ಶನಿವಾರ, ಏಪ್ರಿಲ್ 17, 2021
31 °C

ಅಡುಗೆ ಅನಿಲ ಬವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ವಾರ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಾದ ಇಂಡಿಯನ್ ಆಯಿಲ್ (ಇಂಡೇನ್), ಭಾರತ್ ಪೆಟ್ರೋಲಿಯಂ (ಭಾರತ್) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂಗಳು (ಎಚ್‌ಪಿ) ಪಾರದರ್ಶಕ ನೀತಿಯಡಿ ವಿವಿಧ ಗ್ರಾಹಕರಿಗೆ ಸರಬರಾಜು ಮಾಡಿದ ಅಡುಗೆ ಅನಿಲ ಸಿಲಿಂಡರ್‌ಗಳ (ಎಲ್‌ಪಿಜಿ) ಸಂಖ್ಯೆಯನ್ನು ತಮ್ಮ ಪೋರ್ಟ್‌ಲ್‌ಗಳಲ್ಲಿ ಪ್ರಕಟಿಸಿದಾಗ ಗಾಬರಿ ಹುಟ್ಟಿಸುವ ಸಂಗತಿಗಳು ಬಯಲಿಗೆ ಬಂದವು.

ಕೆಲ ಕೇಂದ್ರ ಸಚಿವರು, ಸಂಸದರ ಮನೆಗೆ ವರ್ಷಕ್ಕೆ 200, 300, 350 ಸಿಲಿಂಡರ್‌ಗಳು ಸರಬರಾಜಾಗಿವೆ ಎಂಬ ಸಂಗತಿ ಬೆಳಕಿಗೆ ಬಂತು.ಆದರೆ, ಈ ವಿವರ ಪ್ರಕಟವಾದ ಮೇಲೆ ಆ ಸಚಿವರಾಗಲಿ, ಸಂಸದರಾಗಲಿ ಕನಿಷ್ಠ ವಿವರಣೆ ಕೊಡುವ ಗೋಜಿಗೂ ಹೋಗಲಿಲ್ಲ. ಸಬ್ಸಿಡಿ ದರಲ್ಲಿ ಪೂರೈಕೆಯಾಗುವ ಅಡುಗೆ ಅನಿಲ ಸಿಲಿಂಡರ್‌ಗಳು ದುರುಪಯೋಗವಾಗುವ ಕುರಿತು ಪೆಟ್ರೋಲಿಯಂ ಸಚಿವರು, ಸಚಿವಾಲಯದ ಅಧಿಕಾರಿಗಳೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.ಕೇಂದ್ರ, ರಾಜ್ಯ ಸರ್ಕಾರಗಳ ಸಚಿವರು, ಸಂಸದರು, ಶಾಸಕರು, ಪ್ರಭಾವಿ ಉದ್ಯಮಿಗಳು ತಮ್ಮ ಕೋಟಾ ಮುಗಿದಿದ್ದರೂ ಯಾವುದೇ ಕಷ್ಟವಿಲ್ಲದೇ ಸುಲಭವಾಗಿ ಸಿಲಿಂಡರ್ ಪಡೆಯುವುದು, ಸಾಮಾನ್ಯ ಗ್ರಾಹಕರು ಸಿಲಿಂಡರ್ ಪಡೆಯಲು ಹದಿನೈದು ದಿನ, ತಿಂಗಳು ಕಾಯುವುದು ಹೊಸದೇನಲ್ಲ.2000ರಲ್ಲಿ ಜಾರಿಗೆ ತರಲಾದ ಅಡುಗೆ ಅನಿಲ ಕಾಯ್ದೆಯಲ್ಲಿ ಒಂದು ಸಿಲಿಂಡರ್ ಪಡೆದು 21 ದಿನಗಳಾಗದೇ ಮತ್ತೊಂದು ಸಿಲಿಂಡರ್ ಪಡೆಯುವಂತಿಲ್ಲ ಎಂಬ ಸ್ಪಷ್ಟ ನಿರ್ದೇಶನ ಇದ್ದರೂ ಈ ಕಾಯ್ದೆಯನ್ನು ರಾಜಾರೋಷವಾಗಿ ಉಲ್ಲಂಘಿಸುವ ಉದಾಹರಣೆಗಳು ಕಣ್ಣಮಂದೆಯೇ ಇವೆ.ವಿಳಂಬಕ್ಕೆ ಕಾರಣ

ಸಾಮಾನ್ಯ ಗ್ರಾಹಕರಿಗೆ ಸಿಲಿಂಡರ್ ವಿತರಣೆ ವಿಳಂಬವಾಗುತ್ತಿರುವುದಕ್ಕೆ ಹಲವು ಕಾರಣಗಳಿವೆ. ತೈಲ ಟ್ಯಾಂಕರ್‌ಗಳ ಮಾಲೀಕರ ಮುಷ್ಕರದಿಂದಾಗಿ ಜನವರಿ ತಿಂಗಳಿನಿಂದಲೂ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಎಲ್‌ಪಿಜಿ ವಿತರಣೆ ವಿಳಂಬವಾಗುತ್ತ ಬಂದಿದೆ.ಅಡುಗೆ ಅನಿಲ ವಿತರಕರು ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಅನ್ನು ಹೋಟೆಲ್ ಮತ್ತಿತರ ವಾಣಿಜ್ಯ ಬಳಕೆಯ ಉದ್ದೇಶಕ್ಕೆ ಕದ್ದುಮುಚ್ಚಿ ನೀಡುವುದು, ಒಂದೇ ಕುಟುಂಬದವರು ಎರಡು, ಮೂರು ಸಂಪರ್ಕ ಪಡೆದು ಸಬ್ಸಿಡಿ ದರದಲ್ಲಿ ಸಿಗುವ ಸಿಲಿಂಡರ್ ದುರ್ಬಳಕೆ ಮಾಡಿಕೊಳ್ಳುವುದು, ಕಾರು ಮತ್ತಿತರ ವಾಹನಗಳಿಗೆ ಆಟೊ ಎಲ್‌ಪಿಜಿ ಬಳಸಬೇಕು ಎಂಬ ನಿಯಮ ಇದ್ದರೂ ಅಡುಗೆ ಅನಿಲದ ಸಿಲಿಂಡರ್ ಬಳಸಿಕೊಳ್ಳುವುದು ಇತ್ಯಾದಿಗಳಿಂದಾಗಿ ಸಾಮಾನ್ಯ ಗ್ರಾಹಕರು ಬವಣೆ ಅನುಭವಿಸುವಂತಾಗಿದೆ.ದುರ್ಬಳಕೆಗೆ ಕಾರಣ

ಕರ್ನಾಟಕ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲೂ ಅಕ್ರಮ ಎಲ್‌ಪಿಜಿ ಸಂಪರ್ಕ ಪತ್ತೆಹಚ್ಚುವ ವಿಧಾನ ಜಾರಿಗೆ ಬಂದಿಲ್ಲ. ಒಂದು ಕುಟುಂಬಕ್ಕೆ ಒಂದೇ ಸಂಪರ್ಕ ನೀಡಬೇಕೆಂಬ ನಿಯಮವೂ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ.ಗೃಹ ಬಳಕೆ ಅನಿಲದ ಸಿಲಿಂಡರ್‌ಗಳನ್ನು ತೈಲ ಕಂಪೆನಿಗಳು ಗ್ಯಾಸ್ ಏಜೆನ್ಸಿ (ಫ್ರಾಂಚೈಸಿ) ಮೂಲಕ ಪೂರೈಸುತ್ತಿದ್ದರೂ, ಅಕ್ರಮ ಎಲ್‌ಪಿಜಿ ಸಂಪರ್ಕ, ವಿತರಣೆಯಲ್ಲಿನ ಅವ್ಯವಸ್ಥೆ ಪತ್ತೆ ಹಚ್ಚುವ, ಸರಿಪಡಿಸುವ ಹೊಣೆ ಆಯಾ ರಾಜ್ಯಗಳ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸಂಬಂಧಿಸಿದೆ.ಈ ಅಕ್ರಮಕ್ಕೆ ತಡೆಹಾಕುವ ಉದ್ದೇಶದಿಂದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಕಳೆದ ವರ್ಷ ಎಲ್‌ಪಿಜಿ ಸಂಪರ್ಕ ಅಧಿಕೃತವಾಗಬೇಕಿದ್ದಲ್ಲಿ ವಿದ್ಯುತ್ ಬಿಲ್‌ನ `ಆರ್‌ಆರ್~ ನಂಬರ್ ಹಾಜರುಪಡಿಸುವಂತೆ ಆದೇಶಿಸಿದರು.ಒಂದೇ ಕುಟುಂಬದ ಸದಸ್ಯರು 3-4 ಸಂಪರ್ಕ ಪಡೆದಿದ್ದಲ್ಲಿ ಅದನ್ನು ಪತ್ತೆಹಚ್ಚುವ ಉದ್ದೇಶದಿಂದ ಈ ನಿಯಮಾವಳಿ ಜಾರಿಗೊಳಿಸಲಾಯಿತು. ರಾಜ್ಯದ ಎಲ್ಲ ಐದು ವಿದ್ಯುತ್ ಕಂಪೆನಿಗಳಿಂದ ಗ್ರಾಹಕರ `ಆರ್‌ಆರ್~ ನಂಬರ್ ಪಡೆದು ಹೋಲಿಕೆ ಮಾಡಲಾಯಿತು. ಆರಂಭದಲ್ಲಿ ಹಲವು ಗೊಂದಲ ಕಾಡಿದ್ದರೂ ಈಗ ರಾಜ್ಯದಲ್ಲಿ ಎಲ್‌ಪಿಜಿ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದೆ.ಬೆಂಗಳೂರು ನಗರದಲ್ಲಿ ಸಿಲಿಂಡರ್ ಖಾಲಿಯಾದಾಗ ನೋಂದಣಿ ಮಾಡಿಕೊಳ್ಳಲು ಸ್ವಯಂಚಾಲಿತ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ.ಕರ್ನಾಟಕದಲ್ಲಿ ಯಶಸ್ಸು ಕಂಡ ಈ ಮಾದರಿಯನ್ನು ಇಡೀ ದೇಶಕ್ಕೆ ಅಳವಡಿಸುವಂತೆ ಸಚಿವೆ ಶೋಭಾ ಕರಂದ್ಲಾಜೆ ಪೆಟ್ರೋಲಿಯಂ ಸಚಿವಾಲಯಕ್ಕೆ ಮೂರು ಸಲ ಪತ್ರ ಬರೆದಿದ್ದಾರೆ. ಆದರೆ, ಕೇಂದ್ರ ಸರ್ಕಾರದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿ ಹೇಳುತ್ತಾರೆ.ಪ್ರಭಾವಿಗಳು, ಸಚಿವರು, ಸಂಸದರ ಮನೆಗೆ ಪ್ರಮಾಣ ಮೀರಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಾಗುವಲ್ಲಿ ಅವರ ಆಪ್ತ ಸಹಾಯಕರು, ಅಧಿಕಾರಿಗಳ ಪಾತ್ರವೂ ಇರುತ್ತದೆ. ಗ್ಯಾಸ್ ವಿತರಕರಿಗೆ ಫೋನ್ ಮಾಡಿ ಸಚಿವರ ಮನೆಗೆ ಸಿಲಿಂಡರ್ ಬೇಕು ಎಂದು ದಬಾಯಿಸುವುದರಿಂದ ಅನಿವಾರ್ಯವಾಗಿ ಸಿಲಿಂಡರ್ ಪೂರೈಕೆ ಮಾಡಬೇಕಾಗುತ್ತದೆ ಎಂದೂ ಈ ಅಧಿಕಾರಿ ಅಭಿಪ್ರಾಯ ಪಡುತ್ತಾರೆ.ರಾಜ್ಯದ ಮಾದರಿ ಅನುಸರಿಸಿ ಒಂದು ವಿದ್ಯುತ್ ಮೀಟರ್‌ಗೆ ಒಂದೇ ಎಲ್‌ಪಿಜಿ ಸಂಪರ್ಕ ಎಂಬ ನಿಯಮವನ್ನು ದೇಶದೆಲ್ಲೆಡೆ ಕಟ್ಟುನಿಟ್ಟಾಗಿ ಜಾರಿಗೆ ತಂದಾಗ ಸಾಮಾನ್ಯ ಗ್ರಾಹಕರ ಬವಣೆ ತಪ್ಪೀತು. ಪ್ರಭಾವಿ ವ್ಯಕ್ತಿಗಳಿಗೂ ಈ ನಿಯಮದಲ್ಲಿ ವಿನಾಯತಿ ನೀಡದಿದ್ದರೆ ಅಷ್ಟಾದರೂ ಸಬ್ಸಿಡಿ ದುರ್ಬಳಕೆ ನಿಲ್ಲಬಹುದು.ಬಡವರು, ಬಲ್ಲಿದರು ಎಂಬ ಭೇದವಿಲ್ಲದೇ ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ದರದಲ್ಲಿ ಪೂರೈಸುವ ಬದಲು, ಗ್ರಾಹಕರ ಆರ್ಥಿಕ ಪರಿಸ್ಥಿತಿ ಆಧರಿಸಿ ಸಬ್ಸಿಡಿ ನೀಡಿದಲ್ಲಿ ತೈಲ ಕಂಪೆನಿಗಳಿಗೆ ಆಗುವ ನಷ್ಟವೂ ಕಡಿಮೆಯಾದೀತು. ಬೇಕಾಬಿಟ್ಟಿ ಸಿಲಿಂಡರ್ ಬಳಕೆಯೂ ತಗ್ಗೀತು.ಬುಕ್ಕಿಂಗ್ ಸ್ಥಿತಿ ಗತಿ ಬಗ್ಗೆ ಈ ಜಾಲ ತಾಣಗಳಲ್ಲಿ ಮಾಹಿತಿ ಪಡೆಯಬಹುದು.

www.petroleum.nic.in

www.indane.co.in

www.ebharatgas.com

www.hindustanpetroleum.com

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.