ಸೋಮವಾರ, ಜೂಲೈ 13, 2020
29 °C

ಅಂಗವಿಕಲರ ವೈಜ್ಞಾನಿಕವಾಗಿ ಜನಗಣತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ರಾಜ್ಯದಲ್ಲಿ ಫೆಬ್ರವರಿ 9ರಿಂದ ನಡೆಯಲಿರುವ ಅಂಗವಿಕಲರ  ಜನಗಣತಿಯು ಅತ್ಯಂತ ವೈಜ್ಞಾನಿಕವಾಗಿ ನಡೆಸಬೇಕು’ ಎಂದು ರಾಜ್ಯ ಅಂಗವಿಕಲರ ಹಾಗೂ ಪೋಷಕರ ಒಕ್ಕೂಟದ ಸಂಚಾಲಕ ಜಿ.ಎನ್. ನಾಗರಾಜ್ ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ’ಭಾರತ ದೇಶ ಮತ್ತು ರಾಜ್ಯದಲ್ಲಿ ಅಂಗವಿಕಲರ ಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ದೊರೆಯುತ್ತಿಲ್ಲ, 2001ರ ಜನಗಣತಿಯಲ್ಲೂ ಸರಿಯಾದ ಅಂಕಿ-ಅಂಶಗಳು ಲಭ್ಯವಾಗಿಲ್ಲ ಎಂದು ದೂರಿದರು.‘ರಾಜ್ಯದ ಅಂಗವಿಕಲರಿಗೆ ಸೌಲಭ್ಯ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳುವಾಗ ಅಂದಾಜು ಲೆಕ್ಕಾಚಾರಗಳು ನಡೆಯುತ್ತಿವೆ. ದೇಶ ವ್ಯಾಪ್ತಿಯಲ್ಲೂ ಜನಗಣತಿಯ ಲೆಕ್ಕಾಚಾರಗಳು ಸಾಕಷ್ಟು ಪ್ರಮಾಣದ ಏರುಪೇರುಗಳು ಕಂಡು ಬಂದಿವೆ. ರಾಜ್ಯದಲ್ಲಂತೂ ಬಾರೀ ವ್ಯತ್ಯಾಸಗಳಾಗಿವೆ. ಇದರಿಂದ ಅಂಗವಿಕಲರ ಕಲ್ಯಾಣ ಕಾರ್ಯಕ್ರಮ ಹಿನ್ನೆಡೆಯಾಗುತ್ತಿದೆ’ ಎಂದು ಅವರು ಆಪಾದಿಸಿದರು.‘2001ರ ಇಸವಿಯ ಜನಗಣತಿಯಲ್ಲಿ ಅಂಗವಿಕಲರ ಗಣತಿ ಕಾರ್ಯ ಮಾಡಬೇಕು ಎಂದು ದೊಡ್ಡ ಚಳವಳಿ ರೂಪಿಸಲಾಗಿತ್ತು. ಅದರ ಪರಿಣಾಮವಾಗಿ ಅಂಗವಿಕಲರ ಗಣತಿ ಕಾರ್ಯ ಕೈಗೊಳ್ಳಲಾಯಿತು. ಆದರೆ, ಸಾಕಷ್ಟು ತಪ್ಪು ಹಾಗೂ ವ್ಯತ್ಯಾಸ ಕಂಡು ಬಂದಿದ್ದು, ಈ ಬಾರಿ ಯಾವುದೇ ಸಮಸ್ಯೆ ಆಗದಂತೆ ಸರ್ಕಾರ ಮುಂಜಾಗ್ರತೆ ವಹಿಸಬೇಕು’ ಎಂದು ಅವರು ಒತ್ತಾಯಿಸಿದರು.‘ದೇಶದ ಜನಸಂಖ್ಯೆಯಲ್ಲಿ ಶೇ. 2.1ರಷ್ಟು ವಿಕಲಚೇತನರು ಇದ್ದಾರೆ ಎಂದು ಅಂಕಿ ಸಂಖ್ಯೆಗಳು ಹೇಳುತ್ತವೆ.  ಅದೇ ರೀತಿ ರಾಜ್ಯದಲ್ಲಿ ಶೇ. 1.8ರಷ್ಟು ಇದ್ದಾರೆ ಎನ್ನುವ ಮಾಹಿತಿ ನಂಬಲಾರ್ಹ. ಇದು ಗಣತಿ ವೇಳೆ ಸಾಕಷ್ಟು ದೋಷಗಳಾಗಿರುವುದನ್ನು ಸ್ಪಷ್ಟಪಡಿಸುತ್ತಿದೆ. ಇಂಥ ತಪ್ಪು ಮರುಸೃಷ್ಟಿಗೆ ಅವಕಾಶ ಮಾಡಿ ಕೊಡಬಾರದು’ ಎಂದು ಅವರು ಮನವಿ ಮಾಡಿದರು.’ರಾಜ್ಯದ ಅಂಗವಿಕಲರಿಗೆ ಈಗಾಗಲೇ ಬಹುದೊಡ್ಡ ಅನ್ಯಾಯವಾಗಿದೆ. ಸರ್ಕಾರ ಅಗತ್ಯ ಸೌಕರ್ಯ ನೀಡದೆ ವಂಚಿಸುತ್ತಿದೆ. ಹೀಗಿರುವಾಗ ಜನಗಣತಿಯಲ್ಲೂ ಅನ್ಯಾಯವಾದರೆ ಸಹಿಸುವುದು ಹೇಗೆ? ಎಂದು ಪ್ರಶ್ನಿಸಿದರು.‘ಗಣತಿದಾರರು ಕಾಳಜಿ ವಹಿಸಿ ಕಾರ್ಯ ನಿರ್ವಹಿಸಿ, ಯಾವುದೇ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. ಪ್ರತಿ ಮನೆಯಲ್ಲೂ ಗಣತಿ ಪಟ್ಟಿಯಲ್ಲಿ ಇರುವ ಸಂಖ್ಯೆ 9ರ ಪ್ರಶ್ನೆಯನ್ನು ಕಡ್ಡಾಯವಾಗಿ ಕೇಳಿ ಸೂಕ್ತ ಮಾಹಿತಿ ಪಡೆದು ದಾಖಲಿಸಬೇಕು’ ಎಂದು ಅವರು ತಾಕೀತು ಮಾಡಿದರು. ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಕ್ರಮ ಜರುಗಿಸುವ ಹಾಗೂ ಕನಿಷ್ಠಕೂಲಿ ರೂ.150 ನೀಡುವಂತೆ ಒತ್ತಾಯಿಸಿ ಇದೇ 31ರಂದು ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ, ಮಲ್ಲಿ ಕಾರ್ಜುನ ಖರ್ಗೆ ಮನೆ ಎದುರು ಧರಣಿ ನಡೆಸಲಾಗುವುದು ಎಂದು ಅವರು ತಿಳಿಸಿದರು. ಒಕ್ಕೂಟದ ಮುಖಂಡೆ ಜಿ.ಎನ್.ಯಶಸ್ವಿನಿ, ಯು.ಬಸವರಾಜ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.