ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಕೊರಳಿನಲ್ಲಿ ಜಾತಿಯ ನಂಜು

ಸುಧಾ ‘ನಿಮ್ಮೊಡನೆ’
Last Updated 20 ಏಪ್ರಿಲ್ 2019, 13:52 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅಡ್ಡಾಡುವ ಅವಕಾಶ ದೊರೆಯಿತು. ಸುಡುಬಿಸಿಲು, ಜಲಕ್ಷಾಮ... ಇವ್ಯಾವೂ ಚುನಾವಣೆ ಬಗೆಗಿನ ಜನರ ಉತ್ಸಾಹವನ್ನು ಉಡುಗಿಸಿದಂತೆ ಕಾಣಿಸಲಿಲ್ಲ. ಜನತಂತ್ರ ಪ್ರಕ್ರಿಯೆಯಲ್ಲಿ ಜನರ ನಂಬಿಕೆ ಆ ಮಟ್ಟಿಗೆ ನೆಲೆಯೂರಿರುವುದು ಪ್ರಜಾಪ್ರಭುತ್ವದ ಬೇರು ಬಲಗೊಳ್ಳುತ್ತಿರುವುದರ ದ್ಯೋತಕ ಎಂದು ಯಾರಾದರೂ ಭಾವಿಸಬಹುದು.

ಗಿಡಮರಗಳಲ್ಲಿ ಎಲೆ ಕೂಡ ಅತ್ತಿತ್ತ ಅಲುಗಾಡುತ್ತಿರಲಿಲ್ಲ. ಗಾಳಿಯ ಗೈರುಹಾಜರಿ, ಸೆಕೆಯು ರಟ್ಟೆಗೆ ಮತ್ತಷ್ಟು ಬಲ ತಂದಿತ್ತು. ನಿಸರ್ಗದತ್ತವಾದ ಆ ಗಾಳಿಯ ಇರುವಿಕೆಯ ಬಗ್ಗೆ ಯೋಚಿಸುವುದಕ್ಕಿಂತ ಚುನಾವಣಾ ‘ಗಾಳಿ’ ಎತ್ತ ಕಡೆ ಬೀಸುತ್ತಿದೆಯೋ ಎಂದು ತಿಳಿಯುವ ತವಕ! ದೇವನಹಳ್ಳಿಯಲ್ಲಿ ಒಂದು ಕಡೆ ಕಾರು ನಿಲ್ಲಿಸಿ, ಜನರ ಮನದಿಂಗಿತ ತಿಳಿಯುವ ಪ್ರಯತ್ನವಾಗಿ ಅವರನ್ನು ಮಾತಿಗೆ ಎಳೆದವು.

ಈ ಕ್ಷೇತ್ರವನ್ನು ಈಗ ಪ್ರತಿನಿಧಿಸುತ್ತಿರುವ ಸಂಸದರ ಕೆಲಸಕಾರ್ಯಗಳ ಬಗ್ಗೆ ಕೆಲವರು ಒಳ್ಳೆಯ ಮಾತು ಆಡಿದರು. ಇನ್ನು ಕೆಲವರು ‘ಏನೂ ಮಾಡಿಲ್ಲ’ ಅಂತ ಟೀಕಿಸಿ, ಎದುರಾಳಿ ಅಭ್ಯರ್ಥಿ ಬಗ್ಗೆ ಅನುಕಂಪ ತೋರಿದರು (ಅವರು ಕಳೆದ ಸಲ ಸೋತಿದ್ದಾರೆ ಎಂಬ ಕಾರಣಕ್ಕೆ) ಅವೆಲ್ಲ ಇದ್ದದ್ದೇ. ಪರ–ವಿರೋಧ, ಜಾತಿ ಸಮೀಕರಣಗಳು ಎಲ್ಲಾ ಕಡೆ ಇರುವಂತಹುವೇ. ಅದರಲ್ಲಿ ವಿಶೇಷ ಏನೂ ಇಲ್ಲ.

ಆದರೆ, ಸ್ಥಳೀಯ ರಾಜಕಾರಣ ಮಾತ್ರವಲ್ಲದೆ, ರಾಷ್ಟ್ರ ರಾಜಕಾರಣದ ಬಗ್ಗೆಯೂ ಲೋಕಾಭಿರಾಮವಾಗಿ ಹರಟುತ್ತಿದ್ದ ನಡುವಯಸ್ಸಿನ ಒಬ್ಬರು, ಮಾತಿನ ಮಧ್ಯೆ ‘...ಅವರ ಮಗಳು... ಇವರ ಅಡುಗೆ ಮನೆಯೊಳಗೆ ಹೋಗಿಬಿಡುವುದೇ!’ ಎಂದು ಉದ್ಗಾರ ತೆಗೆದರು – ಆ ಹೆಣ್ಣುಮಗಳು ಯಾವುದೋ ಘೋರ ಅಪಚಾರ ಎಸಗಿದ್ದಾರೆ ಎಂಬಂತೆ. ‘ಪಾಪ, ಅವರಿಗೆ ಗೊತ್ತಿಲ್ಲ ಅಂತ ಕಾಣುತ್ತೆ’ ಎಂದು ಮರುಕ ಕೂಡ ವ್ಯಕ್ತಪಡಿಸಿದರು. ಅಂದರೆ, ‘ಆ’ ಜಾತಿಗೆ ಸೇರಿದವರು ‘ಈ’ ಜಾತಿಯವರ ಮನೆ ಒಳಗೆ ಹೋಗಬಹುದೇ? ಹೋದರೂ ಎಲ್ಲಿಯವರೆಗೆ ಹೋಗಬಹುದು ಎಂಬುದರ ಸಾಂಪ್ರದಾಯಿಕ ವಿಧಿನಿಯಮಗಳ ಅರಿವು ಇದ್ದಂತಿಲ್ಲ ಎಂಬರ್ಥದಲ್ಲಿ. ‘ನಮ್ಮದು ಅವರಿಗಿಂತ (ಆ ಉನ್ನತರ ಜಾತಿಗಿಂತ) ಇನ್ನೂ ಮೇಲಿನ ಜಾತಿ’ ಎಂದು ಬೇರೆ ಬೀಗಿದರು!

ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಕೇಂದ್ರದಲ್ಲಿ ಸಚಿವರಾಗಿದ್ದವರು, ಸದ್ಯಕ್ಕೆ ಕ್ಷೇತ್ರದ ಸಂಸದರು. ಸುಶಿಕ್ಷಿತರು, ಆರ್ಥಿಕವಾಗಿ ಬಲಾಢ್ಯರು. ಅಂತಹವರ ಮಗಳು, ಉನ್ನತ ಜಾತಿಯವರೊಬ್ಬರ ಮನೆಯೊಳಗೆ ಮತಯಾಚನೆ ಸಲುವಾಗಿ ಹೋಗಿದ್ದಕ್ಕೆ ಇಷ್ಟೊಂದು ಕಿಸರಾಗುವುದಾದರೆ, ಅಂತಹದೊಂದು ನಡೆ ಸಾರ್ವಜನಿಕ ಚರ್ಚಾ ವಸ್ತುವಾಗುವುದಾದರೆ ಪ್ರಜಾಪ್ರಭುತ್ವದ ಪ್ರಯೋಗಗಳ ಬಗ್ಗೆಯೇ ಅನುಮಾನ ಮೂಡದಿರದು.

‘ಇಂಡಿಯಾದ ಜನರು ಜಗತ್ತಿನಲ್ಲೇ ಅತ್ಯಂತ ದುಃಖಿಗಳು; ಜಾತಿಭೇದ, ಲಿಂಗಭೇದ ಮಾಡುವ ನಮ್ಮ ಮನಃಸ್ಥಿತಿಯೇ ಇದಕ್ಕೆ ಕಾರಣ’ ಎಂದು ಲೋಹಿಯಾ ಅವರು 60 ವರ್ಷಗಳಷ್ಟು ಹಿಂದೆಯೇ ಬರೆದಿದ್ದರು. ಅದು, ಇವತ್ತಿಗೂ ಅನ್ವಯ ಆಗುತ್ತಿರುವುದು, ಢಾಳಾಗಿ ಗೋಚರಿಸುತ್ತಿರುವುದು ದುರದೃಷ್ಟದ ಸಂಗತಿ.

ಪ್ರಜಾಪ್ರಭುತ್ವದ ಕೊರಳಿನಲ್ಲಿ ಸಿಲುಕಿರುವ ಜಾತಿಯ ಈ ‘ವಿಷ’ ಹೋಗಲಾಡಿಸಲು ಬೇರೆ ಬೇರೆ ಹಂತಗಳಲ್ಲಿ ಪ್ರಯತ್ನಗಳಾಗಿವೆ. ಆದರೂ ಸಾಮಾಜಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಆ ‘ಗಡ್ಡೆ’ಗಳನ್ನು ಕರಗಿಸಲು ಆಗಿಲ್ಲ. ಸಂವಿಧಾನ, ಕಠಿಣ ಕಾಯ್ದೆ ಕಟ್ಟಲೆಗಳು ಎಲ್ಲವೂ ಇದ್ದೂ ಅದು ಸಾಧ್ಯವಾಗಿಲ್ಲ. ಇದಕ್ಕೆ ಜೀವ ಎಲ್ಲಿಂದ ಬರುತ್ತಿದೆ, ಪೋಷಿಸುವ ಕೈಗಳು ಯಾವುವು ಎಂಬುದರ ಬಗ್ಗೆ ಯೋಚಿಸಬೇಕಾದ ಅಗತ್ಯ ಇದೆ.

ಅಂಚಿಗೆ ತಳ್ಳಲ್ಪಟ್ಟ ಜಾತಿಗಳ ಜನರು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಅವರು ಹೀಗೇ ನಡೆದುಕೊಳ್ಳಬೇಕು, ಪ್ರಬಲ ಜಾತಿಗಳ ಜನರು ಬಯಸುವ ರೀತಿ ನಡೆದುಕೊಂಡರಷ್ಟೇ ಅವರಿಗೆ ಉಳಿಗಾಲ, ಇಲ್ಲದೇ ಹೋದರೆ ಕಷ್ಟ ಎಂಬ ಅಲಿಖಿತ ನಿಯಮವೊಂದು ನಮ್ಮ ಸಾಮಾಜಿಕ ಪರಿಸರದಲ್ಲಿ್ದೆ. ‘ಅವರು, ಸಂಸದರಾದರೂ ದೇಗುಲದ ಒಳಗೆ ಬರುವುದಿಲ್ಲ. ಸವರ್ಣೀಯರ ಮನೆ ಜಗಲಿಯ ಮೇಲೆ ಕೂರುತ್ತಾರೆಯೇ ವಿನಾ ಒಳಗೆ ಬರುವುದಿಲ್ಲ’ ಎಂಬುದು ಮಹಾಮೆಚ್ಚುಗೆಯ ರೂಪದಲ್ಲಿ ಬಳಕೆಗೆ ಬಂದಿದೆ. ಅದರ ಹಿಂದಿರುವ ಹುನ್ನಾರ, ಅವಮಾನಗಳನ್ನು ತಿಳಿಹೇಳುವ ಧೈರ್ಯವನ್ನು ಇವತ್ತಿನ ರಾಜಕಾರಣ ಕಳೆದುಕೊಂಡಿರುವುದು ವಿಷಾದದ ಸಂಗತಿ.

ಸಾಮಾಜಿಕ ಕೆಡುಕುಗಳನ್ನು ಹೇಗೆ ನಿವಾರಿಸಬಹುದು ಎನ್ನುವುದಕ್ಕಿಂತ, ಹೇಗೆ ಮರುಜೀವ ಕೊಡಬಹುದು ಎಂಬುದರ ಕಡೆ ಗಮನ ಕೇಂದ್ರೀಕೃತವಾದಂತಿದೆ. ಬಿಕ್ಕಟ್ಟಿನ ಸನ್ನಿವೇಶಗಳನ್ನು ಹೇಗೆ ತಿಳಿಗೊಳಿಸುವುದಕ್ಕಿಂತ ಹೇಗೆ ಲಾಭ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಯೋಚಿಸುವ ಮನಸುಗಳೇ ಹೆಚ್ಚಾಗಿವೆ. ಜಾತಿ ಎಂಬುದು ಈ ನೆಲದ ಸತ್ಯ. ಹುಟ್ಟಿನಿಂದಲೇ ಅದು ಅಂಟಿಕೊಂಡಿರುತ್ತದೆ. ಆದರೆ ಜಾತಿ–ಧರ್ಮಗಳ ಬಗ್ಗೆ ಪೂರ್ವಗ್ರಹ ಬಿತ್ತುವ ಕೆಲಸ ನಡೆದಿದೆ. ಆ ಜಾತಿಯವರ ಮತಗಳು ಈ ನಿರ್ದಿಷ್ಟ ಪಕ್ಷ ಇಲ್ಲವೇ ವ್ಯಕ್ತಿಗೇ ಹೋಗುತ್ತವೆ. ಆ ಜಾತಿಯವರ ಮತಗಳು ಇವರಿಗೇ ಎಂದು ಹಳ್ಳಿಗಳಲ್ಲಿಯೂ ಲೆಕ್ಕ ಒಪ್ಪಿಸುವ ಕೆಲಸ ನಡೆದಿದೆ. ಜಾತಿಯನ್ನೋ ಧರ್ಮವನ್ನೋ ಸಾರಾಸಗಟಾಗಿ ಪಕ್ಷಗಳು ಇಲ್ಲವೇ ವ್ಯಕ್ತಿಗಳು ಗುತ್ತಿಗೆಗೆ ಹಿಡಿದಿದ್ದಾರೆ ಎಂಬಂತೆ ಮಾತನಾಡುವ ಮತ್ತು ಅದನ್ನು ನಂಬಿಸುವ ಪರಿಪಾಟ ದಿನೇ ದಿನೇ ಹೆಚ್ಚುತ್ತಿದೆ. ಇದು, ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹವುಗಳನ್ನು ತಿದ್ದುವ ಛಾತಿಯುಳ್ಳ ದಿಟ್ಟ ನಾಯಕರು ಈ ಚುನಾವಣೆಯಲ್ಲಾದರೂ ಆರಿಸಿಬರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT