ಶುಕ್ರವಾರ, ಜೂನ್ 25, 2021
30 °C
ದಿನೇಶ್ ಗುಂಡೂರಾವ್‌ ರಾಜೀನಾಮೆಗೆ ಆಗ್ರಹ

ಅಕ್ಕಿ ಕಳ್ಳರಿಗೆ ಸ್ವರ್ಗವಾದ ‘ಅನ್ನಭಾಗ್ಯ’: ಸಿ.ಟಿ. ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ರಾಜ್ಯ ಸರ್ಕಾರ ಜಾರಿ ಮಾಡಿರುವ ಅನ್ನಭಾಗ್ಯ ಯೋಜನೆಯಲ್ಲಿ 850 ಕೋಟಿ ರೂಪಾಯಿ ಅಕ್ರಮವಾಗಿದೆ ಎಂದು ಲೋಕಾಯುಕ್ತ ಹೇಳಿದೆ. ಒಂದುವೇಳೆ ಕಾಂಗ್ರೆಸ್‌ನಿಂದ ತಮ್ಮನ್ನು ಹೊರಗೆ ಕಳುಹಿಸಿದರೂ, ಈ ಯೋಜನೆಯ ಶ್ರೇಯಸ್ಸು ನನ್ನ ಹೆಸರಿನಲ್ಲಿರಲಿ ಎಂದು ಸಿದ್ದರಾಮಯ್ಯ ತರಾತುರಿಯಿಂದ ಇದನ್ನು ಜಾರಿ ಮಾಡಿದ್ದಾರೆ’ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದರು.ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಹಾಸನಕ್ಕೆ ಬಂದಿದ್ದ ಅವರು ಪತ್ರಕರ್ತರೊಡನೆ ಮಾತನಾಡಿದರು.

‘ಅನ್ನಭಾಗ್ಯ ಯೋಜನೆ ಅಕ್ಕಿ ಕಳ್ಳರಿಗೆ ಸ್ವರ್ಗವಾಗಿ ಕನ್ನ ಭಾಗ್ಯ ಯೋಜನೆ ಎನಿಸಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಂಗ್ರೆಸ್ ಮುಖಂಡರ ಅಕ್ಕಿ ಗಿರಣಿಯಲ್ಲಿ ಪತ್ತೆಯಾಗಿದೆ. ಇದರಿಂದಾಗಿ ಸರ್ಕಾರವೂ ಹಗರಣದಲ್ಲಿ ಶಾಮೀಲಾಗಿರುವ ಅನುಮಾನ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಬೇಕು ಎಂದು ರವಿ ಆಗ್ರಹಿಸಿದರು.ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತೆ ರಶ್ಮಿ ಅವರನ್ನು ಬಲವಂತದ ರಜೆ ಮೇಲೆ ಕಳುಹಿಸಿದ್ದರಿಂದ ಈ ಸರ್ಕಾರದ ಬಂಡವಾಳ ಬಯಲಾಗಿದೆ.  ಖಾಸಗಿ ವೈದ್ಯಕೀಯ ಕಾಲೇಜುಗಳು ನಡೆಸಿರುವ ಅಕ್ರಮವನ್ನು ಪತ್ತೆಮಾಡಿ, ಅವುಗಳಿಗೆ ನೋಟಿಸ್ ನೀಡಿದ ತಪ್ಪಿಗೆ  ರಶ್ಮಿಗ ಕಡ್ಡಾಯ ರಜೆಯ ಶಿಕ್ಷೆ ವಿಧಿಸಲಾಗಿದೆ ಎಂದರು.ಸಿದ್ದರಾಮಯ್ಯ, ಅಹಿಂದ ವರ್ಗವನ್ನು ಪ್ರತ್ಯೇಕಿಸಿ ಸಮಾಜವನ್ನು ಒಡೆದು ಅಧಿಕಾರಕ್ಕೆ ಬಂದರು. ಮುಖ್ಯಮಂತ್ರಿ ಆದಬಳಿಕ  ದಲಿತರನ್ನು ಕಡೆಗಣಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೇ ಆರೋಪಿಸಿದ್ದಾರೆ. ಆದ್ದರಿಂದ ಈ ಸಮುದಾಯ ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ಈ ಬಾರಿಯೂ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಲಿದೆ.  ಮೈಸೂರು ಕ್ಷೇತ್ರದ ಟಿಕೆಟ್ ತಪ್ಪಿದ ಕಾರಣಕ್ಕೆ ವಿಜಯಶಂಕರ್ ಅವರು ಪಕ್ಷ ಬಿಡುವ ಸಾಧ್ಯತೆಯಿಲ್ಲ. ಅವರು ಸೋತಿದ್ದಾಗಲೂ ಪಕ್ಷ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿಸಿತ್ತು. ವ್ಯಕ್ತಿಗಳ ವಿಶ್ವಾಸರ್ಹತೆ ಇಂಥ ಸಮಯದಲ್ಲಿ ಬಯಲಾಗುತ್ತದೆ ಎಂದರು.

‘ವಿಜಯಶಂಕರ್ ಇಲ್ಲವೆ ಅಣ್ಣಪ್ಪ’

ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ವಿಜಯಶಂಕರ್‌ ಹಾಗೂ ನವಿಲೆ ಅಣ್ಣಪ್ಪ ಅವರ ಹೆಸರು ಇದೆ. ಗುರುವಾರ ರಾತ್ರಿ ಒಬ್ಬರ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. ಕ್ಷೇತ್ರದಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನವಿಲೆ ಅಣ್ಣಪ್ಪ, ಭುವನಾಕ್ಷ, ಗುರುಪ್ರಸಾದ್, ಪ್ರಕಾಶ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.