ಶುಕ್ರವಾರ, ಮೇ 20, 2022
21 °C

ಅದಕ್ಕೂ ಮುನ್ನ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಲ್ಲುಶಿಕ್ಷೆಯ ನೇಣು

ಕಣ್ಣೆದುರು ತೂಗುತ್ತಿರುವಾಗಲೂ

ಮನಬಿಚ್ಚಿ ಅಳಲಾರದ

ಈ ಅಜ್ಮಲ್ ಕಸಬ್ ಎಂಬ

ಚಂಚಲ ಉಡಾಫೆ ಕಣ್ಣುಗಳ

ಬೇಜವಾಬ್ದಾರಿ ಹುಡುಗ

ಸತ್ತ ಮೇಲಿನ ಸ್ವರ್ಗದಾಸೆಗೆ

ಸೊಂಟಕ್ಕೆ ಬಾಂಬು ಕಟ್ಟಿಕೊಂಡ

ನಂಬರ್ ವನ್ ಭಯೋತ್ಪಾದಕ...

ಅದಕ್ಕೂ ಮುನ್ನ

ಲಕ್ಷಗಳ ಕನವರಿಕೆಯಲ್ಲಿ

ಅಮ್ಮಿಗೂ ತನ್ನ ಜೊತೆ

ಸ್ವರ್ಗದಲ್ಲೊಂದು ಸೀಟು ಕಾದಿರಿಸಿ

ಧರ್ಮಾರ್ಥ ಚಿಂತಿಸುತ್ತಿದ್ದ

ಭಾವೀ ಭಯೋತ್ಪಾದಕ...

ಅದಕ್ಕೂ ಮುನ್ನ

ಯಾರದೋ ದ್ವೇಷದ ಬೆಂಕಿಗೆ

ಮತ್ಯಾರದೋ ಕೈಕಾಲು ಮುರಿದು

ಹಲವು ಸಾವಿರ ಗಳಿಸಿದ್ದ

ಕ್ರಿಮಿನಲ್...

ಅದಕ್ಕೂ ಮುನ್ನ

ಪುಡಿಕಾಸಿಗೆ ಅವರಿವರ ಪರ್ಸು ಎಗರಿಸಿ

ಸ್ಲೇಟು ಹಿಡಿದು ಪಟ ತೆಗೆಸಿಕೊಂಡ

ಆರ್ಡಿನರಿ ಕಿಸೆಗಳ್ಳ...

ಅದಕ್ಕೂ ಮುನ್ನ

ಕಾಸಿಲ್ಲದೇ ಕೆಲಸವಿಲ್ಲದೇ

ಗುರಿಯಿಲ್ಲದೇ ನೆಲೆಯಿಲ್ಲದೇ

ಬರಿಗೈಲಿ ಅಂಡಲೆದ

ಹಸಿದ

ಪುಂಡಪೋಕರಿ...

ಅದಕ್ಕೂ ಮುನ್ನ

ಮದರಸಾದ ಮೂಲೆಯಲಿ

ನೆಲಕಚ್ಚಿ ಕುಳಿತು

ಅಲಿಫ್ ಬೆ ಪೆ ತಿದ್ದಿದ

ಎಳೆಯ ಪೋರ...

ಅದಕ್ಕೂ ಮುನ್ನ

ಅಮ್ಮಿಯ ದುಪಟ್ಟಾದ ಮರೆಯಲ್ಲವಿತು

ಬಿಸಿಲ ಕೋಲಿನ ಜಾಡ ಹಿಡಿದು

ಆಕಾಶ ದೀಪ ನೋಡಿದವ

ಅವಳ ಮಡಿಲೊಳಾಡಿದ ಕೂಸು

ಅವಳು ಸಹಿಸಿದ ಬೇನೆಯ ನೋವು

ಅವಳ ಭವಿಷ್ಯದ ಕನಸು

ಮೊಳೆಯಲು ಕಾದಿದ್ದ ಒಡಲ ಬೀಜ...

ಒಂದೇ ಆಸೆ

ಈ ಕಸಾಬ್‌ನನ್ನೊಮ್ಮೆ ಹೆರಬೇಕು...

ಬೆಚ್ಚಗಿನ ಮೊಲೆವಾಲು ಕುಡಿಸಿ

ಮಗನೇ ಹಾಗಲ್ಲ ಹೀಗೆಂದು

ಕಿವಿ ಹಿಂಡಿ ಹೇಳುವ

ಅಮ್ಮನಾಗಬೇಕು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.