ಸೋಮವಾರ, ಮೇ 16, 2022
28 °C

ಅಡಿಕೆ ಬೆಲೆ ಕುಸಿತ: ಬೆಳೆಗಾರರು ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಕೆ ಬೆಲೆ ಕುಸಿತ: ಬೆಳೆಗಾರರು ಕಂಗಾಲು

ಶಿವಮೊಗ್ಗ: ಅಡಿಕೆ ಬೆಲೆಯಲ್ಲಿ ದಿಢೀರ್ ಕುಸಿತ ಕಾಣಿಸಿಕೊಂಡಿದೆ. ಇದು ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ರೂ. 26,000 ಇದ್ದ ಕೆಂಪು ಅಡಿಕೆ ಬೆಲೆ  ರೂ.22,000ಕ್ಕೆ  ಕುಸಿದಿದೆ.   ರೂ. 16,500 ಇದ್ದ ಚಾಲಿ ಅಡಿಕೆ ಬೆಲೆ   ರೂ. 13,000 ಕ್ಕೆ ಇಳಿದಿದೆ.

ಗುಟ್ಕಾ ಪ್ಯಾಕಿಂಗ್‌ನಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಈಗ ಮತ್ತೊಮ್ಮೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಈ ಕೋಲಾಹಲ ಎದ್ದಿದೆ. ಪರಿಣಾಮ ಮೂರ್ನಾಲ್ಕು ದಿನಗಳಿಂದ ಅಡಿಕೆ ಖರೀದಿಗೆ ವ್ಯಾಪಾರಿಗಳು ಬರುತ್ತಿಲ್ಲ. ವರ್ತಕರು ಟೆಂಡರ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ; ಖಾಸಗಿ ವ್ಯಾಪಾರಿಗಳು ಭಯಭೀತರಾಗಿದ್ದಾರೆ.ಇದು ಸುಗ್ಗಿಯ ಕಾಲ. ಮಾರುಕಟ್ಟೆಗೆ ಅಡಿಕೆ ಹೆಚ್ಚಾಗಿ ಬರುವ ಸಂದರ್ಭ. ರೈತರು ಸಹಕಾರಿ ಸಂಸ್ಥೆಗಳಿಂದ ಪಡೆದ ಸಾಲ ತುಂಬಿ, ಹೊಸ ಸಾಲ ಪಡೆಯುವ ಸನ್ನಿವೇಶ. ಅದರೆ, ಈಗ ಮಾರುಕಟ್ಟೆಯಲ್ಲಿ ಆಗಿರುವ ಅನಾಹುತದಿಂದ ಬೆಳೆಗಾರರಿಗಷ್ಟೇ ಅಲ್ಲ, ಸಹಕಾರಿ ಸಂಘಗಳ ವಹಿವಾಟಿನ ಮೇಲೆ ದೊಡ್ಡ ಹೊಡೆತ ಬಿದ್ದಿದೆ.

ರಾಜ್ಯದಲ್ಲಿ 28 ಜಿಲ್ಲೆಗಳಲ್ಲಿ ಸುಮಾರು 5.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ವರ್ಷಕ್ಕೆ ರೂ. 20 ಸಾವಿರ ಕೋಟಿ ಮೌಲ್ಯದ 6.86 ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. 60 ಲಕ್ಷ ಕುಟುಂಬಗಳು ಅಡಿಕೆ ಉದ್ಯಮದಿಂದ ಜೀವನ ನಡೆಸುತ್ತಿವೆ. ಈ ಉದ್ಯಮದಲ್ಲಿ ರೂ. 2ಲಕ್ಷ ಕೋಟಿ ನೇರ ಮತ್ತು ಪರೋಕ್ಷವಾಗಿ ಬಂಡವಾಳ ಹೂಡಿಕೆಯಾಗುತ್ತಿದೆ. ಇಂತಹ ಬೃಹತ್ ಉದ್ಯಮ ಈಗ ಸಣ್ಣದಾಗಿ ಕಂಪಿಸುತ್ತಿದೆ. ಈ ವರ್ಷ ಮಳೆಗಾಲ ದೀರ್ಘವಾಗಿದ್ದರಿಂದ ಬಿಡುವು ಸಿಗದ ಕಾರಣ ಮಲೆನಾಡಿನಲ್ಲಿ ಈಗಲೂ ಅಡಿಕೆ ಕೊಯ್ಲು ಮತ್ತು ಸಂಸ್ಕರಣೆ ನಡೆಯುತ್ತಲೇ ಇದೆ. ಮಾರುಕಟ್ಟೆಗೆ ಬರಬೇಕಾದ ಅಡಿಕೆ ಇನ್ನೂ ಬಹಳಷ್ಟು ಇದೆ. ಈ ಸಂದರ್ಭದಲ್ಲೇ ದರ ಕುಸಿತ ಬೆಳೆಗಾರರನ್ನು ಕಂಗೆಡಿಸಿದೆ.

ಅಡಿಕೆ ಬೆಳೆ ತೆಗೆಯಲು ಬೆಳೆಗಾರ ಕನಿಷ್ಠ 10 ವರ್ಷ ಶ್ರಮ ವಹಿಸಬೇಕು. ಇತ್ತೀಚೆಗೆ ಕೂಲಿ ದರ ಜಾಸ್ತಿಯಾಗಿದೆ. ಅಡಿಕೆ ಸಂಸ್ಕರಣೆ ವೆಚ್ಚ ಕ್ವಿಂಟಲ್‌ಗೆ ರೂ. 3 ಸಾವಿರಕ್ಕೆ ಏರಿದೆ. ಹಾಗಾಗಿ, ಅಡಿಕೆ ಕೃಷಿ ಕೂಡ ಇಂದು ಲಾಭದಾಯಕವಾಗಿ ಉಳಿದಿಲ್ಲ. ಹೀಗಿರುವಾಗಲೇ ಅಡಿಕೆ ದರ ಕುಸಿತ ಬೆಳೆಗಾರರಿಗೆ ಬರಸಿಡಿಲಿನಂತೆ ಎರಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶ ಮಾಡಿ, ಸುಪ್ರೀಂಕೋರ್ಟಿಗೆ ಮಧ್ಯಂತರ ಅರ್ಜಿ ಹಾಕಬೇಕು. ತಕ್ಷಣಕ್ಕೆ ಎರಡೂ ಸರ್ಕಾರ ಸೇರಿ ಬೆಂಬಲ ಬೆಲೆ ಘೋಷಿಸಬೇಕು ಎಂಬ ಒತ್ತಾಯ ತೀರ್ಥಹಳ್ಳಿ ಅಡಿಕೆ ಬೆಳೆಗಾರರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಹಾಗೂ ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರದ್ದು.ಕೆಂಪು ಅಡಿಕೆಗೆ ರೂ. 14,800  ಚಾಲಿ ಅಡಿಕೆಗೆ ರೂ. 12,000 ಉತ್ಪಾದನಾ ವೆಚ್ಚ ನಿಗದಿಯಾಗಿದೆ. ಅದರಂತೆ, ಈ ನಿಗದಿತ ಬೆಲೆಗಿಂತ ಹೆಚ್ಚಿನ ದರವನ್ನು ಬೆಂಬಲ ಬೆಲೆಯಾಗಿ ಸರ್ಕಾರ ಘೋಷಿಸಬೇಕು. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಡಿಕೆ ಬೆಳೆಗಾರರ ನಿಯೋಗ ಫೆ.14ರಂದು ಬೆಳಿಗ್ಗೆ ಭೇಟಿ ಮಾಡಿ, ಮನವಿ ಸಲ್ಲಿಸಲಿದೆ.

ಪ್ರತಿ ವರ್ಷವೂ ಈ ಸುಗ್ಗಿ ಸಮಯದಲ್ಲಿ ಅಡಿಕೆ ಬೆಳೆಗಾರರ ಮೇಲೆ ಗದಾಪ್ರಹಾರ ಸಾಮಾನ್ಯವಾಗಿದೆ. ಗುಟ್ಕಾ ಗುಮ್ಮ ಹೆದರಿಸುತ್ತಿದೆ. ಅಡಿಕೆ ಪರ್ಯಾಯ ಬಳಕೆ ಬಗ್ಗೆ ಸಂಶೋಧನೆಗಳು ಚಾಲ್ತಿಯಲ್ಲಿವೆ. ಅಲ್ಲಿಯವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಅಡಿಕೆ ಬೆಳೆಗಾರರನ್ನು ಕಾಪಾಡಬೇಕು ಎನ್ನುತ್ತಾರೆ ‘ಮ್ಯಾಮ್‌ಕೋಸ್’ ಉಪಾಧ್ಯಕ್ಷ ನರಸಿಂಹನಾಯಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.