ಶುಕ್ರವಾರ, ಮೇ 7, 2021
19 °C

ಅಂಬೇಡ್ಕರ್ ತತ್ವ ಪಾಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಾತಿಯತೆಯನ್ನು ತೊಲಗಿಸಲು ಡಾ. ಅಂಬೇಡ್ಕರ್ ಅವರ ತತ್ವ ಪಾಲನೆ ಅವಶ್ಯಕವಾಗಿದೆ ಎಂದು ಉಪನ್ಯಾಸಕ ಸೋಮಶೇಖರ ಅಪ್ಪಿಗೇರಿ ಅಭಿಪ್ರಾಯಪಟ್ಟರು.ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಜಿಲ್ಲಾಡಳಿತವು ನಗರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.ಆರ್ಯರು ಬಂದಾಗಿನಿಂದ ದೇಶಕ್ಕೆ ಜಾತಿಯತೆಯ ಕಾಯಿಲೆ ಅಂಟುಕೊಂಡಿದೆ. ಈವರೆಗೂ ಅದರಿಂದ ಮುಕ್ತವಾಗಲು ಸಾಧ್ಯವಾಗಿಲ್ಲ ಎಂದು ನುಡಿದರು.ಜಾತಿವಾದಿಗಳು ದೇಶದಲ್ಲಿ ಜಾತಿ ಭೇದ ಉಂಟು ಮಾಡಿದ್ದಾರೆ. ಪ್ರಜ್ಞಾವಂತರು ಅದನ್ನು ನಿರ್ಮೂಲನೆ ಮಾಡಬೇಕಿದೆ. ಡಾ. ಅಂಬೇಡ್ಕರ್ ಅವರು ಕೂಡ ಇದನ್ನೇ ಹೇಳಿದ್ದರು. ಆದರೆ, ಸಮಾಜ ಬಾಂಧವರು ಈವರೆಗೆ ಜಾಗೃತರಾಗಿಲ್ಲ ಎಂದು ವಿಷಾದಿಸಿದರು.ಉಪವಾಸ ಮತ್ತು ತಪಸ್ಸಿನಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಪ್ರಜ್ಞಾವಂತರು ಪರಿರ್ವನೆಯಾಗಬೇಕು. ಮತದಾನದ ಮೂಲಕ ಮಾತ್ರ ರಾಜಕೀಯ, ಅಧಿಕಾರದಂತಹ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ ಎಂದು ತಿಳಿಸಿದರು.ಡಾ. ಅಂಬೇಡ್ಕರ್ ಅವರು ದೇಶದ ಭೂಮಿಯನ್ನು ಸಮಾನವಾಗಿ ಹಂಚುವಂತೆ ಸಲಹೆ ನೀಡಿದ್ದರು. ಆದರೆ, ಅದನ್ನು ಯಾರೂ ಒಪ್ಪಿರಲಿಲ್ಲ. ದೇಶದ ಭೂಮಿ ಯಾರದೇ ಸ್ವತ್ತಲ್ಲ, ಅದು ನಮ್ಮೆಲ್ಲರ ಹಕ್ಕಾಗಿದೆ. ಹೀಗಾಗಿ ಭೂಮಿ ರಾಷ್ಟ್ರೀಕರಣಗೊಳಿಸಬೇಕು. ರಾಜಕಾರಣಿಗಳ ಆಸ್ತಿ ಬಹಿರಂಗಗೊಳಿಸಬೇಕು ಎಂದು ಹೇಳಿದರು.ಮನುಷ್ಯನ ಮೇಲೆ ಮಲ ಹೇರುವಂತಹ ನೀಚ ಕೃತ್ಯ ದೇಶದಲ್ಲಿ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ತಿಳಿಸಿದರು.ಬಸವಣ್ಣನವರು ವಚನ ಚಳವಳಿಯ ಮೂಲಕ ಸಮಾನತೆ ಸಾರಿದರು. ಡಾ. ಅಂಬೇಡ್ಕರರು ದಲಿತರು ಹಾಗೂ ಶೋಷಣೆಗೆ ಒಳಗಾದವರಿಗೆ ಸೌಲಭ್ಯ ಕಲ್ಪಿಸಿಕೊಡಲು ಶ್ರಮಿಸಿದರು ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಅವರು ಗೈರು ಹಾಜರಾಗಿದ್ದರಿಂದ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿದರು. ಹೀಗಾಗಿ ಕಾರ್ಯಕ್ರಮ ತಡವಾಗಿ ಆರಂಭವಾಯಿತು. ನಂತರ ಸಚಿವರು ಆಗಮಿಸಿದರು.ಶಾಸಕ ರಹೀಮ್‌ಖಾನ್ ಅಧ್ಯಕ್ಷತೆ ವಹಿಸಿದ್ದರು. ಲಿಡ್ಕರ್ ಅಧ್ಯಕ್ಷ ರಾಜೇಂದ್ರ ವರ್ಮಾ, ಶಾಸಕ ಬಂಡೆಪ್ಪ ಕಾಶೆಂಪೂರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೀರ್ ಅನೀಸ್ ಅಹಮ್ಮದ್ ಉಪಸ್ಥಿತರಿದ್ದರು.`ತಪ್ಪಾಗಿ ಅರ್ಥೈಸದಿರಿ~

ಬೀದರ್: ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದವರು ಕೇಳುತ್ತಾರೆ ಎಂದು ಮೆರವಣಿಗೆಗೆ ಚಾಲನೆ ನೀಡಿ ಅಲ್ಲಿಗೆ ಹೋಗಿದ್ದೆ. ಇದನ್ನೆ ತಪ್ಪಾಗಿ ಅರ್ಥೈಸದಿರಿ...ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ನಗರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಅವರು ತಡವಾಗಿ ಆಗಮಿಸಿದ್ದಕ್ಕೆ ಈ ರೀತಿ ವಿವರಣೆ ನೀಡಿದರು.ಗುಲ್ಬರ್ಗ ಗ್ರಾಮಾಂತರ ಕ್ಷೇತ್ರದ ಜನ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ಅಲ್ಲಿಗೂ ಹೋಗಬೇಕಾಗುತ್ತದೆ. ಅಲ್ಲಿಯು ಅಂಬೇಡ್ಕರ್ ಜಯಂತಿ ಕಾರ್ಯಕ್ರಮವೇ ಇದೆ ಎಂದು ಹೇಳಿದರು.

ಪ್ರತಿ ವರ್ಷ ಇಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಗುಲ್ಬರ್ಗ ಗ್ರಾಮಾಂತರ ಕ್ಷೇತ್ರಕ್ಕೆ ಹೋಗುತ್ತೇನೆ.ಈ ಬಾರಿ ಪ್ರಮುಖ ನಾಯಕರು ಬರದಿದ್ದರಿಂದ ಅಲ್ಲಿನ ಜನ ಸಿಟ್ಟಾಗಿದ್ದರು. ಹೀಗಾಗಿ ಅಲ್ಲಿಗೆ ಹೋಗಿದ್ದೆ. ಅದಕ್ಕಾಗಿ ತಡವಾಯಿತು. ಇದರ ಹಿಂದೆ ಬೇರಾವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.