ಅದಿರು ಇನ್ನು ಇ- ಹರಾಜು

ಶುಕ್ರವಾರ, ಮೇ 24, 2019
22 °C

ಅದಿರು ಇನ್ನು ಇ- ಹರಾಜು

Published:
Updated:

ನವದೆಹಲಿ: ಹತ್ತಾರು ಕಠಿಣವಾದ ಷರತ್ತುಗಳೊಂದಿಗೆ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಿಂಗಳಿಗೆ 1.5 ದಶಲಕ್ಷ ಟನ್ ಕಬ್ಬಿಣದ ಅದಿರನ್ನು `ಇ ಹರಾಜು~ ಮೂಲಕ ಮಾರಾಟ ಮಾಡಲು ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ಸುಪ್ರೀಂ ಕೋರ್ಟ್ ಅರಣ್ಯ ಪೀಠ ಶುಕ್ರವಾರ ಅನುಮತಿ ನೀಡಿತು.ಈ ಮೂರು ಜಿಲ್ಲೆಗಳಲ್ಲಿ 25 ದಶಲಕ್ಷ ಟನ್ ಅದಿರು ದಾಸ್ತಾನಿದ್ದು, ಇದರಲ್ಲಿ ತಿಂಗಳಿಗೆ 1.5 ದಶಲಕ್ಷ ಟನ್ ಅನ್ನು `ಇ- ಹರಾಜು~ ಮೂಲಕ ಮಾರಾಟ ಮಾಡಬಹುದೆಂದು ಅರಣ್ಯ ಪೀಠ ಹೇಳಿತು. ಈ ಸಂಬಂಧ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಮಾಡಿರುವ ಶಿಫಾರಸುಗಳನ್ನು ನ್ಯಾಯಾಲಯ ಒಪ್ಪಿಕೊಂಡಿತು.ಅದಿರು ಮಾರಾಟ, ಸಾಗಣೆ ಮತ್ತಿತರ ಕೆಲಸಗಳ ಮೇಲುಸ್ತುವಾರಿಗೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಯು. ವಿ ಸಿಂಗ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಎಚ್. ಆರ್. ಶ್ರೀನಿವಾಸ್ ಅವರನ್ನೊಳಗೊಂಡ ಸಮಿತಿ ರಚಿಸಿತು.ರಾಷ್ಟ್ರೀಯ ಖನಿಜ ಅಭಿವೃದ್ಧಿ ಮಂಡಳಿ (ಎನ್‌ಎಂಡಿಸಿ) ನಿಗದಿಪಡಿಸಿದ ದರದ ಆಧಾರದ ಮೇಲೆ ಅದಿರು ಹರಾಜು ಪ್ರಕ್ರಿಯೆ ನಡೆಯಬೇಕು. ರಾಜ್ಯದ ಅದಿರನ್ನು ಪೂರ್ಣವಾಗಿ ಅಥವಾ ಭಾಗಶಃ ಅವಲಂಬಿಸಿದ ಉಕ್ಕು ಅಥವಾ ಪೂರಕ ಉದ್ಯಮಗಳು ತಮ್ಮ ಸ್ವಂತ ಬಳಕೆಗಾಗಿ ಮಾತ್ರವೇ ಖರೀದಿಸಬೇಕು.ಅದಿರು ಮಾರಾಟ ದರದ ಮೇಲೆ ಶೇ. 10 ಗೌರವಧನ ನಿಗದಿಪಡಿಸಿ ಸಂಗ್ರಹಿಸಬೇಕು. ಗೌರವ ಧನವನ್ನು ಅರಣ್ಯ ಅಭಿವೃದ್ಧಿ  ತೆರಿಗೆ, ಮಾರಾಟ ತೆರಿಗೆ, ಸೆಸ್ ಮತ್ತಿತರ ಬಾಬ್ತುಗಳಿಗೆ ಜಮಾ ಮಾಡಬೇಕು. ಅದಿರು ಮಾರಾಟದ ಹಣ ಮತ್ತು ಗೌರವ ಧನವನ್ನು ನಿಯೋಜಿತ ರಾಷ್ಟ್ರೀಕೃತ ಬ್ಯಾಂಕಿನಲ್ಲೇ ಠೇವಣಿ ಇಡಬೇಕು.ಇ- ಹರಾಜಿನಲ್ಲಿ ಖರೀದಿಸುವ ಅದಿರನ್ನು ರಫ್ತು ಮಾಡುವಂತಿಲ್ಲ. ದಲ್ಲಾಳಿಗಳು ಇಲ್ಲವೆ ಮಧ್ಯವರ್ತಿಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಹರಾಜು ಪ್ರಕ್ರಿಯೆ ಮೇಲ್ವಿಚಾರಣೆಗೆ ರಚಿಸಲಾದ ಮೂವರು ಅಧಿಕಾರಿಗಳ ಸಮಿತಿಯು ಅದಿರು ಮಾರಾಟಕ್ಕೆ ಮುನ್ನ ಯಾವ ಗುಣಮಟ್ಟದ ಅದಿರು ಎಷ್ಟು ಪ್ರಮಾಣದಲ್ಲಿ ದಾಸ್ತಾನಿದೆ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.ಮಾರಾಟವಾದ ಅದಿರು ಸಾಗಣೆಗೆ ಇ- ಪರ್ಮಿಟ್ ವ್ಯವಸ್ಥೆ ಜಾರಿಗೊಳಿಸಬೇಕು. ಇದಕ್ಕೆ ಟ್ರಿಪ್ ಶೀಟ್, ವೇಬ್ರಿಜ್, ಚೆಕ್‌ಪೋಸ್ಟ್ ಮತ್ತಿತರ ಸೌಲಭ್ಯಗಳ ಸಂಪರ್ಕ ಕಲ್ಪಿಸಬೇಕು. ಮಾರಾಟ ಸ್ಥಳದಲ್ಲಿ ತುಂಬಿದ ಅದಿರಿನ ಪ್ರಮಾಣ ಮಾರ್ಗ ಮಧ್ಯೆ ವೇಬ್ರಿಜ್‌ನಲ್ಲಿ ತೂಕ ಮಾಡಿದಾಗಲೂ ಹೆಚ್ಚು ಕಡಿಮೆ ಆಗದೆ ತಾಳೆಯಾಗಬೇಕು ಎಂದು ನ್ಯಾಯಾಲಯ ಕಟ್ಟುನಿಟ್ಟಾಗಿ ಹೇಳಿದೆ.ಬ್ಯಾಂಕಿನಲ್ಲಿ ಠೇವಣಿ ಇಡುವ ಹಣಕ್ಕೆ `ಡಬ್ಬಲ್ ಎಂಟ್ರಿ~ ಇರಬೇಕು. ಹರಾಜು ಮೂಲಕ ಮಾರಾಟ ಮಾಡಿದ ಅದಿರನ್ನು ಪರವಾನಗಿ ಕಂಪೆನಿ ಅಕ್ರಮವಾಗಿ ತೆಗೆದಿದ್ದರೆ ಅದಕ್ಕೆ ಹಣ ಪಾವತಿಸಬಾರದು. ಗಣಿಗಾರಿಕೆ ಕಾನೂನು ಬದ್ಧವಾಗಿದ್ದರೆ ಮಾತ್ರ ಶೇ.80ರಷ್ಟು ಹಣವನ್ನು ಪರವಾನಗಿ ಕಂಪೆನಿಗೆ ಪಾವತಿಸಿ ಉಳಿದ ಹಣವನ್ನು ಬ್ಯಾಂಕಿನಲ್ಲಿಡಬೇಕು. ಹರಾಜಿನಲ್ಲಿ ಖರೀದಿಸಿದ ಅದಿರನ್ನು ಸ್ವಂತಕ್ಕೆ ಬಳಕೆ ಮಾಡದ; ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಅದಿರು ಖರೀದಿಸಿದ ಅಥವಾ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿದ ಉದ್ಯಮಗಳು ಹರಾಜಿನಲ್ಲಿ ಭಾಗವಹಿಸದಂತೆ ಕ್ರಮ ಕೈಗೊಳ್ಳಬೇಕು. ಅದಿರು ಹರಾಜು ಪ್ರಕ್ರಿಯೆಗೆ ಉಕ್ಕು ಸಚಿವಾಲಯದ ಅಧೀನದಲ್ಲಿರುವ ಎಂಎಸ್‌ಟಿಸಿ ಸೇವೆ ಬಳಕೆ ಮಾಡಿಕೊಳ್ಳಬೇಕು. ಈ ಸಂಸ್ಥೆಗೆ ಶೇ.0.3ರಷ್ಟು ಸೇವಾ ಶುಲ್ಕ ಪಾವತಿಸಬೇಕು ಎಂದು ಹೇಳಿದೆ.ಸುಪ್ರೀಂ ಕೋರ್ಟ್ ಅರಣ್ಯ ಪೀಠ ಇದಕ್ಕೂ ಮೊದಲು ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ನಿಷೇಧ ಮಾಡಿ ತೀರ್ಪು ನೀಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry