ಶನಿವಾರ, ಜುಲೈ 31, 2021
25 °C
ಮೊಬೈಲ್ ಮಾತು

ಅಂತರ್ಜಾಲ ಬಳಕೆ-ಮಹಿಳೆ ಆದ್ಯತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರ್ಜಾಲ ಬಳಕೆ-ಮಹಿಳೆ ಆದ್ಯತೆ!

ಇಂಟರ್‌ನೆಟ್ ಬಳಕೆ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ!ಭಾರತದಲ್ಲಿ ಸದ್ಯ 15 ಕೋಟಿ ಇಂಟರ್‌ನೆಟ್ ಬಳಕೆದಾರರಿದ್ದು, ಇವರಲ್ಲಿ ಪ್ರತಿನಿತ್ಯ ಅಂತರ್ಜಾಲ ಜಾಲಾಡುವ ಮಹಿಳೆಯರ ಸಂಖ್ಯೆಯೇ 6 ಕೋಟಿಯಷ್ಟಿದೆ. ಏನಿಲ್ಲವೆಂದರೂ ಒಬ್ಬ ಮಹಿಳೆ ಪ್ರತಿನಿತ್ಯ ಸರಾಸರಿ 24 ನಿಮಿಷಗಳ ಕಾಲವಾದರೂ ಆನ್‌ಲೈನ್‌ನಲ್ಲಿ ಕಳೆಯುತ್ತಾಳೆ. ತನ್ನ ನಿತ್ಯ ಬದುಕಿನ ನಿರ್ವಹಣೆಗೆ ಕೂಡ ಆಕೆ ಅಂತರ್ಜಾಲವೆಂಬ ಮಹಾಸಾಗರವನ್ನು ಅವಲಂಬಿಸಿದ್ದಾಳೆ ಎನ್ನುತ್ತದೆ ವಿಶ್ವಪ್ರಸಿದ್ಧ ಶೋಧ ತಾಣ `ಗೂಗಲ್'ನ ಸಮೀಕ್ಷೆ.ಸರಾಸರಿ 2.40 ಕೋಟಿ ಮಹಿಳೆಯರು ಪ್ರತಿದಿನ ತಮ್ಮ ಇ-ಮೇಲ್ ಖಾತೆ ಪರಿಶೀಲಿಸುತ್ತಾರೆ, ಸಾಮಾಜಿಕ ತಾಣಗಳಿಗೆ ಭೇಟಿ  ನೀಡುತ್ತಾರೆ ಮತ್ತು ಆನ್‌ಲೈನ್  ಷಾಪಿಂಗ್ ನಡೆಸುತ್ತಾರೆ.ಮನೆ, ಸೈಬರ್ ಕೆಫೆ, ಕಚೇರಿ ಇಲ್ಲವೇ ತಮ್ಮ ಸ್ಮಾರ್ಟ್‌ಫೋನ್‌ನಿಂದಲೇ ವನಿತೆಯರು ಇಂಟರ್‌ನೆಟ್ ಸೌಲಭ್ಯ ಬಳಸಿಕೊಳ್ಳುತ್ತಾರೆ. ಪುರುಷರು ಸೀಮಿತ ಉದ್ದೇಶಗಳಿಗೆ ಈ ಸೌಲಭ್ಯ ಬಳಸಿದರೆ, ಮಹಿಳೆಯರಿಗೆ ಬೇಕಾಗಿರುವ ಮಾಹಿತಿಗಳು ವೈವಿಧ್ಯಮಯವಾಗಿರುತ್ತವೆ ಎನ್ನುತ್ತಾರೆ `ಗೂಗಲ್ ಇಂಡಿಯಾ'ದ ವ್ಯವಸ್ಥಾಪಕ ನಿರ್ದೇಶಕ ರಾಜನ್ ಆನಂದನ್.ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವವರಲ್ಲಿ ಹದಿಹರೆಯದ ಯುವತಿಯರ ಸಂಖ್ಯೆಯೇ ಹೆಚ್ಚು. ಗೂಗಲ್ ಸಮೀಕ್ಷೆಗೆ ಒಳಪಡಿಸಿದ 1 ಸಾವಿರ ಮಹಿಳೆಯರಲ್ಲಿ ಶೇ 75ರಷ್ಟು ಯುವತಿಯರು. ಇವರು ಪ್ರತಿನಿತ್ಯ ಇಂಟರ್‌ನೆಟ್ ಬಳಸುವುದಾಗಿ ಹೇಳಿದ್ದಾರೆ.ಈ ಸಮೂಹದಲ್ಲಿ ಹೆಚ್ಚಿನವರು 15ರಿಂದ 34 ವರ್ಷದ ನಡುವಿನವರು. ಕೆಲವರಿಗೆ ಆನ್‌ಲೈನ್ ಚಾಟಿಂಗ್ ತುಂಬಾ ಪ್ರಿಯವಾದರೆ, ಇನ್ನು ಕೆಲವರಿಗೆ ಶೈಕ್ಷಣಿಕ ಮಾಹಿತಿ ಮತ್ತು ಮ್ಯೂಸಿಕ್ ಡೌನ್‌ಲೋಡ್ ಮಾಡಿಕೊಳ್ಳುವುದು ಇಷ್ಟವಾದ ಸಂಗತಿ. 22ರಿಂದ 30 ವರ್ಷದ ಮಹಿಳೆಯರಲ್ಲಿ ಹೆಚ್ಚಿನವರಿಗೆ ಉದ್ಯೋಗ ಮಾಹಿತಿ ಹುಡುಕಾಟ, ವಿಡಿಯೊ ನೋಡುವುದು, ಸುದ್ದಿ ಓದುವುದು ಕೂಡ ಆದ್ಯತೆಯ ವಿಷಯಗಳು.ಅಂದ ಹಾಗೆ ಗೂಗಲ್‌ನಲ್ಲಿ ಮಹಿಳೆಯರು ಹೆಚ್ಚಾಗಿ ಏನನ್ನು ಹುಡುಕುತ್ತಾರೆ ಎನ್ನುವ ಪುರುಷರ ಕುತೂಹಲಕ್ಕೂ ಕೂಡ ಇಲ್ಲಿ ಉತ್ತರವಿದೆ.ವನಿತೆಯರು ಹೆಚ್ಚಾಗಿ ಹುಡುಕಾಟ ನಡೆಸುವುದು ಸಿದ್ಧ ಉಡುಪುಗಳ ಬಗ್ಗೆ. ಆನ್‌ಲೈನ್ ಮೂಲಕ ಜೀವನಶೈಲಿಗೆ ತಕ್ಕಂತೆ ಹೊಸ ವಿನ್ಯಾಸದ ಉಡುಪುಗಳನ್ನು ಖರೀದಿಸುವುದೆಂದರೆ ಅವರಿಗೆ ಅಚ್ಚುಮೆಚ್ಚು. ಆಹಾರ, ಪಾನೀಯದ ಜತೆಗೆ ಚರ್ಮದ ಕಾಂತಿ ಹೆಚ್ಚಿಸುವ ಲೇಪನಗಳು, ಕೂದಲು ಆರೈಕೆಗೆ ಸಂಬಂಧಿಸಿದ ಸಾಮಗ್ರಿಗಳೂ ವನಿತೆಯರ `ಶೋಧ' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ತಾಯಂದಿರಿಗೆ ತಮ್ಮ ಪುಟಾಣಿ ಕಂದಮ್ಮಗಳ ಆರೈಕೆ, ಪಾಲನೆ, ಪೋಷಣೆಗೆ  ಸಂಬಂಧಿಸಿದ ವಸ್ತುಗಳ ಮೇಲೆಯೇ ಹೆಚ್ಚಿನ ಗಮನ. ಶೇ 25ರಷ್ಟು ಮಹಿಳೆಯರು ತಮ್ಮ ಸ್ಮಾರ್ಟ್‌ಫೋನ್ ಮೂಲಕವೇ ಈ ಎಲ್ಲ ಮಾಹಿತಿ ಪಡೆದುಕೊಳ್ಳುತ್ತಾರೆ ಎನ್ನುವುದು ಮತ್ತೊಂದು ವಿಶೇಷ.ಯಾವುದೇ ಒಂದು ಹೊಸ ವಸ್ತು ಖರೀದಿಸುವ ಮುನ್ನ ಇಂಟರ್‌ನೆಟ್‌ನಲ್ಲಿ ಮಾಹಿತಿ ಕಲೆಹಾಕುವುದಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ ಅರ್ಧದಷ್ಟು ಮಹಿಳೆಯರು ಹೇಳಿದ್ದಾರೆ. ಇತ್ತೀಚೆಗೆ ಯಾವುದೇ ತೀರ್ಮಾನಕ್ಕೆ ಬರುವಲ್ಲಿ ಇಂಟರ್‌ನೆಟ್ ಪ್ರಮುಖ ಪಾತ್ರ ವಹಿಸುತ್ತಿದೆ ಎನ್ನುವುದನ್ನೂ ಅನೇಕರು ಒಪ್ಪಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.