ಸೋಮವಾರ, ಮೇ 10, 2021
25 °C

ಅಂಚೆ ನೌಕರರ ಬೇಡಿಕೆ ಈಡೇರಿಸಲು ಬದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ತಾಂತ್ರಿಕ ಪ್ರಗತಿಯಿಂದ ಅಂಚೆ ಇಲಾಖೆ ಭಾರಿ ಸವಾಲುಗಳನ್ನು ಎದುರಿಸಬೇಕಾಗಿದ್ದು ಇಂಥ ಸಂದರ್ಭದಲ್ಲಿ ಅಂಚೆ ನೌಕರರ ಬೇಡಿಕೆಗಳನ್ನು ಬದಲಾಗುತ್ತಿರುವ ತಾಂತ್ರಿಕ ಸ್ಥಿತಿಗತಿಗಳೊಂದಿಗೆ ಹೊಂದಾಣಿಕೆ ಮಾಡಿ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆಗಳು ನಡೆಯಬೇಕಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಇಲ್ಲಿ ಅಭಿಪ್ರಾಯಪಟ್ಟರು.ಅಖಿಲ ಭಾರತ ಅಂಚೆ ನೌಕರರ (ಆರ್‌ಎಂಎಸ್ ಮತ್ತು ಎಂಎಂಎಸ್-ಗ್ರೂಪ್ `ಸಿ~)ಸಂಘಟನೆಯ ಕರ್ನಾಟಕ ವಲಯದ ವತಿಯಿಂದ ಬನ್ನಂಜೆಯಲ್ಲಿ ಭಾನುವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು.`ಪ್ರಸ್ತುತ 2ಜಿ, 3ಜಿ ಯುಗ, ಮೊಬೈಲ್, ಎಸ್‌ಎಂಎಸ್, ಅಂತರ್ಜಾಲದಲ್ಲಿ ಕ್ರಾಂತಿಯಾಗಿದೆ. ಮಾಹಿತಿ ತಂತ್ರಜ್ಞಾನ ವ್ಯಾಪಕವಾಗಿ ಹರಡಿಕೊಂಡಿದೆ. ಸಂವಹನ ಕ್ಷೇತ್ರ ವಿಶ್ವವ್ಯಾಪಿವಾಗಿ ವಿಸ್ತರಿಸಿಕೊಂಡಿದೆ. ಹೀಗಿದ್ದಾಗಲೂ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಅಂಚೆ ನೌಕರರೇ ಈಗಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.`ಅಂಚೆ ಇಲಾಖೆ ನಮ್ಮ ದೇಶದಲ್ಲಿ ಅತ್ಯಂತ ಗೌರವಾನ್ವಿತ, ಭ್ರಷ್ಟಾಚಾರ ಮುಕ್ತ ಇಲಾಖೆ. ಅದರಲ್ಲಿ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ಯಾವುದೇ ರಾಜಕಾರಣಿಗಳ ಶಿಫಾರಸು ಕೂಡ ಇರುವುದಿಲ್ಲ. ಅಂತಹ ಇಲಾಖೆಯ ನೌಕರರ ಯೋಗ್ಯವಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧ~ ಎಂದರು.ನೌಕರರ ಸಂಘಟನೆಯ ಮಾಜಿ ಕಾರ್ಯದರ್ಶಿ ಸಿ.ಸಿ.ಪಿಳ್ಳೈ ಮಾತನಾಡಿ, ಅಂಚೆ ಇಲಾಖೆಯಿಂದ ಸರ್ಕಾರಕ್ಕೆ ಸುಮಾರು 6 ಸಾವಿರ ಕೋಟಿ ನಷ್ಟವಾಗಿದೆ. 2014ರೊಳಗೆ ಅದನ್ನು ಸರಿದೂಗಿಸುವ ಯೋಜನೆಗಳನ್ನು ಕೇಂದ್ರ ಯೋಜನಾ ಆಯೋಗವು ಹಮ್ಮಿಕೊಂಡಿದೆ. ಅಂಚೆ ಇಲಾಖೆಯ ಖರ್ಚು ವೆಚ್ಚ ಕಡಿತಗೊಳಿಸಲು ಸರ್ಕಾರ ತೊಡಗಿರುವುದು ಸರಿಯಲ್ಲ ಎಂದರು.ಕೇಂದ್ರದ ಯುಪಿಎ ಸರ್ಕಾರ ಕಾರ್ಮಿಕರ ವಿರೋಧಿ ನೀತಿ ಅನುರಿಸುತ್ತಿದೆ. ಈ ವಿಷಯದಲ್ಲಿ ಅದಕ್ಕೆ ಬಿಜೆಪಿ ಕೂಡ ಸಾಥ್ ನೀಡುತ್ತಿದೆ ಎಂದು ಆರೋಪಿಸಿದರು.ಇದಕ್ಕೂ ಮುನ್ನ ಮಾತನಾಡಿದ ಈ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ.ಎ.ಕರೀಂ, ಅಂಚೆ ಇಲಾಖೆಯ ಕೆಳಹಂತದ ನೌಕರರ ವರ್ಗ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ನೌಕರರಂತೆ ಕೆಲಸ ನಿರ್ವಹಿಸುತ್ತಿರುವ ಇಲಾಖೇತರ ಸಿಬ್ಬಂದಿ ಕೂಡ ಬಹಳ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೂಡ ಸರ್ಕಾರ ಸೌಲಭ್ಯ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಕೇಂದ್ರ ಸರ್ಕಾರ ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡಲು ಯತ್ನಿಸುತ್ತಿದೆ. ಮೆಕೆಂಜೆ ಎಂಬ ವಿದೇಶಿ ಸಹಲೆಗಾರರ ರೀತಿನೀತಿಗಳನ್ನು ಅನುಸರಿಲು ಹೊರಟಿದೆ. ಅಲ್ಲದೇ ಸಾವಿರಾರು ಅಂಚೆಕಚೇರಿ ಮುಚ್ಚಲು ಹೊರಟಿದೆ. ಅದನ್ನು ತಡೆಯಬೇಕು ಎಂದು ಆಗ್ರಹಿಸಿದರು.`ರಾಷ್ಟ್ರದಲ್ಲಿ ಪ್ರಬಲ ಲೋಕಪಾಲ ಮಸೂದೆ ಜಾರಿಯಾಗಬೇಕು. ಕಾನೂನಿಗಿಂತ ಯಾರೂ ಕೂಡ ಮೇಲಲ್ಲ. ನಮ್ಮ ರಾಜ್ಯದಲ್ಲಿ ಹಿಂದಿನ ಲೋಕಾಯುಕ್ತ ಸಂತೋಷ ಹೆಗ್ಡೆಯವರು ಭ್ರಷ್ಟರ ಬಣ್ಣವನ್ನು ಬಯಲು ಮಾಡುವ ಮೂಲಕ ಬಹಳ ಮಹತ್ವದ ಕೆಲಸ~ ಮಾಡಿದರು.ಧರ್ಮದರ್ಶಿ ಡಾ.ವಿಜಯ ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘಟನೆ ಜಂಟಿ ಅಧ್ಯಕ್ಷರಾದ ಪಿ.ಶೇಷಗಿರಿ ರಾವ್ ಹಾಗೂ ಟಿ.ಬಿ.ಹರೀಶ್, ಪ್ರಧಾನ ಕಾರ್ಯದರ್ಶಿ ಗಿರಿರಾಜ್ ಸಿಂಗ್, ಪಿ.ಸುರೇಶ್, ವಲಯ ಕಾರ್ಯದರ್ಶಿ ಎ.ಮಾರುತಿ, ಜಿ.ಎಸ್. ನಾಗೇಂದ್ರ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಜಿ.ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.