ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿವರ್ತನೆ

ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ ಜ್ಞಾನವಲ್ಲಭ ಎಂಬ ಗುರು ಒಂದು ಪ್ರಶಾಂತ ಸ್ಥಳದಲ್ಲಿ ಗುರುಕುಲವೊಂದನ್ನು ನಡೆಸುತ್ತಿದ್ದನು. ಅವನು ತನ್ನ ಹೆಸರಿಗೆ ತಕ್ಕಂತೆ ಮಹಾಜ್ಞಾನಿಯಾಗಿದ್ದನು. ಪ್ರಚಂಡ ಮಾತುಗಾರನೂ, ಪ್ರಕಾಂಡ ಪಂಡಿತನೂ, ಪ್ರಜ್ವಲ ಮೇಧಾವಿಯೂ ಆಗಿದ್ದ ಅವನಿಗೆ ಗೊತ್ತಿಲ್ಲದ ವಿಷಯಗಳೇ ಇರಲಿಲ್ಲ. ಹಾಗಾಗಿ ಅವನಲ್ಲಿ ವಿದ್ಯೆ ಕಲಿಯಲು ಹತ್ತಿರದ ವಿದ್ಯಾರ್ಥಿಗಳಷ್ಟೇ ಅಲ್ಲದೆ ದೂರ ದೂರದಿಂದ ನೂರಾರು ವಿದ್ಯಾರ್ಥಿಗಳು ಗುರುಕುಲಕ್ಕೆ ಬರುತ್ತಿದ್ದರು. ತಣ್ಣಗೆ ಬೀಸುವ ಗಾಳಿ, ಮೆಲ್ಲಗೆ ಜುಳು ಜುಳು ಹರಿವ ನದಿ, ದೃಷ್ಟಿ ಹಾಯಿಸಿದಷ್ಟು ಕಾಣಸಿಗುವ ಕಣ್ಣಿಗೆ ತಂಪೆನಿಸುವ ಹಸಿರು, ಕಿ⇒ವಿಗೆ ಇಂಪೆನಿಸುವ ಹಕ್ಕಿ-ಪಕ್ಷಿಗಳ ಕಲವರವ, ಮೂಗಿಗೆ ಆಹ್ಲಾದವೆನಿಸುವ ಘಮ್ ಎನ್ನುವ ಹೂಮಳೆ, ಇಂಥಾ ಪ್ರಕೃತಿ ಸಹಜ ಪ್ರಶಾಂತ ವಾತಾವರಣದಲ್ಲಿ ಜ್ಞಾನವಲ್ಲಭ ಗುರುವಿನಿಂದ ವಿದ್ಯೆ ಕಲಿಯುವುದೇ ಒಂದು ಮಹಾಭಾಗ್ಯವೆಂದು ವಿದ್ಯಾರ್ಥಿಗಳು ಭಾವಿಸಿದ್ದರು. ಜ್ಞಾನವಲ್ಲಭ ಗುರುವೂ ಅಷ್ಟೇ, ತಾರತಮ್ಯವಿಲ್ಲದೆ ಯಾರಿಗೂ ವಂಚನೆ ಮಾಡದೆ ಎಲ್ಲಾ ವಿದ್ಯಾರ್ಥಿಗಳಿಗೂ ಅತ್ಯಂತ ನಿಷ್ಠೆಯಿಂದ ವಿದ್ಯೆ ಕಲಿಸುತ್ತಿದ.

ವಿಶೇಷವಾಗಿ ಗುರು ಜ್ಞಾನವಲ್ಲಭ ಎಂಥಾ ದುರ್ನಡತೆಯ ವಿದ್ಯಾರ್ಥಿಯನ್ನೂ ಸನ್ನಡತೆಯ ವಿದ್ಯಾರ್ಥಿಯಾಗಿ ಪರಿವರ್ತಿಸಿ ಬಿಡುತ್ತಿದ್ದ. ಇದರಿಂದ ಬಹಳಷ್ಟು ಪೋಷಕರು ಕೆಟ್ಟ ಚಾಳಿಯಿಂದ ದಾರಿ ತಪ್ಪಿದ ತಮ್ಮ ಮಕ್ಕಳನ್ನು ಸರಿದಾರಿಗೆ ಬರಲೆಂಬ ಸದುದ್ದೇಶದಿಂದ ಇಲ್ಲಿಗೆ ತಂದು ಸೇರಿಸುತ್ತಿದ್ದರು. ಗುರು ಜ್ಞಾನವಲ್ಲಭ ಕೂಡ ಕಿಂಚಿತ್ತೂ ಅಸಡ್ಡೆ ಮಾಡದೆ ಅಂತಹ ಮಕ್ಕಳಿಗೇ ಹೆಚ್ಚು ಆದ್ಯತೆ ನೀಡಿ ತಮ್ಮ ಗುರುಕುಲಕ್ಕೆ ಸೇರಿಸಿಕೊಳ್ಳುತ್ತಿದ್ದನು. ಅವರನ್ನೇ ತುಸು ಜಾಸ್ತಿಯಾಗಿ ಪ್ರೀತಿಸುತ್ತಿದ್ದನು.

ಒಂದು ದಿನ ಕಾಡು ಕುರುಬನೊಬ್ಬ ತನ್ನ ಮಗನನ್ನು ವಿದ್ಯೆ ಕಲಿಯಲು ಈ ಗುರುಕುಲಕ್ಕೆ ಸೇರಿಸಿ ``ಗುರುಗಳೇ, ನನ್ನ ಮಗ ಕಳ್ಳತನದ ಚಟಕ್ಕೆ ಬಿದ್ದಿದ್ದಾನೆ. ಏನೇ ಮಾಡಿದರೂ ಇದರಿಂದ ಅವನನ್ನು ಬಿಡಿಸಲಾಗುತ್ತಿಲ್ಲ. ನಿಮ್ಮ ಗುರುಕುಲದಲ್ಲೂ ಇವನು ಕಳ್ಳತನ ಮಾಡಬಹುದು. ಆದ್ದರಿಂದ ಸ್ವಲ್ಪ ನಿಗಾವಹಿಸಿ ಇವನನ್ನು ನೋಡಿಕೊಳ್ಳಿ’’ ಎಂದು ಹೇಳಿ ಹೋದನು. ಅಂದಿನಿಂದ ಆ ಕಾಡು ಕುರುಬನ ಮಗನಿಗೂ ಇತರ ವಿದ್ಯಾರ್ಥಿಗಳೊಡನೆ ಯಥಾ ಪ್ರಕಾರ ತಮ್ಮ ಗುರುಕುಲ ಪದ್ಧತಿಯಂತೆ ಗುರು ಜ್ಞಾನವಲ್ಲಭ ಪಾಠ-ಪ್ರವಚನದೊಡನೆ ವಿದ್ಯೆ ಕಲಿಸ ತೊಡಗಿದ. ದಿನದಿಂದ ದಿನಕ್ಕೆ ಇದು ಹಾಗೆಯೇ ಮುಂದುವರಿಯಿತು.

ಹೀಗಿರುವಾಗ ಒಮ್ಮೆ ಕಾಡು ಕುರುಬನ ಮಗ ಗುರುಕುಲದ ವಿದ್ಯಾರ್ಥಿಯೊಬ್ಬನಲ್ಲಿ ಕಳ್ಳತನ ಮಾಡುವಾಗ ಕದ್ದ ವಸ್ತುವಿನ ಸಮೇತ ಸಿಕ್ಕಿಬಿದ್ದ. ಈ ವಿಷಯವನ್ನು ಗುರು ಜ್ಞಾನವಲ್ಲಭನ ಗಮನಕ್ಕೆ ತರಲಾಯಿತು. ಅಷ್ಟೇ ಅಲ್ಲದೆ ಅಲ್ಲಿದ್ದ ವಿದ್ಯಾರ್ಥಿಗಳೆಲ್ಲಾ ಒಂದಾಗಿ ಕಳ್ಳತನ ಮಾಡಿದ ಕಾಡು ಕುರುಬನ ಮಗನನ್ನು ಗುರುಕುಲದಿಂದ ಹೊರಹಾಕುವಂತೆ ಮನವಿ ಸಲ್ಲಿಸಿದರು. ಗುರು ಜ್ಞಾನವಲ್ಲಭ ಏನೂ ಮಾತನಾಡದೆ ಮೌನವಾಗಿದ್ದ. ಮನವಿ ಸಲ್ಲಿಸಿದವರು ಮರು ಮಾತನಾಡದೆ ಸುಮ್ಮನಾಗಿಬಿಟ್ಟರು. ಹೆಚ್ಚು ಒತ್ತಾಯ ಮಾಡಿ ಗುರುಗಳಿಗೆ ಬೇಸರ ಮಾಡಬಾರದೆಂಬ ಉದ್ದೇಶ ಅವರದಾಗಿತ್ತು.

ಆದರೆ ಕೆಲವು ದಿನಗಳ ನಂತರ ಕಾಡು ಕುರುಬನ ಮಗ ಮತ್ತೊಬ್ಬ ವಿದ್ಯಾರ್ಥಿಯಲ್ಲಿ ಕಳ್ಳತನ ಮಾಡಿ ಮತ್ತೆ ಸಿಕ್ಕಿ ಬಿದ್ದ. ವಿಷಯವನ್ನು ಮತ್ತೆ ಗುರು ಜ್ಞಾನವಲ್ಲಭನ ಗಮನಕ್ಕೆ ತಂದು ಅವನ ಮೇಲೆ ಕ್ರಮ ಕೈಗೊಳ್ಳುವಂತೆ ಎಲ್ಲಾ ವಿದ್ಯಾರ್ಥಿಗಳೂ ಒತ್ತಾಯ ಮಾಡಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಗುರುಗಳ ಉತ್ತರ ಬರೀ ಮೌನವಾಗಿತ್ತು. ಇದರಿಂದ ಗುರುಕುಲದ ಎಲ್ಲಾ ವಿದ್ಯಾರ್ಥಿಗಳಿಗೆ ಭಾರಿ ಸಿಟ್ಟು ಬಂತು. ಎಲ್ಲರೂ ಒಂದಾಗಿ ಸೇರಿ ``ಒಂದಲ್ಲ ಎರಡು ಬಾರಿ ಕಳ್ಳತನ ಮಾಡಿ ಸಿಕ್ಕಿ ಬಿದ್ದಿರುವ ಅವನನ್ನು ಕೂಡಲೇ ಗುರುಕುಲದಿಂದ ಹೊರಹಾಕಿ, ಇಲ್ಲವೆಂದರೆ ನಾವುಗಳೇ ಹೊರ ಹೋಗಬೇಕಾಗುತ್ತದೆ’’ ಎಂದು ಎಚ್ಚರಿಕೆ ನೀಡಿ ಬೃಹತ್ ಪ್ರತಿಭಟನೆಯನ್ನೇ ಮಾಡಿದರು.

ಆಗ ಎಲ್ಲರನ್ನೂ ಸಮಾಧಾನಪಡಿಸಿ ಕೂರಿಸಿಕೊಂಡು ಗುರು ಜ್ಞಾನವಲ್ಲಭ ``ನೀವೆಲ್ಲ ವಿವೇಕಶೀಲ ವಿದ್ಯಾರ್ಥಿಗಳು, ಬಹಳ ಬುದ್ಧಿವಂತರು, ನಿಮಗೆ ಯಾವುದು ಸರಿ, ಯಾವುದು ತಪ್ಪು, ಏನನ್ನು ಮಾಡಬೇಕು, ಏನನ್ನು ಮಾಡಬಾರದೆಂಬುದು ತಿಳಿದಿದೆ. ನಿಮಗೆ ಬೇಕೆನಿಸಿದರೆ ಬೇರೆಡೆಗೆ ಹೋಗಿ ನಿಮಗೆ ಬೇಕೆನಿಸಿದ ಗುರುಗಳಿಂದ ಬೇಕೆನಿಸಿದ ಸ್ಥಳದಲ್ಲಿ ವಿದ್ಯೆ ಕಲಿಯಬಹುದು. ಆದರೆ ಯಾವುದು ಸರಿ, ಯಾವುದು ತಪ್ಪೆಂದು ತಿಳಿಯದ ಈ ಕಾಡು ಕುರುಬನ ಮಗನಿಗೆ ಯಾರು ವಿದ್ಯೆ ಕಲಿಸುತ್ತಾರೆ? ಯಾರು ಸೇರಿಸಿಕೊಳ್ಳುತ್ತಾರೆ? ನೀವೆಲ್ಲರೂ ಇಲ್ಲಿಂದ ಹೋದರೂ ಚಿಂತೆಯಿಲ್ಲ. ನಾನು ಮಾತ್ರ ಇವನನ್ನು ಗುರುಕುಲದಿಂದ ಹೊರಹಾಕುವುದಿಲ್ಲ. ಇಲ್ಲೇ ಉಳಿಸಿಕೊಂಡು ಪಾಠ ಕಲಿಸುತ್ತೇನೆ. ಈ ಕ್ಷಣವೇ ನೀವೆಲ್ಲಾ ಗುರುಕುಲ ಬಿಟ್ಟು ಹೊರಡಬಹುದು...’’ ಎಂದು ಖಡಾಖಂಡಿತವಾಗಿ ಹೇಳಿದ.

ಗುರು ಜ್ಞಾನವಲ್ಲಭನಿಂದ ಈ ಮಾತುಗಳನ್ನು ಕೇಳಿ ಕಳ್ಳತನ ಮಾಡಿದ್ದ ಕಾಡು ಕುರುಬನ ಮಗನ ಕಣ್ಣುಗಳು ಕಂಬನಿಯಿಂದ ತುಂಬಿ ಕೊಂಡವು. ಆ ಕ್ಷಣ ಅವನು ಪರಿವರ್ತನೆಗೊಂಡಿದ್ದ. ಕೂಡಲೇ ಗುರುಗಳ ಪಾದಕ್ಕೆರಗಿದ. ಗುರುವಿನ ಸಮ್ಮುಖದಲ್ಲಿ ಎಲ್ಲರಲ್ಲೂ ಕ್ಷಮೆ ಕೋರಿದ. ಅಂದಿನಿಂದ ಅವನು ಮತ್ತೆಂದೂ ಕಳ್ಳತನಕ್ಕೆ ಕೈ ಹಾಕಲಿಲ್ಲ. ದುರ್ಮಾರ್ಗ ಬಿಟ್ಟು ಸನ್ಮಾರ್ಗದಲ್ಲಿ ನಡೆದು ಇತರರಿಗೂ ದಾರಿ ದೀಪವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT