ್ತಿಗಿಂತ ತುಸು ಜಾಸ್ತಿ ಹೊತ್ತೇ ಮಾತಾಡಿ ಬಂದಿದ್ದಳು. ಬರುವಾಗ ‘ನಾಳೆ ಬೆಳಗ್ಗೆ ಮನೆ ಕಡೆ ಬಾ ಪಾತು’ ಎಂದೂ ಹೇಳಿದ್ದಳು. ಅದೇ ಅವಳ ಕೊನೆಯ ಮಾತಾಗುತ್ತದೆ ಅನ್ನುವುದು ಪಾತುಞಿಗಾದರೂ ಹೇಗೆ ಗೊತ್ತಾಗಬೇಕು?

ಮರುದಿನ ಬೆಳಗ್ಗೆ ಲಗುಬಗೆಯಿಂದ ಗೆಳತಿಯ ಮನೆಗೆ ಹೊರಟರೆ ಅವಳನ್ನು ಸ್ವಾಗತಿಸಿದ್ದು ಸಾವಿತ್ರಮ್ಮನ ಮರಣ. ಶ್ರೀಧರನಿಗೆ ವಿಷಯ ತಿಳಿಸಿ ಅಂತಿಮ ಸಂಸ್ಕಾರಕ್ಕೆ ಅವಳಿಗೆ ತಿಳಿದಷ್ಟು ತಯಾರಿ ಮುಗಿಸಿ ಅವನನ್ನು ಕಾಯುತ್ತಾ ಕೂತಳು. ವಿಮಾನ ಇಳಿದು ಓಡಿ ಬಂದ ಮಗನನ್ನು ತಬ್ಬಿ ಹಿಡಿದು ‘ಸಿರಿದರಾ ನಿನ್ನಮ್ಮ ಪುಣ್ಯವಂತೆ, ಅವಳದು ಸುಖ ಮರಣ, ನೀನು ಅಳುತ್ತಾ ಅವಳನ್ನು ಕಳುಹಿಸಿ ಕೊಡಬೇಡ’ ಎಂದು ಅವನನ್ನು ಸಮಾಧಾನಿಸ ಹೊರಟು ಅವಳೇ ಕಣ್ಣೀರುಗೆರೆದಿದ್ದಳು.

ಅಮ್ಮನ ಸಾವಿನ ದಿಗ್ಭ್ರಾಂತಿಯನ್ನು ಮೀರಿ ಶ್ರೀಧರ ಮುಂದಿನ ಕಾರ್ಯದ ಕಡೆ ಗಮನ‌ ಕೊಡಬೇಕಿತ್ತು. ಪಾತುಞಿ ಬೆನ್ನಿಗೆ ನಿಂತಿದ್ದಳು.‌ ತುಂಬು ಗರ್ಭಿಣಿ ಮಡದಿ ಯಮುನಾ ಸಾವಿಗೂ, ಅಪರ ಕ್ರಿಯೆಗೂ ಪ್ರತಿಕ್ರಿಯಿಸಲಾಗದೆ ಸುಮ್ಮನೆ ನೋಡುತ್ತಾ ನಿಂತಿದ್ದಳು. ಹೆರಿಗೆಯ ದಿನಾಂಕ ಹತ್ತಿರ ಬರುತ್ತದೆ ಎಂದಾಗಾಗುವಾಗಲೇ ಮನೆಯಲ್ಲೊಂದು ಸಾವು. ಅವಳಾದರೂ ಏನು ಮಾಡಲು ಸಾಧ್ಯ? ಶ್ರೀಧರ ಊರಲ್ಲಿ ಇದ್ದಷ್ಟೂ ದಿನಗಳಲ್ಲಿ ಯಮುನಾಳನ್ನು ಜೋಪಾನ ಮಾಡಿದ್ದು ಜೈನಬಾ.

ಕಂಪೆನಿ, ಕೆಲಸ ಶ್ರೀಧರನನ್ನು ಕೈ ಬೀಸಿ ಕರೆದಂತೆ ಅಮ್ಮನಿಲ್ಲದ ಮನೆಯನ್ನು ಮತ್ತೆ ಬಿಟ್ಟು ಹೋಗಬೇಕಾಯಿತು. ಅವರು ಇರುವಷ್ಟು ದಿನ ಇದ್ದ ಕಲರವ ಇನ್ನು ಮುಂದೆ ಇರೋದೆ ಇಲ್ಲ ಅನ್ನುವುದು ನೆನೆಸುವಾಗೆಲ್ಲಾ ಪಾತುಞಿಗೆ ದುಃಖ ಉಮ್ಮಳಿಸಿ ಬರುತ್ತಿತ್ತು. ಶ್ರೀಧರ ಮನೆಯ ಕೀಲಿ ಕೊಡಲು ಹೋದಾಗಲಂತೂ ಅವಳು ಬಿಕ್ಕಿ ಬಿಕ್ಕಿ ಅತ್ತೇ ಬಿಟ್ಟಿದ್ದಳು. ಶ್ರೀಧರನೇ ಸಮಾಧಾನಪಡಿಸಿದ್ದ. ಮನೆಗೆ ತಲುಪುವಷ್ಟರಲ್ಲಿ ಅವನ‌ ಕಣ್ಣಾಲಿಗಳಲ್ಲೂ ನೀರು ಗಿರಿಗಿಟ್ಲೆ ಆಡುತ್ತಿತ್ತು.

ಬೆಂಗಳೂರು, ಅಲ್ಲಿನ ಧಾವಂತದ ಬದುಕು, ತನಗಿಲ್ಲಿ ಬೇರು ಬಿಡಲು ಸಾಧ್ಯವೇ ಆಗುತ್ತಿಲ್ಲ ಎನ್ನುವ ತೊಳಲಾಟ, ಕೆಲಸದಲ್ಲಿನ‌ ಮಂಬಡ್ತಿಯಲ್ಲಿ ಆದ ಅನ್ಯಾಯ, ರಾಜಕೀಯ ಇವೆಲ್ಲದರಿಂದ ಬೇಸತ್ತ ಶ್ರೀಧರ ಆಗಾಗ ಊರ ಬದುಕನ್ನು ನೆನಪಿಸಿಕೊಳ್ಳುತ್ತಿದ್ದ. ಜೊತೆಗೆ ಯಮುನಾಳ ಹೆರಿಗೆ, ಮಗು, ಆಸ್ಪತ್ರೆ ಅದು ಇದು ಅಂತ ಒಬ್ಬನೇ ಒದ್ದಾಡುತ್ತಿದ್ದ. ಮೇಲಾಗಿ ಅವನ ಪುಟ್ಟ ಮಗುವಿಗೆ ಬೆಂಗಳೂರಿನ ಹವೆ ಒಗ್ಗುತ್ತಲೇ ಇರಲಿಲ್ಲ ‌. ಅದಕ್ಕೆ ಸರಿಯಾಗಿ ಪಾತುಞಿಯೂ ಒಮ್ಮೆ ಕರೆ ಮಾಡಿ, ‘ಸಾವಿತ್ರಮ್ಮ ಹೋದ ನಂತರ ತೋಟವನ್ನು ನೋಡಿಕೊಳ್ಳುವವರೇ ಇಲ್ಲ, ತಾನು, ಜೈನಬಾ, ಸಲೀಂ ಬೆಳಗ್ಗೆ ಹೋಗಿ ನೀರು ಹಾಯಿಸಿ ಬರುತ್ತೇವೆ‌. ತೋಟ ಹೀಗೆಯೇ ಬಿಟ್ಟರೆ ಮರಗಳೆಲ್ಲಾ ಒಣಗಿಯೇ ಹೋಗಬಹುದು, ಒಮ್ಮೆ ಬಂದು ಹೋಗಿ ಅಥವಾ ಒಂದು ಆಳನ್ನಾದರೂ ಗೊತ್ತು ಮಾಡು’ ಎಂದು ಗೋಗೆರೆದಿದ್ದಳು. ತನ್ನದಲ್ಲದ ಊರಲ್ಲಿ ಮನಶಾಂತಿ ಇಲ್ಲದೆ ಬದುಕುವುದಕ್ಕಿಂತ ಊರಲ್ಲಿ ಅಜ್ಜನಿಂದ ಬಳುವಳಿಯಾಗಿ ಬಂದ ಆಸ್ತಿಯನ್ನಾದರೂ ನೋಡಿಕೊಂಡು ಇರಬಹುದಲ್ಲಾ ಅನ್ನಿಸುತ್ತಿತ್ತು. ಈ ಬಗ್ಗೆ ಯಮುನಾಳನ್ನೂ ಒತ್ತಾಯಿಸುತ್ತಲೇ ಇದ್ದ. ಆದರೆ ಎರಡನೇ ಬಾರಿ ಮುಂಬಡ್ತಿಯಲ್ಲಿ ಅನ್ಯಾಯವಾದಾಗ ಮಾತ್ರ ಇನ್ನಿಲ್ಲದ ರೇಜಿಗೆ ಹುಟ್ಟಿ ಯಮುನಾ ಎಷ್ಟು ಹೇಳಿದರೂ ಕೇಳದೇ ಊರಿಗೆ ಗಂಟು ಕಟ್ಟಿದ್ದ.

ಹಾಗೆ ಬಂದವನೇ ಕಾರ್ಪೋರೆಟ್ ದಿರಿಸು ಕಳಚಿ ಕೃಷಿಗೆ ಇಳಿದ. ಮೊದಮೊದಲು ಬದುಕು ದುಸ್ತರ ಅನ್ನಿಸಿದರೂ ಬರಬರುತ್ತಾ ಎಲ್ಲಾ ಸರಿಯಾಯಿತು. ಬೇಕೆಂದಾಗ ಕೈಕೊಡುವ ಮಳೆ, ಕೈಗೆ ಸಿಗದ ಕೃಷಿ ಆಳುಗಳು, ಬೆಂಗಳೂರಲ್ಲಿದ್ದಾಗ ತಿಂಗಳ ಮೊದಲ ವಾರ ಕೈಗೆ ಸಿಗುತ್ತಿದ್ದ ಸಂಬಳ ಇಲ್ಲಿ ಸಿಗದೇ ಹೋದದ್ದು ಎಲ್ಲವನ್ನೂ ತಾಳೆ ಹಾಕಿ ನೋಡಿದರೂ ಅವನು ಊರಲ್ಲೇ ನೆಮ್ಮದಿಯಾಗಿದ್ದ, ಮಗಳೂ ಊರ ಹವೆಗೆ, ಜೈನಬಾಳ ಮಗ ಸಲೀಮನಿಗೆ ಚೆನ್ನಾಗಿಯೇ ಹೊಂದಿಕೊಂಡಿದ್ದಳು. ಇದ್ದುದರಲ್ಲಿ ಊರು ಹಿಡಿಸದೇ ಇದ್ದುದು ಯಮುನಾಳಿಗೆ ಮಾತ್ರ.

ಬೇಸಗೆಯ ವಿಪರೀತದ ಸೆಕೆ, ಮಳೆಗಾಲದಲ್ಲಿ ಥಂಡಿ ಹಿಡಿದಂತೆ ಸುರಿಯುವ ಮಳೆ ಸಾಲದ್ದಕ್ಕೆ ಅಲ್ಲಿ ಇಲ್ಲಿ ಅಂತ ಒಮ್ಮೆಲೆ ಭುಗಿದೇಳುವ ಕೋಮು ಗಲಾಟೆ, ಅರ್ಧ ಕೆ.ಜಿ ಟೀ ಪುಡಿ ಬೇಕಿದ್ದರೂ ಪೇಟೆಗೆ ಹೋಗಲೇಬೇಕಾದ ಅನಿವಾರ್ಯತೆ ಎಲ್ಲಾ ಸೇರಿ ಬೆಂಗಳೂರಿನ ಬದುಕೇ ಚೆನ್ನಾಗಿತ್ತು ಅನಿಸುತ್ತಿತ್ತು.

ನಡುವೆ ಕೊರೊನಾ ಬಂದು ಹಳೆ ಸಹೋದ್ಯೋಗಿಗಳು ಕೆಲಸ ಕಳೆದುಕೊಂಡ ಕಥೆ ಕೇಳುವಾಗ ಮಾತ್ರ ಅಲ್ಲಿನ ಬದುಕನ್ನು ನಂಬದೇ ಬಿಟ್ಟು ಬಂದದ್ದು ಒಳ್ಳೆಯದೇ ಆಯ್ತು ಅಂತ ಅವಳಿಗೇ ಅನಿಸಿತು. ಆದರೆ ಟಿ.ವಿ. ಹಚ್ಚಿದರೆ ಶುರುವಾಗುವ ಕೊರೊನಾ ಕಥೆಗಳು, ಬೇಕೆಂದೇ ರೋಗ ಹರಡುವ, ನೋಟಿಗೆ, ಹಣ್ಣಿಗೆ, ಗಾಜಿಗೆ ಎಂಜಲು ಹಚ್ಚುವ ವರದಿಗಳನ್ನು ‌ನೋಡುವಾಗ, ಓದುವಾಗ ಯಮುನಾಳಿಗೆ ಭಯವಾಗುತ್ತಿತ್ತು. ಸಾಲದ್ದಕ್ಕೆ ತಮ್ಮ ಕರೆ ಮಾಡಿ ಆಗಾಗ ಮನೆಯೊಳಗೆ ಯಾರನ್ನೂ ಸೇರಿಸಿಕೊಳ್ಳಬೇಡ ಎಂದು ತಾಕೀತು ಮಾಡುತ್ತಿದ್ದ. ಪಾತುಞಿ, ಜೈನಬಾ ಮನೆಗೆ ಬರುವುದನ್ನು ನಿಲ್ಲಿಸಿದ್ದರೂ ಸಲೀಂ ಮಾತ್ರ ಅವರಿಬ್ಬರ ಕಣ್ಣು ತಪ್ಪಿಸಿ ಮಗುವಿನ ಜೊತೆ ಆಡಲು ಬರುತ್ತಿದ್ದ. ಶ್ರೀಧರನ ಬಳಿ ಈ ಬಗ್ಗೆ ಏನಾದರೂ ಮಾತಾಡಲು ಪ್ರಯತ್ನಿಸಿದರೆ, ತನಗಿಲ್ಲಿ ಭಯವಾಗುತ್ತದೆ ಅಂದರೆ ‘ಪಾತುಞಿ ಇದ್ದಾಳಲ್ಲಾ’ ಎಂದು ಮಾತು ತೇಲಿಸಿ ಅವಳನ್ನು ಸುಮ್ಮನಾಗಿಸುತ್ತಿದ್ದ.

ಇದೊಂದು ರಾತ್ರಿ ಕಳೆಯಲಿ, ಪೇಟೆಗೆ ಹೋದ ಶ್ರೀಧರ ಮರಳಿ ಬರಲಿ, ಅವನೊಂದಿಗೆ ಜಗಳ ಕಾದಾದರೂ ಸರಿ ಸಲೀಮನನ್ನು ಈ ಮನೆಗೆ ಬರದ ಹಾಗೆ ತಡೆಯಬೇಕು ಅಂದುಕೊಂಡಳು. ಸಂಜೆ ಕರೆ ಮಾಡಿದ್ದಾಗಲೂ ತಮ್ಮ ಅವನ ಬಗ್ಗೆ ಎಚ್ಚರದಿಂದಿರಲು ಹೇಳಿದ್ದ. ಕಾಲ ಬದಲಾಗಿದೆ ಅಂತ ಹೇಗಾದರು ಮಾಡಿ ಶ್ರೀಧರನಿಗೆ ಮನಗಾಣಿಸಲೇ ಬೇಕು ಎಂದುಕೊಂಡು ಹಾಸಿಗೆಯ ಮೇಲಿಂದ ಎದ್ದು ಬಾಗಿಲ ಚಿಲಕ ಹಾಕಿದೆಯಾ ಎಂದು ಪರೀಕ್ಷಿಸಲು ಹೋದವಳು ಗಂಡ ಬಂದಿದ್ದಾನಾ ಎಂದು ಹೊರಗೊಮ್ಮೆ ಇಣುಕಿ ನೋಡಿದಳು, ಇಡೀ ಬೀದಿ ಮೌನ ಹೊದ್ದುಕೊಂಡತಿತ್ತು. ರಸ್ತೆಯ ಕೊನೆಯ ತಿರುವಿನಲ್ಲಿ ಮಿಣಿ‌ಮಿಣಿ ಉರಿಯುತ್ತಿದ್ದ ದೀಪವೊಂದನ್ನು ಹೊರತುಪಡಿಸಿದರೆ ಬೆಳಕಿನೊಂದು ಕಣವೂ ಇಲ್ಲ, ಸ್ವಲ್ಪ ಭಯವಾದಂತನಿಸಿ ಕಣ್ಣು ಮುಚ್ಚಿದಳು‌. ಅಲ್ಲಿಂದಲೇ ಬಾಗಿಲ ಚಿಲಕ ಬಿಗಿಯಾಗಿ ಹಾಕಿ ಬೆನ್ನುತಿರುಗಿಸಿದಳು. ಅಷ್ಟರಲ್ಲಿ ರಸ್ತೆಯಲ್ಲಿ ‘ಟಪ್’ ಎಂದು ಒಡೆದ ಸದ್ದು ಕೇಳಿಸಿತು. ತಿರುಗಿ ನೋಡಿದರೆ, ಗಾಳಿಗೋ ಮಳೆಗೋ ಗೊತ್ತಿಲ್ಲ ಬೀದಿದೀಪ ಒಡೆದು ಬಿದ್ದಿತ್ತು. ಈಗ ಇಡೀ ವಠಾರದಲ್ಲಿ ಬೆಳಕಿನ‌ ಸುಳಿವೇ ಇಲ್ಲ. ಮೆಲ್ಲ ಪರದಾಡುತ್ತಾ ಬಂದು ಹಾಸಿಗೆಯ ಮೇಲೆ ಕೂತಳು. ಬೇಡ ಬೇಡ ಅಂದರೂ ಸಂಜೆ ಟಿ.ವಿಯಲ್ಲಿ ನೋಡಿದ ವಾರ್ತೆ ನೆನಪಾಗುತ್ತಿತ್ತು. ‘ಗಂಡನಿಗೆ ಯಾರಿಂದಾದರೂ ರೋಗ ಹರಡಿದ್ದರೆ?, ಥೂ ಬಿಡ್ತು , ಹಾಗೇನೂ ಆಗಿರಲ್ಲ’ ಎಂದು ತನಗೆ ತಾನೇ ಸಮಾಧಾನಿಸಿಕೊಳ್ಳಲು ಪ್ರಯತ್ನಿಸಿದಳು, ಸಮಾಧಾ‌ನವಾಗಲಿಲ್ಲ. ಮಗಳನ್ನು ಮಡಿಲಿಗೆಳೆದುಕೊಂಡು ಮತ್ತೆ ಮಂಚಕ್ಕೆ ಒರಗಿದಳು.

ಚಿಂತೆ, ಆತಂಕದ ಮಡುವಲ್ಲಿದ್ದ ಅವಳಿಗೆ ಯಾವಾಗ ನಿದ್ರೆ ಹತ್ತಿತೋ ತಿಳಿಯದು. ಬೆಳಕು ಹರಿಯಲು ಕೆಲವೇ ಗಂಟೆಗಳಿರುವಾಗ ಮನೆಯ ಕರೆಗಂಟೆ ಸದ್ದಾಯಿತು. ಥಟ್ಟನೆ ಎದ್ದು ಕೂತು ಕಣ್ಣುಜ್ಜಿದಳು. ರಾತ್ರಿ ಅದ್ಯಾವಾಗ ಕರೆಂಟು ಬಂದಿತ್ತೋ ಗೊತ್ತಿಲ್ಲ. ಇಡೀ ಮನೆಯ ಬಲ್ಬ್ ಉರಿಯುತ್ತಿತ್ತು. ಕರೆಗಂಟೆ ಮತ್ತೆ ಸದ್ದಾಯಿತು. ಮಗಳ ಕಡೆಗೊಮ್ಮೆ ನೋಡಿ, ಅವಳು ಬೀಳದಿರಲೆಂದು ತಲೆದಿಂಬನ್ನು ಅಡ್ಡ ಇಟ್ಟು, ಗಂಡನೇ ಬಂದಿರಬೇಕೆಂದು ಬಾಗಿಲು ತೆರೆಯಲು ಓಡಿದಳು. ಹೊರಗಡೆ ಸಲೀಂ ನಿಂತಿದ್ದ.

ಆತಂಕ, ಭಯದಲ್ಲಿದ್ದ ಯಮುನಾ ಅವನತ್ತ ನೋಡದೆಯೇ ‘ಇನ್ಮುಂದೆ ಮನೆಗೆ ಬರ್ಬೇಡ’ ಎಂದು ಕಟುವಾಗಿ ನುಡಿದು ಬಾಗಿಲು ಮುಚ್ಚಲು ಹೊರಟಳು. ಅದರ ಕಡೆ ಗಮನವೇ ಇಲ್ಲದ ಸಲೀಂ ‘ಶ್ರೀಧರ ಮಾಮ ಬೈಕ್ ಸ್ಕಿಡ್ ಆಗಿ ಬಿದ್ದು ಆಸ್ಪತ್ರೆಯಲ್ಲಿದ್ದಾರೆ, ನಿನ್ನೆ ಅಜ್ಜಿ ಮಂಡಿ ನೋವಿನ ಮದ್ದಿಗೆಂದು ಆಸ್ಪತ್ರೆಗೆ ಹೋಗಿದ್ದಾಗ ಅದೇ ಆಸ್ಪತ್ರೆಗೆ ಶ್ರೀಧರ ಮಾಮನನ್ನು ತಂದು ಸೇರಿಸಿದ್ದರು. ರಾತ್ರಿ ಇಡೀ ನಾನೂ ಅಜ್ಜಿ ಅಲ್ಲೇ ಇದ್ವಿ. ಮಗುವನ್ನು ನಮ್ಮನೆಗೆ ಕರ್ಕೊಂಡು ಹೋಗಿ ನಾನೂ ಅಮ್ಮ ನೋಡ್ಕೊಳ್ತೇವೆ. ನೀವು ಆಸ್ಪತ್ರೆಗೆ ಹೊರಡಿ ಮಾಮಿ’ ಎಂದು ಯಮುನಾಳನ್ನು ತಳ್ಳಿಕೊಂಡೇ ಮನೆಯೊಳಗೆ ಹೋಗಿ ಮಗುವನ್ನು ಎತ್ತಿಕೊಂಡು ತನ್ನ ಮನೆಯ ಕಡೆ ನಡೆಯತೊಡಗಿದ. ದೂರದ ಚೀನಾದ ವುಹಾನ್ ಸುಮ್ಮನೆ ನಕ್ಕಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT