ಗುರುವಾರ , ಫೆಬ್ರವರಿ 27, 2020
19 °C

ಜಲವಳ್ಳಿ ವೆಂಕಟೇಶ ರಾವ್ ಯಕ್ಷರಂಗದ ಸವ್ಯಸಾಚಿ

ಡಾ.ಸತೀಶ ಜಿ. ನಾಯ್ಕ Updated:

ಅಕ್ಷರ ಗಾತ್ರ : | |

ಜಲವಳ್ಳಿಯವರು ಶಾಲೆಯ ಮೆಟ್ಟಿಲೇರಿದವರಲ್ಲ. ಹೆಬ್ಬೆಟ್ಟಿನ ಗುರುತಿನಿಂದಲೇ ಪ್ರಪಂಚದ ಉದ್ದಗಲಕ್ಕೆ ತಿರುಗಾಡಿದವರು. ತನ್ನ ಬದುಕಿನ ಅನುಭವವನ್ನೇ ಬಂಡವಾಳವಾಗಿರಿಸಿಕೊಂಡು ಯಕ್ಷಗಾನ ರಂಗದಲ್ಲಿ ಬೆಳೆದ ಅಪರೂಪದ ವ್ಯಕ್ತಿ.

ಕರ್ನಾಟಕದ ಕರಾವಳಿಯ ಯಕ್ಷಗಾನ ಕಲೆಯಲ್ಲಿ ತನ್ನದೇ ಆದ ವಿಶಿಷ್ಟವಾದ ಛಾಪು ಮೂಡಿಸಿ ಗೆಲುವಿನ ಪಟ್ಟವೇರಿದ ಸ್ವಯಂಭೂ ಕಲಾವಿದ ಜಲವಳ್ಳಿ ವೆಂಕಟೇಶ ರಾವ್. ಇವರು ಆರು ದಶಕಗಳಿಗೂ ಹೆಚ್ಚುಕಾಲ ಸ್ತ್ರೀ ವೇಷ, ಪುಂಡು ವೇಷ, ರಾಜ ವೇಷ, ನಾಯಕ, ಪ್ರತಿನಾಯಕ ಮುಂತಾದ ಪಾತ್ರಗಳನ್ನು ನಿರ್ವಹಿಸಿ, ಯಕ್ಷರಂಗದಲ್ಲಿ ಮೆರೆದಾಡಿದ ಸವ್ಯಸಾಚಿ ಕಲಾವಿದ.

ಇವರ ವೇಷಗಳು ಯಾವಾಗಲೂ ಪ್ರೇಕ್ಷಕರಿಗೆ ರಸಾನುಭೂತಿ ನೀಡುವ ಜೊತೆಗೆ ಚಿಂತನೆಗೆ ಒಳಗಾಗುವಂತೆ ಮಾಡುತ್ತಿದ್ದವು. ಜನಮಾನಸದಲ್ಲಿ ಅಸಾಮಾನ್ಯ ಕಲಾವಿದ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ‘ಗದಾಯುದ್ಧ’ ಪ್ರಸಂಗದಲ್ಲಿ ಭೀಮನ ಪಾತ್ರ ಮಾಡಿ, ‘ಮಹಾಭಾರತದ ಭೀಮ’, ‘ಅಭಿನವ ಭೀಮ’ ಎಂದು ಪ್ರಸಿದ್ಧಿ ಪಡೆದರೆ, ‘ಶನೀಶ್ವರ ಮಹಾತ್ಮೆ’ ಎಂಬ ಪ್ರಸಂಗದಲ್ಲಿ ಶನೀಶ್ವರನ ಪಾತ್ರ ಮಾಡಿ ‘ದೈವ ಶನೀಶ್ವರ’ ಎಂದು ವಿರಾಜಮಾನವಾಗಿದ್ದಾರೆ. ಇವರು ಯಕ್ಷಗಾನ ಕಲಾವಿದರು ಹೇಗೋ ಹಾಗೇ, ವೈಚಾರಿಕ ವಿಚಾರವಂತರೂ ಆಗಿದ್ದರು.

ಜಲವಳ್ಳಿಯವರು ಶಾಲೆಯ ಮೆಟ್ಟಿಲೇರಿದವರಲ್ಲ. ಹೆಬ್ಬೆಟ್ಟಿನ ಗುರುತಿನಿಂದಲೇ ಪ್ರಪಂಚದ ಉದ್ದಗಲಕ್ಕೆ ತಿರುಗಾಡಿದವರು. ತನ್ನ ಬದುಕಿನ ಅನುಭವವನ್ನೇ ಬಂಡವಾಳವಾಗಿರಿಸಿಕೊಂಡು ಯಕ್ಷಗಾನ ರಂಗದಲ್ಲಿ ಬೆಳೆದ ಅಪರೂಪದ ವ್ಯಕ್ತಿ. ವಿದ್ಯೆ ಇಲ್ಲದೇ ಹೋದರೂ, ಬುದ್ಧಿವಂತಿಕೆಯಿಂದ ಬದುಕಿದವರು. ಲೋಕಕ್ಕೆ ಅಂಜದೆ ಬರುವ ಕಷ್ಟಕ್ಕೆ ಹೆದರದೆ ಎಲ್ಲವನ್ನು ಎದುರಿಸುತ್ತ ಕಲಾರಂಗದಲ್ಲಿ ಹೊಸ ಹೆದ್ದಾರಿ ನಿರ್ಮಿಸಿದವರು. ಯಕ್ಷಗಾನದ ತೆಂಕು- ಬಡಗು ಎನ್ನದೆ, ಎಲ್ಲಾ ರಂಗನೆಲೆಯಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡವರು. ಕಲೆ ಎಂದರೆ ಅದು ನಿತ್ಯನೂತನ ಎಲೆ ಎಂದು, ಕಲೆಯೊಂದಿಗೆ ಬದುಕಿದ ಜೀವಿಯಾಗಿದ್ದರು.

ವೆಂಕಟೇಶ ರಾವ್ ಜನಿಸಿದ್ದು ಹೊನ್ನಾವರ ತಾಲ್ಲೂಕಿನ ಜಲವಳ್ಳಿಯಲ್ಲಿ(1933ರ ನವೆಂಬರ್ 1ರಂದು). ತಂದೆ ಬೊಮ್ಮ ಮಡಿವಾಳ. ತಾಯಿ ಶ್ರೀದೇವಿ ಮಡಿವಾಳ. ತನ್ನ ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರಿಂದ ಕೂಲಿ ಮಾಡಿ ಜೀವನ ಸಾಗಿಸುವ ಸಂದರ್ಭ ಬಂತು. ಕೆಲಸ ಮಾಡುತ್ತಲೇ ಯಕ್ಷಗಾನ ಕಲಿಯಲಾರಂಭಿಸಿದರು. ಇವರಿಗೆ ಪ್ರಾರಂಭದಲ್ಲೇ ಗೆಳೆಯರಾಗಿ, ಮಾರ್ಗದರ್ಶಕರಾಗಿ ಸಿಕ್ಕ ಡಾ.ಪದ್ಮನಾಭಯ್ಯ (ಹೈಗುಂದ ಡಾಕ್ಟರು) ಉತ್ತಮ ಹವ್ಯಾಸಿ ಕಲಾವಿದರಾಗಿದ್ದರು. ಇವರೇ ರಾವ್ ಅವರಿಗೆ ಯಕ್ಷಗಾನದ ಗುರುಗಳು. ನಂತರ ಮಾವಿನಕುರ್ವ ಮೇಳದ ಯಜಮಾನರಾದ ತಿಮ್ಮಪ್ಪನಾಯ್ಕರ ಆಶ್ರಯದಲ್ಲಿ ಕೆಲಕಾಲ ಕಲಾಭ್ಯಾಸದಲ್ಲಿ ತೊಡಗಿದರು. ದೀಪಾವಳಿ ಪಾಡ್ಯದಲ್ಲಿ, ‘ರತಿ ಕಲ್ಯಾಣ’ ಪ್ರಸಂಗದ ಅರ್ಜುನನ ಪಾತ್ರ ಮಾಡುವ ಮೂಲಕ ಯಕ್ಷಗಾನ ರಂಗಕ್ಕೆ ಪ್ರವೇಶ ಮಾಡಿದರು.

ಕಲಾಲೋಕಕ್ಕೆ ಹೆಜ್ಜೆ ಇಟ್ಟ ನಂತರ ಇವರನ್ನು ಗುಂಡಬಾಳ ಮೇಳಕ್ಕೆ ಸೇರಿಸುವುದರ ಮೂಲಕ ಕಲಾ ಜೀವನಕ್ಕೆ ನಾಂದಿ ಹಾಡಿಸಿದವರು ಹಡಿನಬಾಳ ಸತ್ಯ ಹೆಗಡೆ. ಗುಂಡಬಾಳ ಮೇಳದಲ್ಲಿರುವಾಗ ದ್ರೌಪದಿ ಪ್ರತಾಪದ ದ್ರೌಪದಿ, ವಾಲಿ ವಧೆಯ ತಾರೆ, ಭೀಷ್ಮ ವಿಜಯದ ಅಂಬೆ, ಅನೇಕ ಸ್ತ್ರೀ ವೇಷದಲ್ಲಿ ಕಾಣಿಸಿಕೊಂಡವರು. ದಿಢೀರನೆ ಗದಾಯುದ್ಧದ ಭೀಮ, ವಾಲಿವಧೆಯ ವಾಲಿ, ಕೀಚಕ ವಧೆಯ ವಲಲ ಭೀಮ, ಮಾರ್ಕಂಡೇಯ ಚರಿತೆಯ ಯಮ, ಕಾರ್ತವೀರ್ಯಾರ್ಜುನದ ರಾವಣ ಮುಂತಾದ ನಾಯಕ, ಪ್ರತಿನಾಯಕ ಪಾತ್ರಗಳತ್ತ ಲಕ್ಷ್ಯವಹಿಸಿದರು. ಗುಂಡಬಾಳ ಮೇಳದಿಂದ ಇಡಗುಂಜಿ ಮೇಳ, ಕೊಂಡದಕುಳಿ ಮೇಳ, ಕೊಳಗಿಬೀಸ್ ಮೇಳ, ಸುರತ್ಕಲ್ ಮೇಳ, ಸಾಲಿಗ್ರಾಮ ಮೇಳ, ಪೆರ್ಡೂರು ಮೇಳ, ಕಮಲಶಿಲೆ ಮೇಳ, ಗೋಳಿಗರಡಿ ಮೇಳ ಹೀಗೆ ಆರು ದಶಕಕ್ಕೂ ಹೆಚ್ಚು ಕಾಲ ಸುದೀರ್ಘ- ಸಾರ್ಥಕ ರಂಗಯಾತ್ರೆಯನ್ನು ಪೂರೈಸಿದ ಜಲವಳ್ಳಿಯವರು ನಾಡಿನ ಹೆಮ್ಮೆಯ ಕಲಾವಿದ.

ಜಲವಳ್ಳಿ ವೆಂಕಟೇಶ ರಾವ್ ಅಕ್ಷರವಂತರಲ್ಲ. ಆದರೆ ತುಂಬಾ ವಿಚಾರವಂತರು. ಯಕ್ಷಗಾನ ವಿದ್ಯಾಪಾರಂಗತರು. ರಂಗದಲ್ಲಿ ಇವರು ‘ಸಾಮಾನ್ಯ ಚಿತ್ರಣಕ್ಕೂ ಸುವರ್ಣದ ಚೌಕಟ್ಟನ್ನು’ ಒದಗಿಸುವ ಚಾಕಚಕ್ಯತೆಯುಳ್ಳವರು. ರಂಗಸ್ಥಳದಲ್ಲಿ ‘ಎರಡು ಸುತ್ತು- ಮೂರು ಗತ್ತು’ ಎಂಬುದು ಜಲವಳ್ಳಿಯವರ ವಿಶಿಷ್ಟಶೀಲ ಯಕ್ಷಗಾನೀಯ ಶೈಲಿಗೆ ಸಂದ ಮರ್ಯಾದೆ. ಅವರ ಭಾಷೆ, ಅವರೊಂದಿಗಿದ್ದ ಪದ ಸಂಪತ್ತು ವ್ಯಾಕರಣ ಬದ್ಧ, ಪಾಂಡಿತ್ಯಭರಿತ, ಅಗಾಧ. ರಂಗಕ್ಕೆ ಅವರು ಪ್ರವೇಶಿಸಿದರೆ ಯಾವ ಕೊರತೆಯೂ ತೋರುವುದಿಲ್ಲವಾಗಿತ್ತು. ಪಾತ್ರಗಳ ಘನತೆ, ಗೌರವ ಮುಕ್ಕಾಗದಂತೆ ಪೌರಾಣಿಕ ರಂಗಾವರಣದಲ್ಲಿ ನಿರೂಪಿಸುವ ಕಲಾ ಛಾತಿ ಅವರದ್ದು. ರಂಗದಲ್ಲಿ ಮುಖಮುದ್ರೆ ನಿಲುವುಗಳನ್ನು ಚಾಣಾಕ್ಷತೆಯಿಂದ ಬಳಸಿಕೊಳ್ಳುತ್ತಿದ್ದರು. ಅವರ ಪಾತ್ರಗಳ ಶೈಲಿ ತುಂಬಾ ಅಚ್ಚುಕಟ್ಟಾಗಿತ್ತು.

ಅವರ ಅನುಭವದ ಮಾತುಗಾರಿಕೆ ಜನರಿಗೆ ಹಿಡಿಸಿತ್ತು. ಜಲವಳ್ಳಿಯವರಿಗೆ ತೃಪ್ತಿ ತಂದ ಪಾತ್ರಗಳೆಂದರೆ ಭಸ್ಮಾಸುರ, ಶನೀಶ್ವರ, ಈಶ್ವರ, ರಾವಣ, ಕಂಸ, ಬಲಭೀಮ, ಅರ್ಜುನ, ದಶರಥ, ಭದ್ರಸೇನ, ದೇವೇಂದ್ರ, ದುಷ್ಟಬುದ್ಧಿ, ವಲಲಭೀಮ, ಚಂದ್ರಹಾಸ, ಧರ್ಮರಾಯ, ರುದ್ರಕೋಪ, ರಕ್ತಜಂಘ ಮತ್ತು ಭೀಮ. ಈ ಎಲ್ಲ ಪಾತ್ರಗಳಿಗೆ ಜಲವಳ್ಳಿಯವರ ಶೈಲಿಗೆ ಜಲವಳ್ಳಿಯವರೇ ಸಾಟಿ ಎನ್ನುವಷ್ಟರಮಟ್ಟಿಗೆ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರಂಗದಲ್ಲಿ ನಿರೂಪಿಸಿದ್ದಾರೆ. ಅವರ ಪಾತ್ರಗಳಲ್ಲಿ ಜನ ಗಮನಿಸಿರುವುದೆಂದರೆ, ಸಾಮಾನ್ಯವಾಗಿ ಇವರು ನಿರ್ವಹಿಸುವ ಬಹುತೇಕ ಎಲ್ಲ ಪಾತ್ರಗಳಲ್ಲೂ, ತೆಂಕು ಮತ್ತು ಬಡಗಿನ ದ್ವಿತಿಟ್ಟುಗಳ ಬಣ್ಣ, ಮಾತುಗಾರಿಕೆ ಮತ್ತು ವೇಷಭೂಷಣಗಳ ಸಮ್ಮಿಶ್ರಣ. ಇವರ ಕಂಠಕ್ಕೆ ಗೋಪಾಲಕೃಷ್ಣ ಶೇಣಿಯವರ ವಾಗ್‍ವಿಲಾಸ ಅಚ್ಚೊತ್ತಿತ್ತು. ಹೀಗಾಗಿ ಅವರು ನಿರ್ವಹಿಸುವ ಪಾತ್ರಗಳಿಗೆ ಒಂದು ಅಭಿನಯ ಪರಂಪರೆಯಿದೆ ಎನ್ನುವುದು ಸತ್ಯ.

ಗದಾಯುದ್ಧದ ಭೀಮ- ಕೌರವರ ಜೋಡಿ ವೇಷಕ್ಕೆ ಜಲವಳ್ಳಿ ವೆಂಕಟೇಶ ರಾವ್ ಮತ್ತು ಚಿಟ್ಟಾಣಿಯವರು ಹೆಸರುವಾಸಿ. ಈ ಜೋಡಿ ನಾಡಿನಾದ್ಯಂತ ಸಾವಿರಾರು ಪ್ರದರ್ಶನಗಳನ್ನು ನೀಡಿ, ಪ್ರಸಿದ್ಧವಾಗಿವೆ. ಜಲವಳ್ಳಿಯವರ ಗದಾಯುದ್ಧದ ಭೀಮ ಎಂದರೆ, ಮಹಾಭಾರತದ ಭೀಮನೇ. ರಂಗಕ್ಕೆ ಬರುವ ಆ ಠೀವಿ, ರಂಗದಲ್ಲಿ ಅಟ್ಟಹಾಸದಿಂದ ಗದೆ ಬೀಸುತ್ತಾ ಹೆಜ್ಜೆಹಾಕುವ ಆ ಗತ್ತು, ರೌದ್ರಾವೇಷದಿಂದ ಅಬ್ಬರಿಸುವ ಆ ಪರಿ ಜಲವಳ್ಳಿಯವರ ಭೀಮನಲ್ಲಿ ಕಂಡರೆ, ಅದಕ್ಕೆ ಚಿಟ್ಟಾಣಿಯವರ ಕೌರವನೂ ಅಷ್ಟೇ ಸಮರ್ಥ. ಅವರ ಕೌರವನ ಹಾವ- ಭಾವ, ಆಂಗಿಕ ಅಭಿನಯ, ಮುಖಾಭಿನಯ, ವೀರ ಮತ್ತು ರೌದ್ರ ರಸವನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಕೌರವ, ಕೌರವನೇ. ಆದ್ದರಿಂದ ಈ ಇಬ್ಬರ ಭೀಮ- ಕೌರವ ಎಂದರೆ, ಅದು ಮಹಾಭಾರತದ ಭೀಮ-ಕೌರವರೆಂದು ಪ್ರಸಿದ್ಧವಾಗಿತ್ತು.

ಜಲವಳ್ಳಿಯವರು ಸುರತ್ಕಲ್ ಮೇಳದಲ್ಲಿರುವ ಸಂದರ್ಭದಲ್ಲಿ ‘ಶನೀಶ್ವರ ಮಹಾತ್ಮೆ’ ಪ್ರಸಂಗದ ‘ಶನೀಶ್ವರ’ನ ಪಾತ್ರ ಮಾಡುವ ಮೂಲಕ ಕರಾವಳಿಯುದ್ದಕ್ಕೂ, ಈ ಪ್ರಸಂಗ ಮತ್ತು ‘ಶನೀಶ್ವರ’ನ ಪಾತ್ರದ ಗರಿಮೆ, ಹಿರಿಮೆಯನ್ನು ಉತ್ತುಂಗಕ್ಕೇರಿಸಿದರು. ಇದರ ಜೊತೆಗೆ ಇನ್ನು ಉಲ್ಲೇಖಿಸಬಹುದಾದ ಪ್ರಮುಖ ಪಾತ್ರಗಳೆಂದರೆ, ಚಿತ್ರಾಕ್ಷಿ ಕಲ್ಯಾಣದ ರಕ್ತಜಂಘ, ಬಸ್ಮಾಸುರ ಮೋಹಿನಿಯ ಬಸ್ಮಾಸುರ, ಕೀಚಕ ವಧೆಯ ಭೀಮ, ಮಾರ್ಕಾಂಡೆಯ ಚರಿತೆಯ ಯಮ, ಭೂ ಕೈಲಾಸದ ರಾವಣ, ಚೆಲುವೆ ಚಿತ್ರಾವತಿಯ ಕೀರ್ತಿವರ್ಮ, ಲವ ಕುಶದ ರಾಮ, ಕರ್ಣವೃತ್ತಾಂತದ ಅರ್ಜುನ ಹೀಗೆ ನೂರಾರು ಪಾತ್ರಗಳನ್ನು ನಿರ್ವಹಿಸಿ ಒಬ್ಬ ಸಮರ್ಥ ಕಲಾವಿದ ಎನಿಸಿಕೊಂಡಿದ್ದಾರೆ.

ಜಲವಳ್ಳಿಯವರ ಕುರಿತು ಶೇಣಿ ಗೋಪಾಲಕೃಷ್ಣ ಭಟ್ಟರು ‘ಯಕ್ಷಗಾನ ಮತ್ತು ನಾನು’ ಪುಸ್ತಕದಲ್ಲಿ ದಾಖಲಿಸಿರುವುದು ಹೀಗೆ: ‘ಕಲಾವಿದನೊಬ್ಬ ಶನೀಶ್ವರನ ಪಾತ್ರವಹಿಸಿ ಆ ಪಾತ್ರಕ್ಕೆ ತಕ್ಕ ಜೀವತುಂಬಿ, ಪ್ರೇಕ್ಷಕರನ್ನು ಭಕ್ತಿರಸದಲ್ಲಿ ಕೊಂಡೊಯ್ದು ಇವರೊಬ್ಬ ವೇಷಧಾರಿಯಲ್ಲ. ‘ದೈವ ಶನೀಶ್ವರ’ ಎನ್ನುವಷ್ಟರ ಮಟ್ಟಿಗೆ ಪಾತ್ರ ನಿರ್ವಹಿಸಿ ಮರಳಿ ಚೌಕಿಮನೆ ಸೇರುತ್ತಾರೆ. ಆಗ ನೆರೆದ ಪ್ರೇಕ್ಷಕರಲ್ಲಿ ಒಂದು ಕುಟುಂಬ ಬಂದು, ‘ಓ ಶನಿ ದೇವರೇ ನಿಲ್ಲಿ! ನಿಮ್ಮ ಕಿರೀಟ ವೇಷಭೂಷಣವನ್ನು ಮರೆಸಬೇಡಿ, ನಿಮ್ಮ ದರ್ಶನ ನಮ್ಮ ಕುಟುಂಬಕ್ಕೆ ಒಂದು ಬಾರಿ ಒದಗಲಿ ಎಂದು ಪಾದಕ್ಕೆರಗುತ್ತಾರೆ’. ಇದು ರಾವ್ ಅವರ ‘ಶನೀಶ್ವರನ’ ಪಾತ್ರದ ಕುರಿತಾದ ಗುರುತಿಸಬಹುದಾದ ಉಲ್ಲೇಖವಾಗಿದೆ.

ಸುದೀರ್ಘಕಾಲ ರಂಗದಲ್ಲಿರುವ ಜಲವಳ್ಳಿಯವರನ್ನು ಜನ ಗುರುತಿಸಿದ್ದಾರೆ. ಇಳಿವಯಸ್ಸಿನಲ್ಲಿಯೂ ಅವರ ಲವಲವಿಕೆ ಮೆಚ್ಚುವಂತಹದಾಗಿತ್ತು. ಅವರನ್ನು ಅನೇಕ ಸಂಘ -ಸಂಸ್ಥೆಗಳು, ಮಠಗಳು ಸನ್ಮಾನಿಸಿವೆ. ಹೊರರಾಜ್ಯಗಳಿಂದಲೂ ಗೌರವ ದೊರೆತಿದೆ. ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ‘ಜಾನಪದ ಪ್ರಶಸ್ತಿ’ ನೀಡಿತ್ತು. ರಾಜ್ಯೋತ್ಸವ ಪ್ರಶಸ್ತಿಯೂ ಅವರಿಗೆ ಸಂದಿದೆ. 

ಆರು ದಶಕಗಳ ಕಾಲ ಯಕ್ಷಗಾನ ರಂಗಭೂಮಿಯಲ್ಲಿ ದಿಗ್ಗಜ ಕಲಾವಿದರಾಗಿ ಮೆರೆದು, ರಂಗಭೂಮಿಗೆ ಅನೇಕ ಕೊಡುಗೆಗಳನ್ನು ನೀಡಿದ ಜಲವಳ್ಳಿ ವೆಂಕಟೇಶ ರಾವ್ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರು ಯಕ್ಷಗಾನದಲ್ಲಿ ಸೃಷ್ಟಿಸಿಹೋದ ‘ಸುತ್ತು- ಗತ್ತು’ಗಳ ಪರಿಕಲ್ಪನೆ, ಮಾತುಗಾರಿಕೆಯ ವೈಖರಿ, ವೇಷದ ಜೀವಂತಿಕೆ ಮತ್ತು ಪಾತ್ರದ ಪರಿಪೂರ್ಣತೆ ಇತ್ಯಾದಿಗಳು ಅಜರಾಮರ. ಅವರ ಕಲಾವಂತಿಕೆಯನ್ನು ಜನರು ನೆನಪಿಸಿಕೊಳ್ಳುವಂತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)