ಸೋಮವಾರ, ಜನವರಿ 20, 2020
27 °C
ಸೂರತ್‌ ಪೊಲೀಸ್‌ ಆಯುಕ್ತ ಹೇಳಿಕೆ

ಅತ್ಯಾಚಾರ ಒಪ್ಪಿಕೊಂಡ ಅಸಾರಾಮ್‌ ಪುತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂರತ್‌ (ಪಿಟಿಐ): ವಿವಾದಾತ್ಮಕ ಸ್ವ­ಘೋಷಿತ ದೇವಮಾನವ ಅಸಾ­ರಾಮ್‌ ಬಾಪು ಪುತ್ರ ನಾರಾಯಣ್‌ ಸಾಯಿ ಮಹಿಳೆಯೊಬ್ಬರು ಮಾಡಿ­ರುವ ಅತ್ಯಾಚಾರ ಆರೋಪವನ್ನು ಹೆಚ್ಚು ಕಡಿಮೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.‘ನಮ್ಮ ತೀವ್ರ ವಿಚಾರಣೆ ಸಂದರ್ಭದಲ್ಲಿ, ಸೂರತ್‌ ಮೂಲದ ಇಬ್ಬರು ಸಹೋದರಿಯರಲ್ಲಿ ಒಬ್ಬರು ಮಾಡಿರುವ ಅತ್ಯಾಚಾರ ಆರೋಪ­ವನ್ನು ಸಾಯಿ ಬಹುತೇಕ ಒಪ್ಪಿಕೊಂ­ಡಿ­ದ್ದಾನೆ’ ಎಂದು ಸೂರತ್‌ ಪೊಲೀಸ್‌ ಆಯುಕ್ತರಾದ ರಾಕೇಶ್‌ ಅಸ್ಥಾನಾ ಅವರು ಹೇಳಿ­ದ್ದಾರೆ.ಎಂಟು ಮಂದಿ ಶಿಷ್ಯೆ­ಯರ ಜತೆಯೂ ದೈಹಿಕ ಸಂಪರ್ಕ ಹೊಂದಿ­ರುವುದಾಗಿ ವಿಚಾರಣೆಯಲ್ಲಿ ಸಾಯಿ ತಿಳಿಸಿದ್ದಾನೆ. ಒಬ್ಬ ಶಿಷ್ಯೆಯಲ್ಲಿ ಈತನಿಗೆ ಒಂದು ಮಗು ಜನಿಸಿದೆ ಎಂಬುದೂ ಈಗ ಬಹಿರಂಗವಾಗಿದೆ. ದೂರುದಾರರ ಸಮ್ಮುಖ­ದಲ್ಲಿ­ ಸಾಯಿಯನ್ನು ತೀವ್ರ ವಿಚಾರ­ಣೆಗೆ ಒಳಪಡಿಸಲಾಗಿತ್ತು.58 ದಿನಗಳ ಬಂಧನದಿಂದ ಹೇಗೆ ಆತ ತಪ್ಪಿಸಿಕೊಂಡ ಮತ್ತು ತಲೆಮರೆಸಿ­ಕೊಳ್ಳಲು ಯಾರು ನೆರವು ನೀಡಿದರು ಎಂಬ ಬಗ್ಗೆಯೂ ಸಾಯಿಯನ್ನು ಪ್ರಶ್ನಿಸಲಾಗಿದೆ.ಸೂರತ್‌ ಮೂಲದ ಇಬ್ಬರು ಸಹೋದರಿಯರು ಸಾಯಿ ಮತ್ತು ಆತನ ತಂದೆ ಅಸಾರಾಮ್‌ ವಿರುದ್ಧ ಅತ್ಯಾಚಾರ, ಲೈಂಗಿಕ ಹಲ್ಲೆ, ಕೂಡಿ ಹಾಕುವಿಕೆ ಮುಂತಾದ ಆರೋಪ­ಗಳನ್ನು ಮಾಡಿದ್ದಾರೆ.ಅಸಾರಾಮ್‌ ಬಾಪು ಜೋಧ್‌ಪುರದ  ತನ್ನ ಆಶ್ರಮದಲ್ಲಿ ಅಪ್ರಾಪ್ತ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸೆಪ್ಟೆಂಬರ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದು ಪ್ರಸ್ತುತ ಜೋಧ್‌ಪುರ ಜೈಲಿನಲ್ಲಿದ್ದಾನೆ.

ಪ್ರತಿಕ್ರಿಯಿಸಿ (+)