ಶುಕ್ರವಾರ, ಫೆಬ್ರವರಿ 26, 2021
19 °C

ಅಕ್ಷರ ಕಲಿತ ಶಾಲೆಯತ್ತ

ಹಳ್ಳಿ ಸುರೇಶ್ Updated:

ಅಕ್ಷರ ಗಾತ್ರ : | |

ಅಕ್ಷರ ಕಲಿತ ಶಾಲೆಯತ್ತ

ಇದು ತಿಪಟೂರು ತಾಲ್ಲೂಕಿನ ಹೆಮ್ಮೆ. ಬ್ರಿಟಿಷರ ಕಾಲದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಐತಿಹಾಸಿಕ ಗಟ್ಟಿಮುಟ್ಟು ಕಟ್ಟಡ ತನ್ನ ವಾಸ್ತುಶಿಲ್ಪ ವೈಭವದಿಂದ ಊರಿನ ಸಂಕೇತವಾಗಿದೆ. ಇಂತಹ ಹಿರಿತನದ ಶಾಲೆಯ ಮಾಸಲು ತೆಗೆದು ಮೆರಗು ನೀಡಲು ಕೈಹಾಕಿದ ಹಿರಿಯ ವಿದ್ಯಾರ್ಥಿಗಳ ಶ್ರಮ ಮಾದರಿಯಾಗಿದೆ.1925 ಜುಲೈ 31ರಂದು ಮೈಸೂರು ದಿವಾನರಾದ ಆಲ್ಬಿಯನ್ ಬ್ಯಾನರ್ಜಿ ಅವರಿಂದ ಶಂಕುಸ್ಥಾಪನೆಗೊಂಡಿದ್ದ ಈ ಕಟ್ಟಡ 2 ಎಕರೆಯಷ್ಟು ವಿಸ್ತಾರದಲ್ಲಿದೆ. ಕ್ರೀಡಾಂಗಣ ಸೇರಿದಂತೆ 10 ಎಕರೆಗೂ ಹೆಚ್ಚು ಜಾಗವಿದೆ. ಬ್ರಿಟಿಷ್ ವಿನ್ಯಾಸದ ಕಟ್ಟಡ ಸಂಪೂರ್ಣ ಕಲ್ಲಿನ ನಿರ್ಮಾಣ. 1927ರಲ್ಲಿ ಆರಂಭಗೊಂಡ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಇಲ್ಲಿನ ಶಾಸಕರಾಗಿ ಮೊದಲ ವಿಧಾನಸಭೆ ಪ್ರವೇಶಿಸಿದ್ದ ಟಿ.ಜಿ.ತಿಮ್ಮೇಗೌಡ ಈ ಶಾಲೆಯ ಮೊದಲ ವರ್ಷದ ವಿದ್ಯಾರ್ಥಿ ಎಂಬುದು ದಾಖಲಾರ್ಹ.ಇಲ್ಲಿ ಓದಿದ ಅದೆಷ್ಟೋ ಮಂದಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಬಹಳಷ್ಟು ಜನರಿಗೆ ಉತ್ತಮ ಬದುಕಿನ ದಾರಿ ತೋರಿಸಿದೆ. 1992ರಲ್ಲಿ ಪದವಿ ಪೂರ್ವ ಕಾಲೇಜಾಗಿ ಮೇಲ್ದರ್ಜೆಗೇರಿದ ಶಾಲೆ ದೀನ ದಲಿತರ ಶೈಕ್ಷಣಿಕ ಆಸರೆಯಾಗಿದೆ. ಆದರೆ ಕೊಠಡಿ ಕೊರತೆ, ಸೌಲಭ್ಯ ಸಮಸ್ಯೆ ಎದುರಾಗಿತ್ತು. ಸರ್ಕಾರದ ಅನುದಾನ ಮಿತಿಯಲ್ಲಿ ಪುನಶ್ಚೇತನ ಅಸಾಧ್ಯವಾಗಿತ್ತು.ತಮ್ಮ ಶಾಲೆ ಮಾಸಲು ಮುಖ ಇಟ್ಟುಕೊಂಡು, ಸಮಸ್ಯೆ ಎದುರಿಸಿಕೊಂಡು ಕಳಾಹೀನವಾಗಿದ್ದನ್ನು ಗಮನಿಸಿದ ಹಿರಿಯ ವಿದ್ಯಾರ್ಥಿಗಳು ಸಂಘಟಿತರಾಗಿ ಶಾಲೆಯ ಪುನಶ್ಚೇತನಕ್ಕೆ ಮುಂದಾದರು. ಅದರ ಫಲವಾಗಿ ಇಂದು ಈ ಐತಿಹಾಸಿಕ ಕಟ್ಟಡದ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಶೋಭಾಯಮಾನ ಕಾರ್ಯ ಕೈಗೂಡಿದೆ. ಕೆಲ ಸೌಲಭ್ಯ ಒದಗಿಬಂದಿವೆ.ಕೆಲ ಹಿರಿಯ ವಿದ್ಯಾರ್ಥಿಗಳಿಗೆ ಇಂಥದ್ದೊಂದು ಆಲೋಚನೆ ಮೊಳಕೆ ಒಡೆದಿದ್ದು 2009ರಲ್ಲಿ. ತಾವು ಓದಿದ ಶಾಲೆಯ ದುಃಸ್ಥಿತಿ ಅರಿತು ಏನಾದರೂ ಕೈಲಾದಷ್ಟು ನೆರವಾಗಬೇಕೆಂದರು. 1988ರಲ್ಲಿ ಎಸ್‌ಎಲ್‌ಎಸ್‌ಸಿ ಮುಗಿಸಿ ಹೊರ ಬಂದಿದ್ದ ಬ್ಯಾಚ್‌ನವರಷ್ಟೇ ಸೇರಿ ಶಾಲೆಗೆ ಸಾಧ್ಯವಿದ್ದಷ್ಟು ನೆರವಾಗಲು ಪ್ರಯತ್ನಿಸಿದ್ದರು. ಅಲ್ಲಿಗೇ ನಿಂತಿದ್ದ ಆ ಪ್ರಯತ್ನ ಮತ್ತೆ 2011ರಲ್ಲಿ ಮರು ಚಿಗುರೊಡೆಯಿತು.ಕೆಲವರು ಸಭೆ ಸೇರಿ ಹಿರಿಯ ವಿದ್ಯಾರ್ಥಿಗಳನ್ನು ಸಂಘಟಿಸುವ ಮಾರ್ಗಗಳನ್ನು ಹುಡುಕಿದರು. ಆರಂಭದಲ್ಲಿ 50 ಜನರಿದ್ದ ತಂಡ ಕ್ರಮೇಣ 1500 ದಾಟಿತು. ಇದಕ್ಕಾಗಿ ಸತತ ಸಂಪರ್ಕ ಮತ್ತು ಬೆಂಗಳೂರಿನಲ್ಲೂ ಸಭೆ ನಡೆದಿತ್ತು. ಶಾಲೆಯ ಅಭಿವೃದ್ಧಿಗಾಗಿ ದತ್ತು ತೆಗೆದುಕೊಳ್ಳಲು ಹಿರಿಯರು ನಿರ್ಧರಿಸಿದರು. ಇಷ್ಟು ಸಂಘಟನೆ ಸಾಧ್ಯವಾಗಿದ್ದರಿಂದ ಭರವಸೆ ಹುಟ್ಟಿ ಕಳೆದ ವರ್ಷ ಏ. 17ರಂದು `ನೆನಪು~ ಎಂಬ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.ಶಾಸಕ ಬಿ.ಸಿ.ನಾಗೇಶ್ ಒತ್ತಾಸೆ ಮೇರೆಗೆ ಆ ಸಮಾರಂಭಕ್ಕೆ ಆಗಮಿಸಿದ್ದ ಸಚಿವ ಸುರೇಶ್‌ಕುಮಾರ್ ಭರವಸೆ ನೀಡಿದಂತೆ ರೂ. 35 ಲಕ್ಷ ವಿಶೇಷ ಅನುದಾನ ಮಂಜುರಾಗಿತ್ತು. ಆ ಹಣದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣವಾದವು. ಉಳಿದ ಹಣದಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಯಿತು. ರೋಟರಿ ನೆರವಿನೊಂದಿಗೆ ಆರು ಶೌಚಾಲಯ ತಲೆ ಎತ್ತಿದವು. ಹಿರಿಯ ವಿದ್ಯಾರ್ಥಿಗಳು ಸಂಗ್ರಹಿಸಿದ ಸುಮಾರು ರೂ. 15 ಲಕ್ಷ ವೆಚ್ಚದಲ್ಲಿ ಕಟ್ಟಡದ ನವೀಕರಣ, ಕೊಠಡಿಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಯಿತು.ಒಳಾವರಣ ಶೃಂಗಾರ, ಹಳೆ ಬಾವಿ ಬಳಸಿ ಮಳೆ ನೀರು ಕೊಯ್ಲು ಘಟಕ ಸ್ಥಾಪನೆ, ಶಾಲಾ ವನದಲ್ಲಿ ಎರಡು ಬಂಡ್, ಲೆದರ್ ಬಾಲ್ ನೆಟ್ ಪ್ರಾಕ್ಟೀಸ್ ಕಾಂಕ್ರಿಟ್ ಪಿಚ್ ಹಾಗೂ ಹೈಜಂಪ್ ಪಿಚ್ ನಿರ್ಮಾಣ ಸಾಧ್ಯವಾಯಿತು. ಹಿರಿಯ ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಗಳನ್ನು ನಡೆಸಿ ಅದರಿಂದ ಉಳಿದ ಸುಮಾರು ರೂ. 1.2 ಲಕ್ಷವನ್ನು ಶಾಲಾಭಿವೃದ್ಧಿಗೆ ನೀಡಲಾಯಿತು. ತರಗತಿ ನಡೆಸಲು ಅವಕಾಶವಾಗುವಂತೆ ಹೊಂದಾಣಿಕೆ ಮೇಲೆ ಕೊಠಡಿಗಳ ದುರಸ್ತಿ, ಸುಣ್ಣಬಣ್ಣ ಕೆಲಸ ನಡೆಯುತ್ತಿದೆ.ಈ ಕೆಲಸಗಳಲ್ಲಿ ಹಿರಿಯ ವಿದ್ಯಾರ್ಥಿಗಳೇ (ಈಗ ಕುಶಲ ಕಾರ್ಮಿಕರು) ಹೆಚ್ಚಾಗಿ ತೊಡಗಿಸಿಕೊಂಡಿರುವುದು ವಿಶೇಷ. ಹಿರಿಯ ವಿದ್ಯಾರ್ಥಿಗಳಲ್ಲೇ ಕೆಲವರು ಮುಂದೆ ನಿಂತು ಸಂಘದಿಂದ ವಹಿಸಿಕೊಂಡಿದ್ದ ಕೆಲಸವನ್ನು ಮಾಡಿಸುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ಯೋಜಿತ ಕೆಲಸಗಳು ಬಹುತೇಕ ಮುಗಿಯಲಿವೆ. ಈ ಸಂಭ್ರಮದಲ್ಲಿ ಜುಲೈ 15ರಂದು ಬೆಳಿಗ್ಗೆ `ನೆನಪಿನ ಬಳ್ಳಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಎಲ್ಲಾ ಹಿರಿಯ ವಿದ್ಯಾರ್ಥಿಗಳು ಮತ್ತು ಸಮಾನಾಸಕ್ತರಿಗೆ ಆಹ್ವಾನವಿದೆ.ಶಾಲೆಯ ಪುನಶ್ಚೇತನಕ್ಕೆ ವರ್ಷದ ಹಿಂದೆ ಹಾಕಿಕೊಂಡಿದ್ದ ಕೆಲಸಗಳು ಕೈಗೂಡಿದ ಸಂಭ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು ಜುಲೈ 15ರಂದು `ನೆನಪಿನ ಬಳ್ಳಿ~ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ಒಂದೆಡೆ ಸೇರುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.