ಭಾನುವಾರ, ಜನವರಿ 19, 2020
26 °C

ಅಕ್ಕನೂರಿಗೆ ತಮ್ಮ ಬಂದಾಗ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊನ್ನೆ ಚಿನ್ನಸ್ವಾಮಿ ಕ್ರೀಡಾಂಗಣದ ಗ್ಯಾಲರಿಯಲ್ಲಿ ಉಪೇಂದ್ರ ಪತ್ನಿ ಪ್ರಿಯಾಂಕಾ ಪಕ್ಕದಲ್ಲಿ ಎತ್ತರದ ವ್ಯಕ್ತಿಯೊಬ್ಬರು ನಿಂತಿದ್ದರು. ಅನೇಕರಿಗೆ ಅವರ‌್ಯಾರು ಎಂಬ ಕುತೂಹಲ. ಆಟೋಗ್ರಾಫ್ ಹಾಕಿಸಿಕೊಳ್ಳಲು ಮುಂದಾದ ಕೆಲವರು ಅವರ‌್ಯಾರು ಎಂಬ ಪ್ರಶ್ನೆ ಕೇಳಿದ್ದೂ ಆಯಿತು. ಅವರು ಪ್ರಿಯಾಂಕಾಗಿಂತ ನಾಲ್ಕು ವರ್ಷ ವಯಸ್ಸಿನಲ್ಲಿ ಚಿಕ್ಕವರಾದ, ಅವರ ತಮ್ಮ ವಿವೇಕ್. ಅಕ್ಕ ಕನ್ನಡದ ಸೊಸೆಯಾದರೆ, ತಮ್ಮ ಕನ್ನಡ ಚಿತ್ರರಂಗದ ಕ್ರಿಕೆಟ್ ತಂಡದ ಎದುರು ಆಟವಾಡಲು ಬಂದಿದ್ದರು. ಬೆಂಗಾಲ್ ಟೈಗರ್ಸ್‌ ಹೀನಾಯವಾಗಿ ಸೋತರೂ ವಿವೇಕ್‌ಗೆ ಅಕ್ಕನ ಜೊತೆ ಕೆಲವು ಕ್ಷಣಗಳನ್ನು ಕಳೆದ ಖುಷಿ.ಕ್ರಿಕೆಟ್ ಮುಗಿದ ಮರುದಿನವೇ ಪ್ರಿಯಾಂಕಾ ಕೋಲ್ಕತ್ತಾಗೆ ಹಾರಿದ್ದಾರೆ. ಸುನಿಲ್ ಶೆಟ್ಟಿ ನಾಯಕರಾಗಿ ನಟಿಸಿರುವ `ಎನಿಮಿ~ ಚಿತ್ರದಲ್ಲಿ ಅಭಿನಯಿಸಿರುವ ಅವರು ತವರಿನಲ್ಲಿ ಕೆಲವು ಸ್ಟೇಜ್ ಶೋಗಳನ್ನು ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಕಾಲೇಜು ಮುಗಿಸಿದ ನಂತರ ಅವರ ತಮ್ಮ ವಿವೇಕ್ ಕೂಡ ಬಂಗಾಳಿ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸುತ್ತಿರುವುದು ಅವರಿಗೆ ಹೆಮ್ಮೆಯ ವಿಷಯ.`ಈ ಸಲ ಬೆಂಗಳೂರಿನಲ್ಲಿ ಅವನು ನನ್ನ ಮನೆಗೆ ಬರಲು ಪುರುಸೊತ್ತಾಗಲಿಲ್ಲ. ನಾನೇ ಸ್ಟೇಡಿಯಂಗೆ ಹೋಗಿ ಅವನ ಜೊತೆ ಮಾತನಾಡಿ ಬಂದೆ. ಅವನೂ ಬಾಲಿವುಡ್‌ನಲ್ಲಿ ಅವಕಾಶ ನಿರೀಕ್ಷಿಸುತ್ತಿದ್ದಾನೆ~ ಎಂದ ಪ್ರಿಯಾಂಕಾ ಕನ್ನಡದಲ್ಲಿ ಸದ್ಯಕ್ಕೆ ಯಾವ ಚಿತ್ರಕ್ಕೂ ಸಹಿ ಹಾಕಿಲ್ಲ. ಎಲ್ಲಾ ಅಂದುಕೊಂಡಂತೆ ಆದರೆ ಇನ್ನೆರಡು ತಿಂಗಳಲ್ಲಿ ಅವರು ತಮ್ಮದೇ ಬ್ಯಾನರ್‌ನಲ್ಲಿ ಕನ್ನಡ ಚಿತ್ರವೊಂದನ್ನು ನಿರ್ಮಿಸಲಿದ್ದಾರೆ. ಅದರಲ್ಲಿ ಉಪೇಂದ್ರ ಅವರು ಜೋಡಿಯಾಗುತ್ತಾರೋ, ಉಪೇಂದ್ರ ನಿರ್ದೇಶನ ಮಾಡುತ್ತಾರೋ ಎಂಬ ಪ್ರಶ್ನೆಗಳಿಗೆ ಈಗಲೇ ಪ್ರಿಯಾಂಕಾ ಅವರಲ್ಲಿ ಉತ್ತರವಿಲ್ಲ.

 

ಪ್ರತಿಕ್ರಿಯಿಸಿ (+)