ಮಂಗಳವಾರ, ಏಪ್ರಿಲ್ 20, 2021
32 °C

ಅಚ್ಚಾ ತೊ ಹಮ್ ಚಲ್ ತೇ ಹೈ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಚ್ಚಾ ತೊ ಹಮ್ ಚಲ್ ತೇ ಹೈ......ಎಂಬ ಹಾಡಿಗೆ ಹೆಜ್ಜೆ ಹಾಕಿದ ರಾಜೇಶ್ ಖನ್ನಾ ಫಿರ್ ಕಬ್ ಮಿಲೊಗೆ ಎನ್ನುವಷ್ಟರಲ್ಲಿ ಮತ್ತೆಂದು ಸಿಗದ ಊರಿಗೆ ಹೊರಟುಹೋಗಿದ್ದಾರೆ. ಆದರೆ ಅವರ ಗುನುಗುನಿಸುವ ಹಾಡಿನ ಮೂಲಕ ರಸಿಕರ ಹೃದಯಲ್ಲಿ ಎಂದಿಂದಿಗೂ ಚಿರಸ್ಥಾಯಿಯಾಗಿದ್ದಾರೆ.`ಮೇರಾ ಸಪನೋ ಕಿ ರಾಣಿ ಕಬ್ ಆಯಗಾ ತೋ~ ಎಂದು ಹೇಳಿ ಒಂದು ಕಾಲಘಟ್ಟದ ಇಡೀ ಜನಸಮುದಾಯದ ಪ್ರಣಯ ನಾಯಕನಾಗಿ ಕಂಗೊಳಿಸಿದ ನಟ ರಾಜೇಶ್ ಖನ್ನಾ ತಮ್ಮ 69ನೇ ವಯಸ್ಸಿಗೆ ಇಹಲೋಕದ ಯಾತ್ರೆ ಮುಗಿಸಿದ್ದು ಸದ್ಯದ ಹಿಂದಿ ಚಿತ್ರ ರಂಗ ಮಾತ್ರವಲ್ಲ ಇಡಿಯ ಭಾರತೀಯ ಚಲನಚಿತ್ರರಂಗಕ್ಕೆ ತುಂಬಲಾರದ ನಷ್ಟ.ತಮ್ಮದೇ ವಿಶಿಷ್ಟ ಆಂಗಿಕ ಅಭಿನಯ, ಸಂಭಾಷಣೆಗಳನ್ನು ಹೇಳುವ ವಿಶಿಷ್ಟಾದ್ಭುತ ಭಂಗಿ, ಮುಖದಲ್ಲಿ ಉಕ್ಕುವ ಭಾವನೆಗಳ ರಾಜೇಶ್ ಇದೀಗ ನೆನಪು ಮಾತ್ರ. ಈಗ ಉಳಿದಿರುವುದು ~ಅಚ್ಚಾ ತೋ ಹಮ್ ಚಲ್ ತೇ ಹೈ~ ಹಾಡು ಅಷ್ಟೇ.`ರೂಪ್ ತೇರಾ ಮಸ್ತಾನ~ ಎಂದು ಯುವಕರ ಪಾಲಿಗೆ ನಾಯಕನಾಗಿದ್ದ ರಾಜೇಶ್ ಜನಿಸಿದ್ದು 1942ರ ಡಿಸೆಂಬರ್ 29 ರಂದು. ಆದರೆ ಬೆಳೆದದ್ದು ಮಾತ್ರ ತಮ್ಮ ತಾಯಿ ತಂದೆಯರಿಗೆ ಹತ್ತಿರ ಸಂಬಂಧಿಕರ ಮನೆಯಲ್ಲಿ. ಕಾಲೇಜಿನ ದಿನಗಳಲ್ಲೆ ನಾಟಕಗಳಲ್ಲಿ ಅಭಿನಯಿಸುವುದರಲ್ಲಿ ಎತ್ತಿದ ಕೈ ಎನಿಸಿದ್ದ ಇವರು 1960ರಲ್ಲಿ ಆಯೋಜನೆಗೊಂಡ ಅಖಿಲ ಭಾರತ ಪ್ರತಿಭಾ ಸ್ಪರ್ಧೆಯಲ್ಲಿ 10 ಸಾವಿರ ಮಂದಿಯನ್ನು ಹಿಂದಿಕ್ಕಿ ಅಂತಿಮ 8 ರಲ್ಲಿ ಸ್ಥಾನ ಪಡೆದಿದ್ದರು. ಇದು ಅವರ ಸಿನಿಮಾ ಪ್ರವೇಶಕ್ಕೆ ಹೆಬ್ಬಾಗಿಲಾಯಿತು.ಮರುವರ್ಷವೇ ಅಂದರೆ 1961ರಲ್ಲಿ ರಾಜೇಶ್ ಖನ್ನಾ ಅವರು ಚೇತನ್ ಆನಂದ್ ನಿರ್ದೇಶನದ `ಆಕ್ರಿ ಕಥ್~ ಚಿತ್ರದ ಮೂಲಕ ಸಿನಿಮಾ ಜಗತ್ತನ್ನು ಪ್ರವೇಶಿಸಿದರು. ನಂತರ `ರಾಜ್~ ಬಹಾರೋಂಕೆ ಸಪ್ನೆ, ಔರತ್, ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು. ಒಟ್ಟಾರೆ ಅವರು ಅಭಿನಯಿಸಿದ ಚಿತ್ರಗಳ ಸಂಖ್ಯೆ 160.ಇವರು ನಟಿಸಿದ `ಆರಾಧನಾ~ ಚಿತ್ರವಂತೂ ಇಂದಿಗೂ ಹಸಿರಾಗಿದೆ. ಯುವಕರ ಮನಸಿನಲ್ಲಿ ಇಂದಿಗೂ ಪ್ರೀತಿಯ ಕಿಚ್ಚನ್ನಿಕ್ಕುವ ಹಾಡುಗಳ `ಆರಾಧನಾ~ ಚಿತ್ರ ಸಾರ್ವಕಾಲಿಕ ಹೆಗ್ಗಳಿಕೆಯನ್ನು ರಾಜೇಶ್ ಖನ್ನಾಗೆ ತಂದುಕೊಟ್ಟಿತು ಮಾತ್ರವಲ್ಲ ಭಾರತೀಯ ಸಿನಿಮಾ ಜಗತ್ತಿನಲ್ಲಿ ರಾಜೇಶ್ ಅವರನ್ನು ಧೃವತಾರೆಯ ಮಟ್ಟಕ್ಕೆ ಕೊಂಡೊಯ್ದಿತು.

ಇಲ್ಲಿನ ಮೇರಾ ಸಪನೋ ಕೆ ರಾಣಿ ಕಬ್ ಆಯೇಗಾ ತೊ, ರೂಪ್ ತೇರಾ ಮಸ್ತಾನ, ಎಂಬ ಸುಮಧುರ ಹಾಡುಗಳು ಇಂದಿಗೂ ಅನೇಕ ಮೊಬೈಲ್‌ಗಳಲ್ಲಿ ಹಾಸು ಹೊಕ್ಕಾಗಿದೆ.ಶರ್ಮಿಳಾ ಠ್ಯಾಗೋರ್, ಮುಮ್ತಾಜ್ ಅವರೊಂದಿಗೆ ಇವರ ಅಭಿನಯದ ಅಷ್ಟೂ ಸಿನಿಮಾಗಳು ಸೋಲುವ ಮಾತೆ ಆ ಕಾಲಕ್ಕೆ ಇರಲಿಲ್ಲ. 1969ರಿಂದ 1971ರವರೆಗೆ 15 ಏಕ ನಾಯಕ ಪ್ರಧಾನ ಚಿತ್ರಗಳಲ್ಲಿ ಮೆರೆದದ್ದು ರಾಜೇಶ್ ಖನ್ನಾ ಹೆಗ್ಗಳಿಕೆ.

 

ಕೇವಲ ನಟರಾಗಿ ಮಾತ್ರವಲ್ಲ ಗಾಯಕರಾಗಿ, ಚಿತ್ರನಿರ್ಮಾಪಕರಾಗಿಯೂ ಹೆಸರು ಗಳಿಸಿದ್ದ ರಾಜೇಶ್ ಮದುವೆಯಾದದ್ದು ಡಿಂಪಲ್ ಕಪಾಡಿಯಾ ಅವರನ್ನು. ಇವರಿಗೆ ಟ್ವಿಂಕಲ್ ಖನ್ನಾ ಹಾಗೂ ರಿಂಕಿ ಖನ್ನಾ ಎಂಬ ಇಬ್ಬರು ಹೆಣ್ಣುಮಕ್ಕಳು.1991-1996 ರವರೆಗೆ ನವದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಸಂಸತ್ ಸದಸ್ಯರಾಗಿಯೂ ರಾಜಕೀಯ ಕ್ಷೇತ್ರವನ್ನು ಇವರು ಪ್ರವೇಶಿಸಿದ್ದರು. ಇದೇ ಅವಧಿಯಲ್ಲಿ ತಂದೆ ಮಗ ಇಬ್ಬರೂ ಒಂದೇ ಹೆಣ್ಣನ್ನು ಪ್ರೀತಿಸುವ ವಿಶಿಷ್ಟ ಕಥಾನಕವುಳ್ಳ `ಕುದಾಯ್~ ಸಿನಿಮಾದಲ್ಲಿ ನಟಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.