ಸೋಮವಾರ, ಮೇ 10, 2021
26 °C

ಅಣ್ಣಾ ಹಜಾರೆ- ರಾಮ್‌ದೇವ್:ಸಮಾನ ಉದ್ದೇಶ: ಹೋರಾಟ ಹಾದಿ ಭಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಯೋಗ ಗುರು ರಾಮ್‌ದೇವ್ ಜತೆ ಮೈತ್ರಿ ಹಾಗೂ ಮುಫ್ತಿ ಶಮೀಮ್ ಕಜ್ಮಿ ಉಚ್ಚಾಟನೆ ಹಿನ್ನೆಲೆಯಲ್ಲಿ ಅಣ್ಣಾ ತಂಡದಲ್ಲಿ ಬಿರುಕು ಕಾಣಿಸಿಕೊಂಡಿದ್ದರೂ, ಹಿರಿಯ ಸಾಮಾಜಿಕ ಕಾರ್ಯಕರ್ತ ಹಜಾರೆ ತಮ್ಮ ತಂಡದಲ್ಲಿ ಒಡಕಿಲ್ಲ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಬಾಬಾ ಜತೆ ವೇದಿಕೆ ಹಂಚಿಕೊಳ್ಳುವುದಾಗಿ ಪ್ರತಿಪಾದಿಸಿದ್ದಾರೆ. ಆದರೆ, ಅವರ ಜತೆಗೂಡಿ ಪ್ರವಾಸ ಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.ಭಾನುವಾರ ನಡೆದ ತಂಡದ ಸಭೆಯ ಕಲಾಪಗಳನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಕಜ್ಮಿ ಅವರನ್ನು ಉಚ್ಚಾಟಿಸಿದ ವಿಷಯದಲ್ಲಾಗಲೀ ಅಥವಾ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಯೋಗ ಗುರು ಜತೆಗೂಡಿದ ವಿಷಯದಲ್ಲಾಗಲೀ ತಮ್ಮ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳಿಲ್ಲ ಎಂದು ಹಜಾರೆ ಸೋಮವಾರ ಪತ್ರಕರ್ತರಿಗೆ ತಿಳಿಸಿದರು.`ಸದ್ಯ ಒಂದು ತಿಂಗಳು ನಾನು ಮಹಾರಾಷ್ಟ್ರದಲ್ಲಿ ಪ್ರವಾಸ ಮಾಡುತ್ತೇನೆ. ರಾಮ್‌ದೇವ್ ಪ್ರತ್ಯೇಕವಾಗಿ ಪ್ರವಾಸ ಮಾಡುತ್ತಾರೆ.  ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಜನ ಲೋಕಪಾಲದ ಪರವಾದ ಚಳವಳಿಗೆ ಅವರ ಬೆಂಬಲವಿದೆ. ದೇಶ ಸುತ್ತುವ ಕೆಲಸ ಪ್ರತ್ಯೇಕವಾಗಿ ನಡೆಯಲಿದೆ. ಅಕಸ್ಮಾತ್ ಎಲ್ಲಾದರೂ ಭೇಟಿಯಾದರೆ ವೇದಿಕೆ ಹಂಚಿಕೊಳ್ಳುತ್ತೇವೆ~ ಎಂದು ಹಿರಿಯ ಗಾಂಧಿವಾದಿ ವಿವರಿಸಿದರು.`ನಾವು ಸಮಾನ ಉದ್ದೇಶಕ್ಕಾಗಿ ಹೋರಾಡುತ್ತಿದ್ದೇವೆ. ಕಪ್ಪು ಹಣ ದೇಶಕ್ಕೆ ಮರಳಿ ತರುವ ಸಂಕಲ್ಪವನ್ನು ಬಾಬಾ ಮಾಡಿದ್ದಾರೆ. ಲೋಕಪಾಲ ಹಾಗೂ ಲೋಕಾಯುಕ್ತ ಮಸೂದೆಗಾಗಿ ನಮ್ಮ  ಚಳವಳಿ ನಡೆಯುತ್ತಿದೆ. ಸಮಾನ ಉದ್ದೇಶಕ್ಕಾಗಿ ಒಟ್ಟಿಗೆ ನಿಲ್ಲುವ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಕಜ್ಮಿ ಉಚ್ಚಾಟನೆಯಿಂದ ಯಾವುದೇ ಪರಿಣಾಮ ಆಗುವುದಿಲ್ಲ~ ಎಂದು ಅಣ್ಣಾ ಖಚಿತಪಡಿಸಿದರು.ಭಾನುವಾರ ಅಣ್ಣಾ ತಂಡದ ಸಭೆಯಲ್ಲಿ ಭ್ರಷ್ಟಾಚಾರದ ವಿರುದ್ಧ ರಾಮ್‌ದೇವ್ ಜತೆ ಜಂಟಿ ಪ್ರಚಾರ ನಡೆಸಬಾರದು. ಆದರೆ, ಉಭಯ ಬಣಗಳು ಈ ವಿಷಯದಲ್ಲಿ ಪರಸ್ಪರರಿಗೆ ಬೆಂಬಲ ಕೊಡಬಹುದೆಂಬ ನಿಲುವು ವ್ಯಕ್ತವಾಯಿತು.`ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದ್ದೇವೆ. ಇದಕ್ಕೆ ರಾಮ್‌ದೇವ್ ಬೆಂಬಲವಿದೆ. ಆದರೆ, ಅವರ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಅಣ್ಣಾ ತಂಡದ ಹಿರಿಯ ಸದಸ್ಯ ಪ್ರಶಾಂತ್ ಭೂಷಣ್ ನುಡಿದರು.`ಅಣ್ಣಾ ಮತ್ತು ರಾಮ್‌ದೇವ್ ಸಮಾನ ಉದ್ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಒಳ್ಳೆಯ ಉದ್ದೇಶಕ್ಕಾಗಿ ನಾಗರಿಕ ಸಮಾಜ ಒಗ್ಗೂಡುವುದರಲ್ಲಿ ತಪ್ಪಿಲ್ಲ. ಭ್ರಷ್ಟರು ಒಂದಾಗುವಾಗ, ಇದರ ವಿರುದ್ಧ ದನಿ ಎತ್ತುವವರು ಏಕೆ ಒಟ್ಟಾಗಬಾರದು~ ಎಂದು ಮತ್ತೊಬ್ಬ ಸದಸ್ಯೆ ಕಿರಣ್ ಬೇಡಿ ಕೇಳಿದರು.`ನಮ್ಮಲ್ಲಿ ಒಡಕಿಲ್ಲ. ನೀವು ಯಾವ ಒಡಕಿನ ಬಗ್ಗೆ ಮಾತನಾಡುತ್ತಿದ್ದೀರಿ?~ ಎಂದು ಅಣ್ಣಾ ಪತ್ರಕರ್ತರನ್ನು ಪ್ರಶ್ನಿಸಿದರು. ಭಾನುವಾರದ ಸಭೆಯ ಕಲಾಪಗಳನ್ನು ಸದಸ್ಯರೊಬ್ಬರು ರೆಕಾರ್ಡ್ ಮಾಡಿ ಬಹಿರಂಗ ಮಾಡುತ್ತಿದ್ದರು. ಇದನ್ನು ತಂಡದ ಉಳಿದವರು ಪ್ರಶ್ನಿಸಿದಾಗ ಸಮಸ್ಯೆ ಉಂಟಾಯಿತು. ಆ ಸದಸ್ಯರು ಸಭೆಯಿಂದ ಹೊರ ನಡೆದರು, ಮತ್ತೆ ಹಿಂತಿರುಗುವುದಿಲ್ಲ ಎಂದು ಖಚಿತಪಡಿಸಿದರು. ಹೊರ ಹೋಗುವಾಗ ಅಣ್ಣಾ ತಂಡ ಮುಸ್ಲಿಂ ವಿರೋಧಿ ಎಂಬ ಆರೋಪ ಮಾಡಿದರು~ ಎಂದು ಹಜಾರೆ ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.