ಅಕ್ರಮ ಮರಳು ದಂಧೆ: ಆರೋಪ
ಸಿಂಧನೂರು: ಕಳೆದ ಒಂದು ತಿಂಗಳಿನಿಂದ ಹಿರೇಹಳ್ಳದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ಮೌನವಾಗಿದ್ದಾರೆ ಎಂದು ವಿವಿಧ ಸಂಘಟನೆಗಳು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲ್ಲೂಕಿನ ಹೆಡಗಿನಾಳ ಗ್ರಾಮದ ಬಳಿ ಮಾತ್ರ ಅಧಿಕೃತವಾಗಿ ಲೋಕೋಪಯೋಗಿ ಇಲಾಖೆಯೇ ಹಣ ಪಡೆದು ಮರಳನ್ನು ಮಾರಾಟ ಮಾಡುತ್ತಿದೆ. ಇನ್ನುಳಿದಂತೆ ಎಲ್ಲ ಕಡೆಗಳಲ್ಲೂ ಅಕ್ರಮವಾಗಿಯೇ ಹಗಲು ರಾತ್ರಿ ಎನ್ನದೆ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗಂಗಣ್ಣ ಡಿಶ್, ಜಯ ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ ಬಡಿಗೇರ ಮತ್ತಿತರ ಸಂಘಟನೆಗಳು ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ತಮ್ಮ ಎದುರಿನಲ್ಲಿಯೇ ಮರಳು ತುಂಬಿಕೊಂಡು ಟ್ರ್ಯಾಕ್ಟರ್ಗಳು ಓಡಾಡುತ್ತಿದ್ದರೂ ಪೊಲೀಸರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸಂಘಟನೆಗಳ ಮುಖಂಡರು ಆಪಾದಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗರಾಜ ಅವರಂತೂ ತಮಗೆ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ.
ಮರಳು ಸಾಗಾಣಿಕೆ ತಮಗೆ ಸಂಬಂಧವಿಲ್ಲ. ರಸ್ತೆ ನಿರ್ಮಾಣ ಮತ್ತಿತರ ಸರ್ಕಾರಿ ಕಾಮಗಾರಿಗಳು ಮಾತ್ರ ತಮ್ಮ ಇಲಾಖೆಗೆ ಸಂಬಂಧಿಸಿವೆ ಎಂದು ಹೇಳುತ್ತ್ದ್ದಿದಾರೆ. ಹಾಗಾದರೆ ನೈಸರ್ಗಿಕ ಸಂಪತ್ತು ನಾಶವಾಗುತ್ತಿರುವ ಸಂಗತಿಯನ್ನು ಯಾರಿಗೆ ಹೇಳಬೇಕು ಎಂಬುದು ಸಂಘಟನೆ ಹಾಗೂ ಗ್ರಾಮಸ್ಥರ ಅಳಲು.
ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹೇಳಿ ನುಸುಳಿಕೊಳ್ಳದೆ ಸಿಂಧನೂರಿನ ಹಳ್ಳದ ಬೃಹತ್ ಸೇತುವೆ ಸುಭದ್ರವಾಗಿರಬೇಕಾದರೆ ಪಕ್ಕದಲ್ಲಿ ಮರಳು ಅಗೆಯದಂತೆ ಮುಂಜಾಗ್ರತೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.