ಶನಿವಾರ, ಮೇ 15, 2021
22 °C
15, 16ರಂದು 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

`ಅಕ್ಷರ ಜಾತ್ರೆ'ಗೆ ದಕ್ಷಿಣಕಾಶಿ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಾಂಸ್ಕೃತಿಕ ನಗರಿಯ ಸಾಹಿತ್ಯಾಸಕ್ತರು, ಕನ್ನಡ ಪ್ರೇಮಿಗಳ ಬಹುನಿರೀಕ್ಷಿತ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. `ದಕ್ಷಿಣಕಾಶಿ' ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಕಲಾಮಂದಿರ ಆವರಣದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆದಿದೆ.ಬೇಸಿಗೆ ಕಳೆದು ಮಳೆಗಾಲ ಆರಂಭವಾಗಿದೆ. ಪೂರ್ವ ಮುಂಗಾರು ಮಳೆ ನರ್ತನ ಆರಂಭಿಸಿದ್ದು, ಕಾದ ಮನಗಳಿಗೆ ತಂಪೆರೆದಿದೆ. ಅಂತೆಯೇ, ನೀರಿಲ್ಲದೇ ಭಣಗುಡುತ್ತಿದ್ದ ಕಪಿಲೆ ಮೆಲ್ಲಗೆ ಹರಿಯಲಾರಂಭಿಸಿದ್ದಾಳೆ. ಹೀಗಾಗಿ, ಈ ಬಾರಿ `ಕಪಿಲೆ'ಯ ದಡದಲ್ಲಿ `ಕನ್ನಡ ಕಲರವ' ಕೇಳಿ ಬರಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ `ತವರು ಜಿಲ್ಲೆ'ಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿ ುವುದರಿಂದ ಸಾಹಿತ್ಯಾಸಕ್ತರ ನಿರೀಕ್ಷೆ ಹೆಚ್ಚಾಗಿದೆ. ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ಬಗ್ಗೆ, ಅದರಲ್ಲೂ ಮುಖ್ಯವಾಗಿ ಮೈಸೂರಿನಲ್ಲಿರುವ ಮಹಾರಾಣಿ ಹೊಸ ಮಾದರಿ (ಎನ್.ಟಿ.ಎಂ) ಶಾಲೆಯ ಜಾಗವನ್ನು ಚೆನ್ನೈನ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಿ, ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶದ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.ಸಮ್ಮೇಳನಕ್ಕೆ ಸಜ್ಜು: ಜೂನ್ 15ರಂದು ಬೆಳಿಗ್ಗೆ 8.30 ಗಂಟೆಗೆ ಸಮ್ಮೇಳನಾಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ಹುಲ್ಲಹಳ್ಳಿ ವೃತ್ತದಿಂದ ಸಮ್ಮೇಳನದ ವೇದಿಕೆವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯ ಲಾಗುತ್ತದೆ. ತಾಲ್ಲೂಕಿನ ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ಸಾಹಿತ್ಯಾಸಕ್ತರು ಭಾಗವಹಿಸುವರು. 30 ಜಾನಪದ ಕಲಾತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಲಿವೆ. ಇದಾದ ಬಳಿಕ, ರಾಷ್ಟ್ರಧ್ವಜ, ನಾಡಧ್ವಜ ಮತ್ತು ಪರಿಷತ್ತಿನ ಧ್ವಜದ ಆರೋಹಣ ಮಾಡಲಾಗುತ್ತದೆ.30 ಪುಸ್ತಕ ಮಳಿಗೆ: `ಅಕ್ಷರ ಜಾತ್ರೆ'ಯ ಸಂಭ್ರಮಕ್ಕೆ ನಂಜನಗೂಡಿನ ಕಲಾಮಂದಿರದ ಆವರಣ ಸಜ್ಜಾಗುತ್ತಿದೆ. ಸಾಹಿತ್ಯಾಸಕ್ತರ `ಮಿದುಳಿಗೆ ಮೇವು' ಒದಗಿಸಲು 30 ಪುಸ್ತಕ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಹೊಣೆ ಹೊತ್ತಿದ್ದು, ಮಳಿಗೆ, ವಿದ್ಯುತ್, ಟೇಬಲ್ ಸೇರಿದಂತೆ ಅಗತ್ಯ ಪರಿಕರಗಳನ್ನು ಮಾರಾಟಗಾರರಿಗೆ ಉಚಿತವಾಗಿ ನೀಡಲು ತೀರ್ಮಾನಿಸಿದೆ. ಈಗಾಗಲೇ 20ಕ್ಕೂ ಹೆಚ್ಚು ಪ್ರಕಾಶಕರು ಹಾಗೂ ಪುಸ್ತಕ ಮಾರಾಟಗಾರರು ಹೆಸರು ನೋಂದಾಯಿಸಿಕೊಂಡಿದ್ದು, ಈ ಸಂಖ್ಯೆ 30 ಮೀರುವ ನಿರೀಕ್ಷೆ ಇದೆ.12 ಸಮಿತಿಗಳ ರಚನೆ: ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ವಾಗತ ಸಮಿತಿ, ಊಟೋಪಚಾರ ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ, ಪ್ರಚಾರ ಸಮಿತಿ, ಹಣಕಾಸು ಸಮಿತಿ, ಪುಸ್ತಕ ಮಳಿಗೆ ಸಮಿತಿ, ನಗರ ಶೃಂಗಾರ ಸಮಿತಿ, ಸ್ವಚ್ಛತಾ ಸಮಿತಿ, ಮೆರವಣಿಗೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ ಸೇರಿದಂತೆ ಒಟ್ಟು 12 ಸಮಿತಿಗಳನ್ನು ರಚಿಸಲಾಗಿದೆ.ಜಾನಪದ ಜಾತ್ರೆ: ಕನ್ನಡ ಕಂಪನ್ನು ಪಸರಿಸುವ ಜತೆಗೆ ಸಾಹಿತ್ಯಾಸಕ್ತರಿಗೆ ಜಾನಪದ ಸೊಗಡಿನ ರುಚಿ ಉಣಬಡಿಸಲು ಮುಂದಾಗಿರುವ ಸಾಹಿತ್ಯ ಪರಿಷತ್, ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನೃತ್ಯಗಿರಿ ಕೇಂದ್ರದ ಕೃಪಾ ಫಡ್ಕೆ ತಂಡದವರು `ಕೆರೆಗೆ ಹಾರ' ಕೃತಿಯ ಪ್ರತಿರೂಪವಾದ `ಮದಗದ ಕೆಂಚವ್ವ' ನೃತ್ಯರೂಪಕ, ಬೆಂಗಳೂರಿನ ಪದ್ಮಿನಿ ಅಕ್ಕಿ ಮತ್ತು ತಂಡ `ವಚನ ವೈಭವ' ನೃತ್ಯ ರೂಪಕ ಪ್ರಸ್ತುತ ಪಡಿಸುವರು. ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್ ಮತ್ತು ತಂಡದಿಂದ `ಜಾನಪದ ಗೀತೆಗಳ ಗಾಯನ' ಹಾಗೂ ರಂಗಕರ್ಮಿ ಮಂಡ್ಯ ರಮೇಶ್ ನಿರ್ದೇಶನದ `ಚಾಮ ಚೆಲುವೆ' ನಾಟಕ ಪ್ರದರ್ಶನಗೊಳ್ಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.