ಕೈ ಜಾರಿದ ಕನಸು

7
ಭಾವಸೇತು

ಕೈ ಜಾರಿದ ಕನಸು

Published:
Updated:

ಆಗ ನಾನು ಆರನೇ ತರಗತಿಯಲ್ಲಿದ್ದೆ. ಒಮ್ಮೆ ಮನೆಯಲ್ಲಿ ನೆಂಟರಿಷ್ಟರು ಬಂದಿದ್ದರು. ಭರ್ಜರಿಯಾಗಿ ಅಡುಗೆ ತಿಂಡಿ ಸರಬರಾಜು ಆಯಿತು. ನಮ್ಮ ತಾತ ಹಾಗೂ ಅಜ್ಜಿ ಅಡುಗೆಯವರನ್ನು ಇಟ್ಟುಕೊಂಡು ನೆಂಟರಿಷ್ಟರು ಊರಿಗೆ ವಾಪಸು ಹೋಗುವ ತನಕ ಅವರಿಗೆ ಏನೂ ತೊಂದರೆ ಆಗದಂತೆ ನೋಡಿಕೊಂಡರು. ಅಡುಗೆಯವರೇನೋ ಸರಿಯಾಗಿ ಮಾಡುತ್ತಾರೆ ಸರಿ, ಆದರೆ ಬಿಸಿಲಿನ ವಾತಾವರಣ, ಬೆವರಿನ ಗುಳ್ಳೆ, ನಮ್ಮ ಊರಿನ ತಾಪ ಹೇಳಬೇಕೇ?

ನಾನು ಯಾಕೋ ಬಾಯಾರಿಕೆ ಎಂದು ಅಡುಗೆ ಮನೆಗೆ ಹೊಕ್ಕೆ. ಕಂಡದ್ದೇನು? ಅಡುಗೆಯವರು ಕಾಲು ಚಾಚಿ ಬೆವರು ಒರಸಿಕೊಳ್ಳುತ್ತಾ ಇದ್ದರು. ಪಾನಕ ಬೇಕೆಂದು ಕೇಳಿದಾಗ ಟವೇಲು ಅಲ್ಲೇ ಬಿಸಾಡಿ ಪಾನಕ ಮಾಡಲು ನಿಂಬೆ ಹಣ್ಣು ತಗೊಂಡರು. ನಾನು ಮಾತನಾಡುವಷ್ಟರಲ್ಲಿ ಪಾನಕ ರೆಡಿ. ನನ್ನ ಮನಸ್ಸೆಲ್ಲಾ ಅವರು ಕೈ ತೊಳೆಯದೇ ಪಾನಕ ಮಾಡಿದರಲ್ಲಾ ಎಂದು ಚಿಂತಿಸುತ್ತಿತ್ತು. ಅಂತೂ ನಾನು ಪಾನಕ ಕುಡಿಯಲೇ ಇಲ್ಲ. ಎಲ್ಲರಿಗೂ ಅಚ್ಚರಿ... ‘ಇಷ್ಟು ಗಲಾಟೆ ಮಾಡಿದವಳು ಯಾಕೆ ಕುಡಿಯಲಿಲ್ಲ; ಏನಾಯ್ತು?’ ಎಂದು ಕೇಳುತ್ತಲೇ ಇದ್ದರು. ಅಂತೂ ಅಡುಗೆಯವರು ಮನೆಗೆ ಹೋದ ನಂತರವೇ ಈ ವಿಷಯ ಎಲ್ಲರಿಗೂ ತಿಳಿಸಿದೆ. ಎಲ್ಲರಿಗೂ ವಾಕರಿಕೆ.

ಈ ಘಟನೆ ನಡೆದ ನಂತರ ನಾನು ‘ಯಾವಾಗಲೂ ಅಡುಗೆ ಚೆನ್ನಾಗಿ ಮಾಡಬೇಕು. ಏನೇ ಆದರೂ ಮನೆಯಲ್ಲಿ ನೆಂಟರಿಷ್ಟರು ಬಂದರೂ ನಾವೇ ಸುಧಾರಿಸಿಕೊಳ್ಳುವಷ್ಟು ಧೈರ್ಯ ಇರಬೇಕು’ ಎಂದುಕೊಂಡೆ. ಅವತ್ತಿನಿಂದ ನಾನು ಯಾವಾಗಲೂ ಅಡುಗೆ ಪುಸ್ತಕಗಳ ಮೇಲೆ ಮೋಹ ಬೆಳೆಸಿಕೊಂಡೆ. ಎಲ್ಲಿ ಹೋದರೂ ಹೊಸ ರುಚಿ. ಊರಿನಿಂದ ಬೇರೆ ಊರಿಗೆ ಪ್ರಯಾಣ ಮಾಡಿದರಂತೂ ಸೈ. ರೈಲಿನಲ್ಲಿ ನನ್ನ ಜೊತೆ ಹೆಂಗಸರಿದ್ದರೆ ಅವರ ಪಾಡು ಹೇಳುವುದು ಬೇಡ, ಕೂಡಲೇ ಪೆನ್ನು ಕೇಳಿ ಪುಸ್ತಕದಲ್ಲಿ ರೆಸಿಪಿ ಬರೆಯುವುದು. ಮನೆಗೆ ಬಂದ ನಂತರ ಮಾಡುವುದು. ಹೀಗೇ ನಡೆಯಿತು ಹಲವಾರು ವರುಷಗಳು.

ಈಗ ಮದುವೆಯಾಗಿ ಸಂಸಾರ ನಡೆಸುತ್ತಿದ್ದರೂ, ತಕ್ಕಮಟ್ಟಿಗೆ ಅಡುಗೆ ಮಾಡಲು ಬರುವುದಿಲ್ಲ ಎಂದು ಬೇಜಾರು. ಕ್ಲಾಸಿಗೆ ಸೇರೋಣ ಎಂದರೆ ಅತ್ತೆ ಮನೆಯವರ ಎದುರಿಗೆ ಅವಮಾನ. ಹೀಗಾಗಿ ಪುನಃ ಹೊಸ ರುಚಿಗಳ ಒಳಗೆ ನನ್ನ ಬಂಧನ.

ಇದಾಗಿ ಸುಮಾರು ವರುಷಗಳೇ ಕಳೆದಿವೆ. ಡೈರಿ ಮುಚ್ಚಿ ಇಡುವಾಗ ಪಕ್ಕದಲ್ಲಿ ಇಟ್ಟಿದ್ದ ಡಬ್ಬಿ ಬಿತ್ತು. ಶಬ್ದ ಕೇಳಿ ಮಕ್ಕಳು, ಯಜಮಾನರು ಓಡಿ ಬಂದರು.‘ಏನಾಯಿತು? ಈಗ ಶಬ್ದ ಆಯಿತಲ್ಲ. ಇಲಿ ಇದೆಯೋ ಏನೋ?’ ಎಂದರು.

‘ಏನಿಲ್ಲ. ಮನೆ ಓರಣವಾಗಿ ಇಡುತ್ತಿದ್ದೆ’ ಎಂದು ಸುಳ್ಳು ಹೇಳಿದರೂ ಮಗನಿಗೆ ಡಬ್ಬಿಯಲ್ಲಿ ಏನಿದೆ ಎಂಬ ಕೂತೂಹಲ ತಾಳಲಾರದೆ ನನ್ನ ಮಾತಿಗೆ ಬೆಲೆಯೇ ಕೊಡದೆ ಡಬ್ಬಿ ತೆಗೆದನು. ದಾರದಿಂದ ಕಟ್ಟಿದ ಡಬ್ಬಿ ಬಹಳ ಭಾರವಾಗಿತ್ತು. ಊರಿನಿಂದ ಬರುವಾಗ ತಾಯಿ ಮನೆಯಿಂದ ಕಳುಹಿಸಿದ ಊಡುಗೊರೆ ಡಬ್ಬಿಯಲ್ಲಿ ಹಾಕಿ ಇಟ್ಟಿರಬೇಕು ಎಂದುಕೊಂಡರಂತೆ. ತೆರೆದು ನೋಡಿದರೆ ಚಿಕ್ಕ ಚಿಕ್ಕ ತುಂಡುಗಳಲ್ಲಿ ಹೊಸ ರುಚಿ. ಮಂಗಳೂರಿನ ರಸಮ್‍ನಿಂದ ಕಾಶ್ಮೀರದ ಪುಲಾವ್ ತನಕ. ನನಗೆ ಮುಜುಗರವಾಯಿತು. ಯಾವುದು ಎಲ್ಲರಿಂದಲೂ ಅಡಗಿಸಿ, ಅವಹೇಳನಕ್ಕೆ ಗುರಿ ಆಗಬಾರದೆಂದು ಮನಸ್ಸಿನಲ್ಲಿ ಇತ್ತೋ ಅದೇ ಇಂದು ಅವರ ಕೈಗೆ ಸಿಕ್ಕಿ ಬಲಿಪಶುವಿನಂತೆ ಒದ್ದಾಡಿದೆ.

‘ಇಷ್ಟಲ್ಲಾ ಇಟ್ಟುಕೊಂಡರೂ ಒಂದು ನೆಟ್ಟಗೆ ಅನ್ನ ಸಾರು ಮಾಡಲು ಒದ್ದಾಡುತಿಯಲ್ಲ. ಯಾವ ಘನಕಾರ್ಯಕ್ಕೆ ಇದನ್ನು ಇಟ್ಟುಕೊಂಡಿದ್ದಿಯಾ?’ ಎನ್ನುತ್ತಲೂ ಕಣ್ಣೀರು ಧಾರಾಕಾರವಾಗಿ ಇಳಿಯಿತು. ಅಂದು ಕಟ್ಟಿದ ಕನಸು ಇಂದು ನನ್ನ ಅರಿವಿಲ್ಲದೇ ಕೈ ಜಾರಿತು ಎಂದುಕೊಂಡೆ. ಇಷ್ಟಾದರೂ ಹೊಸ ರುಚಿ ವಿಭಾಗದಲ್ಲಿ ಬರುವ ಲೇಖನಗಳನ್ನು ಇಡಲೋ ಬೇಡವೋ ಅಂತ ಯೋಚನೆ ಮಾಡುತ್ತಾ ಡಬ್ಬಿಯೇ ಬಿಸಾಡೋಣ ಅಂದುಕೊಂಡೆ. ಈ ಕನಸು ಕೈ ಜಾರುವುದೋ ಇಲ್ಲವೋ ತಿಳಿಯದು.
 

ಬರಹ ಇಷ್ಟವಾಯಿತೆ?

 • 11

  Happy
 • 6

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !