ಬುಧವಾರ, ಜೂನ್ 16, 2021
21 °C

ಅಂಗಾಂಗ ದಾನಕ್ಕೆ ಶೀಘ್ರ ನಿಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗಾಂಗ ದಾನಕ್ಕೆ ಶೀಘ್ರ ನಿಯಮ

ಬೆಂಗಳೂರು: `ಅಂಗಾಂಗ ದಾನಕ್ಕೆ ಸಂಬಂಧಪಟ್ಟಂತೆ ಇರುವ ಕಾನೂನು ತೊಡಕುಗಳ ಕುರಿತು ಸಮಗ್ರ ವರದಿ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದ್ದು, ಬಜೆಟ್ ಮಂಡನೆ ಸಂದರ್ಭದಲ್ಲಿ ಈ ವರದಿಯನ್ನು ಆಧರಿಸಿ ಅಂಗಾಂಗ ದಾನದ ಕುರಿತು ಸೂಕ್ತ ನಿಯಮ ಜಾರಿಗೊಳಿಸಲಾಗುವುದು~ ಎಂದು ಸಚಿವ ಎಸ್.ಎ.ರಾಮದಾಸ್ ಭರವಸೆ ನೀಡಿದರು.ನೆಫ್ರೋ ಯೂರಾಲಜಿ ಸಂಸ್ಥೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಮೂತ್ರಪಿಂಡ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಅಂಗಾಂಗ ಕಳವು ಹಗರಣದ ನಂತರ ಮೂತ್ರಪಿಂಡ ಸೇರಿದಂತೆ ಇತರೆ ಅಂಗಾಂಗಗಳ ದಾನಕ್ಕೆ ಸಂಬಂಧಪಟ್ಟ ಕಾನೂನು ಬಿಗಿಯಾಗಿದೆ. ಇದರಿಂದ ಅಪಘಾತದಿಂದ ಮರಣ ಹೊಂದುವ ವ್ಯಕ್ತಿಯ ಕುಟುಂಬದವರು ಅಂಗಾಂಗ ದಾನ ಮಾಡಲು ಇಚ್ಛಿಸಿದರೂ, ಸಣ್ಣಪುಟ್ಟ ತೊಡಕಿನಿಂದ ಸಾಧ್ಯವಾಗುವುದಿಲ್ಲ. ಈ ಬಗ್ಗೆ ನಿಯಮವೊಂದರ ಅಗತ್ಯವಿದೆ~ ಎಂದು ಸ್ಪಷ್ಟಪಡಿಸಿದರು.`ರಾಜ್ಯಮಟ್ಟದಲ್ಲಿ ಸರ್ಕಾರದ ಕಾರ್ಯದರ್ಶಿ ಮತ್ತು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ `ಅಂಗಾಂಗ ಬ್ಯಾಂಕ್~ ರಚಿಸಲು ಚಿಂತನೆ ನಡೆಸಲಾಗಿದೆ. ಅಂಗಾಂಗಗಳ ಕಸಿ ಮತ್ತು ದಾನದ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ~ ಎಂದು ಹೇಳಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಗೋಪಾಲಕೃಷ್ಣಗೌಡ, `ಅಂಗಾಂಗಗಳ ವೈಫಲ್ಯದಂತಹ ಆರೋಗ್ಯ ಸಮಸ್ಯೆಗೆ ಅಂಗಾಂಗಗಳ ಕಸಿಯೇ ಸೂಕ್ತ ಪರಿಹಾರ. ಆದರೆ, ಜನರಲ್ಲಿ ಈ ಬಗ್ಗೆ ತಿಳುವಳಿಕೆ ಇಲ್ಲದೇ ಇರುವುದರಿಂದ ಅಂಗಾಂಗಗಳ ಕೊರತೆ ಎದುರಾಗಿದೆ~ ಎಂದು ಹೇಳಿದರು.ಮೂತ್ರಪಿಂಡ ಸಮಸ್ಯೆ ಹೊಂದಿರುವ25 ಜನರಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವಂತಹ ಕಿಟ್ ವಿತರಿಸಲಾಯಿತು. ಅಸೋಸಿಯೇಷನ್ ಆಫ್ ಫಿಸಿಷಿಯನ್ ಆಫ್ ಇಂಡಿಯಾ ಸಂಸ್ಥೆಯು ರೋಗಿಗಳಿಗೆ ಸಹಾಯವಾಗಲೆಂದು ಬ್ಯಾಟರಿ ಚಾಲಿತ ವಾಹನವನ್ನು ಆಸ್ಪತ್ರೆಗೆ ದಾನ ಮಾಡಿತು. ಅಂಗಾಂಗ ಕಸಿ ಸಮಿತಿಯ ಪ್ರಾದೇಶಿಕ ಸಂಯೋಜಕ ಕಾರ್ಯದರ್ಶಿ ಡಾ.ಡಿ.ರಮೇಶ್, ಸಂಸ್ಥೆಯ ನಿರ್ದೇಶಕ ಡಾ.ಜಿ.ಕೆ.ವೆಂಕಟೇಶ್ ಉಪಸ್ಥಿತರಿದ್ದರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.