ಶುಕ್ರವಾರ, ಜನವರಿ 24, 2020
28 °C

ಅಕ್ರಮ ಗಣಿಗಾರಿಕೆಯ ಸಮಗ್ರ ತನಿಖೆ ನಡೆಸಿ

ಪ್ರಜಾವಾಣಿ ವಾರ್ತೆ, Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕಾನೂನು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದಕ್ಕೆ ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ರಾಜಕಾರಣಿಗಳು ಇಂದು ಜೈಲು ಸೇರಿ ಸಾಮ್ಯೋನ ಜೀವನ ನಡೆಸುವಂತಹ ಪರಿಸ್ಥಿತಿ ಬಂದಿರುವುದೇ ಸಾಕ್ಷಿ ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ್ ಹೇಳಿದರು.ನಗರದ ಕರ್ನಾಟಕ ಸಂಘದಲ್ಲಿ ಭಾನುವಾರ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪಶ್ಚಿಮಘಟ್ಟದಲ್ಲಿ ಅಕ್ರಮ ಮತ್ತು ಜನವಿರೋಧಿ ಸಕ್ರಮ ಗಣಿಗಾರಿಕೆ, ಭೂಸ್ವಾಧಿನ, ಭ್ರಷ್ಟಾಚಾರ ವಿರೋಧಿಸಿ ಹಾಗೂ ಲೋಕಾಯುಕ್ತ ನೇಮಕಕ್ಕೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ಅಪವಿತ್ರ ಮೈತ್ರಿಯಿಂದ ದೊಡ್ಡ ಮಟ್ಟದ ಅಕ್ರಮ ಗಣಿಗಾರಿಕೆ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಂದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು, ಜತೆಗೆ ಈ ಹಣದಲ್ಲಿ ಅಲ್ಲಿನ ಪರಿಸರ, ಜನಜೀವನ ಪುನಶ್ಚೇತನಗೊಳಿಸುವ ಕಾರ್ಯ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಂಡದ ಯು.ವಿ. ಸಿಂಗ್, ಮೊಹಾಂತಿ ಸೇರಿದಂತೆ ಹಲವು ದಕ್ಷ ಅಧಿಕಾರಿಗಳು ಆಮಿಷಗಳಿಗೆ ಒಳಗಾಗದೇ ತನಿಖೆ ನಡೆಸಿದ್ದರಿಂದಾಗಿ ಅಕ್ರಮ ಗಣಿಗಾರಿಕೆಯ ಬಗ್ಗೆ ಸಮಗ್ರ ದಾಖಲಾತಿ ಸಂಗ್ರಹಿಸಲು ಸಾಧ್ಯವಾಯಿತು. ಇವರೊಂದಿಗೆ ಸುಪ್ರೀಂಕೋರ್ಟ್ ನೇಮಿಸಿದ್ದ ಕೇಂದ್ರೀಯ ಉನ್ನತಾಧಿಕಾರಿ ಸಮಿತಿಯೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದಾಗಿ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಎಲ್ಲಾ ರೀತಿಯ ಗಣಿಗಾರಿಕೆ ಬಂದ್ ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ ಎಂದರು.ಸಮಾವೇಶ ಉದ್ಘಾಟಿಸಿ ಮಾತನಾಡಿದ ರೈತ ಮುಖಂಡ ಕಡಿದಾಳು ಶಾಮಣ್ಣ, ಗಣಿಗಾರಿಕೆಯಿಂದ ಪರಿಸರದ ಮೇಲೆ ಹಾನಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಕ್ರಮ, ಸಕ್ರಮ ಎನ್ನದೇ ಎಲ್ಲಾ ರೀತಿಯ ಗಣಿಗಾರಿಕೆಗಳನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.ಪರಿಸರವಾದಿ ರಾಘವೇಂದ್ರ ಕುಷ್ಟಗಿ ಮಾತನಾಡಿ, ಹಿಂದಿನ ಸರ್ಕಾರಗಳು ಭೂ ಸುಧಾರಣೆ ತಂದು ಬಡವರಿಗೆ ಭೂಮಿ ನೀಡುವುದು ತಮ್ಮ ಕಾರ್ಯವೆಂದು ತಿಳಿದಿದ್ದವು. ಆದರೆ, ಇಂದಿನ ಸರ್ಕಾರ ರೈತರಿಂದ ಭೂಮಿಯನ್ನು ಕಿತ್ತುಕೊಳ್ಳುವುದೇ ತನ್ನ ಕರ್ತವ್ಯ ಎಂದು ತಿಳಿದಿದೆ ಎಂದು ವ್ಯಂಗ್ಯವಾಡಿದರು.ಪರಸರವಾದಿ ಕಲ್ಕುಳಿ ವಿಠ್ಠಲ ಹೆಗಡೆ, ರೈತ ಮುಖಂಡ ಎಚ್.ಆರ್. ಬಸವರಾಜಪ್ಪ ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)