ಸತತ ಪ್ರಯತ್ನ

7
ಮಕ್ಕಳ ಕಥೆ

ಸತತ ಪ್ರಯತ್ನ

Published:
Updated:

ಕಾಂಡಾಪೂರದ ಕಾಡಿನಲ್ಲಿ ಸಂಭ್ರಮದ ವಾತಾವರಣ. ಎಲ್ಲೆಲ್ಲೂ ಪಶು, ಪಕ್ಷಿಗಳ ಸಂತೋಷದ ಕೂಗಿನ ಅಲೆ, ಸಂಗೀತದ ನಾದ ತುಂಬಿತ್ತು. ಇದಕ್ಕೆ ಕಾರಣ ವರ್ಷಕ್ಕೊಮ್ಮೆ ನಡೆಯುವ ಪ್ರಾಣಿಗಳ ಆಟದ ಹಬ್ಬ. ವಿಧವಿಧವಾದ, ಬಗೆಬಗೆಯ ಹಾಸ್ಯದ, ಕೀಟಲೆಯ, ವೀರಾವೇಶದ, ಸ್ವಾಭಿಮಾನದ ಆಟಗಳನ್ನು ಆಡಲು ಕಾಡಿನ ಎಲ್ಲ ಪಕ್ಷಿಗಳು, ಮೃಗಗಳು ಸೇರಿದ್ದವು. ಪಕ್ಷಿ, ಪ್ರಾಣಿಗಳು ತಮಗೆ ಇಷ್ಟವಾದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಅದರ ಪೈಕಿ ಹುಲಿ ಮತ್ತು ಕರಡಿ ನಡುವಿನ ಕಾದಾಟದ ಸ್ಪರ್ಧೆಯಂತೂ ಕಾಡಿನ ಕ್ರೀಡಾಕೂಟದಲ್ಲಿ ಬಹುಮುಖ್ಯವಾಗಿತ್ತು.

ಕಾಡಿನ ಎಲ್ಲ ಸ್ಪರ್ಧೆಗಳು ಬಹುತೇಕ ಮುಗಿದಿದ್ದವು. ಕೊನೆಯ, ಭಯಂಕರ ಅಪಾಯಕಾರಿಯಾದ, ವೀರಾವೇಶದ ಸ್ಪರ್ಧೆ ಸಿಂಹ ಮತ್ತು ಕರಡಿಯ ನಡುವಿನ ಕಾದಾಟ. ಇದರಲ್ಲಿ ಮೂರು ಸುತ್ತುಗಳ ಕಾದಾಟ ಇರುತ್ತಿತ್ತು. ಪ್ರತಿ ಸುತ್ತಿನಲ್ಲಿ ಮೇಲುಗೈ ಸಾಧಿಸಿದ ಸ್ಪರ್ಧಾಳುವಿಗೆ ಐದು ಅಂಕಗಳನ್ನು ಕೊಡಲಾಗುತ್ತಿತ್ತು. ತೀರ್ಪುಗಾರನಾಗಿ ಆನೆಯನ್ನು ನೇಮಿಸಲಾಗಿತ್ತು. ಸಿಂಹದ ಗುಂಪಿನಲ್ಲಿದ್ದ ಚಿರತೆ ಮತ್ತು ಹುಲಿ, ‘ಏಯ್ ಸಿಂಹರಾಜ, ನಮ್ಮ ಕಾಡಿನ ಮರ್ಯಾದೆಯ ಪ್ರಶ್ನೆ ಈ ಕಾದಾಟದಲ್ಲಿ ಇದೆ. ನಮ್ಮಂತಹ ಸಾಹಸಿಗಳ ಗೌರವದ ಪ್ರಶ್ನೆಯೂ ಸೇರಿದೆ. ಒಟ್ಟಿನಲ್ಲಿ ಆ ಕರಡಿಯ ಕಥೆ ಮುಗಿಸಿ ಗೆಲುವು ತಂದು ಕೊಡಬೇಕು’ ಎಂದವು. ಇತ್ತ ಕರಡಿಯ ಗುಂಪಿನಲ್ಲಿದ್ದ ಮೊಸಳೆ ಹಾಗೂ ಕಾಡುಕೋಣ, ‘ವಂಶಪಾರಂಪರ್ಯದ ರೀತಿಯಲ್ಲಿ ನಮ್ಮ ಮೇಲೆ ಸವಾರಿ ಮಾಡುತ್ತಿರುವ ಮತ್ತು ಈ ಕಾಡಿನಲ್ಲಿ ರಾಜ್ಯಭಾರ ಮಾಡುತ್ತಿರುವ ಆ ದುಷ್ಟ ಸಿಂಹವನ್ನು ಸಂಹರಿಸಿ ಕಾಡಿನ ಇತಿಹಾಸದಲ್ಲಿ ಹೊಸ ಯುಗ ಆರಂಭಿಸಬೇಕು. ಅದು ನಿನ್ನಿಂದ ಮಾತ್ರವೇ ಸಾಧ್ಯ’ ಎಂದು ಹುರಿದುಂಬಿಸಿದವು.

ಕಾದಾಟ ಪ್ರಾರಂಭವಾಯಿತು. ಅದನ್ನು ನೋಡಲು ಕಾಡಿನ ಎಲ್ಲ ಪ್ರಾಣಿಗಳು ಕುತೂಹಲದಿಂದ ಸೇರಿದ್ದವು. ಸಿಂಹ ಮತ್ತು ಕರಡಿಯ ಕಾದಾಟ ಘನಘೋರವಾಗಿ ನಡೆಯುತ್ತಿತ್ತು. ಒಂದನೆಯ ಸುತ್ತಿನಲ್ಲಿ ಕರಡಿಗೆ ಹಿನ್ನಡೆಯಾಯಿತು. ಅಷ್ಟೇ ಅಲ್ಲ, ಸಿಂಹ ಕೊಟ್ಟ ಏಟಿನ ಪರಿಣಾಮವಾಗಿ ಕರಡಿಯ ಮೈಮೇಲೆಲ್ಲಾ ಗಾಯಗಳಾಗಿ ರಕ್ತ ಸೋರುತ್ತಿತ್ತು. ಇದರಿಂದಾಗಿ ಸಿಂಹಕ್ಕೆ ಮೊದಲ ಸುತ್ತಿನ ಪೂರ್ಣ ಐದು ಅಂಕಗಳು ಬಂದವು. ಸ್ವಲ್ಪ ಸಮಯದ ನಂತರ ಎರಡನೆಯ ಸುತ್ತಿನ ಕಾದಾಟ ಶುರುವಾಯಿತು. ಸಿಂಹ ಮತ್ತು ಕರಡಿ ಸಮಬಲದಿಂದ ಹೋರಾಡಿದವು. ಸಿಂಹ ಹಾಗೂ ಕರಡಿ ಗಾಯ, ನೋವು, ಸಂಕಟದ ಕಹಿ ಉಂಡವು. ಎರಡನೆಯ ಸುತ್ತಿನ ಅವಧಿ ಮುಗಿದಾಗ, ಅಂಕಗಳನ್ನು ಇಬ್ಬರಿಗೂ ಸಮನಾಗಿ ಹಂಚಿ, ತಲಾ ಎರಡೂವರೆ ಅಂಕಗಳನ್ನು ಕೊಟ್ಟಿತು ತೀರ್ಪುಗಾರ ಆನೆ. ಇದರಿಂದಾಗಿ ಸಿಂಹ ಮೇಲುಗೈ ಸಾಧಿಸಿದಂತೆ ಆಯಿತು. ಕರಡಿಗೆ ಎರಡೂವರೆ ಅಂಕಗಳು ಮಾತ್ರ ಬಂದವು.

ಸಿಂಹ ಹಾಗೂ ಕರಡಿಗೆ ತುಸು ವಿಶ್ರಮಿಸಿಕೊಳ್ಳಲು ಅವಕಾಶ ನೀಡಲಾಯಿತು. ಹಿನ್ನಡೆ ಅನುಭವಿಸಿದ ಕರಡಿಯನ್ನು ನೋಡಿದ ಖಡ್ಗಮೃಗ, ‘ಏಯ್ ಕರಡಿ, ನೀನು ಸೋಲನ್ನು ಅನುಭವಿಸುವುದು ಖಚಿತವಾಗಿದ್ದರೂ ಯಾಕೆ ಹೋರಾಟ ನಡೆಸುವೆ’ ಎಂದು ಪ್ರಶ್ನಿಸಿತು.

‘ಸೋಲು ಗೆಲುವು ಎಲ್ಲರಿಗೂ ಇದ್ದದ್ದೇ. ಆದರೆ ಕೊನೆಯವರೆಗೂ ಪ್ರಯತ್ನ ಮತ್ತು ಹೋರಾಟ ನಡೆಯಬೇಕು ಎಂದು ನಮ್ಮ ತಂದೆ ಹೇಳಿದ್ದಾರೆ. ನಾನು ಸೋತರೂ ಪಂದ್ಯ ಮುಗಿಯುವವರೆಗೂ ನನ್ನ ಪ್ರಯತ್ನ ಮುಂದುವರೆಸುತ್ತೇನೆ’ ಎಂದು ಉತ್ತರಿಸಿತು ಕರಡಿ. ಕರಡಿಯ ಉತ್ತರ ಖಡ್ಗಮೃಗಕ್ಕೆ ತೃಪ್ತಿ ತಂದಿತು.

ಅಷ್ಟರಲ್ಲಿ ಮೂರನೇ ಸುತ್ತು ಪ್ರಾರಂಭವಾಯಿತು. ಮೈತುಂಬಾ ಗಾಯಗಳಾಗಿ ರಕ್ತ ಸೋರುತ್ತಿದ್ದರೂ ಕರಡಿಯ ಮನಸ್ಸು ಮಾತ್ರ ಕುಗ್ಗಿರಲಿಲ್ಲ. ಕರಡಿಯ ಕತೆಯನ್ನು ಮುಗಿಸಿಯೇಬಿಡಬೇಕು, ಒಂದೇ ಒಂದು ಹೊಡೆತಕ್ಕೆ ಕರಡಿಯನ್ನು ಸಾಯಿಸಿಬಿಡಬೇಕು ಎಂಬಂತಹ ದಾಳಿ ಮಾಡಲು ಸಜ್ಜಾಯಿತು ಸಿಂಹ. ಅಷ್ಟರಲ್ಲಿ ಸಿಂಹದ ಕಣ್ಣು ಸ್ವಲ್ಪ ಮಂಜಾಗಿ ಕಾಣತೊಡಗಿತು. ಎದುರಿಗೆ ಇದ್ದ ಕರಡಿ ಸರಿಯಾಗಿ ಕಾಣಲಿಲ್ಲ. ಸಿಂಹ ತನ್ನ ಮುಂಗಾಲು ಎತ್ತಿ ಕರಡಿಗೆ ಹೊಡೆಯಿತು. ಆದರೆ ಹೊಡೆತ ಬೇರೆ ಕಡೆಗೆ ಬಿತ್ತು. ಸಿಂಹದ ಕಣ್ಣಿನಲ್ಲಿ ನೀರು ತುಂಬಿದೆ ಎಂದು ತಿಳಿದ ಕರಡಿ ಇದೇ ಸಮಯವೆಂದು ಸಿಂಹದ ಹೊಡೆತಗಳಿಂದ ತಪ್ಪಿಸಿಕೊಳ್ಳುತ್ತ, ಸಮಯ ನೋಡಿ ತನ್ನ ಹರಿತವಾದ ಉಗುರುಗಳಿಂದ ಸಿಂಹವನ್ನು ಪರಚಿತು. ಸಿಂಹವು ದಿಕ್ಕು ತೋಚದೆ ಪರದಾಡಿತು. ಅದರ ಮೈ, ಮುಖ ಎಲ್ಲ ರಕ್ತಮಯವಾಯಿತು. ನೋಡನೋಡುತ್ತಿದ್ದಂತೆಯೇ ಸಿಂಹಕ್ಕೆ ಸೋಲಿನ ರುಚಿ ತೋರಿಸಿತು ಕರಡಿ. ಮೂರನೆಯ ಸುತ್ತಿನಲ್ಲಿ ಕರಡಿ ಮುನ್ನಡೆ ಸಾಧಿಸಿತು. ಸಿಂಹ ಮತ್ತು ಕರಡಿಗಳೆರಡೂ ಮೂರನೆಯ ಸುತ್ತು ಮುಗಿಯುವ ವೇಳೆಗೆ ಅಂಕಗಳಲ್ಲಿ ಸಮಬಲರಾಗಿದ್ದರು. ಸೋಲಿನಿಂದ ಪುಟಿದೆದ್ದು ಸಮಯೋಚಿತ ಹೋರಾಟ ನಡೆಸಿದ ಕಾರಣಕ್ಕಾಗಿ ಕರಡಿ ವಿಜಯಿ ಎಂದು ಆನೆ ಘೋಷಿಸಿತು.

ಆಗ ಖಡ್ಗಮೃಗವು, ‘ಇಂದಿನ ಪಂದ್ಯ ರೋಚಕವಾಗಿತ್ತು. ಸೋಲುವ ಪಂದ್ಯದಲ್ಲಿ ಗೆಲುವು ಸಾಧಿಸಿದ ಕರಡಿಯನ್ನು ನಾನು ಅಭಿನಂದಿಸುತ್ತೇನೆ. ಜೀವನದಲ್ಲಿ ನಾವು ಕೆಲವು ಸಲ ಸೋತುಬಿಡುತ್ತೇವೆ. ಆದರೆ ಕೊನೆಯವರೆಗೆ ಪ್ರಯತ್ನಪಟ್ಟು ಹೋರಾಡಿದರೆ ಖಂಡಿತ ನಮಗೆ ಜಯ ಸಿಗುತ್ತದೆ ಎನ್ನುವುದಕ್ಕೆ ಈ ಕರಡಿಯೇ ಸಾಕ್ಷಿ’ ಎಂದಿತು.

ನೀತಿ: ಸತತ ಪ್ರಯತ್ನದಿಂದ ಗೆಲುವು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !