ಶುಕ್ರವಾರ, ಜುಲೈ 1, 2022
23 °C

ಬಚ್ಚೇ... ಮನಿ ಕಡೆ ಗಿಚ್ಚೆ?!

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ವಿಜಯದಶಮಿ ದಿವ್ಸ ಪ್ರಭ್ಯಾಗ್‌ ಬನ್ನಿ ಕೊಟ್ಟು ‘ನಾನು ನೀನು ಬಂಗಾರದ್ಹಂಗ್ ಇರೋಣ ದೋಸ್ತ’ ಅಂತ ಹೇಳಿ ಬರಬೇಕಂತ ಅವ್ನ ಮನಿ ಕಡೆ ಹೊಂಟಿದ್ಯಾ. ಅಲ್ಲಿ ಹುಡುಗ್ರು ಗೋಲಿ ಆಟಾ ಆಡಾಕತ್ತಿದ್ರು. ಸಣ್ಣವರಿದ್ದಾಗ ಚೆಡ್ಡಿ, ಅಂಗಿ ಕಿಸೆದಾಗ್‌ ಗೋಲಿ ತುಂಬ್ಕೊಂಡು ಕೇಕೆ ಹಾಕುತ್ತಿದ್ದ ದಿನಗಳ ನೆನಸ್ಕೋತ, ಮನಿ ಒಳಗ್ ಕಾಲಿಟ್ಟೆ. ‘ಬಾರಪಾ, ಪೂಜಾ ಟೈಮಿಗೆ ಸರಿಯಾಗಿ ಬಂದಿ ನೋಡ್‌’ ಎಂದ. ‘ಯಾವ ಪೂಜೆನೊ’ ಎಂದೆ. ‘ಟೀವಿ ಪೂಜೆ’ ಎನ್ನುತ್ತ, ಟೀವಿಗೆ ಕುಂಕುಮ, ಅರಿಸಿನ ಹಚ್ಚಿ, ಊದಿನಕಡ್ಡಿ ಹಚ್ಚಿ, ಮಂಗಳಾರತಿ ಬೆಳಗಿ ಟೆಂಗಿನಕಾಯಿ ಒಡ್ಯಾಕತ್ತ.

‘ಏಯ್ ಹುಚ್ಮಲ್ಲ, ಎಲ್ರೂ ಆಯುಧ ಪೂಜೆ ದಿನಾ ರಫೇಲ್‌, ಕಾರ್‌, ಬೈಕ್‌, ಹರಿತ ನಾಲಿಗೆ, ಮಷಿನ್‌ಗಳಿಗೆ ಪೂಜೆ ಮಾಡಿದ್ರ, ನೀ ಮೂರ್ಖರ ಪೆಟ್ಟಿಗೆಗೆ ಪೂಜೆ ಮಾಡಾಕತ್ತಿಯಲ್ಲೋ. ತಲ್ಯಾಗೇನ್ ಹೆಂಡಿ ತುಂಬ್ಕೊಂಡಿ ಏನ್’ ಎಂದು ಬೈದೆ.

‘ತಲಿ ಇದ್ರ ಅಲ‍್ರಿ ಹೆಂಡಿ ಪ್ರಶ್ನೆ ಬರೂದು. ಏನ್‌ ಕೇಳ್ತೀರಿ ಇವರ ಕತೀನs. ಮೊನ್ನೆ ಮೂರು ದಿನಾ ನಾಷ್ಟಾ– ಊಟಾ, ಕೆಲ್ಸಾ ಬೊಗ್ಸಿ ಬಿಟ್ಟು ಕುಂತಿದ್ರು. ಟೀವ್ಯಾಗ್‌ ಅವರ ಫರಮಾಸಿ ಪೋಗ್ರಾಂಗಳು ಪ್ರಸಾರ್‌ ಆಗ್ದ ಆಕಾಶನ ಕಳಚಿ ಮೈಮ್ಯಾಲ್‌ ಬಿದ್ಹಂಗ್‌ ಒದ್ದಾಡತಿದ್ರು’ ಎಂದು ಪ್ರಭ್ಯಾನ ಹೆಂಡ್ತಿ ಪಾರು ಗುಡುಗಿದಳು.

‘ಏಯ್‌ ಕಮಂಗಿ, ಕಾಗಿ– ಗುಬ್ಬಕ್ಕನ ಕತಿ ಹೇಳ್ಬೇಡ’ ಎಂದು ಪ್ರಭ್ಯಾ ಜೋರ್ ಮಾಡ್ದಾ.

‘ನಾ ಯಾಕ್‌ ಕಾಗಿ ಗುಬ್ಬಕ್ಕನ ಕತಿ ಹೇಳ್ಳಿ. ಕಾಗೇ ರೀ ಕತೀನ್ನ ಹೇಳಾಕತ್ತೀನಿ. ಸಿದ್ರಾಮಣ್ಣ ಸಿ.ಎಂ. ಆಗಿದ್ದಾಗ ಅವರ ಕಾರ್‌ ಮ್ಯಾಗ್‌ ಕಾಗಿ ಕುಂತಿದ್ದನ್ನ ಬೆಳಗಿಂದ ಸಂಜೀತನಕ ಕಾರ್ಯಕ್ರಮ ಪ್ರಸಾರ ಮಾಡಿದ್ದ ಟೀವಿಯವ್ರು ಈಗ ಕಾಗೇ ರೀ ಅವ್ರು ವಿಧಾನಸಭಾ ಕಲಾಪನ ನೇರ ಪ್ರಸಾರ ಮಾಡಾಕ್‌ ಕಲ್ಲ ಹಾಕಿದ್ದಕ್ಕ ಬೀದಿಗೆ ಇಳದಾರ್‌. ಇವರಂತವ್ರಿಗೆ ಶಾಣೆ ಬೇಜಾರ್‌ ಆಗೇದ್ರಿ. ಕಲಾಪದಲ್ಲಿನ ರೋಚಕ ದೃಶ್ಯ, ಆಚಾರವಿಲ್ಲದ ನಾಲಿಗೆಯ ಅಟಾಟೋಪ, ಅಂಗಿ ಹರ್ಕೊಂಡು ದಾಂದಲೆ ಮಾಡುವವರ ಅರೆಬತ್ತಲೆ ಡಾನ್ಸ್‌, ಮೊಬೈಲ್‌ನ್ಯಾಗ್‌ ಅಶ್ಲೀಲ ಚಿತ್ರ ನೋಡುವವರ ಭರ್ಜರಿ ಬಯಲಾಟ ಪ್ರಸಾರ ಮಾಡತಿದ್ರ ಇವ್ರು, ಕಣ್ಣು ಬಾಯಿ ಬಿಟ್ಕೊಂಡು ಕಟ್ಕೊಂಡವಳ ಕಡೆ ಕಣ್ಣೆತ್ತಿಯೂ ನೋಡ್ದೆ ಕುಂತ್ಕೊತಿದ್ರು’ ಅಂತ ದಬಾಯಿಸಿದಳು.

ನಮೋ ಸಾಹೇಬ್ರು, ಸಿ.ಎಂ. ಭೆಟ್ಟಿಗೆ ಅವಕಾಶ ಕೊಡ್ದ ಅವಮಾನಿಸಿದ್ಹಂಗ್‌, ಚೆಡ್ಡಿ ಗೆಳೆಯನ ಎದುರು ಹೆಂಡ್ತಿ ತನ್ನ ಮಾನಾನ ಮೂರು ಕಾಸಿಗೆ ಹರಾಜ್ ಹಾಕ್ತಿದ್ದರೂ ಪ್ರಭ್ಯಾ ತುಟಿಪಿಟಕ್‌ ಅನ್ನಲಿಲ್ಲ. ಆಡಿಯೋರಪ್ನೋರ್ ಥರಾ, ಅವಡುಗಚ್ಚಿ ಸಿಟ್ಟನ್ನ ಹೊರಗ್‌ ಹಾಕಲಿಲ್ಲ.

‘ಯಾಕೊ ಹೆಂಡ್ತಿ ನಿನ್ನ ಬಾಯಿ ಹೊಲ್ದಾಳ್ ಏನ್’ ಎಂದು ಕೆಣಕಿದೆ.

‘ಸುಮ್ಮನಿರಲೇ ಅಡ್ನಾಡಿ. ಆಕಿ ಕಿವಿಗೆ ಬಿದ್ರ ಗುಡುಗು ಸಿಡಿಲು ಚಾಲೂ ಆಗ್ತಾವ್’ ಅಂತ ಹೇಳ್ದ. ಅಷ್ಟರಾಗ್‌, ‘ರೀ, ಏನ್‌ ಕೆಟ್ಟ ವಾಸನಿ ಬರಾಕತ್ತದರೀ. ಇಲಿಗಿಲಿ ಸತ್ತದ ಏನ್‌ ನೋಡ್ರಿ’ ಅಂದ್ಳು ಪಾರು.

‘ಮುನ್ಸಿಪಾಲ್ಟಿಯವ್ರು ಬೀದ್ಯಾಗಿನ ಕಸಾ ಎತ್ತಿಲ್ಲ. ಅದ್ರ ವಾಸನಿ ಬರಾಕತ್ತಿರಬೇಕ್‌ ಏಳ್‌’ ಎಂದ.

‘ನಮೋ ಸಾಹೇಬ್ರು ಮಹಾಬಲಿಪುರಂ ಬೀಚ್‌ನ್ಯಾಗ್‌ ಕಸಾ ಹೆಕ್ಕಿ ಟ್ವಿಟರ್ನ್ಯಾಗ್‌ ಸಿನಿಮಾ ಪೋಸ್ಟರ್‌ ಥರಾ ಜಬರ್‌ದಸ್ತ್ ಪೋಸ್‌ ಕೊಟ್ಟಿದ್ದನ್ನು ನೋಡಿ ಭಲೆ ಭಲೆ ಎನ್ನುವ ಬದಲಿಗೆ, ನಿನ್ನಂಥ ಬೂತ್‌ ಮಟ್ಟದ ಕಾರ್ಯಕರ್ತರು ಮನಿ ಮುಂದಿನ ಕಸ ಹೆಕ್ಕಿದ್ರ ಊರ್‌ ಸ್ವಚ್ಛ ಆಗಿರ್ತದ’ ಎಂದೆ.

‘ಅದೆಲ್ಲ ಪ್ರಚಾರಕ್ಕ ಮಾಡಿದ್ದೇಳೋ, ಅಷ್ಟು ಗೊತ್ತಾಗುದಿಲ್ಲೇನ್‌' ಅಂತ ಹೇಳಿ, ತಕ್ಷಣವೇ ನಾಲ್ಗಿ ಕಚ್ಗೊಂಡ. ಅಂವಾ ಹಂಗ್‌ ಹೇಳೂದಕ್ಕೂ ವಿಧಾನಸೌಧದಾಗ್‌ ಸತ್ತ ಇಲಿ ದುರ್ವಾಸನೆಯ ಸುದ್ದಿ ನನಗ್‌ ಥಟ್ಟನೆ ನೆನಪಾಯ್ತು. ಇಲಿ ದುರ್ವಾಸನೆ ‘ರಾಜಾ ಹುಲಿ’ ಮೂಗಿಗೂ ಬಡಿದದ್ದು ನೆನಪಿಸಿದೆ.

‘ವಿಘ್ನ ಸಂತೋಷಿಗಳು ಪಿ(ಕ)ಟೀಲಿಗೆ ಕೀ ಕೊಟ್ಟು ಅಪಸ್ವರ ನುಡಸಾಕತ್ತಾರ್. ಹುಲಿಗೆ ಕಾಟಾ ಕೊಟ್ಟು ಇಲಿ ಆಸೆ ತೋರ‍್ಸಿ ಬೋನಿನ್ಯಾಗs ಇರಿಸೋಹಂಗ್‌ ಕಾಣಸ್ತದ. ಅದ್ಕs ಹುಲಿ ಆವಾಜ್‌ ಅಡಗೇದ’ ಎಂದೆ.

‘ಹುಲಿ ಯಾವಾಗಲೂ ಹುಲಿನs ಮಗನs. ಹುಲಿ ಗರ್ಜನೆಗೆ ವಿ(ನಿ)ಧಾನಸೌಧ ಅಷ್ಟೇ ಅಲ್ಲ, ಅಲ್ಲಿರುವ ಇಲಿಗಳೂ ಹೆದರ‍್ಯಾವ್‌ ಅಂದ್‌ಮ್ಯಾಲ್‌ ವಿಘ್ನ ಸಂತೋಷಿಗಳಿಗೂ ಇವತ್ತಲ್ಲ ನಾಳೆ ವಿಘ್ನ ಕಾದದ್‌ ನೋಡಂತಿ’ ಎಂದು ಮೀಸೆ ತಿರುವಿದ.

‘ಹುಲಿ– ಇಲಿ ಸುದ್ದಿ ಬಿಡು. ಅನರ್ಹ ಶಾಸಕರ ಅರ್ಹತೆ (?) ವಾಪಸ್ ಬಂದ್ರ, ಘರ್ ವಾಪ್ಸಿ ಬಗ್ಗೆ ಚಿಂತಿ ಮಾಡಾಕತ್ತಾರಂತಲ್ಲೊ’ ಎಂದೆ.

‘ಹಂಗ್ ಆದ್ರ ಕಮಲದ ಸರ್ಕಾರ ಮತ್‌s ಬಾಡತೈತಿ ಏನೊ. ಇನ್ನೂ ಯಾರಾರೊ ಡಿ.ಸಿ.ಎಂ. ಆಗಾಕ್ ಹೊಂಟಾರ್. ಡಿಸೆಂಬರ್‌ದಾಗ್‌ ದೊಡ್ಡ ಹುದ್ದೆ ಸಿಗ್ತದ ಅಂತ ಕತ್ತಿನೂ ಹೊಸಾ ಕನಸ್ ಕಾಣಾಕತ್ತದ’ ಎಂದ. ಅದೇ ಹೊತ್ತಿಗೆ ಕೇಳಿ ಬಂದ ಹುಡುಗರ ಗದ್ದಲಕ್ಕ ಇಬ್ರೂ ಹೊರಗ್‌ ಹೋಗಿ, ಏನ್ರೊ ನಿಮ್ಮ ಜಗಳಾ ಅಂತ ಕೇಳಿದೆ.

‘ಗೋಲಿ ಆಟದಾಗ್‌ ಬಚ್ಚೆ ಆದ್ರ ಮನಿಕಡೆ ಗಿಚ್ಚೆ ಅಂತ ನಾ ಅಂದ್ರ, ಇಂವಾ, ‘ಮರಿ ಬಚ್ಚೆ ಕೈಕಡೆ ಗಿಚ್ಚೆ’ ಅಂತಾನ ನೋಡ್ರಿ’ ಅಂತ ಒಬ್ಬಾಂವ ದೂರಿದ. ‘ಸರಿ ಹೋಯ್ತು. ಬಿಜೆಪಿ ಸಿಎಮ್ಮು ಮತ್ತು ಅಧ್ಯಕ್ಷರು ಗೋಲಿ ಆಟ ಆಡೊ ಮಕ್ಕಳಂತೆ ಆಡ್ತಾರೆ’ ಅಂತ ಸಿದ್ರಾಮಣ್ಣ ಹೇಳಿದ್ದಕ್ಕೂ, ಗೋಲಿ ಆಟದಾಗೂ ಬಚ್ಚೇ ಮನಿ ಕಡೆ ಗಿಚ್ಚೆ ಅಂತ ಹೇಳೊದಕ್ಕೂ ಎಷ್ಟ್ ಕಾಕತಾಳೀಯ ಅದ ನೋಡೊ’ ಎಂದೆ.

ನನ್ನ ಮಾತ್ ಕೇಳಿ ಹುಡುಗ್ರು ಹೋ ಅಂತ ಕೂಗ್ತಾ, ‘ಬಚ್ಚೇ.. ಮನಿ(ಕೈ) ಕಡೆ ಗಿಚ್ಚೆ’ ಅಂತ ರಾಗವಾಗಿ ಹೇಳಾಕತ್ರು. ಏನ್‌ ಉತ್ರಾ ಕೊಡುದು ಗೊತ್ತಾಗ್ದ ಪ್ರಭ್ಯಾ ಸತ್‌ ಇಲಿ ಹೊರಗ್ ಒಗಿದದs ಅಂತ ಹೇಳ್ತಾ ಮನಿ ಒಳ್ಗ ಹೋದಾ. ಹೆಂಡ್ತಿ ಏನೊ ಸಾಮಾನ್ ತರಾಕ್ ಹೇಳಿದ್ದು ನೆನಪಾಗಿ ನಾನು ಬಜಾರ್ ಕಡೆ ಗಿಚ್ಚೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು