ಶನಿವಾರ, ಮೇ 28, 2022
31 °C

ಅಕ್ರಮ ಗಣಿಗಾರಿಕೆ : 617 ಅಧಿಕಾರಿಗಳ ವಿರುದ್ಧ ಕ್ರಮ

ಪ್ರಜಾವಾಣಿ ವಾರ್ತೆ / ಬಿ.ಎನ್.ಶ್ರೀಧರ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯನ್ನು ಪರಿಶೀಲಿಸುವ ಸಲುವಾಗಿ ನೇಮಿಸಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ನೇತೃತ್ವದ ಸಮಿತಿ ತನ್ನ ವರದಿಯನ್ನು ಸಿದ್ಧಪಡಿಸಿದ್ದು, ತಪ್ಪಿತಸ್ಥ 617 ಮಂದಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದೆ.

ಮೂವರು ಐಎಎಸ್, ನಾಲ್ಕು ಮಂದಿ ಐಎಫ್‌ಎಸ್ ಸೇರಿದಂತೆ ಒಟ್ಟು 617 ಮಂದಿ ವಿವಿಧ ಇಲಾಖೆಗಳ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ.

ಲೋಕಾಯುಕ್ತರ ವರದಿಯಲ್ಲಿ 787 ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಉಲ್ಲೇಖಿಸಲಾಗಿತ್ತು. ಕೆಲವರು ನೇರವಾಗಿ ಭಾಗಿಯಾಗಿರದ ಕಾರಣ ಅಂತಹವರ ಹೆಸರುಗಳನ್ನು ವರದಿಯಲ್ಲಿ ಕೈಬಿಡಲಾಗಿದೆ ಎಂದು ಎನ್ನಲಾಗಿದೆ. ಅಧಿಕಾರಿಗಳ ವಿರುದ್ಧ ಕ್ರಮದ ಜತೆಗೆ ಅವರಿಂದ ಆಗಿರುವ ನಷ್ಟದ ಐದು ಪಟ್ಟು ಹಣವನ್ನು ವಸೂಲಿ ಮಾಡುವಂತೆಯೂ ಶಿಫಾರಸು ಮಾಡಲಾಗಿದೆ.

ಇದಲ್ಲದೆ, ಇನ್ನೂ ನಾಲ್ಕು ಪ್ರಮುಖ ಶಿಫಾರಸುಗಳನ್ನು ಸಮಿತಿ ಮಾಡಿದೆ. ಅವುಗಳೆಂದರೆ, ಅಕ್ರಮ ಗಣಿಗಾರಿಕೆ ಒಂದು ಬೃಹತ್ ಜಾಲದಂತೆ ಇದ್ದು, ಅದರ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವುದು ಸೂಕ್ತ ಎಂದೂ ಹೇಳಿದೆ.

ಗಣಿ, ಭೂ ವಿಜ್ಞಾನ ಮತ್ತು ಪರಿಸರ ಇಲಾಖೆಗಳ ಕಾರ್ಯವೈಖರಿಯಲ್ಲೂ ಸಾಕಷ್ಟು ಲೋಪಗಳು ಎದ್ದುಕಾಣುತ್ತಿವೆ. ಈ ಇಲಾಖೆಗಳ ಅಧಿಕಾರಿಗಳ ಕಾರ್ಯನಿರ್ವಹಣೆ ಮತ್ತು ಕಾರ್ಯವ್ಯಾಪ್ತಿ ಬಗ್ಗೆಯೂ ಸ್ಪಷ್ಟಪಡಿಸಬೇಕಾಗಿದೆ. ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಈ ಇಲಾಖೆಗಳು ದುರ್ಬಲವಾಗಿವೆ. ಅವೆಲ್ಲವನ್ನೂ ಸರಿಪಡಿಸುವ ತುರ್ತು ಅಗತ್ಯ ಇದೆ ಎಂದೂ ಜೈರಾಜ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಬ್ಬಿಣದ ಅದಿರು ಸಾಗಣೆ ವಿಚಾರದಲ್ಲೂ ಬಹಳಷ್ಟು ನ್ಯೂನ್ಯತೆ ಇದ್ದು, ಅದನ್ನು ಸರಿಪಡಿಸಬೇಕಾಗಿದೆ. ಅದರ ಉಸ್ತುವಾರಿಗಾಗಿ ಪಾರದರ್ಶಕವಾದ ಒಂದು ವ್ಯವಸ್ಥೆ ರೂಪಿಸಬೇಕು. ಎಲ್ಲವನ್ನೂ ಕಂಪ್ಯೂಟರೀಕರಿಸಿ, ಅದಿರು ತೆಗೆಯುವುದು, ನಂತರ ಅದರ ಸಾಗಣೆ, ಮಾರಾಟ ಇತ್ಯಾದಿ ಎಲ್ಲ ವ್ಯವಹಾರಗಳ ಮೇಲೆ ನಿಗಾ ಇಡುವ ಅತ್ಯಾಧುನಿಕ ವ್ಯವಸ್ಥೆ ಜಾರಿಯಾಗಬೇಕು. ಎಲ್ಲವನ್ನೂ ಸಿಸಿಟಿವಿಗಳ ಮೂಲಕ ದಾಖಲಿಸಿಡಬೇಕು ಎನ್ನುವ ಶಿಫಾರಸನ್ನೂ ಸಮಿತಿ ಮಾಡಿದೆ.

ಗಣಿ ಪರವಾನಗಿ ನೀಡುವ ವ್ಯವಸ್ಥೆ ಕೂಡ ಪಾರದರ್ಶಕವಾಗಿಲ್ಲ. ಏಕಗವಾಕ್ಷಿ ಯೋಜನೆ ಮೂಲಕ ಗಣಿ ಪರವಾನಗಿ ನೀಡುವುದಲ್ಲದೆ, ಅದರಲ್ಲಿನ ಲೋಪಗಳನ್ನು ಸರಿಪಡಿಸಬೇಕು ಎಂದೂ ತಿಳಿಸಲಾಗಿದೆ. ಒಟ್ಟಿನಲ್ಲಿ ಏಳು ಸಂಪುಟಗಳ ವರದಿಯಲ್ಲಿ 26 ಪುಟಗಳ ಶಿಫಾರಸುಗಳಿವೆ.

ಜೈರಾಜ್ ನೇತೃತ್ವದ ಸಮಿತಿಯಲ್ಲಿ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಮೀಮ್ ಬಾನು, ಆರೋಗ್ಯ ಇಲಾಖೆ ಆಯುಕ್ತರೂ ಆದ ಹಿಂದಿನ ಗಣಿ ಇಲಾಖೆ ಕಾರ್ಯದರ್ಶಿ ರಾಮಪ್ರಸಾದ್ ಸದಸ್ಯರಾಗಿದ್ದರು. ಅಭಿವೃದ್ಧಿ ಆಯುಕ್ತರಾಗಿದ್ದ ಮೀರಾ ಸಕ್ಸೇನಾ ಅವರು ಕಳೆದ ತಿಂಗಳು ನಿವೃತ್ತರಾಗಿದ್ದು, ಅವರು ಕೂಡ ಈ ಸಮಿತಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು.

ವರದಿಯನ್ನು ಮುದ್ರಣಕ್ಕೆ ಕಳುಹಿಸಿದ್ದು, ಸೋಮವಾರ ಅಥವಾ ಮಂಗಳವಾರ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.