ಭಾನುವಾರ, ಮೇ 22, 2022
24 °C

ಅಂಚೆಚೀಟಿಯಲ್ಲಿ ನಿಮ್ಮ ಭಾವಚಿತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ವಿವಿಧ ಸ್ತರಗಳಲ್ಲಿ ಬದಲಾವಣೆಗಳಾಗುತ್ತ ಇರುವಂತೆಯೇ ಅಂಚೆ ಇಲಾಖೆಯೂ ಹೊಸತನಕ್ಕೆ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ. ಹೊಸ ಹೊಸ ಸೇವೆಗಳನ್ನು ಪರಿಚಯಿಸುತ್ತಿದೆ. ಖಾಸಗಿ ಸಂಸ್ಥೆಗಳ ಪೈಪೋಟಿಯ ನಡುವೆಯೂ ತನ್ನತನವನ್ನು ಇನ್ನೂ ಉಳಿಸಿಕೊಂಡಿದೆ. ಅಂಚೆಚೀಟಿಗಳ ವಿಷಯದಲ್ಲೂ ಸೃಜನಶೀಲತೆ ಮೆರೆಯುತ್ತಿದೆ.ಅಂಚೆಚೀಟಿ ಸಂಗ್ರಹ ಅನೇಕರ ಹವ್ಯಾಸದ ಬಾಬತ್ತು. ಇದಕ್ಕಾಗಿ ಅಂಚೆ ಇಲಾಖೆ ಪ್ರತಿ ವರ್ಷ ‘ಇಂಡಿಪೆಕ್ಸ್’ ಹೆಸರಿನಲ್ಲಿ ಅಂಚೆಚೀಟಿ ಸಂಗ್ರಹದ ಪ್ರದರ್ಶನ ನಡೆಸುತ್ತದೆ. ಅಂತರರಾಷ್ಟ್ರೀಯ ಅಂಚೆಚೀಟಿ ಸಂಗ್ರಾಹಕರ ಒಕ್ಕೂಟದ ನೆರವಿನೊಂದಿಗೆ ಫಿಲಾಟೆಲಿಕ್ ಕಾಂಗ್ರೆಸ್ ಆಫ್ ಇಂಡಿಯಾ ಈ ಪ್ರದರ್ಶನವನ್ನು ಆಯೋಜಿಸುತ್ತಿದೆ. ಈಗ ನವದೆಹಲಿಯಲ್ಲಿ ಪ್ರಸಕ್ತ ಸಾಲಿನ ‘ಇಂಡಿಪೆಕ್ಸ್ 2011’ ನಡೆಯುತ್ತಿದೆ. ಸುಮಾರು 70 ರಾಷ್ಟ್ರಗಳ ಅಂಚೆಚೀಟಿಗಳು ಇಲ್ಲಿ ಪ್ರದರ್ಶನಕ್ಕಿವೆ.ಅಂಚೆಚೀಟಿಗಳು ನಮ್ಮ ಚರಿತ್ರೆ, ರಾಜಕೀಯ ಹಿನ್ನೆಲೆಯ ಪ್ರತೀಕ. ವ್ಯಕ್ತಿಗಳು, ರಾಷ್ಟ್ರೀಯ, ಅಂತರರಾರಾಷ್ಟ್ರೀಯ ಘಟನೆಗಳು, ಭೌಗೋಳಿಕ, ಕೃಷಿ, ವಿಜ್ಞಾನ, ಸ್ಮಾರಕ- ಹೀಗೆ ಅನೇಕ ವಿಷಯಗಳಲ್ಲಿ ಅಂಚೆಚೀಟಿಗಳಿವೆ. ಅವು ದೇಶಗಳು ಮತ್ತು ಖಂಡಗಳ ನಡುವೆ ಬಾಂಧವ್ಯ ವೃದ್ಧಿ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ವೇದಿಕೆ ಕಲ್ಪಿಸಬಲ್ಲವು ಎನ್ನುವುದು ಭಾರತೀಯ ಅಂಚೆ ಇಲಾಖೆಯ ನಂಬಿಕೆ.ಭಾರತದಂತಹ ಪ್ರಗತಿಪರ ದೇಶದಲ್ಲಿ ಎಲೆಕ್ಟ್ರಾನಿಕ್ ಸೌಲಭ್ಯ ದೊರಕದ ಕುಗ್ರಾಮಗಳಲ್ಲಿ ಅಂಚೆ ಇಲಾಖೆ ಇಂದಿಗೂ ಸಂವಹನದ ಮುಖ್ಯ ಮಾರ್ಗವಾಗಿದೆ. ಅಂದಹಾಗೆ, ಭಾರತದಲ್ಲಿ ವಿಮಾನದ ಮೂಲಕ ಅಂಚೆ ರವಾನೆ ವ್ಯವಸ್ಥೆ ಆರಂಭವಾಗಿ ಫೆಬ್ರುವರಿ 18ಕ್ಕೆ ನೂರು ವರ್ಷ ತುಂಬಿದವು. 1911ರ ಫೆಬ್ರುವರಿ 18ರಂದು ಅಂಚೆಪತ್ರಗಳನ್ನು ಹೊತ್ತ ವಿಮಾನ ಅಲಹಾಬಾದ್‌ನಿಂದ ನೈನಿ ತಲುಪಿತ್ತು.

‘ಇಂಡಿಪೆಕ್ಸ್ 2011’ರ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಎರಡು ಆಕರ್ಷಕ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ.ಅವುಗಳೆಂದರೆ ‘ಖಾದಿ ಸ್ಟಾಂಪ್’ ಮತ್ತು ‘ಮೈ ಸ್ಟಾಂಪ್’. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸ್ಮರಣೆಗಾಗಿ ‘ಖಾದಿ ಸ್ಟಾಂಪ್’ಗಳನ್ನು ಅಂಚೆ ಇಲಾಖೆ ಪರಿಚಯಿಸಿದೆ. ಗಾಂಧಿ ನೆನಪಿನ ಈ ಅಂಚೆಚೀಟಿಯನ್ನು ಖಾದಿ ಬಟ್ಟೆಯಲ್ಲಿಯೇ ರೂಪಿಸಿರುವುದು ವಿಶೇಷ. ಸ್ವಾವಲಂಬನೆಯ ಪ್ರತಿನಿಧಿಯಾಗಿ ಗಾಂಧೀಜಿ ಅವರು ಖಾದಿ ಬಳಕೆಯನ್ನು ಪ್ರತಿಪಾದಿಸಿದ್ದರು.‘ಮೈ ಸ್ಟಾಂಪ್’ ಮೂಲಕ ಆಸಕ್ತರು ಅಂಚೆಚೀಟಿಯಲ್ಲಿ ತಮ್ಮದೇ ಭಾವಚಿತ್ರ ಹೊಂದುವ ಅಪರೂಪದ ಅವಕಾಶವನ್ನು ಅಂಚೆ ಇಲಾಖೆ ಒದಗಿಸುತ್ತಿದೆ. ಭಾರತದಲ್ಲಿ ಮೊಟ್ಟಮೊದಲನೆಯ ಬಾರಿಗೆ ಇದನ್ನು ಜಾರಿಗೊಳಿಸಲಾಗುತ್ತಿದೆ. ವಿವಾಹ ನಿಶ್ಚಿತಾರ್ಥ, ಮಗುವಿನ ಜನ್ಮ ದಿನೋತ್ಸವ ಇತ್ಯಾದಿ ವಿಶೇಷ ಸಂದರ್ಭಗಳು ಮತ್ತು ತಮ್ಮ ನೆಚ್ಚಿನವರಿಗೆ ಶುಭಾಶಯಗಳನ್ನು ಕಳಿಸುವ ಸಂದರ್ಭದಲ್ಲಿ ಈ ‘ವ್ಯಕ್ತಿಗತ’ ಅಂಚೆ ಚೀಟಿಗಳನ್ನು ಬಳಸಬಹುದು.‘ಖಾದಿ ಸ್ಟಾಂಪ್’ ಮತ್ತು ‘ಮೈ ಸ್ಟಾಂಪ್’ಗಳು ಅಂಚೆ ಇಲಾಖೆಯ ಸೃಜನಶೀಲತೆಯ ಹೊಸ ವರಸೆಯಂತೆ ಕಾಣಿಸುತ್ತವೆ. ಅಷ್ಟುಮಾತ್ರವಲ್ಲ, ಅಂಚೆ ಸೇವೆಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಈ ಚೀಟಿಗಳು ಗ್ರಾಹಕರಿಗೆ ನೀಡಿದ ಉಡುಗೊರೆಯೂ ಆಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.