ಶನಿವಾರ, ಏಪ್ರಿಲ್ 17, 2021
27 °C

ಅಣ್ಣಾಗೆ ಸಿ.ಎಂ ಬೆಂಬಲ: ಲೇವಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಆಮರಣಾಂತ ಉಪವಾಸ ಹಮ್ಮಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಬಲ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶನಿವಾರ ಇಲ್ಲಿ ವ್ಯಂಗ್ಯವಾಡಿದರು.ಸ್ವತಃ ಯಡಿಯೂರಪ್ಪ ಅವರೇ ಭ್ರಷ್ಟಾಚಾರ, ಹಗರಣಗಳಲ್ಲಿ ಸಿಲುಕಿದ್ದಾರೆ. ಇಷ್ಟಾದರೂ ಯಡಿಯೂರಪ್ಪ ಅವರು ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಪಾಲ ಮಸೂದೆ ಜಾರಿಗೆ ತರಬೇಕು.  ಈ ಸಂಬಂಧ ಚರ್ಚಿಸಲು ಮುಖ್ಯಮಂತ್ರಿಗಳ ಸಭೆ ಕರೆಯಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ. ಜಂಟಿ ಕ್ರಿಯಾ ಸಮಿತಿಯ ಸದಸ್ಯರನ್ನಾಗಿ ಯಡಿಯೂರಪ್ಪ ಅವರನ್ನೇ ನೇಮಕ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಲೇವಡಿ ಮಾಡಿದರು.ಯಡಿಯೂರಪ್ಪ ಸಮಿತಿಯ ಸದಸ್ಯರಾದರೆ ಭ್ರಷ್ಟಾಚಾರದ ಬಗ್ಗೆ ಸೂಕ್ತ ಸಲಹೆ ಕೊಡುತ್ತಾರೆ. ಆದ್ದರಿಂದ ಕೇಂದ್ರ ಸರ್ಕಾರ ರಚಿಸಿರುವ ಸಮಿತಿಗೆ ಅವರನ್ನು ಸೇರ್ಪಡೆ ಮಾಡಬೇಕು.

ಸಮಿತಿಯಲ್ಲಿ ಅವರು ಇರದಿದ್ದರೆ ರಾಜ್ಯಕ್ಕೆ ಅಗೌರವ ಎಂದು ಚುಚ್ಚಿದರು.ಕುಮಾರಸ್ವಾಮಿ ಬದಲು ಬೇರೆ ಯಾರಾದರೂ ಮುಖ್ಯಮಂತ್ರಿಗಳ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರೆ ಈ ವೇಳೆಗೆ ಯಡಿಯೂರಪ್ಪ ಅಧಿಕಾರ ಕಳೆದು ಕೊಳ್ಳುತ್ತಿದ್ದರು.

ಕುಮಾರಸ್ವಾಮಿ ಹೋರಾಟವನ್ನು ರಾಜಕೀಯ ಪ್ರೇರಿತವಾಗಿ ನೋಡಲಾಗುತ್ತಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.ಆದ್ದರಿಂದ ಯಡಿಯೂರಪ್ಪನವರ ಹಗರಣಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅಣ್ಣಾ ಹಜಾರೆಗೆ ಬೆಂಬಲ ನೀಡಿದ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿಗೆ ನೀಡುತ್ತೇನೆ. ಅವರೇ ರಾಜ್ಯದಲ್ಲಿನ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಲಿ ಎಂಬುದಾಗಿ ಅವರು ಹೇಳಿದರು.‘4-5 ತಿಂಗಳಿಂದ ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡಿದರೂ, ನನ್ನ ಕೈಯಲ್ಲಿ ಸರ್ಕಾರವನ್ನು ಪದಚ್ಯುತಿಗೊಳಿಸಲು ಆಗಲಿಲ್ಲ. ಯಾವ ಸಂಘಟನೆಗಳೂ ಬೆಂಬಲ ನೀಡಲಿಲ್ಲ. ಈಗ ಹೇಗಿದ್ದರೂ ಹಜಾರೆ ಹೋರಾಟವನ್ನು ಬೆಂಬಲಿಸಿ ಬೀದಿಗೆ ಬಂದಿದ್ದಾರೆ. ನನ್ನ ಬಳಿ ಇರುವ ದಾಖಲೆಗಳನ್ನು ನೀಡುತ್ತೇನೆ. ಹೋರಾಟವನ್ನು ಮುಂದುವರಿಸುತ್ತಾರಾ?’ ಎಂದು ಅವರು ಪ್ರಶ್ನಿಸಿದರು.ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ವಕೀಲರು ನಿರಾಸಕ್ತಿ ತೋರಿದರು. ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಹಿಂಜರಿದರು. ಈಗಲಾದರೂ ಬೀದಿಗೆ ಬಂದಿದ್ದಾರೆ. ಹಜಾರೆ ಅವರನ್ನು ಬೆಂಬಲಿಸಿ ಹೋರಾಟದಲ್ಲಿ ಭಾಗಿಯಾದವರನ್ನು ಅಭಿನಂದಿಸುತ್ತೇನೆ ಎಂಬುದಾಗಿ ಹೇಳಿದರು. ಉಪ ಚುನಾವಣೆಯಲ್ಲಿ ಭ್ರಷ್ಟಾಚಾರ, ಹೋರಾಟ ಪ್ರಮುಖ ವಿಷಯವಾಗುವುದಿಲ್ಲ. ಹಣವೇ ಪ್ರಮುಖ ಪಾತ್ರ ವಹಿಸಿದೆ.

ಆದರೂ ಜೆಡಿಎಸ್ ಎರಡು ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.