ಭಾನುವಾರ, ಮೇ 22, 2022
21 °C
ಜಿನೈಕ್ಯ ಧರ್ಮಸಾಗರ ಮುನಿಗಳು ಪಂಚಭೂತಗಳಲ್ಲಿ ಲೀನ

ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಜಿನೈಕ್ಯ ದಿಗಂಬರ 108 ಧರ್ಮಸಾಗರ ಮುನಿ ಮಹಾರಾಜರ ಅಂತಿಮ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾಗರೋಪಾದಿಯಲ್ಲಿ ಭಕ್ತ ಸಮುದಾಯ ಹರಿದು ಬಂದಿತ್ತು.ಭಾನುವಾರ ಜಿನೈಕ್ಯರಾಗಿದ್ದ ಧರ್ಮಸಾಗರ ಮುನಿ ಮಹಾರಾಜರ ಪಾರ್ಥೀವ ಶರೀರವನ್ನು ನಗರದ ಜೈನ ಬಸ್ತಿಯಲ್ಲಿ ಇಡಲಾಗಿತ್ತು. ರಾತ್ರಿಯಿಂದಲೇ ಜೈನ ಮುನಿಗಳು, ಭಟ್ಟಾರಕರು, ವಿವಿಧ ಮಠಾಧೀಶರು, ರಾಜಕೀಯ ಧುರೀಣರು, ಗಣ್ಯರು, ಭಕ್ತರು ಬಸ್ತಿಗೆ ಆಗಮಿಸಿ ಧರ್ಮಸಾಗರ ಮಹಾರಾಜರ ಅಂತಿಮ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ವಾಹನಗಳ ಮೂಲಕ ಭಜನಾ ತಂಡಗಳೊಂದಿಗೆ ಆಗಮಿಸಿದ ಗ್ರಾಮೀಣ ಪ್ರದೇಶ ಭಕ್ತರು, ರಾತ್ರಿಯಿಡಿ ಭಜನೆ, ಹಾಡುಗಳ ಮೂಲಕ ಧರ್ಮಸಾಗರ ಮುನಿಗಳ ಗುಣಗಾನ ಮಾಡಿದರು.ರಾಜ್ಯದ ವಿವಿಧೆಡೆಗಳಿಂದ 108 ಪುಣ್ಯಸಾಗರ ಮುನಿ ಮಹಾರಾಜರು. 108 ಪ್ರಸನ್ನಸಾಗರ ಮುನಿ ಮಹಾರಾಜರು, 108 ಸುಧರ್ಮಗುಪ್ತಿ ಮಹಾರಾಜರು, ಶಿರಸಿ ಸೋಂದಾ ಮಠದ ಅಕಲಂಕ ಭಟ್ಟಾರಕರು, ಹುಬ್ಬಳ್ಳಿ ವರೂರಿನ ಧರ್ಮಸೇನ ಭಟ್ಟಾರಕರು, ಲಕ್ಕವಳ್ಳಿಯ ವೃಷಭಸೇನ ಭಟ್ಟಾರಕರು, ಬ್ರಹ್ಮಚಾರಿಣಿ ಸುಮಂಗಲಮ್ಮಾ, ಬ್ರಹ್ಮಚಾರಿ ಶ್ರೀಕಾಂತ ಭಯಾಜಿ, ಸೋಮದೇವ ಸೂರಿ ಸೇರಿದಂತೆ ವಿವಿಧ ಮಠಗಳ ಮುನಿಗಳು, ಭಟ್ಟಾರಕರು ಅಂತಿಮ ದರ್ಶನ ಹಾಗೂ ದೇಹದಹನ ಕ್ರಿಯೆಯಲ್ಲಿ ಭಾಗವಹಿಸಿದ್ದರು.ಇದಕ್ಕೂ ಮುನ್ನ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಬಣ್ಣದಮಠದ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸಹ ಮುನಿ ಮಹಾರಾಜರ ಅಂತಿಮ ದರ್ಶನ ಪಡೆದರೆ, ಸರ್ಕಾರದ ಪರವಾಗಿ ಉಪವಿಭಾಗಾಧಿಕಾರಿ ಕೆ. ಚೆನ್ನಬಸಪ್ಪ, ತಹಶೀಲ್ದಾರ್ ಶಿವಲಿಂಗ, ಶಾಸಕರಾದ ರುದ್ರಪ್ಪ ಲಮಾಣಿ, ಮನೋಹರ ತಹಸೀಲ್ದಾರ್, ಮಾಜಿ ಶಾಸಕ ನೆಹರು ಓಲೇಕಾರ, ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಕೋರಿಶೆಟ್ಟರ್ ಸೇರಿದಂತೆ ವಿವಿಧ ರಾಜಕೀಯ ಮುಖಂಡರು, ಗಣ್ಯರು ಮುನಿ ಮಹಾರಾಜರ ಅಂತಿಮ ನಮನ ಸಲ್ಲಿಸಿದರು.ಜಿಲ್ಲೆಯ ಭಕ್ತರು ಸೇರಿದಂತೆ ಗದಗ, ಧಾರವಾಡ, ಬೆಳಗಾವಿ, ದಾವಣಗೆರೆ, ಬೆಂಗಳೂರು, ಕೊಪ್ಪಳ ಸೇರಿದಂತೆ ರಾಜ್ಯದ ಅನೇಕ ಕಡೆಗಳಿಂದ ಸಹಸ್ರಾರು ಭಕ್ತರು ಅಂತಿಮ ದರ್ಶನ ಪಡೆಯಲು ಆಗಮಿಸಿದ್ದರು.ಬೃಹತ್ ಮೆರವಣಿಗೆ: ಧರ್ಮಸಾಗರ ಮುನಿಗಳ ಪಾರ್ಥೀವ ಶರೀರದ ಬೃಹತ್ ಮೆರವಣಿಗೆ ಜೈನ ಬಸ್ತಿಯಿಂದ ಸೋಮವಾರ ಮಧ್ಯಾಹ್ನ 1 ಗಂಟೆಗೆ ಆರಂಭವಾಯಿತು. ಭಜನೆ, ಬ್ಯಾಂಡ್ ಸೇರಿದಂತೆ ಸಕಲ ವಾದ್ಯ ಮೇಳಗಳೊಂದಿಗೆ ನಡೆದ ಮೆರವಣಿಗೆ ನಗರದ ಯಾಲಕ್ಕಿ ಓಣಿ, ಅಕ್ಕಿಪೇಟೆ, ದೇಸಾಯಿಗಲ್ಲಿ.

ಎಂ.ಜಿ.ರಸ್ತೆ, ಗಾಂಧಿ ವೃತ್ತ, ಜೆ.ಪಿ.ವೃತ್ತ, ಜಿ.ಎಚ್.ಪಟೇಲ್ ವೃತ್ತ, ಜಿಲ್ಲಾ ಮೈದಾನ ರಸ್ತೆ, ಕೆಎಲ್‌ಇ    ಸ್ಕೂಲ್ ರಸ್ತೆ, ದುಂಡಿಬಸವೇಶ್ವರ ವೃತ್ತ, ಡಿ.ಸಿ.ರಸ್ತೆ ಮೂಲಕ ಇಜಾರಿಲಕಮಾರದಲ್ಲಿರುವ ಶಂಭವನಂದಿ ಮುನಿ ಮಹಾರಾಜರ ಪಾದುಕೆ ಸ್ಥಳಕ್ಕೆ ತೆರಳಿತು.ನಂತರ ಪುಣ್ಯಸಾಗರ ಹಾಗೂ ಪ್ರಸನ್ನಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ಜೈನ ಸಮುದಾಯದ ಧಾರ್ಮಿಕ ವಿಧಿವಿಧಾನಗಳ ಮೂಲಕ ಭಕ್ತರ ದುಃಖದ ಮಡುವಿನಲ್ಲಿ ಧರ್ಮಸಾಗರ ಮುನಿ ಮಹಾರಾಜರ ದೇಹದಹನ ಕ್ರಿಯೆ ನಡೆಯಿತು.ಸ್ಥಳೀಯ ಜೈನ ಸಮುದಾಯದ ತರುಣ ಸಾಗರ ಯುವಕ ಮಂಡಳ, ಜೈನ ಯುಥ್ ಫೆಡರೇಶನ್, ಭಾರತ ಜೈನ್, ಜೈನ್ ಮಿಲನ್ ಹಾಗೂ ರತ್ನತ್ರಯ ಮಹಿಳಾ ಮಂಡಳ ಸಂಘಟನೆಗಳು, ಈ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳಾದ ಅನಂತಪ್ಪ ಛಬ್ಬಿ, ಜಯಂತಿಲಾಲ ಜೈನ್, ವಜ್ರಕುಮಾರ, ಮಾಣಿಕಚಂದ್ ಲಾಡರ್, ಮಹಾವೀರ ಉಪಾಧ್ಯ, ರತ್ನಾಕರ ಕಳಸೂರ, ಪ್ರಕಾಶ ಉಪಾಧ್ಯ, ಮಹಾವೀರ ಕಳಸೂರ, ಚಂದ್ರನಾಥ, ಎ.ಪಿ. ಮುರಗಿ ಹಾಗೂ ಜೈನ ಸಮುದಾಯದವರು ದೇಹದಹನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.ಮುನಿಗಳ ಅಂತ್ಯಕ್ರಿಯೆ

ಹಾವೇರಿ
: ಭಾನುವಾರ ನಿಧನ ಹೊಂದಿದ ಜೈನ ಮುನಿ ಧರ್ಮಸಾಗರ ಮಹಾರಾಜರ ಅಂತ್ಯಕ್ರಿಯೆ ಜೈನ ಸಮುದಾಯದ ವಿಧಿವಿಧಾನಗಳ ಮೂಲಕ ಸೋಮವಾರ ಇಲ್ಲಿ ನಡೆಯಿತು.ಇಲ್ಲಿನ ಶಂಭವನಂದಿ ಮುನಿ ಮಹಾರಾಜರ ಪಾದುಕೆ ಇರುವ ಸ್ಥಳದಲ್ಲಿ ದೇಹದಹನ ಕಾರ್ಯವು ಮುನಿ ಪುಣ್ಯಸಾಗರ ಹಾಗೂ ಪ್ರಸನ್ನಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ನಡೆಯಿತು.ಪಾರ್ಥಿವ ಶರೀರವನ್ನು ಜೈನ ಬಸ್ತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಅಂತ್ಯಕ್ರಿಯೆ ಸ್ಥಳಕ್ಕೆ ತರಲಾಯಿತಲ್ಲದೇ, ಅವರ ದೇಹದಹನದ ವಿಧಿವಿಧಾನಗಳ ಕ್ರಿಯೆಯನ್ನು ಹರಾಜಿನ ಮೂಲಕ ಭಕ್ತರಿಗೆ ನೀಡಲಾಯಿತು.ನಂತರ ಧಾರ್ಮಿಕ ಕ್ರಿಯೆಗಳಾದ ಜಲಾಭಿಷೇಕ, ಚಂದನ ಅಭಿಷೇಕ, ಕ್ಷೀರಾಭಿಷೇಕ, ತುಪ್ಪದ ಅಭಿಷೇಕ, ಅಷ್ಟಕಳಶ ಅಭಿಷೇಕಗಳನ್ನು ಭಕ್ತರು ನೆರವೇರಿಸಿದರು. ಅದಾದ ನಂತರ ಜೈನ ಮುನಿಗಳು ಪಾರ್ಥಿವ ಶರೀರಕ್ಕೆ ಐದು ಸುತ್ತು ಹಾಕಿ, ಅಂತಿಮ ಸಂಸ್ಕಾರಕ್ಕೆ ಚಾಲನೆ ನೀಡಿದರು.ಜೈನ ಮುನಿಗಳ ಹಾಗೂ ಸಹಸ್ರಾರು ಭಕ್ತರ ಮಂತ್ರ- ಘೋಷಗಳ ಮಧ್ಯೆ ಪಾರ್ಥಿವ ಶರೀರಕ್ಕೆ ಭಕ್ತರೊಬ್ಬರು ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ಭಕ್ತರು ಶ್ರದ್ಧಾಭಕ್ತಿಯಿಂದ `ಧರ್ಮಸಾಗರ ಮಹಾರಾಜ ಕೀ ಜೈ...' ಎಂದು ಘೋಷಣೆಗಳನ್ನು ಕೂಗಿದರು.ಅಂತ್ಯಕ್ರಿಯೆಗೆ ಶ್ರೀಗಂಧದ ಕಟ್ಟಿಗೆ, ಒಂದು ಕ್ವಿಂಟಲ್‌ಗೂ ಹೆಚ್ಚು ಒಣಕೊಬ್ಬರಿ, ಅರ್ಧಕ್ವಿಂಟಲ್‌ಗೂ ಹೆಚ್ಚು ತುಪ್ಪ, ಸುಮಾರು 25 ಕೆಜಿಯಷ್ಟು ಕರ್ಪೂರ ಬಳಸಲಾಗಿತ್ತು.14ನೇ ಚಾತುರ್ಮಾಸ ಆಚರಣೆಗೆ ಮುನಿ ಧರ್ಮಸಾಗರ ಮಹಾರಾಜರು ಸವಣೂರು ತಾಲ್ಲೂಕಿನ ಕಳಸೂರು ಗ್ರಾಮಕ್ಕೆ ತೆರಳುತ್ತಿದ್ದಾಗ ಭಾನುವಾರ ತೀವ್ರ ಹೃದಯಾಘಾತವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.