ಅಗಸ್ತ್ಯ ಈಗ ದೋನಿಯ ದತ್ತು ಪುತ್ರ

ಮೈಸೂರು: ಶ್ರೀ ಜಯಚಾಮರಾಜೇಂದ್ರ ಪ್ರಾಣಿ ಸಂಗ್ರಹಾಲಯದಲ್ಲಿರುವ ಹುಲಿ `ಅಗಸ್ತ್ಯ~ನನ್ನು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ದತ್ತು ಪಡೆದಿದ್ದಾರೆ.
ಈ ಕುರಿತು ದೋನಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ದೃಢೀಕರಣ ನೀಡಿದ್ದು. ಮೃಗಾಲಯದ ಮುಖ್ಯ ನಿರ್ದೇಶಕ ಮತ್ತು ಅರಣ್ಯಾಧಿಕಾರಿ ಕೆ.ಬಿ. ಮಾರ್ಕಂಡೇಯ ಅವರಿಗೆ ಶ್ರೀನಾಥ್ ಇಮೇಲ್ ಸಂದೇಶ ಕಳಿಸಿದ್ದಾರೆ. ಹುಲಿಯನ್ನು ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಳ್ಳಲು, ದೋನಿ ಒಂದು ಲಕ್ಷ ರೂ ಚೆಕ್ ಕೂಡ ಕಳುಹಿಸಿದ್ದಾರೆ.
`ಹುಲಿ ನಮ್ಮ ರಾಷ್ಟ್ರಪ್ರಾಣಿ. ಹುಲಿ ಸಂತತಿ ಕ್ಷೀಣಿಸುತ್ತಿದ್ದು ಅವುಗಳಿಗೆ ರಕ್ಷಣೆ ಬೇಕಾಗಿದೆ. ಅದಕ್ಕಾಗಿಯೇ ಅಗಸ್ತ್ಯನನ್ನು ನಾನು ದತ್ತು ತೆಗೆದುಕೊಳ್ಳುತ್ತಿದ್ದೇನೆ. ಇದರಿಂದ ಪ್ರಾಣಿಗಳ ಬಗ್ಗೆ ಜನರಲ್ಲಿ ಹೆಚ್ಚು ಪ್ರೀತಿ ಮತ್ತು ಕಾಳಜಿ ಬೆಳೆಯಲಿ ಎನ್ನುವುದು ನನ್ನ ಅಭಿಲಾಷೆ. ಪ್ರಾಣಿ, ಪಕ್ಷಿಗಳಿಗೂ ಈ ನೆಲದ ಮೇಲೆ ಬದುಕುವ ಹಕ್ಕು ಇದೆ. ನಾವೂ (ಮನುಷ್ಯರು) ಬದುಕಿ, ಅವುಗಳಿಗೂ ಬದುಕುವ ಅವಕಾಶವನ್ನು ನಾವು ನೀಡಬೇಕು~ ಎಂದು ದೋನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
`ದೋನಿ ಹುಲಿಯನ್ನು ದತ್ತು ಪಡೆಯಲು ಜಾವಗಲ್ ಶ್ರೀನಾಥ್ ಕಾರಣ. ಅವರ ಪ್ರೇರಣೆಯಿಂದಾಗಿಯೇ ದೋನಿ ಅಗಸ್ತ್ಯನನ್ನು ದತ್ತು ಪಡೆದುಕೊಂಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಸಂದೇಶ ಸಿಕ್ಕಂತಾಗಿದೆ~ ಎಂದು ಮೃಗಾಲಯದ ಮುಖ್ಯ ನಿರ್ದೇಶಕ ಕೆ.ಬಿ. ಮಾರ್ಕಂಡೇಯ `ಪ್ರಜಾವಾಣಿ~ಗೆ ತಿಳಿಸಿದರು.
ಕೆಲವು ದಿನಗಳ ಹಿಂದಷ್ಟೇ ಭಾರತ ತಂಡದ ಎಡಗೈ ಬೌಲರ್ ಜಹೀರ್ ಖಾನ್ ಕೂಡ ಇಲ್ಲಿಯ ಹುಲಿಯನ್ನು ದತ್ತು ಪಡೆದಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.